ಜೀವನದಲ್ಲಿ ಚನ್ನಾಗಿ ದುಡ್ಡು ಮಾಡೋ ಆಸೆ ಇದ್ದರೆ ಈ 10 ನಿಯಮಗಳನ್ನ ಗಮನದಲ್ಲಿಡಿ

ಬರೀ ಗಾಣದ ಎತ್ತಿನ ಥರ ಕಷ್ಟ ಪಟ್ರೆ ಏನೂ ಪ್ರಯೋಜನ ಇಲ್ಲ

ಫೆರಾರಿ

ಚನ್ನಾಗಿ ದುಡ್ ಮಾಡೋದು ಹೇಗೆ ಅನ್ನೋ ಪ್ರಶ್ನೆ ಕೋಟ್ಯಾಂತರ ಜನರನ್ನ ಹಲವಾರು ವರ್ಷಗಳಿಂದ ಕಾಡ್ತಾನೇ ಇದೆ. ಅದ್ರಲ್ಲೂ ಹಾಸಿಗೆ ಇಲ್ದೇ ನೆಲದ ಮೇಲೆ ಮಲಗಿ ಎದ್ದ ಬಡವರಿಗೆ, ಹಾಸಿಗೆ ಇದ್ದಷ್ಟೇ ಕಾಲು ಚಾದಿದ್ದ ತಕ್ಕಮಟ್ಟಿಗಿರೋರಿಗೆ "ಯಾವಾಗ ನನ್ನ ಸೈಜಿನ ಹಾಸಿಗೆ ನಾನು ಹೊಲಿಸ್ಕೋತಿನೋ" ಅನ್ನೋ ಹಂಬಲ ಇದ್ದೇ ಇರುತ್ತೆ.

"ತಕ್ಕಮಟ್ಟಿಗಿರೋದೇ ಆರಾಮ" ಅನ್ನೋ ಮಧ್ಯಮ ವರ್ಗದವರಿಗೆ ಒಂದು ಮಟ್ಟ ಆದ್ಮೇಲೆ ಬೆಳೆಯೋದು ಹೇಗೆ ಅಂತಾನೇ ಗೊತ್ತಾಗದೇ ಅಲ್ಲೇ ನಿಂತ ನೀರಾಗಿಬಿಡ್ತಾರೆ

ಇಷ್ಟೊಂದು ಕಷ್ಟ ಪಟ್ರೂ ನಮ್ ಹತ್ರ ಯಾಕೆ ಬಿಡುಗಾಸೂ ಉಳೀತಿಲ್ಲ ಅನ್ನೋ ಪ್ರಶ್ನೇಲೇ ಜೀವನ ಕಳೆದು ಬಿಡ್ತಾರೆ.

ಮೂಲ

ಈ "ತಕ್ಕಮಟ್ಟಿಗಿರೋರಿಗೂ" "ಚನ್ನಾಗಿ ದುಡ್ಡು ಮಾಡೋರಿಗೂ" ನಡುವೆ ಇರೋ ವ್ಯತ್ಯಾಸ ಔರು ಜೀವನಾನ ಹೇಗೆ ನೋಡ್ತಾರೆ ಅನ್ನೋದರಲ್ಲಿದೆ

ನಮ್ಮಲ್ಲಿ 3 ಥರ ದುಡ್ಡು ಮಾಡಿರೋರಿದಾರೆ: (1) ತಲತಲಾಂತರದಿಂದ ಗಂಟಿಟ್ಟಿರೋರು, (2) ಅಡ್ಡದಾರೀಲಿ ದುಡ್ಡು ಮಾಡಿರೋರು, (3) ತಮ್ಮ ಸ್ವಂತ ಬಲದಿಂದ ದುಡಿದು ಹಣ ಸಂಪಾದಿಸೋರು. ಈಗ ಮೊದಲೆರಡು ಬಿಟ್ಟು ಮೂರನೇ ರೀತಿ ಜನರ ಬಗ್ಗೆ ನೋಡಣ. ಇವರು ದುಡ್ಡು ಮಾಡೋದು ಹೇಗೆ? ಬರೀ ಕಷ್ಟ ಪಟ್ರೆ ಸಾಕಾ? ಬೇರೆ ಏನಾದ್ರೂ ಮಾಡ್ಬೇಕಾ? ನೋಡಣ ಬನ್ನಿ...

ಮೂಲ

1. ದುಡ್ಡು ಮಾಡ್ಬೇಕು ಅಂದ್ರೆ "ಯಾವಾಗ್ಲೂ ಆರಾಮಾಗಿರಬೇಕು" ಅನ್ನೋದು ಬಿಟ್ಟು ಕೆಲಸಕ್ಕೆ ನಿಲ್ಲಿ

ಒಂದನೇ ತಾರೀಖು ಸರಿಯಾಗಿ ಸಂಬಳ ಬಂದುಬಿಡ್ಬೇಕು, ಏನೂ ತೊಂದ್ರೆ ಆಗ್ಬಾರ್ದು, ಅನ್ನೋ ಮನಸ್ತಿತಿ ನಿಮ್ಮನ್ನ ಬೆಳೆಯಕ್ಕೇ ಬಿಡಲ್ಲ. ನಿಮ್ಮದೇ ಸ್ವಂತ ಕಂಪನಿ ಇದ್ರೆ ಇನ್ನೂ ಹೆಚ್ಚಿಗೆ ದುಡೀಬೋದು ಅನ್ನೋದಾದ್ರೆ ಕೆಲಸ ಬಿಟ್ಟು ನಿಮ್ಮದೇ ಬಿಸಿನೆಸ್ಸಿಗೆ ಕೈ ಹಾಕಿ ನೋಡಿ. ಅದ್ರಿಂದ ಜೀವನ ಸೊಲ್ಪ ದಿನ ಕಷ್ಟ ಅನ್ನಿಸಬೋದು. ಆದ್ರೆ ಆ ಸೊಲ್ಪ ದಿನ ದಾಟಿದ ಮೇಲೆ ಸಿಗೋ ಗಳಿಕೆ ನೀವು ಸಂಬಳದ ಕೆಲಸದಲ್ಲಿ ಜೀವನ ಎಲ್ಲಾ ದುಡಿದ್ರೂ ಸಿಗದೇ ಇರೋವಂತದ್ದು. ಅಕಸ್ಮಾತ್ ನೀವು ಅನ್ಕೊಂಡಂಗೆ ಬಿಸಿನೆಸ್ ನಡೀದೇ ಹೋದ್ರೆ ಹೊಸದೇನಾದ್ರೂ ಯೋಚ್ನೆ ಮಾಡಿ. ನಿಂತ ನೀರಾಗಬೇಡಿ.

ಮೂಲ

2. ಏನು ಬೇಕು ಎಷ್ಟು ಬೇಕು ಅಂತ ತೂಗಿ ನೋಡಿ ಖರ್ಚು ಮಾಡಿ

ಬೇಕಾದ್ದು-ಬೇಡದ್ದು ಎಲ್ಲಾ ಕೊಂಡ್ಕೋತಿದ್ರೆ ಆಗಲ್ಲ... ದುಡಿಯೋ ವಿಷಯದಲ್ಲಿ ರಿಸ್ಕ್ ತಗೊಂಡು ಮುಂದುವರೆಯೋರು ಖರ್ಚುಮಾಡುವಾಗ ನೋಡ್ಕೊಂಡು ಖರ್ಚು ಮಾಡ್ತಾರೆ. ಮಧ್ಯಮ ವರ್ಗದೋರು ಹೊಸ ಕಾರ್ ತಗೊಂಡ್ರೆ ಇವ್ರು ಬಳಸಿರೋ ಕಾರನ್ನೇ ತಗೋತಾರೆ. ಇವರಿಗೆ ಓಡಾಡೋಕ್ಕೆ ಚನ್ನಾಗಿರೋ ಒಳ್ಳೆ ಕಾರ್ ಬೇಕು ಅಷ್ಟೇ ಹೊರೆತು "ಶೋರೂಮಿಂದ ಕಾರು ತಗೊಂಡೆ" ಅನ್ನೋ "ಕೊಂಬು" ಬೇಕಿರೋದಿಲ್ಲ. ನೀವು ಹತ್ತು ಲಕ್ಷ ದುಡಿದು, ಹತ್ತೂ ಲಕ್ಷ ಖರ್ಚು ಮಾಡಿದ್ರೆ ಏನ್ರೀ ಪ್ರಯೋಜನ?

ಮೂಲ

3. ಬೇರೆಯೋರ ಕಂಪನೀಲಿ ಕೆಲಸ ಮಾಡೋ ಬದಲು, ನಿಮ್ದೇ ಬಿಸಿನೆಸ್ ಮಾಡಿ

ಗಮನಿಸಿ ನೋಡಿ, ಹಣವಂತರಾಗಿರೋರೆಲ್ಲಾ ಔರೌರ ಬಿಸಿನೆಸ್ಸಿಂದಾನೇ... ಬೇರೆಯೋರತ್ರ ಕೆಲಸ ಹುಡುಕೋರು ಬರೀ ತಮ್ಮ ಕೆಲಸ ಹೋಗದೇಹೋದ್ರೆ ಸಾಕು, ಸಂಬಳ ಬರ್ತಿದ್ರೆ ಸಾಕು ಅನ್ನೋ ಮನೋಭಾವನೇಲೇ ಇರ್ತಾರೆ. ಆದ್ರೆ ಹಣವಂತರ ಗುಣ ಹಾಗಲ್ಲ. ಎಷ್ಟು ಜನರನ್ನ ದುಡಿಸಿಕೊಂಡ್ರೆ ಎಷ್ಟು ಸಂಪಾದಿಸಬೋದು ಅಂತ ಯೋಚಿಸ್ತಾರೆ.

ಮೂಲ

4. ಬಿಸಿನೆಸ್ ವಿಷಯದಲ್ಲಿ ಯಾರಿಂದ ನೀವು ಕಲೀಬೋದೋ ಅಂತೋರ ಸಹವಾಸ ಮಾಡಿ!

ಒಂದು ಸಮೀಕ್ಷೆಯ ಪ್ರಕಾರ ನಿಮ್ಮ ದುಡಿಮೆ ನಿಮ್ಮ ತುಂಬಾ ಹತ್ತಿರದ 3 ಗೆಳೆಯರ ದುಡಿಮೆಯ ಸರಾಸರಿ ಆಗಿರುತ್ತೆ. ನೀವು ಜಾಸ್ತಿ ದುಡೀಬೇಕು ಅನ್ನೋದಾದ್ರೆ ಜಾಸ್ತಿ ದುಡಿಯೋರ ಜೊತೆ ಬೆರೀಬೇಕು. ಅದರ ಅರ್ಥ... ಹೆಚ್ಚು ಗಳಿಸೋಕ್ಕೆ ಆಗ್ತಾ ಇರೋರ ಜೊತೇಲಿದ್ದು ಔರ್ ಹೇಗೆ ಯೋಚಿಸ್ತಾರೆ, ಹೇಗೆ ಬಿಸಿನೆಸ್ಸಲ್ಲಿ ಹಣ ಹೂಡ್ತಾರೆ, ಔರಿಂದ ನಾನು ಏನ್ ಕಲೀಬೋದು ಅನ್ನೋದನ್ನ ನೋಡಬೇಕು. ಅದ್ರಿಂದ ನಿಮ್ಮ ದುಡಿಮೇಲೂ ಬೆಳವಣಿಗೆ ಆಗುತ್ತೆ. ನೀವು ದುಡ್ಡು ಮಾಡಬೇಕಾದ್ರೆ ನೀವೂ ದುಡ್ ಮಾಡಿರೋರ ಥರ ಯೋಚಿಸೋದು ಕಲೀಬೇಕು.

ಮೂಲ

5. ಮೊದಮೊದಲು ದುಡ್ಡಿನ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೋಬೇಡಿ, ಚನ್ನಾಗಿ ಕೆಲಸ ಕಲಿಯೋದು ನೋಡಿ

ಮೊದಮೊದಲು ಕೆಲಸಕ್ಕೆ ಸೇರ್ದಾಗ ಏನೂ ಗೊತ್ತಿರಲ್ಲ ಅಂತ ಕಮ್ಮಿ ಸಂಬಳಕ್ಕೆ ಕೆಲಸಕ್ಕೆ ಒಪ್ಕೋತೀರಿ. ಆದ್ರೆ ಸೊಲ್ಪ ದಿನ ಆದ್ಮೇಲೆ ಯಾರು ಸಂಬಳ ಜಾಸ್ತಿ ಕೊಡ್ತಾರೋ ಔರ್ ಹತ್ರ ಕೆಲಸಕ್ಕೆ ಹೋಗ್ತೀರಿ.  ಆದ್ರೆ ದುಡಿಯೋದು ಎಷ್ಟು ಮುಖ್ಯಾನೋ ಕಲಿಯೋದೂ ಅಷ್ಟೇ ಮುಖ್ಯ. ಹೆಚ್ಚಿಗೆ ಸಂಬಳ ಬರ್ತಿದ್ರೆ ಸಾಕು ಅನ್ನೋರು ತಕ್ಕ ಮಟ್ಟಿಗೇ ಉಳಿಯೋ ಸಾಧ್ಯತೆ ಹೆಚ್ಚು. ನೀವು ಸೇಲ್ಸ್ ಅಥವಾ ಮಾರ್ಕೆಟಿಂಗ್ ನಲ್ಲಿ ಇದ್ದೀರಿ ಅಂತಿಟ್ಕೊಳಿ, ನಿಮ್ಮ ಕೌಶಲಗಳನ್ನ ಹೆಚ್ಚಿಸಿಕೊಳ್ಳಿ, ನಿಮಗಿಂತ ತಿಳಿದೋರಿಂದ ಚನ್ನಾಗಿ ಕಲೀರಿ. ಬರೀ ದುಡಿಮೆ ಬಗ್ಗೆ ತಲೆ ಕೆಡಿಸ್ಕೊಳ್ಳೋದು ಬಿಟ್ಟು ಚನ್ನಾಗಿ ವಿಷಯಗಳನ್ನ ತಿಳ್ಕೊಂಡು ಆಮೇಲೆ ಮೇಲೆ ತಮ್ಮ ಸ್ವಂತ ಉದ್ದಿಮೆ ಮಾಡಿ ದುಡ್ಡು ಮಾಡಿ.

ಮೂಲ

6. ಬಂದ ದುಡ್ಡನ್ನ ಖರ್ಚು ಮಾಡಿ ಉಡಾಯಿಸೋ ಬದ್ಲು ಕೂಡಿಟ್ಕೊಳಿ 

ಈ ಕ್ರೆಡಿಟ್ ಕಾರ್ಡನ್ನ ಉಜ್ಜಿ ಬೇಕಾದ್ದು ಬೇಡದ್ದು ಎಲ್ಲಾ ತಗೊಳ್ಳೋ ನಮ್ಮ ಮಿಡಲ್ ಕ್ಲಾಸ್ ಜನರನ್ನ ನೋಡ್ತಿದ್ರೆ, ಯಪ್ಪಾ! ಇವ್ರು ಇಲ್ದೇ ಇರೋ ದುಡ್ಡನ್ನ ಖರ್ಚುಮಾಡಿ, ಬೇಡದೇ ಇರೋ ವಸ್ತು ತಗೊಂಡು, ಕೆಲಸಕ್ಕೆ ಬಾರದೋರನ್ನ ಮೆಚ್ಚಿಸಕ್ಕೆ ಹೋಗ್ತಾ ಇದಾರಲ್ಲ ಅನ್ಸುತ್ತೆ. ನೀವೂ ಹಾಗ್ ಮಾಡ್ಬೇಡಿ. ಕೈಲಿ ಯಾವಾಗ್ಲೂ ದುಡ್ಡಿರಬೇಕು. ಮನೆ ತುಂಬಾ ಬೇಡದೇ ಇರೋ ವಸ್ತುಗಳನ್ನ ತುಂಬಿಕೊಂಡು ಏನ್ ಮಾಡ್ತೀರಿ? ಅವುವಳಲ್ಲಿ ಕೆಲವನ್ನ ಮಾರಕ್ಕೆ ಹೋದ್ರೆ ಒಳ್ಳೇ ಬೆಲೆನೂ ಸಿಗಲ್ಲ. ಬೆಲೆ ಕಳ್ಕೊಳೋ ಅಂತಾ ವಸ್ತುಗಳ ಮೇಲೆ ತುಂಬಾ ಖರ್ಚು ಮಾಡ್ಬೇಡಿ. ಹಳೆ ಮನೇನೇ ಚನ್ನಾಗಿಟ್ಕೊಳಿ, ಸುಮ್ನೆ ಸಾಲ ಮಾಡಿ ಲಕ್ಷಗಟ್ಟಲೆ ಸುರಿದು ಬೇರೆ ಯಾರೋ ಕಟ್ಟಿರೋ ಮನೆ ಥರ ಮನೆ ಕಟ್ಟೋಕ್ಕೆ ಹೋಗ್ಬೇಡಿ. ಮೂರು ನಾಕು ಥರ ಚಪ್ಪಲಿ ತಗೊಳ್ಳೋಕ್ಕಿಂತ ಅದೇ ದುಡ್ಡನ್ನ ಶೇರು ಮಾರ್ಕೆಟ್ಟಲ್ಲಿ ಹಾಕಿ. ಡಬ್ಬಲ್ ಮಾಡಿ... ಗಂಟು ಮಾಡಿ.. ಕಳೀಬೇಡಿ.

ಮೂಲ

7. ಆದ್ರೆ, ಬರೀ ಇರೋ ದುಡ್ಡನ್ನ ಕೂಡಿಟ್ರೆ ಸಾಲ್ದು, ಸಂಪಾದನೆ ಮಾಡ್ತಾನೇ ಇರಬೇಕು

ಹಣ ಉಳಿಸೋದು ತುಂಬಾ ಮುಖ್ಯ... ನಿಜ.. ಆದ್ರೆ ಇರೋ ದುಡ್ಡನ್ನೇ ಉಳಿಸಿ ಹಣವಂತ ಆಗ್ತೀನಿ ಅನ್ನೋದು ಗೆಲ್ಲೋ ಮಂತ್ರ ಅಲ್ಲ. ನಿಮ್ಮ ಹತ್ರ ಸಮಯ ಇದೆ... ಅದನ್ನ ಖರ್ಚು ಮಾಡಿ ಎಷ್ಟು ದುಡೀಬೋದು ಅಂತ ನೋಡಿ.

ಮೂಲ

8. ಹಣದ ವಿಷಯದಲ್ಲಿ "ಮನಸ್ಸಿಗೆ ಏನನ್ನಿಸುತ್ತೆ" ಅನ್ನೋದಕ್ಕಿಂತ "ಲೆಕ್ಕ ಏನು ಹೇಳುತ್ತೆ" ಅನ್ನೋದು ಮುಖ್ಯ

ಸಣ್ಣ ಪುಟ್ಟ ಫಂಕ್ಷನ್ನುಗಳನ್ನ ಮನೆ ಮಟ್ಟಿಗೆ ಮಾಡೋದು ಬಿಟ್ಟು ದೊಡ್ಡದಾಗೇ ಮಾಡಬೇಕು ಅನ್ನೋ ಭ್ರಮೆ ನಮ್ಮವರಲ್ಲಿ ತುಂಬಾ ಇದೆ... ಅದರಲ್ಲೂ ಮಧ್ಯಮ ವರ್ಗದೋರಿಗೆ ತುಂಬಾ ಇದೆ.. ಅವರೇನನ್ಕೋತಾರೋ, ಇವರೇನನ್ಕೋತಾರೋ ಅನ್ನೋದೆಲ್ಲಾ ಬಿಟ್ಬಿಡಿ.. ನೀವು ಖರ್ಚು ಮಾಡ್ಬೇಕಾದ್ರೆ ಅದಕ್ಕೆ ಸರಿಯಾದ ತರ್ಕ ಇರಬೇಕು. ಯಾವುದಕ್ಕೆ ಖರ್ಚು ಮಾಡೋದು ಸರಿ, ಯಾವುದು ಬೇಡದ್ದು ಅನ್ನೋ ಲೆಕ್ಕ ಮಾಡಿ ತೀರ್ಮಾನ ತಗೊಳಿ. ಬೇಡದೇ ಇರೋ ವಿಷ್ಯಗಳಿಗೆ ದುಡ್ಡು ಹಾಕೋದು ಬಿಟ್ಟು ಅದನ್ನೇ ಸರಿಯಾದ ಕಡೆ ಹೂಡಿಕೆ ಮಾಡಿ ಬೆಳೆಸೋದು ನೋಡಿ...

ಮೂಲ

9. ಯಾರಾದ್ರೂ ನಗ್ಲಿ, ನೀವು ಕನಸು ಕಾಣೋದ್ರಲ್ಲಿ ಚೌಕಾಸಿ ಮಾಡ್ಕೋಬೇಡಿ...

ಯಾರು ಚಿಕ್ಕ ಕನಸು ಕಾಣ್ತಾರೋ ಔರು ಚಿಕ್ಕದಾಗೇ ಇರ್ತಾರೆ. ದೊಡ್ಡ ಕನಸು ಕಾಣೋರು ಮಾತ್ರ ಬೆಳೀತಾರೆ. ಹಾಗಂತ ಬರೀ ಕನಸು ಕಂಡ್ರೆ ಸಾಲದು.. ಅದರ ಕಡೆಗೆ ಕೆಲಸ ಮಾಡ್ತಾ ಹೋಗಬೇಕು. ಸುಲಭವಾಗಿ ಗಳಿಸೋಕ್ಕೆ ಆಗೋ ಗುರಿಗಳನ್ನ ಇಟ್ಕೊಂಡ್ರೆ ಏನೂ ಪ್ರಯೋಜನ ಇಲ್ಲ. ಯಾರಾದ್ರೂ ನಗ್ಲಿ, ನಿಮ್ಮ ಕನಸು ದೊಡ್ಡದಾಗೇ ಇರ್ಲಿ... ಗುರಿ ಇಟ್ಕೊಳುವಾಗ ಚೌಕಾಸಿ ಬೇಡ... ಕೋಟಿ ಕೊಟಿ ದುಡಿಯೋ ಕನಸಿರಲಿ.

ಮೂಲ

10. ಬರೀ ಗಾಣದ ಎತ್ತಿನ ಥರ ಕಷ್ಟ ಪಟ್ರೆ ಏನೂ ಪ್ರಯೋಜನ ಇಲ್ಲ, ಇರೋ ಸಂಪನ್ಮೂಲಗಳನ್ನ ಚನ್ನಾಗಿ ಬಳಸ್ಕೊಳ್ಳಿ

ನೀವೇ ಕೂತ್ಕೊಂಡು ಕೆಲ್ಸ ಮಾಡ್ತಿದ್ರೆ ನೂರೊರ್ಷ ಆದ್ರೂ ತುಂಬಾ ದುಡ್ಡು ಮಾಡಕ್ಕಾಗಲ್ಲ. ಬೇರೆಯೋರ ಕೈಲಿ ಕೆಲಸ ಮಾಡಿಸ್ಬೇಕು, ಗಳಿಸಿದ್ದನ್ನ ಇನ್ನೊಂದು ಕಡೆ ಹೂಡಿಕೆ ಮಾಡಿ ಹೆಚ್ಚಿಸಬೇಕು. ನಿಮ್ಮ ಸಮಯಾನ ಉಳಿಸ್ಕೊಂಡು ಆ ಹೊತ್ತಲ್ಲಿ ನಿಮ್ಮ ಬಿಸಿನೆಸ್ಸನ್ನ ಹೇಗೆ ಬೆಳೆಸ್ಬೋದು ಅನ್ನೋದರ ಬಗ್ಗೆ ಯೋಚಿಸಿ... ಆಗ ನಿಮ್ಮ ಬಿಸಿನೆಸ್ಸು ಬೆಳೆಯುತ್ತೆ.

ಮೂಲ

ನೆನಪಿಟ್ಕೊಳಿ... ಚನ್ನಾಗಿ ದುಡ್ಡು ಮಾಡ್ಬೇಕಾದರೆ ದುಡ್ಡು ಮಾಡಿರೋರ ಥರ ಯೋಚನೆ ಮಾಡೋದು ಮುಖ್ಯ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: