ನೀವಿಷ್ಟ ಪಟ್ಟೋರೇ ನಿಮಗ್ಯಾಕೆ ಸುಳ್ಳು ಹೇಳ್ತಾರೆ ಗೊತ್ತಾ? ಕಾರಣ ತಿಳ್ಕೊಳಿ

ಬೇಕ್ ಬೇಕ್ ಅಂತ ಯಾರೂ ಹೇಳಲ್ಲ

ಜನ ಯಾಕ್ ನಮ್ ಹತ್ರ ಸುಳ್ಳು ಹೇಳ್ತಾರೆ? ಈ ಪ್ರಶ್ನೆ ಒಂದಲ್ಲ ಒಂದ್ಸಲ ನಮ್ಮೆಲ್ಲರ್ನೂ ಕಾಡಿದೆ ಅಲ್ವ? ಆಂಥಾ ಸಂದರ್ಭಗಳಲ್ಲಿ ನಾವು ಹೇ... ನಾವೂ ಸುಳ್ಳೇಳಿರ್ತೀವಿ... ಹಾಗೇ, ಅವ್ರೂ ಹೇಳಿರ್ತಾರೆ ಬಿಡು ಅಂತ ಅನ್ಕೊಂಡು ಸುಮ್ನಾಗ್ತೀವಿ . ಆದ್ರೆ ಅದು ಖಂಡಿತಾ ಸಮಾಜಾಯಿಷಿ ಅಷ್ಟೇ. ಈ ಪ್ರಶ್ನೆಗೆ ನಾವು ಸರಿಯಾದ ಉತ್ತರ ಕೊಡ್ತೀವಿ ನೋಡಿ.

ಜನ ನಿಮ್ಮ ಹತ್ರ ಸುಳ್ಳು ಹೇಳೋದ್ನ ಎರಡು ರೀತೀನಲ್ಲಿ ನೋಡ್ಬೋದು.

1) ನಿಮ್ಮಲ್ಲಿರೋ ಒಳ್ಳೆ ಗುಣ, ಆದರ್ಶಗಳಿಗೆ ಮುಜುಗರ ಪಟ್ಕೊಂಡು ನಿಮ್ಮ ಕಣ್ಣಲ್ಲಿ ಚಿಕ್ಕೋರ್ ಆಗ್ಬಾರ್ದು ಅನ್ನೋ ಕಾರಣಕ್ಕೆ ಹೇಳೋ ಸುಳ್ಳು.

2) ನಿಮ್ಮಲ್ಲಿರೋ ಸಂಕುಚಿತ ಮನೋಭಾವದಿಂದ ಹೇಳೋ ಸತ್ಯಕ್ಕೆ ಅವರು ಹೇಗ್ ರಿಯಾಕ್ಟ್ ಮಾಡ್ತಿರೋ ಅನ್ನೋ ಭಯದಿಂದ ಹೇಳೋ ಸುಳ್ಳು.

ಮೊದಲ್ನೇ ಕಾರಣಕ್ಕಾದ್ರೆ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡ್ಬೇಕು. ಆದ್ರೆ ಎರಡ್ನೇ ಕಾರಣಕ್ಕಾಗಿದ್ರೆ ಯೋಚ್ನೆ ಮಾಡ್ಬೇಕಿದೆ. ನೀವು ಸ್ವಲ್ಪ ನಿಮ್ಮ ಸ್ವಭಾವಾನ ತಿದ್ಕೊಬೇಕು ಅನ್ಸತ್ತೆ.

ಅದೇನೇ ಇರ್ಲಿ... ಇಲ್ಲಿ ನಿಮ್ಗೋಸ್ಕರ ಎರಡೂ ರೀತಿಯ ಕಾರಣಗಳ್ನ ಪಟ್ಟಿ ಮಾಡಿ ಕೊಟ್ಟಿದೀವಿ. ಓದಿ. ಯಾಕ್ ಜನ ನಿಮ್ಹತ್ರ ಸುಳ್ಳು ಹೇಳ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗತ್ತೆ.

ನಿಮ್ಮಲ್ಲಿರೋ ಒಳ್ಳೆ ಗುಣಕ್ಕೆ ಬೆಲೆಕೊಟ್ಟು ಸುಳ್ಳು ಹೇಳೋರು

1. ತಾವು ತುಂಬಾ ಪ್ರೀತ್ಸೋ ವ್ಯಕ್ತಿ ಮೇಲಿರೋ ಅತಿಯಾದ ನಂಬಿಕೆ ಮತ್ತೆ ನಿರೀಕ್ಷೆಯಿಂದ…

ನಮ್ಮೆಲ್ಲರ ಜೀವನ್ದಲ್ಲೂ ವಿಶೇಷವಾದ ವ್ಯಕ್ತಿಗಳಿರ್ತಾರೆ. ಅವರ ಬಗ್ಗೆ ನಾವು ತುಂಬಾನೇ ಆಸೆ, ನಿರೀಕ್ಷೆ ಇಟ್ಕೊಂಡಿರ್ತೀವಿ. ಜಗತ್ತಲ್ಲಿ ಇರೋ ಒಳ್ಳೆತನ ಎಲ್ಲಾ ಅವ್ರಲ್ಲೇ ಇದೆ ಅಂತ ನಮಗೆ ನಾವೇ ಅಂದ್ಕೊಂಡಿರ್ತೀವಿ. ನೀವೂ ಅವ್ರ ಮೇಲಿಟ್ಟಿರೋ ಕಾಳಜಿ ಗೊತ್ತಿರತ್ತೆ. ಜೊತೆಗೆ ನಿಮ್ಮ ನಿರೀಕ್ಷೆಗಳ ಅರಿವೂ ಅವರಿಗಿರತ್ತೆ. ಅವ್ರಲ್ಲಿರೋ ಯಾವ್ದೋ ಒಂದು ಕೆಟ್ಟ ಗುಣದಿಂದ ನಿಮ್ಮನ್ನ ದೂರ ಮಾಡ್ಕೊಳಕ್ಕೆ ಇಷ್ಟ ಇರಲ್ಲ.

ನಿಮ್ಮ ಜೀವನ್ದಲ್ಲಿ ಅವರ ಸ್ಥಾನ ಎಲ್ಲಿ ಕಮ್ಮಿಯಾಗ್ಬಿಡತ್ತೋ ಅನ್ನೋ ಭಯ ಆದ್ರಿಂದ ನಿಮ್ಹತ್ರ ಸುಳ್ಳು ಹೇಳ್ತಾರೆ.

ಮೂಲ

2. ಜೀವನ್ದಲ್ಲಿ ನೀವು ಪಾಲಿಸೋ ಮೌಲ್ಯ ಮತ್ತು ಆದರ್ಶದಿಂದ…

ನೀವು ಎಲ್ಲಾ ಕೆಲ್ಸಾನೂ ಒಳ್ಳೆ ರೀತೀಲೇ ಮಾಡ್ತಿದ್ರೆ, ಒಂದಷ್ಟು ಆದರ್ಶಗಳು, ಮೌಲ್ಯಗಳ್ನ ಅಳವಡುಸ್ಕೊಂಡು ಜೀವ್ನ ನಡೆಸ್ತಿದ್ರೆ... ಅದು ತುಂಬಾ ಒಳ್ಳೆ ಗುಣ.  

ಜೊತೆಗೆ ನೀವೂ ಧೈರ್ಯವಾಗಿ ನಾನಿರೋದೇ ಹೀಗೆ, ಬದುಕೋದೇ ನೈತಿಕವಾಗಿ ಅಂತ ರಾಜಾರೋಷವಾಗಿ ಹೇಳ್ಬಿಟ್ರೆ ಯಾರ್ ತಾನೇ ನಿಮ್ಮ ಗುಣಕ್ಕೆ ಫಿದಾ ಆಗಲ್ಲ ಹೇಳಿ? 

ನಿಮ್ಮಂಥಾ ವ್ಯಕ್ತಿತ್ವ ಇರೋರ ಮುಂದೆ ಜನ ತಮ್ಮ ತಪ್ಪುಗಳನ್ನ, ಅಭದ್ರತೆಗಳನ್ನ ತೋರಿಸ್ಕೊಳಕ್ಕೆ ಇಷ್ಟಪಡಲ್ಲ, ಅದು ಎಷ್ಟೇ ಚಿಕ್ದು ಮತ್ತು ಸಾಮಾನ್ಯವಾಗಿರೋದಾದ್ರೂ ಸರಿ. ನಿಮ್ಮಲ್ಲಿರೋ ಗುಣಗಳು ಅವರಲ್ಲಿರ್ದೇ ಇರೋದ್ರಿಂದ, ಜನ ತಮ್ಮಲ್ಲಿರೋ ಕುಂದು ಕೊರತೆಗಳನ್ನ ನಿಮ್ಮ ಮುಂದೆ ತೋರ್ಪಡಿಸ್ಕೊಳಲ್ಲ.

ಮೂಲ

3. ನಿಮ್ಮಲ್ಲಿರೋ ಆಕರ್ಷಕ ವ್ಯಕ್ತಿತ್ವದಿಂದ…

ನಮ್ಮೆಲ್ಲರಲ್ಲೂ ಇನ್ನೊಬ್ರಿಗೆ ಇಷ್ಟ ಆಗೋ, ಆಕರ್ಷಿಸೋ ಒಂದಲ್ಲಾ ಒಂದು ಗುಣ, ಸ್ವಭಾವ ಇದ್ದೇ ಇರತ್ತೆ. ಅದು ನಾವಿನ್ನೊಬ್ರ ಬಗ್ಗೆ ವಹಿಸೋ ಕಾಳಜಿ, ದಾನ ಧರ್ಮ ಮಾಡೋ ಗುಣ, ನಾಲ್ಕು ಜನರ ಮಧ್ಯ ಬುದ್ಧಿವಂತರಾಗಿ ಕಾಣೋ ರೀತಿ, ನಮ್ಮ ಸುಂದರ್ವಾದ ಮೈಕಟ್ಟು... ಹೀಗೆ ಏನಾದ್ರೂ ಆಗಿರ್ಬೋದು.

ಇನ್ನು ಈ ರೀತಿ ಆಕರ್ಷಣೆ ಹೇಗಪ್ಪಾ ಸುಳ್ಳು ಹೇಳಕ್ಕೆ ಕಾರಣ ಆಗುತ್ತೆ ಅಂತೀರಾ? ನಿಮ್ಮ ಗುಣ, ಸೌಂದರ್ಯಾನ ಮೆಚ್ಕೊಳೋ ಜನ, ನೀವೂ ಅವ್ರನ್ನ ಮೆಚ್ಬೇಕು ಅಂತ ಆಸೆ ಪಡ್ತಾರೆ. ಅದಕ್ಕೋಸ್ಕರ ಪ್ರಯತ್ನಾನೂ ಮಾಡ್ತಾರೆ.

ಯಾವಾಗ ಅದೆಲ್ಲಾ ವರ್ಕೌಟ್ ಆಗಲ್ಲ ಅಂತ ಗೊತ್ತಾಗತ್ತೋ ಆಗ ಸುಳ್ಳು ಹೇಳಿ ನಿಮ್ಮ ಮನಸ್ಸು ಗೆಲ್ಲೋಕೆ ಪ್ರಯತ್ನ ಪಡ್ತಾರೆ. ನಿಮ್ಮಿಬ್ರಲ್ಲಿ ಒಳ್ಳೆ ಸಾಮರಸ್ಯ ಇದೇ ಅಂತ ಅವ್ರನ್ನ ಮೆಚ್ಕೊಳ್ಲಿ ಅನ್ನೋ ತವಕ. ಉದ್ದೇಶ ಏನೂ ಕೆಟ್ಟದಿರಲ್ಲ ಪಾಪ.

ಮೂಲ

4. ನಿಮ್ಗಿರೋ ಅಧಿಕಾರ ಅಥವಾ ಅಂತಸ್ತಿಂದ…

ನೀವು ಯಾವ್ದಾದ್ರೂ ದೊಡ್ಡ ಹುದ್ದೇಲಿ ಕೆಲ್ಸದಲ್ಲಿದೀರಾ? ಅಥವ ಒಳ್ಳೆ ಆಸ್ತಿ ಪಾಸ್ತಿ ಮಾಡಿದೀರಾ? ನಿಮ್ಮ ಒಂದು ಮಾತಿಗೆ, ಫೋನ್ ಕಾಲಿಗೆ ಕೆಲ್ಸಗಾರರ ಸಂಬಳ ಜಾಸ್ತಿ ಮಾಡೋ, ಟ್ರಾನ್ಸ್ ಫರ್ ಕ್ಯಾನ್ಸಲ್ ಮಾಡ್ಸೋ ತಾಕತ್ತಿದ್ಯ? ನಿಮ್ಮ ಸ್ವಂತ ಸಾಮರ್ಥ್ಯದಿಂದ ನೀವು ಈ ಸ್ಥಾನಕ್ಕೆ ಬಂದಿದೀರಾ? ಆಗ ಜನ ನಿಮ್ಹತ್ರ ಸುಳ್ಳು ಹೇಳೋ ಸಾಧ್ಯತೆ ಹೆಚ್ಚು.

ಯಾವಾಗ ನಿಮ್ಮ ಕೈಯ್ಯಲ್ಲಿ ಇನ್ನೊಬ್ರ ಜೀವ್ನ ಬದಲಾಯಿಸೋ ಶಕ್ತಿ ಇದೆ ಅಂತ ಗೊತ್ತಾಗತ್ತೋ, ಅಲ್ಲಿಗೆ ಅವರ ವರ್ಸೇನೇ ಬದ್ಲಾಗೋಗತ್ತೆ.

ತಮ್ಮ ಸಾಧನೆಗಳ ಬಗ್ಗೆ, ಹಿನ್ನೆಲೆ ಬಗ್ಗೆ ಬೇಜಾನ್ ಪುಂಗಿ ಊದಿ, ನಿಮ್ಮನ್ನ ತಮ್ಮ ಬಲೆಗೆ ಬೀಳುಸ್ಕೊಳಕ್ಕೆ ನೋಡ್ತಾರೆ...

ಯಾವತ್ತಾದ್ರೂ ನಿಮ್ಮಿಂದ ತಮ್ಮ ಕೆಲಸ ಮಾಡುಸ್ಕೊಬೋದು ಅನ್ನೋ ಆಸೆ ಇರತ್ತೆ. ಹಾಗಾಗಿ ತಮ್ಮ ಬಗ್ಗೆ ಇಲ್ದೆ ಇರೋದ್ನೆಲ್ಲಾ ಹೇಳ್ಕೊಂಡು, ಬಡಾಯಿ ಕೊಚ್ಕೊಂಡು ಅಟ್ಟಕ್ಕೇರ್ತಾರೆ.

ಮೂಲ

ನಿಮಗೆ ಅಂಥಾ ಹೇಳ್ಕೊಳೋವಂಥಾ ಗುಣ ಅಥವಾ ಸ್ಥಾನ ಇಲ್ದೇಯಿದ್ರೂ ನಿಮ್ಮ ಹತ್ರ ಸುಳ್ಳು ಹೇಳೋರು

ಯಾಕೆ? ನಿಮ್ಮಿಂದ ಒಂದು ಕಾಸು ಪ್ರಯೋಜನ ಇಲ್ಲ ಅಂತ ಗೊತ್ತಾದ್ಮೇಲೂ ಜನ ಯಾಕ್ ನಿಮ್ಹತ್ರ ಸುಳ್ಳು ಹೇಳ್ಬೇಕು?

ಅದ್ಯಾಕೆ ಅಂತ ಕೇಳಿ. ಇವುಗಳ ಬಗ್ಗೆ ನೀವು ಚೂರು ಗಮನ ಕೊಡ್ಬೇಕಾಗತ್ತೆ. ಜನಕ್ಕೆ ನಿಮ್ಮ ಬಗ್ಗೆ ತಪ್ಪು ತಿಳುವಳಿಕೆ ಇದ್ರೆ, ನೀವು ಸೂಕ್ಷ್ಮ ಸ್ವಭಾವದೋರಾಗಿದ್ರೆ, ಜನ ನಿಮ್ಹತ್ರ ಸುಳ್ಳು ಹೇಳೋ ಸಾಧ್ಯತೆ ಇದೆ.

1. ನೀವು ತುಂಬಾ ಹೆದರೋ ಸ್ವಭಾವ್ದೋರಾಗಿದ್ರೆ...

ಒಂದಷ್ಟು ಜನ ಇರ್ತಾರೆ ಕಣ್ರಿ. ಚಿಕ್ಕ ಪುಟ್ಟುದ್ದಕ್ಕೂ ಆಕಾಶನೇ ತಲೆಮೇಲ್ ಬಿದ್ದಂಗ್ ಆಡ್ತಾರೆ. ಗಾಬರಿ ಮಾಡ್ಕೊಂಡು ಉಸಿರುಗಟ್ಟಿಸ್ಕೊಂತಾರೆ. ಇಂಥೋರ ಕಣ್ಣಿಗೆ ಹಗ್ಗಾನೂ ಹಾವಿನ ಥರಾನೇ ಕಾಣತ್ತೆ. ಅಂಥೋರ ಹಾವಭಾವನೇ ಹೆದುರ್ಸೋಹಾಗಿರತ್ತೆ.

ನಿಜ್ವಾಗ್ಲೂ ಅವ್ರಿಗೆ ಯಾರ್ನೂ ಹೆದುರ್ಸೋ ಉದ್ದೇಶ ಇರಲ್ಲ. ಆದ್ರೆ ಸತ್ಯ ಕೇಳಿ ಅವ್ರು ಗೋಳಾಡೋ ರೀತಿ, ಬಾಯಿ ಬಾಯಿ ಬಡ್ಕೊಂಡ್ ಅಳೋ ರೀತಿ ನೋಡೋರಿಗೆ ಗಾಬರಿ ಹುಟ್ಸತ್ತೆ ಮತ್ತೆ ಯಾಕಾದ್ರೂ ಹೇಳುದ್ವಪ್ಪಾ ಅನ್ನಿಸ್ಬಿಡತ್ತೆ. ಅಂಥೋರನ್ನ ಯಾರಿಂದಾನೂ ಸಮಾಧಾನ ಮಾಡಕ್ಕಾಗಲ್ಲ. ಇವರ ಅವತಾರ ನೋಡಿ, ಸತ್ಯ ಹೇಳ್ದೋರ್ಗೂ ಮೈ ನಡುಕ ಬಂದ್ಬಿಡತ್ತೆ. ಒಂದ್ಸಲ ಇಂಥಾ ಅನುಭವ ಆದ್ಮೇಲೆ ಯಾರ್ತಾನೇ ಅವ್ರಿಗೆ ನಿಜ ಹೇಳೋ ಸಾಹಸ ಮಾಡ್ತಾರೆ? ವಿಷಯ ಗೊತ್ತಿದ್ರೂ ಹೆದುರ್ಕೊಂದ್ ಸುಮ್ನಿರ್ತಾರೆ. ನಿಜಕ್ಕೂ ವಿಷ್ಯ ಅಷ್ಟು ಭಯಂಕರ್ವಾಗಿರತ್ತೋ ಇಲ್ವೋ ಆದ್ರೆ ನೀವಾಡೋ ರೀತಿ ಮಾತ್ರ ಜನ ನಿಮ್ಮ ಹತ್ರ ಸುಳ್ಳು ಹೇಳೋಹಾಗೆ ಮಾಡತ್ತೆ.

2. ಸದ್ಯಕ್ಕೆ ನಿಮ್ಮ ಪರಿಸ್ಥಿತಿ ಸರಿಯಾಗಿಲ್ದಿದ್ರೆ...

ನೀವು ತುಂಬಾ ಬೇಗ ಮನಸ್ಸಿಗೆ ನೋವ್ ಮಾಡ್ಕೊಳೋ ವ್ಯಕ್ತೀನಾ? ಖಿನ್ನತೆ ಕಾಡ್ತಿದ್ಯಾ? ಮಾಮೂಲಿ ಸಮಯದಲ್ಲಿ ನೀವು ಎಷ್ಟೇ ಗಟ್ಟಿಯಾಗಿದ್ರೂ, ಸದ್ಯಕ್ಕೆ ನಿಮ್ಮ ಪರಿಸ್ಥಿತಿ ಸರಿಯಿಲ್ದೇ ಇರ್ಬೋದು. ಆ ರೀತಿ ವಿಷಯ ಎದುರ್ಸಕ್ಕೆ ಸದ್ಯಕ್ಕೆ ನೀವು ಮಾನಸಿಕವಾಗಿ ತಯಾರಿಲ್ದೇ ಇರ್ಬೋದು.

ಹೀಗಿರುವಾಗ, ನಿಮ್ಮ ಹತ್ತಿರ್ದೋರು, ನಿಮ್ಮ ಮನಸ್ಸಿಗೆ ನೋವಾಗೋವಂತ ವಿಷಯಾನ ಮುಚ್ಚಿಡಕ್ಕೆ ಪ್ರಯತ್ನ ಪಡ್ತಾರೆ. ಸಮಯ ಸಂದರ್ಭ ಸರಿಯಾಗಿದ್ದು , ನಿಮ್ಮ ಮೂಡ್ ನೋಡ್ಕೊಂಡು ಸಮಾಧಾನವಾಗಿ ಹೇಳೋಣ ಅಂತ ಸುಳ್ಳು ಹೇಳ್ತಾರೆ.

ಇದನ್ನ ಪೂರ್ತಿಯಾಗಿ ತಪ್ಪು ಅನ್ನಕ್ಕಾಗಲ್ಲ. ನಿಮ್ಮ ಮೇಲಿನ ಕಾಳಜಿಯಿಂದ ಹೀಗೆ ಮಾಡ್ತಾರೆ ಅಷ್ಟೆ.

3. ನಿಮ್ಗೆ ಸತ್ಯ ಅರಗುಸ್ಕೊಳೋ ಶಕ್ತಿ ಇಲ್ದಿದ್ರೆ...

ಘೋರವಾದ ಸತ್ಯ ಕೇಳಕ್ಕೆ ಇಷ್ಟ ಪಡ್ದೇಯಿರೋರು...ದುರ್ಬಲ ಹೃದಯ ಇರೋ ವ್ಯಕ್ತಿಗಳು ಮಾತ್ರ ಅಲ್ಲ. ಕೆಲವೊಂದು ಸಲ, ತುಂಬಾ ಆತ್ಮವಿಶ್ವಾಸ ಇರೋ, ಯಶಸ್ವೀ ಜನಾನೂ ಸತ್ಯ ಎದುರ್ಸಕ್ಕಾಗ್ದೇ ಹೆಣಗಾಡ್ತಾರೆ.

ಇಂಥಾ ಸಂದರ್ಭದಲ್ಲಿ ನಿಮ್ಮ ಎದುರಿಗಿರೋರು ನಿಮ್ಹತ್ರ ಪೂರ್ತಿ ಸುಳ್ಳು ಅಥವಾ ನಿಮ್ಮ ಕೈಯ್ಯಲ್ಲಿ ಎಷ್ಟು ಅರ್ಗಿಸ್ಕೊಳಕ್ಕಾಗುತ್ತೋ ಅಷ್ಟೇ ಸತ್ಯ ಹೇಳ್ತಾರೆ.

4. ಕೆಲವು ಕಟು ಸತ್ಯಗಳನ್ನ ಮುಚ್ಚಿಡೋದೇ ಒಳ್ಳೇದು ಅಂತಾ ನೀವೇ ತೋರಿಸ್ಕೊಟ್ಟಿದ್ರೆ...

ಇದೊಂಥರಾ ಒಳ್ಳೆ ಅಭ್ಯಾಸಾನೇ. ನಿಮಗೆ ನೀವೇ ಈ ನಿರ್ಬಂಧ ಹಾಕ್ಕೊಂಡ್ರೆ ಮನೆ ವಾತಾವರಣ ನಿಜ್ವಾಗ್ಲೂ ಚೆನ್ನಾಗಿರತ್ತೆ. ಉದಾಹರಣೆಗೆ ಮನೇಲಿ ಅಜ್ಜಿ ತಾತ ಯಾರಾದ್ರೂ ತುಂಬಾ ಅನಾರೋಗ್ಯದಿಂದ ನರಳ್ತಿದ್ರೆ, ವರ್ಷಗಳಿಂದ ಹಚ್ಕೊಂಡಿರೋ ಸಾಕು ಪ್ರಾಣಿ ಸಾಯೋ ಸ್ಥಿತಿ ತಲುಪಿದ್ರೆ... ಅಪ್ಪ ಅಮ್ಮಂದ್ರು ತಮ್ಮ ಪುಟ್ಟ ಮಕ್ಕಳಿಗೆ ಹೇಳಲ್ಲ. ಇದರ ಹಿಂದಿರೋ ಉದ್ದೇಶ ಇಷ್ಟೇ... ಚಿಕ್ಕ ಮಕ್ಕಳ ಪುಟ್ಟ ಹೃದಯ ಇಂಥಾ ಆಘಾತಾನೆಲ್ಲಾ ತಡ್ಕೊಳಲ್ಲ ಮತ್ತೆ ಅವ್ರಿಗೆ ಅರ್ಥ ಮಾಡ್ಕೊಳೋ ಶಕ್ತಿಯಿರಲ್ಲ... ತುಂಬಾ ದುಖಃ ಪಡ್ತಾರೆ ಅನ್ನೋದಷ್ಟೇ. ಆ ವಯಸ್ಸಿಗೆ ಇದೆಲ್ಲಾ ಬೇಡ ಅನ್ಸಿ ದೊಡ್ಡೋರು ಸುಳ್ಳು ಹೇಳಿ ಸಮಾಧಾನ ಮಾಡ್ತಾರೆ, ವಿಷ್ಯ ಮುಚ್ಚಿಡ್ತಾರೆ. 

ಆದ್ರೆ, ನೀವು ಮಾಡೋದ್ನೇ ನಿಮ್ಮ ಮಕ್ಕಳು ಕೂಡ ಪಾಲಿಸ್ತಾರೆ. ಮುಂದಿನ ದಿನಗಳಲ್ಲಿ ನೀವು ಅವರು ಹೇಳೋ ವಿಷಯಗಳನ್ನ ಅರ್ಥ ಮಾಡ್ಕೋತೋರೋ ಇಲ್ವೋ ಅಂತ ನಿಮ್ಮಿಂದ ಸತ್ಯ ಮುಚ್ಚಿಡೋ ಪ್ರಯತ್ನಮಾಡ್ಬೋದು. ಆಗ ತಂದೆ- ತಾಯಂದ್ರು ಹುಷಾರಾಗಿರ್ಬೇಕು.

ಏನಂತೀರಿ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: