ಇವತ್ತ ನನ್ನ ಮನಸ್ಸ ಸರಿ ಇಲ್ಲಾ, ಮೂಡ್ ಕೆಟ್ಟದ ಅಂದ್ರ ಹಿಂಗ 10 ಉಪಾಯ ಮಾಡರಿ

ನಂ ಜೀವನಾ ನಿಂತಿದ್ದ ನಂ ಮೂಡ್ ಮ್ಯಾಲೆ ನೊಡರಿ

ಇವತ್ತ ನನ್ನ ಮನಸ್ಸ ಸರಿ ಇಲ್ಲಾ, ಮೂಡ್ ಕೆಟ್ಟದ ಅಂತ ಕೆಲವರು ಹೇಳೋದ ಕೇಳಿರತೇವಿ. ಕೆಲವು ಸಲಾ ನಂ ಮೂಡು ಕೆಟ್ಟಿರತೇತಿ. ಅಂತಾ ಹೊತ್ತನ್ಯಾಗ ಯಾವ ಕೆಲಸಾನೂ ಮಾಡಾಕಾಗಂಗಿಲ್ಲಾ. ಯಾರ ಜೋಡಿ ಮಾತಾಡೋದೂ ಬ್ಯಾಡಾ ಅನಸತಿರತೇತಿ. ಹೌದಿಲ್ಲೋ ?

ಕೆಟ್ಟ ಮೂಡ್ ಸರಿ ಮಾಡೋ ಸಲುವಾಗಿನ ನಾವು ಒಂದ ಹತ್ತ ಉಪಾಯ ತಂದೇವಿ. ಮಾಡಿ ನೋಡ್ರಿ. ಬರೇ ಮೂಡ್ ಸರಿ ಆಗೋದಷ್ಟ ಅಲ್ಲದ ಮನಸ್ಸಿಗೆ ಉಲ್ಲಾಸ ಆಗಿ ಮುಂದ ಮಾಡೋ ಕೆಲಸಗೋಳೆಲ್ಲಾ ಸರಾಗವಾಗಿ ಸಾಗತಾವು.  

1. ಸಹಾನುಭೂತಿ ತೋರಸೋ ಸ್ನೇಹಿತರು ಮತ್ತ ಸಂಬಂಧಿಕರ ಜೋಡಿ ಹೆಚ್ಚಿಗಿ ಸಮಯ ಕಳೀರಿ

ನಮಗ ಅನಸಿದ್ದರ ಬಗ್ಗೆ ಮಾತಾಡೋದರಿಂದಾ ನಂ ಮನಸಿನ ದುಃಖ – ದುಗುಡಗಳು ಹೊರಹೋಗೋದಲ್ಲದ,ಹಿತೈಶಿಗಳ ಸಲಹೆ ಮತ್ತ ಬೆಂಬಲ ಪಡೆದುಕೊಳ್ಳಾಕೂ ಸಹಾಯ ಆಗತೇತಿ. . ನಿಮಗೆ ಅವರ ಸಹಾಯ ಬೇಕು ಅಂತ ಹೇಳಾಕ ಮತ್ತ ಅದನ್ನ ಸ್ವೀಕರಿಸಾಕ ಎಂದೂ ಹಿಂಜರಿಬ್ಯಾಡರಿ. ಒಂದ ವೇಳೆ ನಿಂ ಸ್ನೇಹಿತರು ಮತ್ತ ಸಂಬಂಧಿಕರ ಜೋಡಿ ಮಾತಾಡಾಕ ಆಗತಿದ್ದಲ್ಲಾ ಅಂದರ ನೀವು ಸಹಾಯವಾಣಿಗೂ ಫೋನ್ ಮಾಡಬಹುದು. ಇಂತಾ ಹೊತ್ತನ್ಯಾಗ ನಂ ದುಃಖ ಕೇಳಿಸಕೋಳ್ಳಾಕ ಕಿವಿ ಬೇಕಾಗಿರತಾವ ನಮಗ. ಅದು ಯಾರಾದರೂ ಸರಿ. ಮಾತಾಡಿದರ ಮನಸ್ಸ ಹಗೂರ ಆಗತೇತಿ. ಹಾ , ಆ ವ್ಯಕ್ತಿ ನಿಂ ಕಷ್ಟಾನ ತನ್ನ ಲಾಭಕ್ಕ ಬಳಸಕೋಬಾರದಾ ಮತ್ತ.

 

2. ನಿಂ ಸಾಮರ್ಥ್ಯದ ಮಿತಿ ನಿಮಗ ಗೊತ್ತಿಟಕೋರಿ

ದೊಡ್ಡ ದೊಡ್ಡ ಕೆಲಸಗೋಳನ್ನ ಸಣ್ಣದಾಗಿ ವಿಂಗಡಿಸಿಗೊಂಡು ಅವನ್ನ ಪೂರ್ತಿಮಾಡಾಕ ಒಂದ ಗಡುವು ಹೊಂದಿಸಿಕೋರಿ.  ಒತ್ತಡ ಮಾಡಕೋಳ್ಳಾರದಂಗ ಕೆಲಸಾ ಮಾಡರಿ. ಎಷ್ಟ ಯೋಜನೆ ಹಾಕ್ಕೋಂಡರೂ ಒಮ್ಮೊಮ್ಮೆ ಏನ್ನೂ ಕೆಲಸಾ ಆಗಿರಂಗೇ ಇಲ್ಲಾ. ಅದಕ್ಕ ನಿಮ್ಮನ್ನ ದೂಷಿಸಕೋಬ್ಯಾಡರಿ. ನೀವು ನಿಂ ಕಡಿಂದ ಆದಷ್ಟು ಪ್ರಯತ್ನಾ ಪಟ್ಟೀರಲ್ಲಾ.  ಮುಂದ ಜಿಗಿಬೇಕಂದರ ಒಂದು ಹೆಜ್ಜಿ ಹಿಂದಕ್ಕ ತೊಗೊಬೇಕು ಅನ್ನೋದನ್ನ ನೆನಪ ಇಟ್ಟಕೋರಿ.

3. ಸಾಮಾನ್ಯವಾಗಿ ನಿಮಗ ಯಾವ ಕೆಲಸ ಖುಷಿ ಕೊಡತೇತಲ್ಲಾ ಅದನ್ನ ಮಾಡರಿ

ನಿಮ್ಮ ನೆಚ್ಚಿನ ಪುಸ್ತಕ ಓದಿರಿ, ಪ್ಯಾಟಿಗೆ ಅಥವಾ ಸಿನೆಮಾಕ್ಕ ಹೋಗರಿ,ಅಡಗಿ ಮಾಡರಿ , ಹಳೆ ಗೆಳೆಯರ ಜೋಡಿ ಹರಟಿ ಹೊಡೀರಿ. ಒಟ್ಟ ನಿಮಗ ಖುಷಿ ಆಗಬೇಕು ಮತ್ತ ಯಾವ ಋಣಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರದಷ್ಟು ಸಂತೋಷವಾಗಿರ್ರಿ.

 

4. ಮನೆಯಿಂದ ಹೊರಬನ್ನಿ

ಹಾಲ ತರಾಕಾಗಿರಬೌದು ಅಥವಾ ಉದ್ಯಾನದಾಗ ವಾಕ್ ಮಾಡಾಕಿರಬೌದು. ಒಟ್ಟ ಮನಿಯಿಂದಾ ಹೊರಗ ಬರ್ರಿ. ಪ್ರಕಾಶಮಾನವಾದ ಬೆಳಕು, ತಾಜಾ ಗಾಳಿ , ಪ್ರಕೃತಿಯ ದೃಶ್ಯಗಳು, ಶಬ್ದಗಳು ಮತ್ತ ವಾಸನೆಗಳು ಎಲ್ಲಾನೂ ಆಸ್ವಾದಿಸರಿ.  ಸಾಧ್ಯ ಆದರ 20 ನಿಮಿಷ  ವಾಕಿಂಗ್ ಅಥವಾ ವ್ಯಾಯಾಮ ಮಾಡರಿ. ಮಖದಾಗ ನಗು ತಾನ ಮೂಡತೇತಿ.

5. ಋಣಾತ್ಮಕ ಆಲೋಚನೆಗಳನ್ನ ಮದಲ ಬಂದ್ ಮಾಡರಿ

ನಿಮ್ಮ ಬಗ್ಗೆ ಮತ್ತ ನಿಮ್ಮ ಪರಿಸ್ಥಿತಿ ಬಗ್ಗೆ ಎಲ್ಲಾ ಸಕಾರಾತ್ಮಕ ವಿಷಯಗಳ ಪಟ್ಟಿ ತಯಾರಿಸರಿ. ಅದನ್ನು ದಿನಕ್ಕ ಒಂದ ನಾಕೈದ ಸಲಾ ಅರ ಓದಿಕೊರಿ. ಕೆಟ್ಟ ಆಲೋಚನೆಗುಳು ಹತ್ತರೂ ಸುಳೀದಂಗ ನೋಡಕೊರಿ.

 

6. ನಿಂ ಏಳ್ಗಿ ಬಗ್ಗೆ ನಂಬಿಕಿ ಇಡಿ

ಕೆಟ್ಟಿದ್ದ ಮೂಡ್ ಸರಿ ಆಗಬೇಕಂದ್ರ ಥಟ್ ಅಂತ ಆಗಂಗಿಲ್ಲಾ. ಅದಕ್ಕೂ ಸಲ್ಪ ಟೈಂ ಬೇಕಾಗತೇತಿ. ಮದಲ ಮದಲಿಗೆ ದುಃಖ, ನಿರಾಸೆಗೋಳ ಭಾಳ ಕಾಡತಾವ. ಆದರ ನೀವ ದೃತಿಗೆಡಬ್ಯಾಡರಿ. ಒಂದ ಸಲಾ ದಾರಿಗೆ ಹತ್ತಿದರಿ ಅಂದ್ರ ಸಾವಕಾಶ ಎಲ್ಲಾ ಚೊಲೊ ಆಕ್ಕೋತ ಹೋಗತೇತಿ. ನಿಮಗ ನಿಂ ಮ್ಯಾಲೆ ನಂಬಿಕಿ ಇರಬೇಕಷ್ಟ.  

7. ನಿಮಗ ಬೇಕಾಗೋ ಅಷ್ಟ ಚೊಲೊ ನಿದ್ದಿ ಮಾಡರಿ

ಸರಿಯಾಗಿ ನಿದ್ದಿ ಇಲ್ಲಾ ಅಂದ್ರನೂ ಮನಸ್ಸಿಗೆ ಕಿರಿ ಕಿರಿ ಆಗತೇತಿ . ಅದಕ್ಕ ರಾತ್ರಿ ಚೊಲೊ ನಿದ್ದಿ ಮಾಡರಿ. ಸುಸ್ತ ಇತ್ತಂದರ ಹಗಲ ಹೊತ್ತೂ ಸಣ್ಣ ಜೊಂಪ್ ಹೊಡೀ ಬೌದು. ನಿದ್ದಿ ಬರೆ ಶರೀರಕ್ಕಷ್ಟ ವಿಶ್ರಾಂತಿ ಕೊಡೋದಿಲ್ಲ. ಮನಸ್ಸಿಗೂ ವಿಶ್ರಾಂತಿ ನೀಡತೇತಿ ಅನ್ನೋದು ನೆನಪಿರಲಿ.

 

8. ಮುಖ್ಯವಾದ ನಿರ್ಧಾರಗಳನ್ನ ತೊಗೊಳ್ಳೋವಾಗ ಸಲ್ಪ ನಿಧಾನ ಮಾಡರಿ

ಕೆಲಸಾ ಬಿಡೋದು, ವಿಚ್ಛೇದನ ತೊಗೊಳ್ಳೊದು ಅಥವಾ ದುಡ್ಡ ಹೂಡಿಕೆ ಮಾಡೋದು ಇಂಥಾ ಅತೀ ಮುಖ್ಯವಾದ ನಿರ್ಧಾರಗೋಳನ್ನ ತೊಗೊಬೇಕಾರ ಮನಸ್ಸು ಅಗದೀ ಶಾಂತ ಇರಬೇಕಾಗತೇತಿ. ಅದಕ್ಕ ಮನಸ್ಸು ಕೆಟ್ಟಾಗ ಇಂತಾವೆಲ್ಲಾ ನಿರ್ಧಾರಾ ತೊಗೊಳ್ಳಾಕ ಹೋಗಬ್ಯಾಡರಿ.

9. ತುರ್ತು ಪರಿಸ್ಥಿತಿಯಲ್ಲಿ ಯಾರನ್ನ ಅವಲಂಬಿಸಬಹುದು ಅನ್ನೋ ಬಗ್ಗೆ ತಿಳಿದಿರಿ

ತುರ್ತು ಪರಿಸ್ಥಿತಿ ಅಂದರ ತೀರಾ ದುಃಖಾಗಿ ಅತ್ತಬಿಡಬೇಕು ಅನಸದಾಗ, ಯಾರ ಹತ್ತರರ ಹೇಳಕೊಬೇಕು ನನ್ನ ಕಷ್ಟಾನ ಅನಸದಾಗ, ಒಮ್ಮೊಮ್ಮೆ ನಮಗ ಯಾರಿಲ್ಲಾ ಅನಿಸಿ ಆತ್ಮಹತ್ತೆ ಮಾಡಕೋಬೇಕು ಅನಸಿಬಿಡತೆತಿ ಅಂತಾ ವೇಳ್ಯಾದಾಗ ಯಾರನ್ನ ಕರೀಬೇಕು ಅಥವಾ ಯಾರಿಗೆ ಫೋನ ಮಾಡಬೌದು ? ದೋಸ್ತರು, ಸಂಬಂಧಿಕರು ಅಥವಾ ಸಹಾಯವಾಣಿ ..... ಇಂತವರ ಫೋನ ನಂಬರು , ವಿಳಾಸಾ ಯಾವಾಗಲೂ ನಿಮಗ ಸುಲಭದಾಗ ಸಿಗಂಗ ಇಟ್ಟಕೊರಿ.

 

10. ಅವಶ್ಯ ಇದ್ದರ ಡಾಕ್ಟರನೂ ಬೆಟ್ಯಾಗಬೌದು ನೋಡ್ರಿ

ತೀರಾ ಖಿನ್ನತೆ, ಕಿರಿಕಿರಿ, ಬೇಜಾರು, ಯಾವಾಗಲೂ ದುಃಖ ಅನಸೋದು ಆಗತಿದ್ದರ ಒಮ್ಮೆ ಆಪ್ತಸಲಹೆಗಾರರ ಕಡೆ ಸಲಹೆ ತೊಗೊಬೌದು. ಅದು ತಪ್ಪೇನಲ್ಲ. ನಾಚಿಕಿ ಪಟಕೊಳ್ಳೊ ಅಂತಾದ್ದೂ ಅಲ್ಲ.

ನಂ ಶರೀರದಾಗಿರೋ ಬ್ಯಾರೆ ಬ್ಯಾರೆ ಅಂಗಗೊಳ ಹಂಗ ಮನಸ್ಸನೂ ಒಂದ ಅಂಗ. ಆದರ ನಂ ಜೀವನದಾಗ ನಡೆಯೋವು, ನಾವ ನೋಡೋವು, ಕೇಳೋವು ...... ಎಲ್ಲಾ ವಿಷಯಗೋಳು ಅದರ ಮ್ಯಾಲೆ ಜಾಸ್ತಿ ಪರಿಣಾಮಾ ಬೀರತಾವು. ಅದಕ್ಕ ನಂ ಜೀವನಾ ಸುಖವಾಗಿರಬೇಕಂದ್ರ ನಂ ಮನಸ್ಸು ಆರೋಗ್ಯವಾಗಿ, ಸಂತೋಷವಾಗಿರಬೇಕು. ಅದನ್ನ ಹಂಗ ನೋಡಕೊಳ್ಳೊದು ನಂ ಕರ್ತವ್ಯನೂ ಹೌದು. ಅವಶ್ಯಕತೆನೂ ಹೌದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: