ಶೆಕೆ ಇರುವಾಗ ಬಾಯಲ್ಲಿ ನೀರು ಬರ್ಸೋ ಈ 9 ತಂಬುಳಿ ತಿಂದ್ರೆ ಮೈ ತಂಪಾಗಿ ಆರೋಗ್ಯವಾಗಿರ್ತೀರಿ

ಮಾಡಕ್ಕೂ ಸುಲಭ

ಬೇಸಿಗೆ ಆಗ್ಲೇ ಕಾಲಿಟ್ಟಾಯ್ತು. ಬಿಸಿಲಿನ್ ಝಳ ಅಂತೂ ಕೇಳಂಗೇಯಿಲ್ಲ. ಚರ್ಮಕ್ಕೇನೋ ಕ್ರೀಮು ಗೀಮು ಅಂತ ಒಂದಷ್ಟು ಹಚ್ಕೊಂಡು ಓಡಾಡ್ತೀವಿ. ಆದರೆ ದೇಹದ್ ಆರೋಗ್ಯನೂ ಕಡೆಗಣಿಸೋಹಾಗಿಲ್ಲ. ಇದಕ್ಕೆ, ನಾವ್ ಮಾಡೋ ಊಟದಲ್ಲೇ ಲಾಭ ಸಿಗೋ ವಿಷ್ಯ ಇದೆ. ನಮ್ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲ್ನಾಡ್ ಕಡೆ ಮಾಡೋ ತಂಬುಳಿ ಇದ್ಯಲ್ಲ, ಇದು ದೇಹಕ್ಕೆ ತುಂಬ ಒಳ್ಳೇದು ಜೊತೆಗೆ ಶಖೆಗಾಲದಲ್ಲಿ ಅಡಿಗೆಮನೆ ಹೆಸರು ಕೇಳಿದ್ರೆನೇ ಬೆವರು ಹರಿಯುವಾಗ, ಕಮ್ಮಿ ಟೈಮಲ್ಲಿ ಸುಲಭಕ್ಕೆ ಮಾಡ್ಬಹುದಾಗಿರೋ ರುಚಿಕಟ್ಟಾದ ಅಡುಗೆ.

ಬೇಸಿಗೆ ತಂಪಾಗ್ ಕಳೆಯಕ್ಕೆ, 9 ಥರ ತಂಬುಳಿ ಮಾಡೊ ವಿಧಾನಗಳ್ನ ನಿಮ್ಗೋಸ್ಕರ ಕೊಟ್ಟಿದಿವಿ. ಮಾಡ್ ತಿನ್ನಿ, ರುಚ್ಯಾಗೂ ಇರತ್ತೆ ಆರೋಗ್ಯನೂ ಕಾಪಾಡತ್ತೆ.

1) ಕೊತ್ತಂಬರಿ ಸೊಪ್ಪಿನ ತಂಬುಳಿ

ಇವಿಷ್ಟು ಬೇಕು:

ಕೊತ್ತಂಬರಿ ಸೊಪ್ಪು -ಒಂದು ಹಿಡಿ, ಹಸಿ ಮೆಣಸಿನಕಾಯಿ-2, ಗಟ್ಟಿ ಮೊಸರು - 2 ಟೀ. ಚಮಚ., ತೆಂಗಿನಕಾಯಿ ಹಾಲು - 1/4 ಬಟ್ಟಲು, ತುಪ್ಪ - 1 ಟೀ. ಚಮಚ, ಸಾಸಿವೆ - 3/4 ಟೀ ಚಮಚ, ಜೀರಿಗೆ - 1/2 ಟೀ ಚಮಚ, ಉಪ್ಪು ರುಚಿಗೆ, ಕರಿಬೇವಿನ ಸೊಪ್ಪು ಸ್ವಲ್ಪ, ಇಂಗು ಚಿಟಿಕೆ.

ಹಿಂಗಿಂಗ್ ಮಾಡಿ:

ಮೊದ್ಲು ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಇದೆರಡನ್ನೂ ಎಷ್ಟು ಬೇಕೊ ಅಷ್ಟು ನೀರ್ ಹಾಕ್ಕೊಂಡು ಮಿಕ್ಸೀಲಿ ನುಣ್ಣಗೆ ರುಬ್ಕೊಳಿ. ಇದಕ್ಕೆ ಮೊಸರು, ತೆಂಗಿನಕಾಯಿ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ನಿಮ್ ರುಚಿಗ್ ಬೇಕಾದಷ್ತು ಉಪ್ಪು ಸೇರ್ಸಿ ಇನ್ನೊಂದ್ ಸಲ ಕೈಯಾಡಿಸಿ. ಕಡೇಗೆ ಒಂದ್ ಚಿಕ್ಕ್ ಬಾಂಡ್ಲೇಲಿ ತುಪ್ಪ, ಸಾಸಿವೆ, ಜೀರಿಗೆ, ಕರಿಬೇವಿನ್ ಸೊಪ್ಪು, ಇಂಗಿನ್ ಒಗ್ಗರಣೆ ಮಾಡ್ಕೊಂಡು ಇದಕ್ಕೆ ಸೇರಿಸಿದ್ರೆ, ಕೊತ್ತಂಬರಿ ಸೊಪ್ಪಿನ್ ತಂಬುಳಿ ತಯಾರಾಗತ್ತೆ. ಬಿಸಿಬಿಸಿ ಅನ್ನದ್ ಜೊತೆ ಇದನ್ನ ಚಪ್ಪರಿಸ್ತಿದ್ರೇ. ಆಹಾ..

2) ಟೊಮ್ಯಾಟೋ ತಂಬುಳಿ

ಇವಿಷ್ಟು ಬೇಕು:

ಹಣ್ಣಾಗಿರೊ ಟೊಮ್ಯಾಟೊ - 2, ಹಸಿಮೆಣಸಿನಕಾಯಿ - 2, ತಾಜಾ ಮೊಸರು - 1/2 ಬಟ್ಟಲು, ಸಣ್ಣಗೆ ಹೆಚ್ಚಿರುವ ಕೊತ್ತಂಬರಿ ಸೊಪ್ಪು - 2 ಟೀ ಚಮಚ, ಅಡುಗೆ ಎಣ್ಣೆ - 2 ಟೀ ಚಮಚ, ಜೀರಿಗೆ - 1 ಟೀ ಚಮಚ, ಸಾಸಿವೆ -1 ಟೀ ಚಮಚ, ಉಪ್ಪು ರುಚಿಗೆ.

ಹಿಂಗಿಂಗ್ ಮಾಡಿ: 

ಮೊದ್ಲು ಟೊಮ್ಯಾಟೊ ಮತ್ತೆ ಹಸಿಮೆಣಸಿನಕಾಯಿನ ಮೈಕ್ರೋವೇವ್ ನಲ್ಲಿ ಸುಮಾರು 2 ನಿಮಿಷ ಇಡಿ. ಟೊಮ್ಯಾಟೊ ಚೆನ್ನಾಗ್ ಬೇಯ್ಬೇಕು. ಬೆಂದ್ ಮೇಲೆ ಇದಕ್ಕೆ ನಿಮ್ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಮಿಕ್ಸಿನಲ್ಲಿ ನುಣ್ಣಗೆ ರುಬ್ಕೊಳಿ. ಆಮೇಲೆ ಮೊಸರು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕಡೇಲಿ ಕಾದ ಎಣ್ಣೆಗೆ ಸಾಸಿವೆ, ಜೀರಿಗೆ,  ಹಾಕಿ ಈ ಮಿಶ್ರಣಕ್ಕೆ ಒಗ್ಗರಣೆ ಕೊಟ್ರೆ, ಟೊಮ್ಯಾಟೊ ತಂಬುಳಿ ರೆಡಿಯಾಗತ್ತೆ. ಬಿಸಿ ಅನ್ನಕ್ಕೆ ಇದನ್ನ ಕಲಸ್ಕೊಂಡ್ ಊಟ ಮಾಡೋದೇ ಮಜ.

3) ದಾಳಿಂಬೆ ಸಿಪ್ಪೆ ತಂಬುಳಿ

ಇವಿಷ್ಟು ಬೇಕು:

ಒಣಗಿರೊ ದಳಿಂಬೆ ಸಿಪ್ಪೆಗಳು - ಸುಮಾರು 3 ಇಂಚ್ ಉದ್ದುಕ್ ಇರ್ಬೇಕು, ಜೀರಿಗೆ -1/2 ಟೀ ಚಮಚ, ಕಾಳು ಮೆಣಸು - 1/2 ಟೀ ಚಮಚ, ತೆಂಗಿನಕಾಯಿ ತುರಿ - 1/2 ಬಟ್ಟಲು, ಮೊಸರು - 1/2 ಬಟ್ಟಲು, ಎಣ್ಣೆ - 1 ಟೀ ಚಮಚ.

ಒಗ್ಗರಣೆಗೆ: ತುಪ್ಪ/ ತೆಂಗಿನೆಣ್ಣೆ - 1 ಟೀ ಚಮಚ, ಸಾಸಿವೆ - 1/2 ಟೀ ಚಮಚ, ಜೀರಿಗೆ - 1/2 ಟೀ ಚಮಚ, ಒಣಮೆಣಸಿನಕಾಯಿ - 1 ರಿಂದ 2, ಇಂಗು - ಚಿಟಿಕೆ, ಕರಿಬೇವಿನ ಸೊಪ್ಪು(ಬೇಕಿದ್ರೆ).

ಹಿಂಗಿಂಗ್ ಮಾಡಿ:

ಮೊದ್ಲು ಒಂದ್ ಚಿಕ್ಕ್ ಬಾಂಡ್ಲೆಗೆ ಎಣ್ಣೆ, ದಾಳಿಂಬೆ ಸಿಪ್ಪೆ, ಕಾಳುಮೆಣಸು ಮತ್ತೆ ಜೀರಿಗೆ ಹಾಕ್ಕೊಂಡು, ಸಿಪ್ಪೆ ಗರಿಗರಿಯಾಗೋವರ್ಗೂ ಹುರಿಯಿರಿ. ಇದಕ್ಕೆ ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ, ಮಿಕ್ಸಿನಲ್ಲಿ ನುಣ್ಣುಗ್ ರುಬ್ಕೊಳಿ. ಈ ರುಬ್ಕೊಂಡಿರೊದಕ್ಕೆ ಮೊಸರು ಹಾಕಿ ಚೆನ್ನಾಗ್ ಕಲೆಸಿ. ಕಡೇಲಿ ಇದಕ್ಕೆ, ಒಗ್ಗರಣೆಗೆ ಹೇಳಿರೋದ್ನೆಲ್ಲ ಹಾಕಿ, ಘಮ್ ಅಂತ ಒಗ್ಗರಣೆ ಕೊಟ್ಟ್ರೆ, ದಾಳಿಂಬೆ ಸಿಪ್ಪೆ ತಂಬುಳಿ ರೆಡಿ. ಬಿಸಿ ಅನ್ನಕ್ಕೂ ಇದುಕ್ಕೂ ಸೂಪರ್ ಜೋಡಿ.

4) ಬೆಂಡೆಕಾಯಿ ತಂಬುಳಿ

ಇವಿಷ್ಟು ಬೇಕು:

ಬೆಂಡೇಕಾಯಿ( ಮೀಡಿಯಮ್ ಗಾತ್ರದ್ದು) - 5 ರಿಂದ 6, ಗಟ್ಟಿ ಮೊಸರು - 1 ಬಟ್ಟಲು, ಉಪ್ಪು ರುಚಿಗೆ, ಎಣ್ಣೆ - 2 ಟೀ ಚಮಚ.

ಒಗ್ಗರಣೆಗೆ: ತುಪ್ಪ/ ತೆಂಗಿನೆಣ್ಣೆ - 1 ಟೀ ಚಮಚ, ಸಾಸಿವೆ - 1/2 ಟೀ ಚಮಚ, ಜೀರಿಗೆ - 1/2 ಟೀ ಚಮಚ, ಒಣಮೆಣಸಿನಕಾಯಿ - 1 ರಿಂದ 2, ಇಂಗು - ಚಿಟಿಕೆ,

ಹಿಂಗಿಂಗ್ ಮಾಡಿ: 

ಮೊದ್ಲು ಬೆಂಡೆಕಾಯಿನ ನೀರಲ್ಲಿ ಚನ್ನಾಗ್ ತೊಳ್ದು, ಒರೆಸಿ, ಚಿಕ್ಕ ಚಿಕ್ಕ ಬಿಲ್ಲೆಗಳ ಥರ ಹೆಚ್ಕೊಳಿ. ಇಲ್ಲಿ ಒಂದ್ ಮಾತು, ಚಾಕುನಲ್ಲಾಗ್ಲಿ, ಹೆಚ್ಚೋ ಮಣೆಮೇಲಾಗ್ಲಿ ತೊಟ್ಟೂ ನೀರಿರ್ಬಾರ್ದು. ಇದ್ರೆ, ಬೆಂಡೆಕಾಯಿ ತುಂಬ ಅಂಟಂಟಾಗತ್ತೆ. ಈಗ ಬಾಂಡ್ಲೆಗೆ 1 ಚಮಚ ಎಣ್ಣೆ ಹಾಕ್ಕೊಂಡು ಬೆಂಡೆಕಾಯಿನ ಕಂದುಬಣ್ಣ ಬರೋವರ್ಗು ಹುರಿಯಿರಿ, ಜಾಸ್ತಿ ಎಣ್ಣೆ ಹೀರ್ಕೊಂಡಿದೆ ಅನ್ಸಿದ್ರೆ ಟಿಶ್ಯುಪೇಪರ್ ಮೇಲ್ ಹಾಕಿ. ಒಗ್ಗರಣೆಗೆ ಹೇಳಿರೊದನ್ನೆಲ್ಲ ಹಾಕಿ, ಮೊಸರಿಗೆ ಒಗ್ಗರಣೆ ಕೊಡಿ. ಆಮೇಲೆ ಈ ಒಗ್ಗರಣೆ ಮೊಸರಿಗೆ, ಹುರಿದಿರೊ ಬೆಂಡೆಕಾಯಿ ಹಾಕಿ ಕೈಯ್ಯಾಡಿಸಿದ್ರೆ, ರುಚಿ ರುಚಿಯಾಗಿರೊ ಬೆಂಡೆಕಾಯಿ ತಂಬುಳಿ ರೆಡಿ. ಇದನ್ನ ಅನ್ನ, ವೆಜ್ ಪುಲಾವ್, ಬಿಸಿಬೇಳೆಬಾತ್ ಜೊತೆಗೆ ನೆಂಚಿಕೊಂಡ್ ತಿನ್ಬೋದು.

5) ಮೆಂತ್ಯ ತಂಬುಳಿ

ಇವಿಷ್ಟು ಬೇಕು:

 ಮೆಂತ್ಯಕಾಳು - 1/2 ಟೀ ಚಮಚ, ಜೀರಿಗೆ - 1/2 ಟೀ ಚಮಚ, ಬ್ಯಾಡಿಗಿ ಮೆಣಸಿನಕಾಯಿ - 2, ತೆಂಗಿನಕಾಯಿ ತುರಿ - 1/2 ಬಟ್ಟಲು, ಗಟ್ಟಿ ಮೊಸರು - 1 ಬಟ್ಟಲು, ತುಪ್ಪ - 1 ಟೀ ಚಮಚ.

ಒಗ್ಗರಣೆಗೆ: ಸಾಸಿವೆ - 1/2 ಟೀ ಚಮಚ, ಉದ್ದಿನ ಬೇಳೆ - 1/2 ಟೀ ಚಮಚ, ಕರಿಬೇವಿನ ಸೊಪ್ಪು.

ಹಿಂಗಿಂಗ್ ಮಾಡಿ: 

ಮೊದ್ಲು ಒಂದ್ ಬಾಂಡ್ಲೆಗೆ ಜೀರಿಗೆ, ಮೆಂತ್ಯ ಮತ್ತೆ ಬ್ಯಾಡಿಗಿ ಮೆಣಸಿನಕಾಯಿ ಹಾಕಿ ತುಪ್ಪದಲ್ಲಿ 2 ನಿಮಿಷ ಹುರ್ಕೊಳಿ. ಇದಕ್ಕೆ ತೆಂಗಿನಕಾಯಿ ತುರಿ ಸೇರಿಸಿ ಇನ್ನೊಂದ್ ನಿಮಿಷ ಹುರಿಯಿರಿ. ಚೆನ್ನಾಗ್ ಆರಿದ್ಮೇಲೆ ಸ್ವಲ್ಪ ನೀರ್ ಹಾಕ್ಕೊಂಡು ಮಿಕ್ಸಿನಲ್ಲಿ ನುಣ್ಣುಗ್ ರುಬ್ಕೊಳಿ. ಆಮೇಲೆ ಮೊಸರು ಹಾಕಿ ಚನ್ನಾಗ್ ಕೈಯ್ಯಾಡ್ಸಿ. ಉಪ್ಪು ನಿಮ್ ರುಚಿಗ್ ಎಷ್ಟು ಬೇಕೋ ಹಾಕ್ಕೊಂಡು ಮಿಕ್ಸ್ ಮಾಡಿ. ಕಡೇಗೆ ಒಗ್ಗರಣೆಗ್ ಹೇಳಿರೋದನ್ನೆಲ್ಲಾ ಹಾಕಿ ಘಮ್ ಅಂತ ಒಗ್ಗರಣೆ ಕೊಟ್ರೆ, ಮೆಂತ್ಯೆ ತಂಬುಳಿ ಸಿದ್ಧ.

6) ಈರುಳ್ಳಿ ಕಡ್ಡಿ ತಂಬುಳಿ

ಇವಿಷ್ಟು ಬೇಕು:

ಈರುಳ್ಳಿ ಕಡ್ಡಿ - 2, ತೆಂಗಿನಕಾಯಿ ತುರಿ - 3 ಟೀ ಚಮಚ, ಗಟ್ಟಿ ಮೊಸರು - 1 ಬಟ್ಟಲು, ಜೀರಿಗೆ - 1/2 ಟೀ ಚಮಚ, ಹಸಿಮೆಣಸಿನಕಾಯಿ - 1 ರಿಂದ 2( ನಿಮಗ್ ಖಾರಕ್ಕೆ ಎಷ್ಟು ಬೇಕೊ ನೋಡ್ಕೊಳಿ), ತುಪ್ಪ - 1 ಟೀ ಚಮಚ.

ಒಗ್ಗರಣೆಗೆ: ಸಾಸಿವೆ - 1/2 ಟೀ ಚಮಚ, ಜೀರಿಗೆ - 1/2 ಟೀ ಚಮಚ, ಒಣಮೆಣಸಿನಕಾಯಿ - 1, ಕರಿಬೇವಿನ ಸೊಪ್ಪು - 3 ರಿಂದ 4, ಇಂಗು - ಚಿಟಿಕೆ

ಹಿಂಗಿಂಗ್ ಮಾಡಿ:

ಮೊದ್ಲು ಈರುಳ್ಳಿ ಕಡ್ಡಿನ ಸಣ್ಣದಾಗಿ ಹೆಚ್ಚ್ಕೊಳಿ. ಬಾಂಡ್ಲೆನಲ್ಲಿ 1 ಚಮಚ ತುಪ್ಪ ಕಾಯ್ಸಿ, ಅದಕ್ಕೆ ಜೀರಿಗೆ, ಹಸಿಮೆಣಸಿನಕಾಯಿ ಮತ್ತೆ ಈರುಳ್ಳಿ ಕಡ್ಡಿ ಹಾಕಿ, ಮಧ್ಯದ ಉರಿನಲ್ಲಿ ಚೆನ್ನಾಗ್ ಬಾಡುಸ್ಕೊಳಿ. ಈರುಳ್ಲಿ ಕಡ್ಡಿ ಬೆಂದು ಇಷ್ಟೇ ಇಷ್ಟ್ ಆಗತ್ತೆ. ಆಗ ಆರಕ್ಕೆ ಬಿಡಿ. ಆಮೇಲೆ ಮಿಕ್ಸಿಗೆ ಈ ಬೇಯಿಸಿಕೊಂಡಿರೊ ಈರುಳ್ಳಿ ಕಡ್ಡಿ ಮಿಶ್ರಣ ಮತ್ತೆ ತೆಂಗಿನಕಾಯಿ ತುರಿ ಹಾಕಿ, ಉಗುರು ಬೆಚ್ಚಗಿರೋ ನೀರ್ ಸೇರಿಸಿ ನುಣ್ಣುಗ್ ರುಬ್ಕೊಳಿ. ರುಬ್ಬಿರೊದನ್ನ ಒಂದು ದೊಡ್ಡ ಬಟ್ಟಲಿಗ್ ಹಾಕ್ಕೊಂಡು ಮೊಸರು ಅಥವ ಮಜ್ಜಿಗೆ ಸೇರಿಸಿ ತಂಬುಳಿ ಹದಕ್ಕೆ ಮಿಕ್ಸ್ ಮಾಡಿ. ಬೇಕೂನ್ಸದ್ರೆ ನೀರ್ ಹಾಕ್ಕೊಳಿ. ರುಚಿಗ್ ಬೇಕಾದಷ್ಟು ಉಪ್ಪು ಹಾಕಿ ಇನ್ನೊಂದ್ ಸಲ ಕೈಯ್ಯಾಡಿಸಿ. ಕಡೇಲಿ ಒಗ್ಗರಣೆಗ್ ಹೆಳಿರೋದನ್ನೆಲ್ಲಾ ಹಾಕಿ ಘಮ್ ಅಂತ ಒಗ್ಗರಣೆ ಕೊಟ್ರೆ ಆಗೇಹೊಯ್ತು. ರುಚಿ ರುಚಿಯಾಗಿರೊ ಈರುಳ್ಳಿ ಕಡ್ಡಿ ತಂಬುಳಿ ರೆಡಿಯಾಗತ್ತೆ. ಇದನ್ನ ಬಿಸಿ ಬಿಸಿ ಅನ್ನಕ್ಕೆ ಹಾಕ್ಕೊಂಡ್ ತಿಂದ್ರೆ ಚೆನ್ನಾಗಿರತ್ತೆ.

7) ಉದ್ದಿನ ಹಿಟ್ಟು

ಇವಿಷ್ಟು ಬೇಕು:

ಉದ್ದಿನ ಬೇಳೆ - 10 ಟೀ ಚಮಚ/ ಉದ್ದಿನಬೇಳೆ ಹಿಟ್ಟು - 5 ಟೀ ಚಮಚ, ಗಟ್ಟಿ ಮೊಸರು - 1 ಬಟ್ಟಲು, ಶುಂಠಿ - 1 ಇಂಚು( ಸಣ್ಣಕ್ಕೆ ಹೆಚ್ಚಿರದು), ಹಸಿಮೆಣಸಿನಕಾಯಿ - 1(ಸಣ್ಣಕ್ಕೆ ಹೆಚ್ಚಿರದು),

ಒಗ್ಗರಣೆಗೆ: ಸಾಸಿವೆ - 1/2 ಟೀ ಚಮಚ, ಕರಿಬೇವಿನ ಸೊಪ್ಪು ಸ್ವಲ್ಪ, ಇಂಗು - ಚಿಟಿಕೆ, ತೆಂಗಿನೆಣ್ಣೆ - 2 ಟೀ ಚಮಚ, ಉಪ್ಪು ರುಚಿಗೆ.

ಹಿಂಗಿಂಗ್ ಮಾಡಿ:

ಉದ್ದಿನಬೇಳೆ ಹಿಟ್ಟು ರೆಡೀ ಇದ್ರೆ ಸರಿ. ಇಲ್ಲ ಅಂದ್ರೆ ಉದ್ದಿನಬೇಳೆನ ಮಿಕ್ಸಿನಲ್ಲಿ ನುಣ್ಣಗೆ ಪುಡಿ ಮಾಡ್ಕೊಳಿ. ಹುರಿಯೋದ್ ಬೇಕಿಲ್ಲ ಆದ್ರೆ ನಿಮ್ಮಿಷ್ಟ. ಈ ಹಿಟ್ಟಿಗೆ ಹುಳಿ ಬಂದಿರೊ ಗಟ್ಟಿ ಮೊಸರು ಹಾಕಿ ಗಂಟು ಇಲ್ಲದೇಯಿರೊ ಹಾಗೆ ಮಿಕ್ಸ್ ಮಾಡ್ಕೊಳಿ. ಆಮೇಲೆ ಉಪ್ಪು, ಶುಂಠಿ ಮತ್ತೆ ಹಸಿಮೆಣಸಿನಕಾಯಿ ಶೇರಿಸಿ ಚೆನ್ನಾಗ್ ಕೈಯ್ಯಾಡ್ಸಿ. ಕಡೇಗೆ ಒಗ್ಗರಣೆಗೆ ಹೇಳಿರೋದ್ನೆಲ್ಲ ಹಾಕಿ ಘಮ ಘಮ ಅಂತ ಒಗ್ಗರಣೆ ಕೊಟ್ರೆ, ರುಚಿ ರುಚಿಯಾಗಿರೊ ಉದ್ದಿನಹಿಟ್ಟು ರೆಡಿಆಗತ್ತೆ. ಬಿಸಿ ಬಿಸಿ ಅನ್ನಕ್ಕೆ ತೆಂಗಿನೆಣ್ಣೆ ಹಾಕ್ಕೊಂಡು, ಈ ಉದ್ದಿನಹಿಟ್ಟು ಜೊತೆ ಸಂಡಿಗೆ ಮೆಣಸು ನೆಂಚ್ಕೊಂಡು ತಿಂತಿದ್ರೆ, ನಾಲಿಗೆ ಪಾವನ.

8) ಪಾಲಾಕ್ ತಂಬುಳಿ

ಇವಿಷ್ಟು ಬೇಕು:

ಪಾಲಕ್ ಸೊಪ್ಪು - 2 ಬಟ್ಟಲು, ಮೊಸರು - 1 ಬಟ್ಟಲು, ಅರಿಶಿಣ - 1/2 ಟೀ ಚಮಚ, ನೀರು - 2 ರಿಂದ 3 ಟೀ ಚಮಚ.

ಒಗ್ಗರಣೆಗೆ: ತುಪ್ಪ - 1 ಟೀ ಚಮಚ, ಜೀರಿಗೆ - 1 ಟೀ ಚಮಚ, ಒಣಮೆಣಸಿನಕಾಯಿ - 1, ಕರಿಬೇವಿನಸೊಪ್ಪು- 3 ರಿಂದ 4, ಇಂಗು - ಚಿಟಿಕೆ

ಹಿಂಗಿಂಗ್ ಮಾಡಿ:

ಪಾಲಕ್ ಸೊಪ್ಪನ್ನ ಚೆನ್ನಾಗಿ ತೊಳ್ದು, 3 ಬಟ್ಟಲು ನೀರ್ ಹಾಕಿ ಬೇಯೋದಕ್ಕಿಡಿ. ಸೊಪ್ಪು ಬೆಂದು ಹಸಿರು ಬಣ್ಣಕ್ಕೆ ಬರ್ಬೇಕು. ಮಿಕ್ಸಿಗೆ ಈ ಬೆಂದಿರೊ ಪಾಲಕ್ ಸೊಪ್ಪು, ತೆಂಗಿನತುರಿ, ಜೀರಿಗೆ ಹಾಕಿ ಬೇಕಿದ್ರೆ ನೀರ್ ಸೇರಿಸಿ ರುಬ್ಬಿಕೊಳ್ಳಿ. ಈಗ ರುಬ್ಕೊಂಡಿರೋದ್ನ ಒಂದ್ ದೊಡ್ಡ ಬಟ್ಟಲಿಗೆ ಹಾಕ್ಕೊಂಡು, ಮೊಸರು ಅಥವ ಮಜ್ಜಿಗೆ ಸೇರಿಸಿ ಮಿಕ್ಸ್ ಮಾಡಿ. ಆಮೇಲೆ ರುಚಿಗೆ ಬೇಕಿರೊವಷ್ಟು ಉಪ್ಪು ಹಾಕಿ ಇನ್ನೊಂದ್ಸಲ ಕೈಯ್ಯಾಡ್ಸಿ. ಕಡೇಲಿ ಒಗ್ಗರಣೆಗೆ ಹೇಳಿರೋದ್ನೆಲ್ಲ ಹಾಕಿ, ಘಮ್ಮಂತ ಒಗ್ಗರಣೆ ಕೊಟ್ರೆ, ಪಾಲಕ್ ತಂಬುಳಿ ತಯಾರಾಗತ್ತೆ. ಇದನ್ನ ಬಿಸಿ ಅನ್ನಕ್ಕೆ ಕಲಸ್ಕೊಂಡು ತಿನ್ಬೋದು.

9) ಬೆಳ್ಳುಳ್ಳಿ ತಂಬುಳಿ

ಇವಿಷ್ಟು ಬೇಕು:

ಬೆಳ್ಳುಳ್ಳಿ ಎಸಳುಗಳು - 6 ರಿಂದ 7, ಮೊಸರು - 1 ಬಟ್ಟಲು, ನೀರು - 2 ರಿಂದ 3 ಟೀ ಚಮಚ, , ಉಪ್ಪು ರುಚಿಗೆ.

ಒಗ್ಗರಣೆಗೆ: ತುಪ್ಪ - 1 ಟೀ ಚಮಚ, ಸಾಸಿವೆ - 1/2 ಟೀ ಚಮಚ, ಜೀರಿಗೆ - 1/2 ಟೀ ಚಮಚ, ಒಣಮೆಣಸಿನಕಾಯಿ - 2, ಕರಿಬೇವಿನಸೊಪ್ಪು- 3 ರಿಂದ 4, ಇಂಗು - ಚಿಟಿಕೆ.

ಹಿಂಗಿಂಗ್ ಮಾಡಿ:

ಮೊದ್ಲು, ಮೊಸರಿಗೆ ಸ್ವಲ್ಪ ನೀರು, ಉಪ್ಪು ಹಾಕಿ ಮಿಕ್ಸ್ ಮಾಡಿ. ಬೆಳ್ಳುಳ್ಳಿನ ಸಣ್ಣಕ್ಕೆ ಹೆಚ್ಕೊಳಿ. ಆಮೇಲೆ ಒಂದ್ ಚಿಕ್ ಬಾಂಡ್ಲೆನಲ್ಲಿ ತುಪ್ಪ ಬಿಸಿ ಮಾಡ್ಕೊಂಡು ಒಗ್ಗರಣೇಗೆ ಹೇಳಿರೋದ್ನೆಲ್ಲಾ ಹಾಕಿ ಹುರ್ಕೊಳಿ. ಜೊತೆಗೆ ಹೆಚ್ಕೊಂಡಿರೊ ಬೆಳ್ಳುಳ್ಳಿನೂ ಹಾಕಿ ಕಂದು ಬಣ್ಣ ಬರೋವರ್ಗೂ ಬಾಡಿಸಿ. ಕಡೇಗೆ ಈ ಬೆಳ್ಳುಳ್ಳಿ ಒಗ್ಗರಣೆನ ಮೊಸರಿಗೆ ಹಾಕಿ ಚೆನ್ನಾಗ್ ಮಿಕ್ಸ್ ಮಾಡಿದ್ರೆ ಬೆಳ್ಳುಳ್ಳಿ ತಂಬುಳಿ ಆಗೇಹೋಯ್ತು. ಇದನ್ನ ಬಿಸಿ ಬಿಸಿ ಅನ್ನದ ಜೊತೆ ತಿನ್ನಕ್ಕೆ ಚೆನ್ನಾಗಿರತ್ತೆ.

ಬಾಯಲ್ಲಿ ನೀರು ಬಂತಾ??? ಮಾಡಿ ಇಲ್ದೇ ಹೋದ್ರೆ ಮಾಡ್ಸ್ಕೊಳ್ಳಿ. :-)

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತು ಅಂತ ಅರ್ಥ ಆಗಕ್ಕೆ ಈ ಚಿಕ್ಕ ಕ್ವಿಜ಼್‌ ಸಹಾಯ ಮಾಡುತ್ತೆ

ರಾಮಾಪಹರಣ ಕೇಳಿದೀರಿ ತಾನೆ?

ರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಆದರೆ ರಾಮನ ಬಗ್ಗೆ ಎಲ್ಲವೂ ಗೊತ್ತಿದೆ ಅನ್ನೋರ ಸಂಖ್ಯೆ ಪ್ರಾಯಶಃ ಒಂದು. ಹೌದು, ಒಬ್ಬನಿಗೇ ಗೊತ್ತಿರೋದು ಎಲ್ಲಾ… ಅದು ವಾಲ್ಮೀಕಿಗೆ ಮಾತ್ರ! ಆದರೆ ಕಳಗಿರೋ ಕೆಲವು ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತಾ ಹೋಗಿ, ಆಗ ನಿಮಗೆ ರಾಮನ ಬಗ್ಗೆ ಎಷ್ಟು ಗೊತ್ತಿದೆ ಅಂತ ನಿಮಗೇ ಗೊತ್ತಾಗುತ್ತೆ.

1. ರಾಮನಿಗೆ ರಾಮ ಅಂತ ಹೆಸರು ಕೊಟ್ಟಿದ್ದು ಯಾರು?

2. ಯಾವುದೇ ಆಯುಧ ಇಲ್ಲದೆ ರಾಮನ್ನ ಯುದ್ಧದಲ್ಲಿ ಸೋಲಿಸಿದ ವ್ಯಕ್ತಿ ಯಾರು?

3. ರಾಮ ವನವಾಸಕ್ಕೆ ಹೋದಾಗ ಅವನಿಗೆ ಎಷ್ಟು ವರ್ಷ?

4. ತನ್ನ ಅವತಾರದ ಕೊನೆಯಲ್ಲಿ ರಾಮ ದೇಹವನ್ನ ಎಲ್ಲಿ ಮತ್ತೆ ಹೇಗೆ ಬಿಟ್ಟು ಹೋಗ್ತಾನೆ?

5. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸ ಮಾಡಿದ ವನ ಯಾವುದು?

6. ಸೀತಾಪಹರಣ ಕೇಳಿದೀರಿ, ಆದರೆ ರಾಮಾಪಹರಣ ಕೇಳಿದೀರಾ? ಅಪಹರಿಸಿದ ವ್ಯಕ್ತಿ ಯಾರು?

7. ರಾಮಸೇತು ಎಷ್ಟು ಉದ್ದ ಇತ್ತು? ಅದನ್ನ ಕಟ್ಟಕ್ಕೆ ಎಷ್ಟು ದಿನ ತೊಗೋತು?

8. ರಾವಣನ ಮಾಯಾವಿ ಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸಿದ್ದು ಯಾರು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: