ಈ 5 ವಿಷಯಗಳನ್ನ ತಿಳ್ಕೊಂಡಿದ್ರೆ ಜೀವನದಲ್ಲಿ ಯಾವುದೆ ಕಷ್ಟ, ಸವಾಲು ಬಂದ್ರೂ ಎದುರಿಸಿ ನಿಲ್ತೀರಿ

ನಂಗೇ ಯಾಕೆ ಹೀಗಾಗ್ತಿದೆ ದೇವ್ರೆ?

ಏಳು ಬೀಳು ಅನ್ನೋದು ಎಲ್ಲಾರ್ ಜೀವನ್ದಲ್ಲೂ ಇದ್ದೇ ಇರತ್ತೆ. ಆದ್ರೆ ನಾವೆಂಥ ಐನಾತಿಗಳು ಅಂದ್ರೆ, ಸುಖದಲ್ಲಿ ತೇಲಾಡ್ತಿರುವಾಗ, ಯಾಕಪ್ಪ ದೇವ್ರೆ ಇಷ್ಟು ಸುಖ ಕೊಟ್ಟೆ ಅಂತ ಕೇಳಲ್ಲ. ಅದೇ ಸಣ್ಣ ಪುಟ್ಟ ಅಡೆತಡೆ ಬಂದ್ರೂ ಎದುರ್ಸಕ್ಕೆ ಆಗ್ದೇ ಒದ್ದಾಡಿ, ನಂಗೇ ಯಾಕೆ ಹೀಗಾಗ್ತಿದೆ ದೇವ್ರೆ? ಪ್ರಪಂಚೆ ನಡಿತಿರದೇ ಹೀಗಾ? ಎಷ್ಟು ಕಷ್ಟ ಪಟ್ರೂ, ಆಸೆ ಪಟ್ಟಿದ್ ಒಂದೂ ನೆರವೇರ್ತಾ ಇಲ್ವಲ್ಲ? ಎಂಥೆಂಥೋರೋ ಎಷ್ಟು ನೆಮ್ಮದಿಯಾಗಿದಾರೆ, ಆದ್ರೆ ನಾನೇನ್ ಅಂಥಾ ಮಾಡಬಾರದ್ದು ಮಾಡಿದೆ ಅಂತ ಹೀಗೆ ಎಲ್ಲಾ ಕಿತ್ಕೊಂಡ್ ಹೋಗ್ತಿದೆ? ಅಂತ ಗೋಳಾಡ್ತಿವಿ. ಇದಕ್ಕೆಲ್ಲಾ ಮುಖ್ಯವಾದ್ ಕಾರಣ ಏನ್ ಗೊತ್ತಾ? ನಾವೆಲ್ಲಾ ಒಳ್ಳೆ ಕತ್ತೆಗಳ್ ಥರ ದುಡಿತಿವಿ, ಪ್ರತಿಫಲ ನಿರೀಕ್ಷೆ ಮಾಡ್ತಿವಿ. ಆದ್ರೆ ಸ್ಮಾರ್ಟಾಗಿ ಕೆಲ್ಸ ಮಾಡಿದ್ರೆ ಖಂಡಿತಾ ನಮ್ ನಿರೀಕ್ಷೆ ಸತ್ಯ ಆಗತ್ತೆ. ಯಾವಾಗ್ಲೂ ಪಾಸಿಟಿವಾಗಿ ಯೋಚ್ನೆ ಮಾಡಕ್ಕೆ, ನೀವಂದುಕೊಂಡ ಹಾಗೇ ಸಮಾಜದಲ್ಲಿ ನೀವು ಇರಕ್ಕೆ ಈ 5 ವಿಷಯಗಳನ್ನ ಅಂತೆಕಂತೆ ನಿಮ್ಗೋಸ್ಕರ ಇಲ್ಲಿ ಹೇಳ್ತಿದೆ. ಓದ್ನೋಡಿ ನಿಜ್ವಾಗ್ಲೂ ಉಪ್ಯೋಗ ಆಗತ್ತೆ.

1. ಪ್ರಪಂಚ ನಡಿಯಕ್ಕೆ ತನ್ನದೇ ಆದ ರೀತಿ ನೀತಿ ಇರತ್ತೆ. ಅದನ್ನ ಅರ್ಥ ಮಾಡ್ಕೊಬೇಕು

images.pond5.com

ಇಡೀ ಪ್ರಪಂಚದಲ್ಲಿ ಭಾವನೆಗಳಿಗೆ, ದೈಹಿಕವಾಗಿ, ನಿಸರ್ಗಕ್ಕೆ ತಕ್ಕಹಾಗೆ, ಆಧ್ಯಾತ್ಮನೂ ಸೇರಿ ಒಟ್ಟಾರೆ 12 ವಿಧಿ ವಿಧಾನಗಳಿವೆ. ಅವುಗಳ ಪೈಕಿ, ನಮ್ಗೆ ತುಂಬಾ ಚೆನ್ನಾಗಿ ಯಾವ್ದು ಕೆಲ್ಸ ಮಾಡತ್ತೆ ಅಂತ ಕಂಡು ಹಿಡ್ಕೊಬೇಕು. ಸಾಮಾನ್ಯವಾಗಿ ಎಲ್ರಿಗೂ ಫಲ ಕೊಡೋ ವಿಧಾನ ಅಂದ್ರೆ:

ಕ್ರಿಯೆ:

ಮೊದ್ಲು ನಮ್ಗೇನ್ ಬೇಕು ಅನ್ನೋದ್ನ ಅರ್ಥ ಮಾಡ್ಕೊಂಡು, ಆಮೇಲೆ ಅದನ್ನ ಪಡ್ಕೊಳೋ ಕ್ರಿಯೆಗೆ ಕೈ ಹಾಕ್ಬೇಕು. ಪರೀಕ್ಷೆನಲ್ಲಿ ಒಳ್ಳೇ ಮಾರ್ಕ್ಸ್ ಬರ್ಬೇಕು ಅನ್ನೋರು, ಗಮನ ಇಟ್ಟು ಓದ್ಬೇಕೇ ವಿನಃ, ಅವ್ರು ಆ ಮನೆ ಪಾಠಕ್ ಸೇರ್ಕೊಂಡ್ರು, ನಾನೂ ಸೇರ್ಕೊತೀನಿ, ಇವ್ರು ಇಲ್ಲಿ ಕೋಚಿಂಗ್ ಹೋಗ್ತಿದರೆ ನಾನೂ ಹೋಗ್ತಿನಿ ಅಂತ ಸುತ್ತಾಡದಲ್ಲ. ನಮಗೆ ಯಾವ್ದು ಹೊಂದತ್ತೋ ಅದರ ಬಗ್ಗೆ ಮಾತ್ರ ಗಮನ ಹರಿಸ್ಬೇಕು. ಹೋಗ್ಬೇಕಿರೋ ದಾರಿ ಬಿಟ್ಟು ಇನ್ಯಾವ್ದೋ ದಿಕ್ಕಲ್ಲಿ ಹೋದ್ರೆ, ಗುರಿ ಮುಟ್ಟಲ್ಲ.

ಕ್ರಿಯೆಯ ಕಾರಣ ಮತ್ತೆ ಪರಿಣಾಮ:

ಯಾವ್ದೂ ಆಕಸ್ಮಿಕ ಅಲ್ಲ. ಈ ಪ್ರಪಂಚದಲ್ಲಿ ನಡಿಯೋ ಎಲ್ಲಾ ಘಟನೆಗಳ್ಗೂ, ಕೆಲ್ಸಗಳ್ಗೂ ಕಡೆಗೆ ಆಲೋಚನೆಗಳಿಗೂ ಕಾರಣ, ಉದ್ದೇಶ ಇದ್ದೇ ಇರತ್ತೆ. ಅದು ನಮ್ಗೆ ಗೊತ್ತಿರಲ್ಲ ಅಷ್ಟೇ. ನಾವು ಏನೂ ಮಾಡ್ದೇ ಸುಮ್ನೆ ಇದ್ರೂ ಅದಕ್ಕೂ ಒಂದು ಉದ್ದೇಶ, ಪರಿಣಾಮ ಇದ್ದೇ ಇರತ್ತೆ. ಹಾಗಾಗಿ ಪ್ರಕೃತಿಯ ಈ ನಿಯಮಗಳಿಂದ ಯಾವತ್ತೂ ತಪ್ಪಿಸಿಕೊಳಕ್ಕೆ ಆಗಲ್ಲ ಅನ್ನೋದ್ ಅರ್ಥ ಮಾಡ್ಕೊಬೇಕು.

ಸೆಳೆತ:

ನಮ್ ಜೀವನ್ದಲ್ಲಿ ಬರೋ ಪ್ರತಿಯೊಂದು ಸಂದರ್ಭ, ವಸ್ತು, ವ್ಯಕ್ತಿ ನಮ್ ಋಣ ಅಂತ ಅಂದ್ಕೊತೀವಿ. ಆದ್ರೆ ಅದರ ಹಿಂದಿರೋ ಸತ್ಯ ತುಂಬಾ ಸರಳ. ಆ ವಸ್ತು ಅಥ್ವ ವ್ಯಕ್ತಿ, ಸಂದರ್ಭನ ನಮ್ ಸ್ವಭಾವದಿಂದ, ಇಚ್ಛೆಯಿಂದ ನಾವೇ ನಮ್ ಜೀವನಕ್ಕೆ ಹತ್ತಿರ ಮಾಡ್ಕೊಂಡಿರ್ತೀವಿ. ಅದರ ಬಗ್ಗೆ ಒಂದು ಸೆಳೆತ ಇರತ್ತೆ. ನಮ್ ಮಾತು ಕಥೆ, ನಡೆ ನುಡಿ ಇವೆಲ್ಲಾ ಎದುರಿಗೆ ಇರೋರ್ ಮೇಲೆ ಪ್ರಭಾವ ಬೀರಿ, ನಮಗೆ ಹತ್ತಿರ ಆಗೋಹಾಗ್ ಮಾಡತ್ತೆ. ಇನ್ನೊಂದ್ ರೀತಿನಲ್ಲಿ, ನಾವೂ ಅವರ ಪ್ರಭಾವಕ್ಕೆ ಒಳಗಾಗ್ತಿವಿ. ಒಟ್ಟಾರೆ ನಮ್ಮಲ್ಲಿರೋ ಒಳ್ಳೇ ಗುಣದಿಂದ, ಹಾವ ಭಾವದಿಂದ ಒಳ್ಳೇ ವಸ್ತು, ವ್ಯಕ್ತಿನ ಸೆಳ್ಕೊತೀವಿ. ನಮ್ಮಲ್ಲಿರೋ ಕೆಟ್ಟ ಗುಣಗಳಿಂದ ಕೆಟ್ಟ ಚಟ, ಸಂದರ್ಭಗಳನ್ನ ನಾವೇ ತಂದ್ಕೊತೀವಿ.

ಬದಲಾಯಿಸಿಕೊಳ್ಳೋ ಇಚ್ಛಾಶಕ್ತಿ:

ಪ್ರಕೃತಿಯ ಈ ನಿಯಮದ್ ಪ್ರಕಾರ, ಒಬ್ಬ ವ್ಯಕ್ತಿ, ತನ್ನ ಇಚ್ಛಾಶಕ್ತಿಯಿಂದ ತಾನಿರೋ ಸ್ಥಿತಿ, ಜೀವನದ ಗುಣಮಟ್ಟ ಇದನ್ನೆಲ್ಲಾ ಸಂಪೂರ್ಣವಾಗಿ ಬದಲಾಯಿಸ್ಕೊಬೋದು. ಆದ್ರೆ ಅದನ್ನ ಎಷ್ಟು ಗಂಭೀರ್ವಾಗಿ ತೊಗೊಂಡು ಅದಕ್ಕೆ ಸರಿಯಾಗಿ ಕೆಲ್ಸ ಮಾಡ್ತಿವಿ ಅನ್ನೋದ್ ಮುಖ್ಯ ಆಗತ್ತೆ. ಈ ವರ್ಷ ಪರೀಕ್ಷೆನಲ್ಲಿ ಇಶ್ಟು ಮಾರ್ಕ್ಸ್ ತೊಗೊಂಡೇ ತೊಗೊತಿನಿ ಅಂತ ಬರೀ ಬಾಯಿ ಮಾತಲ್ಲಿ ಹೇಳಿದ್ರೆ ಸಾಲಲ್ಲ. ಎಚ್ಚರದಲ್ಲಿ, ನಿದ್ದೇಲಿ, ಕನಸಲ್ಲಿ, ಊಟ ತಿಂಡಿನಲ್ಲಿ ಅದರದ್ದೇ ಧ್ಯಾನ ಇರ್ಬೇಕು. ಸಾಧಿಸಬೇಕು ಅಂದುಕೊಂಡಿರೋದ್ರ ಬಗ್ಗೆ ಸಿಕ್ಕಾಪಟ್ತೆ ಹಸಿವಿರಬೇಕು.

ಈ ನಾಲಕ್ಕು ಪ್ರಕೃತಿ ಅಥ್ವ ಸಮಾಜದ ನಿಯಮಗಳ್ನ ಜೀವನ್ದಲ್ಲಿ ಅಳವಡುಸ್ಕೊಂಡು ಪಾಲಿಸಿದ್ರೆ, ಖಂಡಿತಾ ಪಾಸಿಟಿವ್ ಬದಲಾವಣೆ ಕಾಣ್ಸತ್ತೆ.

2. ಗುರಿ ಇಟ್ಕೊಳದಕ್ಕೂ, ಗುರಿ ಮುಟ್ಟೋದಕ್ಕೂ ಇರೋ ವ್ಯತ್ಯಾಸ ಗೊತ್ತಿರ್ಬೇಕು

mediad.publicbroadcasting.net
ಈ ಎರಡೂ ಕೆಲ್ಸಕ್ಕೆ ಬೇರೆ ಬೇರೆ ಲೆವೆಲ್ ಶಕ್ತಿನ ಖರ್ಚು ಮಾಡ್ಬೇಕಾಗತ್ತೆ. ನಾವು ಒಂದ್ ಗುರಿ ಅಂತ ಇಟ್ಕೊಂಡ್ರೆ, ಹಾಗ್ ಮಾಡಿದ್ರೆ ಚೆನ್ನ, ಹೀಗ್ ಮಾಡಿದ್ರೆ ಸರಿ ಅಂತ ಯೋಚ್ನೆ ಮಾಡ್ತಿವೇ ಹೊರತು,ನಿಜ್ವಾಗ್ಲೂ ಅದನ್ನ ಹೇಗ್ ತಲುಪೋದು ಅನ್ನೋದ್ರ ಬಗ್ಗೆ ಅಂದಾಜು ಇರಲ್ಲ. ಯಾಕಂದ್ರೆ ಯಾವಾಗ ಗುರಿ ಮುಟ್ಟಬೇಕು? ಸಾಧಿಸಬೇಕು ಅಂತ ಪ್ಲ್ಯಾನ್ ಮಾಡಿರಲ್ಲ. ಸಣ್ಣ ಆಗ್ಬೇಕು ಅಂದ್ಕೊಂಡೋರು, ಬರೀ ಬಾಯಲ್ಲಿ ಹಾಗ್ ಹೇಳ್ಕೊಂಡ್ ಓಡಾಡಿದ್ರೆ ಏನೂ ಆಗಲ್ಲ. ಅದೇ ಗುರಿ ಸಾಧನೆ ಕಡೆ ಹೊರಟಾಗ, ಇದೇ ದಾರಿನಲ್ಲಿ ನಡಿಬೇಕು, ಹೀಗೇ ಮಾಡ್ಬೇಕು ಅಂತ ಕೆಲ್ಸ ಮಾಡೋ ರೀತಿ ಸ್ಪಷ್ಟವಾಗಿರತ್ತೆ. ಆಗ ಜಾಸ್ತಿ ಪರಿಶ್ರಮ ಹಾಕಬೇಕಾಗತ್ತೆ. ಸಣ್ಣ ಆಗಕ್ಕೆ ಇರೋ ದಾರಿಗಳ ಬಗ್ಗೆ ತಿಳ್ಕೊಂಡು ಅದನ್ನ ಅಪ್ಲೈ ಮಾಡ್ಕೊಂಡು ಕಾರ್ಯರೂಪಕ್ಕೆ ತಂದಾಗ, ಅಲ್ಲೇ ಅರ್ಧ ಸಮಯ ಉಳಿತಾಯ ಮಾಡ್ಬೊದು.

3. ಒಂದ್ ವಿಷ್ಯನ ಬರೀ ಮಾತಲ್ಲಿ ಅಲ್ಲ, ಮನಸ್ಪೂರ್ತಿಯಾಗೂ ನಂಬಬೇಕು

i.pinimg.com
ಒಂದ್ ಸಂಶೋಧನೆ ಪ್ರಕಾರ, ಯಾಕೆ ನಾವೆಲ್ಲಾ ಪಾಸಿಟಿವಾಗಿ ಗುರಿ ಮುಟ್ಟಕ್ಕೆ ಆಗಲ್ಲ, ಅಂದ್ಕೊಂಡಿದ್ದನ್ನ ಸಾಧಿಸಕ್ಕೆ ಆಗಲ್ಲ ಅಂದ್ರೆ, ಯಾರೋ ಇನ್ನೊಬ್ರುಗೆ ಒಂದ್ ವಿಷ್ಯ ಕ್ಲಿಕ್ ಆಯ್ತು ಅಂತ, ಅದನ್ನೇ ಅಳವಡಿಸಿಕೊಂಡು ಪ್ರಯೋಗ ಮಾಡಿ ನೋಡ್ತಿವಿ. ಆದ್ರೆ ಆ ವಿಷ್ಯನ ಬರೀ ಬುದ್ಧಿಯಿಂದ ಪ್ರಯೋಗ ಮಾಡಕ್ಕೆ ಒಪ್ಪಿರ್ತೀವಿ. ಏನಂತೆ ಮಾಡಿ ನೋಡಣ. ಯಶಸ್ಸು ಸಿಕ್ಕಿದ್ರೆ ಸರಿ. ಇಲ್ಲ ಅಂದ್ರೆ ಬೇರೆ ದಾರಿ ಹುಡುಕಿದ್ರೆ ಆಯ್ತು ಅಂತ. ಇದೊಂಥರಾ ಉಡಾಫೆ ಮನೋಭಾವ. ಆಗ ಯಾವ್ ಕೆಲ್ಸ ಕೈಗೂಡತ್ತೆ ಹೇಳಿ? ಮಾಡೋ ಕೆಲ್ಸದಲ್ಲಿ ಶ್ರದ್ಧೆ, ಆಸಕ್ತಿ ಎಷ್ಟು ಮುಖ್ಯನೋ, ಅಷ್ಟೇ ಮುಖ್ಯ ಆರಿಸಿಕೊಂಡ ದಾರಿನ ನಂಬೋದು. ನಮ್ಮ ಬುದ್ಧಿ ಯಾವ್ದನ್ನ ಒಪ್ಪತ್ತೋ, ಮನಸ್ಸು ಕೂಡ ಅದನ್ನ ಒಪ್ಪೋ ಹದಕ್ಕೆ ನಮ್ಮನ್ನ ತಯಾರಿ ಮಾಡ್ಕೊಂಡು, ವಿಶ್ವಾಸದಿಂದ ಮುಂದುವರಿಬೇಕು.

4. ಯಾವುದರಿಂದ ಸಂತೋಷ ಅನ್ನೋದಕ್ಕಿಂತ ದುಃಖದ ಮೂಲ ಹುಡುಕ್ಬೇಕು

http://img01.ibnlive.in/ibnlive/uploads/2016/07/abhinav-getty-875.jpg

ಸುಖ ದುಖಃ ಎರಡನ್ನೂ ಸಮನಾಗಿ ತೊಗೊಬೇಕು ಅನ್ನೋ ಮಾತು ನಿಜ. ಹಾಗೇನೇ ಜೀವನ್ದಲ್ಲಿ ಏನೇ ಅದ್ರೂ ನಗ್ನಗ್ತಾ ಮುನ್ನುಗ್ಬೇಕು ಅನ್ನೋ ಮಾತೂ ಇದೆ. ಅವೆಲ್ಲಾ ಓಕೆ. ಆದ್ರೆ ಪದೇ ಪದೇ ಒಂದೇ ಕಾರಣಕ್ಕೆ ದುಃಖ ಆಗ್ತಿದ್ರೆ ಅದನ್ನ ನಿವಾರುಸ್ಕೊಳೋದ್ ಒಳ್ಳೇದು. ಮೊದುಲ್ನೇ ಕೆಲ್ಸ ಸಿಕ್ತು, ಯಾಕೋ ಏನೋ ಆರು ತಿಂಗಳಲ್ಲೇ ಆ ಕೆಲ್ಸ ಹೋಯ್ತು. ಮತ್ತೆ ಸಿಕ್ಕಿದ್ ಎರಡ್ನೇ ಕೆಲ್ಸನೂ ವರ್ಷ ಕಳಿಯೋದ್ರಲ್ಲೇ ಹೋಯ್ತು. ಆಗ, ಮಂಕಾಗಿ, ಕೈ ಕಟ್ಟಿ ಕೂತ್ಬಿಡ್ಬಾರ್ದು, ಮತ್ತೆ ಒಳ್ಳೆ ಕೆಲ್ಸ ಹುಡುಕ್ಬೇಕು. ಆದ್ರೆ ಸಿಕ್ಕಿದ್ ಮೊದಲೆರಡು ಕೆಲ್ಸ ಯಾಕ್ ಹೋಯ್ತು ಅಂತ ಕಾರಣ ತಿಳ್ಕೊಂಡ್ರೆ ತುಂಬಾ ಉತ್ತಮ. ಕಷ್ಟ ಪಟ್ಟು ಸಂಪಾದಿಸೋ ಮೂರನೇ ಕೆಲ್ಸದಲ್ಲಿ ಆ ತಪ್ಪನ್ನ ಅಪ್ಪಿತಪ್ಪಿ ಕೂಡ ಮಾಡಲ್ಲ. ಹೊಸ ಕೆಲ್ಸ ಸಿಕ್ಕ ಸಂತೋಷಕ್ಕಿಂತ, ಕಳ್ಕೊಂಡ ಮೊದಲೆರಡು ಕೆಲ್ಸದ್ ಕಾರಣ ಯಾವಾಗ್ಲೂ ನೆನಪಲ್ಲಿ ಇರ್ಬೇಕು.

5. ಭವಿಷ್ಯದ್ ಸಂತೋಷದ್ ಜೊತೆ ಈ ಕ್ಷಣದ್ ಆನಂದನೂ ಅನುಭವಿಸ್ಬೇಕು


ಭವಿಷ್ಯದಲ್ಲಿ ಹಾಯಾಗಿರ್ಬೇಕು ಅಂತ ಹಗಲೂ ರಾತ್ರಿ ದುಡಿತೀವಿ. ಥೇಟ್ ರೋಬೋಟ್ ಥರ ಆಡ್ತಿವಿ. ಆದ್ರೆ ಈ ಕ್ಷಣ ನಾವೇನ್ ಕಳ್ಕೊಂಡಿದಿವಿ ಅಂತ ಗೊತ್ತಾಗೋದು, ಒಂದ್ ಹತ್ತಿಪ್ಪತ್ತು ವರ್ಷ ಬಿಟ್ಟು ತಿರುಗಿ ನೋಡ್ದಾಗ್ಲೇ. ನೆನುಸ್ಕೊಂಡು ಖುಷಿ ಪಡಕ್ಕೆ ಯಾವ್ದೇ ಸಿಹಿ ನೆನಪುಗಳಿರಲ್ಲ, ಮೊಮ್ಮಕ್ಕಳಿಗೆ ಹೇಳಕ್ಕೆ ಒಂದ್ ಸ್ವಾರಸ್ಯವಾದ್ ಅನುಭವ ಇರಲ್ಲ. ಅಷ್ಟೇ ಯಾಕೆ, ನಮ್ಮನ್ನ ನಾವು ಬ್ಯೂಸಿಯಾಗಿ ಇಟ್ಕೊಳಕ್ಕೆ ಒಂದೊಳ್ಳೆ ಹವ್ಯಾಸ ಇರಲ್ಲ. ಇರೋ ಸಣ್ಣ ಜೀವನದಲ್ಲಿ ಇಷ್ಟೊಂದು ಏಕತಾನತೆ ಬೇಕಾ? ದಿನಕ್ಕೆ ಎರಡು ಖುಷಿ ಕೊಡೋ ಕೆಲ್ಸ ಮಾಡುದ್ರೂ ಸಾಕು, ಎಷ್ಟೋ ಪಾಠ ಕಲಿತೀವಿ. ಜೊತೆಗೆ ವಾಸ್ತವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಬದುಕೋದ್ರಿಂದ, ಕೃತಜ್ಞತೆ ಮತ್ತೆ ಮೆಚ್ಚುಗೆ ಈ ಪದಗಳ ಮೌಲ್ಯ ಗೊತ್ತಾಗತ್ತೆ. ಗೆಳೆಯರ ಜೊತೆ ಬೆರಿಯೋದು, ಮಕ್ಕಳಿಗೆ ಸಮಯ ಕೊಡೋದ್ರಿಂದ ಮಾನವೀಯತೆ ಬೆಲೆ ತಿಳಿಯತ್ತೆ.

ಈ 5 ವಿಷ್ಯಗಳ್ ಬಗ್ಗೆ ಗಮನ ಹರಿಸಿದ್ರೆ ಸಾಕು ಕಣ್ರಿ. ಖಂಡಿತಾ ಸಮಾಜದಲ್ಲಿ ಒಂದೊಳ್ಳೆ ಗೌರವ ಪಡ್ಕೊಬೋದು. ಪ್ರಪಂಚದ್ ಜೊತೆ ಚೆನ್ನಾಗಿರೋ ಬಾಂಧವ್ಯ ಬೆಳುಸ್ಕೊಂಡು, ಗುರಿ ಸಾಧಿಸಿಕೊಳ್ಬೋದು. ಜೀವನ್ದಲ್ಲಿ ಎಷ್ಟೇ ಕಷ್ಟ, ಸವಾಲುಗಳು ಬಂದ್ರೂ ಪಾಸಿಟಿವಾಗಿ ಎದುರಿಸಿ ನಿಲ್ಬೋದು. ಜೊತೆಗೆ ಯಾಕೆ ಸಮಾಜ ನನ್ನನ್ನ ಇಷ್ಟು ದೂರತ್ತೆ? ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಂಡು, ಎಲ್ಲಾರ್ ಜೊತೆ ಸಂಬಂಧನ ಸುಧಾರುಸ್ಕೊಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಮನಸಲ್ಲಿ ಇಲ್ಲ ಅಂತಿದ್ರೂ ಹೊರಗೆ ಹೂಂ ಅಂತಿದ್ದೀರಾ? ಇಲ್ಲ ಅನ್ನೋದು ಹೇಗೆ ಅಂತ ಕಲೀರಿ

"ಅಯ್ಯೋ ಬೇಜಾರು ಮಾಡ್ಕೊಂಡು ಬಿಟ್ರೆ"

ನಮ್ಮಲ್ಲಿ ಸುಮಾರು ಜನ ಬೇರೇವ್ರಿಗೆ ಅಂತಾನೇ ಬದುಕ್ತಾರೆ. ಎಲ್ಲರಿಗೂ ಸಮಯ ಮಾಡ್ಕೊತಾರೆ, ಎಲ್ಲರ ಬೇಡಿಕೆ ಪೂರೈಸ್ತಾರೆ, ಮಿತಿ ಮೀರಿ ತಮಗೆ ಆಗದಿದ್ರೂ ಒಪ್ಕೊಂಡ ಕೆಲಸ ಮಾಡ್ತಾರೆ, ಕಡೆಗೆ ತಮಗೆ ಅಂತ ತಮ್ಮ ಜೀವನದಲ್ಲೇ ಸ್ವಲ್ಪ ಸಮಯ ಇಲ್ದೆ ಆಗತ್ತೆ. ಇದೆಲ್ಲದಕ್ಕೂ ಕಾರಣ ’ಇಲ್ಲ’ ಅನ್ನೋಕ್ಕೆ ಹಿಂಜರಿಕೆ.

ನೀವೂ ಹೀಗೇ ಮಾಡ್ತೀರಾ? ಹಾಗಾದ್ರೆ ನೀವು ನಿಮ್ಮ ಜೀವನದಲ್ಲಿ ನಿಜವಾಗಿ ಮಾಡಬೇಕು ಅನ್ಕೊಂಡಿದ್ದೇ ಬೇರೆ, ನೀವು ಮಾಡ್ತಿರೋದೇ ಬೇರೆ ಆಗಿರತ್ತೆ. ಇಡೀ ದಿನ ಪುರಸೊತ್ತಿಲ್ಲದೇ ದುಡಿದ್ರೂ ನಿಮ್ಮಲ್ಲಿ ತೃಪ್ತಿ ಕಮ್ಮಿ ಆಯಾಸ ಜಾಸ್ತಿ ಕಾಣ್ಸತ್ತೆ. ಇದಕ್ಕೆ ಪರಿಹಾರ ಏನಂದ್ರೆ, ’ಇಲ್ಲ’, ’ಆಗಲ್ಲ’ ಅಂತ ಹೇಳೋ ಅಭ್ಯಾಸ ಮಾಡ್ಕೊಳೋದು. ಆಗ ಬೇರೇವ್ರ ಕೆಲಸ ಮಾಡೋದು ಕಮ್ಮಿ ಆಗಿ ನಮಗೆ ಬೇಕಾದ ಕೆಲಸ ಮಾಡೋಕ್ಕೆ ಸಮಯ ಸಿಗತ್ತೆ. ತುಂಬಾ ಕೆಲಸಗಳನ್ನ ಮಾಡೋ ಬದಲು ಮುಖ್ಯವಾದ ಕೆಲಸಗಳನ್ನ ಖುಷಿಯಿಂದ ಮಾಡಬಹುದು. ಹೀಗೆ ಮಾಡೋದ್ರಿಂದ ನೀವೂ ಖುಷಿಯಾಗಿರ್ತೀರಿ, ಯಾರಿಗೂ ನಿಮ್ಮಿಂದ ನಿರಾಸೆ ಕೂಡ ಆಗಲ್ಲ.

ಯಶಸ್ವಿಯಾದೋರು ’ಇಲ್ಲ’ ಅನ್ನೋಕ್ಕೆ ಭಯ ಪಡಲ್ಲ

’ಇಲ್ಲ’ ಅನ್ನೋದ್ರಿಂದ ನಿಮ್ಮ ದೃಷ್ಟಿಕೋನ ಬದಲಾಗತ್ತೆ. ಏನು ಮಾಡ್ಬೋದು ಅನ್ನೋಕ್ಕಿಂತ ಏನು ಮಾಡಬೇಕು ಅಂತ ಯೋಚಿಸ್ತೀರಿ. ಜೀವನ ಬಂದ ಹಾಗೆ ತೊಗೊಳೋ ಬದಲು, ನಿಮಗೆ ಬೇಕಾದ ಜೀವನ ರೂಪಿಸ್ಕೊಳೋ ಕಡೆ ಗಮನ ಹರಿಸ್ತೀರಿ. ಓಪ್ರಾ ವಿನ್ಫ್ರೀ ಅವರೂ ಸಹ ಹೂಂ ಅಂದೂ ಅಂದೂ ಅನುಭವಿಸಿ, ಬಹಳ ತಡವಾಗಿ ತಮಗೇನು ಬೇಕು ಅನ್ನೋ ಕಡೆ ಗಮನ ಹರಿಸಿದ್ದಂತೆ. ವಾರೆನ್ ಬುಫೆ ಪ್ರಕಾರ ಯಶಸ್ವಿ ವ್ಯಕ್ತಿಗಳು ಹೂಂ ಅನ್ನೋಕ್ಕಿಂತ ಇಲ್ಲ ಅನ್ನೋದೇ ಹೆಚ್ಚಂತೆ.

ಯಾಕೆ ಹೂಂ ಅನ್ನೋ ಒತ್ತಡ?

i.kinja-img.com

ಚಿಕ್ಕಂದಿನಿಂದ ಸ್ಕೂಲ್ ಮುಗಿಸೋಕ್ಕೆ, ಕಾಲೇಜ್ ಅಲ್ಲಿ ಪಾಸಾಗೋಕ್ಕೆ, ಕೆಲಸ ಪಡೆಯೋಕ್ಕೆ, ಪ್ರೋಮೋಶನ್ ಪಡೆಯೋಕ್ಕೆ, ಸಂಬಂಧ ಬೆಳೆಸೋಕ್ಕೆ, ಸ್ನೇಹಿತರನ್ನ ಉಳಿಸಿಕೊಳ್ಳೋಕ್ಕೆ ಹೀಗೆ ಎಲ್ಲದಕ್ಕು ಹೂಂ ಅಂತ ಹೇಳ್ತಾನೇ ಬಂದಿದೀವಿ. ನಮ್ಮನ್ನ ಬೆಳ್ಸಿರೋದು ಹಾಗೇನೆ. ಬೇರೇವ್ರಿಗೆ ಸಹಾಯ ಮಾಡಬೇಕು, ಇಲ್ಲ ಅನ್ನೋದು ತಪ್ಪು, ಕೈಲಾಗೋದಕ್ಕಿಂತ ಜಾಸ್ತಿ ಮಾಡಿದ್ರೆ ಯಶಸ್ಸು ಸಿಗತ್ತೆ, ದೊಡ್ದವರಿಗೆ ಇಲ್ಲ ಅನ್ಬಾರ್ದು, ಇಂಥ ಮಾತುಗಳನ್ನೇ ಪಾಲಿಸ್ತಾ ಇದ್ದೀವಿ. ಬೇರೇವ್ರ ಮಾತು ಅಷ್ಟೇ ಅಲ್ಲ, ನಮ್ಮ ಮೇಲೆ ನಾವೇ ಒತ್ತಡ ಹೇರಿಕೊಳ್ತೀವಿ ಕೂಡ. ಬೇರೇವ್ರಿಗಿಂತ ಜಾಸ್ತಿ ಕೆಲಸ ಮಾಡಬೇಕು ಅನ್ನೋ ತುಡಿತ, ಎಲ್ಲರಿಗೂ ಸಾಕಷ್ಟು ಸಮಯ ಕೊಡಬೇಕು ಅನ್ನೋ ಆಸೆ ನಮ್ಮ ಬಾಯಿಗೆ ಬೀಗ ಹಾಕತ್ತೆ. ಒಟ್ನಲ್ಲಿ ಎಷ್ಟೇ ಮಾಡಿದ್ರೂ ಇನ್ನೂ ಮಾಡಬಹುದಿತ್ತು ಅಂತಾನೇ ಅನ್ಸತ್ತೆ.

'ಇಲ್ಲ' ಅನ್ನೋದು ಹೇಗೆ?

’ಇಲ್ಲ’ ಅನ್ನೋದು ಅಷ್ಟು ಸುಲಭ ಅಲ್ಲ. ಆದರೆ ಅದರಿಂದ ಆಗೋ ಲಾಭಗಳು ಬಹಳಷ್ಟು. ’ಇಲ್ಲ’ ಅನ್ನೋದು ರೂಢಿ ಮಾಡ್ಕೊಳೋಕ್ಕೆ ಈ ಸಲಹೆಗಳನ್ನ ಪಾಲಿಸಿ:

1. ಯಾರದ್ದೋ ಹಂಗಿಗೆ ಸಿಲುಕಿ ಹೂಂ ಅನ್ಬೇಡಿ

ಯಾರದ್ದೋ ಹಂಗಿಗೆ ಸಿಲುಕಿ, ’ಇಲ್ಲ ಅಂದ್ರೆ ಏನ್ ಅನ್ಕೊಳ್ತಾರೋ’ ಅಂತ ಹೂಂ ಅಂತಿದ್ದೀರಾ? ನಿಜವಾಗಿ ಅದು ನಿಮ್ಮ ಜವಾಬ್ದಾರಿ ಹೌದಾ ಅಲ್ವಾ ಅಂತ ಯೋಚಿಸಿ. ಅದಕ್ಕೂ ಮುಖ್ಯವಾದ, ನಿಮಗೆ ಸಂಬಂಧ ಪಟ್ಟ ಜವಾಬ್ದಾರಿಗಳು ಇದ್ಯಾ ಅಂತ ಯೋಚನೆ ಮಾಡಿ.

2. ವಿಷಯಗಳನ್ನ ತಿಳ್ಕೊಳೋ ಅವಕಾಶ ತಪ್ಪಿ ಹೋಗತ್ತೆ ಅನ್ನೋ ಭಯ ಬೇಡ

ಕೆಲಸ ಮಾಡಿಲ್ಲ ಅಂದ್ರೆ ವಿಷಯಗಳು ತಿಳಿಯಲ್ಲ, ಏಳಿಗೆ ಆಗಲ್ಲ ಅನ್ನೋ ಭಯ. ಕುಟುಂಬ, ಸ್ನೇಹಿತರಿಗೆ ಸಮಯ ಕೊಡದೆ ಇದ್ರೆ ಅವರ ಜೊತೆ ಮಜಾ ಮಾಡೋಕ್ಕಾಗಲ್ಲ ಅನ್ನೋ ಕೊರಗು ನಿಮ್ಮಲ್ಲಿದ್ರೆ ’ಇಲ್ಲ’ ಅನ್ನೋದು ಕಷ್ಟಾನೇ. ನಾವು ಮನಸ್ಸಿಂದ ಹೂಂ ಅಂತಿದೀವಾ ಅಥವಾ ಈ ಭಯದಿಂದಾನಾ ಅಂತ ಯೋಚನೆ ಮಾಡೋದು ಮುಖ್ಯ. ಇಂಥ ಭಯಗಳಿಂದ ಒಳ್ಳೇದೇನೂ ಆಗಲ್ಲ.

3. ಏನ್ ಅನ್ಕೊಳ್ತಾರೋ ಅನ್ನೋ ಅಳುಕು ಬೇಡ

’ಇಲ್ಲ’ ಅಂದ್ರೆ ಏನ್ ಅನ್ಕೊಳ್ತಾರೋ, ಎಷ್ಟು ಬೇಜಾರು ಮಾಡ್ಕೊಳ್ತಾರೋ ಅಂತ ಹೂಂ ಅನ್ನಬೇಡಿ. ಯಾರಿಗೋ ನಿರಾಸೆ ಆಗಬಾರದು ಅಂತೆ ನೀವೇ ನಿರಾಶರಾಗೋದು ಸರಿಯೇ? ’ಇಲ್ಲ’ ಅಂದ್ರೆ ನಿಮಗೆ ಅಷ್ಟು ಸಮಯ ಕೊಡೋಕ್ಕಾಗಲ್ಲ ಅನ್ಕೊತಾರೆ ಅಷ್ಟೆ.

4. ಕೇಳಿದ ತಕ್ಷಣ ಹೂಂ ಅನ್ಬೇಡಿ

sarumbear.com
ಆ ಸಮಯದಲ್ಲಿ ಸರಿ ಅನ್ಸಿ ಅಥವಾ ಒತ್ತಡದಲ್ಲಿ ಹೂಂ ಅನ್ನೋದರ ಬದಲು ಸ್ವಲ್ಪ ಯೋಚನೆ ಮಾಡಿ. ನಿಮ್ಮ ಕೈಯಲ್ಲಿ ಈ ಕೆಲಸ ಆಗತ್ತಾ? ಅದಕ್ಕೆ ಸಾಕಷ್ಟು ಸಮಯ ಇದ್ಯಾ? ಎಲ್ಲಾ ಯೋಚನೆ ಮಾಡಿ ಆಮೇಲೆ ನಿಮ್ಮ ಉತ್ತರ ಹೇಳಿ.

5. ’ಇಲ್ಲ’ ಅಂತ ವಿನಯದಿಂದ ಹೇಳಿ

’ಇಲ್ಲ’ ಅಂತ ಹೇಳೋ ನಿರ್ಧಾರ ಮಾಡಿದ್ರೆ ಅದನ್ನ ಹೇಗೆ ಹೇಳೋದು ಅಂತ ಕೂಡ ಸರಿಯಾಗಿ ಯೋಚಿಸಿ. ನಿಮ್ಮ ಬಳಿ ಸಮಯ ಇಲ್ಲ, ಅದಕ್ಕೆ ನೀವು ನಿರಾಕರಿಸ್ತಿದೀರ ಅನ್ನೋದು ಆ ವ್ಯಕ್ತಿಗೆ ಸ್ಪಷ್ಟವಾಗಿ ಅರ್ಥ ಆಗಬೇಕು. ಏನೂ ಹೇಳದೇ ಸುಮ್ಮನೆ ಇರೋದು ತಪ್ಪು. ಹಾಗಂತ ತುಂಬಾ ಉದ್ದ ಕಾರಣಗಳನ್ನ ಕೊಡೋದೂ ತಪ್ಪು. ಚಿಕ್ಕದಾಗಿ, ಚೊಕ್ಕವಾಗಿ ವಿನಯದಿಂದ ಮಾತಾಡಿ. ಮತ್ತೊಮ್ಮೆ ಸಮಯ ಇದ್ದಾಗ ಅವರ ಕೆಲಸ ಮಾಡೋಕ್ಕೆ ಸಿದ್ಧ ಅನ್ನಿ. ಆಗ ಮುಂಬರೋ ಅವಕಾಶಗಳು ತಪ್ಪಿ ಹೋಗಲ್ಲ.

6. ’ಇಲ್ಲ’ ಅನ್ನೋ ಬದಲು ’ಆದರೆ’ ಅಂತ ಹೇಳಿ ನೋಡಿ

hrinasia.com
ಒಂದೇ ಸಲ ’ಇಲ್ಲ’ ಅನ್ನೋ ಬದಲು. ’ಸರಿ, ಆದರೆ..’ ಅಂತ ನಿಮ್ಮ ಬೇಡಿಕೆ ಅವರ ಮುಂದೆ ಇಡಿ. “ಈಗಲೇ ಆಗಲ್ಲ ಆದರೆ ಮುಂದೆ ಮಾಡ್ತೀನಿ” ಅಂತ ಅಥವಾ “ಮಾಡ್ತೀನಿ, ಆದರೆ ಒಂದು ಭಾಗ ಮಾತ್ರ ಸಾಧ್ಯ” ಅಂತ ಹೇಳಿ.

’ಇಲ್ಲ’ ಅನ್ನೋದು ಒಂದು ಕಲೆ

’ಇಲ್ಲ’ ಅನ್ನೋ ಕಲೆ ಆರಾಮ ಅಥವಾ ಸುಲಭ ಅಲ್ಲ. ಅದನ್ನ ರೂಢಿ ಮಾಡ್ಕೊಳ್ಳೋಕ್ಕೆ ಸಮಯ ಮತ್ತು ಸಮಾಧಾನ ಬೇಕು. ಎಲ್ಲಾದಕ್ಕೂ ಹೂಂ ಅನ್ನೋ ಅಭ್ಯಾಸದೋರಿಗೆ ಇದು ಕಷ್ಟ.

ನಿಮ್ಮ ಸಮಯ ನಿಮ್ಮ ಸ್ವತ್ತು

ablueribbonresume.com
ನಿಮಗಿರೋ ಸಮಯದಲ್ಲಿ ಏನೇನು ಕೆಲಸ ಮಾಡಬೇಕು, ಯಾವ್ದಕ್ಕೆ ಎಷ್ಟು ಸಮಯ ಕೊಡ್ಬೇಕು ಎಲ್ಲ ನಿಮಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲ್ಲ.

ಬೇಡದ್ದಕ್ಕೆ ಇಲ್ಲ ಅಂದ್ರೆ ಬೇಕಾದ್ದು ಮಾಡಕ್ಕೆ ಸಮಯ ಸಿಗತ್ತೆ

ನಿಮ್ಮ ಅಮೂಲ್ಯವಾದ ಸಮಯವನ್ನ ಸರಿಯಾಗಿ ಬಳಸೋ ಅವಕಾಶ ನಿಮಗೆ ನೀವು ಕೊಟ್ಕೊಳಿ. ಇಲ್ಲ ಅನ್ನಿಸ್ದಾಗ ’ಇಲ್ಲ’ ಅನ್ನೋದ್ರಿಂದ ಅದು ಸಾಧ್ಯ.

ನಿಮ್ಮ ಒಳ್ಳೆಯತನ ದುರುಪಯೋಗ ಪಡೆಸ್ಕೊಳೋ ಸ್ನೇಹಿತರಿಗೆ, ಮಿತಿ ಮೀರಿ ಕೆಲಸ ಕೊಡೋ ಬಾಸ್, ಸಾಲ ವಾಪಸ್ ಮಾಡದೇ ಇರೋ ಸಂಬಂಧಿಗೆ ಈ ಸಲ ಇಲ್ಲ ಅನ್ನೋದನ್ನ ಮರೀಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: