ಐಸ್ ಕ್ಯೂಬ್ ಟ್ರೇ ಈ 11 ರೀತೀಲಿ ಉಪ್ಯೋಗಿಸ್ಬೋದು ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಅದೇ ಬಣ್ಣ, ಅದೇ ರುಚಿ ರೂಪ ಮಾತ್ರ ಬೇರೆ

ಫೋನು, ಫ್ರಿಡ್ಜು ಇವೆಲ್ಲಾ ಎಲ್ಲಾರ್ ಮನೇಲೂ ಸರ್ವೇ ಸಾಮಾನ್ಯ ಆಗ್ಬಿಟ್ಟಿದೆ. ಅದ್ರಲ್ಲೂ ಹೊಸ್ದಾಗಿ ಮನೇಗೆ ಫ್ರಿಡ್ಜ್ ತೊಗೊಂಡ್ ಬಂದಾಗ, ಒಂದಷ್ಟು ಅಟ್ಯಾಚ್ಮೆಂಟ್ ಜೊತೆ ಬೇರೆ ಬೇರೆ ಆಕಾರದ್ ಐಸ್ ಕ್ಯೂಬ್ ಟ್ರೇಗಳನ್ನೂ ಕೊಂಡ್ಕೊಂಡ್ ಬರ್ತಿವಿ. ಆದ್ರೆ ನೀರಿಂದ ಐಸ್ ತಯಾರ್ ಮಾಡೋದ್ರು ಜೊತೆಗೆ ಐಸ್ ಕ್ಯೂಬ್ ಟ್ರೇಗಳಿಂದ ಇನ್ನೂ ಏನೇನೆಲ್ಲಾ ಉಪ್ಯೋಗ ಇದೆ ಗೊತ್ತಾ? ಆ ಪುಟ್ಟ ಪುಟ್ಟ ಗೂಡಿಂದ ಎಷ್ಟೋ ಸಲ ನೆಂಟರ ಮುಂದೆ ನಮ್ ಮಾನ ಮರ್ಯಾದೆ ಉಳಿಯತ್ತೆ ಅಂದ್ರೆ ಆಶ್ಚರ್ಯ ಆಗತ್ತೆ ಅಲ್ವ? ಕೇಳಿದ್ರೆ, ಅಟ್ಟದ್ ಮೇಲ್ ಎತ್ತಿಟ್ಟಿರೋ ಅಷ್ಟೂ ಐಸ್ ಕ್ಯೂಬ್ ಟ್ರೇ ವಾಪಸ್ ನಿಮ್ ಫ್ರಿಡ್ಜ್ ಸೇರತ್ತೆ ಕಣ್ರಿ. ಅಂಥ ಒಂದಷ್ಟು ಉಪಾಯಗಳ್ನ ಅಂತೆಕಂತೆ ನಿಮ್ಗೋಸ್ಕರ ಇಲ್ಲಿ ಪಟ್ಟಿ ಮಾಡಿ ಕೊಡ್ತಿದೆ. ಓದಿ, ಪ್ರಯೋಗ ಮಾಡಿ.

1. ಮೊಸರು ಕೆಡದೇ ಇರೋಹಾಗೆ ಕಾಪಾಡಕ್ಕೆ...

ಮೂಲ

ಒಂದಷ್ಟು ಜನಕ್ಕೆ ಮೊಸರು ಹಾಗೇ ತಿನ್ನಕ್ಕೆ ಇಷ್ಟ. ಇನ್ನೊಂದಷ್ಟು ಜನಕ್ಕೆ ಮೊಸರನ್ನ ತಿನ್ನಕ್ಕೆ ಇಷ್ಟ. ನಾಲಿಗೆ ರುಚಿ ಸರಿ, ಆದ್ರೆ ಈ ಮೊಸರು ಹೊರಗೆ ಇಟ್ರೆ ಸ್ವಲ್ಪ ಹೊತ್ತಿಗೇ ಹಾಳಾಗಿಬಿಡತ್ತೆ. ಫ್ರಿಡ್ಜಲ್ಲಿ ಇಟ್ರೂ ಜಾಸ್ತಿ ದಿನ ಉಳಿಯಲ್ಲ. ಇದಕ್ಕೆ ಪರಿಹಾರ ಅಂದ್ರೆ, ಡೀಪ್ ಫ್ರೀಝ್ ಮಾಡೋದು. ಹೌದು. ಮೊಸರು ಡೀಪ್ ಫ್ರೀಝ್ ಮಾಡಿದಾಗ ತುಂಬಾ ದಿನ ಇಡ್ಬೋದು. ಐಸ್ ಕ್ಯೂಬ್ ಟ್ರೇನಲ್ಲಿ ಗಟ್ಟಿ ಮೊಸರು ಹಾಕಿ, ಹಾಗೇ ಇಟ್ಟು, ಬೇಕಾದಾಗ ಒಂದೊಂದೇ ಕ್ಯೂಬ್ ತೊಗೊಂಡು, ಮಾಮೂಲಿ ವಾತವರಣದ್ ತಾಪಮಾನಕ್ಕೆ ಬಂದಾಗ ತಿನ್ಬೋದು. ತಣ್ಣಗಿರೋ ಮೊಸರು ತಿನ್ಬೇಕು ಅನ್ಸಿದ್ರೆ, ಅದೇ ಮೊಸರಿನ ಕ್ಯೂಬ್ಗಳ್ನ ಮಿಕ್ಸಿ ಜಾರಲ್ಲಿ ಹಾಕಿ, ಒಂದ್ ರೌಂಡ್ ಡರ್ರ್ ಡರ್ರ್ ಅಂತ ಅನ್ಸಿದ್ರೆ ಸಾಕು. ಇನ್ನು ಹಾಲಿನ ಜೊತೆ ಕೂಡ ಕೆಲವ್ರು ಮೊಸರು ತಿಂತಾರೆ, ಅವ್ರಿಗೂ ಇದು ಉಪ್ಯೋಗಕ್ ಬರತ್ತೆ. ಅಷ್ಟೇ ಅಲ್ಲ ಕಣ್ರಿ. ಬ್ಯಾಚುಲರ್ಸ್ ಪಾಪ ಕಾಲು ಲೀಟರ್ ಮೊಸರು ತಂದ್ರೂ ಪೂರ್ತಿ ಖಾಲಿ ಮಾಡಕ್ಕೆ ಆಗ್ದೇ ದಂಡ ಆಗತ್ತೆ. ಅದನ್ನ ತಪ್ಪಿಸಕ್ಕೆ ಈ ಉಪಾಯ ಒಳ್ಳೇ ಉಳಿತಾಯ ಮಾಡತ್ತೆ.

2. ಧಿಡೀರ್ ಚಾಕೊಲೇಟ್ ಮಾಡಕ್ಕೆ...

ಮೂಲ

ಇದಂತೂ ತುಂಬಾ ಸಿಂಪಲ್. ಮೊದ್ಲು ಚಾಕೊಲೇಟ್ ಸಾಸ್ ರೆಡಿ ಮಾಡ್ಕೊಳಿ. ಐಸ್ ಟ್ರೇ ಒಳಗೆ ಸ್ಟ್ರಾಬೆರ್ರಿ ಹಣ್ಣನ್ನ ಚೂರ್ ಚೂರ್ ಮಾಡಿ ಹಾಕಿ, ಅದರ ಮೇಲೆ ಚಾಕೊಲೇಟ್ ಸಾಸ್ ಹಾಕಿ, ಅದನ್ನ ಫ್ರೀಝರ್ ನಲ್ಲಿ ಇಟ್ರೆ, ಸ್ವಲ್ಪ ಹೊತ್ತಲ್ಲೇ ರುಚಿರುಚಿಯಾಗಿರೋ ಧಿಡೀರ್ ಚಾಕೊಲೇಟ್ ತಯಾರಾಗತ್ತೆ. ಇಲ್ಲಿ ಅಂತೆಕಂತೆ ಹೇಳಿದೆ ಅಂತ ಬರೀ ಸ್ಟ್ರಾಬೆರಿ ಹಾಕ್ಕೊಬೇಕಿಲ್ಲ ಕಣ್ರಿ. ಚಾಕೊಲೇಟ್ ಸಾಸ್ ಮುಖ್ಯವಾಗ್ ಬೇಕು ಅಷ್ಟೆ. ಅದರ ಜೊತೆ ಕೊಬ್ಬರಿ ತುರಿ, ಡ್ರೈ ಫ್ರೂಟ್ಸ್, ಹೇಗೆ ನಿಮ್ಮಿಷ್ಟದ್ ಹಣ್ಣು, ಪದಾರ್ಥಗಳ್ನ ಸೇರ್ಸಿ. ಇತ್ತೀಚೆಗಂತೂ ಮಾರ್ಕೆಟ್ನಲ್ಲಿ ಚಾಕೊಲೇಟ್ ಮಾಡಕ್ಕೆ ಅಂತನೇ ಸಾಕಷ್ಟು ಡಿಸೈನ್ಸ್ ಇರೋ ಸಿಲಿಕಾನ್ ಟ್ರೇಗಳು ಸಿಗ್ತಿದೆ. ಒಳ್ಳೆ ಎಲಾಸ್ಟಿಕ್ ಥರ ಇರತ್ತೆ. ಫ್ರೀಝರ್ ನಲ್ಲಿ ಇಟ್ಟು ಚಾಕೊಲೇಟ್ ತಯಾರ್ ಆಗ್ತಿದ್ದಹಾಗೇ, ಪಟಕ್ ಪಟಕ್ ಅಂತ ಹೊರಗ್ ತೆಗೀಬೋದು. ಚಾಕೊಲೇಟ್ ಮಾಡೋದನ್ನ ಹವ್ಯಾಸ ಮಾಡ್ಕೊಬೇಕು ಅಂತಿರೋರ್ಗೆ ಇದು ಒಳ್ಳೆ ಉಪಾಯ ಕೂಡ.

3. ಮೊಟ್ಟೆಗಳು ಹಾಳಾಗದ ಹಾಗೆ ಕಾಪಾಡಕ್ಕೆ...

ಮೂಲ

ಈ ಪರಿಸ್ಥಿತಿ ಸುಮಾರ್ ಜನಕ್ಕೆ ಬಂದಿರತ್ತೆ. ಮನೆ ತುಂಬಾ ಜನ ಇದ್ದಾಗ, ನಂಗೊಂದ್ ಮೊಟ್ಟೆ, ನಂಗೊಂದ್ ಮೊಟ್ಟೆ ಅಂತ ಊಟದ್ ಟೇಬಲ್ ಮೇಲೆ ಕಿತ್ತಾಡಿರ್ತಾರೆ. ಅದೇ ಜನ ಕಮ್ಮಿಯಾದಾಗ, ತಂದಿರೋ ಮೊಟ್ಟೆಗಳ್ನ ಹೇಗ್ ಕಾಪಾಡದು? ಅದಕ್ಕೊಂದ್ ಐನಾತಿ ಐಡಿಯಾ ನಮ್ಮ್ ಹತ್ರ ಇದೆ. ಮೊಟ್ಟೆಗಳ್ನ ಒಡೆದು, ಒಳಗಿನ್ ಭಾಗನ ಐಸ್ ಕ್ಯೂಬ್ ಟ್ರೇನಲ್ಲಿ ಎಲ್ಲಾ ಕಂಪಾರ್ಟ್ಮೆಂಟ್ಗೂ ಹಾಕಿ, ಫ್ರೀಝರ್ನಲ್ಲಿ ಇಟ್ಬಿಡಿ. ಯಾವಾಗ್ ಮೊಟ್ಟೆ ಬಳಸಿ ಅಡುಗೆ ಮಾಡ್ತಿರೋ, ಆಗ ಈ ಮೊಟ್ಟೆ ಕ್ಯೂಬ್ನ ಉಪ್ಯೋಗುಸ್ಕೊಬೋದು. ಒಂದ್ ಆಮ್ಲೆಟ್ಟ್ ಅಂದ್ರೆ, ಅಂದಾಜು ಐದ್ ಕ್ಯೂಬ್. ಬರೀ ಮೊಟ್ಟೆಗಳ್ ಜಾಸ್ತಿ ಆಯ್ತು ಅಂತಲ್ಲ. ದಿನಗಟ್ಲೆನಲ್ಲೂ ಹೀಗ್ ಮಾಡಿ ಇಟ್ಕೊಂಡ್ರೆ, ಪ್ರತೀಸಲ ಮೊಟ್ಟೆ ಒಡಿಯುವಾಗ ಚಿಪ್ಪು ಚೂರ್ ಚೂರಾಗಿ ರಂಪ ಆಗೋದ್ ತಪ್ಪಿಸಿ, ಒಂದೇಸಲ ಆ ರಗಳೆ ಕಳೀಬೋದು.

4. ಕೋಲ್ಡ್ ಕಾಫಿ/ಟೀ ರುಚಿ ಉಳುಸ್ಕೊಳಕ್ಕೆ....

ಮೂಲ

ಸಾಮಾನ್ಯವಾಗಿ ತಣ್ಣಗಿರೋ ಕಾಫಿ ಅಥ್ವ ಟೀ ಮಾಡ್ದಾಗ, ಚಿಲ್ ಆಗ್ಬೇಕು ಅಂತ ಐಸ್ ಕ್ಯೂಬ್ ಹಾಕ್ತಿವಿ. ಆದ್ರೆ ಅದ್ರಿಂದ ಕಾಫಿ ಟೀ ರುಚಿ ಯಪ್ಪಾ, ಸ್ಟ್ರಾಂಗಾಗಿದ್ ಕಾಫಿ ಒಳ್ಳೆ ತಣ್ಣೀರ್ ಥರ ಆಗೋಗತ್ತೆ. ಪೂರ್ತ ತೆಳ್ಳಗಾಗೋಗತ್ತೆ. ಅದರಬದ್ಲು, ಮುಂದಿನ್ ಸಲದಿಂದ ಕೋಲ್ಡ್ ಕಾಫಿ ಟೀ ಮಾಡಿ, ಪಾತ್ರೆಲೇ ಮಿಕ್ಕಿರೋದನ್ನ, ರೀ ಪಾತ್ರೆಲಿ ಅಂತ ಹೇಳಿದ್ದು. ಲೋಟದಲ್ಲಿ, ಕಪ್ಪಲ್ಲಿ ಅಂತಲ್ಲ, ಓ ಎದ್ಬಿಟ್ರು ಯಾರೋ... ಹೂಂ ಉಳ್ದಿರೋದ್ನ ಐಸ್ ಟ್ರೇನಲ್ಲಿ ಹಾಕಿ ಫ್ರೀಝರ್ನಲ್ಲಿ ಇಡಿ. ಇನ್ಯಾವಾಗ್ಲೋ ಕೊಲ್ಡ್ ಕಾಫಿ ಟೀ ಕುಡಿಯುವಾಗ, ನೇರವಾಗಿ ಬೇಕಿರೋವಷ್ಟು ಕ್ಯೂಬ್ಗಳ್ನ ಲೋಟಕ್ಕೆ ಹಾಕ್ಕೊಳಿ. ಒಂದೆರಡ್ ನಿಮಿಷ ಬಿಟ್ರೆ ಕರಗತ್ತೆ, ತಣ್ಣ ತಣ್ಣಗ್ ಕೊಡ್ಕೊಳಿ. ಇಲ್ಲಿ ಇನ್ನೂ ಜಾಣ್ತನ ಉಪ್ಯೋಗುಸ್ಬೋದು. ಯಾವಾಗ್ಲಾದ್ರೂ ಬಿಸಿ ಕಾಫಿ ಟೀ ಮಾಡ್ದಾಗ ಉಳ್ಕೊಂಡ್ಬಿಟ್ರೆ, ಅದನ್ನೂ ವಾತಾವರಣದ್ ತಾಪಮಾನಕ್ಕೆ ಬಂದ್ಮೇಲೆ ಹೀಗೇ ಇಡ್ಬೋದು. ಒಂದ್ ಕಿವಿಮಾತು. ಯಾವತ್ತೂ ಫ್ರೀಝರಲ್ಲಿ ಬಿಸಿ ಪದಾರ್ಥ ಇಡ್ಬಾರ್ದು. ರೂಂ ಟೆಂಪರೇಚರ್ಗೆ ಬಂದಮೇಲೇನೇ ಇಡ್ಬೇಕು. ಇಲ್ಲ ಅಂದ್ರೆ ಫ್ರಿಡ್ಜು ಬೇಗ ಹಾಳಾಗೋಗತ್ತೆ.

5. ಬಣ್ಣ ಬಣ್ಣದ ಐಸ್ ಕ್ಯೂಬ್ ತಯಾರಿಸಕ್ಕೆ...

ಮೂಲ

ಬಣ್ಣ ಬಣ್ಣದ್ ಐಸ್ ಕ್ಯೂಬ್ ಅಂದಿದ್ ತಕ್ಷಣ ಯಾವ್ದೋ ಕಲರ್ ಹಾಕಿರೋ ನೀರಿಂದ ಐಸ್ ಅನ್ಕೋಬೇಡ್ರಿ. ಇಲ್ಲಿ ಹೇಳ್ತಿರೋದೂ ಉಳಿತಾಯ ಮತ್ತೆ ಕಲರ್ಫುಲ್ ಆಗಿ ಮಕ್ಕಳನ್ನ, ನೆಂಟರನ್ನ ಮೆಚ್ಚಿಸೋ ಉಪಾಯ. ಮಾಡಿರೋ ಹಣ್ಣಿನ್ ಜ್ಯೂಸ್ ಜಾಸ್ತಿ ಆಗಿ ಪಾತ್ರೆಲಿ ಮಿಕ್ಕೋಗಿದ್ರೆ, ಅದನ್ನ ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ ಇಡಿ. ಇನ್ಯಾವತ್ತೋ ಸ್ಮೋಥಿ ಮಾಡುವಾಗ ಈ ಕ್ಯೂಬ್ಗಳನ್ನ ಬಳಸ್ಕೊಬೋದು. ಅಥ್ವ ನೆಂತಋಉ ಬಂದಾಗ ಊಟದ್ ಟೇಬಲ್ ಮೇಲೆ ಇಟ್ಟಿರೋ ನೀರಿನ್ ಜಗ್ಗಿಗೆ ಒಂದಷ್ಟು ಕ್ಯೂಬ್ಸ್ ಹಾಕಿ, ನೀರಿನ ರುಚಿ ಇನ್ನೂ ಜಾಸ್ತಿ ಮಾಡ್ಬೋದು. ಬೇಸಿಗೆನಲ್ಲಿ, ಬಿಸಿಲಲ್ಲಿ ನಿಮ್ಗೇ ಆಗ್ಲಿ, ಬಂದೋರ್ಗೇ ಆಗ್ಲಿ ಧಿಡೀರ್ ಅಂತ ಕುಡಿಯಕ್ಕೆ ಕೊಡಕ್ಕೆ ಈ ಐಸ್ ಕ್ಯೂಬ್ಸ್ ತಯಾರಿದ್ರೆ ತುಂಬಾ ಸಹಾಯ ಆಗತ್ತೆ. ನಿಜ ಯಾವತ್ತೂ ಹಣ್ಣಿನ ರಸನ ತಾಜಾ ಆಗೇ ಕುಡಿಬೇಕು. ಆದ್ರೆ ಉಳಿದುಹೋದ್ರೆ ಮಾತ್ರ ಬಿಸಾಕಿ ದಂಡ ಮಾಡ್ದೇ ಈ ರೀತಿ ಬಳಸ್ಬೋದು.

6. ತಾಜ ಪುದಿನ ಮತ್ತೆ ನಿಂಬೆ ರಸ ತಯಾರಿಸಕ್ಕೆ...

ಮೂಲ

ಪುದಿನ ಎಲೆ ಆಗ್ಲೀ, ನಿಂಬೆಹಣ್ಣಾಗ್ಲಿ ಫ್ರಿಡ್ನಲ್ಲೂ ಜಾಸ್ತಿ ದಿನ ಇಡಕ್ಕಾಗಲ್ಲ. ಅದಕ್ಕೆ ಒಂದ್ ಪರಿಹಾರ ಅಂದ್ರೆ, ತಂದಿರೋದ್ನ ಉಪ್ಯೋಗ್ಸೋವಷ್ಟು ಉಪ್ಯೋಗ್ಸಿ. ಯಾವಾಗ ಇನ್ನು ಯಾವ್ ಅಡುಗೆ ತಿಂಡಿಗೂ ಹಾಕಕ್ಕೆ ಆಗಲ್ಲ ಅನ್ಸತ್ತೋ ಆಗ, ಐಸ್ ಟ್ರೇ ಒಳಗೆ ಪುದಿನ ಎಲೆಗಳು ಮತ್ತೆ ಸಣ್ಣಗೆ ಹೆಚ್ಚಿರೋ ನಿಂಬೆ ಹಣ್ಣನ್ನ ಹಾಕಿ, ನೀರ್ ತುಂಬಿ. ಇವುಗಳು ಫ್ರೀಝ್ ಆದಮೇಲೆ ನಿಂಬೆಹಣ್ಣಿನ್ ಶರಬತ್ತಿಗೆ, ಪುದಿನ ಕಷಯಕ್ಕೆ ಅಥ್ವ ಬೇಸಿಗೆನಲ್ಲಿ ಮಾಮೂಲಿ ನೀರು ಕುಡಿಯೋ ಬದ್ಲು ಲೋಟಕ್ಕೆ ತಣ್ಣಗಿರೋ ಒಂದೆರಡ್ ಕ್ಯೂಬ್ ಹಾಕ್ಕೊಂಡ್ ನೀರು ಸೇರ್ಸಿ ಕುಡುದ್ರೆ ಅದೆಷ್ಟು ಹಾಯಾಗಿರತ್ತೆ ಅಂತಿರ.

7. ಸೊಪ್ಪು, ಗಿಡಮೂಲಿಕೆಗಳ್ನ ಕಾಪಾಡಕ್ಕೆ...

ಮೂಲ

ನಿಮ್ಮನೇಲೇ ಮೆಂತ್ಯ, ಪುದಿನ ಹೀಗೆ ಮೂಲಿಕೆಗಳ್ನ ಬೆಳ್ದಿದ್ರೆ ಅಥ್ವ ಚೀಪಾಗ್ ಸಿಕ್ತಿದೆ ತಾಜಾ ಸೊಪ್ಪು ಅಂತ ರಾಶಿ ತಂದು ಗುಡ್ಡೆ ಹಾಕ್ಕೊಂಡು ಏನ್ ಮಾಡ್ಬೇಕು ಅಂತ ಗೊತ್ತಾಗ್ದೇ ಇದ್ರೆ, ಅಂತೆಕಂತೆ ಕೊಡ್ತಿದೆ ನೋಡಿ ನಿಮ್ ದುಡ್ಡು ಉಳಿಸೋ ಉಪಾಯ. ಸೊಪ್ಪನ್ನೆಲ್ಲಾ ಮಾಮೂಲಿ ಅಡುಗೆ ಮಾಡಕ್ಕೆ ಹೇಗೆ ಬಿಡಿಸ್ತಿರೋ ಹಾಗೇ ಬಿಡಿಸಿ, ಚೆನ್ನಾಗಿ ಮಣ್ಣು ಹೋಗೋವರ್ಗೂ ತೊಳೆದು, ಒದ್ದೆ ಇದ್ರೆ ಬಟ್ಟೆನಲ್ಲಿ ಒರೆಸಿ, ಐಸ್ ಟ್ರೇನಲ್ಲಿ ಹಾಕಿ. ಅವುಗಳ ಮೇಲಿ ಆಲೀವ್ ಎಣ್ಣೆ ಹಾಕಿ ಫ್ರೀಜರ್ನಲ್ಲಿ ಇಟ್ಟು ಕ್ಯೂಬ್ಸ್ ಮಾಡ್ಕೊಳಿ. ಬೇಕಾದಾಗೆಲ್ಲಾ ಈ ಎಣ್ಣೆನಲ್ಲಿ ಸೇರ್ಕೊಂಡಿರೋ ಸೊಪ್ಪು, ಮೂಲಿಕೆಗಳ್ನ ಆರಾಮಾಗಿ ಮಾಮೂಲಿ ಅಡುಗೆ ತಿಂಡಿಗೆ ಬಳಸ್ಬೋದು. ಆರೋಗ್ಯಕ್ಕೆ ಸೊಪ್ಪು, ನಾರಿನ ಪದಾರ್ಥಗಳು ಎಷ್ಟು ಮುಖ್ಯ ಅಂತ ಗೊತ್ತೇ ಇದೆ. ಅದ್ರಲ್ಲೂ ಈ ದುಬಾರಿ ದುನಿಯಾದಲ್ಲಿ, ಜಾಸ್ತಿ ಆಯ್ತು ಅಂತ ಕಸದ್ ಬುಟ್ಟೀಗ್ ಎಸಿಯೋದಾ? ಸಾಧ್ಯನೇ ಇಲ್ಲ.

8. ಲೋಳೆಸರ ಸಂರಕ್ಷಿಸಕ್ಕೆ...

ಮೂಲ

ಲೋಳೆಸರ ಅನ್ನೋದು ಚರ್ಮದ್ ಪಾಲಿಗೆ ಅಮೃತ ಅಂತಾನೇ ಹೇಳ್ಬೋದು. ಒಂದ್ ಸುಟ್ಟ ಗಾಯ ಆಗ್ಲಿ, ಚಳಿಗಾಲ್ದಲ್ಲಿ ಚರ್ಮ ಒಡಿಲಿ ಆಲೋವೆರಾ ಜೆಲ್ ಅಥ್ವ ಲೋಳೆಸರ ಹಚ್ಚಿದ್ರೆ ಸಾಕು ಬೇಗ ಗುಣ ಆಗತ್ತೆ. ಅಷ್ಟೇ ಅಲ್ಲ. ವಾರಕ್ಕೆ ಒಂದ್ ನಾಲಕ್ ಸಲ ಸುಮ್ನೆ ಮುಖಕ್ಕೆ ಹಚ್ಕೊಂಡ್ರೂ ಸಾಕು, ಮುಖ ಫಳ ಫಳ ಅಂತ ಹೊಳಿತಿರತ್ತೆ. ಅದೆಲ್ಲಾ ಸರಿ. ಆದ್ರೆ ಗಿಡದಿಂದ ಅಷ್ಟು ಕಷ್ಟ ಪಟ್ಟು ಕತ್ತರ್ಸಿರೋ ಲೋಳೆಸರನ, ಜಾಸ್ತಿ ಆಯ್ತು ಅಂತ ಹಾಗೇ ಬಿಟ್ಬಿಟ್ರೆ, ಸ್ವಲ್ಪ ಹೊತ್ತಿಗೇ ಹಾಳಾಗೋಗತ್ತೆ. ಅದರ ಬದ್ಲು ಆ ಜೆಲ್ ತೊಗೊಂಡು ಐಸ್ ಟ್ರೇನಲ್ಲಿ ಹಾಕಿ ಕ್ಯೂಬ್ಸ್ ಮಾಡಿ ಇಟ್ಕೊಳಿ. ಯಾವಾಗ್ಲಾದ್ರೂ ಬಿಸಿಲಲ್ಲಿ ಹೊರಗ್ ಹೋಗಿ ಬಂದ್ರೆ, ಜಾಸ್ತಿ ಹೊತ್ತು ಶಾಖ, ಒಲೆ ಮುಂದೆ ಇದ್ದು ಮುಖ ಮೈ ಕೈ ಕೆಂಪಾಗಿದ್ರೆ, ಸುಮ್ನೆ ಈ ತಣ್ಣಗಿರೋ ಲೋಳೆಸರದ್ ಕ್ಯೂಬ್ ತೊಗೊಂಡ್ ಉಜ್ಕೊಳಿ. ಅದ್ರೆಷ್ಟ್ ಹಿತವಾಗಿರತ್ತೆ ಅಂತ ಅದ್ರಲ್ಲಿ ಮಸಾಜ್ ಮಾಡ್ಕೊಂಡೇ ಗೊತ್ತಾಗ್ಬೇಕು. ಇಲ್ಲಿ ಇನ್ನೂ ಒಂದ್ ಪ್ರಯೋಗ ಅಂದ್ರೆ ಆಲೊವೆರ ಜೆಲ್ ಜೊತೆ ವಿಟಮಿನ್ ಎಣ್ಣೆ, ಜೊಜೊಬಾ ಎಣ್ಣೆ ಹೇಗೆ ಚರ್ಮಕ್ಕೆ ಉಪಯೋಗ ಅನ್ಸೋ ಬೇರೆ ಪದಾರ್ಥನೂ ಸೇರ್ಸಿ ಕ್ಯೂಬ್ಸ್ ತಯಾರ್ ಮಾಡ್ಕೊಬೋದು.

9. ಉಳ್ದಿರೋ ಚಟ್ನಿ, ಗೊಜ್ಜು ಕೆಡದೇ ಇರೋಹಾಗೆ ಕಾಪಾಡಕ್ಕೆ...

ಮೂಲ

ಗೃಹಿಣಿಯರ್ಗಂತೂ ದೊಡ್ಡ ತಲೆನೋವಪ್ಪ ಈ ವಿಷ್ಯ. ಎಷ್ಟ್ ಕೇರ್ ತೊಗೊಂಡ್ ಅಳತೆ ಮಾಡಿ ಅಡುಗೆ ಮಾಡಿದ್ರೂ ಚೂರ್ ಮಿಕ್ಕೋಗತ್ತೆ. ಅದನ್ನ ಅತ್ಲಾಗ್ ಎಸಿಯಕ್ಕೂ ಮನಸ್ಸು ಬರಲ್ಲ. ಇತ್ಲಾಗ್ ಯಾರೂ ತಿನ್ನಲ್ಲ. ಅಂಥಾ ಸಂದರ್ಭದಲ್ಲಿ ಉಳ್ದಿರೋ ಚಟ್ನಿ, ಗೊಜ್ಜು, ತೊಕ್ಕು ಇಂಥದ್ದನ್ನೆಲ್ಲಾ ಐಸ್ ಟ್ರೇನಲ್ಲಿ ಹಾಕಿ ಕ್ಯೂಬ್ಸ್ ಮಾಡಿ. ಮತ್ತೆ ಮಾರನೇ ದಿನಕ್ಕೋ, ಎರಡು ದಿನ ಬಿಟ್ಟೋ ದೋಸೆ ರೊಟ್ಟಿ ಮಾಡಿದಾಗ ಉಪ್ಯೋಗುಸ್ಬೋದು. ಆದ್ರೆ ಒಂದ್ ಕಿವಿಮಾತು ಕಣ್ರಿ. ಯಾವ್ದೇ ಕಾರಣಕ್ಕು ಹಸಿ ಕಾಯಿ ತುರಿ ಹಾಕಿರೋ ಪದಾರ್ಥಗಳ್ನ ಈ ಥರ ಮಾಡ್ಬೇಡಿ. ಉಳಿಯಲ್ಲ. ಒಣ ಕೊಬ್ಬರಿ ತುರಿ, ಅದ್ರಲ್ಲೂ ಸ್ವಲ್ಪ ಬಿಸಿ ಮಾಡಿ ಬಾಡಿಸಿ ಅಡುಗೆಗೆ ಹಾಕಿದ್ರೆ, ಅದನ್ನ ಫ್ರೀಝ್ ಮಾಡಬಹುದು. ನಾವೇನೋ ಐಡಿಯ ಕೊಟ್ವಿ ಅಂತ ಇದನ್ನ ಪದೇ ಪದೇ ಮಾಡೋದೂ ತಪ್ಪು. ಇದು ಆರೋಗ್ಯಕ್ಕೆ ಅಷ್ಟು ಒಳ್ಳೇದಲ್ಲ. ತೀರ ಯಾವತ್ತಾದ್ರೂ ಅಡುಗೆ ಮಾಡಕ್ಕೆ ಮನಸ್ಸಿಲ್ಲ, ಟೈಂ ಇಲ್ಲ ಅಂದಾಗ್ ಮಾತ್ರ ಈ ಉಪಾಯ ಬಳಸಿ.

ಫ್ರಿಡ್ಜ್ ಆಚೆಗೂ ಐಸ್ ಟ್ರೇ ಉಪ್ಯೋಗ ಪಡ್ಕೊಬೋದು

10. ಸಣ್ಣ ಪುಟ್ಟ ವಸ್ತುಗಳ್ನ ನೀಟಾಗಿ ಇಟ್ಕೊಳಕ್ಕೆ...

ಮೂಲ

ಐಸ್ ಟ್ರೇ ಸಿಕ್ಕಾಪಟ್ಟೆ ಹಳೇದಾಗೋಗಿದೆ. ಅದನ್ನ ಆಹಾರ ಪದಾರ್ಥಕ್ಕೆ ಬಳಸಕ್ಕೆ ಆಗಲ್ಲ. ಕನಿಷ್ಟ ನೀರೂ ಇಡಕ್ಕಾಗಲ್ಲ ಅಷ್ಟು ಹಾಳಾಗಿದೆ ಅನ್ನೋದಾದ್ರೆ. ಅದನ್ನ ಎಸಿಬೇಕಿಲ್ಲ. ನೀವೇನಾದ್ರೂ ಕರಕುಶಲ ವಸ್ತುಗಳ್ನ ಮಾಡೋರಾಗಿದ್ರೆ, ಸಣ್ಣ ಸಣ್ಣ ಮಣಿ, ಗುಂಡಿ, ಹರಳು ಇವನ್ನೆಲ್ಲ ಇಟ್ಕೊಳಕ್ಕೆ ಐಸ್ ಟ್ರೇಗಿಂತ ಒಳ್ಳೆ ವಸ್ತು ಬೇಡ. ಪುಟ್ಟ ಪುಟ್ಟ ಐಸ್ ಕ್ಯೂಬ್ ಕಂಪಾರ್ಟ್ಮೆಂಟಲ್ಲಿ ಈ ಥರದ್ ವಸ್ತುಗಳು ಮಿಕ್ಸ್ ಆಗದೇ ನೀಟಾಗಿ ಇರತ್ತೆ. ಅಷ್ಟೇ ಅಲ್ಲ. ಟ್ರೇ ದೊಡ್ಡದಾಗಿದ್ರೆ ಅದ್ರಲ್ಲಿ ಹೆಣ್ಣು ಮಕ್ಕಳ ಆರ್ಟಿಫಿಶಿಯಲ್ ಕಿವಿ ಓಲೆಗಳು, ಉಂಗುರಗಳು, ಸರ ಇಂತವೆಲ್ಲಾ ಇಟ್ಕೊಬೋದು. ಸರಿಯಾದ್ ಸಮಯಕ್ಕೆ ಕೈಯ್ಯಿಗ್ ಸಿಗತ್ತೆ.

11. ಮಕ್ಕಳಿಗೆ ಗಣಿತ ಹೇಳ್ಕೊಡಕ್ಕೆ...

ಮೂಲ

ಗಣಿತ ಅಂದ್ರೆನೇ ಮಾರು ದೂರ ಓಡೋ ಮಕ್ಕಳಿಗೆ ಐಸ್ ಟ್ರೇಗಳ್ನ ಇಟ್ಕೊಂಡು ಆಟದ್ ಥರನೇ ಕೂಡದು, ಕಳಿಯೋದು, ಭಾಗಿಸೋದು, ಗುಣಿಸೋದು ಎಲ್ಲಾ ಹೇಳ್ಕೊಡ್ಬೋದು. ಉದಾಹರಣೆಗೆ ನಿಮ್ ಐಸ್ ಟ್ರೇನಲ್ಲಿ 6 ಕಂಪಾರ್ಟ್ಮೆಂಟಿದೆ ಅಂತ ಇಟ್ಕೊಳಣ. ಈಗ ಮಗುಗೆ ಒಂದೊಂದ್ ಕಂಪಾರ್ಟ್ಮೆಂಟಿಗೂ 3 ಗುಂಡಿಗಳ್ನ ಹಾಕಕ್ಕೆ ಹೇಳಿ. ಆಮೇಲೆ ಒಟ್ಟು ಎಷ್ಟು ಗುಂಡಿ ಹಾಕಿದೆ ಅಂತ ಲೆಕ್ಕ ಹಾಕಕ್ಕೆ, 6*3 ಅಂತ ಮಾಡ್ಸಿದ್ರೆ ಚೆನ್ನಾಗಿ ಅರ್ಥ ಮಾಡ್ಕೊಂಡು ಬೇಗ ಕಲಿತಾರೆ. ಹೀಗೆ ಇಂಥ ಅದೆಷ್ಟೋ ಉಪಾಯಗಳ್ನ ಮಕ್ಕಳ ಜೊತೆ ಆಟ ಆಡ್ತಾ ಆಡ್ತಾ ಕಲಿಬೋದು. ಬಾಕಿ ಸಮಯದಲ್ಲಿ ಸ್ಕೂಲಲ್ಲಿ ಹೇಗ್ ಹೇಳ್ಕೊಟ್ಟಿರ್ತಾರೋ ಹಾಗೇ ಲೆಕ್ಕ ಮಾಡಿಸ್ಬೋದು. ಆದ್ರೆ ಜೋರಾಗ್ ಮಳೆ ಬಂದ ದಿನ, ಅವ್ರ ಗೆಳೆಯರು ಯಾರೂ ಆಟಕ್ಕೆ ಸಿಗದೇ ಇರೋ ದಿನ ಹಾಗೇನೇ ರಜದ್ ದಿನ ಪುಸ್ತಕ ಮುಟ್ಟಲ್ಲ ಅಂತ ಹಠ ಮಾಡೋ ಮಕ್ಕಳ ತಂದೆತಾಯಿಗೆ ಇದು ಒಳ್ಳೆ ಉಪಾಯ.

ಐಸ್ ಟ್ರೇ ಇಂದ ಇಷ್ಟೆಲ್ಲಾ ಉಪ್ಯೋಗ ಇದೆ ಅಂತ ಗೊತ್ತಾದ್ ಮೇಲೆ ಯಾಕ್ ತಡ. ಹೇಗೂ ತುಂಬಾ ಕಮ್ಮಿ ಬೆಲೆಗೇ ಸಿಗತ್ತೆ. ಜೊತೆಗೆ ವಿಧ ವಿಧವಾದ್ ಆಕಾರ, ಬಣ್ಣಗಳಲ್ಲೂ ಸಿಗತ್ತೆ. ಅವಶ್ಯಕತೆ ಇರೋವಂಥದ್ದನ್ನ ತೊಗೊಂಡ್ ಬಂದು ಎಷ್ಟು ಸಾಧ್ಯ ಆಗತ್ತೋ ಅಷ್ಟೂ ಮಜ ಮಾಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೀವು ಯಾವ ತಿಂಗಳಲ್ಲಿ ಹುಟ್ಟಿದೀರಿ ಅನ್ನೋದ್ರಿಂದ ನಿಮ್ಮ ಸ್ವಭಾವದ ಬಗ್ಗೆ ಎಷ್ಟು ಗೊತ್ತಾಗುತ್ತೆ ನೋಡಿ

ಸ್ವಭಾವ ಹಿಂಗೆ ಅಂದ ಮಾತ್ರಕ್ಕೆ ನೀವು ಬದಲಾಯಿಸಿಕೊಳಕ್ಕೆ ಆಗಲ್ಲ ಅಂತ ಅಲ್ಲ

ದಿನಾ ನ್ಯೂಸ್ ಪೇಪರ್ ಮನೆಗ್ ಬಂದ್ ತಕ್ಷಣ, ದಿನ ಭವಿಷ್ಯ, ವಾರಭವಿಷ್ಯ ನೋಡೋರ್ ಪೈಕಿ ನೀವೂನಾ? ಇವತ್ತಿನ್ ದಿನ ಹೇಗಿರತ್ತಪ್ಪ? ಏನೇನ್ ಗಂಡಾಂತರ ಕಾದಿದ್ಯೋ ಏನೋ ಅಂತ ಸ್ವಲ್ಪ ಕುತೂಹಲ ಸ್ವಲ್ಪ ಆತಂಕದಿಂದ ಓದ್ತೀರ? ಬರೀ ರಾಶಿ ಮಾತ್ರ ಅಲ್ಲ ಕಣ್ರಿ, ನೀವ್ ಯಾವ್ ತಿಂಗಳಲ್ಲಿ ಹುಟ್ಟಿದಿರ ಅನ್ನೋದ್ರು ಮೇಲೂ ನಿಮ್ ವ್ಯಕ್ತಿತ್ವ, ಗುಣ ಇನ್ನೂ ಸಾಕಷ್ಟು ವಿಷ್ಯಗಳ್ನ ಹೇಳ್ಬೋದು.

ನಿಜವಾಗ್ಲೂ ಗೊತ್ತಾ, ಹುಟ್ಟಿದ್ ತಿಂಗಳ ಆಧಾರ ಇಟ್ಕೊಂಡು ನಿಮ್ ಒಟ್ಟಾರೆ ನಡವಳಿಕೆ, ಸ್ವಭಾವ, ಬೇರೆಯೋರು ನಿಮ್ಮನ್ನ ಹೇಗ್ ನೋಡ್ತಾರೆ, ಜೀವನದ್ ಬಗ್ಗೆ ನಿಮ್ಗಿರೋ ಆಲೋಚನೆ, ಭಾವನೆಗಳು ಇದೆಲ್ಲಾನೂ ಹೀಗ್ ಹೀಗೆ ಅಂತ ಹೇಳ್ಬೋದು. ಹೇಗಪ್ಪ ಇದು ಅಂತಿರ? ನಿಮ್ ಗುಣ ಲಕ್ಷಣಗಳು, ನೀವ್ ಹುಟ್ಟಿದ್ ತಿಂಗಳಲ್ಲಿ, ನಕ್ಷತ್ರಗಳು ಯಾವ್ ಯಾವ್ ಸ್ಥಾನ್ದಲ್ಲಿ ಇದ್ವು, ಯಾವ್ ಆಕಾರ್ದಲ್ಲಿ ಇದ್ವು ಅಂತ ಲೆಕ್ಕ ಹಾಕಿ ಹೇಳ್ತಾರಂತೆ.

ಯಾವ್ ತಿಂಗಳಲ್ಲಿ ಹುಟ್ಟಿದ್ರೆ, ಎಂಥಾ ಸ್ವಭಾವ, ವ್ಯಕ್ತಿತ್ವ ಇರತ್ತೆ ಅಂತ ಇಲ್ಲಿ ಕೊಟ್ಟಿದ್ದೀವಿ. ಓದಿ...ನಿಮ್ಮ ಸ್ವಭಾವಕ್ಕೆ ತಾಳೆ ಮಾಡಿ ನಮಗೂ ಹೇಳಿ...

ಜನವರೀಲಿ ಹುಟ್ಟಿರೋರು

ಕೆಲ್ಸದ್ ವಿಷ್ಯದಲ್ಲಿ ತುಂಬಾನೇ ಕಟ್ಟುನಿಟ್ಟಾಗಿರ್ತಾರೆ ಹಾಗೆನೇ ತಮ್ಮ ಅಭಿಪ್ರಾಯವನ್ನ ನಾಲಕ್ ಜನರ ಮುಂದೆ ಹೇಳಕ್ಕೆ ಯಾವ್ ಮುಲಾಜೂ ನೋಡಲ್ಲ. ಇವ್ರಲ್ಲಿ ಹಠಮಾರಿತನ ಮತ್ತೆ ಮೊಂಡುತನ ಸ್ವಲ್ಪ ಜಾಸ್ತಿ ಇರತ್ತೆ. ಜೊತೆಗೆ, ಯಾರಾದ್ರು ಹೀಗಲ್ಲ ಹಾಗೆ ಅಂತ ಹೇಳಕ್ ಬಂದ್ರೆ ಅದನ್ನ ಒಪ್ಕೊಳೋದು ಇವ್ರ ಜಾಯಮಾನ್ದಲ್ಲೇ ಇಲ್ಲ ಕಣ್ರಿ.

ಜನವರೀಲಿ ಹುಟ್ದೋರು ಒಳ್ಳೆ ಲೀಡರ್ ಆಗೋದ್ರಲ್ಲಿ ಅನುಮಾನಾನೇ ಇಲ್ಲ. ಇವ್ರಲ್ಲಿರೋ ಛಲ ಸದಾ ಯಶಸ್ಸಿನ ಕಡೆಗೇ ಕರ್ಕೊಂಡ್ ಹೋಗತ್ತೆ ಅನ್ನೋದ್ ನಿಜ. ಆದ್ರೆ ಜೊತೆಲಿರೋರ್ ಮಾತು ಕೇಳೋದ್ ಕಮ್ಮಿ.

ಇವ್ರಲ್ಲಿರೊ ಇನ್ನೊಂದು ಅದ್ಭುತವಾದ ಗುಣ ಅಂದ್ರೆ...ತಮ್ಗೆ ಗೊತ್ತಿರೋ ವಿಷ್ಯಗಳ್ನ ಇನ್ನೊಬ್ರುಗೆ ಅರ್ಥವಾಗೋ ಹಾಗೆ ಹೇಳ್ಕೊಡ್ತಾರೆ. ಅಷ್ಟೇ ಅಲ್ಲ, ಕಲಿಯೋರೂ ಕೂಡ ತುಂಬಾ ಸುಲಭವಾಗಿ, ಆಸಕ್ತಿಯಿಂದ ಇವರು ಹೇಳೋದನ್ನ ಕೇಳ್ತಾರೆ. ಇಷ್ಟಪಟ್ಟು ಕಲಿತಾರೆ.

ಫೆಬ್ರುವರಿ

ಫೆಬ್ರುವರಿ ತಿಂಗಳಲ್ಲಿ ಹುಟ್ಟಿರೋರ್ಗೆ ಕಲಾರೇಖೆ ಉದ್ದವಾಗಿರತ್ತೆ ಅನ್ಸತ್ತೆ ಕಣ್ರಿ. ಸಖತ್ ಕ್ರಿಯೇಟಿವ್ ಆಗಿರ್ತಾರೆ ಮತ್ತೆ ಹೊಸ ಹೊಸ ಕೆಲ್ಸ ಮಾಡಕ್ಕೆ ಇಷ್ಟ ಪಡ್ತಾರೆ. ಇವ್ರಿಗೆ ಬುದ್ಧಿವಂತರ ಜೊತೆ ಚರ್ಚೆ ಮಾಡೋದು, ವಿಚಾರಗಳ್ನ ಹಂಚ್ಕೊಳದು ಅಂದ್ರೆ ಉತ್ಸಾಹ ಇರತ್ತೆ. ಅದೇ ಬುದ್ಧಿವಂತಿಕೇಲಿ ತಮಗಿಂತ ಚೂರು ಕಮ್ಮಿ ಮಟ್ಟದಲ್ಲಿರೋರ್ನ ಹತ್ರನೂ ಸೇರ್ಸಲ್ಲ.

ಇವ್ರನ್ನ ಜನ ಫ್ರೀಬರ್ಡ್ ಅಂತ ಕರೀತಾರೆ. ಯಾಕಂದ್ರೆ ಸಮಾಜದ ಕಟ್ಟುಪಾಡುಗಳು, ರೂಲ್ಸು ಇದೆಲ್ಲ ಇವ್ರಿಗೆ ಆಗ್ಬರಲ್ಲ. ಯಾವಾಗ್ಲೂ ಬಿಂದಾಸಾಗಿ ತಮಗೆ ಇಷ್ಟ ಬಂದಂಗೆ ಇರಕ್ಕೆ ನೋಡ್ತಾರೆ. ಸಮಯ ಸಿಕ್ಕಾಗೆಲ್ಲಾ ವಿಮಾನ, ರೈಲು ಹತ್ಕೊಂಡು ಊರೂರ್ ಸುತ್ತೋದು ಅಂದ್ರೆ ಭಾರಿ ಪ್ರೀತಿ. ಸಾಹಸ ಮಾಡೋದು ಮತ್ತೆ ಸುತ್ತಾಮುತ್ತ ಇರೋ ಜಾಗಗಳು, ವಿಷ್ಯಗಳ್ನ ಇನ್ನೂ ಹೆಚ್ಚು ಹೆಚ್ಚು ತಿಳ್ಕೊಳಕ್ಕೆ ಕಾಯ್ತಾನೇ ಇರ್ತಾರೆ. ಇದೇ ಇವ್ರನ್ನ ಲವಲವಿಕೆಯಿಂದ ಇಡೋದು. ಹಾಗೆನೇ ಇವರ ಥರಾನೇ ಫುಲ್ಲು ಬಿಂದಾಸಾಗಿ, ಇಂಡಿಪೆಂಡೆಂಟಾಗಿ ಇರೋರ್ ಜೊತೆ ಸಖತ್ ಮಜ ಮಾಡ್ತಾರೆ, ಚೆನ್ನಾಗಿ ಕಾಲ ಕಳಿತಾರೆ.

ಇವರದ್ದು ಇನ್ನೊಂದು ಒಳ್ಳೆ ಅಂಶ ಅಂದ್ರೆ...ಗೆಳೆತನದ ವಿಷ್ಯ ಆಗ್ಲಿ ಸಂಗಾತಿ ವಿಷ್ಯ ಆಗ್ಲಿ ತುಂಬಾನೇ ನಿಯತ್ತಾಗಿರ್ತಾರೆ :-)

ಮಾರ್ಚ್

ಮಾರ್ಚ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬಾ ಕಲ್ಪನಾಶಕ್ತಿ (ಕ್ರಿಯೇಟಿವಿಟಿ) ಇರತ್ತೆ. ಆದ್ರೆ ಜಾಸ್ತಿ ಸಮಯ ಇವರು ಮೌನವಾಗಿರಕ್ಕೆ ಮತ್ತೆ ತಮ್ಮ ಆತ್ಮಾವಲೋಕನ ಮಾಡ್ಕೊಳಕ್ಕೆ ಇಷ್ಟ ಪಡ್ತಾರೆ. ಇವರು ಇನ್ನೊಬ್ರು ಜೊತೆ ವಿಷ್ಯಗಳ್ನ ಹಂಚ್ಕೊಳೊದಿಕ್ಕಿಂತ ತಮ್ಮೊಳಗೇ ಯೋಚನೆ ಮಾಡಿ ತಲೆ ಒಳಗೇ ಮಾಸ್ಟರ್ ಪೀಸ್ಗಳ್ನ ಸೃಷ್ಟಿ ಮಾಡ್ತಾರೆ ಕಣ್ರಿ. ತಮ್ಮ ಭಾವನೆಗಳ್ನ/ಅನಿಸಿಕೆಗಳ್ನ ಹೇಳ್ಕೊಳಕ್ಕೋಸ್ಕರ ಅವರಿಗೆ ಸಾಥ್ ಬೇಕಿರತ್ತೆ. ಅದನ್ನ ಕಲೆ ತುಂಬಿಸತ್ತೆ. ತಾವಿಷ್ಟ ಪಡೋ ಕಲೆ ಮೂಲಕ ಎಲ್ಲಾನೂ ಎಕ್ಸ್ಪ್ರೆಸ್ ಮಾಡ್ತಾರೆ. ಹಾಗೆನೆ ಒಳಗೊಳಗೇ ಸಿಗೋ ಏಕಾಂತವನ್ನಾ ಮನಸಾರೆ ಅನುಭವಿಸ್ತಾರೆ.

ಬೇರೆಯೋರ ಜೊತೆ ಇವರ ಸಂಬಂಧ ಚೆನ್ನಾಗಿರತ್ತೆ. ತುಂಬಾ ನಯವಾಗಿ, ಕಾಳಜಿಯಿಂದ ನಡ್ಕೊತಾರೆ ಆದ್ರೆ ತಮ್ ಬಗ್ಗೆ ಮಾತ್ರ ಜಾಸ್ತಿ ವಿಷ್ಯ ಬಿಟ್ಕೊಡಲ್ಲ. ಮುಚ್ಚಿಟ್ಕೊಳಕ್ಕೆ ನೋಡ್ತಾರೆ. ಈ ಮಾರ್ಚಲ್ಲಿ ಹುಟ್ಟಿರೋರ್ ಬಗ್ಗೆ ಇನ್ನೊಂದ್ ಮುಖ್ಯವಾದ್ ವಿಷ್ಯ ಅಂದ್ರೆ ಇವರು ಯಾವಾಗ್ಲೂ ನಿಶ್ಯಬ್ಧವಾದ, ಪ್ರಶಾಂತವಾದ ವಾತಾವರಣ ಹುಡುಕ್ಕೊಂಡ್ ಹೋಗ್ತಾರೆ. ಜನರ ಜಾತ್ರೆಯಿಂದ, ಗಲಾಟೆಯಿಂದ ದೂರ ಇರಕ್ಕೆ ಇಷ್ಟ ಪಡ್ತಾರೆ.

ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಹುಟ್ಟಿರೋರು ಯಾವಾಗ್ಲೂ ಬೇರೆಯೋರು ತಮ್ಮನ್ನ ಗಮನಿಸ್ತಿರ್ಲಿ ಅಂತ ಹಾತೊರಿತಿರ್ತಾರೆ ಜೊತೆಗೆ ಎಲ್ರೂ ತಮ್ಮ ಬಗ್ಗೆನೇ ಮಾತಾಡ್ಬೇಕು, ಹೊಗಳಬೇಕು - ಒಟ್ನಲ್ಲಿ ಸಖತ್ ಪ್ರಚಾರ ಸಿಗ್ಬೇಕು ಅಂತ ಆಸೆ ಪಡ್ತಾರೆ. ಇವ್ರಿಗೆ ಇನ್ನೊಬ್ರು ಹಾಗ್ ಮಾಡು ಹೀಗ್ ಮಾಡು ಅಂತ ಮೂಗ್ ತೂರ್ಸೋದು ಇಷ್ಟ ಆಗಲ್ಲ. ಬದಲಿಗೆ ತಮ್ಮದೇ ರೀತೀಲಿ ಕೆಲ್ಸಕಾರ್ಯನ ಮಾಡ್ತಾರೆ, ಬೇರೆಯೋರ್ನೂ ಆ ದಾರಿಲೇ ನಡೆಸ್ತಾರೆ.

ಯಾವಾಗ್ಲೂ ಹೊಸ ಹೊಸ ಸಾಹಸಗಳ್ನ ಮಾಡಕ್ಕೆ ಅವಕಾಶ ಸಿಗತ್ತಾ? ಅಂತ ನೋಡ್ತಿರ್ತಾರೆ ಮತ್ತೆ ಎಲ್ಲಾನು ಚಿಟಿಕೆ ಹೊಡಿಯೋದ್ರಲ್ಲಿ ಮಾಡ್ಬೇಕು, ಬಯಸಿದ ತಕ್ಷಣ ಸಿಗ್ಬೇಕು ಅನ್ನೋ ಆತುರದಲ್ಲಿರ್ತಾರೆ. ಯಾವ್ದೇ ವಿಷ್ಯಕ್ಕಾಗ್ಲೀ ಮೊದ್ಲು ಮನಸ್ಸಿಗೆ ಬಂದ ಹಾಗೆ ನಡ್ಕೊತಾರೆ. ಭವಿಷ್ಯದ ಬಗ್ಗೆ ತಲೆ ಕೆಡುಸ್ಕೊಳಲ್ಲ. 'ನೆನ್ನೆ ನೆನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ' ಹಾಡು ಇವ್ರಿಗೆ ಹೇಳಿ ಮಾಡಿಸ್ದಂಗಿದೆ ಕಣ್ರಿ. ಜೀವ್ನ ಹೇಗ್ ಬರತ್ತೋ ಹಾಗ್ ತೊಗೊಂಡ್ ಹೋಗ್ತಿರ್ತಾರೆ.

ಕೆಲ ಸಲ ಇವರು ಜಗಳಗಂಟ್ರು ಥರ, ಜಿಗುಪ್ಸೆ ಬರೋ ಥರ ಮಾತಾಡ್ತಾರೆ ಅನ್ನೋ ಅಪವಾದ ಹೊತ್ಕೊಬೇಕಾಗತ್ತೆ. ಆದ್ರೆ ಅವರು ಆಡೋ ಮಾತ್ಗಳು ಮನಸ್ಸಿಂದ ಬಂದಿರತ್ತೆ. ಯಾವ್ದೂ ಬೇಕೂಂತ ಆಡೋದಲ್ಲ. ಜೊತೆಗೆ ತಮ್ಗೆ ಏನನ್ಸತ್ತೆ ಅಂತ ಬೇರೆಯೋರಿಗೆ ಹೇಳಕ್ಕೆ ಹಿಂದೆ ಮುಂದೆ ನೋಡಲ್ಲ. ಒಂಥರ ತಮ್ ವಿಷ್ಯದಲ್ಲಿ ಫಿಲ್ಟರ್ ಇರಲ್ಲ. ಬೇಜಾರಾಗಿದ್ರೆ ಮುಲಾಜಿಲ್ದೇ ಹೇಳ್ಕೊತಾರೆ.

ಮೇ

ಮೇ ತಿಂಗಳಲ್ಲಿ ಹುಟ್ತಿರೋರು ತುಂಬಾನೇ ಚಂಚಲ ಮನಸ್ಸಿನೋರು. ಇವತ್ತು ಒಂದ್ ಬೇಕು ಅಂದ್ರೆ, ನಾಳೆ ಇನ್ನೇನೋ ಬೇಕು ಅಂತಾರೆ. ಇವ್ರು ತಮ್ ಭಾವನೆಗಳ್ನ ಚೆನ್ನಾಗಿ ಎಕ್ಸ್ಪ್ರೆಸ್ ಮಾಡ್ತಾರೆ ಮತ್ತೆ ಜೀವನದ ಬೇರೆ ಬೇರೆ ಹಿನ್ನೆಲೆ, ಹಂತದಲ್ಲಿರೋರ್ ಹತ್ರ ಮಾತಾಡಕ್ಕೆ ಇಷ್ಟ ಪಡ್ತಾರೆ. ಒಂಟಿಯಾಗಿರಕ್ಕೆ ಸುತಾರಾಮ್ ಆಗಲ್ಲ ಇವ್ರ ಕೈಲಿ. ಯಾವಾಗ್ಲೂ ಸೋಶಿಯಲ್ ಲೈಫಲ್ಲಿ ಚುರುಕಾಗಿರ್ತಾರೆ.

ಇವರು ಉತ್ತೇಜನ ಕೊಡೋವಂಥ, ಬುದ್ಧಿವಂತಿಕೆ ಇರೋವಂಥ ಮಾತುಕತೆಗಳಲ್ಲಿ ಭಾಗಿಯಾಗಕ್ಕೆ ಇಷ್ಟಪಡ್ತಾರೆ. ಆದ್ರೆ ಅಂಥಾ ಮಾತುಕಥೆ ಬೋರ್ ಹೊಡುಸ್ಬಾರ್ದು. ಬದಲಿಗೆ ತುಂಬಾ ಮೋಜು ಮಸ್ತಿ ಉತ್ಸಾಹದಿಂದ ಇರ್ಬೇಕು. ಆಗ ಖುಷಿಯಿಂದ ಆ ಗುಂಪಲ್ಲಿ ಸೆರ್ಕೊತಾರೆ.

ತುಂಬಾ ಬೇಗ ಬೋರ್ ಆಗ್ಬಿಡ್ತಾರೆ. ಒಂದ್ ವಿಷ್ಯ ಜಾಸ್ತಿ ಹೊತ್ತು ಇವ್ರನ್ನ ಹಿಡಿದು ಇಡಕ್ಕಾಗಲ್ಲ, ಆಕರ್ಷಿಸಕ್ಕೆ ಸಾಧ್ಯಯಿಲ್ಲ. ಹಾಗಾಗಿ ತಮ್ಮನ್ನ ತಾವು ಖುಷಿಯಾಗಿಟ್ಕೊಳಕ್ಕೆ, ಮಜಾ ಮಾಡಕ್ಕೆ ಸದಾ ಹೊಸ ಹೊಸ ಉಪಾಯಗಳ್ನ ಹುಡುಕ್ತಾನೆ ಇರ್ತಾರೆ.

ಜೂನ್

ಜೂನ್ ತಿಂಗಳಲ್ಲಿ ಹುಟ್ಟಿರೋರು ಇನ್ನೊಬ್ರು ಭಾವನೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿರ್ತಾರೆ. ಹಾಗೆನೆ ಬೇರೆಯೋರ್ನ ಕಾಳಜಿ ಮಾಡೋ ಗುಣ ಇದೆ. ಸಖತ್ ಸಂಕೋಚದ ಸ್ವಭಾವ್ದೋರು ಮತ್ತೆ ಮೆತ್ತಗೆ ಮಾತಾಡೊರು. ಇವ್ರ ಆ ಸ್ವಭಾವನೇ ಜನ ಮೆಚ್ಕೊಳ್ಳೊದು.

ತುಂಬಾನೇ ಕ್ರಿಯೇಟಿವಾಗಿರೋ ಇವರು ಭವಿಷ್ಯದ್ ಬಗ್ಗೆ ದೂರದೃಷ್ಟಿ ಇಟ್ಕೊಂಡಿರ್ತಾರೆ. ಹೊಸ ಹೊಸ ಆಲೋಚನೆಗಳ್ನ ಹೇಗೆಲ್ಲಾ ಸೃಷ್ಟಿಮಾಡ್ಬೋದು? ತಮ್ಮ ಐಡಿಯಾಗಳ್ನ ಹೇಗೆಲ್ಲಾ ಕಾರ್ಯರೂಪಕ್ಕೆ ತರ್ಬೋದು? ಅನ್ನೋದ್ರ ಬಗ್ಗೆ ಪ್ಲ್ಯಾನ್ ಮಾಡ್ತಿರ್ತಾರೆ.

ಇವರು ತಮ್ಮ ಭಾವನೆಗಳ್ನ, ತಮ್ಗೆ ಅನ್ಸಿದ್ದನ್ನ ಅಷ್ಟು ಸುಲಭವಾಗಿ ಹೊರಗೆ ಹೇಳ್ಕೊಳಲ್ಲ ಆದ್ರೆ ಮನಸ್ಸಿನ ಒಳಗೆ ತಮ್ಮದೇ ಒಂದ್ ಪ್ರಪಂಚ ಕಟ್ಕೊಂಡಿರ್ತಾರೆ. ಅದನ್ನ ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳೊದು ಅಂತ ಮಾತ್ರ ಗೊತ್ತಾಗದೆ ಒದ್ದಾಡ್ತಾರೆ.

ಜುಲೈ

ಇವರು ತುಂಬಾ ಬಹಿರ್ಮುಖಿಗಳು ಅಂದ್ರೆ ಮನಸ್ಸಿಗೆ ಏನೇ ಬಂದ್ರೂ ಅದು ಹೊರಗೇ ಬಂದೇ ಬರತ್ತೆ. ಒಂಥರ ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇರಲ್ಲ. ಜೊತೆಗೆ ಪಾದರಸದ ಥರ. ಯಾವ್ದಾದ್ರು ಕೆಲ್ಸ ಮಾಡ್ಬೇಕು ಅಂದ್ರೆ ಯಾವ್ ಕಾರಣನೂ ಬೇಡ, ಯಾರ್ ಪ್ರೇರಣೆನೂ ಬೇಡ. ಸಾಹಸ ಮಾಡೋದು ಸಖತ್ ಇಷ್ಟ ಆಗತ್ತೆ ಹಾಗೆನೇ ಚೆನ್ನಾಗಿ, ಒಳ್ಳೆ ರೀತಿಲಿ ಕಾಲ ಕಳಿಯಕ್ಕೆ ಇಷ್ಟಪಡ್ತಾರೆ.

ಹೊರಗಿಂದ ನೋಡೋರ್ಗೆ ಇವರು ತುಂಬಾ ಆತ್ಮವಿಶ್ವಾಸದಿಂದ ನಗುನಗ್ತಾ ಇರೋಹಾಗ್ ಕಾಣ್ಸಿದ್ರೂ, ಒಳಗೆ ದೊಡ್ಡ ಮಟ್ಟದಲ್ಲೇ ನೋವು, ದುಃಖ ಮತ್ತೆ ಕರಾಳವಾದ ಸತ್ಯ ಬಚ್ಚಿಟ್ಕೊಂಡಿರ್ತಾರೆ.

ಇನ್ನು ಜುಲೈನಲ್ಲಿ ಹುಟ್ಟಿರೋರ್ಗೆ ಎನರ್ಜಿ ಸಖತ್ತಾಗಿರತ್ತೆ. ಈ ಕಾರಣಕ್ಕೇ ಬೇರೆಯೋರು ಇವ್ರ ಜೊತೆ ಸುತ್ತಾಡಕ್ಕೆ, ತಿರುಗಾಡಕ್ಕೆ ಕಾಯ್ತಿರ್ತಾರೆ.

ಆಗಸ್ಟ್

ಆಗಸ್ಟ ಅಂದ ತಕ್ಷಣ, ಇವ್ರು ಹುಟ್ತಾನೇ ಲೀಡರ್ ಆಗೋ ಎಲ್ಲಾ ಗುಣ ಪಡ್ಕೊಂಡ್ ಬಂದಿರ್ತಾರೆ. ತಮ್ ಅಭಿಪ್ರಾಯಗಳ್ಗೆ ಅದೆಷ್ಟೇ ಕಷ್ಟ ಆದ್ರೂ ಭಯ ಪಡ್ದೇ ಅಂಟುಕೊಂಡಿರ್ತಾರೆ. ಬಿಟ್ಕೊಡಲ್ಲ. ಇವ್ರು ತುಂಬಾ ಬಾಸಿಸಮ್ ಮಾಡ್ತಾರೆ, ತಮ್ ಅಭಿಪ್ರಾಯಗಳ್ನ ಇನ್ನೊಬ್ರು ಮೇಲೂ ಹೇರ್ತಾರೆ ಅನ್ನಿಸ್ಬೋದು ಆದ್ರೆ ಸಿಕ್ಕಾಪಟ್ಟೆ ದೊಡ್ಡಮನಸ್ಸಿನೋರು ಕಣ್ರಿ ಇವ್ರು.

ಇನ್ನು ಎಲ್ಲಾ ವಿಷ್ಯಕ್ಕೂ ತುಂಬಾನೇ ಯೋಚನೆ ಮಾಡೊ ಇವ್ರು, ಸ್ವಲ್ಪ ಏಮಾರಿದ್ರೂ ತಮ್ಮ ಗಟ್ಟಿಯಾಗಿರೋ ಶಿಸ್ತಿನಿಂದ ನಡ್ಕೊಂಡ್ ಬರ್ತಿರೋ ಜೀವನನ ಕಗ್ಗಂಟು ಮಾಡ್ಕೊತಾರೆ. ತಮ್ಮ ವೃತ್ತಿಜೀವನದಲ್ಲಿ ಸುಖವಾಗಿ ಮೇಲೆ ಬರ್ತಾರೆ. ಯಾಕಂದ್ರೆ ಅವ್ರು ಮಾಡೋ ಕೆಲ್ಸದಲ್ಲಿ ಲಾಭ-ನಷ್ಟಗಳನ್ನ ಯೋಚೆನೆ ಮಾಡಿನೇ ಮುಂದುವರೆಯೋದು. ಜೀವನ್ದಲ್ಲೂ ಇವ್ರು ಇಡೋ ಒಂದೊಂದು ಹೆಜ್ಜೆನೂ ಲಾಜಿಕಲ್ಲಾಗಿ, ಹಂತಹಂತವಾಗಿ ಇಡೋದ್ರಿಂದ ವೃತ್ತಿನಲ್ಲೂ ನಿಭಾಯಿಸಕ್ಕೆ ಸಹಾಯ ಆಗತ್ತೆ.

ತಮ್ಮ ಭಾವನೆಗಳ್ನ ಅಷ್ಟು ಸುಲಭವಾಗಿ ವ್ಯಕ್ತಪಡಿಸಲ್ಲ. ಹಾಗಾಗಿ, ಕೆಲವು ಸೂಕ್ಷ್ಮ ಸಂದರ್ಭಗಳು ಅವರ ಕೈ ಜಾರಿ ಹೋಗತ್ವ್ಗೆ. ಜನರ ,ಮನಸ್ಸಿಗೆ ನೋವುಂಟು ಮಾಡತ್ವೆ.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬ ಬೇಗ, ಸುಲಭವಾಗಿ ನಿರಾಶೆಯಾಗತ್ತೆ. ಯಾಕಂದ್ರೆ ಇವರು ಇನ್ನೊಬ್ರಿಂದ ಸಿಕ್ಕಾಪಟ್ಟೆ ಅಪೇಕ್ಷೆ ಇಟ್ಕೊಂಡಿರ್ತಾರೆ. ಇನ್ನೊಂದ್ ಕಡೆ ಇವ್ರಿಗೆ ಒಂಥರ ಮೊಂಡುತನ ಇರತ್ತೆ. ಏನಂದ್ರೆ, ಬೇರೆಯೋರ್ ಗ್ರಹಚಾರ ಕೆಟ್ಟಿದ್ರೆ, ಅವ್ರ ಜೊತೆ ಮನಸ್ತಾಪ ಬಂದ್ರೆ, ಸಾಯೋತಂಕ ಹಗೆ, ದ್ವೇಷ ಸಾಧಿಸ್ತಾರೆ.

ಇವರನ್ನ ಮಿಸ್ಟರ್ ಅಥ್ವಾ ಮಿಸ್ಟ್ರೆಸ್ ಪರ್ಫೆಕ್ಟ್ ಅನ್ಬೋದು. ತಮ್ಮ ಹಾಗೇ ಬೇರೆಯೋರೂ ಇರ್ಬೇಕು ಅಂತ ಎದುರು ನೋಡ್ತಾರೆ. ಇದೆಲ್ಲದರ ಜೊತೆಗೆ, ಇವರು ತುಂಬಾನೇ ಕ್ರಿಯೇಟಿವ್ ವ್ಯಕ್ತಿ. ಕಾಳಜಿ-ಕನಿಕರ ಇರೋರು ಮತ್ತೆ ಅವಕಾಶ ಸಿಕ್ಕಾಗೆಲ್ಲಾ ಇನ್ನೊಬ್ರುಗೆ ಸಹಾಯ ಮಾಡೋ ಗುಣ ಇರೋರು.

ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರೋರು, ತಾವು ಮಾಡೋ ಎಲ್ಲಾ ಕೆಲ್ಸದಲ್ಲೂ ಬ್ಯಾಲೆನ್ಸ್ ಇರ್ಬೇಕು ಮತ್ತೆ ಕೆಲ್ಸ ಮಾಡೋ ಹಂತದಲ್ಲಿ ಗಟ್ಟಿತನ ಇರ್ಬೇಕು ಅಂತ ಬಯಸ್ತಾರೆ. ಜೊತೆಗೆ ಜೀವನದ ಬಗ್ಗೆ ಒಂದು ಪಾಸಿಟಿವ್ ದೃಷ್ಟಿಕೋನ ಇರತ್ತೆ. ಇವ್ರಿಗೆ ಹೊಡೆದಾಟ, ಜಗಳ ಇವಲ್ಲ ಇಷ್ಟ ಆಗಲ್ಲ. ಸಾಧ್ಯವಾದಷ್ಟೂ ಮಟ್ಟಿಗೆ ತಡಿಯಕ್ಕೆ ನೋಡ್ತಾರೆ.

ಇವ್ರ ಸೋಶಿಯಲ್ ಲೈಫ್ ಸಖತ್ ಚುರುಕಾಗಿರತ್ತೆ ಮತ್ತೆ ಗೆಳೆತನ ಅಂದ್ರೆ ಪ್ರಾಣ ಬಿಡ್ತಾರೆ. ತುಂಬಾ ಆಕರ್ಷಕವಾಗಿರ್ತಾರೆ ಮತ್ತೆ ಮಾತುಗಾರರೂ ಕೂಡ. ಯಾವಾಗ್ಲೂ ಜನರ ಮಧ್ಯ ಇರಕ್ಕೆ ಇಷ್ಟಪಡೋ ಇವ್ರು, ಇಂಡಿಪೆಂಡೆಂಟ್ ವ್ಯಕ್ತಿಗಳು ಕಣ್ರಿ.

ನವಂಬರ್

ನವಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾ ಗುಟ್ಟುಗಳ್ನ ಇಟ್ಕೊಂಡಿರ್ತಾರೆ ಮತ್ತೆ ತಮ್ಮ ನಿಜವಾದ ಭಾವನೆಗಳ್ನ ಬೇರೆಯೋರಿಂದ ಬಚ್ಚಿಡ್ತಾರೆ. ಬೇರೆಯೋರ ಸಲಹೆ, ಮಾರ್ಗದರ್ಶನ ಇಷ್ಟಪಡಲ್ಲ. ತಮ್ಮ ಜೀವನನ ತಾವೇ ಒದ್ದಾದ್ಕೊಂಡಾದ್ರೂ ರೂಪುಸ್ಕೊಳ್ತಾರೆ.

ಇವ್ರಿಗೆ ಈ ಭಯ, ಹೆದರಿಕೆ ಅನ್ನೋದೆಲ್ಲಾ ದೂರ. ಹಾಗಾಗಿ ಎಂಥಾ ಪರಿಸ್ಥಿತಿ ಎದುರಾದ್ರೂ, ಹಿಂದೆ ಮುಂದೆ ಯೋಚನೆ ಮಾಡ್ದೆ ಮೊದ್ಲು ಅದನ್ನ ಪರಿಹಾರಮಾಡಕ್ಕೆ ಹೊರಟುಬಿಡ್ತಾರೆ. ಅದನ್ನ ಸರಿಯಾಗಿ ಅರ್ಥ ಮಾಡ್ಕೊಂಡು ಆಮೇಲೆ ಮುಂದುವರಿಯೋಣ ಅಂತೆಲ್ಲಾ ಇಲ್ವೇ ಇಲ್ಲ. ಪರಿಣಾಮ ಏನಾಗ್ಬೋದು ಅನ್ನೋದ್ರು ಬಗ್ಗೆ ಕಿಂಚಿತ್ತೂ ತಲೆಕೆಡುಸ್ಕೊಳಲ್ಲ.

ಇವರ ಜೀವನದಲ್ಲಿ ಯಾವ್ ಅಡೆತಡೆ ಬಂದ್ರೂ ನಿಲ್ಲಲ್ಲ - ನುಗ್ತಾನೇ ಇರ್ತಾರೆ. ಅವ್ರ ದೊಡ್ದ ಆಸ್ತಿ ಅಂದ್ರೆ ಮೊಂಡು ಧೈರ್ಯ ಮತ್ತೆ ಜೀವನದ ಬಗ್ಗೆ ಇರೋ ಅತಿಯಾದ ಭಾವುಕತೆ.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾನೆ ಸಾಹಸ ಮಾಡೊ ಜನ ಮತ್ತೆ ಉದಾರ ಮನೋಭಾವದೋರು. ಆದ್ರೆ ಕೆಲವುಸಲ ತಮ್ಮ ಪ್ರತಿಷ್ಟೆ, ಅಹಂಕಾರ್ದಿಂದ ಬೇರೆಯೋರ್ ಜೊತೆ ಸಣ್ಣ ಪುಟ್ಟ ಮನಸ್ತಾಪ ಆಗತ್ತೆ. ಇವ್ರು ಯಾವಾಗ್ಲೂ ಹರಿಯೊ ನದಿ ಥರ. ಒಂದೇ ಕಡೆ ಅಥವಾ ಒಂದೇ ಪರಿಸ್ಥಿತೀಲಿ ಜಾಸ್ತಿ ಕಾಲ ಇರಕ್ಕಾಗಲ್ಲ ಇವ್ರ ಕೈಲಿ.

ಸ್ವಲ್ಪ ಸಿಡುಕುತನ ಜಾಸ್ತಿ. ಆದ್ರೆ ಬೇರೆಯೊರಿಗೆ ಸಖತ್ತಾಗಿ ನಗೆಹನಿ ಮಾಡ್ಕೊಂಡು ಟೈಮ್ ಪಾಸ್ ಮಾಡಿಸ್ತಾರೆ. ಅವರ ಉದಾರತೆ ಇದ್ಯಲ್ಲ... ಅದು ಅವರ ಜೀವನದ ಎಲ್ಲಾ ಏರಿಳಿತಗಳ್ನೂ ಪರ್ಫೆಕ್ಟಾಗಿ ಬ್ಯಾಲೆನ್ಸ್ ಮಾಡತ್ತೆ.

ಏನಂತೀರಾ? ನೀವು ಯಾವ ತಿಂಗಳಲ್ಲಿ ಹುಟ್ಟಿದ್ದು? ನಿಮ್ಮ ಸ್ವಭಾವ ನೋಡ್ಕೋಂಡ್ರಾ? ಸರಿ ಇದ್ಯಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: