ಹುಡುಗ್ರು ಮನಸ್ಸಿನ ಭಾವನೆಗಳನ್ನ ಸರ್ಯಾಗಿ ತೋರ್ಸ್ಕೊಳಲ್ಲ ಅಂತ ಹೇಳೋ ಹುಡುಗೀರಿಗೆ ಈ 11 ವಿಷ್ಯ ಕೈಪಿಡಿ ಇದ್ದಂಗೆ

ಯಾವುದೇ ಸಮಯದಲ್ಲಾದ್ರು ನಿಮ್ಮ ಸಹಾಯಕ್ಕೆ ಓಡಿ ಬರ್ತಾರೆ!

ಗಂಡಸರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನ ವ್ಯಕ್ತ ಪಡಿಸಲ್ಲ, ಇನ್ನೊಂದು ರೀತಿಲಿ ಹೇಳ್ಬೇಕು ಅಂದರೆ ಗಂಡಸರಿಗೆ ಸರಿಯಾಗಿ ತೋರಿಸ್ಕೊಳಕ್ಕೆ ಬರೋದಿಲ್ಲ. ಹೀಗೆ ಹೇಳಿಕೊಳ್ಳೋದಕ್ಕಿಂತ, ವ್ಯಕ್ತಪಡಿಸೋದಕ್ಕಿಂತ , ತೋರಿಸ್ಕೊಳ್ಳೋದಕ್ಕಿಂತ ಅವರಿಗೆ ಮಾಡಿ ತೋರಿಸೋದ್ರಲ್ಲೇ ಆರಾಮು ಅನ್ಸುತ್ತೆ. ಗಂಡಸರ ಸೃಷ್ಟಿ ಆಗಿರೋದೇ ಹೀಗೆ ಕಣ್ರೀ, ಯಾವಾಗ್ಲೂ ಧೈರ್ಯವಾಗಿರ್ಬೇಕು, ಎಲ್ಲ ಎದುರಿಸೋ ಶಕ್ತಿ ಇರ್ಬೇಕು, ನಮ್ಮ ಸ್ನೇಹಿತರನ್ನ, ಮನೆಯವರನ್ನ ಕಾಪಾಡ್ಕೊಳೋ ಶಕ್ತಿ ಇರ್ಬೇಕು, ಅವರು ಅಪಾಯದಲ್ಲಿದ್ದಾಗ ನಾವು ಜೊತೆಯಲ್ಲಿರೋದಕ್ಕೆ ರೆಡಿ ಇರ್ಬೇಕು, ಅವರನ್ನ ಸಮಾಧಾನ ಮಾಡಿ ನಿಭಾಯಿಸಿಕೊಂಡು ಹೋಗಬೇಕು. ಹೀಗೆಲ್ಲ ಇರೋದ್ರಿಂದಾಗೆ ಗಂಡಸರಿಗೆ ತಮ್ಮ ಭಾವನೆಗಳನ್ನ ತೋರಿಸೋದಕ್ಕೆ ಕಷ್ಟ , ಆದ್ರೆ ಭಾವನೆ ವ್ಯಕ್ತಪಡಿಸೋದಕ್ಕೆ ಆಗೋದೇ ಇಲ್ಲ ಅಂತ ಅಲ್ಲ.

ಗಂಡಸರು ತಮ್ಮ ಭಾವನೆ ತೋರಿಸ್ಲಿ ಇಲ್ದೇನೆ ಇರ್ಲಿ, ಅವರು ತಮ್ಮ ಹೃದಯದ ಕೋಟೆಯಲ್ಲಿ ಯಾರಿಗಾದ್ರೂ ಜಾಗ ಕೊಟ್ಟಿದ್ರೆ ಅವರಲ್ಲಿ ಖಂಡಿತ ಈ ಗುಣ ನೋಡಬಹುದು.

1. ಹುಡುಗಿ ಹೇಗಿದ್ರೂ ಹಾಗೆ ಅವಳನ್ನ ಪ್ರೀತಿಸ್ತಾನೆ, ಒಪ್ಕೋತಾನೆ, ಅವಳು ತೊಗೊಳೋ ನಿರ್ಧಾರಗಳಿಗೆ ಗೌರವ ಕೊಡ್ತಾನೆ.

ಸಂಭಂದಗಳಿಗೆ ಹೆಚ್ಚು ಬೆಲೆ ಕೊಡದೆ, ನೋಡಕ್ಕೆ ಚೆನ್ನಾಗಿ ಇರ್ಬೇಕು ಅಂತ ಅಂದಚಂದಕ್ಕೇ  ಹೆಚ್ಚು ಪ್ರಾಮುಖ್ಯತೆ ಕೊಡೋವ್ರೆ ಹೆಚ್ಚು. ಅಂತವರು ಹೆಂಗಸರ ಅಂದ ಚಂದ ಮೆಚ್ಕೊಂಡಿರ್ತಾರೆ ಆದರೆ ಅವರನ್ನಲ್ಲ. ಅದೇ ಸಂಭಂದಗಳ ಬೆಲೆ ಗೊತ್ತಿರೋ ಹುಡುಗ ತಾನು ಪ್ರೀತಿಸೋ ಹುಡುಗಿ ಹೇಗೆ ಇರಲಿ ಅವಳನ್ನ ಮನಃಪೂರ್ವಕವಾಗಿ ಇಷ್ಟ ಪಡ್ತಾನೆ. ಅವರಲ್ಲಿ ಏನೇ ದೋಷ ಇದ್ರೂ ಅವರ ಸದ್ಗುಣಗಳನ್ನ ಇಷ್ಟ ಪಡ್ತಾನೆ. ಅವಳ ಬೇಕು ಬೇಡ, ಆಸೆ ಆಕಾಂಕ್ಷೆಗಳಿಗೆ, ಅವಳ ನಿರ್ಧಾರಗಳಿಗೆ ಗೌರವ ಕೊಡ್ತಾನೆ.

2. ಪ್ರೀತಿ ಮಾಡ್ತಿರೋ ಹುಡುಗಾನೇ ಯಾವಾಗ್ಲೂ ಅವಳಿಗೆ ಎಲ್ಲರಿಗಿಂತ ಹೆಚ್ಚು ಪ್ರೋತ್ಸಾಹ ತುಂಬೋದು.

ನಿಜವಾಗ್ಲೂ ಪ್ರೀತಿ ಮಾಡೋ ಗಂಡಸು, ತಾನು ಮಾತ್ರ ಸಾಧನೆ ಮಾಡಿದ್ರೆ ಸಾಕು ಅಂತ ಸುಮ್ನಿರಲ್ಲ. ತಾನು ಪ್ರೀತಿಸೊರೊವ್ರು ಕೂಡ ತಾವು ಏನು ಮಾಡಬೇಕು ಅಂತ ಅನ್ಕೊಂಡಿದ್ದರೋ ಅದನ್ನ ಮಾಡಕ್ಕೆ ಯಾವಾಗ್ಲೂ ಪ್ರೋತ್ಸಾಹ ಕೊಡ್ತಾನೆ. ಅವನಿಗೆ ಅವಳು ಏನು ಸಾಧನೆ ಮಾಡಬಹುದು ಅನ್ನೋದು ಚೆನ್ನಾಗಿ ಗೊತ್ತಿರುತ್ತೆ. ಅಷ್ಟೇ ಅಲ್ಲ ಅವಳ ಸಾಧನೆ ಬಗ್ಗೆ, ಅವಳಿಗೆ ಎಷ್ಟು ಅದ್ಭುತವಾದ ಕೆಲಸ ಮಾಡೋ ಶಕ್ತಿ ಇದೆ ಅನ್ನೋದನ್ನ ಎಲ್ಲರಿಗೂ ತಿಳಿಯೋಹಾಗೆ ಮಾಡ್ತಾನೆ.

ಮೂಲ

3. ತಾನೇ ಮುಂದೆ ಬಂದು ಜವಾಬ್ದಾರಿ ತೊಗೋತಾನೆ.

ಯಾವುದಾದ್ರೂ ಕಷ್ಟದ ಸಂದರ್ಭದಲ್ಲಿ ಏನಾದ್ರೂ ನಿರ್ಧಾರ ತೊಗೋಬೇಕು ಅಂದ್ರೆ, ತಾನೇ ಮುಂದೆ ಬಂದು ನಿರ್ಧಾರ ತೊಗೋತಾನೆ. ಜವಾಬ್ದಾರಿನೂ ತೊಗೋತಾನೆ, ತನ್ನ ಜವಾಬ್ದಾರಿಯನ್ನ ಬೇರೆಯವರಮೇಲೆ ಹಾಕಲ್ಲ. ಅಗತ್ಯ ಇದ್ದಾಗ ಯಾವುದೇ ತ್ಯಾಗ ಮಾಡೋದಕ್ಕೂ ರೆಡಿ. ಇಂತ ಟೈಮಲ್ಲಿ ಅವನಿಗೆ ತನ್ನ ರಕ್ಷಣೆ, ಆರಾಮು ಯಾವುದೂ ಮುಖ್ಯ ಅಂತ ಅನ್ನಿಸಲ್ಲ. ಏನಾದ್ರೂ ಕೆಟ್ಟದು ಆಗ್ತಾ ಇದೆ ಅಂದಾಗ ತನ್ನಮೇಲೆ ತಪ್ಪು ಎಳೆದುಕೊಂಡು ಸರಿ ಮಾಡೋದಕ್ಕೆ ನೋಡ್ತಾನೆ.

4. ತಾನು ಪ್ರೀತಿಸಿದವಳನ್ನ ಯಾವುದೇ ತೊಂದರೆ ಆಗದೆ ಇರೋ ಹಾಗೆ ಕಾಪಾಡ್ಕೋತಾನೆ.

ತಾನು ಪ್ರೀತಿಸಿದವಳಿಗೆ ಏನೋ ತೊಂದರೆ ಆಗ್ತಾ ಇದೆ ಅಂತ ಗೊತ್ತಾದ ತಕ್ಷಣ ತಾನು ಮಧ್ಯ ಬರ್ತಾನೆ, ಬರಿ ದೈಹಿಕವಾಗಿ ಅಷ್ಟೇ ಎಲ್ಲ ಮಾನಸಿಕವಾಗಿಯೂ ಏನೂ ತೊಂದರೆ ಆಗದೆ ಇರೋ ಹಾಗೆ ರಕ್ಷಣೆ ಮಾಡ್ತಾನೆ. ಯಾವುದೇ ಕ್ಷಣದಲ್ಲಾದ್ರೂ ಸರಿ ತಾನು ಮಧ್ಯ ಪ್ರವೇಶ ಮಾಡಕ್ಕೆ ರೆಡಿ ಇರ್ತಾನೆ. ಯಾವುದೇ ಕಾರಣಕ್ಕೂ ತಾನು ಪ್ರೀತಿಸುವವರಮೇಲೆ ಕೈ ಮಾಡಲ್ಲ.

ಮೂಲ

5. ನಿಮ್ಮ ಮಾತಿಗೆ, ಅಭಿಪ್ರಾಯಕ್ಕೆ ಬೆಲೆ ಕೊಡ್ತಾನೆ.

ಅವ್ನು ಯಾವಾಗ ನಿಮ್ಮನ್ನ ಪ್ರೀತಿಸ್ತಾನೋ ಅವನಿಗೆ ನಿಮ್ಮ ಅಭಿಪ್ರಾಯ ತುಂಬಾನೇ ಮುಖ್ಯ ಆಗುತ್ತೆ. ಬೇರೆಯವರು ತನ್ನ ಬಗ್ಗೆ ಏನೇ ತಿಳ್ಕೊಂಡಿರಬಹುದು, ಅವನಿಗೆ ನೀವು ಏನು ಅನ್ಕೋತಿರಿ ಅನ್ನೋದು ಮುಖ್ಯ ಆಗಿರುತ್ತೆ. ಅದು ಸಣ್ಣ ಪುಟ್ಟ ವಿಷಯಾನೇ ಇರ್ಬಹುದು ಅಥವಾ ಅತೀ ಮುಖ್ಯವಾದ ವಿಷಯಾನೇ ಇರಬಹುದು ಅವನಿಗೆ ನಿಮ್ಮ ಅಭಿಪ್ರಾಯ ಎಲ್ಲ ವಿಷಯಗಳಲ್ಲೂ ಮುಖ್ಯ ಆಗಿರುತ್ತೆ.

6. ನೀವು ಹೇಳೋದನ್ನ ತಾಳ್ಮೆಯಿಂದ ಕೇಳಿಸ್ಕೊತಾನೆ.

ನೀವು ಏನಾದ್ರೂ ಹೇಳ್ತಿದ್ದೀರಾ ಅಂದ್ರೆ, ತಾನು ಏನೇ ಮಾಡ್ತಾ ಇದ್ರೂ ಅದನ್ನ ನಿಲ್ಲಿಸಿ ನಿಮ್ಮ ಮಾತಿಗೆ ಗಮನ ಕೊಡ್ತಾನೆ. ನೀವು ನಿಮ್ಮ ದಿನನಿತ್ಯದ ಯಾವುದೇ ವಿಷಯ ಹೇಳ್ತಿದ್ರೂ ನಿಮ್ಮ ಮಾತಿಗೆ ಪ್ರಾಮುಖ್ಯತೆ ಕೊಟ್ಟು ಕೇಳಿಸ್ಕೊತಾನೆ. ಅವನಿಗೆ ನೀವು ಅಂದ್ರೆ ತುಂಬಾನೇ ಇಷ್ಟ, ಅದಕ್ಕೆ ನಿಮ್ಮ ಮಾತಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟು, ಗಮನ ಕೊಟ್ಟು ತಾಳ್ಮೆಯಿಂದ ಕೇಳಿಸ್ಕೊತಾನೆ.

ಮೂಲ

7. ನಿಮಗೆ ಇಷ್ಟ ಆಗೋದು, ಆಗ್ದೇ ಇರೋದು ಪ್ರತಿಯೊಂದನ್ನೂ ಚೆನ್ನಾಗಿ ನೆನಪಿಟ್ಕೊಂಡಿರ್ತಾನೆ.

ನಿಮಗೆ ಇಷ್ಟವಾಗೋ ಬಣ್ಣ, ಬಟ್ಟೆ, ಹೋಟೆಲ್, ತಿಂಡಿ ಕಾಫಿ, ನಿಮಗೆ ಇಷ್ಟವಾಗೋ ಪುಸ್ತಕ  ಹೀಗೆ ಪ್ರತಿಯೊಂದನ್ನೂ ಚೆನ್ನಾಗೇ ನೆನಪಿಟ್ಕೊಂಡಿರ್ತಾನೆ. ನಿಮಗೆ ಅದೇನು ಮಹಾ ಅನ್ನಿಸಬಹುದು, ಆದ್ರೆ ಅವನ ಜೀವನದಲ್ಲಿ ನೀವು ತುಂಬಾನೇ ಮುಖ್ಯವಾದ ಸ್ಥಾನದಲ್ಲಿ ಇದ್ದೀರಿ, ನೀವು ಅಂದ್ರೆ ತುಂಬಾನೇ ಇಷ್ಟ, ಅವನ ಪ್ರಪಂಚದ ಗುರಿ ಅಂದ್ರೆ ನೀವೇ, ಅದಕ್ಕೆ ಇಷ್ಟೆಲ್ಲಾ ನೆನಪಿಟ್ಕೊಂಡಿರ್ತಾನೆ.

8. ತನ್ನ ಶಕ್ತಿ ಮೀರಿ ನಿಮ್ಮ ಸಹಾಯಕ್ಕೆ ಬರ್ತಾನೆ.

ನೀವು ಸಹಾಯ ಬೇಕು ಅಂತ ಕೇಳಿದ್ರೆ ಸಾಕು, ತಾನು ಏನೇ ಮಾಡ್ತಿದ್ರೂ ಅದನ್ನ ಬಿಟ್ಟು ನಿಮ್ಮ ಸಹಾಯಕ್ಕಾಗಿ ಓಡೋಡಿ ಬರ್ತಾನೆ. ನಿಮ್ಮ ಕಾರ್, ಸ್ಕೂಟರ್ ರಿಪೇರಿ ಮಾಡಿಸ್ಕೊಂಡು ಬರೋದೇ ಇರ್ಬಹುದು, ನಿಮಗಾಗಿ ಗಂಟೆಗಟ್ಟಲೆ ಕಾದು ನಿಮ್ಮನ್ನ ಕರ್ಕೊಂಡು ಬರೋದೇ ಇರ್ಬಹುದು, ಬಂದೇ ಬರ್ತಾನೆ. ತನಗೆ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ ನಿಮಗೆ ಏನು ಬೇಕೋ ಅದು ಆಗೋ ಹಾಗೆ ಮಾಡೇ ಮಾಡ್ತಾನೆ. ನೀವು ಅಂದ್ರೆ ತುಂಬಾನೇ ಮುಖ್ಯ ಅದಕ್ಕೆ ಅವನು ಇದನ್ನ ತೊಂದರೆ ಅಂತ ಅಂದುಕೊಳ್ಳದೆ ಪ್ರೀತಿಯಿಂದ ಮಾಡ್ತಾನೆ.

ಮೂಲ

9. ನೀವು ಸ್ವತಂತ್ರವಾಗಿರೋದಕ್ಕೆ ಯಾವುದೇ ಅಡ್ಡಿ ಮಾಡಲ್ಲ.

ಅವನಿಗೆ ಯಾವಾಗ ನಿಮ್ಮ ಮೇಲೆ ಪ್ರೀತಿ ಇರುತ್ತೋ ಆಗ ನೀವು ನಿಮ್ಮ ಫ್ರೆಂಡ್ಸ್ ಜೊತೆ ತಿರುಗಾಡೋದಕ್ಕೆ, ಪಾರ್ಟಿಗೆ ಹೋಗೋದಕ್ಕೆ, ಯಾವುದಕ್ಕೂ ಬೇಡ ಅನ್ನಲ್ಲ. ನೀನು ಅಲ್ಲೆಲ್ಲ ಹೋಗ್ಬಾರ್ದು ನನ್ನ ಜೊತೇನೆ ಟೈಮ್ ಸ್ಪೆಂಡ್ ಮಾಡಬೇಕು ಅಂತಾನೂ ಬಲವಂತ ಮಾಡಲ್ಲ. ಅವನಿಗೂ ನಿಮಗೆ ನಿಮ್ಮದೇ ಆದ ಒಂದು ಸಮಯ ಬೇಕು, ನಿಮ್ಮದೇ ಆದ ಒಂದು ಜೀವನ ಇದೆ ಅಂತ ಗೊತ್ತಿರುತ್ತೆ. ಹಾಗಾಗೇ ಯಾವುದೇ ವಿಷಯದಲ್ಲೂ ಸುಂಸುಮ್ನೆ ಅಡ್ಡಿಪಡಿಸಲ್ಲ.

10. ನೀವು ಇಲ್ದೇ ಇದ್ರೆ ತುಂಬಾನೇ ಬೇಜಾರು ಮಾಡ್ಕೋತಾರೆ.

ನೀವು ಯಾವುದೇ ಕೆಲಸದಿಂದನೋ, ನಿಮ್ಮ ಮನೆಯವರನ್ನ ನೋಡ್ಬೇಕು ಅಂತಾನೋ ಎಲ್ಲಾದ್ರೂ ಹೋದ್ರೆ ನೀವು ಇಲ್ಲ ಅನ್ನೋ ಕೊರಗು ಅವರನ್ನ ತುಂಬಾನೇ ಕಾಡುತ್ತೆ. ಹೀಗೆ ನೀವು ಹೋದಾಗ ಅವರು ಎಷ್ಟೋಸಲ ನಿಮಗೆ ಒಂದಷ್ಟು ಮೆಸೇಜ್ ಕೂಡ ಕಳಿಸಬಹುದು. ಇದೆಲ್ಲ ಅವರು ನಿಮ್ಮನ್ನ ಎಷ್ಟು ಇಷ್ಟ ಪಡ್ತಾರೆ, ನೀವಿಲ್ಲ ಅಂದ್ರೆ ಎಂಷು ಬೇಜಾರಾಗ್ತಿದೆ ಅಂತ ಹೇಳೋದಕ್ಕೆ ಮಾಡೋದು. ನೀವು ಯಾವಾಗ ಬರ್ತಿರೋ, ನಿಮ್ಮನ್ನ ಯಾವಾಗ ನೋಡ್ತಿನೋ ಅಂತ ಕಾತರದಿಂದ ಕಾಯ್ತಾ ಕೂತಿರ್ತಾರೆ.

ಮೂಲ

11. ನಿಮ್ಮ ನೋವನ್ನ ಚೆನ್ನಾಗಿ ಅರ್ಥ ಮಾಡ್ಕೋತಾರೆ.

ನಿಮಗೆ ನೋವಾದ್ರೆ ಅವನಿಗೂ ಖಂಡಿತ ನೋವಾಗುತ್ತೆ. ಒಂತರ ಅವರು ನಿಮ್ಮ ನೋವನ್ನ ದೈಹಿಕವಾಗಿ ತೊಗೊಳೋಹಾಗೆ ಆಡ್ತಾರೆ. ಗಂಡಸು ನಿಮ್ಮ ರಕ್ಷಣೆಗೆ ಅಂತ ಇರೋದು, ನಿಮಗೆ ನೋವಾದ್ರೆ ತಾನು ನಿಮ್ಮನ್ನ ರಕ್ಷಣೆ ಮಾಡೋದ್ರಲ್ಲಿ ಎಲ್ಲೋ ಸೋತು ಹೋಗಿದ್ದೀನಿ ಅಂತ ಅನ್ನಿಸ್ತಿರುತ್ತೆ. ಖಂಡಿತವಾಗಿಯೂ ಅವರಿಗೆ ತಾವು ಪ್ರೀತಿ ಮಾಡ್ತಿರೋವ್ರು ನೋವಲ್ಲಿ ಇರೋದನ್ನ ನೋಡಕ್ಕೆ ಆಗಲ್ಲ.

ನಿಮ್ಮ ಸಂಗತಿ ನಿಮ್ಮ ಮುಂದೆ ಯಾವುದೇ ಭಾವನೆ ವ್ಯಕ್ತ ಪಡಿಸ್ತಿಲ್ಲ ಅಂದ್ರೆ ಅವರು ನಿಮ್ಮನ್ನ ಪ್ರೀತಿಸ್ತಿಲ್ಲ ಅಂತ ಅಲ್ಲ. ಅದು ಅವರ ಹುಟ್ಟು ಗುಣ. ಎಲ್ಲರಿಗೂ ಚೆನ್ನಾಗಿ ವ್ಯಕ್ತಪಡಿಸೋದಕ್ಕೆ ಬರಲ್ಲ. ಈ ಮೇಲೆ ಹೇಳಿರೋ ಯಾವುದೇ ಗುಣ ನೀವು ಅವರಲ್ಲಿ ಕಂಡರೂ, ಅದು ಅವರು ನಿಮ್ಮನ್ನ ಪ್ರೀತಿಸ್ತಾರೆ ಅನ್ನೋದನ್ನೇ ತೋರ್ಸೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೀವು ಯಾವ ತಿಂಗಳಲ್ಲಿ ಹುಟ್ಟಿದೀರಿ ಅನ್ನೋದ್ರಿಂದ ನಿಮ್ಮ ಸ್ವಭಾವದ ಬಗ್ಗೆ ಎಷ್ಟು ಗೊತ್ತಾಗುತ್ತೆ ನೋಡಿ

ಸ್ವಭಾವ ಹಿಂಗೆ ಅಂದ ಮಾತ್ರಕ್ಕೆ ನೀವು ಬದಲಾಯಿಸಿಕೊಳಕ್ಕೆ ಆಗಲ್ಲ ಅಂತ ಅಲ್ಲ

ದಿನಾ ನ್ಯೂಸ್ ಪೇಪರ್ ಮನೆಗ್ ಬಂದ್ ತಕ್ಷಣ, ದಿನ ಭವಿಷ್ಯ, ವಾರಭವಿಷ್ಯ ನೋಡೋರ್ ಪೈಕಿ ನೀವೂನಾ? ಇವತ್ತಿನ್ ದಿನ ಹೇಗಿರತ್ತಪ್ಪ? ಏನೇನ್ ಗಂಡಾಂತರ ಕಾದಿದ್ಯೋ ಏನೋ ಅಂತ ಸ್ವಲ್ಪ ಕುತೂಹಲ ಸ್ವಲ್ಪ ಆತಂಕದಿಂದ ಓದ್ತೀರ? ಬರೀ ರಾಶಿ ಮಾತ್ರ ಅಲ್ಲ ಕಣ್ರಿ, ನೀವ್ ಯಾವ್ ತಿಂಗಳಲ್ಲಿ ಹುಟ್ಟಿದಿರ ಅನ್ನೋದ್ರು ಮೇಲೂ ನಿಮ್ ವ್ಯಕ್ತಿತ್ವ, ಗುಣ ಇನ್ನೂ ಸಾಕಷ್ಟು ವಿಷ್ಯಗಳ್ನ ಹೇಳ್ಬೋದು.

ನಿಜವಾಗ್ಲೂ ಗೊತ್ತಾ, ಹುಟ್ಟಿದ್ ತಿಂಗಳ ಆಧಾರ ಇಟ್ಕೊಂಡು ನಿಮ್ ಒಟ್ಟಾರೆ ನಡವಳಿಕೆ, ಸ್ವಭಾವ, ಬೇರೆಯೋರು ನಿಮ್ಮನ್ನ ಹೇಗ್ ನೋಡ್ತಾರೆ, ಜೀವನದ್ ಬಗ್ಗೆ ನಿಮ್ಗಿರೋ ಆಲೋಚನೆ, ಭಾವನೆಗಳು ಇದೆಲ್ಲಾನೂ ಹೀಗ್ ಹೀಗೆ ಅಂತ ಹೇಳ್ಬೋದು. ಹೇಗಪ್ಪ ಇದು ಅಂತಿರ? ನಿಮ್ ಗುಣ ಲಕ್ಷಣಗಳು, ನೀವ್ ಹುಟ್ಟಿದ್ ತಿಂಗಳಲ್ಲಿ, ನಕ್ಷತ್ರಗಳು ಯಾವ್ ಯಾವ್ ಸ್ಥಾನ್ದಲ್ಲಿ ಇದ್ವು, ಯಾವ್ ಆಕಾರ್ದಲ್ಲಿ ಇದ್ವು ಅಂತ ಲೆಕ್ಕ ಹಾಕಿ ಹೇಳ್ತಾರಂತೆ.

ಯಾವ್ ತಿಂಗಳಲ್ಲಿ ಹುಟ್ಟಿದ್ರೆ, ಎಂಥಾ ಸ್ವಭಾವ, ವ್ಯಕ್ತಿತ್ವ ಇರತ್ತೆ ಅಂತ ಇಲ್ಲಿ ಕೊಟ್ಟಿದ್ದೀವಿ. ಓದಿ...ನಿಮ್ಮ ಸ್ವಭಾವಕ್ಕೆ ತಾಳೆ ಮಾಡಿ ನಮಗೂ ಹೇಳಿ...

ಜನವರೀಲಿ ಹುಟ್ಟಿರೋರು

ಕೆಲ್ಸದ್ ವಿಷ್ಯದಲ್ಲಿ ತುಂಬಾನೇ ಕಟ್ಟುನಿಟ್ಟಾಗಿರ್ತಾರೆ ಹಾಗೆನೇ ತಮ್ಮ ಅಭಿಪ್ರಾಯವನ್ನ ನಾಲಕ್ ಜನರ ಮುಂದೆ ಹೇಳಕ್ಕೆ ಯಾವ್ ಮುಲಾಜೂ ನೋಡಲ್ಲ. ಇವ್ರಲ್ಲಿ ಹಠಮಾರಿತನ ಮತ್ತೆ ಮೊಂಡುತನ ಸ್ವಲ್ಪ ಜಾಸ್ತಿ ಇರತ್ತೆ. ಜೊತೆಗೆ, ಯಾರಾದ್ರು ಹೀಗಲ್ಲ ಹಾಗೆ ಅಂತ ಹೇಳಕ್ ಬಂದ್ರೆ ಅದನ್ನ ಒಪ್ಕೊಳೋದು ಇವ್ರ ಜಾಯಮಾನ್ದಲ್ಲೇ ಇಲ್ಲ ಕಣ್ರಿ.

ಜನವರೀಲಿ ಹುಟ್ದೋರು ಒಳ್ಳೆ ಲೀಡರ್ ಆಗೋದ್ರಲ್ಲಿ ಅನುಮಾನಾನೇ ಇಲ್ಲ. ಇವ್ರಲ್ಲಿರೋ ಛಲ ಸದಾ ಯಶಸ್ಸಿನ ಕಡೆಗೇ ಕರ್ಕೊಂಡ್ ಹೋಗತ್ತೆ ಅನ್ನೋದ್ ನಿಜ. ಆದ್ರೆ ಜೊತೆಲಿರೋರ್ ಮಾತು ಕೇಳೋದ್ ಕಮ್ಮಿ.

ಇವ್ರಲ್ಲಿರೊ ಇನ್ನೊಂದು ಅದ್ಭುತವಾದ ಗುಣ ಅಂದ್ರೆ...ತಮ್ಗೆ ಗೊತ್ತಿರೋ ವಿಷ್ಯಗಳ್ನ ಇನ್ನೊಬ್ರುಗೆ ಅರ್ಥವಾಗೋ ಹಾಗೆ ಹೇಳ್ಕೊಡ್ತಾರೆ. ಅಷ್ಟೇ ಅಲ್ಲ, ಕಲಿಯೋರೂ ಕೂಡ ತುಂಬಾ ಸುಲಭವಾಗಿ, ಆಸಕ್ತಿಯಿಂದ ಇವರು ಹೇಳೋದನ್ನ ಕೇಳ್ತಾರೆ. ಇಷ್ಟಪಟ್ಟು ಕಲಿತಾರೆ.

ಫೆಬ್ರುವರಿ

ಫೆಬ್ರುವರಿ ತಿಂಗಳಲ್ಲಿ ಹುಟ್ಟಿರೋರ್ಗೆ ಕಲಾರೇಖೆ ಉದ್ದವಾಗಿರತ್ತೆ ಅನ್ಸತ್ತೆ ಕಣ್ರಿ. ಸಖತ್ ಕ್ರಿಯೇಟಿವ್ ಆಗಿರ್ತಾರೆ ಮತ್ತೆ ಹೊಸ ಹೊಸ ಕೆಲ್ಸ ಮಾಡಕ್ಕೆ ಇಷ್ಟ ಪಡ್ತಾರೆ. ಇವ್ರಿಗೆ ಬುದ್ಧಿವಂತರ ಜೊತೆ ಚರ್ಚೆ ಮಾಡೋದು, ವಿಚಾರಗಳ್ನ ಹಂಚ್ಕೊಳದು ಅಂದ್ರೆ ಉತ್ಸಾಹ ಇರತ್ತೆ. ಅದೇ ಬುದ್ಧಿವಂತಿಕೇಲಿ ತಮಗಿಂತ ಚೂರು ಕಮ್ಮಿ ಮಟ್ಟದಲ್ಲಿರೋರ್ನ ಹತ್ರನೂ ಸೇರ್ಸಲ್ಲ.

ಇವ್ರನ್ನ ಜನ ಫ್ರೀಬರ್ಡ್ ಅಂತ ಕರೀತಾರೆ. ಯಾಕಂದ್ರೆ ಸಮಾಜದ ಕಟ್ಟುಪಾಡುಗಳು, ರೂಲ್ಸು ಇದೆಲ್ಲ ಇವ್ರಿಗೆ ಆಗ್ಬರಲ್ಲ. ಯಾವಾಗ್ಲೂ ಬಿಂದಾಸಾಗಿ ತಮಗೆ ಇಷ್ಟ ಬಂದಂಗೆ ಇರಕ್ಕೆ ನೋಡ್ತಾರೆ. ಸಮಯ ಸಿಕ್ಕಾಗೆಲ್ಲಾ ವಿಮಾನ, ರೈಲು ಹತ್ಕೊಂಡು ಊರೂರ್ ಸುತ್ತೋದು ಅಂದ್ರೆ ಭಾರಿ ಪ್ರೀತಿ. ಸಾಹಸ ಮಾಡೋದು ಮತ್ತೆ ಸುತ್ತಾಮುತ್ತ ಇರೋ ಜಾಗಗಳು, ವಿಷ್ಯಗಳ್ನ ಇನ್ನೂ ಹೆಚ್ಚು ಹೆಚ್ಚು ತಿಳ್ಕೊಳಕ್ಕೆ ಕಾಯ್ತಾನೇ ಇರ್ತಾರೆ. ಇದೇ ಇವ್ರನ್ನ ಲವಲವಿಕೆಯಿಂದ ಇಡೋದು. ಹಾಗೆನೇ ಇವರ ಥರಾನೇ ಫುಲ್ಲು ಬಿಂದಾಸಾಗಿ, ಇಂಡಿಪೆಂಡೆಂಟಾಗಿ ಇರೋರ್ ಜೊತೆ ಸಖತ್ ಮಜ ಮಾಡ್ತಾರೆ, ಚೆನ್ನಾಗಿ ಕಾಲ ಕಳಿತಾರೆ.

ಇವರದ್ದು ಇನ್ನೊಂದು ಒಳ್ಳೆ ಅಂಶ ಅಂದ್ರೆ...ಗೆಳೆತನದ ವಿಷ್ಯ ಆಗ್ಲಿ ಸಂಗಾತಿ ವಿಷ್ಯ ಆಗ್ಲಿ ತುಂಬಾನೇ ನಿಯತ್ತಾಗಿರ್ತಾರೆ :-)

ಮಾರ್ಚ್

ಮಾರ್ಚ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬಾ ಕಲ್ಪನಾಶಕ್ತಿ (ಕ್ರಿಯೇಟಿವಿಟಿ) ಇರತ್ತೆ. ಆದ್ರೆ ಜಾಸ್ತಿ ಸಮಯ ಇವರು ಮೌನವಾಗಿರಕ್ಕೆ ಮತ್ತೆ ತಮ್ಮ ಆತ್ಮಾವಲೋಕನ ಮಾಡ್ಕೊಳಕ್ಕೆ ಇಷ್ಟ ಪಡ್ತಾರೆ. ಇವರು ಇನ್ನೊಬ್ರು ಜೊತೆ ವಿಷ್ಯಗಳ್ನ ಹಂಚ್ಕೊಳೊದಿಕ್ಕಿಂತ ತಮ್ಮೊಳಗೇ ಯೋಚನೆ ಮಾಡಿ ತಲೆ ಒಳಗೇ ಮಾಸ್ಟರ್ ಪೀಸ್ಗಳ್ನ ಸೃಷ್ಟಿ ಮಾಡ್ತಾರೆ ಕಣ್ರಿ. ತಮ್ಮ ಭಾವನೆಗಳ್ನ/ಅನಿಸಿಕೆಗಳ್ನ ಹೇಳ್ಕೊಳಕ್ಕೋಸ್ಕರ ಅವರಿಗೆ ಸಾಥ್ ಬೇಕಿರತ್ತೆ. ಅದನ್ನ ಕಲೆ ತುಂಬಿಸತ್ತೆ. ತಾವಿಷ್ಟ ಪಡೋ ಕಲೆ ಮೂಲಕ ಎಲ್ಲಾನೂ ಎಕ್ಸ್ಪ್ರೆಸ್ ಮಾಡ್ತಾರೆ. ಹಾಗೆನೆ ಒಳಗೊಳಗೇ ಸಿಗೋ ಏಕಾಂತವನ್ನಾ ಮನಸಾರೆ ಅನುಭವಿಸ್ತಾರೆ.

ಬೇರೆಯೋರ ಜೊತೆ ಇವರ ಸಂಬಂಧ ಚೆನ್ನಾಗಿರತ್ತೆ. ತುಂಬಾ ನಯವಾಗಿ, ಕಾಳಜಿಯಿಂದ ನಡ್ಕೊತಾರೆ ಆದ್ರೆ ತಮ್ ಬಗ್ಗೆ ಮಾತ್ರ ಜಾಸ್ತಿ ವಿಷ್ಯ ಬಿಟ್ಕೊಡಲ್ಲ. ಮುಚ್ಚಿಟ್ಕೊಳಕ್ಕೆ ನೋಡ್ತಾರೆ. ಈ ಮಾರ್ಚಲ್ಲಿ ಹುಟ್ಟಿರೋರ್ ಬಗ್ಗೆ ಇನ್ನೊಂದ್ ಮುಖ್ಯವಾದ್ ವಿಷ್ಯ ಅಂದ್ರೆ ಇವರು ಯಾವಾಗ್ಲೂ ನಿಶ್ಯಬ್ಧವಾದ, ಪ್ರಶಾಂತವಾದ ವಾತಾವರಣ ಹುಡುಕ್ಕೊಂಡ್ ಹೋಗ್ತಾರೆ. ಜನರ ಜಾತ್ರೆಯಿಂದ, ಗಲಾಟೆಯಿಂದ ದೂರ ಇರಕ್ಕೆ ಇಷ್ಟ ಪಡ್ತಾರೆ.

ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಹುಟ್ಟಿರೋರು ಯಾವಾಗ್ಲೂ ಬೇರೆಯೋರು ತಮ್ಮನ್ನ ಗಮನಿಸ್ತಿರ್ಲಿ ಅಂತ ಹಾತೊರಿತಿರ್ತಾರೆ ಜೊತೆಗೆ ಎಲ್ರೂ ತಮ್ಮ ಬಗ್ಗೆನೇ ಮಾತಾಡ್ಬೇಕು, ಹೊಗಳಬೇಕು - ಒಟ್ನಲ್ಲಿ ಸಖತ್ ಪ್ರಚಾರ ಸಿಗ್ಬೇಕು ಅಂತ ಆಸೆ ಪಡ್ತಾರೆ. ಇವ್ರಿಗೆ ಇನ್ನೊಬ್ರು ಹಾಗ್ ಮಾಡು ಹೀಗ್ ಮಾಡು ಅಂತ ಮೂಗ್ ತೂರ್ಸೋದು ಇಷ್ಟ ಆಗಲ್ಲ. ಬದಲಿಗೆ ತಮ್ಮದೇ ರೀತೀಲಿ ಕೆಲ್ಸಕಾರ್ಯನ ಮಾಡ್ತಾರೆ, ಬೇರೆಯೋರ್ನೂ ಆ ದಾರಿಲೇ ನಡೆಸ್ತಾರೆ.

ಯಾವಾಗ್ಲೂ ಹೊಸ ಹೊಸ ಸಾಹಸಗಳ್ನ ಮಾಡಕ್ಕೆ ಅವಕಾಶ ಸಿಗತ್ತಾ? ಅಂತ ನೋಡ್ತಿರ್ತಾರೆ ಮತ್ತೆ ಎಲ್ಲಾನು ಚಿಟಿಕೆ ಹೊಡಿಯೋದ್ರಲ್ಲಿ ಮಾಡ್ಬೇಕು, ಬಯಸಿದ ತಕ್ಷಣ ಸಿಗ್ಬೇಕು ಅನ್ನೋ ಆತುರದಲ್ಲಿರ್ತಾರೆ. ಯಾವ್ದೇ ವಿಷ್ಯಕ್ಕಾಗ್ಲೀ ಮೊದ್ಲು ಮನಸ್ಸಿಗೆ ಬಂದ ಹಾಗೆ ನಡ್ಕೊತಾರೆ. ಭವಿಷ್ಯದ ಬಗ್ಗೆ ತಲೆ ಕೆಡುಸ್ಕೊಳಲ್ಲ. 'ನೆನ್ನೆ ನೆನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ' ಹಾಡು ಇವ್ರಿಗೆ ಹೇಳಿ ಮಾಡಿಸ್ದಂಗಿದೆ ಕಣ್ರಿ. ಜೀವ್ನ ಹೇಗ್ ಬರತ್ತೋ ಹಾಗ್ ತೊಗೊಂಡ್ ಹೋಗ್ತಿರ್ತಾರೆ.

ಕೆಲ ಸಲ ಇವರು ಜಗಳಗಂಟ್ರು ಥರ, ಜಿಗುಪ್ಸೆ ಬರೋ ಥರ ಮಾತಾಡ್ತಾರೆ ಅನ್ನೋ ಅಪವಾದ ಹೊತ್ಕೊಬೇಕಾಗತ್ತೆ. ಆದ್ರೆ ಅವರು ಆಡೋ ಮಾತ್ಗಳು ಮನಸ್ಸಿಂದ ಬಂದಿರತ್ತೆ. ಯಾವ್ದೂ ಬೇಕೂಂತ ಆಡೋದಲ್ಲ. ಜೊತೆಗೆ ತಮ್ಗೆ ಏನನ್ಸತ್ತೆ ಅಂತ ಬೇರೆಯೋರಿಗೆ ಹೇಳಕ್ಕೆ ಹಿಂದೆ ಮುಂದೆ ನೋಡಲ್ಲ. ಒಂಥರ ತಮ್ ವಿಷ್ಯದಲ್ಲಿ ಫಿಲ್ಟರ್ ಇರಲ್ಲ. ಬೇಜಾರಾಗಿದ್ರೆ ಮುಲಾಜಿಲ್ದೇ ಹೇಳ್ಕೊತಾರೆ.

ಮೇ

ಮೇ ತಿಂಗಳಲ್ಲಿ ಹುಟ್ತಿರೋರು ತುಂಬಾನೇ ಚಂಚಲ ಮನಸ್ಸಿನೋರು. ಇವತ್ತು ಒಂದ್ ಬೇಕು ಅಂದ್ರೆ, ನಾಳೆ ಇನ್ನೇನೋ ಬೇಕು ಅಂತಾರೆ. ಇವ್ರು ತಮ್ ಭಾವನೆಗಳ್ನ ಚೆನ್ನಾಗಿ ಎಕ್ಸ್ಪ್ರೆಸ್ ಮಾಡ್ತಾರೆ ಮತ್ತೆ ಜೀವನದ ಬೇರೆ ಬೇರೆ ಹಿನ್ನೆಲೆ, ಹಂತದಲ್ಲಿರೋರ್ ಹತ್ರ ಮಾತಾಡಕ್ಕೆ ಇಷ್ಟ ಪಡ್ತಾರೆ. ಒಂಟಿಯಾಗಿರಕ್ಕೆ ಸುತಾರಾಮ್ ಆಗಲ್ಲ ಇವ್ರ ಕೈಲಿ. ಯಾವಾಗ್ಲೂ ಸೋಶಿಯಲ್ ಲೈಫಲ್ಲಿ ಚುರುಕಾಗಿರ್ತಾರೆ.

ಇವರು ಉತ್ತೇಜನ ಕೊಡೋವಂಥ, ಬುದ್ಧಿವಂತಿಕೆ ಇರೋವಂಥ ಮಾತುಕತೆಗಳಲ್ಲಿ ಭಾಗಿಯಾಗಕ್ಕೆ ಇಷ್ಟಪಡ್ತಾರೆ. ಆದ್ರೆ ಅಂಥಾ ಮಾತುಕಥೆ ಬೋರ್ ಹೊಡುಸ್ಬಾರ್ದು. ಬದಲಿಗೆ ತುಂಬಾ ಮೋಜು ಮಸ್ತಿ ಉತ್ಸಾಹದಿಂದ ಇರ್ಬೇಕು. ಆಗ ಖುಷಿಯಿಂದ ಆ ಗುಂಪಲ್ಲಿ ಸೆರ್ಕೊತಾರೆ.

ತುಂಬಾ ಬೇಗ ಬೋರ್ ಆಗ್ಬಿಡ್ತಾರೆ. ಒಂದ್ ವಿಷ್ಯ ಜಾಸ್ತಿ ಹೊತ್ತು ಇವ್ರನ್ನ ಹಿಡಿದು ಇಡಕ್ಕಾಗಲ್ಲ, ಆಕರ್ಷಿಸಕ್ಕೆ ಸಾಧ್ಯಯಿಲ್ಲ. ಹಾಗಾಗಿ ತಮ್ಮನ್ನ ತಾವು ಖುಷಿಯಾಗಿಟ್ಕೊಳಕ್ಕೆ, ಮಜಾ ಮಾಡಕ್ಕೆ ಸದಾ ಹೊಸ ಹೊಸ ಉಪಾಯಗಳ್ನ ಹುಡುಕ್ತಾನೆ ಇರ್ತಾರೆ.

ಜೂನ್

ಜೂನ್ ತಿಂಗಳಲ್ಲಿ ಹುಟ್ಟಿರೋರು ಇನ್ನೊಬ್ರು ಭಾವನೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿರ್ತಾರೆ. ಹಾಗೆನೆ ಬೇರೆಯೋರ್ನ ಕಾಳಜಿ ಮಾಡೋ ಗುಣ ಇದೆ. ಸಖತ್ ಸಂಕೋಚದ ಸ್ವಭಾವ್ದೋರು ಮತ್ತೆ ಮೆತ್ತಗೆ ಮಾತಾಡೊರು. ಇವ್ರ ಆ ಸ್ವಭಾವನೇ ಜನ ಮೆಚ್ಕೊಳ್ಳೊದು.

ತುಂಬಾನೇ ಕ್ರಿಯೇಟಿವಾಗಿರೋ ಇವರು ಭವಿಷ್ಯದ್ ಬಗ್ಗೆ ದೂರದೃಷ್ಟಿ ಇಟ್ಕೊಂಡಿರ್ತಾರೆ. ಹೊಸ ಹೊಸ ಆಲೋಚನೆಗಳ್ನ ಹೇಗೆಲ್ಲಾ ಸೃಷ್ಟಿಮಾಡ್ಬೋದು? ತಮ್ಮ ಐಡಿಯಾಗಳ್ನ ಹೇಗೆಲ್ಲಾ ಕಾರ್ಯರೂಪಕ್ಕೆ ತರ್ಬೋದು? ಅನ್ನೋದ್ರ ಬಗ್ಗೆ ಪ್ಲ್ಯಾನ್ ಮಾಡ್ತಿರ್ತಾರೆ.

ಇವರು ತಮ್ಮ ಭಾವನೆಗಳ್ನ, ತಮ್ಗೆ ಅನ್ಸಿದ್ದನ್ನ ಅಷ್ಟು ಸುಲಭವಾಗಿ ಹೊರಗೆ ಹೇಳ್ಕೊಳಲ್ಲ ಆದ್ರೆ ಮನಸ್ಸಿನ ಒಳಗೆ ತಮ್ಮದೇ ಒಂದ್ ಪ್ರಪಂಚ ಕಟ್ಕೊಂಡಿರ್ತಾರೆ. ಅದನ್ನ ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳೊದು ಅಂತ ಮಾತ್ರ ಗೊತ್ತಾಗದೆ ಒದ್ದಾಡ್ತಾರೆ.

ಜುಲೈ

ಇವರು ತುಂಬಾ ಬಹಿರ್ಮುಖಿಗಳು ಅಂದ್ರೆ ಮನಸ್ಸಿಗೆ ಏನೇ ಬಂದ್ರೂ ಅದು ಹೊರಗೇ ಬಂದೇ ಬರತ್ತೆ. ಒಂಥರ ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇರಲ್ಲ. ಜೊತೆಗೆ ಪಾದರಸದ ಥರ. ಯಾವ್ದಾದ್ರು ಕೆಲ್ಸ ಮಾಡ್ಬೇಕು ಅಂದ್ರೆ ಯಾವ್ ಕಾರಣನೂ ಬೇಡ, ಯಾರ್ ಪ್ರೇರಣೆನೂ ಬೇಡ. ಸಾಹಸ ಮಾಡೋದು ಸಖತ್ ಇಷ್ಟ ಆಗತ್ತೆ ಹಾಗೆನೇ ಚೆನ್ನಾಗಿ, ಒಳ್ಳೆ ರೀತಿಲಿ ಕಾಲ ಕಳಿಯಕ್ಕೆ ಇಷ್ಟಪಡ್ತಾರೆ.

ಹೊರಗಿಂದ ನೋಡೋರ್ಗೆ ಇವರು ತುಂಬಾ ಆತ್ಮವಿಶ್ವಾಸದಿಂದ ನಗುನಗ್ತಾ ಇರೋಹಾಗ್ ಕಾಣ್ಸಿದ್ರೂ, ಒಳಗೆ ದೊಡ್ಡ ಮಟ್ಟದಲ್ಲೇ ನೋವು, ದುಃಖ ಮತ್ತೆ ಕರಾಳವಾದ ಸತ್ಯ ಬಚ್ಚಿಟ್ಕೊಂಡಿರ್ತಾರೆ.

ಇನ್ನು ಜುಲೈನಲ್ಲಿ ಹುಟ್ಟಿರೋರ್ಗೆ ಎನರ್ಜಿ ಸಖತ್ತಾಗಿರತ್ತೆ. ಈ ಕಾರಣಕ್ಕೇ ಬೇರೆಯೋರು ಇವ್ರ ಜೊತೆ ಸುತ್ತಾಡಕ್ಕೆ, ತಿರುಗಾಡಕ್ಕೆ ಕಾಯ್ತಿರ್ತಾರೆ.

ಆಗಸ್ಟ್

ಆಗಸ್ಟ ಅಂದ ತಕ್ಷಣ, ಇವ್ರು ಹುಟ್ತಾನೇ ಲೀಡರ್ ಆಗೋ ಎಲ್ಲಾ ಗುಣ ಪಡ್ಕೊಂಡ್ ಬಂದಿರ್ತಾರೆ. ತಮ್ ಅಭಿಪ್ರಾಯಗಳ್ಗೆ ಅದೆಷ್ಟೇ ಕಷ್ಟ ಆದ್ರೂ ಭಯ ಪಡ್ದೇ ಅಂಟುಕೊಂಡಿರ್ತಾರೆ. ಬಿಟ್ಕೊಡಲ್ಲ. ಇವ್ರು ತುಂಬಾ ಬಾಸಿಸಮ್ ಮಾಡ್ತಾರೆ, ತಮ್ ಅಭಿಪ್ರಾಯಗಳ್ನ ಇನ್ನೊಬ್ರು ಮೇಲೂ ಹೇರ್ತಾರೆ ಅನ್ನಿಸ್ಬೋದು ಆದ್ರೆ ಸಿಕ್ಕಾಪಟ್ಟೆ ದೊಡ್ಡಮನಸ್ಸಿನೋರು ಕಣ್ರಿ ಇವ್ರು.

ಇನ್ನು ಎಲ್ಲಾ ವಿಷ್ಯಕ್ಕೂ ತುಂಬಾನೇ ಯೋಚನೆ ಮಾಡೊ ಇವ್ರು, ಸ್ವಲ್ಪ ಏಮಾರಿದ್ರೂ ತಮ್ಮ ಗಟ್ಟಿಯಾಗಿರೋ ಶಿಸ್ತಿನಿಂದ ನಡ್ಕೊಂಡ್ ಬರ್ತಿರೋ ಜೀವನನ ಕಗ್ಗಂಟು ಮಾಡ್ಕೊತಾರೆ. ತಮ್ಮ ವೃತ್ತಿಜೀವನದಲ್ಲಿ ಸುಖವಾಗಿ ಮೇಲೆ ಬರ್ತಾರೆ. ಯಾಕಂದ್ರೆ ಅವ್ರು ಮಾಡೋ ಕೆಲ್ಸದಲ್ಲಿ ಲಾಭ-ನಷ್ಟಗಳನ್ನ ಯೋಚೆನೆ ಮಾಡಿನೇ ಮುಂದುವರೆಯೋದು. ಜೀವನ್ದಲ್ಲೂ ಇವ್ರು ಇಡೋ ಒಂದೊಂದು ಹೆಜ್ಜೆನೂ ಲಾಜಿಕಲ್ಲಾಗಿ, ಹಂತಹಂತವಾಗಿ ಇಡೋದ್ರಿಂದ ವೃತ್ತಿನಲ್ಲೂ ನಿಭಾಯಿಸಕ್ಕೆ ಸಹಾಯ ಆಗತ್ತೆ.

ತಮ್ಮ ಭಾವನೆಗಳ್ನ ಅಷ್ಟು ಸುಲಭವಾಗಿ ವ್ಯಕ್ತಪಡಿಸಲ್ಲ. ಹಾಗಾಗಿ, ಕೆಲವು ಸೂಕ್ಷ್ಮ ಸಂದರ್ಭಗಳು ಅವರ ಕೈ ಜಾರಿ ಹೋಗತ್ವ್ಗೆ. ಜನರ ,ಮನಸ್ಸಿಗೆ ನೋವುಂಟು ಮಾಡತ್ವೆ.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬ ಬೇಗ, ಸುಲಭವಾಗಿ ನಿರಾಶೆಯಾಗತ್ತೆ. ಯಾಕಂದ್ರೆ ಇವರು ಇನ್ನೊಬ್ರಿಂದ ಸಿಕ್ಕಾಪಟ್ಟೆ ಅಪೇಕ್ಷೆ ಇಟ್ಕೊಂಡಿರ್ತಾರೆ. ಇನ್ನೊಂದ್ ಕಡೆ ಇವ್ರಿಗೆ ಒಂಥರ ಮೊಂಡುತನ ಇರತ್ತೆ. ಏನಂದ್ರೆ, ಬೇರೆಯೋರ್ ಗ್ರಹಚಾರ ಕೆಟ್ಟಿದ್ರೆ, ಅವ್ರ ಜೊತೆ ಮನಸ್ತಾಪ ಬಂದ್ರೆ, ಸಾಯೋತಂಕ ಹಗೆ, ದ್ವೇಷ ಸಾಧಿಸ್ತಾರೆ.

ಇವರನ್ನ ಮಿಸ್ಟರ್ ಅಥ್ವಾ ಮಿಸ್ಟ್ರೆಸ್ ಪರ್ಫೆಕ್ಟ್ ಅನ್ಬೋದು. ತಮ್ಮ ಹಾಗೇ ಬೇರೆಯೋರೂ ಇರ್ಬೇಕು ಅಂತ ಎದುರು ನೋಡ್ತಾರೆ. ಇದೆಲ್ಲದರ ಜೊತೆಗೆ, ಇವರು ತುಂಬಾನೇ ಕ್ರಿಯೇಟಿವ್ ವ್ಯಕ್ತಿ. ಕಾಳಜಿ-ಕನಿಕರ ಇರೋರು ಮತ್ತೆ ಅವಕಾಶ ಸಿಕ್ಕಾಗೆಲ್ಲಾ ಇನ್ನೊಬ್ರುಗೆ ಸಹಾಯ ಮಾಡೋ ಗುಣ ಇರೋರು.

ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರೋರು, ತಾವು ಮಾಡೋ ಎಲ್ಲಾ ಕೆಲ್ಸದಲ್ಲೂ ಬ್ಯಾಲೆನ್ಸ್ ಇರ್ಬೇಕು ಮತ್ತೆ ಕೆಲ್ಸ ಮಾಡೋ ಹಂತದಲ್ಲಿ ಗಟ್ಟಿತನ ಇರ್ಬೇಕು ಅಂತ ಬಯಸ್ತಾರೆ. ಜೊತೆಗೆ ಜೀವನದ ಬಗ್ಗೆ ಒಂದು ಪಾಸಿಟಿವ್ ದೃಷ್ಟಿಕೋನ ಇರತ್ತೆ. ಇವ್ರಿಗೆ ಹೊಡೆದಾಟ, ಜಗಳ ಇವಲ್ಲ ಇಷ್ಟ ಆಗಲ್ಲ. ಸಾಧ್ಯವಾದಷ್ಟೂ ಮಟ್ಟಿಗೆ ತಡಿಯಕ್ಕೆ ನೋಡ್ತಾರೆ.

ಇವ್ರ ಸೋಶಿಯಲ್ ಲೈಫ್ ಸಖತ್ ಚುರುಕಾಗಿರತ್ತೆ ಮತ್ತೆ ಗೆಳೆತನ ಅಂದ್ರೆ ಪ್ರಾಣ ಬಿಡ್ತಾರೆ. ತುಂಬಾ ಆಕರ್ಷಕವಾಗಿರ್ತಾರೆ ಮತ್ತೆ ಮಾತುಗಾರರೂ ಕೂಡ. ಯಾವಾಗ್ಲೂ ಜನರ ಮಧ್ಯ ಇರಕ್ಕೆ ಇಷ್ಟಪಡೋ ಇವ್ರು, ಇಂಡಿಪೆಂಡೆಂಟ್ ವ್ಯಕ್ತಿಗಳು ಕಣ್ರಿ.

ನವಂಬರ್

ನವಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾ ಗುಟ್ಟುಗಳ್ನ ಇಟ್ಕೊಂಡಿರ್ತಾರೆ ಮತ್ತೆ ತಮ್ಮ ನಿಜವಾದ ಭಾವನೆಗಳ್ನ ಬೇರೆಯೋರಿಂದ ಬಚ್ಚಿಡ್ತಾರೆ. ಬೇರೆಯೋರ ಸಲಹೆ, ಮಾರ್ಗದರ್ಶನ ಇಷ್ಟಪಡಲ್ಲ. ತಮ್ಮ ಜೀವನನ ತಾವೇ ಒದ್ದಾದ್ಕೊಂಡಾದ್ರೂ ರೂಪುಸ್ಕೊಳ್ತಾರೆ.

ಇವ್ರಿಗೆ ಈ ಭಯ, ಹೆದರಿಕೆ ಅನ್ನೋದೆಲ್ಲಾ ದೂರ. ಹಾಗಾಗಿ ಎಂಥಾ ಪರಿಸ್ಥಿತಿ ಎದುರಾದ್ರೂ, ಹಿಂದೆ ಮುಂದೆ ಯೋಚನೆ ಮಾಡ್ದೆ ಮೊದ್ಲು ಅದನ್ನ ಪರಿಹಾರಮಾಡಕ್ಕೆ ಹೊರಟುಬಿಡ್ತಾರೆ. ಅದನ್ನ ಸರಿಯಾಗಿ ಅರ್ಥ ಮಾಡ್ಕೊಂಡು ಆಮೇಲೆ ಮುಂದುವರಿಯೋಣ ಅಂತೆಲ್ಲಾ ಇಲ್ವೇ ಇಲ್ಲ. ಪರಿಣಾಮ ಏನಾಗ್ಬೋದು ಅನ್ನೋದ್ರು ಬಗ್ಗೆ ಕಿಂಚಿತ್ತೂ ತಲೆಕೆಡುಸ್ಕೊಳಲ್ಲ.

ಇವರ ಜೀವನದಲ್ಲಿ ಯಾವ್ ಅಡೆತಡೆ ಬಂದ್ರೂ ನಿಲ್ಲಲ್ಲ - ನುಗ್ತಾನೇ ಇರ್ತಾರೆ. ಅವ್ರ ದೊಡ್ದ ಆಸ್ತಿ ಅಂದ್ರೆ ಮೊಂಡು ಧೈರ್ಯ ಮತ್ತೆ ಜೀವನದ ಬಗ್ಗೆ ಇರೋ ಅತಿಯಾದ ಭಾವುಕತೆ.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾನೆ ಸಾಹಸ ಮಾಡೊ ಜನ ಮತ್ತೆ ಉದಾರ ಮನೋಭಾವದೋರು. ಆದ್ರೆ ಕೆಲವುಸಲ ತಮ್ಮ ಪ್ರತಿಷ್ಟೆ, ಅಹಂಕಾರ್ದಿಂದ ಬೇರೆಯೋರ್ ಜೊತೆ ಸಣ್ಣ ಪುಟ್ಟ ಮನಸ್ತಾಪ ಆಗತ್ತೆ. ಇವ್ರು ಯಾವಾಗ್ಲೂ ಹರಿಯೊ ನದಿ ಥರ. ಒಂದೇ ಕಡೆ ಅಥವಾ ಒಂದೇ ಪರಿಸ್ಥಿತೀಲಿ ಜಾಸ್ತಿ ಕಾಲ ಇರಕ್ಕಾಗಲ್ಲ ಇವ್ರ ಕೈಲಿ.

ಸ್ವಲ್ಪ ಸಿಡುಕುತನ ಜಾಸ್ತಿ. ಆದ್ರೆ ಬೇರೆಯೊರಿಗೆ ಸಖತ್ತಾಗಿ ನಗೆಹನಿ ಮಾಡ್ಕೊಂಡು ಟೈಮ್ ಪಾಸ್ ಮಾಡಿಸ್ತಾರೆ. ಅವರ ಉದಾರತೆ ಇದ್ಯಲ್ಲ... ಅದು ಅವರ ಜೀವನದ ಎಲ್ಲಾ ಏರಿಳಿತಗಳ್ನೂ ಪರ್ಫೆಕ್ಟಾಗಿ ಬ್ಯಾಲೆನ್ಸ್ ಮಾಡತ್ತೆ.

ಏನಂತೀರಾ? ನೀವು ಯಾವ ತಿಂಗಳಲ್ಲಿ ಹುಟ್ಟಿದ್ದು? ನಿಮ್ಮ ಸ್ವಭಾವ ನೋಡ್ಕೋಂಡ್ರಾ? ಸರಿ ಇದ್ಯಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: