ಪರೀಕ್ಷೆಗೆ ಓದಿದ್ದೆಲ್ಲಾ ನೆನಪಲ್ಲಿ ಇಟ್ಕೊಳಕ್ಕೆ ಈ 10 ಉಪಾಯ ಮಾಡಿದ್ರೆ ಮತ್ತೆ ಮತ್ತೆ ರಿವಿಶನ್ ಬೇಕಾಗಿಲ್ಲ

ಪರೀಕ್ಷೆ ಭಯ ಕೂಡ ಕಮ್ಮಿ ಆಗತ್ತೆ.

ಎಳ್ನೀರನ್ನ ಗಟ ಗಟ ಅಂತ ಕುಡಿದ್ರೆನೇ ಅದ್ರ ಮಜಾ ಗೊತ್ತಾಗೋದು. ಸ್ಟ್ರಾ ಹಾಕ್ಕೊಂಡ್ರೆ ಎನ್ ಸಿಗತ್ತೆ ಹೇಳಿ. ಚಹಾ ಕಾಫಿನಾ ಉರ್ಬಿ ಉರ್ಬಿ ಕುಡಿದ್ರೆನೇ ಅದ್ರ ಸ್ವಾದ ಗೊತ್ತಾಗೋದು. ಪಾಯ್ಸನ ಸುರ್ ಸುರ್ ಅಂತ ಹೊಟ್ಟೆಗಿಳ್ಸಿದ್ರೆ ಅದ್ರ ಟೇಸ್ಟೇ ಬೇರೆ. ಅದೇ ತರ ಪರೀಕ್ಷೆ ಇಲ್ದೇ ವಿದ್ಯಾರ್ಥಿ ಜೀವ್ನ ಮುಗ್ಸದೋವ್ರೇ ಇಲ್ಲ. ಪರೀಕ್ಷೆನಾ ಎಳ್ನೀರೋ ಚಹಾ ಕಾಫೀನೋ ಇಲ್ಲಾ ಪಾಯ್ಸ ಅಂತ ಅನ್ಕೊಂಡ್ರೆ ಅದ್ರ ಚಂದಾನೇ ಬೇರೆ. ಅದ್ ಬಿಟ್ಟು ಬಡ್ಡೆತದು ಯಾವಾಗ್ ನೋಡಿದ್ರೂ ಬರ್ತಾ ಇರತ್ತೆ ಅಂತ ಬಯ್ಯಕೊಂಡ್ರೆ ಕುಡಿಯೋ ಪಾಯ್ಸ ಕೂಡಾ ವಿಷವಾಗತ್ತೆ ಬಿಡಿ.

1) ಏನು ಕಲ್ತಿದ್ದೀರೋ ಅದ್ನ ಇನ್ನೊಬ್ರಿಗೆ ಹೇಳ್ಕೊಡಿ 

ಎನ್ ಕಲ್ತಿದ್ದೀರೋ ಅದ್ನ ಇನ್ನೊಬ್ರಿಗೆ ಹೇಳ್ಕೊಟ್ಟಾಗ ನಿಮ್ಗೆ ಎನೋ ಒಂಥರದ ಧೈರ್ಯ ಬರತ್ತೆ. ನೀವ್ ಓದಿ ನೀವೇ ಇಟ್ಕೊಂಡ್ರೆ ಎನ್ ಪ್ರಯೋಜನ ಕೆಲ್ವೊಮ್ಮೆ ಮರ್ತೋಗೋ ಸಾಧ್ಯತೆ ಇರತ್ತೆ. ಅದ್ನೇ ಒಂದ್ ನಾಲ್ಕೈದು ಜನ್ರಿಗೆ ಹೇಳ್ಕೊಡಿ ನಿಮ್ಗೆ ನೀವೇ ಆಶ್ಚರ್ಯ ಪಡ್ತೀರಿ…ವಿಷ್ಯಾನ ಎಷ್ಟ್ ಸುಲಭವಾಗಿ ನೆನಪಿಟ್ಕೊಂಡೆ ಅಂತ.

ಇದಲ್ದೇ ನಿಮ್ಗೆ ಗೊತ್ತಾಗತ್ತೆ ಯಾವ್ ಯಾವ್ ರೀತೀ ಬೇರೆ ಬೇರೆ ಜನ್ರಿಗೆ ಅರ್ಥ ಮಾಡ್ಸೋದು ಅಂತ. ಯಾಕಂದ್ರೆ ನೀವ್ ಹೇಳಿದ ತಕ್ಷಣ ಅವ್ರಿಗೆ ಅರ್ಥ ಆಗೋದಿದ್ರೆ ಅವ್ರು ಕಲಿಯಕ್ಕಾಗ್ದೇ ಕಷ್ಟಪಡ್ತಿದ್ರು ಅಲ್ವಾ? ಅದ್ಕೆ ಬೇರೆಯವ್ರಿಗೆ ಹೇಳ್ಕೊಡಿ. 

2) ಏನು ಓದಿದ್ದಿರೋ ಅದ್ನ ಗಟ್ಟಿಯಾಗಿ ಓದಿ 

ಥೂ ಹೋಗಪ್ಪಾ! ಸುಮ್ನೆ ಎಲ್ರಿಗೂ ತೊಂದ್ರೆಯಾಗತ್ತೆ ಅಂದ್ರಾ? ಯಾರಾದ್ರೂ ಇದ್ರೆ ತೊಂದ್ರೆಯಾಗತ್ತೆ, ಯಾರೂ ಇಲ್ದೇ ಇರೋ ಜಾಗದಲ್ಲಿ ಇದ್ನ ಮಾಡಿ. 50% ವಿಷ್ಯ ನಿಮ್ ಮಿದುಳಲ್ಲಿ ಹಾಗೇ ಕೂತಿರತ್ತಂತೆ. 

ಮೂಲ

3) ಮಧ್ಯೆ ಮಧ್ಯೆ ಒಂದು ವಿರಾಮ ತಗೊಳ್ಳಿ 

ಯಾರ್ ತಾನೇ ಮೂರ್ನಾಲ್ಕು ಗಂಟೆ ಒಂದೇ ಸಮ್ನೇ ಓದ್ತಾರೆ ನೀವೇ ಹೇಳಿ. ಓದಿದ್ರೂ ಅಷ್ಟು ವಿಷ್ಯಗಳನ್ನ ಮಿದುಳಲ್ಲಿ ಇಟ್ಕೊಳೋದು ಅಂದ್ರೆ ನಮ್ಮಂತವ್ರಿಗೆ ಒಂಥರಾ ಒತ್ತಡಾನೇ. ಈಗ ಮ್ಯಾರಥಾನ್ ಓಟಾನಾ ತಗೊಳ್ಳಿ. ನೀವ್ ಮೊದ್ಲೇ ಫಾಸ್ಟಾಗಿ ಓಡಿ ದಣಿದ್ರೆ ಗುರಿ ಮುಟ್ಟೋದು ಕಷ್ಟಾನೇ. ಅದ್ಕೆ ಯಾರು ನಿಧಾನವಾಗಿ ಓಡಿರ್ತಾರೋ ಅವ್ರೇ ಕೊನೆಯ ಸಮಯದಲ್ಲಿ ಫಾಸ್ಟಾಗಿ ಓಡಿ ಗುರಿ ಮುಟ್ತಾರೆ. ಅಲ್ಲಿವರೆಗೆ ನಿಮ್ಗೆ ಮಾನಸಿಕವಾಗಿ ಶಕ್ತಿ ಇರ್ಬೇಕು ಆಯ್ತಾ. 

4) ಫೇಸ್ಬುಕ್ ವಾಟ್ಸಪ್ ತಂಟೆಗೆ ಹೋಗೋದು ಕಮ್ಮಿ ಮಾಡಿ

ಯಾವಾಗ ನಾನ್ ಓದ್ಲಿಕ್ಕೆ ಕೂತ್ಕೊಳ್ತೇನೋ ಆವಾಗ್ಲೇ ಒಂದಲ್ಲ ಒಂದು ತೊಂದ್ರೆ ಬರತ್ತೆ. ಸ್ನಾನ ಮಾಡಿ ಓದ್ಬೇಕು ಅನ್ಸೋದು, ತಿಂಡಿ ತಿಂದು ಓದೋಣ ಅನ್ಸೋದು, ಒಂದ್ ಸ್ವಲ್ಪ ಹೊತ್ತು ಗೇಮ್ ಆಡಿ ಇಲ್ಲ ಫೇಸ್ಬುಕ್ , ವಾಟ್ಸಾಪ್ ಮೇಸೇಜ್ನ ನೋಡಿ ಶುರು ಮಾಡೋಣ ಅನ್ಸೋದು ಇನ್ನೂ ಮಾಡ್ತಾ ಹೋಗಿ. ಇದೆಲ್ಲ ನಮ್ಗೆ ತೊಂದ್ರೆ ಕೊಡತ್ತೆ ಅಂತ ಗೊತ್ತಿದ್ರೂ ನಾವ್ ಕಮ್ಮಿ ಮಾಡೋದಂತೂ ಇಲ್ಲ. ಅದ್ಕೆ ಕೋಲ್ಡ್ ಟರ್ಕಿ ಎ ಅನ್ನೋ ಆಪ್ ಇದೆ. ಇದು ಫೇಸ್ಬುಕ್ ಮತ್ತೆ ವಾಟ್ಸ್ ಆಪ್ ಮೇಸೇಜ್ಗಳ ಸೂಚನೆಗಳನ್ನ ತಾತ್ಕಾಲಿಕವಾಗಿ ಕಮ್ಮಿ ಮಾಡತ್ತೆ.  ನಿಮ್ಗೇನಾದ್ರೂ ವಿಷ್ಯಗಳ ಬಗ್ಗೆ ಹುಡುಕಬೇಕಾದ್ರೆ ಗೂಗಲ್ನಲ್ಲೋ ಇಲ್ಲಾ ಇನ್ ಯಾವ್ದಾದ್ರೂ ಸರ್ಚ್ ಇಂಜಿನಲ್ಲೋ ಹುಡ್ಕಿ. ತಂತ್ರಜ್ನಾನವನ್ನ ಸರ್ಯಾಗ್ ಬಳ್ಸಕೊಳ್ಳಿ.  

ಮೂಲ

5) ಮಧ್ಯೆ ಮಧ್ಯೆ ಚಾ ಕಾಫಿನೋ ಕುಡ್ದು ಲವಲವಿಕೆಯಿಂದ ಇರಿ 

ಯಾರ್ಗೆ ತಾನೇ ಅರ್ಧ ಗಂಟೆಗಿಂತ ಜಾಸ್ತಿ ಪುರಾಣ ಕೇಳೋಕೆ ಇಷ್ಟ್ ಇರತ್ತೆ. ಯಾರ್ಗಾದ್ರೂ ಅಷ್ಟೇ ಅರ್ಧ ಗಂಟೆಗಿಂತ ಜಾಸ್ತಿ ಕೂತ್ಕಂಡ್ ಎನಾದ್ರೂ ಕೇಳಿದ್ರೆ ನಿದ್ರೆ ಬರೋದು ಪಕ್ಕಾ. ನಮ್ ಕಡೇ ಯಕ್ಷಗಾನ ಅಗ್ತಾ ಇರೋವಾಗ ನಿದ್ರೆ ಬರ್ಬಾರ್ದು ಅಂತ ಮಧ್ಯ ಮಧ್ಯ ಚಾ ಕಾಫಿ ಸಪ್ಲೈ ಇರತ್ತೆ. ನಿದ್ರೆ ಮಾಡ್ಬೇಡಿ ಕೂತ್ಕಂಡ್ ನೋಡಿಯಂತ. ಹಾಗೇ ನೀವ್ ಓದ್ತಾ ಇರೋವಾಗ ಇಲ್ಲಾ ಪುನರಾವರ್ತನೆ ಮಾಡ್ತಾ ಇರೋವಾಗ ಮನ್ಸು ಕೇಳ್ದಾಗಲೆಲ್ಲ ಚಾ ಕಾಫಿ ಸಿಕ್ರೆ ನೀವ್ ಓದಿದ್ದು ಒದ್ದಾಡಿದ್ದೆಲ್ಲ ನೆನಪಿರತ್ತೆ. ಅಷ್ಟೇ ಯಾಕೆ ಇಡಿ ದಿನ ನೀವ್ ಚುರ್ಕಾಗಿರ್ತೀರಿ.

6) ಪರೀಕ್ಷೆ ಶುರುವಾಗೋ ಮುಂಚೆ 20 ನಿಮಿಷ ಅರಾಮಾಗಿರಿ

ಪರೀಕ್ಷೆಗೆ ಒಂದ ತಿಂಗಳ ಮುಂಚೆ ಇದ್ದಾಗ ಪುಸ್ತಕ ಎಲ್ಲಿದೆಯಂತಾನೇ ಗೊತ್ತಿರೋದಿಲ್ಲ. ಇನ್ನೇನ್ ಸ್ವಲ್ಪ ದಿನ ಇದ್ದಾಗ ಸಿಕ್ಕಿದ್ರೆ ಸಿಕ್ತು ಬಿಟ್ರೆ ಬಿಡ್ತು ಅಷ್ಟೇ. ಇದ್ ನಮ್ ಗುಂಪಿನವ್ರ ಕಥೆ. ನಮ್ಗೆ ವಿರುದ್ದವಾಗಿ ಇನ್ನೊಂದ್ ಗುಂಪಿದೆ.  ಎರಡ್ ತಿಂಗ್ಳ ಮುಂಚೆನೇ ಒದೋಕ್ ಶುರು ಮಾಡದವ್ರು ಪರೀಕ್ಷೆಗೆ ಮೂವತ್ತ್ ಸೆಕೆಂಡ್ ಇದ್ರೂ ಒದ್ತಾನೇ ಇರ್ತಾರೆ. ಎನ್ ಕಡ್ದ್ ಗುಡ್ಡೇ ಹಾಕ್ತಾರೋ ನನಗಂತೂ ಗೊತ್ತಿಲ್ಲ. ನಮ್ಮೆರಡೂ ಗುಂಪನ್ನ ಬಿಟ್ಟು ಇನ್ನೊಂದ್ ಗುಂಪಿದೆ. ಅವ್ರ ಒದಿದ್ದಾರೋ ಇಲ್ವೋ ಅಂತ ಗೊತ್ತೆ ಇರಲ್ಲ. ಪರೀಕ್ಷೆ ಶುರುವಾಗೋ ಮುಂಚೆ 20 ನಿಮಿಷ ಬಿಂದಾಸ್ ಆಗಿ ಇರ್ತಾರೆ. ಇವ್ರೇ ಯಾವ್ ಪರೀಕ್ಷೆಯಲ್ಲೂ ಡುಮ್ಕಿ ಹೊಡಿಯಲ್ಲ. ಹಾಗಂತ ಎಲ್ರೂ ಟಾಪ್ ಬರ್ತಾರೆ ಅಂತಲ್ಲ. ಕೊನೆಯದಾಗ್ ಹೇಳೋದಿಷ್ಟೇ , ಪರೀಕ್ಷೆಗೆ ಮುಂಚೆ ಒಂದತ್ತು ನಿಮಿಷ ನಡೀರಿ.  ನಾವ್ ಒದಿದ್ದು ನೆನಪಿಡ್ಲಿಕ್ಕೆ ತುಂಬಾ ಸಹಾಯಮಾಡತ್ತಂತ ಮಾನಸಿಕ ಶಾಸ್ತ್ರದಲ್ಲಿ ಮುಳ್ಗೋದವ್ರು ಹೇಳಿದ್ದಾರೆ. ಕೆಮ್ಮಂಗಿಲ್ಲ ಸುಮ್ನೆ ಒಪ್ಕೊಳ್ಳಿ.

ಮೂಲ

7) ಪರೀಕ್ಷೆ ಶುರುವಾಗೋ ಮುಂಚೆ ನಿಮ್ ಗುಂಪಲ್ಲಿ ಓದಿದ್ ವಿಷ್ಯದ ಬಗ್ಗೆ ಮಾತಾಡಿ

ನಾವು ಪರೀಕ್ಷೆ ಟೈಮಲ್ಲಿ ಹೇಗೆಗೆಲ್ಲ ಕಾಪಿ ಮಾಡಿದ್ದೀವಿಯಂತ ನೆನಪ್ ಮಾಡ್ಕೊಳ್ಳಿ. ಇಲ್ಲಪ್ಪಾ ನಾವ್ ಮಾಡೇ ಇಲ್ಲ ಅಂತಿದ್ದೀರಾ ? ಒಹೋ ನೀವ್ ಹಾಗನ್ನುವಷ್ಟು ಒಳ್ಳೆಯವ್ರಾ? ಆಯ್ತು ಬಿಡ್ರಿ. 

ಪರೀಕ್ಷೆ ಕೊಠಡಿಯಲ್ಲಿ ಎಯ್ ಸ್ವಲ್ಪ ತಿರ್ಗಿ ನಂಗೂ ತೋರ್ಸು, ಎನ್ ನೀನೊಬ್ನೇ ಪಾಸಾದ್ರೆ ನಾವೇನ್ ಮಾಡೋದು?, ತೋರ್ಸೋ ಅಂತ ಅದೆಷ್ಟ್ ಸಲ ಬಡ್ಕೊಂಡಿದ್ದೇವೆ ಅಲ್ವಾ. ಅವ್ನಂತೂ ತೋರ್ಸಲ್ಲ. ನಿಮ್ಗೆ ಬರೀದೆ ಆಗಲ್ಲ. ಇದ್ರ ಬದ್ಲು ಓದಿದೋರ ಹತ್ರ ಸೇರ್ಕೊಂಡು ಒಂದೊಂದ್ ವಿಷ್ಯದ ಬಗ್ಗೆ ಮಾತಾಡ್ತಾ ಇದ್ರೆ ನೆನಪಲ್ಲಿ ಉಳಿಯೋದು ಪಕ್ಕಾ. ಯಾಕ್ ಸುಮ್ನೆ ಹಲ್ಗಿಂಜ್ಕಂಡ್ ಇನ್ನೊಬ್ರತ್ರ ಉಗ್ಸಕೊಳ್ಬೇಕ್ ಹೇಳಿ?

8) ಒಳ್ಳೆ ಗಾಳಿ ಇರೋ ಸ್ಥಳದಲ್ಲಿ ಕೂತ್ಕಳಿ ಇಲ್ಲಾ ಒಳ್ಳೊಳ್ಳೆ ಸ್ಥಳಕ್ಕೆ ಹೋಗಿ

ಪರೀಕ್ಷೆಯಂತ ಮೂರೊತ್ತು ತಲೆಕೆರ್ಕೊಂಡ್ ಇರ್ಬೇಡಿ. ಇವತ್ ನೀವ್ ತಲೆಕೆರ್ಕೊಂಡ್ ಸಮಯಕ್ಕೆ ಅದೆಷ್ಟೋ ಜನ ಸತ್ತಿದ್ದಾರೆ , ನೀವ್ ಬದ್ಕಿದ್ದೀರಿ ಅಂದ್ರೆ ಖುಷಿಪಡಿ. ಎನೇ ಇದ್ರೂ ನಮ್ ಮನೋರಂಜನೆಗೆ ತೊಂದ್ರೆಯಾಗ್ಬಾರ್ದು. ಪರೀಕ್ಷೆಯಂದ್ರೆ ನಮ್ಗೆಷ್ಟ್ ಗೊತ್ತು ಅಂತ ಅದೇ ನಮ್ ಜೀವಾನ ತೆಗಿಬಾರ್ದು. ಪುನಾರಾವರ್ತನೆ ಮಾಡೋ ಸಮಯದಲ್ಲಿ ಒಳ್ಳೊಳ್ಳೆ ಸ್ಥಳಕ್ಕೆ ಹೋಗಿ ಕೂತ್ಕೊಳ್ಳಿ. ನಿಮ್ಗೆ ಒಂದಿಷ್ಟು ಆರಾಂ ಸಿಗತ್ತೆ. ಜೊತ್ಗೆ ಒದಿದ್ದು ಪುನರಾವರ್ತನೆ ಮಾಡಿದ್ದು ಎಲ್ಲ ನೆನಪಿರತ್ತೆ. 

9) ಊಟ-ತಿಂಡಿ ಸರ್ಯಾದ ಸಮಯಕ್ಕೆ ತೊಗೊಳ್ಳಿ

ತಿನ್ನೋದು ಕುಡ್ಯೋದು ಸರ್ಯಾಗ್ ಸಿಕ್ರೆ ಯಾರ್ಗೆ ತಾನೇ ಖುಷಿಯಾಗಲ್ಲ. ಅದ್ಕೆ ತಾನೇ ನಾವ್ ಇಷ್ಟೆಲ್ಲಾ ಮಾಡೋದು. ಮೂರೊತ್ತು ನಾವ್ ಟೆನ್ಶನ್ ಇಲ್ದೇ ಇರೋವಾಗ್ಲೇ ನಮ್ಗೆ ಕುಡ್ಯೋದು ತಿನ್ನೋದು ಸರ್ಯಾಗ್ ಸಪ್ಲೈ ಆಗ್ಬೇಕು. ಅಂತಹದ್ರಲ್ಲಿ ಪರೀಕ್ಷೆ ಟೈಮಲ್ಲಿ ಸರ್ಯಾಗ್ ಸಿಕ್ಕಿಲ್ಲಾಂದ್ರೆ ನಮ್ ಮಿದ್ಲು ಸರ್ಯಾಗ್ ಕೆಲ್ಸ ಮಾಡಲ್ಲ. ಅದ್ಕೆ ಚೆನ್ನಾಗ್ ತಿಂದು ಮಾನಸಿಕವಾಗಿ ಎಷ್ಟ್ ಶಕ್ತಿ ಬೇಕು ಅಷ್ಟನ್ನ ಆಹಾರದ ಮೂಲಕ ತಗೊಳ್ಳಿ. 

ಮೂಲ

ನೋಡ್ದವ್ರು ಓದಿ ಓದಿ ಮರುಳಾದ ಕೂಚುಭಟ್ಟ ಅನ್ಕೋಬಾರ್ದು. ಓದಿದೆಲ್ಲ ನೆನಪಲ್ಲಿ ಇಟ್ಕೊಳ್ಬೇಕು. ಆವಾಗ್ಲೇ ನೀವ್ ಪ್ರಯೋಜನಕ್ಕೆ ಬರ್ತೀರೀ ಮರ್ರೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೀವು ಯಾವ ತಿಂಗಳಲ್ಲಿ ಹುಟ್ಟಿದೀರಿ ಅನ್ನೋದ್ರಿಂದ ನಿಮ್ಮ ಸ್ವಭಾವದ ಬಗ್ಗೆ ಎಷ್ಟು ಗೊತ್ತಾಗುತ್ತೆ ನೋಡಿ

ಸ್ವಭಾವ ಹಿಂಗೆ ಅಂದ ಮಾತ್ರಕ್ಕೆ ನೀವು ಬದಲಾಯಿಸಿಕೊಳಕ್ಕೆ ಆಗಲ್ಲ ಅಂತ ಅಲ್ಲ

ದಿನಾ ನ್ಯೂಸ್ ಪೇಪರ್ ಮನೆಗ್ ಬಂದ್ ತಕ್ಷಣ, ದಿನ ಭವಿಷ್ಯ, ವಾರಭವಿಷ್ಯ ನೋಡೋರ್ ಪೈಕಿ ನೀವೂನಾ? ಇವತ್ತಿನ್ ದಿನ ಹೇಗಿರತ್ತಪ್ಪ? ಏನೇನ್ ಗಂಡಾಂತರ ಕಾದಿದ್ಯೋ ಏನೋ ಅಂತ ಸ್ವಲ್ಪ ಕುತೂಹಲ ಸ್ವಲ್ಪ ಆತಂಕದಿಂದ ಓದ್ತೀರ? ಬರೀ ರಾಶಿ ಮಾತ್ರ ಅಲ್ಲ ಕಣ್ರಿ, ನೀವ್ ಯಾವ್ ತಿಂಗಳಲ್ಲಿ ಹುಟ್ಟಿದಿರ ಅನ್ನೋದ್ರು ಮೇಲೂ ನಿಮ್ ವ್ಯಕ್ತಿತ್ವ, ಗುಣ ಇನ್ನೂ ಸಾಕಷ್ಟು ವಿಷ್ಯಗಳ್ನ ಹೇಳ್ಬೋದು.

ನಿಜವಾಗ್ಲೂ ಗೊತ್ತಾ, ಹುಟ್ಟಿದ್ ತಿಂಗಳ ಆಧಾರ ಇಟ್ಕೊಂಡು ನಿಮ್ ಒಟ್ಟಾರೆ ನಡವಳಿಕೆ, ಸ್ವಭಾವ, ಬೇರೆಯೋರು ನಿಮ್ಮನ್ನ ಹೇಗ್ ನೋಡ್ತಾರೆ, ಜೀವನದ್ ಬಗ್ಗೆ ನಿಮ್ಗಿರೋ ಆಲೋಚನೆ, ಭಾವನೆಗಳು ಇದೆಲ್ಲಾನೂ ಹೀಗ್ ಹೀಗೆ ಅಂತ ಹೇಳ್ಬೋದು. ಹೇಗಪ್ಪ ಇದು ಅಂತಿರ? ನಿಮ್ ಗುಣ ಲಕ್ಷಣಗಳು, ನೀವ್ ಹುಟ್ಟಿದ್ ತಿಂಗಳಲ್ಲಿ, ನಕ್ಷತ್ರಗಳು ಯಾವ್ ಯಾವ್ ಸ್ಥಾನ್ದಲ್ಲಿ ಇದ್ವು, ಯಾವ್ ಆಕಾರ್ದಲ್ಲಿ ಇದ್ವು ಅಂತ ಲೆಕ್ಕ ಹಾಕಿ ಹೇಳ್ತಾರಂತೆ.

ಯಾವ್ ತಿಂಗಳಲ್ಲಿ ಹುಟ್ಟಿದ್ರೆ, ಎಂಥಾ ಸ್ವಭಾವ, ವ್ಯಕ್ತಿತ್ವ ಇರತ್ತೆ ಅಂತ ಇಲ್ಲಿ ಕೊಟ್ಟಿದ್ದೀವಿ. ಓದಿ...ನಿಮ್ಮ ಸ್ವಭಾವಕ್ಕೆ ತಾಳೆ ಮಾಡಿ ನಮಗೂ ಹೇಳಿ...

ಜನವರೀಲಿ ಹುಟ್ಟಿರೋರು

ಕೆಲ್ಸದ್ ವಿಷ್ಯದಲ್ಲಿ ತುಂಬಾನೇ ಕಟ್ಟುನಿಟ್ಟಾಗಿರ್ತಾರೆ ಹಾಗೆನೇ ತಮ್ಮ ಅಭಿಪ್ರಾಯವನ್ನ ನಾಲಕ್ ಜನರ ಮುಂದೆ ಹೇಳಕ್ಕೆ ಯಾವ್ ಮುಲಾಜೂ ನೋಡಲ್ಲ. ಇವ್ರಲ್ಲಿ ಹಠಮಾರಿತನ ಮತ್ತೆ ಮೊಂಡುತನ ಸ್ವಲ್ಪ ಜಾಸ್ತಿ ಇರತ್ತೆ. ಜೊತೆಗೆ, ಯಾರಾದ್ರು ಹೀಗಲ್ಲ ಹಾಗೆ ಅಂತ ಹೇಳಕ್ ಬಂದ್ರೆ ಅದನ್ನ ಒಪ್ಕೊಳೋದು ಇವ್ರ ಜಾಯಮಾನ್ದಲ್ಲೇ ಇಲ್ಲ ಕಣ್ರಿ.

ಜನವರೀಲಿ ಹುಟ್ದೋರು ಒಳ್ಳೆ ಲೀಡರ್ ಆಗೋದ್ರಲ್ಲಿ ಅನುಮಾನಾನೇ ಇಲ್ಲ. ಇವ್ರಲ್ಲಿರೋ ಛಲ ಸದಾ ಯಶಸ್ಸಿನ ಕಡೆಗೇ ಕರ್ಕೊಂಡ್ ಹೋಗತ್ತೆ ಅನ್ನೋದ್ ನಿಜ. ಆದ್ರೆ ಜೊತೆಲಿರೋರ್ ಮಾತು ಕೇಳೋದ್ ಕಮ್ಮಿ.

ಇವ್ರಲ್ಲಿರೊ ಇನ್ನೊಂದು ಅದ್ಭುತವಾದ ಗುಣ ಅಂದ್ರೆ...ತಮ್ಗೆ ಗೊತ್ತಿರೋ ವಿಷ್ಯಗಳ್ನ ಇನ್ನೊಬ್ರುಗೆ ಅರ್ಥವಾಗೋ ಹಾಗೆ ಹೇಳ್ಕೊಡ್ತಾರೆ. ಅಷ್ಟೇ ಅಲ್ಲ, ಕಲಿಯೋರೂ ಕೂಡ ತುಂಬಾ ಸುಲಭವಾಗಿ, ಆಸಕ್ತಿಯಿಂದ ಇವರು ಹೇಳೋದನ್ನ ಕೇಳ್ತಾರೆ. ಇಷ್ಟಪಟ್ಟು ಕಲಿತಾರೆ.

ಫೆಬ್ರುವರಿ

ಫೆಬ್ರುವರಿ ತಿಂಗಳಲ್ಲಿ ಹುಟ್ಟಿರೋರ್ಗೆ ಕಲಾರೇಖೆ ಉದ್ದವಾಗಿರತ್ತೆ ಅನ್ಸತ್ತೆ ಕಣ್ರಿ. ಸಖತ್ ಕ್ರಿಯೇಟಿವ್ ಆಗಿರ್ತಾರೆ ಮತ್ತೆ ಹೊಸ ಹೊಸ ಕೆಲ್ಸ ಮಾಡಕ್ಕೆ ಇಷ್ಟ ಪಡ್ತಾರೆ. ಇವ್ರಿಗೆ ಬುದ್ಧಿವಂತರ ಜೊತೆ ಚರ್ಚೆ ಮಾಡೋದು, ವಿಚಾರಗಳ್ನ ಹಂಚ್ಕೊಳದು ಅಂದ್ರೆ ಉತ್ಸಾಹ ಇರತ್ತೆ. ಅದೇ ಬುದ್ಧಿವಂತಿಕೇಲಿ ತಮಗಿಂತ ಚೂರು ಕಮ್ಮಿ ಮಟ್ಟದಲ್ಲಿರೋರ್ನ ಹತ್ರನೂ ಸೇರ್ಸಲ್ಲ.

ಇವ್ರನ್ನ ಜನ ಫ್ರೀಬರ್ಡ್ ಅಂತ ಕರೀತಾರೆ. ಯಾಕಂದ್ರೆ ಸಮಾಜದ ಕಟ್ಟುಪಾಡುಗಳು, ರೂಲ್ಸು ಇದೆಲ್ಲ ಇವ್ರಿಗೆ ಆಗ್ಬರಲ್ಲ. ಯಾವಾಗ್ಲೂ ಬಿಂದಾಸಾಗಿ ತಮಗೆ ಇಷ್ಟ ಬಂದಂಗೆ ಇರಕ್ಕೆ ನೋಡ್ತಾರೆ. ಸಮಯ ಸಿಕ್ಕಾಗೆಲ್ಲಾ ವಿಮಾನ, ರೈಲು ಹತ್ಕೊಂಡು ಊರೂರ್ ಸುತ್ತೋದು ಅಂದ್ರೆ ಭಾರಿ ಪ್ರೀತಿ. ಸಾಹಸ ಮಾಡೋದು ಮತ್ತೆ ಸುತ್ತಾಮುತ್ತ ಇರೋ ಜಾಗಗಳು, ವಿಷ್ಯಗಳ್ನ ಇನ್ನೂ ಹೆಚ್ಚು ಹೆಚ್ಚು ತಿಳ್ಕೊಳಕ್ಕೆ ಕಾಯ್ತಾನೇ ಇರ್ತಾರೆ. ಇದೇ ಇವ್ರನ್ನ ಲವಲವಿಕೆಯಿಂದ ಇಡೋದು. ಹಾಗೆನೇ ಇವರ ಥರಾನೇ ಫುಲ್ಲು ಬಿಂದಾಸಾಗಿ, ಇಂಡಿಪೆಂಡೆಂಟಾಗಿ ಇರೋರ್ ಜೊತೆ ಸಖತ್ ಮಜ ಮಾಡ್ತಾರೆ, ಚೆನ್ನಾಗಿ ಕಾಲ ಕಳಿತಾರೆ.

ಇವರದ್ದು ಇನ್ನೊಂದು ಒಳ್ಳೆ ಅಂಶ ಅಂದ್ರೆ...ಗೆಳೆತನದ ವಿಷ್ಯ ಆಗ್ಲಿ ಸಂಗಾತಿ ವಿಷ್ಯ ಆಗ್ಲಿ ತುಂಬಾನೇ ನಿಯತ್ತಾಗಿರ್ತಾರೆ :-)

ಮಾರ್ಚ್

ಮಾರ್ಚ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬಾ ಕಲ್ಪನಾಶಕ್ತಿ (ಕ್ರಿಯೇಟಿವಿಟಿ) ಇರತ್ತೆ. ಆದ್ರೆ ಜಾಸ್ತಿ ಸಮಯ ಇವರು ಮೌನವಾಗಿರಕ್ಕೆ ಮತ್ತೆ ತಮ್ಮ ಆತ್ಮಾವಲೋಕನ ಮಾಡ್ಕೊಳಕ್ಕೆ ಇಷ್ಟ ಪಡ್ತಾರೆ. ಇವರು ಇನ್ನೊಬ್ರು ಜೊತೆ ವಿಷ್ಯಗಳ್ನ ಹಂಚ್ಕೊಳೊದಿಕ್ಕಿಂತ ತಮ್ಮೊಳಗೇ ಯೋಚನೆ ಮಾಡಿ ತಲೆ ಒಳಗೇ ಮಾಸ್ಟರ್ ಪೀಸ್ಗಳ್ನ ಸೃಷ್ಟಿ ಮಾಡ್ತಾರೆ ಕಣ್ರಿ. ತಮ್ಮ ಭಾವನೆಗಳ್ನ/ಅನಿಸಿಕೆಗಳ್ನ ಹೇಳ್ಕೊಳಕ್ಕೋಸ್ಕರ ಅವರಿಗೆ ಸಾಥ್ ಬೇಕಿರತ್ತೆ. ಅದನ್ನ ಕಲೆ ತುಂಬಿಸತ್ತೆ. ತಾವಿಷ್ಟ ಪಡೋ ಕಲೆ ಮೂಲಕ ಎಲ್ಲಾನೂ ಎಕ್ಸ್ಪ್ರೆಸ್ ಮಾಡ್ತಾರೆ. ಹಾಗೆನೆ ಒಳಗೊಳಗೇ ಸಿಗೋ ಏಕಾಂತವನ್ನಾ ಮನಸಾರೆ ಅನುಭವಿಸ್ತಾರೆ.

ಬೇರೆಯೋರ ಜೊತೆ ಇವರ ಸಂಬಂಧ ಚೆನ್ನಾಗಿರತ್ತೆ. ತುಂಬಾ ನಯವಾಗಿ, ಕಾಳಜಿಯಿಂದ ನಡ್ಕೊತಾರೆ ಆದ್ರೆ ತಮ್ ಬಗ್ಗೆ ಮಾತ್ರ ಜಾಸ್ತಿ ವಿಷ್ಯ ಬಿಟ್ಕೊಡಲ್ಲ. ಮುಚ್ಚಿಟ್ಕೊಳಕ್ಕೆ ನೋಡ್ತಾರೆ. ಈ ಮಾರ್ಚಲ್ಲಿ ಹುಟ್ಟಿರೋರ್ ಬಗ್ಗೆ ಇನ್ನೊಂದ್ ಮುಖ್ಯವಾದ್ ವಿಷ್ಯ ಅಂದ್ರೆ ಇವರು ಯಾವಾಗ್ಲೂ ನಿಶ್ಯಬ್ಧವಾದ, ಪ್ರಶಾಂತವಾದ ವಾತಾವರಣ ಹುಡುಕ್ಕೊಂಡ್ ಹೋಗ್ತಾರೆ. ಜನರ ಜಾತ್ರೆಯಿಂದ, ಗಲಾಟೆಯಿಂದ ದೂರ ಇರಕ್ಕೆ ಇಷ್ಟ ಪಡ್ತಾರೆ.

ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಹುಟ್ಟಿರೋರು ಯಾವಾಗ್ಲೂ ಬೇರೆಯೋರು ತಮ್ಮನ್ನ ಗಮನಿಸ್ತಿರ್ಲಿ ಅಂತ ಹಾತೊರಿತಿರ್ತಾರೆ ಜೊತೆಗೆ ಎಲ್ರೂ ತಮ್ಮ ಬಗ್ಗೆನೇ ಮಾತಾಡ್ಬೇಕು, ಹೊಗಳಬೇಕು - ಒಟ್ನಲ್ಲಿ ಸಖತ್ ಪ್ರಚಾರ ಸಿಗ್ಬೇಕು ಅಂತ ಆಸೆ ಪಡ್ತಾರೆ. ಇವ್ರಿಗೆ ಇನ್ನೊಬ್ರು ಹಾಗ್ ಮಾಡು ಹೀಗ್ ಮಾಡು ಅಂತ ಮೂಗ್ ತೂರ್ಸೋದು ಇಷ್ಟ ಆಗಲ್ಲ. ಬದಲಿಗೆ ತಮ್ಮದೇ ರೀತೀಲಿ ಕೆಲ್ಸಕಾರ್ಯನ ಮಾಡ್ತಾರೆ, ಬೇರೆಯೋರ್ನೂ ಆ ದಾರಿಲೇ ನಡೆಸ್ತಾರೆ.

ಯಾವಾಗ್ಲೂ ಹೊಸ ಹೊಸ ಸಾಹಸಗಳ್ನ ಮಾಡಕ್ಕೆ ಅವಕಾಶ ಸಿಗತ್ತಾ? ಅಂತ ನೋಡ್ತಿರ್ತಾರೆ ಮತ್ತೆ ಎಲ್ಲಾನು ಚಿಟಿಕೆ ಹೊಡಿಯೋದ್ರಲ್ಲಿ ಮಾಡ್ಬೇಕು, ಬಯಸಿದ ತಕ್ಷಣ ಸಿಗ್ಬೇಕು ಅನ್ನೋ ಆತುರದಲ್ಲಿರ್ತಾರೆ. ಯಾವ್ದೇ ವಿಷ್ಯಕ್ಕಾಗ್ಲೀ ಮೊದ್ಲು ಮನಸ್ಸಿಗೆ ಬಂದ ಹಾಗೆ ನಡ್ಕೊತಾರೆ. ಭವಿಷ್ಯದ ಬಗ್ಗೆ ತಲೆ ಕೆಡುಸ್ಕೊಳಲ್ಲ. 'ನೆನ್ನೆ ನೆನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ' ಹಾಡು ಇವ್ರಿಗೆ ಹೇಳಿ ಮಾಡಿಸ್ದಂಗಿದೆ ಕಣ್ರಿ. ಜೀವ್ನ ಹೇಗ್ ಬರತ್ತೋ ಹಾಗ್ ತೊಗೊಂಡ್ ಹೋಗ್ತಿರ್ತಾರೆ.

ಕೆಲ ಸಲ ಇವರು ಜಗಳಗಂಟ್ರು ಥರ, ಜಿಗುಪ್ಸೆ ಬರೋ ಥರ ಮಾತಾಡ್ತಾರೆ ಅನ್ನೋ ಅಪವಾದ ಹೊತ್ಕೊಬೇಕಾಗತ್ತೆ. ಆದ್ರೆ ಅವರು ಆಡೋ ಮಾತ್ಗಳು ಮನಸ್ಸಿಂದ ಬಂದಿರತ್ತೆ. ಯಾವ್ದೂ ಬೇಕೂಂತ ಆಡೋದಲ್ಲ. ಜೊತೆಗೆ ತಮ್ಗೆ ಏನನ್ಸತ್ತೆ ಅಂತ ಬೇರೆಯೋರಿಗೆ ಹೇಳಕ್ಕೆ ಹಿಂದೆ ಮುಂದೆ ನೋಡಲ್ಲ. ಒಂಥರ ತಮ್ ವಿಷ್ಯದಲ್ಲಿ ಫಿಲ್ಟರ್ ಇರಲ್ಲ. ಬೇಜಾರಾಗಿದ್ರೆ ಮುಲಾಜಿಲ್ದೇ ಹೇಳ್ಕೊತಾರೆ.

ಮೇ

ಮೇ ತಿಂಗಳಲ್ಲಿ ಹುಟ್ತಿರೋರು ತುಂಬಾನೇ ಚಂಚಲ ಮನಸ್ಸಿನೋರು. ಇವತ್ತು ಒಂದ್ ಬೇಕು ಅಂದ್ರೆ, ನಾಳೆ ಇನ್ನೇನೋ ಬೇಕು ಅಂತಾರೆ. ಇವ್ರು ತಮ್ ಭಾವನೆಗಳ್ನ ಚೆನ್ನಾಗಿ ಎಕ್ಸ್ಪ್ರೆಸ್ ಮಾಡ್ತಾರೆ ಮತ್ತೆ ಜೀವನದ ಬೇರೆ ಬೇರೆ ಹಿನ್ನೆಲೆ, ಹಂತದಲ್ಲಿರೋರ್ ಹತ್ರ ಮಾತಾಡಕ್ಕೆ ಇಷ್ಟ ಪಡ್ತಾರೆ. ಒಂಟಿಯಾಗಿರಕ್ಕೆ ಸುತಾರಾಮ್ ಆಗಲ್ಲ ಇವ್ರ ಕೈಲಿ. ಯಾವಾಗ್ಲೂ ಸೋಶಿಯಲ್ ಲೈಫಲ್ಲಿ ಚುರುಕಾಗಿರ್ತಾರೆ.

ಇವರು ಉತ್ತೇಜನ ಕೊಡೋವಂಥ, ಬುದ್ಧಿವಂತಿಕೆ ಇರೋವಂಥ ಮಾತುಕತೆಗಳಲ್ಲಿ ಭಾಗಿಯಾಗಕ್ಕೆ ಇಷ್ಟಪಡ್ತಾರೆ. ಆದ್ರೆ ಅಂಥಾ ಮಾತುಕಥೆ ಬೋರ್ ಹೊಡುಸ್ಬಾರ್ದು. ಬದಲಿಗೆ ತುಂಬಾ ಮೋಜು ಮಸ್ತಿ ಉತ್ಸಾಹದಿಂದ ಇರ್ಬೇಕು. ಆಗ ಖುಷಿಯಿಂದ ಆ ಗುಂಪಲ್ಲಿ ಸೆರ್ಕೊತಾರೆ.

ತುಂಬಾ ಬೇಗ ಬೋರ್ ಆಗ್ಬಿಡ್ತಾರೆ. ಒಂದ್ ವಿಷ್ಯ ಜಾಸ್ತಿ ಹೊತ್ತು ಇವ್ರನ್ನ ಹಿಡಿದು ಇಡಕ್ಕಾಗಲ್ಲ, ಆಕರ್ಷಿಸಕ್ಕೆ ಸಾಧ್ಯಯಿಲ್ಲ. ಹಾಗಾಗಿ ತಮ್ಮನ್ನ ತಾವು ಖುಷಿಯಾಗಿಟ್ಕೊಳಕ್ಕೆ, ಮಜಾ ಮಾಡಕ್ಕೆ ಸದಾ ಹೊಸ ಹೊಸ ಉಪಾಯಗಳ್ನ ಹುಡುಕ್ತಾನೆ ಇರ್ತಾರೆ.

ಜೂನ್

ಜೂನ್ ತಿಂಗಳಲ್ಲಿ ಹುಟ್ಟಿರೋರು ಇನ್ನೊಬ್ರು ಭಾವನೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿರ್ತಾರೆ. ಹಾಗೆನೆ ಬೇರೆಯೋರ್ನ ಕಾಳಜಿ ಮಾಡೋ ಗುಣ ಇದೆ. ಸಖತ್ ಸಂಕೋಚದ ಸ್ವಭಾವ್ದೋರು ಮತ್ತೆ ಮೆತ್ತಗೆ ಮಾತಾಡೊರು. ಇವ್ರ ಆ ಸ್ವಭಾವನೇ ಜನ ಮೆಚ್ಕೊಳ್ಳೊದು.

ತುಂಬಾನೇ ಕ್ರಿಯೇಟಿವಾಗಿರೋ ಇವರು ಭವಿಷ್ಯದ್ ಬಗ್ಗೆ ದೂರದೃಷ್ಟಿ ಇಟ್ಕೊಂಡಿರ್ತಾರೆ. ಹೊಸ ಹೊಸ ಆಲೋಚನೆಗಳ್ನ ಹೇಗೆಲ್ಲಾ ಸೃಷ್ಟಿಮಾಡ್ಬೋದು? ತಮ್ಮ ಐಡಿಯಾಗಳ್ನ ಹೇಗೆಲ್ಲಾ ಕಾರ್ಯರೂಪಕ್ಕೆ ತರ್ಬೋದು? ಅನ್ನೋದ್ರ ಬಗ್ಗೆ ಪ್ಲ್ಯಾನ್ ಮಾಡ್ತಿರ್ತಾರೆ.

ಇವರು ತಮ್ಮ ಭಾವನೆಗಳ್ನ, ತಮ್ಗೆ ಅನ್ಸಿದ್ದನ್ನ ಅಷ್ಟು ಸುಲಭವಾಗಿ ಹೊರಗೆ ಹೇಳ್ಕೊಳಲ್ಲ ಆದ್ರೆ ಮನಸ್ಸಿನ ಒಳಗೆ ತಮ್ಮದೇ ಒಂದ್ ಪ್ರಪಂಚ ಕಟ್ಕೊಂಡಿರ್ತಾರೆ. ಅದನ್ನ ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳೊದು ಅಂತ ಮಾತ್ರ ಗೊತ್ತಾಗದೆ ಒದ್ದಾಡ್ತಾರೆ.

ಜುಲೈ

ಇವರು ತುಂಬಾ ಬಹಿರ್ಮುಖಿಗಳು ಅಂದ್ರೆ ಮನಸ್ಸಿಗೆ ಏನೇ ಬಂದ್ರೂ ಅದು ಹೊರಗೇ ಬಂದೇ ಬರತ್ತೆ. ಒಂಥರ ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇರಲ್ಲ. ಜೊತೆಗೆ ಪಾದರಸದ ಥರ. ಯಾವ್ದಾದ್ರು ಕೆಲ್ಸ ಮಾಡ್ಬೇಕು ಅಂದ್ರೆ ಯಾವ್ ಕಾರಣನೂ ಬೇಡ, ಯಾರ್ ಪ್ರೇರಣೆನೂ ಬೇಡ. ಸಾಹಸ ಮಾಡೋದು ಸಖತ್ ಇಷ್ಟ ಆಗತ್ತೆ ಹಾಗೆನೇ ಚೆನ್ನಾಗಿ, ಒಳ್ಳೆ ರೀತಿಲಿ ಕಾಲ ಕಳಿಯಕ್ಕೆ ಇಷ್ಟಪಡ್ತಾರೆ.

ಹೊರಗಿಂದ ನೋಡೋರ್ಗೆ ಇವರು ತುಂಬಾ ಆತ್ಮವಿಶ್ವಾಸದಿಂದ ನಗುನಗ್ತಾ ಇರೋಹಾಗ್ ಕಾಣ್ಸಿದ್ರೂ, ಒಳಗೆ ದೊಡ್ಡ ಮಟ್ಟದಲ್ಲೇ ನೋವು, ದುಃಖ ಮತ್ತೆ ಕರಾಳವಾದ ಸತ್ಯ ಬಚ್ಚಿಟ್ಕೊಂಡಿರ್ತಾರೆ.

ಇನ್ನು ಜುಲೈನಲ್ಲಿ ಹುಟ್ಟಿರೋರ್ಗೆ ಎನರ್ಜಿ ಸಖತ್ತಾಗಿರತ್ತೆ. ಈ ಕಾರಣಕ್ಕೇ ಬೇರೆಯೋರು ಇವ್ರ ಜೊತೆ ಸುತ್ತಾಡಕ್ಕೆ, ತಿರುಗಾಡಕ್ಕೆ ಕಾಯ್ತಿರ್ತಾರೆ.

ಆಗಸ್ಟ್

ಆಗಸ್ಟ ಅಂದ ತಕ್ಷಣ, ಇವ್ರು ಹುಟ್ತಾನೇ ಲೀಡರ್ ಆಗೋ ಎಲ್ಲಾ ಗುಣ ಪಡ್ಕೊಂಡ್ ಬಂದಿರ್ತಾರೆ. ತಮ್ ಅಭಿಪ್ರಾಯಗಳ್ಗೆ ಅದೆಷ್ಟೇ ಕಷ್ಟ ಆದ್ರೂ ಭಯ ಪಡ್ದೇ ಅಂಟುಕೊಂಡಿರ್ತಾರೆ. ಬಿಟ್ಕೊಡಲ್ಲ. ಇವ್ರು ತುಂಬಾ ಬಾಸಿಸಮ್ ಮಾಡ್ತಾರೆ, ತಮ್ ಅಭಿಪ್ರಾಯಗಳ್ನ ಇನ್ನೊಬ್ರು ಮೇಲೂ ಹೇರ್ತಾರೆ ಅನ್ನಿಸ್ಬೋದು ಆದ್ರೆ ಸಿಕ್ಕಾಪಟ್ಟೆ ದೊಡ್ಡಮನಸ್ಸಿನೋರು ಕಣ್ರಿ ಇವ್ರು.

ಇನ್ನು ಎಲ್ಲಾ ವಿಷ್ಯಕ್ಕೂ ತುಂಬಾನೇ ಯೋಚನೆ ಮಾಡೊ ಇವ್ರು, ಸ್ವಲ್ಪ ಏಮಾರಿದ್ರೂ ತಮ್ಮ ಗಟ್ಟಿಯಾಗಿರೋ ಶಿಸ್ತಿನಿಂದ ನಡ್ಕೊಂಡ್ ಬರ್ತಿರೋ ಜೀವನನ ಕಗ್ಗಂಟು ಮಾಡ್ಕೊತಾರೆ. ತಮ್ಮ ವೃತ್ತಿಜೀವನದಲ್ಲಿ ಸುಖವಾಗಿ ಮೇಲೆ ಬರ್ತಾರೆ. ಯಾಕಂದ್ರೆ ಅವ್ರು ಮಾಡೋ ಕೆಲ್ಸದಲ್ಲಿ ಲಾಭ-ನಷ್ಟಗಳನ್ನ ಯೋಚೆನೆ ಮಾಡಿನೇ ಮುಂದುವರೆಯೋದು. ಜೀವನ್ದಲ್ಲೂ ಇವ್ರು ಇಡೋ ಒಂದೊಂದು ಹೆಜ್ಜೆನೂ ಲಾಜಿಕಲ್ಲಾಗಿ, ಹಂತಹಂತವಾಗಿ ಇಡೋದ್ರಿಂದ ವೃತ್ತಿನಲ್ಲೂ ನಿಭಾಯಿಸಕ್ಕೆ ಸಹಾಯ ಆಗತ್ತೆ.

ತಮ್ಮ ಭಾವನೆಗಳ್ನ ಅಷ್ಟು ಸುಲಭವಾಗಿ ವ್ಯಕ್ತಪಡಿಸಲ್ಲ. ಹಾಗಾಗಿ, ಕೆಲವು ಸೂಕ್ಷ್ಮ ಸಂದರ್ಭಗಳು ಅವರ ಕೈ ಜಾರಿ ಹೋಗತ್ವ್ಗೆ. ಜನರ ,ಮನಸ್ಸಿಗೆ ನೋವುಂಟು ಮಾಡತ್ವೆ.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬ ಬೇಗ, ಸುಲಭವಾಗಿ ನಿರಾಶೆಯಾಗತ್ತೆ. ಯಾಕಂದ್ರೆ ಇವರು ಇನ್ನೊಬ್ರಿಂದ ಸಿಕ್ಕಾಪಟ್ಟೆ ಅಪೇಕ್ಷೆ ಇಟ್ಕೊಂಡಿರ್ತಾರೆ. ಇನ್ನೊಂದ್ ಕಡೆ ಇವ್ರಿಗೆ ಒಂಥರ ಮೊಂಡುತನ ಇರತ್ತೆ. ಏನಂದ್ರೆ, ಬೇರೆಯೋರ್ ಗ್ರಹಚಾರ ಕೆಟ್ಟಿದ್ರೆ, ಅವ್ರ ಜೊತೆ ಮನಸ್ತಾಪ ಬಂದ್ರೆ, ಸಾಯೋತಂಕ ಹಗೆ, ದ್ವೇಷ ಸಾಧಿಸ್ತಾರೆ.

ಇವರನ್ನ ಮಿಸ್ಟರ್ ಅಥ್ವಾ ಮಿಸ್ಟ್ರೆಸ್ ಪರ್ಫೆಕ್ಟ್ ಅನ್ಬೋದು. ತಮ್ಮ ಹಾಗೇ ಬೇರೆಯೋರೂ ಇರ್ಬೇಕು ಅಂತ ಎದುರು ನೋಡ್ತಾರೆ. ಇದೆಲ್ಲದರ ಜೊತೆಗೆ, ಇವರು ತುಂಬಾನೇ ಕ್ರಿಯೇಟಿವ್ ವ್ಯಕ್ತಿ. ಕಾಳಜಿ-ಕನಿಕರ ಇರೋರು ಮತ್ತೆ ಅವಕಾಶ ಸಿಕ್ಕಾಗೆಲ್ಲಾ ಇನ್ನೊಬ್ರುಗೆ ಸಹಾಯ ಮಾಡೋ ಗುಣ ಇರೋರು.

ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರೋರು, ತಾವು ಮಾಡೋ ಎಲ್ಲಾ ಕೆಲ್ಸದಲ್ಲೂ ಬ್ಯಾಲೆನ್ಸ್ ಇರ್ಬೇಕು ಮತ್ತೆ ಕೆಲ್ಸ ಮಾಡೋ ಹಂತದಲ್ಲಿ ಗಟ್ಟಿತನ ಇರ್ಬೇಕು ಅಂತ ಬಯಸ್ತಾರೆ. ಜೊತೆಗೆ ಜೀವನದ ಬಗ್ಗೆ ಒಂದು ಪಾಸಿಟಿವ್ ದೃಷ್ಟಿಕೋನ ಇರತ್ತೆ. ಇವ್ರಿಗೆ ಹೊಡೆದಾಟ, ಜಗಳ ಇವಲ್ಲ ಇಷ್ಟ ಆಗಲ್ಲ. ಸಾಧ್ಯವಾದಷ್ಟೂ ಮಟ್ಟಿಗೆ ತಡಿಯಕ್ಕೆ ನೋಡ್ತಾರೆ.

ಇವ್ರ ಸೋಶಿಯಲ್ ಲೈಫ್ ಸಖತ್ ಚುರುಕಾಗಿರತ್ತೆ ಮತ್ತೆ ಗೆಳೆತನ ಅಂದ್ರೆ ಪ್ರಾಣ ಬಿಡ್ತಾರೆ. ತುಂಬಾ ಆಕರ್ಷಕವಾಗಿರ್ತಾರೆ ಮತ್ತೆ ಮಾತುಗಾರರೂ ಕೂಡ. ಯಾವಾಗ್ಲೂ ಜನರ ಮಧ್ಯ ಇರಕ್ಕೆ ಇಷ್ಟಪಡೋ ಇವ್ರು, ಇಂಡಿಪೆಂಡೆಂಟ್ ವ್ಯಕ್ತಿಗಳು ಕಣ್ರಿ.

ನವಂಬರ್

ನವಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾ ಗುಟ್ಟುಗಳ್ನ ಇಟ್ಕೊಂಡಿರ್ತಾರೆ ಮತ್ತೆ ತಮ್ಮ ನಿಜವಾದ ಭಾವನೆಗಳ್ನ ಬೇರೆಯೋರಿಂದ ಬಚ್ಚಿಡ್ತಾರೆ. ಬೇರೆಯೋರ ಸಲಹೆ, ಮಾರ್ಗದರ್ಶನ ಇಷ್ಟಪಡಲ್ಲ. ತಮ್ಮ ಜೀವನನ ತಾವೇ ಒದ್ದಾದ್ಕೊಂಡಾದ್ರೂ ರೂಪುಸ್ಕೊಳ್ತಾರೆ.

ಇವ್ರಿಗೆ ಈ ಭಯ, ಹೆದರಿಕೆ ಅನ್ನೋದೆಲ್ಲಾ ದೂರ. ಹಾಗಾಗಿ ಎಂಥಾ ಪರಿಸ್ಥಿತಿ ಎದುರಾದ್ರೂ, ಹಿಂದೆ ಮುಂದೆ ಯೋಚನೆ ಮಾಡ್ದೆ ಮೊದ್ಲು ಅದನ್ನ ಪರಿಹಾರಮಾಡಕ್ಕೆ ಹೊರಟುಬಿಡ್ತಾರೆ. ಅದನ್ನ ಸರಿಯಾಗಿ ಅರ್ಥ ಮಾಡ್ಕೊಂಡು ಆಮೇಲೆ ಮುಂದುವರಿಯೋಣ ಅಂತೆಲ್ಲಾ ಇಲ್ವೇ ಇಲ್ಲ. ಪರಿಣಾಮ ಏನಾಗ್ಬೋದು ಅನ್ನೋದ್ರು ಬಗ್ಗೆ ಕಿಂಚಿತ್ತೂ ತಲೆಕೆಡುಸ್ಕೊಳಲ್ಲ.

ಇವರ ಜೀವನದಲ್ಲಿ ಯಾವ್ ಅಡೆತಡೆ ಬಂದ್ರೂ ನಿಲ್ಲಲ್ಲ - ನುಗ್ತಾನೇ ಇರ್ತಾರೆ. ಅವ್ರ ದೊಡ್ದ ಆಸ್ತಿ ಅಂದ್ರೆ ಮೊಂಡು ಧೈರ್ಯ ಮತ್ತೆ ಜೀವನದ ಬಗ್ಗೆ ಇರೋ ಅತಿಯಾದ ಭಾವುಕತೆ.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾನೆ ಸಾಹಸ ಮಾಡೊ ಜನ ಮತ್ತೆ ಉದಾರ ಮನೋಭಾವದೋರು. ಆದ್ರೆ ಕೆಲವುಸಲ ತಮ್ಮ ಪ್ರತಿಷ್ಟೆ, ಅಹಂಕಾರ್ದಿಂದ ಬೇರೆಯೋರ್ ಜೊತೆ ಸಣ್ಣ ಪುಟ್ಟ ಮನಸ್ತಾಪ ಆಗತ್ತೆ. ಇವ್ರು ಯಾವಾಗ್ಲೂ ಹರಿಯೊ ನದಿ ಥರ. ಒಂದೇ ಕಡೆ ಅಥವಾ ಒಂದೇ ಪರಿಸ್ಥಿತೀಲಿ ಜಾಸ್ತಿ ಕಾಲ ಇರಕ್ಕಾಗಲ್ಲ ಇವ್ರ ಕೈಲಿ.

ಸ್ವಲ್ಪ ಸಿಡುಕುತನ ಜಾಸ್ತಿ. ಆದ್ರೆ ಬೇರೆಯೊರಿಗೆ ಸಖತ್ತಾಗಿ ನಗೆಹನಿ ಮಾಡ್ಕೊಂಡು ಟೈಮ್ ಪಾಸ್ ಮಾಡಿಸ್ತಾರೆ. ಅವರ ಉದಾರತೆ ಇದ್ಯಲ್ಲ... ಅದು ಅವರ ಜೀವನದ ಎಲ್ಲಾ ಏರಿಳಿತಗಳ್ನೂ ಪರ್ಫೆಕ್ಟಾಗಿ ಬ್ಯಾಲೆನ್ಸ್ ಮಾಡತ್ತೆ.

ಏನಂತೀರಾ? ನೀವು ಯಾವ ತಿಂಗಳಲ್ಲಿ ಹುಟ್ಟಿದ್ದು? ನಿಮ್ಮ ಸ್ವಭಾವ ನೋಡ್ಕೋಂಡ್ರಾ? ಸರಿ ಇದ್ಯಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: