ಈ- ವಾಣಿಜ್ಯ (ಈ -ಕಾಮರ್ಸ್) ಬಗ್ಗೆ ಈ ವಿಷಯಗಳನ್ನ ತಿಳ್ಕೊಂಡ್ರೆ ನಿಮ್ಮ ಸಾಮಾನ್ಯ ಜ್ಞಾನ ಜಾಸ್ತಿಯಾಗತ್ತೆ

“ಈ” ಕಡೆ ತಿರುಗಿ ನೋಡಲೇ ಬೇಕು

ಬದಲಾವಣೆ ಜಗದ ನಿಯಮ, ಈ ಜಗತ್ತಿನಲ್ಲಿ ಕಾಲ ಕಾಲಕ್ಕೆ ನಿಯಮಿತವಾಗಿ ಎಲ್ಲವು ಬದಲಾಗುತ್ತ ಬಂದಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಮತ್ತು ಪ್ರೇರಣಾ - ಚಾಲನಾ ಶಕ್ತಿಯೂ ಬೇರೆ ಬೇರೆ ಇರಬಹುದು. ಅದರಂತೆ ಈ-ಕಾಮರ್ಸ್ ಅಥವಾ ಈ -ವಾಣಿಜ್ಯ ಬದಲಾಗುತ್ತಿರುವ ಜಗತ್ತಿಗೆ ಒಂದು ರೀತಿಯ  ಚಾಲನಾ ಶಕ್ತಿ ಎನ್ನಬಹುದು. ಇದು ಜಗತ್ತಿನ ವಾಣಿಜ್ಯ ಕ್ಷೇತ್ರದಲ್ಲಿ ಹೇರಳ ಅವಕಾಶಗಳನ್ನು ಹೊತ್ತು ತಂದಿದೆ. 10 ವರ್ಷಗಳಿಂದೀಚೆಗೆ ಮಾಹಿತಿ ತಂತ್ರಜ್ಞಾನ ಮತ್ತು ದೂರವಾಣಿಯ ತಂತ್ರಜ್ಞಾನದ ಫಲವೇ ಈ-ಕಾಮರ್ಸ್.

ಬನ್ನಿ.... ಇದರಿಂದ ನಮಗಾಗುವ ಲಾಭ ನಷ್ಟ ದ ಲೆಕ್ಕಾಚಾರ ಹಾಕೋಣ, ಒಂದು ಆನ್ಲೈನ್ ನಿಂದ ತರಿಸಿದ ಪಿಜ್ಜಾ ತಿನ್ನುತ್ತ, ಆನ್ಲೈನ್ ನಿಂದ ತರಿಸಿದ ಬಟ್ಟೆ ತೊಟ್ಟು, ಹಾಡು ಕೇಳಲು ಇಯರ್ ಫೋನ್ ಹಾಕಿಕೊಂಡು  ( ಇದು ಕೂಡ ಆನ್ಲೈನ್ ಪ್ರಭಾವ ) , “ಈ” ಬಗೆಗಿನ ವಿಷಯಗಳನ್ನು ಕೆದಕೋಣ.

ಈ –ಕಾಮರ್ಸ್ ಅಂದ್ರೆ ಏನು ?

 ಈ  ಕಾಮರ್ಸ್ ಅಥವಾ  ಇಲೆಕ್ಟ್ರಾನಿಕ್ ಕಾಮರ್ಸ್ ಎಂಬುದು ಅಂತರ್ಜಾಲ  ಮುಖೇನ ಸರಕು , ಸೇವೆಗಳನ್ನು, ವ್ಯಾಪಾರ, ಮಾರಾಟ ಮತ್ತು ವಹಿವಾಟುಗಳನ್ನು ಅಂತರ್ಜಾಲದಲ್ಲೇ  ಹಣ ಸಂದಾಯ ಮಾಡಿ (ಆನ್ಲೈನ್  ಪೇಮೆಂಟ್ ) ವ್ಯವಹಾರವನ್ನು ಪೂರ್ತಿಗೊಳಿಸುವದು.  ಈ ತರಹದ ವ್ಯಾಪಾರ , ವಹಿವಾಟುಗಳು  ಯಾವುದೇ ದಲ್ಲಾಳಿಗಳಿಲ್ಲದೇ ನೇರವಾಗಿ ವ್ಯವಹಾರ ನಡೆಸುವವರು ಹಾಗೂ  ಗ್ರಾಹಕರ ನಡುವೆ ಏರ್ಪಡುವುದರಿಂದ ಹೆಚ್ಚು ಜನಪ್ರೀಯವಾಗುತ್ತಿದೆ.

ಮೂಲ

ಯಾಕೆ ಈ- ಕಾಮರ್ಸ್ ?

ಇಂದಿನ ಬಿಜಿ ಯುಗದಲ್ಲಿ ಸಮಯ ಹಾಗೂ ತಾಳ್ಮೆಯ ಅಭಾವ ಎಲ್ಲೆಡೆ ಎದ್ದು ಕಾಣುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ-ಕಾಮರ್ಸ ಸಹಾಯಕ್ಕೆ ಬರುತ್ತದೆ. ಮನೆಯಲ್ಲೇ ಕುಳಿತು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಮುಖಾಂತರ ಬೇಕಾದ ವಸ್ತುಗಳನ್ನು ಬುಕ್ ಮಾಡಬಹುದು. ಆದರೆ ಇಲ್ಲಿ ನೀವು ಖರೀದಿ ಮಾಡಿ 10 ದಿನದೊಳಗೆ ನಿಮ್ಮಕೈ ಸೇರುತ್ತದೆ. ವಸ್ತು ಕೈ ಸೇರಿದ ಮೇಲೆ ಹಣ ಪಾವತಿಸುವ ಅವಕಾಶವೂ ಇಲ್ಲಿದೆ. ಆದರೆ ಶೆಟ್ರ ಅಂಗಡಿ ಥರ ಚೌಕಾಶಿ ಮಾಡಲಾಗುವದಿಲ್ಲ.

ಈ- ಕಾಮರ್ಸ್ ವಿಮರ್ಶೆ

 ಅನುಕೂಲಗಳು 

 • ದಿನದ 24 ಘಂಟೆ ಮಾರಾಟದ ವ್ಯವಹಾರಗಳನ್ನು ಮಾಡಬಹುದು.
 • ಉತ್ಪನ್ನಗಳನ್ನು ನಮ್ಮ ಸುತ್ತಮುತ್ತಲಿನ ಪ್ರದೇಶ ಮೀರಿ ಮಾರಾಟ ಮಾಡಬಹುದು. ಉ.ದಾ - ( ಬೆಳಗಾವಿಯ ಕುಂದಾವನ್ನ  ಅಸ್ಸಾಂ ಗ್ರಾಹಕ ಸವಿಯಬಹುದು).
 • ಕಡಿಮೆ ಬಂಡವಾಳ ಹೂಡಿಕೆ.
 • ಭೌತಿಕವಾಗಿ ಅಂಗಡಿ ತೆರೆಯುವ ಅವಶ್ಯಕವಿರುವದಿಲ್ಲ.
 • ಈ-ಕಾಮರ್ಸ್ ನಲ್ಲಿ ವೆಚ್ಚಕ್ಕೆ ಕಡಿವಾಣ ಹಾಕಿ , ಮಾರಾಟವನ್ನು ಹೆಚ್ಚಿಸಬಹುದು.
 • ಹೊಸ ವಿನ್ಯಾಸದ ಉತ್ಪನ್ನಗಳನ್ನು ಜಗತ್ತಿಗೆ ಪರಿಚಯಿಸಬಹದು.
 • ಸುಲಭವಾಗಿ  ಮಾರುಕಟ್ಟೆ ಮತ್ತು ಗ್ರಾಹಕರನ್ನು ಸೆಳೆಯಬಹುದು.
 • ಗ್ರಾಹಕರು ಮನೆಯಲ್ಲೇ ಕುಳಿತು ಖರೀದಿ ಪ್ರಕ್ರಿಯೆ ಮಾಡಬಹುದ

ಅನಾನಕೂಲಗಳು

 • ಉತ್ಪನ್ನಗಳನ್ನು ಭೌತಿಕವಾಗಿ ಪರೀಕ್ಷಿಸದೆ ಖರೀದಿ ಮಾಡಬೇಕು.
 • ಉತ್ಪನ್ನಗಳ ಗುಣಮಟ್ಟವನ್ನು ಅಳೆಯುವದು ಕಷ್ಟ.
 • ಗ್ರಾಹಕರಿಗೆ ಖರೀದಿ ಮಾಡುವದು ಸುಲಭ, ಆದರೆ ಉತ್ಪನ್ನವು ತಲುಪಲು ಕನಿಷ್ಠ ಒಂದು ವಾರ ಕಾಲಾವಕಾಶ ಬೇಕಾಗಬಹುದು.
 • ಇಂಟರ್ನೆಟ್ (ಅಂತರ್ಜಾಲ) ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
 • ಅತಿ ಹೆಚ್ಚು ಸ್ಪಧಾತ್ಮಕ ಮಾರುಕಟ್ಟೆ.
 • ಗ್ರಾಹಕರೊಂದಿಗೆ ಭಾಂದವ್ಯ ಬೆಸೆಯಲಾಗುವದಿಲ್ಲ.

ಮೂಲ

ಈ-ಕಾಮರ್ಸ್ ನಲ್ಲಿ ವ್ಯವಹಾರದ ಮಾದರಿಗಳು

ವ್ಯವಹಾರದಿಂದ ವ್ಯವಹಾರಕ್ಕೆ 

ವ್ಯವಹಾರದಿಂದ ಗ್ರಾಹಕರಿಗೆ 

ಗ್ರಾಹಕರಿಂದ ಗ್ರಾಹಕರಿಗೆ 

ಗ್ರಾಹಕರಿಂದ ವ್ಯವಹಾರದವರಿಗೆ 

ವ್ಯವಹಾರದಿಂದ ಸರಕಾರಕ್ಕೆ 

ಸರಕಾರದಿಂದ  ವ್ಯವಹಾರದವರಿಗೆ 

ಸರಕಾರದಿಂದ ನಾಗರಿಕರಿಗೆ

ಸಾಮಾನ್ಯ ವಾಣಿಜ್ಯ ಮತ್ತು ಈ- ಕಾಮರ್ಸ್

ಸಾಂಪ್ರದಾಯಿಕ ವಾಣಿಜ್ಯ

 1. ವ್ಯವಹಾರದ ಸಂವಹನಗಳು ವೈಯಕ್ತಿಕ ಕೌಶಲ್ಯ ಅವಲಂಬಿಸಿರುತ್ತದೆ.
 2. ಸಾಂಪ್ರದಾಯಿಕ ವಾಣಿಜ್ಯದಲ್ಲಿ ಮಾರುಕಟ್ಟೆ ವಿಸ್ತಿರಣ ಚಿಕ್ಕದಾಗಿರುತ್ತದೆ.
 3. ಇಲ್ಲಿ ಇಂಟರ್ನೆಟ್ (ಅಂತರ್ಜಾಲ) ದ ಬಗ್ಗೆ ಮಾಹಿತಿ ಕಡ್ಡಾಯವಲ್ಲ.
 4. ಇಲ್ಲಿ ನಗದು ಕೊಟ್ಟು ಖರಿದಿಸಿಬೇಕು ( ಉದ್ರಿಗೆ ಸೀಮಿತ ಅವಕಾಶ).
 5. ಗ್ರಾಹಕನಿಗೆ ಉತ್ಪನ್ನಗಳನ್ನ ಸೀಮಿತ ಆಯ್ಕೆ.

ಇ-ವಾಣಿಜ್ಯ

 1. ಇ-ವಾಣಿಜ್ಯದಲ್ಲಿ, ಮಾರಾಟ ಪ್ರಕ್ರಿಯೆಯಲ್ಲಿ ಯಾವುದೇ ಮಾನವನ ಹಸ್ತಕ್ಷೇಪ ಇಲ್ಲ.
 2. ಇ-ವಾಣಿಜ್ಯದಲ್ಲಿ  ಮಾರುಕಟ್ಟೆ ವಿಸ್ತಿರ್ಣ ಲೆಕ್ಕವಿಲ್ಲದಷ್ಟು ಉತ್ಪನ್ನಗಳಿಗೆ ಜಗತ್ತಿನ ಯಾವ ಮೂಲೆ ಇಂದಾದರೂ ಬೇಡಿಕೆ ಬರಬಹುದು.
 3. ಇದರಲ್ಲಿ ಎಲೆಕ್ಟ್ರಾನಿಕ್  ಮಾಧ್ಯಮವಿರುವದರಿಂದ ಇಂಟರ್ನೆಟ್ ಜ್ಞಾನ ಕಡ್ಡಾಯ.
 4. ಇದರಲ್ಲಿ ಬೇರೆ ಬೇರೆ ರೀತಿಯಲ್ಲಿ ನಗದು ಪಾವತಿಸುವ ಅವಕಾಶವಿದೆ ( ನೆಟ್ ಬ್ಯಾಂಕಿಂಗ್  , ಕ್ರೆಡಿಟ್ ಕಾರ್ಡ್ , ಡೆಬಿಟ್ ಕಾರ್ಡ್).
 5. ಇಲ್ಲಿ ಗ್ರಾಹಕನಿಗೆ ಉತ್ಪನ್ನ  ಆಯ್ಕೆ ಮಾಡಲು ಹೆಚ್ಚಿನ ಅವಕಾಶವಿದೆ.

ಈ-ಕಾಮರ್ಸ್ ವ್ಯವಹಾರದಲ್ಲಿರುವ ಸವಾಲುಗಳು

 • ನೀವು ಮಾರಾಟ ಮಾಡಿದ ವಸ್ತುಗಳನ್ನು ಹಿಂದಿರುಗಿಸುವ ಅಧಿಕಾರ ಗ್ರಾಹಕರಿಗಿದೆ , ಉದಾ: ಗ್ರಾಹಕರು ತಮಗೆ ಇಷ್ಟವಾಗದ ಕಾರಣ ೧೫ ದಿವಸದಲ್ಲಿ ಹಿಂದಿರುಗಿಸಬಹುದು.
 • ನಿಮಗೆ ತಂತ್ರಜ್ಞಾನದ ಬಗ್ಗೆ ಸ್ವಲ್ಪ ಮಟ್ಟಿಗೆ ಜ್ಞಾನ ಬೇಕು.
 • ನೀವು ಸ್ಪರ್ಧೆಯಲ್ಲಿರುವದು ಜಗತ್ತಿನ ಜೊತೆಗೆ.
 • ಕಾನೂನು ಮತ್ತು ಸರಕಾರಿ ನಿಯಮದ ಬಗ್ಗೆ ಅರಿವಿರಬೇಕು.
 • ಇದರಲ್ಲಿ ಸ್ವಲ್ಪ ಇಂಗ್ಲಿಷ್ ಭಾಷೆ ಹಿಡಿತ ಬೇಕು
 • ಸಕಾಲಿಕ ವಿತರಣೆಯಾಗಬೇಕು.
 • ಗುಣಮಟ್ಟ ಕಾಯುವಿಕೆ
 • ಸಾಕಷ್ಟು  ಗ್ರಾಹಕರಿಗೆಈ-ಕಾಮರ್ಸ್  ಬಗ್ಗೆ ಇನ್ನು ಮಾಹಿತಿ ಇರದ ಕಾರಣ ನೀವು  ಪಟ್ಟಿ ಮಾಡುವ ವಸ್ತುಗಳನ್ನು ಖರಿದಿಸುವವರ ಸಂಖ್ಯ ಕಡಿಮೆ ಇರಬಹುದು.

 ಮಾರಾಟಗಾರರು ಯಾವ ಯಾವ ವೆಬ್ಸೈಟ್ ನಲ್ಲಿ ತಮ್ಮ ವಸ್ತುಗಳನ್ನು ಪ್ರಕಟಿಸಬಹುದು?

ಮೂಲ

Amazon.com

Flipkart.com

Snapdeal.com

Jabong.com

Shopclues.com

Firstcry.com ... ಹೀಗೆ

ಆನ್ಲೈನ್ನಲ್ಲಿ ವಸ್ತುಗಳನ್ನು ಪ್ರಕಟಿಸಲು ಇರಬೇಕಾದ  ಅರ್ಹತೆಗಳೇನು ?

 • ಒಳ್ಳೆ ಗುಣಮಟ್ಟದ ಉತ್ಪನ್ನಗಳು.
 • ಆನ್ಲೈನ್ನಲ್ಲಿ ಪ್ರದರ್ಶಿಸಿದ ವಸ್ತುಗಳನ್ನೇ ಪೂರೈಸಬೇಕು.
 • ಜಾಹಿರಾತಿನಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಬೇಕು.
 •  ವಸ್ತುವಿನ ವಿವಿಧ ಕೋನಗಳಲ್ಲಿ ಫೋಟೋಗಳನ್ನು ತೆಗೆದು ವೆಬ್ಸೈಟ್ ನಲ್ಲಿ ಹಾಕಿರಬೇಕು.
 • ಹೇಳಿದ ಸಮಯದಲ್ಲಿ ವಸ್ತುಗಳನ್ನುರವಾನಿಸಬೇಕು.
 • ಜಾಹಿರತುದಾರ ವೆಬ್ಸೈಟ್ ನಿಯಮದ ಪ್ರಕಾರ ನಡೆದುಕೊಳ್ಳಬೇಕು.

ಆನಲೈನ್  ಮಾರಾಟಗಾರರ ಹತ್ರ ಇರ್ಬೇಕಾದ ದಾಖಲೆಗಳೇನು ?

 • ಜಿ ಸ್  ಟಿ ನಂಬರ್ / ವ್ಯಾಟ್ ನಂಬರ್
 • ಪಾನ್ ಕಾರ್ಡ್
 • ಕಾನುನಾತ್ಮಕ ಹೆಸರಿರುವ ಸಂಸ್ಥೆ.
 • ವಸ್ತುಗಳನ್ನು ಪ್ರಕಟಿಸುವ ಸಮಯದಲ್ಲಿ ಬೇಕಾಗುವ ಪರವಾನಿಗೆ ಪತ್ರ ( ಸರಕಾರಿ ನಿರ್ಧಾರಿತ)

ಜಗತ್ತಿನ ಯಾವುದೇ ಮೂಲೆಯಿಂದಲೂ ವ್ಯವಹಾರ ಮಾಡುವ ಅವಕಾಶ ಕಲ್ಪಿಸುವ ಮೂಲಕ ಈ-ಕಾಮರ್ಸ, ಈ ವಿಶಾಲ ಜಗತ್ತನ್ನು ಅಂಗೈಯಲ್ಲಿ ಹಿಡಿಯುವಂತೆ ಮಾಡಿದೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: