ಸೈಕಲ್ ಓಡಿಸೋದ್ರಿಂದ ದೇಹ ಮತ್ತು ಮನಸ್ಸಿನ ಮೇಲೆ ಆಗೋ ಈ 20 ಲಾಭಗಳನ್ನ ತಿಳ್ಕೊಂಡ್ರೆ ರೂಢಿ ಮಾಡ್ಕೊತೀರಿ

ಆಯಸ್ಸು ಹೆಚ್ಚತ್ತೆ!

ಸೈಕಲ್ ಓಡ್ಸೋದು ಒಂದು ಅತ್ಯುತ್ತಮ ವ್ಯಾಯಾಮ. ಇದು ಮನಸ್ಸು,ದೇಹಕ್ಕೆ ಉತ್ಸಾಹ ತುಂಬುತ್ತೆ, ಹುರುದುಂಬಿಸುತ್ತೆ. ವ್ಯಾಯಾಮ ಮಾಡೋದೇ ನಮ್ಮ ದೇಹ, ಮನಸ್ಸಿಗೆ ಮುದ ನೀಡುತ್ತೆ ಆದ್ರೆ ಸೈಕಲ್ ಓಡ್ಸೋದು ಎಲ್ಲದಕ್ಕಿಂತ ಉತ್ತಮ ಯಾಕೆ ಅನ್ನೋದನ್ನ ನೋಡೋಣ.

1. ನಮ್ಮ ದೇಹದ ಎಲ್ಲಾ ಸ್ನಾಯುಗಳನ್ನ ಬಳಸಿಕೊಳ್ಳುತ್ತೆ

ಕಾಲಿಂದ ಪೆಡಲ್ ತುಳಿಯೋದ್ರಿಂದ ಕಾಲಿನ ಸ್ನಾಯುಗಳೇ ಹೆಚ್ಚಾಗಿ ಬಳಕೆ ಆಗೋದು ಅಂತ ಎಲ್ರಿಗೂ ಗೊತ್ತು. ಆದ್ರೆ ನಿಜ ಏನಪ್ಪಾ ಅಂದ್ರೆ ಬರಿ ಸೈಕಲ್ ತುಳಿಯೋದ್ರಿಂದ ಕಾಲು, ಹೊಟ್ಟೆ, ಬೆನ್ನು, ತೋಳು, ಭುಜ ಈ ಎಲ್ಲ ಭಾಗಗಳ ಸ್ಯಾನುಗಳ ಬಳಕೆ ಆಗೋದ್ರಿಂದ ನಮ್ಮ ದೇಹದ ಎಲ್ಲ ಸ್ನಾಯುಗಳಿಗೂ ಒಳ್ಳೆ ವ್ಯಾಯಾಮ ಆಗುತ್ತೆ. ಸ್ನಾಯುಗಳ ಕಾರ್ಯಕ್ಷಮತೆನೂ ಹೆಚ್ಚುತ್ತೆ.

ಮೂಲ

2. ಪರಿಸರ ರಕ್ಷಣೆ ಮಾಡುತ್ತೆ

ಸೈಕಲ್ ಓದಿಸೋದ್ರಿಂದ ಯಾವುದೇ ಹೊಗೆ ಬರಲ್ಲ, ಇದ್ರಿಂದ ಪರಿಸರಕ್ಕೆ ಯಾವ ಹಾನಿಯೂ ಆಗಲ್ಲ. ರಸ್ತೆಯಲ್ಲಿ ಓಡಾಡಕ್ಕೆ ಕಮ್ಮಿ ಜಾಗ ಸಾಕು, ಯಾವುದೇ ಇಂಧನ ಬೇಕಿಲ್ಲ, ಅಷ್ಟೇ ಅಲ್ಲ ಸಾರ್ವಜನಿಕ ವಾಹನದಲ್ಲಿ ನೀವು ಹೋಗದೆ ಇರೋದ್ರಿಂದ ಬೇರೆಯವರಿಗೆ ಒಂದು ಸೀಟ್ ಸಿಗುತ್ತೆ. ವಾಕಿಂಗ್ ಗಿಂತ 3 ಪಟ್ಟು ಹೆಚ್ಚು ಬೇಗ ನೀವು ಸೇರಬೇಕಾದ ಜಾಗ ಸೇರಬಹುದು. ಇದೆಲ್ಲದಕ್ಕಿಂತ ಹೆಚ್ಚಾಗಿ ಬೇರೆಯವರಿಗೆ ಹೋಲಿಸಿದ್ರೆ ನೀವು ತುಂಬಾನೇ ಫಿಟ್ ಆಗಿ ಕಾಣಿಸ್ತೀರಿ.

3. ಬೆನ್ನಿನ ಆರೋಗ್ಯಕ್ಕೂ ಒಳ್ಳೇದು

ಏನಪ್ಪಾ ಇದು ಸೈಕಲ್ ಓಡ್ಸಿದ್ರೆ ಕಾಲಿಗೆ ಒಳ್ಳೇದು, ಆದ್ರೆ ಇವರು ಬೆನ್ನಿಗೆ ಒಳ್ಳೇದು ಅಂತಾರಲ್ಲ ಅನ್ಕೊಂಡ್ರಾ? ಇದು ನಿಮ್ಮ ಬೆನ್ನಿನ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಕಾಲಿನ ಸ್ನಾಯುಗಳು ಬೆನ್ನಿನ ಕೆಳಭಾಗದ ಸ್ನಾಯುಗಳನ್ನ ಪ್ರಚೋದಿಸುತ್ತೆ. ಸ್ಲಿಪ್ ಡಿಸ್ಕ್ ಆಗದೆ ಇರೋತರ ನೋಡ್ಕೋಳುತ್ತೆ. ಬೆನ್ನನ್ನ ಬಲಗೊಳಿಸುತ್ತೆ.

ಬೆನ್ನಿನ ಮೂಳೆಯ ಹತ್ತಿರ ಇರೋ ಸ್ನಾಯುಗಳಿಗೂ ಒಳ್ಳೆ ವ್ಯಾಯಾಮ ಆಗೋದ್ರಿಂದ ಮುಂದೆ ಬಾರೋ ಬೆನ್ನು ನೋವಿಂದ ಕಾಪಾಡುತ್ತೆ. ಒಂದು ವಿಷಯ ಗಮನದಲ್ಲಿಡಬೇಕಾದದ್ದು ಅಂದ್ರೆ ನಿಮ್ಮ ಸೀಟ್ ನ ಎತ್ತರ, ಕಾಲು ಇಟ್ಕೋಳೋ ರೀತಿ ಎಲ್ಲ ಸರಿಯಾಗಿರಬೇಕು.

ಮೂಲ

4. ಕೀಲುಗಳನ್ನು ರಕ್ಷಿಸುತ್ತೆ

ಸೈಕಲ್ ತುಳಿಯೋವಾಗ ಪೆಡಲ್ ಗೋಲಾಕಾರದಲ್ಲಿ ಮಾಡೋದ್ರಿಂದ ನಮ್ಮ ಮದಿಂದ ಸುತ್ತಮುತ್ತ ಇರೋ ಮೃದುವಾದ ಮೂಳೆಗಳಿಗೆ ಯಾವುದೇ ಹಾನಿಯಿಲ್ಲದೆ ಒಳ್ಳೆ ವ್ಯಾಯಾಮ ಆಗುತ್ತೆ. ಇದ್ರಿಂದ ಬರೋ ಶಕ್ತಿ ಕೀಲುಗಳಿಗೆ ಹೋಗುತ್ತೆ. ಅಷ್ಟೇ ಅಲ್ಲ ಸಂದಿವಾತ, ಕೀಳು ನೋವು ಬರೋದನ್ನ ತಪಿಸುತ್ತೆ.

5. ಆರೋಗ್ಯ ಕಾಪಾಡ್ಕೊಳಕ್ಕೆ ಸಹಾಯ ಮಾಡುತ್ತೆ

ನಾವು ಮಾತಾಡ್ತಿರೋದು ನೀವು ನೇರವಾಗಿ ಕೂರಕ್ಕೆ, ನಿಲ್ಲಕ್ಕೆ ಸಹಾಯ ಆಗೋಹಾಗೆ ಸಮತೋಲನ ಕಾಪಾಡುತ್ತೆ ಅಂತ ಅಲ್ಲ, ಆದ್ರೆ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮತೋಲನ ಕಾಪಾಡಲು ಸಹಾಯ ಮಾಡುತ್ತೆ. ಇದು ಕೂಡ ನಮಗೆ ವ್ಯಾಯಾಮ, ಮನಸ್ಸಿಗೆ ಶಾಂತಿ ಎರಡನ್ನೂ ಕೊಡುತ್ತೆ. ನಿಧಾನವಾಗಿ ಸೈಕಲ್ ತುಳೀತಾ ಒಂದು ಸುತ್ತು ಹೋಗಿ ಬನ್ನಿ, ಮನಸ್ಸಿಗೆ ಎಷ್ಟು ಹಿತ, ಸಮಾಧಾನ ಸಿಗುತ್ತೆ ಅಂತ ನಿಮಗೆ ಗೊತ್ತಾಗುತ್ತೆ.

ಮೂಲ

6. ಆತಂಕ, ಒತ್ತಡ ಕಮ್ಮಿ ಮಾಡುತ್ತೆ

ಸೈಕಲ್ ತುಳಿಯೋದ್ರಿಂದ ನಮ್ಮ ಭಾವನೆಗಳು ಸ್ಥಿರವಾಗಿರೋಹಾಗೆ ಮಾಡುತ್ತೆ ಅಷ್ಟೇ ಅಲ್ಲ ಹಾರ್ಮೋನುಗಳ ಅಸಮತೋಲನವನ್ನ ಹೋಗಿಸುತ್ತೆ. ಹೊರಗೆ ಹೋಗೋದ್ರಿಂದ ಹಾಗೆ ಸೈಕಲ್ ಓಡಿಸೋ ಮೂಲಕ ವ್ಯಾಯಾಮ ಮಾಡೋದ್ರಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆ ಒಳ್ಳೆ ಪರಿಣಾಮ ಬೀರಿ ಆತಂಕ, ಒತ್ತಡಗಳಿಂದ ಸಮಾಧಾನ ಸಿಗೋಹಾಗೆ ಮಾಡುತ್ತೆ.

7. ಹೃದಯದ ಆರೋಗ್ಯ ಸುಧಾರಿಸುತ್ತೆ

ಸೈಕಲ್ ಓಡಿಸೋದ್ರಿಂದ ನಮ್ಮ ಹೃದಯಕ್ಕೆ ಹೆಚ್ಚು ಒತ್ತಡ ಇಲ್ದೆ ಹೇಗೆ ಸ್ಟ್ರಾಂಗ್ ಆಗಿರ್ಬೇಕು ಅನ್ನೋ ತರಬೇತಿ ಕೊಡುತ್ತೆ.ಒಂದು ವಾರಕ್ಕೆ 20 ಮೈಲಿಯಷ್ಟು ಸೈಕಲ್ ಓಡಿಸಿದ್ರೆ ಹೃದಯಾಘಾತ ಹಾಗೆ ಹೃದಯ ಸಂಭಂದಿ ನರಗಳಿಗೆ ಬರೋ ತೊಂದರೆಯಿಂದ ಕಾಪಾಡ್ಕೊಬಹುದು.

ಮೂಲ

8. ದೇಹದ ಎಲ್ಲಾ ಭಾಗಗಳಲ್ಲೂ ಆಕ್ಸಿಜನ್ ಸಂಚಾರ ಚೆನ್ನಾಗಿ ಆಗುತ್ತೆ

ಸೈಕಲ್ ಓಡಿಸೋವಾಗ ನಮ್ಮ ಉಸಿರಾಟ ಹೆಚ್ಚಾಗಿರುತ್ತೆ, ಹಾಗಾಗಿ ನಮ್ಮ ದೇಹದಲ್ಲಿ ಆಕ್ಸಿಜೆನ್ ಸಂಚಾರ ಹೆಚ್ಚಾಗುತ್ತೆ. ಅಷ್ಟೇ ಅಲ್ಲ ಇದ್ರಿಂದ ನಮ್ಮ ಶಕ್ತಿನೂ ಹೆಚ್ಚಾಗಿ ಆರೋಗ್ಯಕರವಾಗಿಯೂ ಇರ್ತೀವಿ.

9. ಬಿ ಪಿ ಕಮ್ಮಿ ಮಾಡುತ್ತೆ

ನಮ್ಮ ದೇಹದಲ್ಲಿ ಹೇಗೆ ಆಕ್ಸಿಜೆನ್ ಸಂಚಾರ ಹೆಚ್ಚಾಗುತ್ತೋ ಹಾಗೇನೇ ರಕ್ತ ಸಂಚಾರಾನೂ ಹೆಚ್ಚಾಗುತ್ತೆ.ಒಂದುಸಲ ನಮ್ಮ ದೇಹ ಈ ಸೈಕಲ್ ಓಡಿಸೋ ವ್ಯಾಯಾಮಕ್ಕೆ ಒಗ್ಗಿದಮೇಲೆ ನಮ್ಮ ಹೃದಯ ವಿಶ್ರಾಂತಿ ತೊಗೊಳೋದನ್ನ ಕಮ್ಮಿ ಮಾಡುತ್ತೆ. ಇದ್ರಿಂದ ಬಿ ಪಿ ಕಮ್ಮಿ ಆಗುತ್ತೆ.

ಮೂಲ

10. ಬೊಜ್ಜು, ಕೊಬ್ಬು ಎರಡನ್ನೂ ಕಮ್ಮಿ ಮಾಡುತ್ತೆ

ಬೇರೆ ಯಾವುದೇ ವ್ಯಾಯಾಮಕ್ಕಿಂತ ಸೈಕಲ್ ಓಡಿಸೋದ್ರಿಂದ ಬೊಜ್ಜು ಕಮ್ಮಿಯಾಗುತ್ತೆ  ಯಾಕೆ ಅಂದ್ರೆ ಇದು ನಮ್ಮ ದೇಹದಲ್ಲಿರೋ ಕೊಬ್ಬಿನ ಅಂಶಗಳನ್ನ ಉಪಯೋಗಿಸಿಕೊಳ್ಳುತ್ತೆ. ಯಾವಾಗ ನಮ್ಮ ದೇಹಕ್ಕೆ ಕೊಬ್ಬು ಕರಾಗ್ತಾಯಿರೋದು ಗೊತ್ತಾಗುತ್ತೋ ಹಾನಿಕಾರಕ ಕೊಬ್ಬಿನ ಅಂಶ ಹೋಗಿ ಒಳ್ಳೆ ಕೊಬ್ಬು ನಮ್ಮ ದೇಹದಲ್ಲಿರೋದಕ್ಕೆ ಸಹಾಯ ಮಾಡುತ್ತೆ.

11. ಸೇರ್ಬೇಕಾಗಿರೋ ಜಾಗ ಬೇಗನೆ ಸೇರ್ಬೋದು

ಇತ್ತೀಚಿಗೆ ಎಲ್ಲಾಕಡೆಲೂ ಎಷ್ಟು ಟ್ರಾಫಿಕ್ ಜಾಮ್ ಆಗುತ್ತೆ ಅಂತ ನಿಮಗೆ ಗೊತ್ತೇ ಇದೆ. ಅದ್ರಲ್ಲೂ ಬೆಂಗಳೂರಿನಂತ ನಗರಗಳಲ್ಲಿ ನಿಮ್ಮ ಬೈಕ್ ಅಥವಾ ಕಾರ್ನಲ್ಲಿ ನಿಧಾನವಾಗಿ ಬರಿ 4 - 5 ಕಿಲೋಮೀಟರು ಹೋಗಕ್ಕೆ ಕಮ್ಮಿ ಅಂದ್ರು 30 ರಿಂದ 45 ನಿಮಿಷ ಬೇಕಾಗುತ್ತೆ. ಅದೇ ನೀವು ಸೈಕಲಲ್ಲಿ ಹೋದ್ರೆ ಖಂಡಿತವಾಗಿಯೂ ಬೇಗ ಹೋಗ್ತೀರಿ.

ಮೂಲ

12. ಶಕ್ತಿ, ಚೈತನ್ಯ ಹೆಚ್ಚಾಗುತ್ತೆ

ಶಕ್ತಿ ಹೆಚ್ಚಾದಷ್ಟೂ ಆಯಾಸ ಆಗಲ್ಲ, ಯಾವುದೇ ಕೆಲಸ ಮಾಡಕ್ಕೂ ತಯಾರಾಗಿರ್ತಿವಿ. ಸೈಕಲ್ ಓಡಿಸೋದ್ರಿಂದ ನಿಮಗೆ ಆಯಾಸ, ದಣಿವು ಹೆಚ್ಚಾಗಿ ಆಗಲ್ಲ, ಆರೋಗ್ಯವಾಗೂ ಇರ್ತೀರಿ.

13. ಚೆನ್ನಾಗಿ ನಿದ್ದೆ ಬರುತ್ತೆ

ಸೈಕಲ್ ಓಡಿಸೋದು ವ್ಯಾಯಾಮ ಅಷ್ಟೇ ಅಲ್ಲ ನಾವು  ಬಿಸಿಲಿಗೆ ಕೂಡ ಹೋಗೋ ಹಾಗೆ ಮಾಡಿರುತ್ತೆ. ಇದು ನಮ್ಮ ದಿನಚರಿ ಆದಾಗ ನಮ್ಮ ದೇಹದ ಆರೋಗ್ಯಕ್ಕೆ ಚೆನ್ನಾಗಿ ಹೊಂದ್ಕೊಳುತ್ತೆ. ಈಗಾಗ್ಲೇ ಹೇಳಿರೋ ಹಾಗೆ ಒತ್ತಡ, ಆತಂಕ ಕಮ್ಮಿ ಮಾಡಿ ಸಮಾಧಾನವಾಗಿರೋಹಾಗೆ ಮಾಡುತ್ತೆ. ದಿನಕ್ಕೆ 20 - 30  ನಿಮಿಷ ಸೈಕಲ್ ಓಡಿಸಿದ್ರೆ ಸಾಕು ಸಾಮಾನ್ಯಾಗಿ ನಿಮಗೆ ನಿದ್ದೆ ಬರಕ್ಕೆ ತೊಗೊಳೊ ಟೈಂಗಿಂತ ಅರ್ಧದಷ್ಟು ಟೈಮಲ್ಲೇ ನಿದ್ದೆ ಬರುತ್ತೆ.ಅಷ್ಟೇ ಅಲ್ಲ ಯಾವುದೇ ಆತಂಕ, ಒತ್ತಡ ಇಲ್ದೆ ಚೆನ್ನಾಗಿ ನಿದ್ದೆ ಬರುತ್ತೆ.

ಮೂಲ

14. ಚರ್ಮದ ಆರೋಗ್ಯ ಹೆಚ್ಚಿಸತ್ತೆ

ಸೈಕಲ್ ಓಡಿಸಕ್ಕೂ ಚರ್ಮದ ಆರೋಗ್ಯಕ್ಕೋ ಏನು ಸಂಭಂದ ಅಂತ ಕೇಳಿದ್ರ? ಹೌದು ಸೈಕಲ್ ಓಡಿಸೋದ್ರಿಂದ ರಕ್ತ ಹಾಗೂ ಆಕ್ಸಿಜೆನ್ ಸಂಚಾರ ನಮ್ಮ ದೇಹದಲ್ಲಿ ಚೆನ್ನಾಗಿ ಆಗುತ್ತೆ ಅಂತ ಹೇಳಿದ್ವಲ್ಲ, ಆ ಕಾರಣದಿಂದಾನೆ ನಮ್ಮ ಚರ್ಮದ ಆರೋಗ್ಯಕ್ಕೆ ಬೇಕಾಗಿರೋ ಎಲ್ಲಾ ಪೋಷಕಾಂಶಗಳು, ಆಕ್ಸಿಜೆನ್ ಎಲ್ಲಾ ಸಿಗುತ್ತೆ. ಬೆವರಿನ ಮೂಲಕ ಚರ್ಮಕ್ಕೆ ಹಾನಿಯಾಗೋ ಯಾವುದೇ ಅಂಶ ದೇಹದಲ್ಲಿದ್ರು ಅದನ್ನ ಹೊರಕ್ಕೆ ಹಾಕುತ್ತೆ. ಇದ್ರಿಂದ ನಿಮ್ಮ ಚರ್ಮದ ಆರೋಗ್ಯ ಚೆನ್ನಾಗಿರುತ್ತೆ. ಆರೋಗ್ಯಕರವಾಗಿಯೂ ನಿಮ್ಮ ನಿಜವಾದ ವಯಸ್ಸಿಗಿಂತ ಚಿಕ್ಕವರಾಗಿಯೂ ಕಾಣಿಸ್ತೀರಿ.

15. ಜೀರ್ಣಶಕ್ತಿ ಹೆಚ್ಚಾಗುತ್ತೆ

ಸೈಕಲ್ ಓಡಿಸೋವಾಗ ಉಸಿರಾಟ ಚೆನ್ನಾಗಿ ಮಾಡೋದ್ರಿಂದ, ನಮ್ಮ ಹೃದಯದ ಆರೋಗ್ಯ ಉತ್ತಮವಾಗೋದ್ರಿಂದ ನಮ್ಮ ಕರುಳಿನ ಸ್ನಾಯುಗಳು ಚೆನ್ನಾಗಿ ಕೆಲಸ ಮಾಡುತ್ತೆ. ನಾವು ತಿನ್ನೋ ಆಹಾರನೂ ಚೆನ್ನಾಗಿ ಜೀರ್ಣ ಆಗುತ್ತೆ. ಇದ್ರಿಂದ ಹೊಟ್ಟೆ ಉಬ್ಬರ ಆಗಲ್ಲ, ಕರುಳಿನ ಕ್ಯಾನ್ಸರ್ ಬರೋ ಸಾಧ್ಯತೆ ಕೂಡ ಕಮ್ಮಿ.

ಮೂಲ

16. ಬುದ್ಧಿ ಶಕ್ತಿ ಹೆಚ್ಚಿಸುತ್ತೆ

ಹೌದು, ಸೈಕಲ್ ಓಡಿಸೋದು ಒಂದು ರೀತಿಲಿ ನಮ್ಮ ಬುದ್ಧಿ ಶಕ್ತಿ ಹೆಚ್ಚಾಗಕ್ಕೆ ಸಹಾಯ ಮಾಡುತ್ತೆ. ಸೈಕಲ್ ಓಡಿಸೋವಾಗ ರಕ್ತ ಸಂಚಾರ ಹೆಚ್ಚಾಗಿ ನಮ್ಮ ಮೆದುಳಿಗೆ ಅದರಲ್ಲಿರೋ ಆಲೋಚನಾ ಅಂಗಕ್ಕೆ ಚೆನ್ನಾಗಿ ಆಕ್ಸಿಜೆನ್ ಸಿಗುತ್ತೆ. ಇದ್ರಿಂದ ನಮ್ಮ ಮೆದುಳಿನ ಕೋಶಗಳು ಚೆನ್ನಾಗಿ ಬೆಳೆದು ಗ್ರಹಿಕಾ ಶಕ್ತಿ ಕಮ್ಮಿ ಆಗ್ದೇ ಇರೋಹಾಗೆ ಮಾಡುತ್ತೆ. ಸಾಮಾನ್ಯವಾಗಿ ಈ ಗ್ರಹಿಕಾ ಶಕ್ತಿ 30 ವರ್ಷದ ನಂತರ ಕಮ್ಮಿ ಆಗೋದು ಸಾಮಾನ್ಯ. ಲೇಟಾಗೋದಕ್ಕೆ ಮುಂಚೆ ಸೈಕಲ್ ಓಡ್ಸಿ.

17. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

ಸಮಯವಾದ ವ್ಯಾಯಾಮ ಕೂಡ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ಒಂದು ಅಧ್ಯಯನದ ಪ್ರಕಾರ ಸಾಮಾನ್ಯವಾಗಿ ವಾರಕ್ಕೆ 5 ದಿನ ಪ್ರತಿ ದಿನ 30 ನಿಮಿಷ ಸೈಕಲ್ ಓಡಿಸಿದವ್ರು ಯಾವುದೇ ವ್ಯಾಯಾಮ ಮಾಡದೇ ಇರೋವ್ರಿಗಿಂತ ಆರೋಗ್ಯವಾಗಿರ್ತಾರೆ. ವ್ಯಾಯಾಮ ಮಾಡದೇ ಅನಾರೋಗ್ಯದಿಂದ ಎಷ್ಟುದಿನ ಬಳಲುತ್ತಾರೋ ಅದಕ್ಕಿಂತ ಅರ್ಧದಷ್ಟು ದಿನಗಳು ಮಾತ್ರ, ಸೈಕಲ್ ಓಡಿಸೋವ್ರು ಬಳಲುತ್ತಾರೆ.

ಮೂಲ

18. ಆಯಸ್ಸು ಹೆಚ್ಚಾಗುತ್ತೆ

ಒಂದು ಅಧ್ಯಯನದ ಪ್ರಕಾರ ಕಡಿಮೆ ಅಂದ್ರು ವಾರದಲ್ಲಿ 3 ದಿನ 45 ನಿಮಿಷ ಸೈಕಲ್ ಓಡಿಸಿದ್ರೂ ಸಾಕೂ ಅಂತವ್ರು ಅವರಿಗೆ ಸಿಗರೇಟು ಸೇದೋ ಅಭ್ಯಾಸ ಇದ್ರೂ, ಬೇರೆ ಬೇರೆ ತೊಂದರೆ ಇದ್ರೂ, ಅವರ BMI ಹೆಚ್ಚಾಗಿದ್ರೂ ಕೂಡ ಸುಮಾರು 9 ವರ್ಷ ಹೆಚ್ಚಾಗಿ ಬದುಕುತ್ತಾರಂತೆ.

19. ಲೈಂಗಿಕ ಜೀವನ ಉತ್ತಮವಾಗಿರುತ್ತೆ

ಸೈಕಲ್ ಓಡಿಸೋದ್ರಿಂದ ರಕ್ತ ಸಂಚಾರ ಚೆನ್ನಾಗಿ ಆಗುತ್ತೆ. ಇದ್ರಿಂದ ನಮ್ಮ ರಕ್ತ ನಾಳಗಳ ಆರೋಗ್ಯನೂ ಚೆನ್ನಾಗಿರುತ್ತೆ. ಒಂದು ಅಧ್ಯಯನದ ಪ್ರಕಾರ ಈ ಸೈಕಲ್ ಅಥ್ಲೀಟ್ಗಳು ತಮ್ಮ ವಯಸ್ಸಿಗಿಂತ ಸುಮಾರು 2 -5 ವರ್ಷ ಕಮ್ಮಿ ವಯಸ್ಸಿನವರು ಹೊಂದಿರೋ ಲೈಂಗಿಕ ಶಕ್ತಿ ಹೊಂದಿರ್ತಾರಂತೆ. ಅದೇ ಮಹಿಳಾ ಸೈಕಲ್ ಅಥ್ಲೆಟ್ಗಳಲ್ಲಿ ಅವರ ಮುಟ್ಟುನಿಲ್ಲುವ ಸಮಯ ಬೇರೆಯವರಿಗಿಂತ ಸುಮಾರು 2 - 5 ವರ್ಷಗಳಷ್ಟು ಮುಂದಕ್ಕೆ ಹೋಗ್ಬಹುದಂತೆ. ಈಗ ಗೊತ್ತಾಯ್ತಲ್ಲ ಲೈಂಗಿಕ ಶಕ್ತಿಗೂ ಸೈಕಲ್ ಓಡಿಸಕ್ಕೂ ಏನು ಸಂಭಂದ ಅಂತ.

ಮೂಲ

20. ಸುಖವಾಗಿ ಡೆಲಿವರಿ ಆಗುತ್ತೆ

ಒಂದು ಅಧ್ಯಯನದ ಪ್ರಕಾರ ಗರ್ಭಿಣಿಯರು ಸೈಕಲ್ ಓಡಿಸೋದ್ರಿಂದ ಡೆಲಿವರಿ ಟೈಮಲ್ಲಿ ನೋವು, ಆಯಾಸ ಯಾವುದೇ ರೀತಿಯ ಕಷ್ಟ ಆಗಲ್ಲ. ಸುಖವಾಗಿ ಡೆಲಿವರಿ ಆಗುತ್ತೆ. ಅಷ್ಟೇ ಅಲ್ಲ ಡೆಲಿವರಿ ಆದ್ಮೇಲೆ ಬೇಗಾನೆ ಚೇತರಿಸ್ಕೊಳ್ತಾರಂತೆ. ಡೆಲಿವರಿ ನಂತರ ಬೊಜ್ಜು ಬರೋ ಸಾಧ್ಯತೆನೂ ಕಮ್ಮಿ ಆಗುತ್ತಂತೆ.

ಇನ್ನು ಯಾಕೆ ತಡ, ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಾದ್ಮೇಲೆ ಸುಮ್ಮನೆ ಕೂರ್ಬೇಡಿ. ಮನೇಲಿರೋ ಸೈಕಲ್ ತೊಗೊಂಡು ದಿನಕ್ಕೊಂದು ಸುತ್ತು ಹೋಗಿ ಆರೋಗ್ಯ ಕಾಪಾಡ್ಕೊಳಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೀವು ಯಾವ ತಿಂಗಳಲ್ಲಿ ಹುಟ್ಟಿದೀರಿ ಅನ್ನೋದ್ರಿಂದ ನಿಮ್ಮ ಸ್ವಭಾವದ ಬಗ್ಗೆ ಎಷ್ಟು ಗೊತ್ತಾಗುತ್ತೆ ನೋಡಿ

ಸ್ವಭಾವ ಹಿಂಗೆ ಅಂದ ಮಾತ್ರಕ್ಕೆ ನೀವು ಬದಲಾಯಿಸಿಕೊಳಕ್ಕೆ ಆಗಲ್ಲ ಅಂತ ಅಲ್ಲ

ದಿನಾ ನ್ಯೂಸ್ ಪೇಪರ್ ಮನೆಗ್ ಬಂದ್ ತಕ್ಷಣ, ದಿನ ಭವಿಷ್ಯ, ವಾರಭವಿಷ್ಯ ನೋಡೋರ್ ಪೈಕಿ ನೀವೂನಾ? ಇವತ್ತಿನ್ ದಿನ ಹೇಗಿರತ್ತಪ್ಪ? ಏನೇನ್ ಗಂಡಾಂತರ ಕಾದಿದ್ಯೋ ಏನೋ ಅಂತ ಸ್ವಲ್ಪ ಕುತೂಹಲ ಸ್ವಲ್ಪ ಆತಂಕದಿಂದ ಓದ್ತೀರ? ಬರೀ ರಾಶಿ ಮಾತ್ರ ಅಲ್ಲ ಕಣ್ರಿ, ನೀವ್ ಯಾವ್ ತಿಂಗಳಲ್ಲಿ ಹುಟ್ಟಿದಿರ ಅನ್ನೋದ್ರು ಮೇಲೂ ನಿಮ್ ವ್ಯಕ್ತಿತ್ವ, ಗುಣ ಇನ್ನೂ ಸಾಕಷ್ಟು ವಿಷ್ಯಗಳ್ನ ಹೇಳ್ಬೋದು.

ನಿಜವಾಗ್ಲೂ ಗೊತ್ತಾ, ಹುಟ್ಟಿದ್ ತಿಂಗಳ ಆಧಾರ ಇಟ್ಕೊಂಡು ನಿಮ್ ಒಟ್ಟಾರೆ ನಡವಳಿಕೆ, ಸ್ವಭಾವ, ಬೇರೆಯೋರು ನಿಮ್ಮನ್ನ ಹೇಗ್ ನೋಡ್ತಾರೆ, ಜೀವನದ್ ಬಗ್ಗೆ ನಿಮ್ಗಿರೋ ಆಲೋಚನೆ, ಭಾವನೆಗಳು ಇದೆಲ್ಲಾನೂ ಹೀಗ್ ಹೀಗೆ ಅಂತ ಹೇಳ್ಬೋದು. ಹೇಗಪ್ಪ ಇದು ಅಂತಿರ? ನಿಮ್ ಗುಣ ಲಕ್ಷಣಗಳು, ನೀವ್ ಹುಟ್ಟಿದ್ ತಿಂಗಳಲ್ಲಿ, ನಕ್ಷತ್ರಗಳು ಯಾವ್ ಯಾವ್ ಸ್ಥಾನ್ದಲ್ಲಿ ಇದ್ವು, ಯಾವ್ ಆಕಾರ್ದಲ್ಲಿ ಇದ್ವು ಅಂತ ಲೆಕ್ಕ ಹಾಕಿ ಹೇಳ್ತಾರಂತೆ.

ಯಾವ್ ತಿಂಗಳಲ್ಲಿ ಹುಟ್ಟಿದ್ರೆ, ಎಂಥಾ ಸ್ವಭಾವ, ವ್ಯಕ್ತಿತ್ವ ಇರತ್ತೆ ಅಂತ ಇಲ್ಲಿ ಕೊಟ್ಟಿದ್ದೀವಿ. ಓದಿ...ನಿಮ್ಮ ಸ್ವಭಾವಕ್ಕೆ ತಾಳೆ ಮಾಡಿ ನಮಗೂ ಹೇಳಿ...

ಜನವರೀಲಿ ಹುಟ್ಟಿರೋರು

ಕೆಲ್ಸದ್ ವಿಷ್ಯದಲ್ಲಿ ತುಂಬಾನೇ ಕಟ್ಟುನಿಟ್ಟಾಗಿರ್ತಾರೆ ಹಾಗೆನೇ ತಮ್ಮ ಅಭಿಪ್ರಾಯವನ್ನ ನಾಲಕ್ ಜನರ ಮುಂದೆ ಹೇಳಕ್ಕೆ ಯಾವ್ ಮುಲಾಜೂ ನೋಡಲ್ಲ. ಇವ್ರಲ್ಲಿ ಹಠಮಾರಿತನ ಮತ್ತೆ ಮೊಂಡುತನ ಸ್ವಲ್ಪ ಜಾಸ್ತಿ ಇರತ್ತೆ. ಜೊತೆಗೆ, ಯಾರಾದ್ರು ಹೀಗಲ್ಲ ಹಾಗೆ ಅಂತ ಹೇಳಕ್ ಬಂದ್ರೆ ಅದನ್ನ ಒಪ್ಕೊಳೋದು ಇವ್ರ ಜಾಯಮಾನ್ದಲ್ಲೇ ಇಲ್ಲ ಕಣ್ರಿ.

ಜನವರೀಲಿ ಹುಟ್ದೋರು ಒಳ್ಳೆ ಲೀಡರ್ ಆಗೋದ್ರಲ್ಲಿ ಅನುಮಾನಾನೇ ಇಲ್ಲ. ಇವ್ರಲ್ಲಿರೋ ಛಲ ಸದಾ ಯಶಸ್ಸಿನ ಕಡೆಗೇ ಕರ್ಕೊಂಡ್ ಹೋಗತ್ತೆ ಅನ್ನೋದ್ ನಿಜ. ಆದ್ರೆ ಜೊತೆಲಿರೋರ್ ಮಾತು ಕೇಳೋದ್ ಕಮ್ಮಿ.

ಇವ್ರಲ್ಲಿರೊ ಇನ್ನೊಂದು ಅದ್ಭುತವಾದ ಗುಣ ಅಂದ್ರೆ...ತಮ್ಗೆ ಗೊತ್ತಿರೋ ವಿಷ್ಯಗಳ್ನ ಇನ್ನೊಬ್ರುಗೆ ಅರ್ಥವಾಗೋ ಹಾಗೆ ಹೇಳ್ಕೊಡ್ತಾರೆ. ಅಷ್ಟೇ ಅಲ್ಲ, ಕಲಿಯೋರೂ ಕೂಡ ತುಂಬಾ ಸುಲಭವಾಗಿ, ಆಸಕ್ತಿಯಿಂದ ಇವರು ಹೇಳೋದನ್ನ ಕೇಳ್ತಾರೆ. ಇಷ್ಟಪಟ್ಟು ಕಲಿತಾರೆ.

ಫೆಬ್ರುವರಿ

ಫೆಬ್ರುವರಿ ತಿಂಗಳಲ್ಲಿ ಹುಟ್ಟಿರೋರ್ಗೆ ಕಲಾರೇಖೆ ಉದ್ದವಾಗಿರತ್ತೆ ಅನ್ಸತ್ತೆ ಕಣ್ರಿ. ಸಖತ್ ಕ್ರಿಯೇಟಿವ್ ಆಗಿರ್ತಾರೆ ಮತ್ತೆ ಹೊಸ ಹೊಸ ಕೆಲ್ಸ ಮಾಡಕ್ಕೆ ಇಷ್ಟ ಪಡ್ತಾರೆ. ಇವ್ರಿಗೆ ಬುದ್ಧಿವಂತರ ಜೊತೆ ಚರ್ಚೆ ಮಾಡೋದು, ವಿಚಾರಗಳ್ನ ಹಂಚ್ಕೊಳದು ಅಂದ್ರೆ ಉತ್ಸಾಹ ಇರತ್ತೆ. ಅದೇ ಬುದ್ಧಿವಂತಿಕೇಲಿ ತಮಗಿಂತ ಚೂರು ಕಮ್ಮಿ ಮಟ್ಟದಲ್ಲಿರೋರ್ನ ಹತ್ರನೂ ಸೇರ್ಸಲ್ಲ.

ಇವ್ರನ್ನ ಜನ ಫ್ರೀಬರ್ಡ್ ಅಂತ ಕರೀತಾರೆ. ಯಾಕಂದ್ರೆ ಸಮಾಜದ ಕಟ್ಟುಪಾಡುಗಳು, ರೂಲ್ಸು ಇದೆಲ್ಲ ಇವ್ರಿಗೆ ಆಗ್ಬರಲ್ಲ. ಯಾವಾಗ್ಲೂ ಬಿಂದಾಸಾಗಿ ತಮಗೆ ಇಷ್ಟ ಬಂದಂಗೆ ಇರಕ್ಕೆ ನೋಡ್ತಾರೆ. ಸಮಯ ಸಿಕ್ಕಾಗೆಲ್ಲಾ ವಿಮಾನ, ರೈಲು ಹತ್ಕೊಂಡು ಊರೂರ್ ಸುತ್ತೋದು ಅಂದ್ರೆ ಭಾರಿ ಪ್ರೀತಿ. ಸಾಹಸ ಮಾಡೋದು ಮತ್ತೆ ಸುತ್ತಾಮುತ್ತ ಇರೋ ಜಾಗಗಳು, ವಿಷ್ಯಗಳ್ನ ಇನ್ನೂ ಹೆಚ್ಚು ಹೆಚ್ಚು ತಿಳ್ಕೊಳಕ್ಕೆ ಕಾಯ್ತಾನೇ ಇರ್ತಾರೆ. ಇದೇ ಇವ್ರನ್ನ ಲವಲವಿಕೆಯಿಂದ ಇಡೋದು. ಹಾಗೆನೇ ಇವರ ಥರಾನೇ ಫುಲ್ಲು ಬಿಂದಾಸಾಗಿ, ಇಂಡಿಪೆಂಡೆಂಟಾಗಿ ಇರೋರ್ ಜೊತೆ ಸಖತ್ ಮಜ ಮಾಡ್ತಾರೆ, ಚೆನ್ನಾಗಿ ಕಾಲ ಕಳಿತಾರೆ.

ಇವರದ್ದು ಇನ್ನೊಂದು ಒಳ್ಳೆ ಅಂಶ ಅಂದ್ರೆ...ಗೆಳೆತನದ ವಿಷ್ಯ ಆಗ್ಲಿ ಸಂಗಾತಿ ವಿಷ್ಯ ಆಗ್ಲಿ ತುಂಬಾನೇ ನಿಯತ್ತಾಗಿರ್ತಾರೆ :-)

ಮಾರ್ಚ್

ಮಾರ್ಚ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬಾ ಕಲ್ಪನಾಶಕ್ತಿ (ಕ್ರಿಯೇಟಿವಿಟಿ) ಇರತ್ತೆ. ಆದ್ರೆ ಜಾಸ್ತಿ ಸಮಯ ಇವರು ಮೌನವಾಗಿರಕ್ಕೆ ಮತ್ತೆ ತಮ್ಮ ಆತ್ಮಾವಲೋಕನ ಮಾಡ್ಕೊಳಕ್ಕೆ ಇಷ್ಟ ಪಡ್ತಾರೆ. ಇವರು ಇನ್ನೊಬ್ರು ಜೊತೆ ವಿಷ್ಯಗಳ್ನ ಹಂಚ್ಕೊಳೊದಿಕ್ಕಿಂತ ತಮ್ಮೊಳಗೇ ಯೋಚನೆ ಮಾಡಿ ತಲೆ ಒಳಗೇ ಮಾಸ್ಟರ್ ಪೀಸ್ಗಳ್ನ ಸೃಷ್ಟಿ ಮಾಡ್ತಾರೆ ಕಣ್ರಿ. ತಮ್ಮ ಭಾವನೆಗಳ್ನ/ಅನಿಸಿಕೆಗಳ್ನ ಹೇಳ್ಕೊಳಕ್ಕೋಸ್ಕರ ಅವರಿಗೆ ಸಾಥ್ ಬೇಕಿರತ್ತೆ. ಅದನ್ನ ಕಲೆ ತುಂಬಿಸತ್ತೆ. ತಾವಿಷ್ಟ ಪಡೋ ಕಲೆ ಮೂಲಕ ಎಲ್ಲಾನೂ ಎಕ್ಸ್ಪ್ರೆಸ್ ಮಾಡ್ತಾರೆ. ಹಾಗೆನೆ ಒಳಗೊಳಗೇ ಸಿಗೋ ಏಕಾಂತವನ್ನಾ ಮನಸಾರೆ ಅನುಭವಿಸ್ತಾರೆ.

ಬೇರೆಯೋರ ಜೊತೆ ಇವರ ಸಂಬಂಧ ಚೆನ್ನಾಗಿರತ್ತೆ. ತುಂಬಾ ನಯವಾಗಿ, ಕಾಳಜಿಯಿಂದ ನಡ್ಕೊತಾರೆ ಆದ್ರೆ ತಮ್ ಬಗ್ಗೆ ಮಾತ್ರ ಜಾಸ್ತಿ ವಿಷ್ಯ ಬಿಟ್ಕೊಡಲ್ಲ. ಮುಚ್ಚಿಟ್ಕೊಳಕ್ಕೆ ನೋಡ್ತಾರೆ. ಈ ಮಾರ್ಚಲ್ಲಿ ಹುಟ್ಟಿರೋರ್ ಬಗ್ಗೆ ಇನ್ನೊಂದ್ ಮುಖ್ಯವಾದ್ ವಿಷ್ಯ ಅಂದ್ರೆ ಇವರು ಯಾವಾಗ್ಲೂ ನಿಶ್ಯಬ್ಧವಾದ, ಪ್ರಶಾಂತವಾದ ವಾತಾವರಣ ಹುಡುಕ್ಕೊಂಡ್ ಹೋಗ್ತಾರೆ. ಜನರ ಜಾತ್ರೆಯಿಂದ, ಗಲಾಟೆಯಿಂದ ದೂರ ಇರಕ್ಕೆ ಇಷ್ಟ ಪಡ್ತಾರೆ.

ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಹುಟ್ಟಿರೋರು ಯಾವಾಗ್ಲೂ ಬೇರೆಯೋರು ತಮ್ಮನ್ನ ಗಮನಿಸ್ತಿರ್ಲಿ ಅಂತ ಹಾತೊರಿತಿರ್ತಾರೆ ಜೊತೆಗೆ ಎಲ್ರೂ ತಮ್ಮ ಬಗ್ಗೆನೇ ಮಾತಾಡ್ಬೇಕು, ಹೊಗಳಬೇಕು - ಒಟ್ನಲ್ಲಿ ಸಖತ್ ಪ್ರಚಾರ ಸಿಗ್ಬೇಕು ಅಂತ ಆಸೆ ಪಡ್ತಾರೆ. ಇವ್ರಿಗೆ ಇನ್ನೊಬ್ರು ಹಾಗ್ ಮಾಡು ಹೀಗ್ ಮಾಡು ಅಂತ ಮೂಗ್ ತೂರ್ಸೋದು ಇಷ್ಟ ಆಗಲ್ಲ. ಬದಲಿಗೆ ತಮ್ಮದೇ ರೀತೀಲಿ ಕೆಲ್ಸಕಾರ್ಯನ ಮಾಡ್ತಾರೆ, ಬೇರೆಯೋರ್ನೂ ಆ ದಾರಿಲೇ ನಡೆಸ್ತಾರೆ.

ಯಾವಾಗ್ಲೂ ಹೊಸ ಹೊಸ ಸಾಹಸಗಳ್ನ ಮಾಡಕ್ಕೆ ಅವಕಾಶ ಸಿಗತ್ತಾ? ಅಂತ ನೋಡ್ತಿರ್ತಾರೆ ಮತ್ತೆ ಎಲ್ಲಾನು ಚಿಟಿಕೆ ಹೊಡಿಯೋದ್ರಲ್ಲಿ ಮಾಡ್ಬೇಕು, ಬಯಸಿದ ತಕ್ಷಣ ಸಿಗ್ಬೇಕು ಅನ್ನೋ ಆತುರದಲ್ಲಿರ್ತಾರೆ. ಯಾವ್ದೇ ವಿಷ್ಯಕ್ಕಾಗ್ಲೀ ಮೊದ್ಲು ಮನಸ್ಸಿಗೆ ಬಂದ ಹಾಗೆ ನಡ್ಕೊತಾರೆ. ಭವಿಷ್ಯದ ಬಗ್ಗೆ ತಲೆ ಕೆಡುಸ್ಕೊಳಲ್ಲ. 'ನೆನ್ನೆ ನೆನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ' ಹಾಡು ಇವ್ರಿಗೆ ಹೇಳಿ ಮಾಡಿಸ್ದಂಗಿದೆ ಕಣ್ರಿ. ಜೀವ್ನ ಹೇಗ್ ಬರತ್ತೋ ಹಾಗ್ ತೊಗೊಂಡ್ ಹೋಗ್ತಿರ್ತಾರೆ.

ಕೆಲ ಸಲ ಇವರು ಜಗಳಗಂಟ್ರು ಥರ, ಜಿಗುಪ್ಸೆ ಬರೋ ಥರ ಮಾತಾಡ್ತಾರೆ ಅನ್ನೋ ಅಪವಾದ ಹೊತ್ಕೊಬೇಕಾಗತ್ತೆ. ಆದ್ರೆ ಅವರು ಆಡೋ ಮಾತ್ಗಳು ಮನಸ್ಸಿಂದ ಬಂದಿರತ್ತೆ. ಯಾವ್ದೂ ಬೇಕೂಂತ ಆಡೋದಲ್ಲ. ಜೊತೆಗೆ ತಮ್ಗೆ ಏನನ್ಸತ್ತೆ ಅಂತ ಬೇರೆಯೋರಿಗೆ ಹೇಳಕ್ಕೆ ಹಿಂದೆ ಮುಂದೆ ನೋಡಲ್ಲ. ಒಂಥರ ತಮ್ ವಿಷ್ಯದಲ್ಲಿ ಫಿಲ್ಟರ್ ಇರಲ್ಲ. ಬೇಜಾರಾಗಿದ್ರೆ ಮುಲಾಜಿಲ್ದೇ ಹೇಳ್ಕೊತಾರೆ.

ಮೇ

ಮೇ ತಿಂಗಳಲ್ಲಿ ಹುಟ್ತಿರೋರು ತುಂಬಾನೇ ಚಂಚಲ ಮನಸ್ಸಿನೋರು. ಇವತ್ತು ಒಂದ್ ಬೇಕು ಅಂದ್ರೆ, ನಾಳೆ ಇನ್ನೇನೋ ಬೇಕು ಅಂತಾರೆ. ಇವ್ರು ತಮ್ ಭಾವನೆಗಳ್ನ ಚೆನ್ನಾಗಿ ಎಕ್ಸ್ಪ್ರೆಸ್ ಮಾಡ್ತಾರೆ ಮತ್ತೆ ಜೀವನದ ಬೇರೆ ಬೇರೆ ಹಿನ್ನೆಲೆ, ಹಂತದಲ್ಲಿರೋರ್ ಹತ್ರ ಮಾತಾಡಕ್ಕೆ ಇಷ್ಟ ಪಡ್ತಾರೆ. ಒಂಟಿಯಾಗಿರಕ್ಕೆ ಸುತಾರಾಮ್ ಆಗಲ್ಲ ಇವ್ರ ಕೈಲಿ. ಯಾವಾಗ್ಲೂ ಸೋಶಿಯಲ್ ಲೈಫಲ್ಲಿ ಚುರುಕಾಗಿರ್ತಾರೆ.

ಇವರು ಉತ್ತೇಜನ ಕೊಡೋವಂಥ, ಬುದ್ಧಿವಂತಿಕೆ ಇರೋವಂಥ ಮಾತುಕತೆಗಳಲ್ಲಿ ಭಾಗಿಯಾಗಕ್ಕೆ ಇಷ್ಟಪಡ್ತಾರೆ. ಆದ್ರೆ ಅಂಥಾ ಮಾತುಕಥೆ ಬೋರ್ ಹೊಡುಸ್ಬಾರ್ದು. ಬದಲಿಗೆ ತುಂಬಾ ಮೋಜು ಮಸ್ತಿ ಉತ್ಸಾಹದಿಂದ ಇರ್ಬೇಕು. ಆಗ ಖುಷಿಯಿಂದ ಆ ಗುಂಪಲ್ಲಿ ಸೆರ್ಕೊತಾರೆ.

ತುಂಬಾ ಬೇಗ ಬೋರ್ ಆಗ್ಬಿಡ್ತಾರೆ. ಒಂದ್ ವಿಷ್ಯ ಜಾಸ್ತಿ ಹೊತ್ತು ಇವ್ರನ್ನ ಹಿಡಿದು ಇಡಕ್ಕಾಗಲ್ಲ, ಆಕರ್ಷಿಸಕ್ಕೆ ಸಾಧ್ಯಯಿಲ್ಲ. ಹಾಗಾಗಿ ತಮ್ಮನ್ನ ತಾವು ಖುಷಿಯಾಗಿಟ್ಕೊಳಕ್ಕೆ, ಮಜಾ ಮಾಡಕ್ಕೆ ಸದಾ ಹೊಸ ಹೊಸ ಉಪಾಯಗಳ್ನ ಹುಡುಕ್ತಾನೆ ಇರ್ತಾರೆ.

ಜೂನ್

ಜೂನ್ ತಿಂಗಳಲ್ಲಿ ಹುಟ್ಟಿರೋರು ಇನ್ನೊಬ್ರು ಭಾವನೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿರ್ತಾರೆ. ಹಾಗೆನೆ ಬೇರೆಯೋರ್ನ ಕಾಳಜಿ ಮಾಡೋ ಗುಣ ಇದೆ. ಸಖತ್ ಸಂಕೋಚದ ಸ್ವಭಾವ್ದೋರು ಮತ್ತೆ ಮೆತ್ತಗೆ ಮಾತಾಡೊರು. ಇವ್ರ ಆ ಸ್ವಭಾವನೇ ಜನ ಮೆಚ್ಕೊಳ್ಳೊದು.

ತುಂಬಾನೇ ಕ್ರಿಯೇಟಿವಾಗಿರೋ ಇವರು ಭವಿಷ್ಯದ್ ಬಗ್ಗೆ ದೂರದೃಷ್ಟಿ ಇಟ್ಕೊಂಡಿರ್ತಾರೆ. ಹೊಸ ಹೊಸ ಆಲೋಚನೆಗಳ್ನ ಹೇಗೆಲ್ಲಾ ಸೃಷ್ಟಿಮಾಡ್ಬೋದು? ತಮ್ಮ ಐಡಿಯಾಗಳ್ನ ಹೇಗೆಲ್ಲಾ ಕಾರ್ಯರೂಪಕ್ಕೆ ತರ್ಬೋದು? ಅನ್ನೋದ್ರ ಬಗ್ಗೆ ಪ್ಲ್ಯಾನ್ ಮಾಡ್ತಿರ್ತಾರೆ.

ಇವರು ತಮ್ಮ ಭಾವನೆಗಳ್ನ, ತಮ್ಗೆ ಅನ್ಸಿದ್ದನ್ನ ಅಷ್ಟು ಸುಲಭವಾಗಿ ಹೊರಗೆ ಹೇಳ್ಕೊಳಲ್ಲ ಆದ್ರೆ ಮನಸ್ಸಿನ ಒಳಗೆ ತಮ್ಮದೇ ಒಂದ್ ಪ್ರಪಂಚ ಕಟ್ಕೊಂಡಿರ್ತಾರೆ. ಅದನ್ನ ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳೊದು ಅಂತ ಮಾತ್ರ ಗೊತ್ತಾಗದೆ ಒದ್ದಾಡ್ತಾರೆ.

ಜುಲೈ

ಇವರು ತುಂಬಾ ಬಹಿರ್ಮುಖಿಗಳು ಅಂದ್ರೆ ಮನಸ್ಸಿಗೆ ಏನೇ ಬಂದ್ರೂ ಅದು ಹೊರಗೇ ಬಂದೇ ಬರತ್ತೆ. ಒಂಥರ ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇರಲ್ಲ. ಜೊತೆಗೆ ಪಾದರಸದ ಥರ. ಯಾವ್ದಾದ್ರು ಕೆಲ್ಸ ಮಾಡ್ಬೇಕು ಅಂದ್ರೆ ಯಾವ್ ಕಾರಣನೂ ಬೇಡ, ಯಾರ್ ಪ್ರೇರಣೆನೂ ಬೇಡ. ಸಾಹಸ ಮಾಡೋದು ಸಖತ್ ಇಷ್ಟ ಆಗತ್ತೆ ಹಾಗೆನೇ ಚೆನ್ನಾಗಿ, ಒಳ್ಳೆ ರೀತಿಲಿ ಕಾಲ ಕಳಿಯಕ್ಕೆ ಇಷ್ಟಪಡ್ತಾರೆ.

ಹೊರಗಿಂದ ನೋಡೋರ್ಗೆ ಇವರು ತುಂಬಾ ಆತ್ಮವಿಶ್ವಾಸದಿಂದ ನಗುನಗ್ತಾ ಇರೋಹಾಗ್ ಕಾಣ್ಸಿದ್ರೂ, ಒಳಗೆ ದೊಡ್ಡ ಮಟ್ಟದಲ್ಲೇ ನೋವು, ದುಃಖ ಮತ್ತೆ ಕರಾಳವಾದ ಸತ್ಯ ಬಚ್ಚಿಟ್ಕೊಂಡಿರ್ತಾರೆ.

ಇನ್ನು ಜುಲೈನಲ್ಲಿ ಹುಟ್ಟಿರೋರ್ಗೆ ಎನರ್ಜಿ ಸಖತ್ತಾಗಿರತ್ತೆ. ಈ ಕಾರಣಕ್ಕೇ ಬೇರೆಯೋರು ಇವ್ರ ಜೊತೆ ಸುತ್ತಾಡಕ್ಕೆ, ತಿರುಗಾಡಕ್ಕೆ ಕಾಯ್ತಿರ್ತಾರೆ.

ಆಗಸ್ಟ್

ಆಗಸ್ಟ ಅಂದ ತಕ್ಷಣ, ಇವ್ರು ಹುಟ್ತಾನೇ ಲೀಡರ್ ಆಗೋ ಎಲ್ಲಾ ಗುಣ ಪಡ್ಕೊಂಡ್ ಬಂದಿರ್ತಾರೆ. ತಮ್ ಅಭಿಪ್ರಾಯಗಳ್ಗೆ ಅದೆಷ್ಟೇ ಕಷ್ಟ ಆದ್ರೂ ಭಯ ಪಡ್ದೇ ಅಂಟುಕೊಂಡಿರ್ತಾರೆ. ಬಿಟ್ಕೊಡಲ್ಲ. ಇವ್ರು ತುಂಬಾ ಬಾಸಿಸಮ್ ಮಾಡ್ತಾರೆ, ತಮ್ ಅಭಿಪ್ರಾಯಗಳ್ನ ಇನ್ನೊಬ್ರು ಮೇಲೂ ಹೇರ್ತಾರೆ ಅನ್ನಿಸ್ಬೋದು ಆದ್ರೆ ಸಿಕ್ಕಾಪಟ್ಟೆ ದೊಡ್ಡಮನಸ್ಸಿನೋರು ಕಣ್ರಿ ಇವ್ರು.

ಇನ್ನು ಎಲ್ಲಾ ವಿಷ್ಯಕ್ಕೂ ತುಂಬಾನೇ ಯೋಚನೆ ಮಾಡೊ ಇವ್ರು, ಸ್ವಲ್ಪ ಏಮಾರಿದ್ರೂ ತಮ್ಮ ಗಟ್ಟಿಯಾಗಿರೋ ಶಿಸ್ತಿನಿಂದ ನಡ್ಕೊಂಡ್ ಬರ್ತಿರೋ ಜೀವನನ ಕಗ್ಗಂಟು ಮಾಡ್ಕೊತಾರೆ. ತಮ್ಮ ವೃತ್ತಿಜೀವನದಲ್ಲಿ ಸುಖವಾಗಿ ಮೇಲೆ ಬರ್ತಾರೆ. ಯಾಕಂದ್ರೆ ಅವ್ರು ಮಾಡೋ ಕೆಲ್ಸದಲ್ಲಿ ಲಾಭ-ನಷ್ಟಗಳನ್ನ ಯೋಚೆನೆ ಮಾಡಿನೇ ಮುಂದುವರೆಯೋದು. ಜೀವನ್ದಲ್ಲೂ ಇವ್ರು ಇಡೋ ಒಂದೊಂದು ಹೆಜ್ಜೆನೂ ಲಾಜಿಕಲ್ಲಾಗಿ, ಹಂತಹಂತವಾಗಿ ಇಡೋದ್ರಿಂದ ವೃತ್ತಿನಲ್ಲೂ ನಿಭಾಯಿಸಕ್ಕೆ ಸಹಾಯ ಆಗತ್ತೆ.

ತಮ್ಮ ಭಾವನೆಗಳ್ನ ಅಷ್ಟು ಸುಲಭವಾಗಿ ವ್ಯಕ್ತಪಡಿಸಲ್ಲ. ಹಾಗಾಗಿ, ಕೆಲವು ಸೂಕ್ಷ್ಮ ಸಂದರ್ಭಗಳು ಅವರ ಕೈ ಜಾರಿ ಹೋಗತ್ವ್ಗೆ. ಜನರ ,ಮನಸ್ಸಿಗೆ ನೋವುಂಟು ಮಾಡತ್ವೆ.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬ ಬೇಗ, ಸುಲಭವಾಗಿ ನಿರಾಶೆಯಾಗತ್ತೆ. ಯಾಕಂದ್ರೆ ಇವರು ಇನ್ನೊಬ್ರಿಂದ ಸಿಕ್ಕಾಪಟ್ಟೆ ಅಪೇಕ್ಷೆ ಇಟ್ಕೊಂಡಿರ್ತಾರೆ. ಇನ್ನೊಂದ್ ಕಡೆ ಇವ್ರಿಗೆ ಒಂಥರ ಮೊಂಡುತನ ಇರತ್ತೆ. ಏನಂದ್ರೆ, ಬೇರೆಯೋರ್ ಗ್ರಹಚಾರ ಕೆಟ್ಟಿದ್ರೆ, ಅವ್ರ ಜೊತೆ ಮನಸ್ತಾಪ ಬಂದ್ರೆ, ಸಾಯೋತಂಕ ಹಗೆ, ದ್ವೇಷ ಸಾಧಿಸ್ತಾರೆ.

ಇವರನ್ನ ಮಿಸ್ಟರ್ ಅಥ್ವಾ ಮಿಸ್ಟ್ರೆಸ್ ಪರ್ಫೆಕ್ಟ್ ಅನ್ಬೋದು. ತಮ್ಮ ಹಾಗೇ ಬೇರೆಯೋರೂ ಇರ್ಬೇಕು ಅಂತ ಎದುರು ನೋಡ್ತಾರೆ. ಇದೆಲ್ಲದರ ಜೊತೆಗೆ, ಇವರು ತುಂಬಾನೇ ಕ್ರಿಯೇಟಿವ್ ವ್ಯಕ್ತಿ. ಕಾಳಜಿ-ಕನಿಕರ ಇರೋರು ಮತ್ತೆ ಅವಕಾಶ ಸಿಕ್ಕಾಗೆಲ್ಲಾ ಇನ್ನೊಬ್ರುಗೆ ಸಹಾಯ ಮಾಡೋ ಗುಣ ಇರೋರು.

ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರೋರು, ತಾವು ಮಾಡೋ ಎಲ್ಲಾ ಕೆಲ್ಸದಲ್ಲೂ ಬ್ಯಾಲೆನ್ಸ್ ಇರ್ಬೇಕು ಮತ್ತೆ ಕೆಲ್ಸ ಮಾಡೋ ಹಂತದಲ್ಲಿ ಗಟ್ಟಿತನ ಇರ್ಬೇಕು ಅಂತ ಬಯಸ್ತಾರೆ. ಜೊತೆಗೆ ಜೀವನದ ಬಗ್ಗೆ ಒಂದು ಪಾಸಿಟಿವ್ ದೃಷ್ಟಿಕೋನ ಇರತ್ತೆ. ಇವ್ರಿಗೆ ಹೊಡೆದಾಟ, ಜಗಳ ಇವಲ್ಲ ಇಷ್ಟ ಆಗಲ್ಲ. ಸಾಧ್ಯವಾದಷ್ಟೂ ಮಟ್ಟಿಗೆ ತಡಿಯಕ್ಕೆ ನೋಡ್ತಾರೆ.

ಇವ್ರ ಸೋಶಿಯಲ್ ಲೈಫ್ ಸಖತ್ ಚುರುಕಾಗಿರತ್ತೆ ಮತ್ತೆ ಗೆಳೆತನ ಅಂದ್ರೆ ಪ್ರಾಣ ಬಿಡ್ತಾರೆ. ತುಂಬಾ ಆಕರ್ಷಕವಾಗಿರ್ತಾರೆ ಮತ್ತೆ ಮಾತುಗಾರರೂ ಕೂಡ. ಯಾವಾಗ್ಲೂ ಜನರ ಮಧ್ಯ ಇರಕ್ಕೆ ಇಷ್ಟಪಡೋ ಇವ್ರು, ಇಂಡಿಪೆಂಡೆಂಟ್ ವ್ಯಕ್ತಿಗಳು ಕಣ್ರಿ.

ನವಂಬರ್

ನವಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾ ಗುಟ್ಟುಗಳ್ನ ಇಟ್ಕೊಂಡಿರ್ತಾರೆ ಮತ್ತೆ ತಮ್ಮ ನಿಜವಾದ ಭಾವನೆಗಳ್ನ ಬೇರೆಯೋರಿಂದ ಬಚ್ಚಿಡ್ತಾರೆ. ಬೇರೆಯೋರ ಸಲಹೆ, ಮಾರ್ಗದರ್ಶನ ಇಷ್ಟಪಡಲ್ಲ. ತಮ್ಮ ಜೀವನನ ತಾವೇ ಒದ್ದಾದ್ಕೊಂಡಾದ್ರೂ ರೂಪುಸ್ಕೊಳ್ತಾರೆ.

ಇವ್ರಿಗೆ ಈ ಭಯ, ಹೆದರಿಕೆ ಅನ್ನೋದೆಲ್ಲಾ ದೂರ. ಹಾಗಾಗಿ ಎಂಥಾ ಪರಿಸ್ಥಿತಿ ಎದುರಾದ್ರೂ, ಹಿಂದೆ ಮುಂದೆ ಯೋಚನೆ ಮಾಡ್ದೆ ಮೊದ್ಲು ಅದನ್ನ ಪರಿಹಾರಮಾಡಕ್ಕೆ ಹೊರಟುಬಿಡ್ತಾರೆ. ಅದನ್ನ ಸರಿಯಾಗಿ ಅರ್ಥ ಮಾಡ್ಕೊಂಡು ಆಮೇಲೆ ಮುಂದುವರಿಯೋಣ ಅಂತೆಲ್ಲಾ ಇಲ್ವೇ ಇಲ್ಲ. ಪರಿಣಾಮ ಏನಾಗ್ಬೋದು ಅನ್ನೋದ್ರು ಬಗ್ಗೆ ಕಿಂಚಿತ್ತೂ ತಲೆಕೆಡುಸ್ಕೊಳಲ್ಲ.

ಇವರ ಜೀವನದಲ್ಲಿ ಯಾವ್ ಅಡೆತಡೆ ಬಂದ್ರೂ ನಿಲ್ಲಲ್ಲ - ನುಗ್ತಾನೇ ಇರ್ತಾರೆ. ಅವ್ರ ದೊಡ್ದ ಆಸ್ತಿ ಅಂದ್ರೆ ಮೊಂಡು ಧೈರ್ಯ ಮತ್ತೆ ಜೀವನದ ಬಗ್ಗೆ ಇರೋ ಅತಿಯಾದ ಭಾವುಕತೆ.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾನೆ ಸಾಹಸ ಮಾಡೊ ಜನ ಮತ್ತೆ ಉದಾರ ಮನೋಭಾವದೋರು. ಆದ್ರೆ ಕೆಲವುಸಲ ತಮ್ಮ ಪ್ರತಿಷ್ಟೆ, ಅಹಂಕಾರ್ದಿಂದ ಬೇರೆಯೋರ್ ಜೊತೆ ಸಣ್ಣ ಪುಟ್ಟ ಮನಸ್ತಾಪ ಆಗತ್ತೆ. ಇವ್ರು ಯಾವಾಗ್ಲೂ ಹರಿಯೊ ನದಿ ಥರ. ಒಂದೇ ಕಡೆ ಅಥವಾ ಒಂದೇ ಪರಿಸ್ಥಿತೀಲಿ ಜಾಸ್ತಿ ಕಾಲ ಇರಕ್ಕಾಗಲ್ಲ ಇವ್ರ ಕೈಲಿ.

ಸ್ವಲ್ಪ ಸಿಡುಕುತನ ಜಾಸ್ತಿ. ಆದ್ರೆ ಬೇರೆಯೊರಿಗೆ ಸಖತ್ತಾಗಿ ನಗೆಹನಿ ಮಾಡ್ಕೊಂಡು ಟೈಮ್ ಪಾಸ್ ಮಾಡಿಸ್ತಾರೆ. ಅವರ ಉದಾರತೆ ಇದ್ಯಲ್ಲ... ಅದು ಅವರ ಜೀವನದ ಎಲ್ಲಾ ಏರಿಳಿತಗಳ್ನೂ ಪರ್ಫೆಕ್ಟಾಗಿ ಬ್ಯಾಲೆನ್ಸ್ ಮಾಡತ್ತೆ.

ಏನಂತೀರಾ? ನೀವು ಯಾವ ತಿಂಗಳಲ್ಲಿ ಹುಟ್ಟಿದ್ದು? ನಿಮ್ಮ ಸ್ವಭಾವ ನೋಡ್ಕೋಂಡ್ರಾ? ಸರಿ ಇದ್ಯಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: