ಪ್ರಪಂಚದ ಈ 10 ಕೃಷ್ಣನ ದೇವಸ್ಥಾನಗಳಿಗೆ ಹೋಗಿ ಬಂದ್ರೆ ನೋಡಕ್ಕೆ ಎರಡು ಕಣ್ಣು ಸಾಲಿಲ್ಲ ಅಂತೀರಿ

ಬರೀ ಭಾರತ ಅಲ್ಲ, ಅಮೆರಿಕಾ, ಇಂಗ್ಲೆಂಡಲ್ಲೂ ಇದೆ

ಕೃಷ್ಣನ ಭಕ್ತರು ಪ್ರಪಂಚದಾದ್ಯಂತ ಇದಾರೆ ಅಂದ್ಮೇಲೆ ಕೃಷ್ಣನ ದೇವಸ್ಥಾನಗಳೂ ಕೂಡ ವಿಶ್ವಾದ್ಯಂತ ಇರ್ಲೇಬೇಕು. ಆದ್ರೆ ತಮ್ಮ ಐತಿಹಾಸಿಕ ಹಿನ್ನಲೆ, ವೈಭವ, ಶಿಲ್ಪಕಲೆ ಹೀಗೆ ಹಲವು ಕಾರಣಗಳಿಗೆ ಕೃಷ್ಣನ ಈ 10 ದೇವಸ್ಥಾನಗಳು ತುಂಬಾ ವಿಶಿಷ್ಟ. ನೋಡಣ ಬನ್ನಿ.

1. ದ್ವಾರಕಾಧೀಶ ದೇವಸ್ಥಾನ ( ದ್ವಾರಕ, ಗುಜರಾತ್)

ಬಳಪದ ಕಲ್ಲು ಮತ್ತೆ ಗ್ರಾನೈಟಿಂದ ಕಟ್ಟಿರೋ ಚಾಲುಕ್ಯರ ಶೈಲಿಯ ಈ ದೇವಸ್ಥಾನದ ಮೂಲೆ ಮೂಲೇಲೂ ದೇವತೆಗಳ, ನರ್ತಕಿಯರ, ವಾದ್ಯವೃಂದದವರ ಮತ್ತು ಆನೆಗಳ ಕೆತ್ತನೆಗಳಿವೆ. ಶಿಲ್ಪಕಲೆ ಆಸಕ್ತರಂತೂ ಇಲ್ಲಿಗೊಮ್ಮೆ ಭೇಟಿ ಕೊಡ್ಲೇಬೇಕು.

ಮೂಲ

2. ಬಾಲಕೃಷ್ಣ ದೇವಸ್ಥಾನ (ಹಂಪಿ, ಕರ್ನಾಟಕ)

ಯುನೆಸ್ಕೋ ಸಂಸ್ಥೆಯ ವಿಶ್ವದ ಅತಿ ಪ್ರಾಚೀನ ಸ್ಥಳಗಳ ಪಟ್ಟಿಯಲ್ಲಿ ಇದೂ ಒಂದು. ಇದು ನಮ್ಮ ನಾಡಿನ ಹೆಮ್ಮೆ. ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಬಗ್ಗೆ ಅಪಾರ ಪ್ರೀತಿಯಿದ್ದ ಕೃಷ್ಣದೇವರಾಯನ ಕಾಲದ ಈ ದೇವಸ್ಥಾನದ ಸುತ್ತ ಪುರಾಣ ಸನ್ನಿವೇಶಗಳ ಸುಂದರ ಕೆತ್ತನೆ ಇದೆ. ಅಷ್ಟು ವರ್ಷಗಳಿಂದ ಗಟ್ಟಿಯಾಗಿ ನಿಂತಿರೋ ಈ ದೇವಸ್ಥಾನ ವಿಜಯನಗರ ಅರಸರ ವೈಭವದ ಸಾಕ್ಷಿ.

ಮೂಲ

3. ಇಸ್ಕಾನ್ (ಬೆಂಗಳೂರು, ಕರ್ನಾಟಕ)

ವೈದಿಕ ಸಿದ್ಧಾಂತ ಮತ್ತು ಕೃಷ್ಣ ಪ್ರಜ್ಞೆ ಸಾರಕ್ಕೆ ಅಂತ 1997ರಲ್ಲಿ ಇಂಟರ್ನ್ಯಾಷಿನಲ್ ಸೊಸೈಟಿ ಫಾರ್ ಕೃಷ್ಣ ಕಾಂಷಿಯಸ್ನೆಸ್ ಅವ್ರು ಈ ರಾಧಾಕೃಷ್ಣ ದೇವಸ್ಥಾನಾನ ಕಟ್ಟಿದ್ರು. ವೈಕುಂಠ ಹೋಲೋ ಬೆಟ್ಟದ ಮೇಲೆ ಈ ದೇವಸ್ಥಾನ ಕಟ್ಟಿದ್ದು, ಎತ್ತರದಲ್ಲಿರೋ ಚಿನ್ನದ ಪತಾಕೆ ಮತ್ತೆ ಗೋಪುರ ನೋಡಕ್ಕೆ ಎರಡು ಕಣ್ಣೂ ಸಾಲ್ದು. ಈ ದೇವಸ್ಥಾನ ಈಗ ಕೃಷ್ಣಪ್ರಜ್ಞೆಯನ್ನ ವಿಶ್ವಾದ್ಯಂತ ಸಾರ್ತಿದೆ.

ಮೂಲ

4. ಇಸ್ಕಾನ್ (ವೃಂದಾವನ, ಉತ್ತರ ಪ್ರದೇಶ)

ಮಥುರಾ ಕೃಷ್ಣ ಬಲರಾಮ ಮಂದಿರ ಅಂತ ಕೂಡ ಇದನ್ನ ಕರೀತಾರೆ. 1975ರಲ್ಲಿ ಕಟ್ಟಿರೋ ಈ ದೇವಾಲಯದ ಗೋಡೆಗಳು ಮತ್ತೆ ಗರ್ಭಗುಡಿಯ ದಾರೀಲಿರೋ ಪ್ರತಿಯೊಂದು ಕಮಾನಿನ ಮೇಲಿರೋ ಕೆತ್ತನೇನೂ ಅದ್ಭುತ.

ಮೂಲ

5. ಜಗನ್ನಾಥ ದೇವಾಲಯ (ಪುರಿ, ಒಡಿಷಾ)

ಹಿಂದುಗಳಿಗೆ ಇದು ಪುಣ್ಯಸ್ಥಳ. 4 ಲಕ್ಷ ಚದುರದಲ್ಲಿ ವೈಭವವಾಗಿ ನಿಂತಿರೋ ಈ ದೇವಾಲಯ ಹಿಂದುಗಳ ಚಾರ್ ಧಾಮ್’ ಯಾತ್ರೆಯ ಒಂದು ಮುಖ್ಯ ಭಾಗ. ವರ್ಷಕ್ಕೊಮ್ಮೆ ಇಲ್ಲಿ ನಡಿಯೋ ಬೃಹತ್ ತೇರಿನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ!

ಮೂಲ

6. ಪ್ರೇಮ ಮಂದಿರ (ವೃಂದಾವನ, ಉತ್ತರ ಪ್ರದೇಶ)

ಭಾರತದ ಪ್ರವಾಸಿತಾಣಗಳಲ್ಲಿ ನೋಡಲೇಬೇಕಾದಂಥ ಜಾಗ ಇದು. ಅದೂ ರಾತ್ರಿ ವೇಳೆ ದೀಪಗಳಿಂದ ಅಲಂಕಾರಗೊಂಡಾಗ ಈ ಜಾಗ ನೋಡೋ ಮಜಾನೇ ಬೇರೆ. ಭಾರತದಲ್ಲೇ ಇದೊಂದು ಬೃಹತ್ ಪ್ರವಾಸಿ ತಾಣ ಮತ್ತೆ ಕೃಷ್ಣ ಪ್ರೇಮಿಗಳಿಗೆ ಸ್ವರ್ಗ.

ಮೂಲ

7. ಶ್ರೀ ಶ್ರೀ ರಾಧಾಕೃಷ್ಣ ದೇವಸ್ಥಾನ (ಯುಟಾ, ಅಮೆರಿಕಾ)

ಕೃಷ್ಣಪ್ರಜ್ಞೆಯ ಬಗ್ಗೆ ಅಮೆರಿಕಾದಲ್ಲಿರೋ ಹಿಂದುಗಳಿಗೆ ತಿಳಿಸಕ್ಕೆ ಕಟ್ಟಿದ ಈ ಮೊದಲ ಹಲವು ದೇವಸ್ಥಾನಗಳಲ್ಲಿ ಒಂದಾದ ಈ ದೇವಸ್ಥಾನ ಈಗ ಹೋಳಿ, ಜನ್ಮಾಷ್ಠಮಿ ಮುಂತಾದ ಅನೇಕ ಹಬ್ಬ ಹರಿದಿನಗಳಲ್ಲಿ ಸಾವಿರಾರು ಭಕ್ತರಿಂದ ತುಂಬಿರತ್ತೆ. ಉತ್ಸವಗಳ ಆಚರಣೆ ವಿಜೃಂಭಣೆಯಿಂದ ನಡ್ಯತ್ತೆ.

ಮೂಲ

8. ವೆಂಕಟೇಶ್ವರ ದೇವಸ್ಥಾನ (ಬರ್ಮಿಂಗ್ ಹ್ಯಾಮ್, ಯು ಕೆ)

ಯುಕೇಲಿ ವಾಸವಿರೋ ಹಿಂದುಗಳ ಸಾಧನೆ ಅಂದ್ರೆ ಇಷ್ಟು ಪ್ರಮಾಣದಲ್ಲಿ ಆಧ್ಯಾತ್ಮಿಕ ಚಿಂತನೆ ಮಾಡಕ್ಕೆ ಸೇರೋದು. 30 ಎಕರೆ ಜಾಗದಲ್ಲಿ ಕಟ್ಟಿರೋ ಈ ದೇವಾಲಯದಲ್ಲಿ ಆಧ್ಯಾತ್ಮಿಕತೆ ಸದಾ ತುಂಬಿರತ್ತೆ. ಇದು ಯು ಕೆಲಿರೋ ಬಹುದೊಡ್ಡ ದೇವಸ್ಥಾನಗಳಲ್ಲಿ ಒಂದು.

ಮೂಲ

9. ವೃಂದಾವನ ಚಂದ್ರೋದಯ ಮಂದಿರ (ಮಥುರಾ, ಉತ್ತರ ಪ್ರದೇಶ)

5 ಎಕರೆ ಜಾಗದಲ್ಲಿ ರೂಪುಗೊಂಡಿರೋ ಈ ದೇವಸ್ಥಾನದಲ್ಲಿ ಒಂದು ವಸ್ತುಸಂಗ್ರಹಾಲಯ, ಅಧ್ಯಯನ ಕೇಂದ್ರ, ಪ್ರವಚನ ಮತ್ತು ಹಬ್ಬಗಳ ಆಚರಣಾ ಮಂದಿರ, 700 ಅಡಿ ಎತ್ತರದಲ್ಲಿ ವೀಕ್ಷಣಾಗೃಹ ಎಲ್ಲಾ ಇದೆ. ಇಷ್ಟಲ್ಲದೆ ವೈದಿಕ ವಿಶ್ವವಿಜ್ಞಾನದ ಸಾಕ್ಷ್ಯವಸ್ತು ಮತ್ತೆ ಬೋಟ್ ರೈಡ್ಸ್ ಇರೋ ಕೃಷ್ಣಲೀಲಾ ಉದ್ಯಾನವನ ಕೂಡ ಇದೆ.

ಮೂಲ

10. ಗುರುವಾಯುರ್ ದೇವಸ್ಥಾನ (ಗುರುವಾಯುರ್, ಕೇರಳ)

ದಕ್ಷಿಣದ ದ್ವಾರಕೆ ಅಂತಾನೇ ಕರೆಸ್ಕೊಳೋ ಗುರುವಾಯುರ್ ದೇವಸ್ಥಾನ ಕೃಷ್ಣಭಕ್ತರು ಹೋಗಲೇಬೇಕು ಅಂತ ಹಂಬಲಿಸೋ ಸುಂದರ ಸ್ಥಳ. 1638ರಲ್ಲಿ ಕಟ್ಟಿರೋ ಇದರ ಗರ್ಭಗುಡೀಲಿ 4 ಕೈಗಳಿರೋ, ತುಳಸಿ ಮಾಲೆ ಮತ್ತೆ ಮುತ್ತಿನ ಸರ ಧರಿಸಿರೋ ದೊಡ್ಡ ಕೃಷ್ಣನ ಮೂರ್ತಿ ಇದೆ.

ಮೂಲ

ಇವುಗಳಲ್ಲಿ ನಿಮಗ್ಯಾವುದಿಷ್ಟ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: