ನಮ್ಮ ದೇಶದಲ್ಲಿ ಸಿಗೋ ಈ 8 ಅದ್ಭುತ ಪ್ರವಾಸದ ಅನುಭವಗಳನ್ನ ನೀವು ಜೀವನದಲ್ಲಿ ಒಂದ್ಸರ್ತಿ ಆದ್ರೂ ಸವೀಲೇಬೇಕು

ನಮ್ ದೇಶದ ಮುಂದೆ ಯಾವ್ದೂ ಇಲ್ಲ!

 ' ದೇಶ ಸುತ್ತಿ ನೋಡು, ಕೋಶ ಓದಿ ನೋಡು ’ ಅಂತ ನಮ್ ಹಿರಿಯರು ಹೇಳಿರೋ ಮಾತು 100% ನಿಜ ಕಣ್ರೀ. ಬೇರೆ ಬೇರೆ ಜಾಗಗಳನ್ನ ಸುತ್ತಿದಾಗ ಅಲ್ಲಿ ಸಿಗೋ ಅನುಭವ , ಕಲಿಯೋ ವಿಷಯಗಳು ಅಗಾಧ. ಹಾಗೇ, ನೀವು ಬೇರೆ ಬೇರೆ ಜಾಗಗಳಿಗೆ ಹೋದಾಗ ಪ್ರತಿಯೊಂದು ಸ್ಥಳದಲ್ಲೂ  ಅಗಾಧವಾದ ಸೌಂದರ್ಯ ತುಂಬ್ಕೊಂಡಿದೆ ಅನ್ನೋದು ಅರ್ಥ ಆಗತ್ತೆ. ಅಂತಹ ಸೌಂದರ್ಯವನ್ನ ನಾವ್ ನೋಡ್ದೇ ಹೋದ್ರೆ, ಆಸ್ವಾದಿಸ್ದೆ ಹೋದ್ರೆ, ನಮ್ ಜೀವ್ನಾನೇ ವ್ಯರ್ಥ. ಅಯ್ಯೋ ಹೋಗ್ರಿ, ಯಾರ್ ಅಷ್ಟ್ ಅಷ್ಟ್ ದೂರ ದೇಶ ಬಿಟ್ಟು ದೇಶಕ್ಕ್ ಹೋಗಿ, ಲಕ್ಷಾಂತರ ರುಪಾಯಿ ಖರ್ಚ್ ಮಾಡ್ಕೊಂಡ್ ಬರ್ತಾರೆ ಅಂತ ಗೊಣಗ್ಬೇಡಿ. ಯಾಕಂದ್ರೆ, ನಾವೀಗ ಹೇಳ್ತಿರೋ ಜಾಗಗಳೆಲ್ಲಾ ನಮ್ ದೇಶದ್ದೇ... ಹಾಗೇ, ನಾವು ಜಾಗಗಳನ್ನ ಸುತ್ತಿದಾಗ, ನಮಗೆ ಸಿಗೋ ಅನುಭವ, ಸಂತೋಷ ಕೋಟಿ ರುಪಾಯ್ಗೂ ಮೀರಿದ್ದು ಅಂತ ಅರ್ಥ ಮಾಡ್ಕೊಳಿ. ಭಾರತದಲ್ಲಿರೋ ಈ ಸ್ಥಳಗಳೆನ್ನೆಲ್ಲಾ ನೋಡಿದ್ರೆ ಮೈನವಿರೇಳೋದು ಗ್ಯಾರೆಂಟಿ. ಅಲ್ಲಿನ ಈ 8 ಪ್ರವಾಸದ ಅನುಭವಗಳನ್ನ ಯಾವ್ದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ.

1. ಲಡಾಕಿನ ಹೆಪ್ಪುಗಟ್ಟಿದ ನದೀಲಿ ಟ್ರೆಕ್ಕಿಂಗ್

ಸುತ್ಲೂ ಹೆಪ್ಪುಗಟ್ಟಿದ ನೀರು. ಅಕ್ಕ ಪಕ್ಕ ಬೆಟ್ಟಗಳ ಸಾಲು. ಹೆಪ್ಪುಗಟ್ಟಿರೋ ನೀರು ಯಾವಾಗ ಬೇಕಾದ್ರೂ ಕರ್ಗಬಹುದು. ಹಾಗಂತ ಜೀವಕ್ಕೇನೂ ಅಪಾಯ ಇಲ್ಲ. ಆರಾಮಾಗಿ ಟ್ರೆಕ್ಕಿಂಗ್ ಮಾಡ್ಬಹುದು. ಇದು ಲಡಾಕಿನ ಝನ್ಸ್ಕಾರ್ ನದಿ. ಇಲ್ಲಿಗೆ ಚಳಿಗಾಲದಲ್ಲಿ ಹೋದ್ರೆ ಇನ್ನೂ ಮಜಾ ಇರತ್ತೆ!

ಮೂಲ

2. ಗುಜರಾತಿನ ಉಪ್ಪಿನ ಮರುಭೂಮೀಲಿ ಒಂಟೆ ಸವಾರಿ

ಮರುಭೂಮಿ ಅಂದ್ರೆ ಹೇಗಿರತ್ತೆ ಹೇಳಿ? ಎಲ್ನೋಡಿದ್ರೂ ಮರಳು ತಾನೇ? ಆದ್ರೆ ಗುಜರಾತಿನ ಕಚ್ನಲ್ಲಿರೋ ರಣ್ ಅನ್ನೋ ಸ್ಥಳಕ್ಕೊಮ್ಮೆ ಹೋಗ್ನೋಡಿದ್ರೆ ನಿಮ್ಗೆ ಮರಳು ಸಿಗೋಲ್ಲ, ಬದ್ಲಾಗಿ ಉಪ್ಪಿನ ಮರುಭೂಮಿ ಸಿಗತ್ತೆ. ಇಲ್ಲಿ ಎಲ್ನೋಡಿದ್ರೂ ಉಪ್ಪೇ. ಅಲ್ಲಿನ ಒಂಟೆ ಸವಾರಿ ಮತ್ತೆ ಬೆಳದಿಂಗಳ ಊಟ ನಿಮ್ಮ ಲಿಸ್ಟಲ್ಲಿ ಇರ್ಲೇಬೇಕು.

ಮೂಲ

3. ವಾಘಾ ಬಾರ್ಡರ್ರಲ್ಲಿ ಬೀಟಿಂಗ್ ರಿಟ್ರೇಟ್

"ಭಾರತ - ಪಾಕಿಸ್ತಾನ "

ಈ ಎರಡು ದೇಶಗಳ ಹೆಸ್ರು ಕೇಳ್ದಾಗ ಯುದ್ದ, ಕ್ರಿಕೆಟ್...  ಹೀಗೆ ಹಲವು ವಿಷ್ಯಗಳು ಕಣ್ಮುಂದೆ ಹಾದೋಗತ್ತೆ. ಆದ್ರೆ ಈ ವಾಘಾ ಗಡೀಲಿ ಗೇಟ್ ಮುಚ್ಚೋ ಮುಂದೆ ದಿನಾ ನಡಿಯೋ ಬೇಟಿಂಗ್ ರಿಟ್ರೀಟ್ ನೋಡಕ್ಕೆ ಎರಡು ಕಣ್ಣೂ ಸಾಲಲ್ಲ! ಇದ್ರಲ್ಲಿ ಪಾಲ್ಗೊಳ್ಳೋ ಎರಡೂ ದೇಶದ ಸೈನಿಕರ ಭಾವೋದ್ರೇಕ ನೋಡ್ತಿದ್ರೆ, ಎರಡೂ ದೇಶಗಳ ಪ್ರಜೆಗಳಿಗೆ ದೇಶಪ್ರೇಮ ಉಕ್ಕಿ ಬರತ್ತೆ. ಒಂದ್ಸಲ ಸಾಧ್ಯ ಆದ್ರೆ ನೋಡ್ಕಂಡು ಬನ್ನಿ. 

ಮೂಲ

4.  ಕಾಶ್ಮೀರದ ದಾಲ್ ಸರೋವರದಲ್ಲಿ ದೋಣಿ ವಿಹಾರ

ಕಾಶ್ಮೀರ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಶ್ರೀನಗರ್ ಶಿಕಾರಾ ಬೋಟಲ್ಲಿ ಕೂತ್ಕಂಡು ಒಮ್ಮೆ ಸುತ್ತ ಮುತ್ತ ಇರೋ ಪರಿಸರ ನೋಡಿ. ಜೀವನ ಇಡಿ ಈ ಅನುಭವ ಮರಿಯಲ್ಲ ನೀವು!

ಮೂಲ

5. ಮನಾಲಿಯ ಇಗ್ಲೂನಲ್ಲೊಂದು ರಾತ್ರಿ 

ನಿಮ್ಗೊಂದ್ ಚಾಲೆಂಜು. ಚಳಿಯೆಲ್ಲ ನನ್ಗೆ ತಾಗಲ್ಲ ಅಂತ ನೀವು ಕೊಚ್ಕೊಳೋದಾದ್ರೆ ಮನಾಲೀಲಿರೋ ಇಗ್ಲೂಗಳಿಗೆ ಹೋಗಿ ಒಂದು ರಾತ್ರಿ ಕಳೆದು ಬನ್ನಿ. ಅಂಟಾರ್ಟಿಕಾಲಿರೋ ಎಸ್ಕಿಮೋ ತರ ಜೀವನ ಕಳೀಬೋದು.ಸುತ್ತಾ ಮಂಜುಗಡ್ಡೆ... ಚಳೀನೋ ಚಳಿ... ಒಂಥರಾ ಮಜಾ ಇರತ್ತೆ.

ಮೂಲ

6. ಕಾಶಿ ಗಂಗೆ ಆರತಿ ವೈಭವ

ನಮ್ಮಲ್ಲಿ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಪೈಕಿ ಕಾಶಿಗೆ ಹೆಚ್ಚಿನ ಮಹತ್ವ ಕೊಡ್ತೀವಿ. ಯಾಕಂದ್ರೆ ಇಲ್ಲೇ ಪವಿತ್ರ ಗಂಗಾ ನದಿ ಹರಿಯೋದು. ಸುತ್ತ ಮುತ್ತಲೂ ಮಂತ್ರಘೋಷ , ಹೂವಿನ ಸುವಾಸನೆ , ಸಜ್ಜನರ ದಂಡು , ಆಧ್ಯಾತ್ಮದ ರುಚಿ... ಇನ್ನೂ ಹಲವು ದೃಶ್ಯಗಳ ಜೊತೆ ಗಂಗಾ ನದಿಗೆ ಆರತಿ ಬೆಳಗೋ ನೋಟ ವರ್ಣಿಸಕ್ಕೇ ಆಗಲ್ಲ. ಇದನ್ನ ಅನುಭವಿಸಿದ್ರೇನೇ ಅದರ ವೈಭವ ಗೊತ್ತಾಗೋದು. ಗಂಧರ್ವ ಲೋಕಕ್ಕೆ ಹೋದ ತರ ಅನುಭವ ಆಗತ್ತೆ.

ಮೂಲ

7. ಗಂಟೆ ಗಂಟೆಗೂ ಬಣ್ಣ ಬದ್ಲಾಯಿಸೋ ಲಡಾಕಿನ ನದಿಗಳ ಸೊಬಗು

ನದಿಯ ಬಣ್ಣ ಯಾವ್ದಪ್ಪಾ ಅಂತ ಕೇಳಿದ್ರೆ ನೀಲಿನೋ, ಹಸಿರೋ ಇಲ್ಲಾ ಇನ್ನೇನೋ ಹೇಳ್ತಿವಿ. ಆದ್ರೆ ಪ್ರತಿ ಗಂಟೆಗೊಮ್ಮೆ ನೀರಿನ ಬಣ್ಣ ಬದ್ಲಾಯ್ಸೀ ನದಿ ಬಗ್ಗೆ ಏನ್ಹೇಳೋದು? ಹೌದು... ಪ್ಯಾಂಗೋಂಗ್ ಮತ್ತೆ ಮೋರಿರಿ ಅನ್ನೋ ನದಿಗಳು ಲಡಾಕ್ನಲ್ಲಿದೆ ಅವು ಹೀಗೇ ಗಂಟೆ, ಗಂಟೆಗೂ ಬಣ್ಣ ಬದ್ಲಾಯಿಸುತ್ವೆ. ಎದ್ರಗಡೆ ನಿಂತು ನೋಡಿದ್ರೆ ನಿಮ್ಮ ಬಾಯಿಂದ ಮಾತೇ ಹೊರಡಲ್ಲ.

ಮೂಲ

8. ಅಂಡಮಾನಲ್ಲಿ ಸ್ಕೂಬಾ ಡೈವಿಂಗ್

ಸ್ಕೂಬಾ ಡೈವಿಂಗ್ ಮಾಡಕ್ಕೆ ಫಾರಿನ್ಗೆ ಹೋಗ್ಬೇಕಂತಿಲ್ಲ... ಅಂಡಮಾನಿಗೆ ಹೋಗಿ ಸಾಕು.  ಹವಳದ ದ್ವೀಪದಲ್ಲಿ, ಮೀನು ಮತ್ತು ನೀರಲ್ಲಿರೋ ಇನ್ನಷ್ಟು ಪ್ರಾಣಿಗಳ ಮಧ್ಯೆ ಸಮಯ ಕಳೆಯೋದ್ರ ಮಜಾನೇ ಬೇರೆ. 

ಮೂಲ

ನೋಡಿದ್ರಲ್ಲಾ? ನಿಮ್ ಮುಂದಿನ್ ಟ್ರಿಪ್ ಎಲ್ಲಿಗೆ ಹೇಳಿ ಮತ್ತೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: