ಅಂದ-ಚಂದಕ್ಕಿಂತ ಹೆಚ್ಚಾಗಿ ಈ 10 ಗುಣಗಳು ಹುಡ್ಗೀರಲ್ಲಿದ್ರೆ ಹುಡುಗರಿಗೆ ಇಷ್ಟ ಆಗ್ತಾರೆ

ಸ್ವಲ್ಪ ನಗಿಸಕ್ಕೆ ಗೊತ್ತಿರ್ಬೇಕು

ಯಾವದೇ ಗಂಡಾಗ್ಲಿ, ಹುಡುಗಿ ಅಂದವಾಗಿರ್ಬೇಕು, ಬೊಂಬೆ ತರ ಇರ್ಬೇಕು... ಹಾಗಿರ್ಬೇಕು, ಹೀಗಿರ್ಬೇಕು ಅಂತ ಆಸೆ ಪಡೋದು ಮಾಮೂಲು... ಹಾಗಂತ ಯಾವಾಗ್ಲೂ ಬರಿ ಅಂದಾನೆ ಮುಖ್ಯ ಅಂತ ಯಾವ್ ಹುಡ್ಗ ಕೂಡ ಹೇಳಲ್ಲ. ಹುಡುಗಿ ಅಂದಕ್ಕಿಂತ ಹುಡುಗಿಯ ಒಳ್ಳೆ ಗುಣಾನೇ ಹುಡುಗ್ರಿಗೆ ತುಂಬಾ ಇಷ್ಟ ಆಗೋದು. ಹುಡುಗ್ರು ಯಾವತ್ತೂ ಹುಡುಗಿ ಬರೀ ಚೆಂದ ಇರ್ಬೇಕು ಅಂತಾರೆ ಅನ್ನೋದು ಅತಿ ದೊಡ್ಡ ಸುಳ್ಳು. ಅಂದಕ್ಕಿಂತಾ ಈ 10 ಗುಣ ಹುಡ್ಗೀಗಿದ್ರೆ ಹುಡುಗರು ಬೇಗ ಇಷ್ಟ ಪಡ್ತಾರೆ... ಬನ್ನಿ ಯಾವ್ ಯಾವ್ದು ಅಂತ ನೋಡಣ.

1. ಹುಡುಗನಿಗೆ ಬೆನ್ನೆಲುಬಾಗಿ ನಿಲ್ಬೇಕು

ಪ್ರತಿ ಯಶಸ್ವೀ ಗಂಡಿನ ಹಿಂದೆ ಹೆಣ್ಣು ಇದ್ದೇ ಇರ್ತಾಳೆ ಅಂತ ಕೇಳಿದ್ದೀವಿ, ಈ ಮಾತು ನೂರಕ್ಕೆ ನೂರು ಸತ್ಯ. ಹುಡುಗರಿಗೂ ಇದೇ ಗುಣ ಇಷ್ಟ ಆಗೋದು. ನಿಜವಾಗ್ಲೂ ಇಷ್ಟ ಪಡೋ ಹುಡುಗರು, ಹುಡುಗಿ ಯಾವತ್ತೂ ನನ್ನ ಕೆಲಸಕ್ಕೆ ಸಹಾಯ ಮಾಡ್ಬೇಕು, ಮಾನಸಿಕವಾಗಿ ನನಗೆ ಸಪೋರ್ಟ್ ಮಾಡ್ಬೇಕು ಅಂತ ಆಸೆ ಪಡ್ತಾರೆ. ಇಂತ ಗುಣ ಇರೋ ಹುಡ್ಗೀನ ತುಂಬಾ ಇಷ್ಟ ಪಡ್ತಾರೆ.

2. ಹುಡ್ಗನಿಗಾಗಿ ಸ್ವಲ್ಪ ಸಮಯ ಮೀಸಲಿಡ್ಬೇಕು

ಈ ಗಿಫ್ಟ್, ಟ್ರಿಪ್, ಪಾರ್ಟಿ ಇವೆಲ್ಲಾ ಯಾರ್ ಬೇಕಾದ್ರೂ ಮಾಡ್ತಾರೆ, ಆದ್ರೆ ಪ್ರತಿ ಹುಡ್ಗ ಇಷ್ಟ ಪಡೋದು ಒಂದೇ... ಹುಡುಗಿ ನನಗೆ ಅಂತ ಸ್ವಲ್ಪ ಸಮಯ ಕೊಡಬೇಕು ಅಂತ. ನಿಜ ಹೇಳ್ತೀನಿ ಸ್ವಾಮೀ ಸಮಯಕ್ಕೆ ಇರೋ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಹುಡುಗಿ ಎಷ್ಟೇ ಬ್ಯುಸಿ ಇದ್ರೂ ಹುಡುಗನಿಗೆ ಅಂತ ಸ್ವಲ್ಪ ಸಮಯ ಕೊಟ್ರೆ ನಿಜವಾಗ್ಲೂ ಹುಡುಗನಿಗೆ ಸಿಕ್ಕಾಪಟ್ಟೆ ಖುಷಿಯಾಗತ್ತೆ. ಇಂತಾ ಹುಡುಗೀರನ್ನೇ ಹುಡುಗರು ಬೇಗ ಇಷ್ಟ ಪಡೋದು 

ಮೂಲ

3. ತನ್ನ ಹುಡ್ಗನನ್ನ ನಂಬಬೇಕು

ಯಾವ್ ಹುಡುಗ್ರೂ ಸರಿ ಇಲ್ಲ, ಎಲ್ಲಾ ಕೆಟ್ಟೋರು ಅಂತ ತೀರ್ಮಾನ ಮಾಡೋ ಹುಡುಗೀರು ಜಪ್ಪಯ್ಯ ಅಂದ್ರು ಹುಡುಗರಿಗೆ ಇಷ್ಟ ಆಗಲ್ಲ. ಎಲ್ಲರೂ ಒಳ್ಳೇವ್ರೆ, ನಂಬಿಕೆ ಮುಖ್ಯ. ಯಾರು ನಿಜವಾಗ್ಲೂ ನಂಬಿಕೆಗೆ ತಕ್ಕಂತೆ ನಡ್ಕೊತಾರೊ ಅಂತವರು ಹುಡುಗರಿಗೆ ಬೇಗ ಇಷ್ಟ ಆಗ್ಬಿಡ್ತಾರೆ 

4. ಮಾತಾಡುವಾಗ ಹೇಳಿದ್ದನ್ನ ಸರಿಯಾಗಿ " ಕೇಳಿಸ್ಕೋಬೇಕು "

ಸಾಮಾನ್ಯವಾಗಿ ಹುಡುಗೀರು ಸಿಕ್ಕಾಪಟ್ಟೆ ಮಾತಾಡ್ತಾರೆ, ಆದ್ರೆ ಇನ್ನೊಬ್ರು ಮಾತಾಡೋದನ್ನ ಅಷ್ಟೇ ಗಮನ ಕೊಟ್ಟು ಕೇಳುಸ್ಕೊತಾರಾ? ಪ್ರತಿದಿನ ಜೀವನದಲ್ಲಿ ಏನೆಲ್ಲಾ ನಡೆಯತ್ತೆ ಅದನ್ನ ಹಂಚ್ಕೊಳಕ್ಕೆ ಪ್ರತಿ ಗಂಡಿಗೂ ಒಂದು ಜೀವ ಬೇಕು, ಸುಮ್ನೆ ಕೋಲೆಬಸವನ ಥರ ತಲೆ ಅಲ್ಲಾಡುಸ್ಕೊಂಡು ಹು೦-ಹೂ೦ ಅನ್ನೋರಲ್ಲ, ಹೇಳಿದ್ದನ್ನ ಕೇಳಿಸಿಕೊಂಡು ಸರಿಯಾಗಿ ಸ್ಪಂದಿಸಬೇಕು. ಇಂತ ಗುಣ ಹುಡುಗರಿಗೆ ಬೇಗ ಇಷ್ಟ ಆಗತ್ತೆ.   

ಮೂಲ

5. ಸ್ವಲ್ಪ ನಗಿಸಕ್ಕೆ ಗೊತ್ತಿರ್ಬೇಕು

ಬರಿ ಅಂದ, ಸೌಂದರ್ಯಾನೆ ಎಲ್ಲರೂ ನೋಡಲ್ಲ... ಗುಣ, ಸ್ವಭಾವ ತುಂಬಾ ಮುಖ್ಯ. ಜೀವನದ ಜಂಜಾಟದಲ್ಲಿ ಸಿಕ್ಕಾಕೊಂಡು ಮೊದ್ಲೆ ಸಕಾಗಿರತ್ತೆ. ಇನ್ನು ಈ ಕಡೇನೂ ಬರೀ ಟೆನ್ಷನ್ ಆದ್ರೆ ಹೇಗೆ ಹೇಳಿ? ಆದ್ರಿಂದ ಸ್ವಲ್ಪ ಕಾಮಿಡಿ ಮಾಡೋ ಹುಡುಗೀರು ಹುಡುಗ್ರಿಗೆ ತುಂಬಾ ಬೇಗ ಇಷ್ಟ ಆಗ್ತಾರೆ. 

6. ಚನ್ನಾಗಿ ಅಡಿಗೆ ಮಾಡಕ್ಕೆ ಬರ್ಬೇಕು

ಇದೊಂದು ಸತ್ಯವಾದ ಮಾತು. ಹಾಗಂತ ಹುಡುಗೀರು ಯಾವಾಗ್ಲೂ ಅಡಿಗೆ ಮನೇಲೇ ಇರ್ಬೇಕು ಅಂತ ಅಲ್ಲ. ಆದ್ರೆ ತನ್ನೋಳು ಮಾಡಿರೋ ಇಷ್ಟವಾದ ಅಡಿಗೇನ ಆರಾಮಾಗಿ ಮನೇಲಿ ಕೂತ್ಕೊಂಡು ತಿನ್ನೋ ಖುಷಿ ಯಾವ ಸ್ಟಾರ್ ಹೋಟೆಲಲ್ಲಿ ಕೂತ್ಕೊಂಡು ತಿಂದ್ರೂ ಆಗಲ್ಲ. ಮನೇಲಿ ತನ್ನೋಳು ಮಾಡಿದ ಊಟ ತಿಂದ್ರೆ ಏನೋ ಒಂತರ ತೃಪ್ತಿ. 

ಮೂಲ

7. ಏನಾದ್ರೂ ಸಾಧಿಸೋ ಛಲ ಇರ್ಬೇಕು

ಅಯ್ಯೋ ನಂಗೇನೂ ಆಸೆ ಇಲ್ಲ, ಆರಾಮಾಗಿ ಅಡಿಗೆ ಮಾಡ್ಕೊಂಡು ಮನೇಲೇ ಇರ್ತೀನಿ ಅನ್ನೋರಿಗಿಂತ, ನನ್ನ ಜೀವನ, ನನ್ನ ಕನಸು, ನನ್ನ ಆಸೆ ಅಂತ ಇದೆ, ಇದ್ನೆಲ್ಲಾ ನಾ ಸಾಧಿಸಬೇಕು... ಜೀವನದಲ್ಲಿ ಇನ್ನೂ ಮೇಲಕ್ಕೆ ಬರಬೇಕು, ನನ್ನ ಕನಸೆಲ್ಲಾ ನನಸಾಗಬೇಕು ಅಂತ ತನ್ನ ಗುರಿ ಕಡೆಗೆ ಮುನ್ನುಗ್ಗೋ ಗುಣ ಹುಡ್ಗೀರಲ್ಲಿದ್ರೆ ಇಷ್ಟ ಆಗತ್ತೆ.

8. ಡಯಟ್ಟು ಗಿಯಟ್ಟು ಅಂದೇ ಊಟ ಸರಿಯಾಗಿ ಮಾಡ್ಬೇಕು 

ಹೆಚ್ಚಿನ ಹುಡುಗೀರು ತೆಳ್ಳಗಿರ್ಬೇಕು, ಹಾಗಿರ್ಬೇಕು, ಹೀಗಿರ್ಬೇಕು ಅಂತ ಸರಿಯಾಗ್ ತಿನ್ನಲ್ಲ. ಸುಮ್ನೆ ಡಯಟ್ಟು ಅಂತ ಸ್ವಲ್ಪಾನೆ ತಿನ್ನದು, ತಿಂದೆ ಇರೋದು... ಈ ಥರ ದೊಂಬ್ರಾಟ ಆಡೋರು ಇಷ್ಟ ಆಗಲ್ಲ. ಊಟಾನ ಅಚ್ಚುಕಟ್ಟಾಗಿ ಇಷ್ಟ ಪಟ್ಟು, ಊಟದ ರುಚೀನ ಎಂಜಾಯ್ ಮಾಡ್ಕೊಂಡು, ಡಯಟ್ಟು ಗಿಯಟ್ಟು ಅಂತ ತಲೆಕೆಡುಸ್ಕೊಳ್ದೆ, ನೆಮ್ಮದಿಯಾಗಿ ಊಟ ಮಾಡೋರು ಇಷ್ಟ ಆಗ್ತಾರೆ.

ಮೂಲ

9. ಭಾವನೆಗೆ ಬೆಲೆ ಕೊಡ್ಬೇಕು

ಹೆಣ್ಣು ಯಾವತ್ತೂ ಭಾವಜೀವಿ ಅಂತ ಹೇಳ್ತಾರೆ, ಆದ್ರೆ ಎಷ್ಟೋ ಹೆಣ್ಣುಮಕ್ಕಳು ಭಾವನೆಗೆ ಬೆಲೆ ಕೊಡಲ್ಲ. ಭಾವನೆಗೆ ಬೆಲೆ ಕೊಡೋರು, ಮನಸ್ಸಿನ ಭಾವನೇನ ಹೇಳ್ದೆ ತಿಳ್ಕೊಳೋರು ಅಷ್ಟೇ ಅಲ್ಲ ತಮ್ಮ ಭಾವನೇನ ಚನ್ನಾಗಿ ವ್ಯಕ್ತಪಡಿಸೋರು ಇಷ್ಟ ಆಗ್ತಾರೆ. ಅದು ಬಿಟ್ಟು ಸುಮ್ನೆ ಕಲ್ಲು ಗುಂಡಿನ ತರ ಭಾವನೇನೇ ಇಲ್ದೆ ಇರೋರೋ, ಅಥ್ವಾ ಹುಡ್ಗಾನೇ ಎಲ್ಲಾ ಅರ್ಥ ಮಾಡ್ಕೋಬೇಕು ಅಂತ ಅನ್ಕೊಳೋರ ಸಹವಾಸಾನೇ ಹುಡುಗ್ರಿಗೆ ಬೇಡ ಅನ್ನಿಸ್ಬಿಡತ್ತೆ.

10. ತನ್ನ ಕಾಲ್ಮೇಲೆ ತಾನು ನಿಂತು ಸ್ವತಂತ್ರವಾಗಿರ್ಬೇಕು

ತನ್ನ ಗುರಿಯ ಕಡೆ ಗಮನ ಕೊಟ್ಟು, ಅಯ್ಯೋ ಅವ್ರಿಲ್ಲ ಇವ್ರಿಲ್ಲ ಅಂತ ಯಾರ್ ಮೇಲೂ ಡಿಪೆಂಡ್ ಆಗ್ದೇ, ನನ್ನ ಕನಸನ್ನ ನಾನು ಸಾಧಿಸ್ತೀನಿ, ನಾನು ಸ್ವತಂತ್ರವಾಗಿ ಜೀವಿಸ್ತೀನಿ ಅನ್ನೋ ಗುಣ ತುಂಬಾ ಇಷ್ಟ ಆಗತ್ತೆ. ತಾವು ಮಾಡೋ ಕೆಲಸದಲ್ಲಿ ಯಶಸ್ಸು ಸಾಧಿಸ್ದಾಗ, ಅವಳ ಕಣ್ಣಲ್ಲಿ ಒಂದು ಮಿಂಚು ಕಾಣತ್ತೆ ನೋಡಿ... ಆ ಖುಷೀನ ಬಾಯ್ಮಾತಲ್ಲಿ ಹೇಳಕ್ಕಾಗಲ್ಲ.

ಮೂಲ

ಈ ಪಟ್ಟಿ ಇನ್ನೂ ಬೆಳೀತಾನೇ ಹೋಗತ್ತೆ. ಆದ್ರೆ ತುಂಬಾ ಹುಡ್ಗರನ್ನ ಕೇಳಿ, ಅವ್ರ ಪ್ರಕಾರ ತೀರಾ ಮುಖ್ಯ ಅನ್ಸಿದ್ ಹತ್ತನ್ನ ಇಲ್ಲಿ ಕೊಟ್ಟಿದ್ದೀವಿ ಅಷ್ಟೆ. ಇನ್ನೂ ಯಾವ್ಯಾವ ಗುಣ ಮುಖ್ಯ ಅಂತ ನಿಮಗನ್ಸತ್ತೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: