ಹುಡ್ಗ ಮೆಸೇಜ್ ಮಾಡ್ಲಿಲ್ಲ ಅಂತ ಹಾರಾಡದೆ, ಹುಡ್ಗೀರು ಈ 10 ಕಾರಣ ತಿಳ್ಕೊಂಡ್ರೆ ಒಳ್ಳೇದು

ಯಾಕಿಂಗಾಡ್ತಾರೋ ಈ ಹುಡುಗರು ಅಂತ ಅನ್ಸಿರ್ಬೋದು

ಇವತ್ತಿನ್ ಜಮಾನ್ದಲ್ಲಿ, ಒಬ್ರಿಗೊಬ್ರು ಫೋನ್ ಮಾಡಿ ಮಾತಾಡಕ್ಕಿಂತ ಸಂದೇಶ ಕಳ್ಸದೇ ಅನುಕೂಲ ಅನ್ಸತ್ತೆ ಕಣ್ರಿ. ಮೀಟಿಂಗಲ್ಲಿ ಇರ್ತೀವಿ, ಥಿಯೇಟರಲ್ಲಿರ್ತೀವಿ ಅಥ್ವ ಫೋನ್ ತೊಗೊಳಕ್ಕಾಗ್ದೇ ಇರೋ ಜಾಗ್ದಲ್ಲೆಲ್ಲಾ ಇರ್ತೀವಪ್ಪ. ಹೇಳಕ್ಕಾಗಲ್ಲ. ಅಂಥಾ ಸಂದರ್ಭದಲ್ಲಿ ಸಂದೇಶದ್ ಮೂಲಕ ವ್ಯವಹಾರ ಮಾಡೋದೇ ಉತ್ತಮ. ಟೆಕ್ನಾಲಜಿ ಎಷ್ಟೆಲ್ಲಾ ಮುಂದುವರ್ದಿದೆ ನೋಡಿ. ಬರೀ ಫೋನ್ ಮಾಡೋ ಕಾಲನೂ ಇತ್ತು, ಆದ್ರೆ ಯಾವಾಗ ಜನ ಮೊಬೈಲ್ಗೆ ಅಂಟ್ಕೊಳಕ್ಕೆ ಶುರುಮಾಡುದ್ರೋ, ಆಗ ಹತ್ತಾರು ಥರದ್ ಸಂದೇಶ ಕಳ್ಸೋ ಆಪ್ ಹುಟ್ಕೊಳ್ತು. ಇನ್ನು ಈ ಸಂದೇಶದ್ ಮೂಲಕ ಮಾತುಕಥೆ ಆಡದು ಬರೀ ಆಫೀಸ್ ಕೆಲ್ಸಕ್ಕೆ, ವ್ಯವಹಾರಕ್ಕೆ ಮಾತ್ರ ಅಲ್ಲ. ಸ್ವಂತಕ್ಕೆ, ಕುಟುಂಬದೋರ್ ಜೊತೆ, ಫ್ರೆಂಡ್ಸ್ ಜೊತೆ ಹರಟೆ ಹೊಡಿಯಕ್ಕೂ ಹೇಳಿ ಮಾಡಿಸ್ದಂಗಿದೆ. ಇಷ್ಟೆಲ್ಲಾ ಅನುಕೂಲ ಇದ್ರೂ, ದೃಷ್ಟಿ ಬೊಟ್ಟು ಇಟ್ಟಂಗೆ ಏನಾದ್ರೂ ಕೊರತೆ ಇರ್ಬೇಕಲ್ವ? ಅದೇ, ಯಾಕೀ ಗಂಡಸ್ರು ಮೆಸೇಜ್ ಕಳ್ಸಿದ್ ತಕ್ಷಣ ಉತ್ತರ ಕಳ್ಸಲ್ಲ ಅಂತ. ಹುಡುಗೀರು ಪಾಪ ಒಂದ್ ಸಂದೇಶ ಕಳ್ಸಿ, ಉತ್ತರ ಬಂತಾ, ಬಂತಾ ಅಂತ ಒಳ್ಳೆ ಬಕಪಕ್ಷಿಗಳ್ ಥರ ಕಾಯ್ತಿರ್ಬೇಕು. ಅಥ್ವ ಒಂದ್ ಗುಂಪು ಅಂತ ಮಾಡ್ಕೊಂಡು ಅದ್ರಲ್ಲಿ ಯಾವ್ದಾದ್ರೂ ವಿಷ್ಯನ ಗಂಭೀರ್ವಾಗಿ ಚರ್ಚೆ ಮಾಡ್ತಿದ್ರೆ, ಹುಡುಗ್ರು ಮಾತ್ರ ಪತ್ತೆನೇ ಇರಲ್ಲ. 'ಯಾಕಿಂಗಾಡ್ತಾರೋ ಈ ಹುಡುಗರು? ಅದ್ಯಾಕಿಂಗ್ ಮಾಡ್ತಾರೋ ಈ ಹುಡುಗರು' ಅಂತ ನೀವ್ ಬೈಕೊತಿದ್ರೆ, ಒಂದಷ್ಟು ಜನ ಹುಡುಗ್ರುನ್ನೇ ಗುಡ್ಡೆ ಹಾಕ್ಕೊಂಡು ಕೇಳ್ದಾಗ ಬಂದಿರೋ ಉತ್ತರಗಳ್ನ ಅಂತೆಕಂತೆ ನಿಮ್ಗೋಸ್ಕರ ಪಟ್ಟಿ ಮಾಡಿ ಕೊಟ್ಟಿದೆ ನೋಡಿ.

1. ಮೂಡ್ ಇರಲ್ಲ , ಅದಕ್ಕೇ...

ಮೂಡಿಲ್ಲ ಅಂದ್ರೆ ಹುಡುಗ್ರು, ಹುಡುಗೀರ್ ಮೆಸೇಜ್ಗೆ ರೆಪ್ಲೈ ಮಾಡಲ್ವಂತೆ. ಯಾಕಂದ್ರೆ ಒಂದ್ ಮೆಸೇಜ್ ಕಳ್ಸಿದ್ರೆ ಸಾಕು, ಹುಡುಗಿ ಅದನ್ನೇ ಕಾಯ್ಕೊಂಡಿದ್ದು ಸಾಲಾಗಿ ಇನ್ನೊಂದಿಷ್ಟ್ ಮೆಸೇಜ್ ಕಳುಸ್ತಾಳೆ. ಮತ್ತೆ ಅದನ್ನೆಲ್ಲಾ ಓದ್ಕೊಂಡು, ಉತ್ತರ ಕಳ್ಸಕ್ಕೆ ಯಾರಿಗ್ ತಾಳ್ಮೆ ಇರತ್ತೆ ಹೇಳಿ. ಅದೂ ಅಲ್ದೇ ಗುಂಪಲ್ಲಿ ಏನಾದ್ರು ಆಗೋದ್ರೆ, ಇನ್ನೂ ಅದ್ವಾನ. ಒಂದ್ ಮೆಸೇಜ್ಗೆ ಹತ್ತು ಕಮೆಂಟು. ಅವನ್ನೆಲ್ಲಾ ಓದ್ಕೊಂಡು, ಅವ್ರಿಗೆಲ್ಲಾ ಸಮಾಧಾನ ಆಗೋ ಹಾಗೆ ಉತ್ತರ ಕೊಡೋ ಹೊತ್ತಿಗೆ, ಯಪ್ಪಾ ಯಾಕ್ ಬೇಕು ಈ ಫಜೀತಿ ಅನ್ನಿಸ್ಬಿಡತ್ತೆ. ಜೊತೆಗೆ ಈ ಸಮಾಜ ವಿರೋಧಿ ಸಂದೇಶ ಏನಾದ್ರೂ ಬಂದಿದ್ರೆ, ಅಂಥಾ ಮಾತುಕಥೆನಲ್ಲೆಲ್ಲಾ ಭಾಗವಹಿಸಕ್ಕೆ ಒಂದಷ್ಟು ಹುಡುಗ್ರು ಇಷ್ಟ ಪಡಲ್ವಂತೆ.

2. ತಮಗನಿಸಿದ್ದನ್ನ ನೇರವಾಗಿ ಹೇಳಕ್ಕೆ ಭಯ, ಅದಕ್ಕೇ...

ಎಷ್ಟೊಂದ್ಸಲ ಹುಡುಗ್ರಿಗೆ ತಮ್ಗೆ ಅನ್ಸಿದ್ದನ್ನ ನೇರವಾಗಿ ಹೇಳ್ಕೊಳಕ್ಕೆ ಭಯ ಮತ್ತೆ ಮುಜುಗರ ಆಗತ್ತಂತೆ ಗೊತ್ತಾ? ಹೇಳದ್ ಹೇಳ್ಬಿಟ್ಟು ಒಂಥರಾ ಇಂಗು ತಿಂದ ಮಂಗನ್ ಥರ ಮಿಕ ಮಿಕ ಅಂತ ಹುಡುಗಿ ಕಳ್ಸೋ ಮೆಸೇಜ್ನೆಲ್ಲಾ ಓದ್ಕೊಂಡು ಆಮೇಲ್ ಏನ್ ಹೇಳ್ಬೇಕೋ ಗೊತ್ತಾಗ್ದೇ ಬೆಬ್ಬೆಬ್ಬೆ ಅಂದ್ರೆ, ತಾವಾಗೇ ಸಿಕ್ಕಾಕ್ಕೊಂಡಂಗೆ. ಅದೂ ಅಲ್ದೇ ಬಹಳಷ್ಟು ಜನ ಹುಡುಗ್ರಿಗೆ ತಾವು ಏನ್ ಮಾತಾಡಿದ್ರೆ ಯಾರಿಗೆ, ಹೇಗೆ ನೋವಾಗತ್ತೆ ಅಂತ ಚೆನ್ನಾಗ್ ಗೊತ್ತಿರತ್ತಂತೆ. ಹಾಗಾಗಿ ಬಾಯಿ ಬಿಡಲ್ವಂತೆ. ಎಲ್ಲಿ ಯಡವಟ್ಟಾಗಿ ಸಂದೇಶ ಕಳ್ಸಿದ್ರೆ, ಹುಡುಗಿ ಬೇಜಾರ್ ಮಾಡ್ಕೊತಾಳೋ ಅಂತ.

ಮೂಲ

3. ಆ ಹುಡುಗಿ ಕಂಡ್ರೆ ಅಷ್ಟಕ್ಕಷ್ಟೆ, ಅದಕ್ಕೇ...

ಈ ಉತ್ತರ ಸ್ವಲ್ಪ ಸ್ವಾರ್ಥ ಅಂತ ಅನ್ಸುದ್ರೂ, ಅನಾವಶ್ಯಕವಾಗಿ ಕೊರಗೋದು ಸಂಕಟ ಪಡೋದ್ರಿಂದ ತಪ್ಪುಸ್ಕೊಬೋದು. ಈಗ, ಒಂದ್ ಹುಡುಗಿ ಜೊತೆ ಇಡೀ ದಿನ ಡೇಟಿಂಗ್ ಅಂತ ಕಾಲಕಳ್ದು, ಸುತ್ತಾಡಿದ್ ಮೇಲೆ ಹುಡುಗಿ ಇಷ್ಟ ಆಗ್ಲಿಲ್ಲ ಅಂದ್ರೆ, ಸಾಮಾನ್ಯ ಹುಡುಗ್ರು ಆಕೆ ಕಳ್ಸೋ ಸಂದೇಶಕ್ಕೆ ರಿಪ್ಲೈ ಮಾಡಕ್ಕೆ ಹೋಗಲ್ಲ. ಇಲ್ಲಿ ಒಂದ್ ಪ್ರಶ್ನೆ ಬರತ್ತೆ ಕಣ್ರಿ. ಸುತ್ತಾಡೋವಷ್ಟೂ ಸುತ್ತಾಡಿ, ಮಜಾ ಮಾಡಿ, ಆಮೇಲೆ ಹುಡುಗಿ ಬೇಡ, ಇಷ್ಟ ಆಗ್ಲಿಲ್ಲ ಅಂದ್ರೆ ಯಾವ್ ನ್ಯಾಯ ಅನ್ಸತ್ತೆ. ಆದ್ರೆ ಹುಡುಗುರ್ ಪ್ರಕಾರ, ಇಷ್ಟ ಇಲ್ದೇ ಇದ್ರೂ ಸಂದೇಶಕ್ಕೆಲ್ಲಾ ರಿಪ್ಲೈ ಮಾಡ್ಕೊಂಡು ಸುಳ್ಳು ಆಸೆ, ಭರವಸೆನ ಯಾಕೆ ಆ ಹುಡುಗಿ ಮನಸ್ಸಲ್ಲಿ ಹುಟ್ಟುಸ್ಬೇಕು? ಅಲ್ಲಿಂದಲ್ಲಿಗೇ ಸಂಬಂಧನ ಕಟ್ ಮಾಡಿದ್ರೆ ಒಳ್ಳೇದು ಅಂತ.

4. ಗೇಮ್ ಆಡೋದ್ರಲ್ಲಿ ಬ್ಯುಸಿಯಾಗಿರ್ತಾರೆ, ಅದಕ್ಕೇ...

ಹುಡುಗ್ರಿಗೆ ಮೊಬೈಲಲ್ಲಿ ವೀಡಿಯೋ ಗೇಮ್ ಆಡೋದು ಅಂದ್ರೆ ಪಂಚಪ್ರಾಣ. ಹಾಗಾಗಿ ಹುಡುಗೀರ್ ಸಂದೇಶಕ್ಕೆ ಹುಡುಗ್ರು ಯಾಕ್ ತಕ್ಷಣ ಮೆಸೇಜ್ ಮಾಡಲ್ಲ ಅನ್ನಕ್ಕೆ ಅಂತೆಕಂತೆಗೆ ಗೊತ್ತಾಗಿರೋ ಉತ್ತರಗಳ್ ಪೈಕಿ ಇದೂ ಒಂದು. ತುಂಬಾ ಇಂಟರೆಸ್ಟಿಂಗ್ ಆಗಿ ಆಟ ಆಡ್ತಿರುವಾಗ, ಒಂದಾದ್ಮೇಲೆ ಒಂದು ಸಂದೇಶ ಬರ್ತನೇ ಇದ್ರೆ, ಕಿರಿಕಿರಿ ಅನ್ಸತ್ತಂತೆ. ಹಾಗಾಗಿ, ಹುಡುಗಿ ಏನೋ ಕಳ್ಸುದ್ಲು ಅಂತ ಅದಕ್ಕೆ ರಿಪ್ಲೈ ಮಾಡೋದು, ಮತ್ತೆ ಆಕೆ ಅದಕ್ಕೆ ಉತ್ತರ ಕಳುಸ್ದಾಗ, ಹುಡುಗ ಅದನ್ನ ನೋಡಿ ತನಗೆ ಅನ್ಸಿದ್ದನ್ನ ಕಳುಸ್ಬೇಕು. ಇಲ್ಲ ಅಂದ್ರೆ, ಹುಡುಗಿ ತಪ್ಪು ತಿಳ್ಕೊಬೋದು. ಆ ಮೆಸೇಜ್ಗೆ ಉತ್ತರ ಕಳುಸ್ದಾ? ಈ ಮೆಸೇಜ್ಗೆ ಕಳ್ಸಕ್ಕೆ ಆಗ್ಲಿಲ್ವ ಅಂತ ಸಿಟ್ಮಾಡ್ಕೊಬೋದು. ಅದಕ್ಕೆ ಆ ತಾಪತ್ರಯನೇ ಬೇಡ ಅಂತ ಯಾವ್ ಮೆಸೇಜ್ಗೂ ತಲೆ ಕೆಡುಸ್ಕೊಳ್ದೇ ಮೊಬೈಲ್ನ ಸೈಲೆಂಟಿಗ್ ಹಾಕೋ, ಹಾಯಾಗಿ ಆಟ ಆಡ್ಕೊಂಡೋ, ಫ್ರೀ ಆದಾಗ ಎಲ್ಲಾ ಮೆಸೇಜ್ಗೂ ರಿಪ್ಲೈ ಮಾಡ್ತಾರೆ.

ಮೂಲ

5. ಹುಡ್ಗೀರು ಒಂದೊಂದ್ಸರ್ತಿ ತಮಾಷೆನೂ ಸೀರಿಯಸ್ಸಾಗಿ ತಗೋತಾರೆ, ಅದಕ್ಕೇ...

ಹುಡುಗ್ರು ಯಾಕ್ ಮೆಸೇಜ್ ಮಾಡಕ್ಕೆ ಒಳ್ಳೆ ಆಸ್ತಿ ಬರ್ಕೊಡಂಗ್ ಆಡ್ತಾರೋ ಆ ದೇವ್ರಿಗೇ ಗೊತ್ತು. ಆದ್ರೆ ಕೆಲವು ಹುಡುಗ್ರು ಹೇಳೋ ಪ್ರಕಾರ, ಹುಡಿಗೀರು ಅದ್ಯಾವಾಗ್ ಕಾಮಿಡಿ ಮಾಡ್ತಾರೋ ಯಾವಾಗ್ ಸೀರಿಯಸ್ ಆಗ್ತಾರೋ ಗೊತ್ತಾಗದೇ ಇಲ್ವಂತೆ. ಅಲ್ಲಾ ಹುಡುಗೀರೂ ಹೀಗೇನಾ? ಮೊದ್ಲು ಮೊದ್ಲು ತಮಾಷೆಗೆ ಅಂತ ಶುರುವಾಗೋ ಮಾತುಕಥೆನ ಹುಡುಗೀರು ಕಡೇಗೆ ಗಂಭೀರ್ವಾಗ್ ತೊಗೊಂಡು ಬೇಜಾರ್ ಮಾಡ್ಕೊತಾರಂತೆ. ಹೇಗೆ ಅಂತೀರಾ? ಹುಡುಗೀರು ತಾವ್ ಕಳ್ಸೋ ಮೇಸೇಜ್ನ ಹುಡುಗ್ರು ಪ್ರತೀ ಸಾಲು, ಪ್ರತೀ ಪದನೂ ಬಿಡ್ದೇ ಓದಿ, ಅವಕ್ಕೆಲ್ಲಾ ರಿಪ್ಲೈ ಮಾಡ್ಬೇಕು ಅಂತ ಎದುರು ನೋಡ್ತಾರಂತೆ. ಆದ್ರೆ ಹುಡುಗ್ರು ಸ್ವಭಾವ ಅದಲ್ಲ. ಅವ್ರು ಇಡೀ ಸಂದೇಶ ಓದ್ಬಿಟ್ಟು ಅದ್ರ ಸಾರಂಶಕ್ಕೆ ಮಾತ್ರ ಉತ್ತರ ಕಳುಸ್ತಾರೆ. ಆಗ ಹುಡುಗೀರ್ಗೆ, ಹುಡುಗ್ರು ತಮ್ ಬಗ್ಗೆ ಸೀರಿಯಸ್ಸಾಗಿ ಇಲ್ಲ. ತಾವ್ ಕಳ್ಸೋ ಸಂದೇಶನ ಗಂಭೀರ್ವಾಗಿ ತೊಗೊಳಲ್ಲ ಅನ್ನೋ ಭಾವನೆ ಬರತ್ತೆ. ಕಡೇಗೆ ಆಕೆನ ಸಮಾಧಾನ ಮಾಡೋ ಕೆಲ್ಸ ಹುಡುಗಂಗೇನೇ.

6. ಹುಡ್ಗೀನೂ ಲೇಟಾಗಿ ಉತ್ತರ ಕೊಡ್ತಾಳೆ, ಅದಕ್ಕೇ...

ಬರೀ ಹುಡುಗೀರ್ ಬಗ್ಗೆನೇ ದೂರಾಯ್ತು. ಹುಡುಗ್ರೂ ಪಾಪ ಮೆಸೇಜ್ ಮಾಡಿ ಕಾಯ್ಕೊಂಡಿರ್ತೀವಿ ಅಂತ ಕೆಲವೊಬ್ರು ಹೇಳ್ತಾರೆ ಕಣ್ರಿ. ಅವ್ರ ಪ್ರಕಾರ, ಹುಡುಗೀರ್ ಮೆಸೇಜು ಅಂದ್ರೆ ಯಾವತ್ತೂ ಉದಾಸೀನ ಮಾಡಲ್ವಂತೆ. ಅದ್ರಲ್ಲೂ ತಾವ್ ಪ್ರೀತ್ಸೋ ಹುಡುಗಿ ಮೆಸೇಜ್ ಅಂದ್ರೆ ಒಂದ್ ಕ್ಷಣನೂ ಲೇಟ್ ಮಾಡಲ್ವಂತೆ. ಆದ್ರೂ ಹುಡುಗಿ ಮಾತ್ರ ಇವ್ರ ಆತುರ, ಕಾಳಜಿ ಅರ್ಥ ಮಾಡ್ಕೊಳ್ದೆ. ಗಂಟೆಹಟ್ಲೆ ಕಾಯಿಸಿ ಆಮೇಲ್ ರಿಪ್ಲೈ ಮಾಡ್ತಾಳಂತೆ. ಹೀಗೂ ಇರ್ತಾರ ಅಂತ ನಿಮ್ಗೂ ಆಶ್ಚರ್ಯ ಆಗ್ತಿದ್ಯಾ? ಅಂತೆಕಂತೆಗೂ ಅದೇ ಡೌಟು ಕಣ್ರಿ. ಮೆಸೇಜ್ ನೋಡ್ದೇ ಇರೋ, ಅಥ್ವ ಲೇಟಾಗಿ ರಿಪ್ಲೈ ಮಾಡೋ ಮಾಡೋ ಹುಡುಗೀರೂ ಇದಾರ ಅಂತ.

ಮೂಲ

7. ಹುಡ್ಗಿ ಒಳ್ಳೆ ಪತ್ತೆದಾರಿ ತರ ಆಡ್ತಾಳೆ, ಅದಕ್ಕೇ...

ಇನ್ನು ಕೆಲವು ಹುಡುಗ್ರಿಗೆ, ಹುಡುಗಿ ತಮ್ ಬಗ್ಗೆ ಒಂದ್ ಕಣ್ಣಿಡಕ್ಕೆ ಅಂತನೇ ಮೆಸೇಜ್ ಮಾಡ್ತಾಳೆ ಅನ್ನೋ ಭಾವನೆ ಇದೆ. ಎಲ್ಲಿದಿಯಾ? ಯಾರ್ ಜೊತೆ ಇದಿಯ? ಬೇಗ ಮನೇಗ್ ಹೋಗು, ಹೀಗೆ ಅತಿಯಾಗಿ ಕಾಳಜಿ ತೋರ್ಸೋದು ಇಷ್ಟ ಆಗಲ್ಲ. ತಾನೇನೋ ಚಿಕ್ ಮಗು ಅಂದ್ಕೊಂಡಿದಾಳೆ ಅಂತ ಸಿಟ್ಟು ಬರತ್ತೆ. ಜೊತೆಗೆ ಯಾರೊ ತನ್ ಸ್ವಾತಂತ್ಯನ ಕಿತ್ಕೊಂಡಂಗಾಗತ್ತಂತೆ. ಹಾಗಾಗಿ ಹುಡುಗಿ ಎಷ್ಟೇ ಮೆಸೇಜ್ ಕಳ್ಸುದ್ರೂ ರಿಪ್ಲೈ ಮಾಡಲ್ಲ. ಇಂಥಾ ಹುಡುಗ್ರು ಹೇಳೋ ಪ್ರಕಾರ, ತಾವಿರೋ ಜಾಗದ್ ಬಗ್ಗೆ, ಜನದ್ ಬಗ್ಗೆ ತಮ್ ಹುಡುಗೀಗೆ ನಂಬಿಕೆ ಇರ್ಬೇಕು. ಇಲ್ಲ ಅಂದ್ರೆ ಅದ್ಯಾವ್ ಸೀಮೆ ಪ್ರೀತಿ? ಅದೂ ಅಲ್ದೆ ಹೇಳ್ಬೇಕು ಅಂದ್ರೆ ನಾವೇ ಮೆಸೇಜ್ ಮಾಡಲ್ವ? ಅಂತಾರೆ.

8. ಮೆಸೇಜಲ್ಲಿ ಹುಡ್ಗೀರು ಅಪಾರ್ಥ ಮಾಡ್ಕೊಳೋದು ಜಾಸ್ತಿ, ಅದಕ್ಕೇ...

ಸಾಕಷ್ಟು ಜನ ಹುಡುಗ್ರಿಗೆ ಒಂದ್ ಸೀಕ್ರೆಟ್ ಗೊತ್ತು. ಏನಪ್ಪ ಅದು ಅಂದ್ರೆ ಮೆಸೇಜಲ್ಲಿ ಒಂದ್ ಮಾತ್ ಹೇಳಿದ್ರೆ, ಅದನ್ನ ಹುಡುಗೀರು ಇನ್ನೇನೋ ಅರ್ಥ ಮಾಡ್ಕೊತಾರಂತೆ. ಕೊನೇಗೆ ಎಲ್ಲಾ ಅಪಾರ್ಥ ಆಗಿ, ಹುಡುಗನ್ ತಲೆಗೇ ಕಟ್ತಾರೆ ಅಂತನೂ ಹೇಳ್ತಾರೆ. ಪಾಪ ಹುಡುಗ್ರು ಗೊತ್ತಿಲ್ದೇ ಮುಗ್ಧವಾಗಿ ಕಳ್ಸೋ ಮೆಸೇಜೂ, ಹುಡುಗೀರ್ಗೆ ಏನೋ ತರ್ಲೆ ಮೆಸೇಜ್ ಥರ, ಚುಡಾಯಿಸ್ತಿರೋ, ಔಮಾನ ಮಾಡ್ತಿರೋ ಮೆಸೇಜು ಅನ್ಸಿ, ಹುಡುಗ್ರನ್ನ ತರಾಟೆಗ್ ತೊಗೊತಾರೆ. ಹಾಗಾಗಿ ಆ ಗೋಳೆಲ್ಲ ಬೇಡ ಅಂತ, ಹುಡುಗ್ರು ನೇರಾ ನೇರಾ ಮಾತಾಡಕ್ಕೇ ಇಷ್ಟ ಪಡ್ತಾರೆ. ಅಥ್ವ ಕಡೇಪಕ್ಷ ಫೋನಲ್ಲಾದ್ರೂ ಮಾತಾಡಿ ಬಚಾವಾಗ್ಬೋದು ಆದ್ರೆ ಮೆಸೇಜ್ ರಗಳೆ ಮಾತ್ರ ಬೇಡಪ್ಪ ಅಂತಾರೆ.

ಮೂಲ

9. ಯಾವ್ದೋ ಕೆಲಸದಲ್ಲಿ ಬ್ಯುಸಿ ಇರ್ತಾರೆ, ಅದಕ್ಕೇ...

ಉಳಿದ ಹುಡುಗ್ರು ಹೇಳೋದ್ ಇಷ್ಟು ಕಣ್ರಿ. ಅವ್ರು ಹುಡುಗೀರ್ ಮೆಸೇಜ್ನ ಯಾವತ್ತೂ ನಿರ್ಲಕ್ಷ್ಯ ಮಾಡಲ್ವಂತೆ. ಅಕಸ್ಮಾತ್ ಏನಾದ್ರೂ ಅರ್ಜೆಂಟ್ ಕೆಲ್ಸ ಇದ್ದು, ಒಂದ್ ಕ್ಷಣನೂ ಪುರುಸೊತ್ತಾಗಿಲ್ಲ ಅಂದ್ರೆ ಮಾತ್ರ ರಿಪ್ಲೈ ಮಾಡಲ್ಲ ಅಷ್ಟೇ. ಅದು ಬಿಟ್ರೆ ಹುಡುಗೀರ್ ಮೆಸೇಜ್ಗೆ ರಿಪ್ಲೈ ಮಾಡಕ್ಕೆ ಯಾವ್ ಬೇಜಾರು ಇಲ್ಲ ಅಂತಾರೆ.

10. ಹುಡ್ಗಿ ನಿಜ್ವಾಗ್ಲೂ ಇಷ್ಟಪಟ್ಟು ಮೆಸೇಜ್ ಮಾಡ್ತಿದ್ದಾಳ ಅಂತ ತಿಳ್ಕೊಬೇಕಾಗಿರತ್ತೆ, ಅದಕ್ಕೇ...

ಈ ಉತ್ತರ ಅಂತೂ ಅಪರೂಪದ್ ಹುಡುಗ್ರು ಹೇಳದು ಅನ್ಸತ್ತೆ. ಯಾವಾಗ್ಲೂ ಹುಡುಗ್ರೇ ಹೆಣ್ಮಕ್ಳ ಹಿಂದೆ ಸುತ್ತೋದು ಅನ್ನೋ ಅಪವಾದ ಇದೆ. ಆದ್ರೆ ಕೆಲವು ಹುಡುಗ್ರು ಇರ್ತಾರೆ. ಅವ್ರಿಗೆ ಹುಡುಗೀರು ಕಷ್ಟ ಪಟ್ಟು ತಮ್ಮ ನಂಬಿಕೆ ಪ್ರೇಮ ಗಳುಸ್ಕೊಬೇಕು ಅನ್ನೋ ಆಸೆ ಇರತ್ತೆ. ಬರೀ ಒಂದೆರಡ್ ಸಲ ಮೆಸೇಜ್ ಮಾಡಿ ಸುಮ್ನಾಗೋದ್ರೆ ಆ ಹುಡುಗೀರು ಬರೀ ಟೈಂ ಪಾಸ್ಗೆ ಮೆಸೇಜ್ ಕಳುಸ್ತಿದ್ರು ಅಂತ. ಇನ್ನು ಬಿಡ್ದೇ ದುಂಬಾಲ್ ಬಿದ್ದು ಮೆಸೇಜ್ ಮೇಲ್ ಮೆಸೇಜ್ ಕಳ್ಸಿ, ಉತ್ತರ ಕಳ್ಸೋವರ್ಗೂ ಪ್ರಯತ್ನ ಮಾಡ್ತಿದ್ರೆ ಅಂಥಾ ಹುಡುಗೀರ್ಗೆ ನಿಜ್ವಾಗ್ಲೂ ತಮ್ ಬಗ್ಗೆ ಇಂಟರೆಸ್ಟ್ ಇದೆ ಅಂತ ಹುಡುಗ್ರು ಅಂದ್ಕೊತಾರಂತೆ. ಹಾಗಾಗಿ ಅಷ್ಟು ಬೇಗ ಮೆಸೇಜ್ಗೆ ರಿಪ್ಲೈ ಮಾಡಲ್ಲ. ಕಾಡ್ತಿರೋ ಹುಡುಗಿ ಪ್ರೀತಿ ಸತ್ಯ ಅಂತ ಗೊತ್ತಾಗೋವರ್ಗೂ ಅಷ್ಟಾಗಿ ಆಕೆನ ಹಚ್ಕೊಳೋವಂಥ ಸಂದೇಶ ಕಳ್ಸಲ್ಲ. ಜೊತೆಗೆ ಪ್ರತಿ ಮೆಸೇಜ್ಗೂ ಉತ್ತರ ಕಳ್ಸದು, ಕೇಳಿದ್ದಕ್ಕೆಲ್ಲಾ ರಿಪ್ಲೈ ಮಾಡದು ಇವೆಲ್ಲಾ ಮಾಡದೇ ಇಲ್ವಂತೆ.

ಮೂಲ

ಇದೆಲ್ಲಾ ಓದ್ಬಿಟ್ಟು ಯಾವ್ ಹುಡುಗೀರೂ ಬೇಜಾರ್ ಮಾಡ್ಕೊಬೇಡ್ರಪ್ಪ. ಇವೆಲ್ಲಾ ನಾವ್ ಹೇಳ್ತಿರೋದಲ್ಲ. ಅಂತೆಕಂತೆಗೆ ಒಂದಷ್ಟು ಹುಡುಗ್ರಿಂದ ಸಿಕ್ಕಿರೋ ಅಭಿಪ್ರಾಯಗಳು. ಇನ್ನೂ ಏನಾದ್ರೂ ಡೌಟು ನಿಮ್ ತಲೆ ಕೊರೀತಿದ್ರೆ, ನಿಮ್ ಹುಡುಗನ್ನೇ ಕೇಳ್ ನೋಡಿ ಯಾಕ್ ನನ್ ಮೆಸೇಜ್ ನೋಡಿದ್ ತಕ್ಷಣ ರಿಪ್ಲೈ ಮಾಡಲ್ಲ ಅಂತ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: