ದುಬಾರಿ ಬೆಲೆಯ ಸೂಟ್ ತೊಗೊಬೇಕಾದ್ರೆ ಈ 7 ವಿಷಯಗಳನ್ನ ಗಮನದಲ್ಲಿಟ್ಕೊಳಿ, ಬೇಕಾಗತ್ತೆ

ಮತ್ತೆ ಮತ್ತೆ ಸೂಟ್ ಹಾಕೋತೀರಿ!

ಸೂಟ್ ಹಾಕ್ಕೊಂಡು ಎಲ್ಲರ ಎದ್ರಿಗೆ ಮಿರ ಮಿರ ಮಿಂಚ್ಬೇಕಾದ್ರೆ ನಿಮ್ಗೊಂದಿಷ್ಟು ವಿಷ್ಯ ಗೊತ್ತಿರ್ಲೇಬೇಕು. ಅದಕ್ಕೇ ಅಂತೆಕಂತೆ ನಿಮ್ಗೋಸ್ಕರ ಸೂಟಲ್ಲಿ ಸ್ಟೈಲಾಗಿ ಕಾಣಕ್ಕೆ ಏನ್ ಮಾಡ್ಬೇಕು ಅಂತ ಹೇಳಿದ್ದೀವಿ... ಓದ್ಕೊಳಿ ಬೇಕಾಗತ್ತೆ! ಮದ್ವೆಗಾದ್ರೂ ಒಂದು ಸೂಟ್ ತೊಗೊಬೇಕಲ್ವಾ?

1. ಶರ್ಟ್ - ಅಳತೆ ಸರ್ಯಾಗಿದ್ಯಾ ನೋಡಿ

ಒಂದು ಶರ್ಟ್ ಪರ್ಫೆಕ್ಟ್ ಅಂತಾ ನೀವೇನಾದ್ರೂ ನಿರ್ಧಾರ ಮಾಡ್ಬೇಕಾದ್ರೆ ಈ ನಾಲ್ಕು ವಿಷ್ಯಗಳನ್ನ ಗಮನದಲ್ಲಿಟ್ಕೋಬೇಕು... ತೋಳಿನ ಉದ್ದ , ಭುಜದ ಅಳತೆ, ಸೊಂಟ ಮತ್ತು ಕುತ್ತಿಗೆ ಪಟ್ಟಿ. ಇದೇ ನಾಲ್ಕು ಆಯುಧಗಳು. 

ತೋಳಿನ ಉದ್ದ 

ಶರ್ಟ್ ಹಾಕ್ಕೊಳ್ಳೊವಾಗ ಕೈ ಮೇಲಕ್ಕೆತ್ತಿ ಶರ್ಟ್ ಫಿಟ್ ಪರೀಕ್ಷೆ ಮಾಡೋದ್ನ ಇವತ್ತೇ ನಿಲ್ಸಿ. ಅದ್ರ ಬದ್ಲು ಕೈಯನ್ನ ಆರಾಮಾಗಿ ಸೈಡಲ್ಲಿ ಬಿಟ್ಬಿಡಿ. ಈಗ ನೋಡಿ... ನಿಮ್ ಶರ್ಟ್ ಮಣಿಕಟ್ಟು ಮತ್ತು ಹೆಬ್ಬೆರಳಿನ ಕೆಳಭಾಗದ ಮಧ್ಯ ನಿಂತಿದ್ರೆ ನಿಮ್ ಶರ್ಟ್ ತೋಳಿನ ಉದ್ದ ಸರ್ಯಾಗಿದೆ ಅಂತ ಅರ್ಥ. ಒಂದ್ವೇಳೆ ತೋಳಿನ ಉದ್ದ ಮಣಿಕಟ್ಟಿನ ಮೇಲಿದ್ರೆ ಆ ಶರ್ಟ್ ನಿಮ್ಗೆ ಚಿಕ್ಕದಾಗಿದೆ ಅಂತ ಅರ್ಥ. ಹೆಬ್ಬೆರಳಿನ ತುದಿ ವರೆಗೆ ಬಂದ್ಬಿಟ್ರೆ ಆ ಶರ್ಟ್ ನಿಮ್ಗೆ ದೊಗಳೆ ಅಂತರ್ಥ.

ಮೂಲ

ಭುಜದ ಅಳತೆ 

 ಇದ್ನ ನೋಡೋವಾಗ ಸ್ವಲ್ಪ ಹುಷಾರಾಗಿರ್ಬೇಕು. ಶರ್ಟ್ ಹಾಕ್ಕೋಳ್ಳೋವಾಗ, ನಿಮ್ ಶರ್ಟಿನ ಭುಜದ ಕಟ್, ನಿಮ್ಮ ಭುಜ ಮತ್ತು ಕೈ ಸೇರೋ ಜಾಗಕ್ಕೆ ಸರೀಗೆ ಹೊಂದ್ಕೋಬೇಕು. ನಿಮಗಿದು ಸರಿಯಾಗಿ ಕಾಣಿಸ್ತಿಲ್ಲ ಅಂದ್ರೆ ಬೇರೆಯವರ ಹತ್ರ ಕೇಳಿ.

ಮೂಲ

ಸೊಂಟದ ಅಳತೆ

ಸೊಂಟಕ್ಕೆ ಶರ್ಟ್ ಹೇಗ್ ಫಿಟ್ಟಾಗಿದೆ ಅಂತ ಗೊತ್ತಾಗ್ಬೇಕಾದ್ರೆ ಯಾರಾನ್ನಾದ್ರೂ ತಬ್ಕೊಳಿ . ಯಾರೂ ಸಿಗ್ಲಿಲ್ಲಾಂದ್ರೆ ಯಾವ್ದಾದ್ರೂ ಒಂದ್ ವಸ್ತೂನಾದ್ರೂ ತಬ್ಕೊಳ್ಳಿ. ಇದೆಲ್ಲ ಆಗಲ್ಲಪ್ಪಾಂದ್ರೆ, ನಿಮ್ಮ ಎರಡೂ ಕೈಯನ್ನ ಮೇಲಕ್ಕೆತ್ತಿ ನೋಡಿ. ಇನ್ ಶರ್ಟ್ ಮಾಡಿದ್ದಾಗ ಉಸಿರಾಡಕ್ಕೆ ಕಷ್ಟ ಆಗ್ತಿದ್ರೆ, ಶರ್ಟ್ ಚಿಕ್ಕದಿದೆ ಅಂತ ಅರ್ಥ. ಇನ್ನು, ಇನ್ ಶರ್ಟ್ ಮಾಡ್ದಾಗ, ತುಂಬಾ ಬಟ್ಟೆ ಹೊರಗ್ ಬಂದು, ಶರ್ಟ್ ಉಬ್ಬಿದ ತರ ಕಾಣ್ತಿದ್ರೆ, ನಿಮಗೆ ಆ ಶರ್ಟ್ ದೊಡ್ಡು ಅಂತ ಅರ್ಥ.

ಮೂಲ

ಕುತ್ತಿಗೆ ಪಟ್ಟಿ

ಕುತ್ತಿಗೆ ಪಟ್ಟಿ ಸರ್ಯಾಗ್ ಕೂತ್ಕೊಂಡಿದೆಯಾ ಇಲ್ವಾ ಅಂತ ನೋಡ್ಬೇಕಾದ್ರೆ ಮೊದ್ಲು ಶರ್ಟನ ಮೇಲ್ಗಡೆ ಗುಂಡಿ ಹಾಕ್ಕೊಳಿ. ಆಮೇಲೆ ಮಧ್ಯದ ಬೆರಳು ಮತ್ತೆ ತೋರ್ಬೆರಳ ಸಹಾಯದಿಂದ ಒಂದ್ಸಲ ಒಳ್ಗಡೆಯಿಂದ ಸರ್ಕಲ್ ಹಾಕಿ. ಒಂದ್ವೇಳೆ ಜಾಗ ಜಾಸ್ತಿಯಿದ್ರೆ ಶರ್ಟ್ ದೊಡ್ಡದಾಗಿದೆಯಂತರ್ಥ. ಕಡ್ಮೆಯಿದ್ರೆ ಮಲ್ಕೊಂಡಾಗ ಉಸಿರುಗಟ್ಸತ್ತೆ. 

ಮೂಲ

2. ಪ್ಯಾಂಟ್ - ಹಾಕ್ಕೊಂಡಾಗ ಮುಂದೆ ಸ್ವಲ್ಪ ಸುಕ್ಕು ಬರೋದನ್ನ ಆರಿಸ್ಕೊಳಿ

ಪ್ಯಾಂಟ್ ಯಾವಾಗ್ಲೂ ಸ್ಟ್ರೈ ಟ್ ಕಟ್ ಇರ್ಬೇಕು. ಜೊತೆಗೆ ಮುಂದೆ ಸ್ವಲ್ಪ ಮಟ್ಟಿಗೆ ಸುಕ್ಕಿದ್ರೆ ಒಳ್ಳೇದು. ಒಂದ್ಸಲ ಕನ್ನಡಿ ಮುಂದೆ ನಿಂತು ಪರೀಕ್ಷೆ ಮಾಡ್ಕೊಳ್ಳಿ. ತುಂಬಾ ಜನರು ಪ್ಯಾಂಟ್ ಸರ್ಯಾಗಿದೆಯಾ ಇಲ್ಲಾಂತ ನಿರ್ಧಾರ ಮಾಡೋದು ಹಿಂದೆ ನೋಡಿ.

ನಿಮ್ ಪ್ಯಾಂಟೆಲ್ಲಾದ್ರೂ ನಿಮ್ ಹಿಂದ್ಗಡೆ ಭಾಗಕ್ಕೆ ಅಂಟ್ಕೊಂಡಿರೋ ತರ ಇದ್ರೆ ಅಥ್ವಾ ಚೀಲದ ತರ ಉಬ್ಬಿದ್ರೆ ಸರ್ಯಾಗಿಲ್ಲ ಅಂತರ್ಥ. ಇವೆರಡ್ರ ಮಧ್ಯೆ ಇರೋ ಅಳತೆ ಸರಿಯಾಗಿರತ್ತೆ.

ಮೂಲ

ಮೂಲ

3. ಜ್ಯಾಕೆಟ್ - ಒಳಗೆ ಹಾಕಿರೋ ಶರ್ಟ್ ತೋಳ್ಗಿಂತಾ ಜ್ಯಾಕೆಟ್ ತೋಳು ಚಿಕ್ಕದಿದ್ಯಾ ನೋಡ್ಕೊಳಿ

ಜ್ಯಾಕೆಟ್ನ ಹಾಕ್ಕೊಂಡಾಗ, ಅದ್ರ ತೋಳಿನ ಉದ್ದ ಶರ್ಟ್ನ ತೋಳಿನ ಉದ್ದಕ್ಕಿಂತ ಸ್ವಲ್ಪ ಕಡ್ಮೆ ಇರ್ಬೇಕು. ನಿಮ್ ಶರ್ಟಿನ್ ತೋಳು ಜ್ಯಾಕೆಟ್ ತೋಳಿಂದ ಇಣುಕಿ ನೋಡ್ತಿರೋ ಹಾಗಿರ್ಬೇಕು ಅಷ್ಟೆ. 

ಇನ್ನು ನಿಮ್ ಜ್ಯಾಕೆಟ್ ತೋಳು, ನಿಮ್ ಕೈ ಶುರುವಾಗೋ ಜಾಗಕ್ಕೆ ಒಂದೆರಡಿಂಚು ಹಿಂದೇನೆ ಇರ್ಬೇಕು ಮತ್ತೆ ನಿಮ್ ಹಿಂದಿನ ಭಾಗಾನ ಕವರ್ ಮಾಡ್ಬೇಕು. ನಿಮ್ ಜ್ಯಾಕೆಟಲ್ಲಿ ಮೂರು ಗುಂಡಿಯಿದ್ರೆ, ಮಧ್ಯದ ಗುಂಡೀನ ನೀವು  ಹಾಕ್ಕೊಳ್ಳೇಬೇಕು. ಮೊದ್ಲನೇಯದು ನಿಮ್ಮಿಷ್ಟ... ಆದ್ರೆ ಕೊನೇದ್ ಮಾತ್ರ ಹಾಕ್ಕೊಳ್ಳೇಬಾರ್ದು.

ಮೂಲ

4. ಯಾರ್ ಯಾರಿಗೆ ಯಾವ ಜ್ಯಾಕೆಟ್ - ನಿಮ್ಮ ಎತ್ತರ ಮತ್ತು ಮೈಕಟ್ಟು ನೋಡಿ ತಗೊಳಿ

ಎತ್ತರವಾಗಿ ತೆಳ್ಳಗಿರೋರು

ಇವ್ರು ಯಾವ್ದೇ ತರದ ಜ್ಯಾಕೆಟ್ ಹಾಕೊಂಡ್ರೂ ಚನ್ನಾಗಿ ಕಾಣತ್ತೆ.

ಎತ್ತರವಾಗಿ ಕಟ್ಟುಮಸ್ತಾಗಿರೋರು

ಇವ್ರಿಗೆ ಎರಡು ಗುಂಡಿ ಇರೋ ಜ್ಯಾಕೇಟ್ ತುಂಬಾನೇ ಸೂಕ್ತ ಅಂತಾರೆ. ಒಂದೇ ಗುಂಡಿ ಇರೋ ಸ್ವಲ್ಪ ಗಿಡ್ಡವಾಗಿರೋ ಜ್ಯಾಕೆಟ್ ಕೂಡಾ ಒಳ್ಳೇದು.

ಮೂಲ

ಕುಳ್ಳಗೆ ಸಣ್ಣ ಇರೋರು

ಸೊಂಟದ ಕೆಳ್ಗೆ ನೀಳವಾಗಿರೋ "ವಿ" ಶೇಪನಲ್ಲಿರೋ ಜ್ಯಾಕೆಟ್ ಒಳ್ಳೇದು ಎರಡು ಕಡೇ ಎದೆ ಉಬ್ಬಿಕೊಂಡಿರೋ ಅಥವಾ ಮೂರು-ನಾಲ್ಕು ಗುಂಡಿ ಇರೋ ಜ್ಯಾಕೆಟ್ ಸರಿ ಬರಲ್ಲ.

ಕುಳ್ಳಗೆ ದಪ್ಪಕ್ಕಿರೋರು

ಕುತ್ತಿಗೆ ಕೆಳ್ಗೆ ಸ್ವಲ್ಪ ಮಟ್ಟಿಗೆ ವಿ ಶೇಪ್ ಬರೋ ಹಾಗೆ ಇರೋ ಜ್ಯಾಕೆಟ್ ತಗೊಳ್ಳಿ. ನಿಮ್ಗೂ ಎರಡು ಕಡೇ ಎದೆ ಉಬ್ಬಿಕೊಂಡಿರೋ ಅಥವಾ ಮೂರು-ನಾಲ್ಕು ಗುಂಡಿ ಇರೋ ಜ್ಯಾಕೆಟ್ ಸರಿ ಬರಲ್ಲ. 

ಮೂಲ

5. ಟೈ - ನಿಮ್ ಸೂಟಿಗೆ ಹೊಂದೋ ಟೈ ಕಟ್ಕೊಳಿ

ಸೂಟ್ ಅಂದ್ಮೇಲೆ ಟೈ ಕಟ್ಟಿಲ್ಲಾಂದ್ರೆ ಹೇಗೆ ಹೇಳಿ? ನಿಮ್ ಸೂಟಿಗೆ ಹೊಂದೋ, ಒಳ್ಳೆ ಪ್ಯಾಟರ್ನ್ ಇರೋ ಟೈ ಹಾಕೊಳಿ. ಖಂಡಿತ್ವಾಗ್ಲೂ ಕಾರ್ಟೂನ್ ಮತ್ತಿತರ ಬೊಂಬೆಗಳಿರೋ ಟೈ ಹಾಕೋಬೇಡಿ. ಜೋಕರ್ ತರ ಕಾಣಿಸ್ತೀರ. ಟೈ ಕಟ್ಟಕ್ಕೆ ವಿಂಡ್ಸರ್ ನಾಟ್ ಸರಿ. ಅದನ್ನ ಹೇಗ್ ಕಟ್ಕೊಳೋದು ಅಂತ ತೋರ್ಸಿದೀವಿ ನೋಡಿ.

ಮೂಲ

6. ಟೈಮ್ ಇಲ್ಲಾಂದ್ರೆ ಬೊ ಟೈ ಕಟ್ಟಿ

ವಿಂಡ್ಸರ್ ತರದ ಟೈಗಳ್ನ ಕಟ್ಟೋಕಾಗ್ಲಿಲ್ಲ ಅಂದ್ರೆ ಬೋ ಟೈ ಕಟ್ಕೊಳಿ. ಸಮಯಾನೂ ಉಳಿಯತ್ತೆ.

ಮೂಲ

7. ಬೆಲ್ಟ್ ಮತ್ತೆ ಶೂ - ಒಂದೇ ಬಣ್ಣದ್ದಿರೋ ಹಾಗೆ ನೋಡ್ಕೊಳಿ

ಸೂಟ್ ಹಾಕ್ಕೊಂಡ್ಮೇಲೆ ನಿಮ್ ಬೆಲ್ಟ್ ಮತ್ತೆ ನಿಮ್ ಶೂ ಒಂದೇ ಬಣ್ಣದಲ್ಲಿರ್ಬೇಕು. ಹಾಗೇ ಕಾಲ್ಚೀಲ ಗಾಢವಾದ ಬಣ್ಣದಲ್ಲಿರ್ಬೇಕು. 

ಮೂಲ

ತಗೊಂಡ್ಮೇಲೆ ನೀವ್ ಇದ್ನೆಲ್ಲಾ ಮಾಡ್ಲೇಬೇಕು. ಇಲ್ಲಾಂದ್ರೆ ಅದ್ರ ಬೆಲೆನೇ ಹೋಗ್ಬಿಡತ್ತೆ. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: