ಹತ್ತಿರದೋರ್ನ ದೂರ ಮಾಡ್ಕೊಳೋ ಮುಂಚೆ ಈ 10 ವಿಷಯಗಳನ್ನ ಗಮನದಲ್ಲಿಟ್ಕೊಳಿ, ಸುಮ್ನೆ ಅಲ್ಲ

ಬಿಡ್ಬೇಕಾ... ಬೇಡ್ವಾ?

ಜೀವನದಲ್ಲಿ ನಮಗೆ ತುಂಬಾ ಇಷ್ಟವಾದೋರನ್ನ ದೂರ ಮಾಡಿಕೊಳ್ಳೋದು ಅಷ್ಟು ಸುಲಭವಾದ ಕೆಲಸ ಅಲ್ಲ. ಮನಸ್ಸಿಗೆ ತುಂಬಾನೇ ನೋವಾಗುತ್ತೆ. ನಿಮ್ಮ  ಜೀವನದಲ್ಲಿ ಒಂದು ವೇಳೆ ಅಂತ ಒಂದು ಸಂದರ್ಭ ಬಂದ್ರೆ ನಿರ್ಧಾರ ಮಾಡಕ್ಕೆ ಮುಂಚೆ ಒಂದ್ಸಲ ಈ ವಿಷಯಗಳ ಬಗ್ಗೆ ಗಮನ ಕೊಡಿ. 

10. ಬಿಡ್ಬೇಕು ಅಂತ ಮಾಡಿರೋ ನಿರ್ಧಾರ ಸರಿಯಾಗಿದ್ಯ ಅಂತ ಯೋಚ್ಸಿ

ಒಂದ್ಸಲ ನೀವು ಪ್ರೀತಿಸ್ತಿದ್ದವರನ್ನ ಅಥವಾ ನೀವು ಇನ್ನೂ ಹುಚ್ಚರ ತರ ಪ್ರೀತಿಸ್ತಿರೋ ವ್ಯಕ್ತಿನ ಬಿಡೋದು ಅಂದ್ರೆ ಅದು ತುಂಬಾ ಕಷ್ಟದ ಕೆಲಸ. ನೀವು ಆ ನಿರ್ಧಾರ ತೊಗೊಳಕ್ಕೆ ಮುಂಚೆ ನಿಮ್ಮನ್ನ ನೀವೇ ಈ ಪ್ರಶ್ನೆಗಳನ್ನ ಒಂದ್ಸರ್ತಿ ಕೇಳ್ಕೊಳಿ

ಇನ್ನು ಮುಂದೇನೂ ಅವರ ಜೊತೇಲಿ ಇದ್ರೆ ನಿಮಗೆ ತುಂಬಾ ನೋವಾಗುತ್ತಾ?

ಕಳೆದು ಹೋದ ದಿನಗಳು, ಆಗಿನ ನೆನಪು ನಿಮ್ಮನ್ನ ಮತ್ತೆ ಮತ್ತೆ ಕಾಡದೆ ಇರಲು ಯಾವುದಾದ್ರೂ ದಾರಿ ಇದೆಯಾ?

ಮುಂದೆ ಯಾವತ್ತಾದ್ರೂ ಅವರು ನಿಮ್ಮ ಕಣ್ಮುಂದೆ ಬಂದ್ರೆ ಅವರನ್ನ ನೋಡಕ್ಕೆ ನಿಮ್ಮ ಮನಸ್ಸು ಒಪ್ಪುತ್ತಾ?

ಆಗಿರೋದನ್ನೆಲ್ಲ ಮರೆಯೋ ಶಕ್ತಿ ನಿಮಗಿದ್ಯಾ?

ಈ ಎಲ್ಲಾ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ಕಂಡು ಹಿಡ್ಕೊಳಿ. ಆಮೇಲೆ ನಿರ್ಧಾರ ಮಾಡಿ.

9. ನಿಮ್ಮ ಜೀವನದ ನಿರ್ಧಾರ ನೀವೇ ತೊಗೊಳಿ, ಬೇರೆಯವ್ರಿಗೆ ಅವಕಾಶ ಕೊಡ್ಬೇಡಿ

ನಿಮಗೆ, ನಿಮ್ಮ ಜೀವನಕ್ಕೆ ಏನು ಒಳ್ಳೇದು ಅಂತ ನಿಮಗಿಂತ ಚೆನ್ನಾಗಿ ಬೇರೆ ಯಾರಿಗೂ ಗೊತ್ತಿರಲ್ಲ. ನಿಮ್ಮ ಬದಲು ನಿಮ್ಮ ಸ್ನೇಹಿತರೋ, ನಿಮ್ಮ ಮನೆಯವರೋ ನಿರ್ಧಾರ ಮಾಡೋದು ಸರಿಯಲ್ಲ. ನೀವು ಒಬ್ಬರೇ ಒಂದು ಕಡೆ ಕೂತು ಯೋಚ್ನೆ ಮಾಡಿ. ಯಾರು ಏನು ಅನ್ಕೋತಾರೋ ಅಂತ ಒಂದು ನಿಮಿಷಾನೂ ಯೋಚನೆ ಮಾಡದೇ ನಿರ್ಧಾರ ತೊಗೊಳ್ಳಿ.

ಮೂಲ

8. ಜೀವನದಲ್ಲಿ ಯಾರೇ ಆಗ್ಲಿ , ಯಾವುದೇ ವಿಷಯವಾಗ್ಲಿ ಶಾಶ್ವತ ಅಲ್ಲ ಅನ್ನೋ ಸತ್ಯ ಅರ್ಥಮಾಡ್ಕೊಳಿ

ನಿಮಗೆ ಅವರನ್ನ ಬಿಡೋದು ತುಂಬಾ ಕಷ್ಟ ಅನ್ನಿಸ್ತಿದ್ರೆ ಜೀವನದಲ್ಲಿ ಯಾರೇ ಆಗ್ಲಿ, ಯಾವುದೇ ವಿಷಯವಾಗ್ಲಿ ಶಾಶ್ವತವಲ್ಲ ಅನ್ನೋದನ್ನ ಅರ್ಥ ಮಾಡ್ಕೊಳಿ. ಜನ ಸಾಯಬಹುದು, ಗಂಡ ಹೆಂಡತಿ ಡೈವೋರ್ಸ್ ಆಗ್ಬಹುದು, ಸಂಬಂಧಗಳು ಮುರೀಬಹುದು, ಯಾವುದೂ ಕೊನೆ ತನಕ ಉಳಿಯಲ್ಲ. ನಾವು ಅವರನ್ನ ಉಳಿಸ್ಕೊಳಕ್ಕೆ ಪ್ರಯತ್ನ ಮಾಡಬಹುದು ಅಷ್ಟೇ. ನೀವು ಎಷ್ಟೇ ಪ್ರಯತ್ನ ಮಾಡಿದ್ರೂ ಅವರು ನಿಮ್ಮಿಂದ ದೂರ ಆದ್ರೆ ಅವರು ಹೋಗಿ ಖುಷಿಯಾಗಿರಲು ಬಿಡಿ. ನೀವು ಅವರನ್ನ ಉಳಿಸ್ಕೊಳಕ್ಕೆ ಮಾಡ್ತಿದ್ದ ಪ್ರಯತ್ನಾನಾ ನಿಮ್ಮ ಸಂತೋಷ ಕಂಡ್ಕೊಳಕ್ಕೆ ಉಪಯೋಗಿಸಿ.

7. ನಿಮ್ಮ ಸಂತೋಷ ಬೇರೆಯವರ ಮೇಲೆ ಅವಲಂಬಿಸಿರಬಾರ್ದು ಅಂತ ತಿಳ್ಕೊಳಿ

ನಿಮ್ಮ ಸಂತೋಷ ನಿಮ್ಮ ಕೈಲಿರ್ಬೇಕು, ಬೇರೆಯವರ ಮೇಲೆ ಅವಲಂಬಿಸಿರಬಾರ್ದು. ನಿಮ್ಮ ಸಂತೋಷಕ್ಕಾಗಿ ನೀವು ಬೇರೆಯವರ ಮೇಲೆ ಡಿಪೆಂಡ್ ಆಗಿದ್ರೆ ಒಂದಲ್ಲ ಒಂದು ದಿನ ತುಂಬಾ ಕಷ್ಟ ಆಗ್ಬಹುದು. ಬೇರೆಯವರನ್ನ ಪ್ರೀತಿಸಿ ಅವರ ಜೊತೆ ಸಂತೋಷವಾಗಿರೋದು ಒಳ್ಳೇದೇ. ಆದ್ರೆ ನಿಮ್ಮ ಸಂತೋಷ ಪೂರ್ತಿಯಾಗಿ ಅವರ ಮೇಲೆ ಅವಲಂಬಿಸಿದ್ರೆ ಖಂಡಿತ ಅದು ಒಳ್ಳೇದಲ್ಲ. ನಿಮ್ಮನ್ನ ನೀವು ಹೇಗೆ ಖುಷಿಯಾಗಿ ಇರೋ ಹಾಗೆ ನೋಡ್ಕೋಬೇಕು ಅಂತ ನಿಮಗೆ ಗೊತ್ತಿರ್ಬೇಕು. ನಿಮ್ಮ ಮೇಲೆ ನಿಮಗೆ ಪ್ರೀತಿ ಇರ್ಲಿ, ನಿಮ್ಮಲ್ಲೇ ಸಂತೋಷ ಕಂಡ್ಕೊಳಿ. ಆಗ ನಿಮ್ಮ ಸಂತೋಷಕ್ಕೆ ಬೇರೆಯವರ ಮೇಲೆ ಅವಲಂಬಿಸೋದನ್ನ ಬಿಡಬಹುದು. ಆಗ ದುರದೃಷ್ಟವಶಾತ್ ಹತ್ತಿರದವರನ್ನ ಬಿಡೋ ಸಂದರ್ಭ ಬಂದ್ರೆ ಅಷ್ಟೊಂದು ಕಷ್ಟ ಅನ್ಸಲ್ಲ. 

ಮೂಲ

6. ಹಳೆ ನೆನಪುಗಳು ಆದಷ್ಟೂ ನಿಮ್ಮನ್ನ ಕಾಡದೆ ಇರೋಹಾಗೆ ನೋಡ್ಕೊಳಿ

ಯಾರನ್ನಾದ್ರೂ ಬಿಡ್ಬೇಕು ಅಂದ್ರೆ ತುಂಬಾ ಕಷ್ಟ ಆಗಕ್ಕೆ ಒಂದು ಮುಖ್ಯ ಕಾರಣ ಅಂದ್ರೆ ಹಳೆಯ ನೆನಪುಗಳು. ನಾವು ಒಟ್ಟಾಗಿ ಕಳೆದ ಕ್ಷಣಗಳ ಬಗ್ಗೆ ಮನಸ್ಸಲ್ಲೇ ತುಂಬಾನೇ ಯೋಚ್ನೆ ಮಾಡ್ತಿರ್ತೀವಿ. ಹಿಂದೆ ಆಗಿರೋದರ ಬಗ್ಗೆ ಯೋಚ್ನೆ ಮಾಡೋದ್ರಿಂದ ದುಃಖ ಆಗುತ್ತೆ, ಮನಸ್ಸು ದುರ್ಬಲ ಆಗುತ್ತೆ ನಿಜ. ಅದಕ್ಕೆ ಸಾಧ್ಯವಾದಷ್ಟೂ ಈಗ ಏನಾಗ್ತಿದೆ, ಮುಂದೆ ಏನಾಗ್ಬೇಕು ಅದರ ಬಗ್ಗೆ ಯೋಚ್ನೆ ಮಾಡಿ. ಮುಂದಿನ ದಿನಗಳು ಹೇಗೆ ಚೆನ್ನಾಗಿರಬೇಕು, ನಿಮ್ಮ ಭವಿಷ್ಯ ಉಜ್ವಲವಾಗಿರಬೇಕೋ ಅಥವಾ ಹಿಂದೆ ಆಗಿದ್ದನ್ನ ನೆನಪು ಮಾಡ್ಕೊಂಡು ಅಳುತ್ತ ಕೂರ್ಬೇಕಾ ಅನ್ನೋ ನಿರ್ಧಾರ ನೀವೇ ಮಾಡ್ಬೇಕು.

5. ನಿಮ್ಮ ಜೀವನ ನೀವು ತಗೊಳೋ ನಿರ್ಧಾರಗಳ ಮೇಲೆ ನಿಂತಿರತ್ತೆ ಅಂತ ನೆನಪಿಟ್ಕೊಳಿ

ಪ್ರಪಂಚ ಯಾವತ್ತೂ ನಿಮ್ ಜೊತೇಲೂ ಇರಲ್ಲ, ನಿಮಗೆ ವಿರುದ್ಧವಾಗೂ ಇರಲ್ಲ. ಇದನ್ನ ಚೆನ್ನಾಗಿ ಅರ್ಥ ಮಾಡ್ಕೊಳಿ. ನಿಮ್ಮ ಜೀವನದ ಯಾವುದೇ ಒಂದು ದಿನ ಹೇಗೆ ಶುರು ಆಗ್ಬೇಕು ಹೇಗೆ ಮುಗಿಬೇಕು ಅನ್ನೋದು ನಿಮಗೆ ಬಿಟ್ಟಿದ್ದು. ಅವರ ಜೊತೇಲೆ ಇದ್ದು ದಿನ ನರಕಯಾತನೆ ಅನುಭವಿಸ್ಬೇಕಾ ಅಥವಾ ಅವರನ್ನ ಬಿಟ್ಟು ನೆಮ್ಮದಿಯಿಂದ, ಸಂತೋಷದಿಂದ ಇರ್ಬೇಕಾ? ಎಲ್ಲ ನಿಮ್ಮ್ ಕೈಯಲ್ಲೇ ಇದೆ, ಪ್ರಪಂಚ ಇದರ ಬಗ್ಗೆ ಏನೂ ಮಾಡಕ್ಕೆ ಬರಲ್ಲ, ನೀವು ಏನು ನಿರ್ಧಾರ ಮಾಡ್ತಿರೋ ಪ್ರಪಂಚ ಅದನ್ನೇ ಒಪ್ಪಿಕೊಳುತ್ತೆ.

ಮೂಲ

4. ಬಿಡ್ಬೇಕೋ ಬೇಡ್ವೋ ಅಂತ ಎರಡೆರ್ಡು ಮನಸ್ಸು ಮಾಡ್ಬೇಡಿ

ನಿಮ್ಮ ಜೀವನದಲ್ಲಿ ಏನು ಆಗ್ಬೇಕು, ಏನು ಆಗ್ಬಾರ್ದು ಅನ್ನೋ ನಿರ್ಧಾರ ನೀವು ಮಾಡ್ಬೇಕು. ದೂರ ಮಾಡ್ಬೇಕೊ ಬೇಡವೋ ಅಂತ ಎರಡೆರಡು ಮನಸ್ಸಿಟ್ಕೊಂಡು ಒಂದು ಗಟ್ಟಿಯಾದ ನಿರ್ಧಾರ ಮಾಡದೇ ದಿನ ಕಳೀತಿದ್ರೆ ಏನೂ ಉಪಯೋಗ ಇಲ್ಲ. ನೀವು ನಿಧಾನ ಮಾಡಿದಷ್ಟೂ ನಿಮ್ಮ ಮನಸ್ಸಿಗೆ ಹೆಚ್ಚು ನೋವಾಗುತ್ತೆ. ಒಂದೇ ಮನಸ್ಸಿಂದ ಒಂದು ಸರಿಯಾದ ನಿರ್ಧಾರ ಮಾಡಿ.

3. ದೌರ್ಬಲ್ಯಗಳನ್ನ ಕಿತ್ತು ಎಸೀರಿ

ನಿಮ್ಮ ಮನಸ್ಸಿನಲ್ಲಿರೋ ದೌರ್ಬಲ್ಯಗಳನ್ನ ಕಂಡುಹಿಡಿದು ಮೊದಲು ಅದನ್ನ ಕಿತ್ತು ಎಸೀರಿ. ಆ ದೌರ್ಬಲ್ಯಗಳೇನು, ಯಾಕೆ ನೀವು ಬಿಡ್ಬೇಕು ಅನ್ನೋ ನಿರ್ಧಾರ ತೊಗೊಳಕ್ಕೆ ಬಿಡ್ತಿಲ್ಲ ಅಂತ ಅರ್ಥ ಮಾಡ್ಕೊಳಿ. ಇದು ಚೆನ್ನಾಗೆ ಅರ್ಥ ಆದ್ಮೇಲೆ ದೌರ್ಬಲ್ಯಗಳನ್ನ ಕಿತ್ತೆಸದು ನಿಮ್ಮ ನಿರ್ಧಾರದ ಜೊತೆ ಮುಂದುವರೀರಿ.

ಮೂಲ

2. ನಿಮ್ಮ ಬೆಲೆ ಅರ್ಥ ಮಾಡ್ಕೊಳಿ

ಹಿಂದೆ ನಡೆದಿದ್ದನ್ನ, ಯಾಕೆ ಆಯಿತು, ಹೇಗೆ ಆಯಿತು ಅಂತ ಯೋಚ್ನೆ ಮಾಡ್ತಾ ಬಂದ್ರೆ , ಕಾರಣಗಳನ್ನ ಹುಡುಕ್ತಾ ಬಂದ್ರೆ, ಇದಕ್ಕೆ ಒಂದಲ್ಲ ಒಂದು ರೀತಿಲಿ ನಾವೇ ಕಾರಣ ಅನ್ನಿಸದಾಗ ನಾವು ತುಂಬಾ ಸಣ್ಣವರಾಗಿ ಕಾಣಿಸಿ, ನಮ್ ಕಣ್ಣಲ್ಲಿ ನಾವೇ ಬೆಲೆ ಕಳ್ಕೊಂಡ ಹಾಗೆ ಅನ್ಸುತ್ತೆ. ಆದ್ರೆ ಹಾಗೆ ಆಗೋದಕ್ಕೆ ಬಿಡಬೇಡಿ. ನಿಮ್ಮ ಬೆಲೆ ನೀವು ತಿಳ್ಕೊಂಡಿರೋದಕ್ಕಿಂತಲೂ ತುಂಬಾನೇ ಅಮೂಲ್ಯವಾದುದ್ದು. ಯಾವದನ್ನಾದ್ರೂ ಬಿಡಬೇಕು ಅಥವಾ ಯಾರಿಂದನಾದ್ರೂ ದೂರ ಆಗ್ಬೇಕು ಅಂದಾಗಲೇ ನಮ್ಮ ನಿಜವಾದ ಬೆಲೆ ನಮಗೆ ಅರ್ಥ ಆಗೋದು.

1. ಹಿಂದೆ ನಡೆದಿರೋದನ್ನ ನೋಡಿ ಪಾಠ ಕಲೀರಿ

ಪ್ರತಿ ದಿನಾನೂ ಹೊಸದೇ, ಒಂದಲ್ಲಾ ಒಂದು ತಪ್ಪು ಮಾಡಿರ್ತೀವಿ, ಹಾಗೇ ಮರೆತೂ ಬಿಡ್ತೀವಿ. ಆದ್ರೆ ಹಿಂದೆ ಮಾಡಿದ ತಪ್ಪಿಂದ ಪಾಠ ಕಲಿತು ಮುಂದೆ ಸರಿಯಾಗಿರೋ ಪ್ರಯತ್ನ ಮಾಡಲ್ಲ. ಅದಕ್ಕೇ ಹಿಂದೆ ಮಾಡಿದ ತಪ್ಪಿಂದ ಪಾಠ ಕಲಿತು ಸರಿ ಮಾಡ್ಕೊಂಡ್ರೆ ನಿಮ್ಮ ಮೇಲೆ ನಿಮಗೆ ಪ್ರೀತಿ, ಗೌರವ, ನಂಬಿಕೆ, ಮನೋ ಧೈರ್ಯಾನೂ ಹೆಚ್ಚುತ್ತೆ. ಬೇರೆಯವರೂ ನಿಮ್ಮನ್ನ ಇಷ್ಟ ಪಡ್ತಾರೆ.

ಮೂಲ

ನಿಮ್ಮ ನಿಲುವು ಏನೇ ಇರ್ಲಿ... ಚೆನ್ನಾಗಿ ಯೋಚಿಸಿ ನಿಮ್ಮ ಜೀವನಕ್ಕೆ ಯಾವುದು ಸರಿ... ನಿಮ್ಮ ಭವಿಷ್ಯಕ್ಕೆ ಏನು ಸರಿ ಅಂತ ಯೋಚಿಸಿ ಅದಕ್ಕೆ ಸರಿ ಹೊಂದೋ ನಿರ್ಧಾರ ತೊಗೊಳಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: