ನಿಮ್ಮ ಮುಖ ನಿಮ್ಮ ಆರೋಗ್ಯದ ಬಗ್ಗೆ ಏನ್ಹೇಳತ್ತೆ ಅಂತ ತಿಳ್ಕೊಳಿ

ಮುಖ ಬರೀ ಮನಸ್ಸಿಗೆ ಮಾತ್ರ ಅಲ್ಲ, ಆರೋಗ್ಯಕ್ಕೂ ಕನ್ನಡಿ

ಮುಖ ಮನಸ್ಸಿನ್ ಕನ್ನಡಿ ಅಂತಾರೆ. ಆದ್ರೆ ಬರೀ ಮನಸ್ಸಲ್ಲ ಕಣ್ರಿ... ನಮ್ ಆರೋಗ್ಯ ಹೇಗಿದೆ? ದೇಹದಲ್ಲಿರೋ ಎಲ್ಲಾ ಪಾರ್ಟ್ಸೂ ನೆಟ್ಟಗ್ ಕೆಲ್ಸ ಮಾಡ್ತಿದ್ಯಾ ಅಂತಾನೂ ಹೇಳತ್ತೆ ನಮ್ ಮುಖ. ಸುಮಾರ್ ಜನ ಬೆಳಗಾದ್ ತಕ್ಷಣ ಮುಖ ಕನ್ನಡಿನಲ್ಲಿ ನೋಡ್ಕೊಂಡು, ಮೊಡವೆ ಬಂದಿದ್ರೆ ಅದೆಷ್ಟ್ ಬೈಕೊತಾರೋ. ಇನ್ನು ಕೆಲವ್ರು ವಯಸ್ಸಾಗ್ತಿರೋ ಲಕ್ಷಣಗಳು ಅಂದ್ರೆ ಕಣ್ ಕೆಳಗೆ ಚರ್ಮ ಜೋತ್ ಬಿದ್ದಿರದು, ಕಣ್ ಸುತ್ತಾ ಕಪ್ಪಾಗಿರದು... ಇದೆಲ್ಲಾ ನೋಡ್ಕೊಂಡು ಅಯ್ಯೋ ಅಂದ್ವಾಗಿದ್ ಮುಖ ಹೀಗ್ ಆಗ್ತಿದ್ಯಲ್ಲಾ ಅಂತ ಬೇಜಾರ್ ಮಾಡ್ಕೊತಾರೆ. ಇಲ್ಲಿ ಬರೀ ಸೌಂದರ್ಯದ ಪ್ರಶ್ನೆ ಅಲ್ಲ. ನಮ್ ದೇಹದ್ ಒಳಗಿನ ಅಂಗಾಗಗಳು ಸರೀಗ್ ಕೆಲ್ಸ ಮಾಡ್ತಿಲ್ಲ ಅಂತಾನೋ, ಯಾವ್ದೋ ಅಂಗಕ್ಕೆ ಏನೋ ಸೀರಿಯಸ್ಸಾಗೇ ತೊಂದ್ರೆ ಆಗಿದೆ ಅಂತಾನೋ ಅರ್ಥ ಬರತ್ತೆ. ಹಾಗಾಗಿ, ಪ್ರತೀ ಸಲ ಮೇಕಪ್ ಮಾಡ್ಕೊಳೋ ಮೊದ್ಲು ಮುಖದಲ್ಲಿ ಏನಾದ್ರೂ ಬದಲಾವಣೆ ಆಗಿದ್ಯಾ ಅಂತ ಚೆನ್ನಾಗಿ ಗಮನಿಸಿ ಆಮೇಲ್ ಮೇಕಪ್ ಮಾಡ್ಕೊಳಿ. ಇನ್ನು ಗಮನಿಸ್ಬೇಕಿರೋ ಬದಲಾವಣೆಗಳು ಏನು ಅಂತೀರಾ? ಕೆಳಗ್ ಪಟ್ಟಿ ಮಾಡ್ ಕೊಟ್ಟಿದೀವ್ ನೋಡಿ. ಏನೇನ್ ಬದಲಾವಣೆ ಆದ್ರೆ ಏನೇನ್ ತೊಂದ್ರೆ ಆಗಿರ್ಬೋದು ಅಂತ...ಓದ್ ನೋಡಿ. ಉಪ್ಯೋಗಕ್ ಬರತ್ತೆ.

1. ಹಣೆ

ನಿಮ್ ಹಣೇ ಮೇಲಿನ್ ಚರ್ಮ ಬಿಗಿಯಾಗಿದ್ಯಾ, ಕಂದೋಗಿದ್ಯ ಅಥ್ವ ಕೆಂಪಗಾಗಿದ್ಯಾ? ಹಾಗೇನಾದ್ರು ಇದ್ರೆ, ನಿಮ್ಮ ಪಚನ ಕ್ರಿಯೆ ಸರೀಗ್ ನಡೀತಿಲ್ಲ ಅಂತ ಅರ್ಥ. ಹಣೆಗ್ ಈ ತರ ತೊಂದ್ರೆಯಾಗಿದ್ರೆ ನಮ್ಗೆ ಲಿವರಲ್ಲಿ ಏನೋ ಸಮಸ್ಯೆ ಆಗಿದೆ ಅಂತ ತೋರ್ಸತ್ತೆ. ಗೊತ್ತೇ ಇದೆ ಅಲ್ವ, ನಮ್ ದೇಹದಿಂದ ವಿಷಕಾರಿ ಅಂಶಗಳ್ನ ಹೊರಗ್ ಹಾಕಕ್ಕೆ ಲಿವರ್ ಚೆನ್ನಾಗ್ ಕೆಲ್ಸ ಮಾಡೋದು ತುಂಬಾ ಮುಖ್ಯ. ಇನ್ನು ಲಿವರ್ ಜೊತೆ ಗಾಲ್ ಬ್ಲಾಡರ್ ಕೂಡ ಸರಿಯಾಗ್ ಕೆಲ್ಸ ಮಾಡ್ತಿಲ್ಲ ಅಂದ್ರೂ ಈ ತರ ಆಗ್ಬೋದು.

ಮೂಲ

2. ಕಣತಲೆ (ಟೆಂಪಲ್ಸ್)

ಕಣ್ಣುಗಳ ಪಕ್ಕ, ಹಣೆಗೂ ಕೆನ್ನೆಗೂ ಇರೋ ಮಧ್ಯದ್ ಭಾಗನೇ ಕಣತಲೆ. ಈ ಕಣತಲೆ ಏನಾದ್ರೂ ಕೆಂಪಾಗಿದ್ರೆ ಅಥ್ವ ಊದ್ಕೊಂಡಿದ್ರೆ, ಮೂತ್ರಪಿಂಡ ಮಿತಿಮೀರಿ ತುಂಬೋಗಿದೆ ಅಂತ ಅರ್ಥ. ದೇಹದಲ್ಲಿ ತುಂಬಾನೇ ವಿಷದ ಅಂಶ ಸೇರ್ಕೊಂಡಿದ್ರೆ ಹೀಗಾಗತ್ತೆ. ಆದ್ರೆ ಇನ್ನೂ ಒಂದ್ ಕಾರಣ ಇರ್ಬೋದು... ಮಾರ್ಕೆಟ್ನಲ್ಲಿ ಸಿಗೋ ಸಂಸ್ಕರಿಸಿದ ಆಹಾರ ಪದಾರ್ಥನ ಸಿಕ್ಕಾಪಟ್ಟೆ ತಿನ್ನೋದ್ರಿಂದಾನೂ ಈ ಥರದ ಚರ್ಮದ್ ತೊಂದ್ರೆ ಬರತ್ತೆ.

ಮೂಲ

3. ಕಣ್ಣುಗುಡ್ಡೆ

ನಮ್ಮ ದೇಹದಲ್ಲಿ ಬಿಳೀ ರಕ್ತ ಕಣಗಳು ಇರೋದೇ ರೋಗನಿರೋಧಕ ಶಕ್ತೀನ ನಮ್ಮಲ್ಲಿ ತುಂಬಿ, ಆರೋಗ್ಯಾನ ಚೆನ್ನಾಗಿ ಕಾಪಾಡಕ್ಕೆ. ಅಂಥಾ ಬಿಳಿ ರಕ್ತ ಕಣಗಳ್ನ ಉತ್ಪತ್ತಿ ಮಾಡೋದು, ಸಂಗ್ರಹಿಸಿ ಇಡೋದು ಸ್ಪ್ಲೀನ್ ಕೆಲ್ಸ. ಆದ್ರೆ ಯಾವಾಗ ಈ ಸ್ಪ್ಲೀನ್ ಸರಿಯಾಗ್ ಕೆಲ್ಸ ಮಾಡಲ್ವೋ, ಆಗ ಕಣ್ಣಿನ್ ಗುಡ್ಡೆ ಊದ್ಕೊಂಡು, ಕೆಂಪಗೆ ಕಾಣತ್ತೆ. ಅಥ್ವ ಮಾಮೂಲ್ಗಿಂತ ಏನೋ ವ್ಯತ್ಯಾಸ ಇದ್ಯಲ್ಲ ಅಂತನಾದ್ರೂ ಅನ್ಸತ್ತೆ. ಆಗ ಸಾಧ್ಯವಾದಷ್ಟು ಬೇಗ ಡಾಕ್ಟರ್ಗೆ ತೋರುಸ್ಬೇಕು. ಇಲ್ಲ ಅಂದ್ರೆ ತುಂಬಾ ಅಪಾಯ. 

ಮೂಲ

4. ಕಣ್ಣಿನ ಸುತ್ತಾ ಕಪ್ಪು ವೃತ್ತ

ಸಾಮಾನ್ಯವಾಗಿ ರಾತ್ರಿ ನಿದ್ದೆ ಸರಿಯಾಗ್ ಆಗ್ಲಿಲ್ಲ ಅಂದ್ರೆ ಈ ಕಪ್ಪು ವೃತ್ತ ಬರೋದ್ ಸಹಜ. ಆದ್ರೆ ಚೆನ್ನಾಗ್ ನಿದ್ದೆ ಮಾಡಿದ್ಮೇಲೆ ಅದು ಹೊರಟೋಗ್ಬೇಕು. ಅದು ಹೋಗ್ದೆ, ಕಂದೋಗಿ, ಮಾಸಲು ಬಣ್ಣ ಏನಾದ್ರು ಕಾಣ್ತಿದ್ರೆ, ಮೂತ್ರಪಿಂಡದಲ್ಲಿ ಏನೋ ಎಡವಟ್ಟಾಗಿದೆ ಅಂತ ಅರ್ಥ. ಇನ್ನು ಮಾನಸಿಕ ಒತ್ತಡ ತುಂಬಾ ಇದ್ರೆ, ಕಣ್ಣಿನ್ ಕೆಳಗಿನ್ ಚರ್ಮ ಜೋತು ಬೀಳತ್ತೆ. ಆದ್ರೆ ಮೊದ್ಲು ಮೊದ್ಲು ಕಪ್ಪು ವೃತ್ತ ಬಂದಾಗ ಅಯ್ಯೋ ನನ್ನ್ ಮೂತ್ರಪಿಂಡಕ್ ಏನೋ ಆಗೋಗಿದೆ ಅಂತ ಹೆದ್ರೋ ಅವಶ್ಯಕತೆ ಇಲ್ಲ ಕಣ್ರಿ. ಯಾಕಂದ್ರೆ ಊಟ ತಿಂಡಿ ಟೈಮಿಗ್ ಸರಿಯಾಗ್ ಮಾಡ್ದೇ ಇದ್ರೆ, ಪೌಷ್ಟಿಕವಾದ ಆಹಾರ ತಿಂತಾ ಇಲ್ಲ ಅಂದ್ರೂ ಹೀಗಾಗತ್ತೆ. ಜೊತೆಗೆ ಇನ್ನೊಂದ್ ವಿಷ್ಯ, ಯುವಕರಲ್ಲಿ ಕಣ್ಣಿನ್ ಕೆಳಗೆ 'ಕ್ರೋಸ್ ಫೀಟ್' ಆಗೋದನ್ನ ನೋಡಿರ್ತೀವಿ. ಆಗ ಅವ್ರಿಗೆ ಯಾವ್ದೋ ನೆಗೆಟಿವ್ ಭಾವನೆ, ಯೋಚ್ನೆ ಕಾಡ್ತಿದೆ ಅಂತ ಅರ್ಥ ಅಥ್ವ ಲಿವರ್ ತೊಂದ್ರೆನೂ ಇರ್ಬೋದು. ಯಾವ್ದಕ್ಕೂ ಡಾಕ್ಟರ್ ಹತ್ರ ತೋರ್ಸೋದ್ ಒಳ್ಳೇದು.

ಮೂಲ

5. ಕೆನ್ನೆ ಮೇಲ್ಭಾಗ ಮತ್ತೆ ಕೆನ್ನೆ ಮೂಳೆಗಳು

ಯಾರಿಗೆಲ್ಲಾ ಕೆನ್ನೆ ಮೇಲ್ಭಾಗದಲ್ಲಿ ಚರ್ಮದ ಬಣ್ಣ ಕಂದುಬಣ್ಣಕ್ ತಿರ್ಗಿರತ್ತೋ, ಚರ್ಮ ತೂತ್ ಬಿದ್ದಿರತ್ತೋ, ಅವ್ರಿಗೆ ಶ್ವಾಸಕೋಶದಲ್ಲಿ ಏನೋ ತೊಂದ್ರೆ ಆಗಿದೆ ಅಂತ ಅರ್ಥ. ನೀವ್ ನೋಡಿರ್ಬೋದು, ಸಾಮಾನ್ಯವಾಗಿ ಹೊಗೆ ಬಿಡೋರ್ಗೆ, ಅದೇ ಕಣ್ರಿ ಸ್ಮೋಕ್ ಮಾಡೋರ್ ಮುಖ ಹೀಗೇ ಇರತ್ತೆ. ಹಾಗಾಗಿ ಹುಷಾರಾಗಿರಿ.

ಮೂಲ

6. ಕೆನ್ನೆ ಕೆಳಭಾಗ

ಈ ಜಾಗದಲ್ಲಿ ಚರ್ಮದ ಬಣ್ಣ ಕಂದೋಗಿದ್ರೆ, ಅವ್ರು ಸಿಕ್ಕಾಪಟ್ಟೆ ಎಣ್ಣೆ ಪದಾರ್ಥ, ಕರಿದ್ ತಿಂಡಿ, ಚೀಸು, ಪನೀರ್... ಹೀಗೆ ಕೊಬ್ಬಿನಂಶ ಜಾಸ್ತಿ ಇರೋ ಆಹಾರ ತಿಂತಿದಾರೆ ಅಂತ ಗೊತ್ತಾಗತ್ತೆ. ಇದ್ರಿಂದ ಪಾಪ ಹೊಟ್ಟೆಗೂ ಓವರ್ ಟೈಂ ಕೆಲ್ಸ. ಇನ್ನು ಕಂದುಬಣ್ಣದ್ ಜೊತೆ ಆ ಭಾಗದ್ ಮಾಂಸಖಂಡಾನೂ ಶಕ್ತಿ ಇಲ್ದೇ ಜೋತ್ ಬಿದ್ದಿದ್ರೆ, ಅವ್ರಿಗೆ ಆಹಾರ ಜೀರ್ಣ ಆಗೋದ್ರಲ್ಲೂ ತೊಂದ್ರೆ ಇದೆ ಅಂತ ಅರ್ಥ. ಇಲ್ಲಿ ಇನ್ನೊಂಥರಾ ತೊಂದ್ರೆನೂ ಕಾಣುಸ್ಬೋದು. ಏನಪ್ಪ ಅಂದ್ರೆ, ಈ ಕೆನ್ನೆ ಕೆಳಭಾಗ್ದಲ್ಲಿ ಊತ, ಮೊಡವೆ ಇದ್ರೆ, ಅವ್ರಿಗೆ ಕೆಲವೊಂದು ಆಹಾರ ಪದಾರ್ಥಗಳು ದೇಹಕ್ಕೆ ಒಗ್ಗಲ್ಲ, ಅಲರ್ಜಿ ಆಗತ್ತೆ ಅಂತ ತಿಳ್ಸತ್ತೆ. ಅದ್ಯಾವ್ದು? ಏನ್ ತಿಂದಾಗ್ ಮೊಡವೆ ಏಳ್ತಿದೆ ಅಂತ ಗಮನಿಸ್ಕೊಂಡು ತಿಂದ್ರೆ, ಒಂದ್ ಮಟ್ಟಕ್ಕೆ ಈ ತೊಂದ್ರೆ ತಡಿಬೋದು.

ಮೂಲ

7. ಮೂಗಿನ ಮೇಲ್ಭಾಗ ಮತ್ತು ಮೂಗಿನ ಹೊಳ್ಳೆಗಳು

ಮೂಗಿನ್ ಚರ್ಮ ಜೋತ್ ಬಿದ್ದಿದ್ರೆ ಅಥ್ವ ಊದ್ಕೊಂಡಿದ್ರೆ, ಥೈರಾಯಿಡ್ ಗ್ರಂಥಿ ಸರಿಯಾಗ್ ಕೆಲ್ಸ ಮಾಡ್ತಿಲ್ಲ ಅಂತ ಅರ್ಥ ಕಣ್ರಿ. ಇನ್ನು ಮೂಗಿನ್ ಹೊಳ್ಳೆ ಸುತ್ತಾ ಊತ ಇದ್ರೆ, ಸಾಮಾನ್ಯ ಆಸ್ತಮ ರೋಗಿಗಳಲ್ಲಿ ಕಾಣೋ ಶ್ವಾಶಕೋಶ ಹಿಗ್ಗಿರೋ ಖಾಯಿಲೆ ಇರ್ಬೋದು. ಹಾಗೇನೇ ಮೂಗಿನ್ ಹೊಳ್ಳೆ ಸುತ್ತಾ ಚರ್ಮ ಕೆಂಪಾಗಿದ್ರೆ, ಶ್ವಾಸನಾಳದಲ್ಲಿ ಸೋಂಕಾಗಿರ್ಬೋದು. ಸೋ, ಮೂಗಲ್ಲಿ ಇಂಥದ್ದೇನಾದ್ರೂ ಬದಲಾವಣೆ ಕಂಡ್ರೆ ತಡಮಾಡ್ದೇ ಡಾಕ್ಟರ್ ಹತ್ರ ಹೋಗಿ. ಶ್ವಾಸಕೋಶಕ್ಕೆ ಸಂಬಂಧ ಪಟ್ಟ ತೊಂದ್ರೆ ಅಲ್ವ. ಜಾಸ್ತಿ ನಿಧಾನ ಮಾಡ್ಬಾರ್ದು.

8. ಮೂಗಿನ ತುದಿ

ಕೆನ್ನೆ ಕೆಂಪಾದ್ರೆ, ನಾಚಿಕೆ ಅಂತ ಹೇಗ್ ಹೇಳ್ತರೋ, ಅದೇ ಥರ ಮೂಗಿನ್ ತುದಿ ಕೆಂಪಾದ್ರೆ ,' ಅಬ್ಬಾ ಇವ್ರಿಗೆ ಮೂಗಿನ್ ತುದೀಲೇ ಕೋಪ' ಅನ್ನೋ ಮಾತಿದೆ. ಆದ್ರೆ ಅವೆಲ್ಲಾ ಬರೀ ಕಾಲೆಳಿಯಕ್ಕೆ ಅಷ್ಟೇ. ನಿಜ್ವಾದ್ ವಿಷ್ಯ ಏನಪ್ಪ ಅಂದ್ರೆ, ಮೂಗಿನ್ ತುದಿ ಕೆಂಪಾಗಿದ್ರೆ, ಹೃದಯಕ್ ಸಂಬಂಧ ಪಟ್ಟ ಏನೋ ತೊಂದ್ರೆ ಇದೆ ಅಂತ. ಹಾಗಾಗಿ, ಮೂಗೇನಾದ್ರೂ ಗಿಣಿ ಮೂತಿ ತರ ಆಗಿದ್ರೆ, ಆದಷ್ಟು ಬೇಗ ಡಾಕ್ಟರ್ ಹತ್ರ ಹೋಗ್ ತೋರ್ಸಿ. ಕೆಂಪು ಮೂಗು ಗಿಣೀಗ್ ಮಾತ್ರ ಚಂದ. ನಮ್ಗೆಲ್ಲಾ ಅದು ರೋಗದ್ ಲಕ್ಷಣ.

ಮೂಲ

9. ಮೂಗು ಮತ್ತೆ ಮೇಲ್ತುಟಿ ಮಧ್ಯದ ಭಾಗ

ತುಂಬಾನೇ ಮಾನಸಿಕ ಒತ್ತಡ ಇದ್ರೆ, ಆಗ ಈ ಜಾಗ್ದಲ್ಲಿ ಸುಕ್ಕು ಬೀಳತ್ತೆ. ಬರೀ ಮಾನಸಿಕವಾಗಿ ಅಲ್ಲ, ದೇಹಕ್ಕೆ ಆಯಾಸ ಆಗಿದ್ರೂ, ಈಸ್ಟ್ರೋಜನ್ ಹಾರ್ಮೋನ್ ಲೆವೆಲ್ ಹೆಚ್ಚುಕಮ್ಮಿಯಾಗಿ, ಸಂತಾನೋತ್ಪತ್ತಿಗೆ ಸಂಬಂಧ ಪಟ್ಟ ಅಂಗಗಳ ತೊಂದ್ರೆಗ್ ಕಾರಣ ಆಗತ್ತೆ. ಅದೇ ಈ ಥರ ಮೂಗಿನ್ ಕೆಳಗೆ ಕಾಣಿಸ್ಕೊಂಡು ಎಚ್ಚರಿಕೆ ಕೊಡುತ್ತೆ. ಅದನ್ನ ಅರ್ಥ ಮಾಡ್ಕೊಂಡು, ಕೆಲ್ಸ ಮಾಡುವಾಗ, ಯೋಚ್ನೆ ಹಚ್ಕೊಳುವಾಗ ಚೂರು ನಿಗಾ ಇಟ್ಕೊಬೇಕು.

ಮೂಲ

10. ತುಟಿಗಳು

ಸಣ್ಣ ಕರುಳು ಹೇಗ್ ಕೆಲ್ಸ ಮಾಡ್ತಿದೆ ಅಂತ ಹೊರ್ಗಡೆ ನಮಗ್ ತೋರ್ಸೋದೇ ನಮ್ಮ ತುಟಿಗಳು. ಹೇಗೆ ಅಂತೀರ? ತುಟಿ ಮೇಲೆ ಹರ್ಪಿಸ್ ಗುಳ್ಳೆಗಳಾದ್ರೆ, ಪದೇ ಪದೇ ಹುಣ್ಣಾಗ್ತಿದ್ರೆ ಮತ್ತೆ ತುಟಿ ಬಣ್ಣ ಕಂದೋಗ್ತಿದ್ರೆ, ಅದೇ ಗುರುತು. ಇವೆಲ್ಲಾ ಸಣ್ಣ ಕರುಳಲ್ಲಿ ತೊಂದ್ರೆ ಈಗ್ತಾನೇ ಶುರುವಾಗ್ತಿದೆ ಅಂತ ತೋರ್ಸತ್ತೆ. ಅದೇ ಕೆಳತುಟಿ ಏನಾದ್ರು ಮಾಮೂಲ್ ಆಕಾರಕ್ಕಿಂತ ದೊಡ್ದದಾಗಿ ಊದ್ಕೊಂಡಿದ್ರೆ, ಖಂಡಿತಾ ಕರುಳು ಸರೀಗ್ ಕೆಲ್ಸ ಮಾಡ್ತಿಲ್ಲ ಅಂತ. ಇನ್ನು ತುಟಿ ತುಂಬಾ ಒಣಗಿದಂಗೆ, ನೀರಸವಾಗಿದ್ರೆ, ರಕ್ತ ಸಂಚಾರ ಚೆನ್ನಾಗ್ ಆಗ್ತಿಲ್ಲ ಅಂತ ಅರ್ಥ. ಜೊತೆಗೆ ಸ್ಲೀನ್, ಮೂತ್ರಕೋಶ, ಲಿವರ್ ಅಥ್ವ ಕರುಳಿನಲ್ಲಿ ಏನೋ ಎಡವಟ್ಟಾಗಿದೆ ಅಂತಾನೂ ಇರ್ಬೋದು.

11. ಗಲ್ಲ

ಹೆಣ್ಮಕ್ಳಿಗೆ ಋತುಸ್ರಾವದ ಎರಡ್ನೇ ಭಾಗದಲ್ಲಿ, ಗಲ್ಲದ ಮೇಲೆ ಮೊಡವೆ ಆಗೋದು ಸಹಜ. ದೇಹದಲ್ಲಾಗೊ ಹಾರ್ಮೊನ್ ಲೆವೆಲ್ ಬದಲಾವಣೆಯಿಂದ ಹೀಗಾಗತ್ತೆ. ಆದ್ರೆ ಇದ್ದಕ್ಕಿದ್ದಂಗೇ ಕಲೆಗಳು, ನೆರಿಗೆಗಳು ಕಾಣಿಸ್ಕೊಂಡ್ರೆ, ದೇಹದ ಕೆಲವು ಅಂಗಾಂಗಗಳು ಸರೀಗ್ ಕೆಲ್ಸ ಮಾಡ್ತಿಲ್ಲ ಅಂತ ಅರ್ಥ. ಇನ್ನು ಗಂಡಸ್ರಲ್ಲಿ, ಗಲ್ಲ ಜೋತ್ ಬೀಳೋದು, ನೆರಿಗೆ ಬರೋದು ಆದ್ರೆ, ಪ್ರಾಸ್ಟೇಟ್ ಗ್ರಂಥಿ ಎನ್ಲಾರ್ಜ್ ಆಗಿದೆ ಅನ್ನೋದ್ರ ಸಂಕೇತ.

ಮೂಲ

ಕನ್ನಡಿ ಮುಂದೆ ಅಲಂಕಾರಕ್ಕೆ ಅಂತ ಗಂಟೆ ಗಟ್ಲೆ ಕಾಲ ಕಳೀತೀವೆ. ಹಾಗೇ ಇನ್ಮುಂದೆ, ದಿನದಲ್ಲಿ ಒಂದ್ 10 ನಿಮಿಷ ಆದ್ರೂ ಇಂಥಾ ರೋಗ ತರೋ ಲಕ್ಷಣಗಳು ಏನಾದ್ರೂ ಮುಖದಲ್ಲಿ ಕಾಣತ್ತ ಅಂತ ನೋಡ್ಕೊಳೋದು ವಾಸಿ ಅಲ್ವಾ? ಅದಕ್ಕೆ ಒಳ್ಳೆ ಸಮಯ ಯಾವ್ದು ಗೊತ್ತಾ? ದಿನದ್ ಕೆಲ್ಸ ಎಲ್ಲಾ ಮುಗ್ದು, ಇನ್ನೇನ್ ಮಲಗ್ಬೇಕು ಅನ್ನುವಾಗ, ಚೆನ್ನಾಗಿ ಮುಖ ತೊಳ್ದು, ಕನ್ನಡಿನಲ್ಲಿ ನೋಡ್ಕೊಳಿ. ಕರೆಕ್ಟಾಗಿ ಗೊತ್ತಾಗತ್ತೆ. ಹಾಗೇ ಅಂತ, ಸುಮ್ಸುಮ್ನೆ ಇಲ್ದೇ ಇರೋ ಲಕ್ಷಣಗಳನ್ನ ಊಹಿಸ್ಕೊಂಡ್ಬಿಡ್ಬೇಡಿ ಮತ್ತೆ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: