25 ವರ್ಷಕ್ಕ ಪಾದಾರ್ಪಣೆ ಮಾಡೋದ ಒಂಥರಾ ಹಬ್ಬಿದ್ದಂಗ. ಜೀವನದ  ಕಾಲು ಭಾಗದ ದಾರಿನ ದಾಟಿದ ಅನುಭವ ಅದು. ನಾವ ಯಾರು? ಜೀವನ ಹೆಂಗ ನಡಸ್ಬೇಕು? ಅಂತ ತಿಳ್ಕೊಳ್ಳಾಕ ಸ್ವಲ್ಪ ಮಟ್ಟಿಗೆ ಶುರು ಮಾಡಿರ್ತೆವಿ. ಈ ಹಂತದೊಳಗ ಕೆಳಗ ಕೊಟ್ಟಿರುವಂತ ಈ 8 ಮಾತುಗಳನ್ನ ನಿಮಗ ನೀವ ಅವಾಗವಾಗ ಹೇಳ್ಕೋಂತಾ ಇದ್ರ ನೀವು ಭಾಳ ಚೊಲೋತ್ತಂಗ ನಿಮ್ಮ ಜೀವನಾನ ರೂಪಿಸ್ಕೋಬಹುದು…

1. “ನಿಮ್ಮ ಸಾಮರ್ಥ್ಯಕ್ಕಿಂತ ಕೆಳಮಟ್ಟದ್ದೆನಾದ್ರು ಸಿಕ್ಕರ ಅಷ್ಟಕ್ಕ ಸಂತೋಷ ಪಡಬ್ಯಾಡ್ರಿ”

ಪ್ರತಿಯೊಬ್ಬರೂ ಜೀವನದಾಗ ಖುಷಿಯಾಗಿ ಕನಸನ್ನ ನನಸ ಮಾಡ್ಕೊಬೇಕು ಅಂತ ಇರ್ತೀವಿ ಹೌದಲ್ಲ? ನಿಮ್ಮ ಕನಸು ಯಾದು? ಅದ್ರಾಗ ಚೌಕಾಸಿ ಮಾಡ್ಕೋಬ್ಯಾಡ್ರಿ. ಎಲ್ಲಾರಿಗೂ ಸಿಗೋದು ನಿಮಗೂ‌ ಸಿಗ್ಬೇಕು ಅನ್ನೋದ ಒಂದ ಕಡೆ ಆದ್ರ ನಿಮ್ಮ ವಿಶೆಷವಾದ ಪ್ರತಿಭೆಗೂ ಒಂದು ಮರ್ಯಾದೆ ಸಿಗ್ಬೇಕು ಅನ್ನೊದು ಇನ್ನೊಂದ ಕಡೆ. ಎತ್ತರ, ಅತಿ ಎತ್ತರಕ್ಕ ಬೆಳಿಬೇಕು ಅನ್ನೋ ಹಂಬಲ ಇದ್ದರ ನಿಮ್ಮ ಸಾಮರ್ಥ್ಯಕ್ಕಿಂತ ಕೆಳಮಟ್ಟದ ಕೆಲಸಗಳಿಗೆ, ಸಂಬಂಧಗಳಿಗೆ… ಎಲ್ಲಾನು ಒಪ್ಪಕೊಬ್ಯಾಡ್ರಿ. ನೀವ ನಿಮ್ಮನ್ನ ತುಳಕೊಂಡಂಗ ಆಕ್ಕತಿ..

2. “ನಿಮಗ ಇಷ್ಟ ಆಗ್ದಿರೋದರಿಂದ ದೂರ ಇರಿ

ಕೆಲವ ಸರ್ತಿ ಬ್ಯಾಡಾಗಿದ್ದ ಸಂಬಂಧಗಳಿಗೆ ಮನಸ್ಸು ಚಟಪಡಸ್ತಿರ್ತತಿ. ಆದ್ರ ಖರೆ ಹೇಳ್ಬೇಕಂದ್ರ ಅಂಥ ಸಂಬಂಧಗಳು ಮುಂದವರಿಯೋದ್ರಿಂದ ಮನಸ್ಸಿಗೆ ಸಂತೋಷ ಸಿಗಂಗಿಲ್ಲ. ಜೀವನ ಅನ್ಯಾಯವಾಗಿ ಹಾಳಾಗಾಕ ಶುರು ಆಕ್ಕತಿ. ನೀವು ನಿಜವಾಗಲೂ ಖುಷಿಯಾಗಿ ಇರ್ಬೇಕಂದ್ರ ನಿಮ್ಮ ಆಸೆ-ಆಕಾಂಕ್ಷೆಗೆ ಗೌರವ ಕೊಡೊರ ಜೊತಿ ಸೇರ್ರಿ.

3. ನಾನು ಉದ್ಧಾರಾಗ್ಬೇಕು ಅನ್ನೊದೇ ನನ್ನ ಮೊದಲ ಗುರಿ

ಭಾಳ ಸರ್ತಿ ನಾನು ಬ್ಯಾರೆರವರಿಗಿಂತ ಮುಂದದನಿ ಅಂತ ಅವರಿಗೆ ಸಹಾಯ ಮಾಡೋ ಭರದಾಗ ನಮ್ಮ ಏಳಿಗೆಯ ಕಡೆ ಲಕ್ಷೆನ ಕೊಡಂಗಿಲ್ಲ. ನಮ್ಮ ಸ್ವಾರ್ಥ ಬದಿಗಿಟ್ಟು ಮತ್ತೊಬ್ಬರ ಸಾಮರ್ಥ್ಯ ಹೆಚ್ಚ ಮಾಡಂತ ಹುಚ್ಚ ಹೆಚ್ಚಾದ್ರ, ನಾವು ಬೆಳಿಯೋದು ಕಷ್ಟ ಆಗಿಬಿಡ್ತತಿ. ನಮ್ಮ ಬೆಳವಣಿಗೆಯಿಂದಷ್ಟ ಸಹಾಯ ಪಡ್ಕೊಳ್ಳೊರು ನಮ್ಮ ಹಂಗ ಬೆಳ್ಯಾಕಾಕ್ಕತಿ ಅನ್ನೊದು ನೆನಪನ್ಯಾಗಿರ್ಲಿ.

4. “ಸವಾಲುಗಳನ್ನ ಎದರಸಾಕ, ಹೆದರಬ್ಯಾಡ್ರಿ

ಜೀವನದಾಗ ಗುರಿ ಸಾಧಿಸ್ಬೆಕಾದ್ರ ಭಾಳ ಅಡೆತಡೆಗಳು ಎದುರಾಕ್ಕಾವು, ಸವಾಲುಗಳು ಇರ್ತಾವು. ಇಂತಾವಕ್ಕೆಲ್ಲಾ ಹೆದರದಂಗ, ಎಂಥಾ ಸವಾಲು ಬಂದ್ರೂ ಅದನ್ನ ಎದುರಿಸಿ ಮುನ್ನುಗ್ಗತಿರ್ಬೇಕು. ಇಂಥಾ ಮನಸ್ಥತಿ ನಿಮ್ಮಲ್ಲಿರ್ಬೇಕು. ಎದುರಾಗೋ ಎಲ್ಲಾ ಸವಾಲಿನಲ್ಲೂ ಒಂದೊಂದು ಅಂಶ ಇರ್ತತಿ, ಅದ್ರಾಗ ನಿಮ್ಮ ಜಯ ಅಡಿಕ್ಕೊಂಡಿರ್ತತಿ. ಜಯದ ಸಿಹಿ ಕಷ್ಟಗಳ ಕಹಿಯನ್ನ ಮರೆಮಾಚತತಿ.

5. ಬ್ಯಾರೆದೋರು ನನ್ನ ಬಗ್ಗೆ ಏನ ತಿಳ್ಕೊಂತಾರ ಅಂತ ವಿಚಾರ ಮಾಡ್ಬಾಡ್ರಿ

ಈ ವಯಸ್ಸನ್ಯಾಗ ಎಲ್ಲಾರು ನಿಮಗ ಪುಕ್ಸಟ್ಟೆ ಸಲಹೆ ಕೊಡೊದು ಸಾಮಾನ್ಯ. ಆದರ ಅವರು ಎಲ್ಲಾನೂ ಸರಿಯಾಗೆ ಹೇಳಾಕತ್ತಾರ ಅಂತೇನಿಲ್ಲ, ಜೀವನದಾಗ ತಿರ್ಮಾನಗಳನ್ನ ತೊಗೊಬಕಾರ ನಿಮ್ಮ ಅನಿಸಿಕೆ ಮುಖ್ಯ ಅಷ್ಟ ಬ್ಯಾರೇದೊರ ಅನಸಿಕೆ ಅಲ್ಲ. ನಿಮ್ಮ ಜೀವನ ಕಣ್ರಿ ಇದು. ನಿಮ್ಮ ಜೀವನಾನ ನಿಮಗಿಂತ ಚೊಲೊತ್ತಂತ ಮತ್ತೊಬ್ಬರು ಅರ್ಥ ಮಾಡ್ಕೊಳ್ಳಾಕ ಸಾಧ್ಯಾನ ಇಲ್ಲ.

6. “ಹೇಳಿದ್ದಕ್ಕೆಲ್ಲ ‘ಹೂಂ’ ಅನ್ನೊದ ಬಿಟ್ಟು, ‘ಉಹೂಂ’ ಅನ್ನೋದನ್ನೂ ಕಲ್ಕೊರಿ”

ಬ್ಯಾರೇದೊರು ಬ್ಯಾಸರ ಮಾಡ್ಕೊಂತಾರ ಅಂತ ನಿಮಗ ಇಷ್ಟಾ ಇಲ್ಲದ ಕೆಲಸಾನ ಒಪ್ಕೊಳ್ಳೊದನ್ನ ಬಿಟ್ಟು ಅವರಿಗೆ ಬ್ಯಾಸರ ಆಗದಂಗ  ‘ಇಲ್ಲ’, ‘ಆಗಂಗಿಲ್ಲ’ ಅಂತ ಹೇಳಂತ ಕಲೇಯನ್ನು ಕರಗತ ಮಾಡ್ಕೊರಿ. ನಿಮ್ಮದಾಗಿಲ್ದೆ ಇರೋ ಕೆಲಸಾನ ನಿಮಗ ಗಂಟ ಹಾಕಾಕ ಬಂದ್ರ ‘ಆಗಂಗಿಲ್ಲ’ ಅಂತ ಹೇಳೋದ್ರಾಗ ಯಾವ ತಪ್ಪು ಇಲ್ಲ.

7. ನಂದು, ನಮ್ಮ ಅಪ್ಪಅಮ್ಮಂದು ಆರೋಗ್ಯದ ಜವಾಬ್ದಾರಿ ನಂದ

‘ಆರೋಗ್ಯವೇ ಭಾಗ್ಯ’ ಅನ್ನೊ ಗಾದೆ ಮಾತ ಕೇಳಿರಿಲ್ಲ? ಹಂಗ ನಿಮ್ಮ ಆರೋಗ್ಯಾನ ನೀವ ಕಾಪಾಡ್ಕೋರಿ. ಪೌಷ್ಠಿಕ ಆಹಾರ, ವ್ಯಾಯಾಮ ಮುಖ್ಯ. ತಂದೆ-ತಾಯಿಗೆ ವಯಸ್ಸ ಆಗಾಕತ್ತಂಗ ಅವರ ಆರೋಗ್ಯದ ಮ್ಯಾಲೆ ಗಮನಕೊಡೊದು, ಅವರನ್ನ ಚೊಲೋತ್ತಂಗ ನೋಡ್ಕೊಳ್ಳೊದು ನಿಮ್ಮ ಜವಾಬ್ದಾರಿ ಇದು ನೆನಪಿನ್ಯಾಗ ಇರ್ಲಿ. ದಿನ ಉರುಳಿದಂಗ ವಯಸ್ಸಾದ ಅಪ್ಪ–ಅಮ್ಮಂದಿರು ಮಕ್ಕಳ ಇದ್ದಂಗಂತ ಇವರ ಬಗ್ಗೆ ನಿಮಗ ಹೆಚ್ಚಿನ ಜವಾಬ್ದಾರಿನೂ ಹುಟ್ಕೊಂತತಿ.

8. “ಯಾವಾಗಲೂ ಕಾಲ ಎಳೆಯೋರಿಂದ ದೂರ ಇರ್ರಿ

ಕೆಲವವೊಬ್ಬರು ಇರ್ತಾರ… ಮಾನಸಿಕವಾಗಿ ನಿಮ್ಮನ್ನ ಕುಗ್ಗಿಸಿ ನಿಮ್ಮೊಳಗ ಕೀಳರಿಮೆ ಹುಟ್ಕೊಳೊ ಹಂಗ ಮಾಡ್ತಾರ. ಬರೇ ನಕಾರಾತ್ಮಕ ವಿಚಾರಗಳನ್ನ ತುಂಬತಾರ. ಅಂತವರನ್ನ ನಿಮ್ಮ ಜೀವನದಾಗ ಸೇರಿಸ್ಕೊಬ್ಯಾಡ್ರಿ. ಅವರು ಹಾಕೋ ಬಲೆಗೆ ನೀವು ಬಿಳದೇ ಇರೋ ಹಂಗ ನೋಡ್ಕೊರಿ. ಇಲ್ಲಾಂದ್ರ ಸುಮ್ಮನ ನಿಮ್ಮ ಸಮಯಾನ ವ್ಯರ್ಥ ಮಾಡ್ಕೊಂಡು ನಿಮ್ಮ ಜೀವನಾನ ಹಾಳ ಮಾಡ್ಕೊಂತೀರಿ.

25 ವರ್ಷ ಆಗೇತಷ್ಟ ಆದರ ಜೀವನದಾಗ ಇನ್ನೂ ನೋಡ್ಬೇಕಾಗಿರೋದು ಭಾಳ ಐತಿ. ನಿಮ್ಮ ಕಾಲ ಮ್ಯಾಲ ನೀವು  ನಿಂತು ಜವಾಬ್ದಾರಿ ತೊಗೊಳುವಂತ ವಯಸ್ಸಿದು. ಮ್ಯಾಗ ತಿಳಿಸಿದ 8 ಮಾತುಗಳನ್ನ ನಿಮ್ಮಷ್ಟಕ್ಕ ನೀವ ಹೇಳ್ಕೊಂತ ಬಂದ್ರ ನೀವು ಯಾರಿಗೂ ಕಡಿಮೆ ಇಲ್ಲ!

ಹೊರಚಿತ್ರ: ಮೂಲ