ಸಾಮಾನ್ಯವಾಗಿ ಕ್ಯಾಪ್ಸೂಲಲ್ಲಿ ಎರಡು ಬಣ್ಣ ಯಾಕಿರತ್ತೆ ಅಂತ ಗೊತ್ತಾದ್ರೆ ಆಶ್ಚರ್ಯ ಪಡ್ತೀರ

ಮಾತ್ರೆ ಕಂಪನಿಯೋರು ಚನ್ನಾಗ್ ತಲೆ ಉಪ್ಯೋಗ್ಸಿದ್ದಾರೆ

ಹೇಳಿ ಕೇಳಿ ಇದು ಮಳೆಗಾಲ. ಆ ತೊಂದ್ರೆ ಈ ತೊಂದ್ರೆ ಅಂತ ಜನ ಮಾತ್ರೆಗಳನ್ನ ತಗೊಳ್ತಾನೆ ಇರ್ತಾರೆ. ಎಷ್ಟೋ ಜನ ಯಾರಪ್ಪಾ ಈ ಮಾತ್ರೆಗಳನ್ನ ತಗೊಳ್ಳೋವ್ರು ಅಂತ ಗೊಣಗ್ತಾರೆ.  ಮಾತ್ರೆ ಬಗ್ಗೆ ಹೇಳೋ ವಿಷ್ಯ ಕೇಳಕ್ಕೂ ವಾಕರಿಕೆ ಬರ್ತಿದೆ ಅಂತಿದ್ದೀರಾ? ಇದೇ ಮಾತ್ರೆಗಳ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಹೇಳ್ತೀವಿ ಕೇಳಿ. ನೀವು ಕ್ಯಾಪ್ಸುಲ್ ಮಾತ್ರೆಗಳನ್ನ ನೊಡಿರ್ತೀರ ಅಲ್ವಾ? ಬಣ್ಣ ಬಣ್ಣದ ಕ್ಯಾಪ್ಸುಲ್ಗಳು, ನೋಡಕ್ಕ್ ಎಷ್ಟು ಚಂದಾ ಅನ್ಸುತ್ತೆ. ಸಾಮಾನ್ಯವಾಗಿ ಈ ಕ್ಯಾಪ್ಸುಲ್ಗಳು ಎರಡು ಬೇರೆ ಬೇರೆ ಬಣ್ಣದಲ್ಲಿರುತ್ತೆ. ಅದು ಯಾಕೆ ಅಂತ ಯಾವಾಗಾದ್ರೂ ಯೋಚ್ನೆ ಮಾಡಿದ್ದೀರಾ? ನಾವ್ಹೇಳ್ತೀವಿ ಕೇಳಿ.

1. ಕ್ಯಾಪ್ಸೂಲ್ ತಯಾರು ಮಾಡೋವಾಗ ಗೊಂದಲ ತಪ್ಪತ್ತೆ

ಈ ಕ್ಯಾಪ್ಸೂಲ್ಗಳನ್ನ ನೋಡಿದ್ರೆ ಗೊತ್ತಾಗುತ್ತೆ. ಒಂದು ಭಾಗ ದೊಡ್ಡದಿರುತ್ತೆ... ಹಾಗೆ ಇನ್ನೊಂದು ಭಾಗ ಚಿಕ್ಕದಿರತ್ತೆ. ದೊಡ್ಡದಾಗಿರೋ ಭಾಗಾನ ಮುಚ್ಚಳ ಅಂತ ಅನ್ನಬಹುದು. ಥೇಟ್ ಡಬ್ಬದ ತರಾನೇ, ದೊಡ್ಡ ಭಾಗದಲ್ಲಿ ಹಾಕಬೇಕಾದಂತಹ ಔಷಧಿಯನ್ನ ಹಾಕಿ ಚಿಕ್ಕ ಭಾಗದಿಂದ ಮುಚ್ಚ್ತಾರೆ. ಸಾವಿರಾರು ಕ್ಯಾಪ್ಸುಲ್ಗಳನ್ನ ತಯಾರು ಮಾಡೋವಾಗ, ಒಂದೇ ಬಣ್ಣದ ಎರಡು ಭಾಗ ಇಲ್ದೆ, ಈ ರೀತಿ ಬೇರೆ ಬಣ್ಣದ ಮುಚ್ಚಳ ಇದ್ರೆ, ಕೆಲ್ಸ ಸುಲಭ ಆಗುತ್ತೆ, ಸರಿಯಾಗಿ ಔಷಧಿ ತುಂಬಿದ್ದೀವೋ ಇಲ್ವೋ ಅನ್ನೋದು ಗೊತ್ತಾಗುತ್ತೆ. ಇದು ಒಂದು ಕಾರಣ.

ಮೂಲ

2. ಬಣ್ಣ ಬಣ್ಣದ ಕ್ಯಾಪ್ಸೂಲ್ಗಳು ಮಕ್ಕಳಿಗೂ ಖುಷಿ ಕೊಡತ್ತೆ

ಮಕ್ಕಳು ಔಷಧಿ ತಗೊಳಕ್ಕೆ ಹಟ ಮಾಡೋದು ಎಲ್ಲರಿಗೂ ಗೊತ್ತೇ ಇದೆ. ಅದು ಕೊಡ್ತೀನಿ,ಇದು ಕೊಡ್ತೀನಿ ಅಂತ ಪುಸಲಾಯಿಸೋದೆ ದೊಡ್ಡ ಕೆಲ್ಸ ಆಗಿಬಿಡುತ್ತೆ. ಅಂತದ್ರಲ್ಲಿ ಈ ಬಣ್ಣ ಬಣ್ಣದ ಕ್ಯಾಪ್ಸುಲ್ಗಳನ್ನ ನೋಡಿದ್ರೆ , ಏನೋ ಚಾಕ್ಲೇಟ್ ತರ ಇದೆ ಅಂತ ಅನ್ಕೊಂಡು ಮಕ್ಕಳು ಹಠ ಮಾಡದೆ  ಅದನ್ನ ತಗೊಳ್ಳೋ ಚಾನ್ಸಸ್ ಜಾಸ್ತಿ ಇರುತ್ತೆ.

ಮೂಲ

3. ಗುರುತಿಸಕ್ಕೆ ಸಹಾಯ ಆಗತ್ತೆ

ಒಂದೇ ಕಂಪನೀಯವ್ರು, ಬೇರೆ ಬೇರೆ ಕಾಯಿಲೆಗೆ, ಬೇರೆ ಬೇರೆ ಬಣ್ಣದ ಮಾತ್ರೆ ತಯಾರು ಮಾಡೋದ್ರಿಂದ, ಒಂದೇ ಕಲರ್ ಮಾತ್ರೆ ಆಗೋದ್ರೆ, ಅವ್ರಿಗೆ ಬಣ್ಣದ ಆಯ್ಕೆಗಳು ಕಮ್ಮಿಯಾಗಿ ಗುರುತಿಸೋದು ಕಷ್ಟ ಆಗತ್ತೆ. ಆದ್ರೆ ಈ ತರ ಎರಡೆರಡು ಬಣ್ಣದ ಕಾಂಬಿನೇಷನ್ ಮಾಡಿದ್ರೆ, ಅವುಗಳನ್ನ ಗುರುತಿಸೋದು ಸುಲಭ ಆಗುತ್ತೆ. 

ಮೂಲ

ಈಗ ಗೊತ್ತಾಯ್ತ ಕ್ಯಾಪ್ಸೂಲ್ ಯಾಕೆ ಎರಡೆರಡು ಬಣ್ಣ ಇರತ್ತೆ ಅಂತಾ? ಈ ಉಪಾಯದಿಂದ, ಬಣ್ಣಗಳು ನೋಡಕ್ಕೆ ಚೆನ್ನಾಗಿದ್ರೆ ಮಾತ್ರೆ ತಗೊಳ್ಳೋರಿಗೂ ಸುಲಭ, ಅದನ್ನ ತಯಾರು ಮಾಡೋವ್ರಿಗೂ ಸುಲಭ. ಏನಂತೀರಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: