ಬರೀ 12 ರೂಪಾಯಿಯ ಈ ಪೆನ್ನಾ ಮಣ್ಣಲ್ಲಿ ಹಾಕಿದ್ರೆ ಗಿಡ ಹುಟ್ಟತ್ತೆ ಅಂದ್ರೆ ನಂಬಕ್ಕಾಗಲ್ಲ

ಖಾಲಿಯಾದ್ಮೇಲೆ ಸುಮ್ನೆ ಎಸುದ್ರೆ ಸಾಕು!

ಬಾಲ್ ಪೆನ್ ಎಷ್ಟು ಸಲ ಕಳ್ಕೊಂಡಿರೊಲ್ಲ ನೀವು? ಮತ್ತೆ ಕೆಲವು ಸಲ ಇಂಕು ಖಾಲಿಯಾದಾಗ, ರಿಫಿಲ್ ಹಾಕ್ಸೋಕೆ ಸೋಮಾರಿತನ ಆಗಿ ಕಸಕ್ಕೆ ಎಸ್ದು ಬಿಟ್ಟಿರ್ತೀರಿ. ಈ ಪೆನ್ನುಗಳ್ನ ಪ್ಲಾಸ್ಟಿಕ್ಕಿಂದ ಮಾಡಿರ್ತಾರೆ, ಅದನ್ನ ಎಸ್ದಾಗ ಪರಿಸರಾನ ಹಾಳು ಮಾಡ್ದಾಗಾಗತ್ತೆ ಅಂತ ಯಾವಾಗ್ಲಾದ್ರೂ ಯೋಚ್ಸಿದ್ದೀರಾ?

ಕೇರಳದಲ್ಲಿ ಲಕ್ಷ್ಮಿ ಮೆನನ್ ಅನ್ನೋರು ಯೋಚ್ಸಿದ್ದಾರೆ. ಇವ್ರು ವೃತ್ತಿಯಿಂದ ಡಿಸೈನರ್. ದಕ್ಷಿಣ ಕೇರಳದಲ್ಲಿ 'ಪ್ಯೂರ್ ಲಿವಿಂಗ್' ಹೆಸರಿನ ಒಂದು ಸಂಸ್ಥೆ ನಡೆಸ್ತಾರೆ. ಈ ಸಂಸ್ಥೆಯವ್ರು ತಮ್ಮ ಜೀವನಶೈಲಿಯನ್ನ ಸ್ವಲ್ಪ ಬದಲಾಯಿಸ್ಕೊಂಡು ಪರಿಸರದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಹುಡುಕೋದ್ರ ಮೇಲೆ ಕೆಲಸ ಮಾಡ್ತಾರೆ. ಈ ಪೇಪರ್ ಪೆನ್ ಕೂಡ ಅಂಥದ್ದೇ ಒಂದು ಐಡಿಯಾ.

ಏನಿದು ಪೇಪರ್ ಪೆನ್?

ಪ್ರತಿ ಪೆನ್ನಿನ ತಳದಲ್ಲೂ ಒಂದು ಬೀಜ ಇರುತ್ತೆ. ಪೆನ್ ಉಪ್ಯೋಗ್ಸಾದ್ಮೇಲೆ ಅದನ್ನ ಮಣ್ಣಲ್ಲಿ ನೆಟ್ರೆ ಅದರಿಂದ ಗಿಡ ಮೊಳಕೆ ಒಡೆಯುತ್ತೆ. ಪೆನ್ ಕಳ್ದು ಹೋದ್ರೂ ಅದೊಂದು ಗಿಡವಾಗಿ ಬೆಳಿಯೋ ಚಾನ್ಸ್ ಜಾಸ್ತಿಯಿದೆ. ಈ ಪೆನ್ನಲ್ಲಿರೋ ಬೀಜ ಅಗಸ್ತ್ಯ ಮರದ್ದು. ಆಯುರ್ವೇದದ ಪ್ರಕಾರ ಈ ಮರಕ್ಕೆ ತುಂಬ ಔಷಧೀಯ ಗುಣ ಇದೆ.

ಮೂಲ

ಈ ಪೆನ್ನುಗಳನ್ನ ಲಕ್ಷ್ಮಿಯವ್ರು ಎಂಟ್ರೀ ಅಂತ ಕರೀತಾರೆ. ಪರಿಸರ ಸ್ನೇಹಿ ಬದುಕಿಗೆ ಇದೊಂದು ಪ್ರವೇಶ, ಎಂಟ್ರಿ (Entry) ಅನ್ನೋ ಅರ್ಥದಲ್ಲಿ. ಈ ಪೆನ್ನಿಗೆ ಅವರು ಉಪ್ಯೋಗ್ಸೋ ಪೇಪರ್ ಕೂಡ ಪ್ರಿಂಟಿಂಗ್ ಪ್ರೆಸ್ಸುಗಳಲ್ಲಿ ವೇಸ್ಟ್ ಆದ ಪೇಪರ್. ಈ ಪೇಪರನ್ನ ಲಕ್ಷ್ಮಿ ಅವ್ರೇ ಕಂಡು ಹಿಡ್ದಿರೋ ಒಂದು ಮೆಷಿನ್ನು ಪೆನ್ನಿನ ಆಕಾರದಲ್ಲಿ ಸುತ್ತಿ ಕೊಡುತ್ತೆ. ಈ ಮೆಷಿನ್ನು ಪೇಪರನ್ನ ಟೈಟಾಗಿ ಸುತ್ತುತ್ತೆ. ಹಾಗಾಗಿ ಈ ಪೆನ್ನು ಪ್ಲಾಸ್ಟಿಕ್ ಪೆನ್ನಷ್ಟೇ ಗಟ್ಟಿಯಾಗಿರುತ್ತೆ.

ಒಂದೇ ಏಟಿಗೆ ಈ ಪೇಪರ್ ಪೆನ್ ಮೂರು ಕೆಲಸ ಮಾಡತ್ತೆ

1. ಕಸದಿಂದ (ವೇಸ್ಟ್ ಪೇಪರ್) ರಸ (ಪೇಪರ್ ಪೆನ್)

2. ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತೆ

3. ಪ್ರತಿ ಪೆನ್ನಿಂದ ಒಂದು ಗಿಡ ಬೆಳ್ಸಿದ್ ಹಾಗಾಗುತ್ತೆ

ಇದಲ್ದೆ, ಹಿಂದುಳಿದ ವರ್ಗದ ಹೆಂಗಸ್ರಿಗೆ ಮತ್ತೆ ಪ್ಯಾರಾಲಿಸಿಸ್ ಪೇಶೆಂಟುಗಳಿಗೆ ಇವರ ಸಂಸ್ಥೇಲಿ ಕೆಲಸ ಕೊಡ್ತಾರೆ. ಅದೂ ಕೂಡ ಇನ್ನೊಂದೊಳ್ಳೇ ಕೆಲಸ. ನೀವು ಪ್ರತಿ ಪೆನ್ ಕೊಂಡ್ಕೊಂಡಾಗ್ಲೂ ಸಮಾಜಕ್ಕೆ, ಪರಿಸರಕ್ಕೆ ಒಂದಿಷ್ಟು ಒಳ್ಳೇದಾಗುತ್ತೆ.

ಮೂಲ

ಸದ್ಯಕ್ಕೆ ರೀಫಿಲ್ ಪ್ಲಾಸ್ಟಿಕ್ಕಿಂದು, ಮುಂದೆ ಪ್ಲಾಸ್ಟಿಕ್ ಇಲ್ದೆ ರೀಫಿಲ್ ಮಾಡೋ ಗುರಿ ಇದೆ!

ಇಷ್ಟೊತ್ತಿಗೆ ನಿಮ್ಗೊಂದು ಪ್ರಶ್ನೆ ಬಂದಿರ್ಬಹುದು - ರೀಫಿಲ್ ಯಾವುದ್ರಲ್ಲಿ ಮಾಡ್ತಾರೆ ಅಂತ ಅಲ್ವಾ? ಈ ಪೆನ್ ರೀಫಿಲ್ ಪ್ಲಾಸ್ಟಿಕ್ಕಲ್ಲೇ ಮಾಡಿರೋದು. ಒಂದು ಪೆನ್ನ್ ಬೆಲೆ ಹನ್ನೆರಡು ರೂಪಾಯಿ. ಆದ್ರೆ ಇಂಥಾ ಒಳ್ಳೆ ಕೆಲ್ಸಕ್ಕೆ ಸ್ವಲ್ಪ ಜಾಸ್ತಿ ದುಡ್ಡು ಕೊಟ್ರೂ ಪರ್ವಾಗಿಲ್ಲ ಅನ್ನೋರ್ಗೆ, ಮೆಟಲ್ ರೀಫಿಲ್ ಇರೋ ಪೆನ್ಗಳನ್ನ ತಯಾರು ಮಾಡ್ತಾರೆ.

ಕೇರಳದ ಸ್ಕೂಲ್ ಮಕ್ಕಳಿಂದ ಬಾಲ್ ಪೆನ್ಗಳನ್ನ ಕಲೆಕ್ಟ್ ಮಾಡಿ, ಅದ್ರಿಂದ ಒಂದು ಆರ್ಟ್ ಇನ್ಸ್ಟಲೇಷನ್ ಮಾಡ್ಬೇಕು ಅಂತ ಇವರಿಗೆ ಆಸೆ ಇದೆ. ಈ ಆರ್ಟ್ ಇನ್ಸ್ಟಲೇಷನ್ನ ನೋಡ್ದಾಗ ಪ್ಲಾಸ್ಟಿಕ್ ಸಮಸ್ಯೆ ಎಷ್ಟು ದೊಡ್ದಿದೆ ಅಂತ ನೋಡೋರಿಗೆ ಅರ್ಥ ಆಗುತ್ತೆ ಅನ್ನೋದು ಇವರ ಆಲೋಚನೆ.

ಮೂಲ

ಲಕ್ಷ್ಮಿ ತಯಾರ್ಸಿರೋ ಈ ಪೇಪರ್ ಪೆನ್ನೆಲ್ಲಾ ಕಳ್ದ್ ಹೋಯ್ತು ಅಂದ್ಕೊಳ್ಳಿ. ಏನಾಗುತ್ತೆ? ಭೂಮಿ ತುಂಬ ಮರ ಬೆಳಿಯುತ್ತೆ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: