ರೈಲಲ್ಲಿ ಕೊಡೋ ದಿಂಬು ರಗ್ಗನ್ನ ಎಷ್ಟು ತಿಂಗಳಿಗೊಮ್ಮೆ ಒಗೀತಾರೆ ಅಂತ ವರದಿ ಕೇಳಿ ದಂಗಾಗ್ತೀರಿ

ಅದಕ್ಕೇ ಕೆಟ್ಟ ವಾಸನೆ!

ಸ್ವಲ್ಪ ದಿನಗಳ ಹಿಂದೆ, ಟ್ರೈನಲ್ಲಿ ಕೊಡೋ ಊಟ ಕಳಪೆ ಮಟ್ಟದ್ದು ಅನ್ನೋ ಆರೋಪ ಭಾರತೀಯ ರೈಲ್ವೇ ಮೇಲಿತ್ತು. ಅದು ಸಾಲ್ದು ಅಂತ ಈಗ ಇನ್ನೊಂದು ಕಂಪ್ಲೇಂಟ್ ತಲೆ ಮೇಲೆ ಬಂದು ಕೂತಿದೆ. ವರದಿಗಳ ಪ್ರಕಾರ, ಕಾಂಪ್ಟ್ರಾಲರ್ ಅಂಡ್ ಆಡಿಟರ್ ಜನರಲ್ (ಸಿ ಎ ಜಿ), ಜುಲೈ 21 ನೇ ತಾರೀಖು ಸಂಸತ್ತಿಗೆ ಸಲ್ಲಿಸಿರೋ ರಿಪೋರ್ಟಲ್ಲಿ ಟ್ರೈನಲ್ಲಿ ಕೊಡೋ ರಗ್ಗು ಮತ್ತು ದಿಂಬು ತುಂಬಾ ಗಲೀಜಾಗಿರತ್ತೆ, ಈ ನಿಟ್ಟಲ್ಲಿ ಕಠಿಣವಾದ ನಿಯಮಗಳನ್ನ ನಿರ್ಮಿಸ್ಬೇಕು ಅಂತ ತಾಕೀತ್ ಮಾಡಿದೆ.

ರಿಪೋರ್ಟಲ್ಲಿ ಭಾರತೀಯ ರೈಲ್ವೆಯ ಈ ಸೇವೆಗಳು ತೀರಾ ಕಳಪೆ ಮಟ್ಟದಲ್ಲಿದೆ ಅಂತ ಆರೋಪ ಕೇಳಿ ಬಂದಿದೆ. ನಿಯಮಗಳ ಪ್ರಕಾರ, ಪ್ರಯಾಣಿಕರಿಗೆ ಕೊಡೋ ಈ ಬೆಡ್ ಶೀಟ್ ಮತ್ತು ದಿಂಬಿನ ಕವರ್ಗಳನ್ನ ಪ್ರತೀ ಸರ್ತಿ ಉಪಯೋಗ್ಸಿದ್ ಮೇಲೂ ಒಗಿಸ್ಬೇಕು... ಮತ್ತು ರಗ್ಗುಗಳನ್ನ ಪ್ರತೀ 2 ತಿಂಗಳಿಗೊಮ್ಮೆ ಡ್ರೈ ಕ್ಲೀನಿಂಗಿಗೆ ಕೊಡ್ಬೇಕು.ಆದ್ರೆ ಈ ಪ್ರಕ್ರಿಯೆ ಒಂದಿಷ್ಟೂ ಸರಿಯಾಗಿ ನಡೀತಿಲ್ವಂತೆ! 

ಹಾಗಾದ್ರೆ ಈ ಸಿ ಎ ಜಿ ರಿಪೋರ್ಟಲ್ಲಿ ಏನೇನಿದೆ ನೋಡಣ ಬನ್ನಿ:

1. ಈ ಸಿ ಎ ಜಿ ಕಮಿಟಿ 2012 ರಿಂದ 2016ರ ವರೆಗೆ ಉಪಯೋಗಿಸಲಾಗ್ತಿದ್ದ ರಗ್ಗಿನ ವಿವರಗಳನ್ನ ಒಟ್ಟು 33 ಬೇರೆ ಬೇರೆ ಡಿಪೋಗಳಿಂದ ತರಿಸ್ಕೊಂಡಿದೆ. ಇದ್ರಿಂದ ಗೊತ್ತಾಗಿದ್ದೇನಪ್ಪಾ ಅಂದ್ರೆ, 9 ವಲಯಗಳ 14 ಟರ್ಮಿನಲ್ಗಳಲ್ಲಿ, ನಾಲ್ಕು ವರ್ಷದಲ್ಲಿ ಒಂದೇ ಒಂದು ರಗ್ಗು ಕೂಡಾ ಡ್ರೈ ಕ್ಲೀನಾಗಿಲ್ಲ ಅಂತ! ಅಷ್ಟೆ ಅಲ್ದೇ, 5 ವಲಯಗಳ 7 ಡಿಪೋಗಳನ್ನ ಬಿಟ್ಟು ಇನ್ನೆಲ್ಲೂ ಬೆಡ್ ಶೀಟ್ಗಳನ್ನ ಒಗ್ದೇ ಇರ್ಲಿಲ್ಲ!

2. 2015-16ನೇ ಇಸವೀನಲ್ಲಿ, ಬರೀ 8 ವಲಯಗಳ 12 ಡಿಪೋಗಳಲ್ಲಿ 6 ತಿಂಗಳಿಂದ 2 ವರ್ಷಕ್ಕೊಮ್ಮೇ ರಗ್ಗು ಡ್ರೈಕ್ಲೀನಿಗೆ ಹೋಗಿರೋದು ಪತ್ತೆಯಾಗಿದೆ! ಮುಂಬೈ, ಗ್ವಾಲಿಯರ್, ಕೋಲ್ಕತ್ತಾ, ಗೌಹಾಟಿ, ದಿಬ್ರುಘರ್, ಸಿಕೆಂಡ್ರಾಬಾದ್ ಲಕ್ನಾವ್, ಹಾಟಿಯ ಮತ್ತು ಟಾಟಾ ನಗರ್ (ಜಮ್ಷೆಡ್ಪುರ್)... ಈ ಡಿಪೋಗಳು.

ಮೂಲ

3. ಜನರಿಗೆ ಗೊತ್ತಾಗ್ಬಾರ್ದು ಅಂತ ಗಲೀಜಾಗಿರೋ ಬೆಡ್ ಶೀಟ್ ಮತ್ತು ರಗ್ಗುಗಳ ಜೊತೆ ಒಂದಿಷ್ಟು ಕ್ಲೀನಾಗಿರೋದನ್ನ ಸೇರ್ಸಿಟ್ಟು, ಗೋಲ್ ಮಾಲ್ ಮಾಡಿರೋದು ಕೂಡ ಸಿ ಎ ಜಿ ಗಮನಕ್ಕೆ ಬಂದಿದೆ. ಇನ್ನು ದಿಂಬಿನ ಕವರ್ಗಳು ಕಮ್ಮಿಯಾಗಿ, ಹಳೇ ಬೆಡ್ ಶೀಟಿಂದ ಕವರ್ ಹೊಲಿದಿರೋ ಸಂದರ್ಭಗಲೂ ಇದ್ದಿವೆ!

4. ಈ ತರ ಗೋಳು ಒಂದ್ಕಡೆಯಾದ್ರೆ, ಚೆನ್ನೈ, ಮಹಾಲಕ್ಷ್ಮಿ ಸಾಬರ್ಮತಿ, ಖರಗ್ಪುರ್ ಅಂತಾ ಜಾಗಗಳಲ್ಲಿ, ಒಗೆಸಿದ್ದ ಬೆಡ್ ಶೀಟ್ಗಳೂ ಸರಿಯಾಗಿ ಕಾಪಾಡದೇ ಹಾಳಾಗಿವೆ! ಇದಕ್ಕೇನ್ ಹೇಳೋದೋಪ್ಪಾ!

5. ಇನ್ನು ಈಶಾನ್ಯ ಮತ್ತು ಆಗ್ನೇಯ ರೈಲ್ವೇಗಳಲ್ಲಿ ಹೊಸ ಸ್ಟಾಕ್ಗಳನ್ನ ಉಪಯೋಗಿಸ್ದೇನೆ, ಧೂಳ್ ಹಿಡ್ಸಿದ್ದಾರೆ. ಸ್ಟಾಕ್ ಬಂದು 7 ತಿಂಗಳಾದ್ರೂ ಅದನ್ನ ವಿತರಣೆ ಮಾಡಿಲ್ಲ!

ಇಷ್ಟೆಲ್ಲಾ ರಿಪೋರ್ಟ್ ಮಾಡಿರೋ ಸಿ ಎ ಜಿ, ಪ್ರಯಾಣಿಕರಿಂದ ಟೈಂ ಟೈಮಿಗೆ ಪ್ರತಿಕ್ರಿಯೆ ಸಂಗ್ರಹಿಸಿ, ಸರಿಯಾಗಿ ಕೆಲಸ ಮಾಡಿದ್ರೇನೆ ಭಾರತೀಯ ರೈಲ್ವೇ ಹೆಸರು ಉಳಿಯೋದು ಅಂದಿದ್ದಾರೆ. ಇನ್ನಾದ್ರೂ ಸಿಬ್ಬಂದಿಗಳು ಎಚ್ಚೆತ್ಕೊಂಡು ಪ್ರಯಾಣಿಕರಿಗೆ ಒಳ್ಳೆ ಸೌಲಭ್ಯಗಳನ್ನ ಒದಗಿಸ್ಬೇಕು. ಏನಂತೀರಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: