ಈ ಪುಣ್ಯಾತ್ಮ ತನ್ನ ಹೆಂಡ್ತೀಗೋಸ್ಕರ 24 ಗಂಟೇಲಿ ಒಂದು ಮನೆ ಕಟ್ಟೋ ಚಾಲೆಂಜ್ ತಗೊಂಡ ನೋಡಿ

ಇವ್ರೊಂಥರಾ ಈ ಶತಮಾನದ ಶಹಜಹಾನ್!

ಕಾಲ ಎಷ್ಟೇ ಬದಲಾದ್ರೂ ಪ್ರೀತಿಗಿರೋ ಬೆಲೆ, ಮಹತ್ವ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ ನೋಡಿ. ಪ್ರೀತಿಗೋಸ್ಕರ ಜನ ಬಾಯ್ಮೇಲೆ ಕೈಯ್ಯಿಡೋ ಕೆಲಸಗಳನ್ನ ಮಾಡ್ತಾರೆ. ಇದಕ್ಕೊಂದು ಜೀವಂತ ಉದಾಹರಣೆ, ತ್ಯಾಗ್ ಉತ್ತಪ್ಪ ಅನ್ನೋ ಕೊಡಗಿನ ಮೂಲದ ಬ್ಯುಸಿನೆಸ್ ಮ್ಯಾನ್. ಇವರು ತಮ್ಮ ಹೆಂಡ್ತಿ ಹುಟ್ಟಿದ ಹಬ್ಬಕ್ಕೆ ಹೊಸ ಮನೆ ಗಿಫ್ಟ್ ಕೊಡ್ಬೇಕು ಅನ್ನೋ ಉದ್ದೇಶದಿಂದ ಈ ಐಡಿಯಾ ಮಾಡಿದ್ರು. ಈ ಹರಸಾಹಸದಲ್ಲಿ ಅವರಿಗೆ ಸಾಥ್ ಕೊಟ್ಟಿದ್ದು, ಬೆಂಗಳೂರಿನ ರೆಬೆಲ್ ಡಿಸ್ರಪ್ಟಿವ್ ಬಿಲ್ಡಿಂಗ್ ಟೆಕ್ನಾಲಜಿಸ್ ಅನ್ನೋ ಕಂಪನಿ. ಪ್ಯಾಡಿ ಮೆನನ್ ನೇತೃತ್ವದಲ್ಲಿ ನಡೀತಿರೋ ಈ ಕಂಪನಿ, ರಾಪಿಡ್ ಕನ್ಸ್ ಟ್ರಕ್ಷನ್ ಮತ್ತು ಇನ್ನೋವೇಶನ್ ಟೆಕ್ನಾಲಜಿಗೆ ಹೆಸರು ಮಾಡಿದೆ. 

ಏನೀ ಪ್ರಾಜೆಕ್ಟ್?

2,400 ಅಡಿ ಚದರದ ಮನೆ... 3 ಬೆಡ್ ರೂಮಿಂದು... ಬರೀ 24 ಗಂಟೆಕಾಲದಲ್ಲಿ... 48 ಲಕ್ಷಕ್ಕೆ... ಮಾಯಾಬಜಾರ್ ಸಿನಿಮಾ ಕಥೆ ತರ ಅನ್ನಿಸ್ತಿದ್ಯಾ? ನಾವ್ಹೇಳ್ತಿರೋದು ನಿಜ ಕಣ್ರೀ...  ಬೆಂಗಳೂರಿನ ಸ್ಟೋನ್ ಹಿಲ್ ಇಂಟರ್ ನ್ಯಾಷಿನಲ್ ಸ್ಕೂಲ್ ಹತ್ತಿರ ಇರೋ ಟಿ ಅಗ್ರಹಾರದಲ್ಲಿ ಈ ಪ್ರಾಜೆಕ್ಟು ಮೊನ್ನೆ ನಡೀತು. ಆದ್ರೆ ಬೆಂಗ್ಳೂರಲ್ಲಾದ ಮಳೆಯಿಂದ ಈ ಮನೆ ಪೂರ್ತಿ ಮಾಡಕ್ಕಾಗ್ಲಿಲ್ಲ. ಆದ್ರೂ ಆಶ್ಚರ್ಯ ಏನಪ್ಪಾ ಅಂದ್ರೆ,  ಆ ಹವಾಮಾನದಲ್ಲೂ 90% ಕೆಲಸ ಪೂರ್ತಿ ಮಾಡ್ಬಿಟ್ಟಿದ್ದಾರೆ. ಮಿಕ್ಕಿರೋ ಚೂರು ಪಾರು ಕೆಲಸಾನ ಜುಲೈ 22 ರ ಒಳಗೆ ಮುಗಿಸ್ತಾರಂತೆ. ಅವತ್ತೇ ಮುಗಿದಿದ್ರೆ ಲಿಂಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸಲ್ಲಿ ಹೆಸರು ಬಂದಿರ್ತಿತ್ತು... ಆದ್ರೆ ಅದು ತಪ್ಪೋಯ್ತು. ಆದ್ರೂ ಒಂದ್ವಾರದಲ್ಲಿ ಮನೆ ಕಟ್ಟೋದೂ ಸಾಧನೇನೆ ಅಲ್ವಾ?

ಮೂಲ

24 ಗಂಟೇಲಿ ಮನೆ ಕಟ್ಟೋದಾ?

ಅದೆಲ್ಲಾ ಸರಿ... ಆದ್ರೆ ಇಷ್ಟೊಂದು ಕಮ್ಮಿ ಟೈಮಲ್ಲಿ ಅಷ್ಟು ಚನ್ನಾಗಿ ಮನೆ ಕಟ್ಟಕ್ಕೆ ಹೇಗ್ ಸಾಧ್ಯ ಅಂತ ಕೇಳ್ತೀರಾ? ಇವರು ಪ್ರೀ ಕಾಸ್ಟ್ ಟೆಕ್ನಾಲಜಿ ಉಪಯೋಗಿಸ್ತಾರಂತೆ. ಇದ್ರಲ್ಲಿ, ಎಲೆಕ್ಟ್ರಿಕಲ್ ಫಿಟ್ಟಿಂಗಳು, ವಾಟರ್ ಪೈಪ್ಗಳೆನ್ನೆಲ್ಲಾ ಮೊದಲೇ ಅಳವಡಿಸಿ ಅವರ ಸೈಟಲ್ಲಿ ಗೋಡೆಗಳನ್ನ ತಯಾರು ಮಾಡಿರ್ತಾರಂತೆ. ಇದಕ್ಕೆ ಸ್ಪೆಷಲ್ ಅಚ್ಚುಗಳಿವೆ. ಮಿಕ್ಕ ಕೆಲಸಾನ ಇಲ್ಲಿ ಮಾಡಿ ಈ ಗೋಡೆಗಳನ್ನ ಕ್ರೇನ್ ಮೂಲಕ ಕೂರಿಸಿದ್ರೆ ಅರ್ಧ ಕೆಲಸ ಮುಗೀತಲ್ಲಾ? ಟೈಮು, ದುಡ್ಡು ಕಮ್ಮಿಯಾದ್ರೂ ಈ ಮನೆಗಳ ಗುಣಮಟ್ಟದ ಬಗ್ಗೆ ಮಾತ್ರ ಮಾತಾಡೋ ಹಾಗಿಲ್ವಂತೆ. ನಾವು ಸಾಮಾನ್ಯವಾಗಿ ಕಟ್ಟೋ ಮನೆಗಳಿಗಿಂತ ಚನ್ನಾಗಿರತ್ತೆ ಅಂತ ಪ್ಯಾಡಿ ಹೇಳ್ತಾರೆ.

ಈ ತಂತ್ರಜ್ಞಾನಾನ ಆಗ್ಲೇ ಯೂರೋಪ್ ಮತ್ತಿತರ ದೇಶಗಳಲ್ಲಿ ಉಪಯೋಗಿಸ್ತಿದ್ದಾರೆ. ಇದು ನಮ್ಮ ದೇಶದಲ್ಲೂ ಜಾಸ್ತಿ ಚಾಲ್ತಿಗೆ ಬಂದ್ರೆ ಎಷ್ಟ್ ಒಳ್ಳೇದಲ್ವಾ? ಇದ್ರಿಂದ ಎಷ್ಟೋ ದುಡ್ಡು ಮತ್ತೆ ಸಮಯ ಎರಡೂ ಉಳಿಯತ್ತೆ. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: