ಭೂಮಿ ಮೇಲಿನ ಸ್ವರ್ಗ ಬನವಾಸಿಗೆ ಆದಷ್ಟು ಬೇಗ ಟ್ರಿಪ್ ಹಾಕಕ್ಕೆ 9 ಚಿನ್ನದಂಥ ಕಾರಣಗಳು

ಬನವಾಸಿ ಸ್ಪೆಶಲ್ ಪೈನಾಪಲ್ ಗೊಜ್ಜು

ಉತ್ತರ ಕರ್ನಾಟಕದ ಬೆಟ್ಟದ ಮಧ್ಯದಲ್ಲೆಲ್ಲೋ ಕಳೆದೇ ಹೋಗಿರೋ ಒಂದೂರಿನ ಬಗ್ಗೆ ಇವತ್ತೊಂಚೂರು ಹೇಳ್ತಿವಿ ಕೇಳಿ. ಕದಂಬ ರಾಜವಂಶಸ್ಥರು ಆಳ್ವಿಕೆ ಮಾಡೋವಾಗ ಅಂದ್ರೆ 4ನೇ ಶತಮಾನದಲ್ಲಿ ಈ ಬನವಾಸಿನೇ ಅವರ ರಾಜಧಾನಿ ಆಗಿತ್ತು. ಆಮೇಲೆ ಅದೆಷ್ಟೋ ರಾಜರು ರಾಜವಂಶಸ್ಥರು ಆಳಿದ್ದು ಈವಾಗ ಇತಿಹಾಸ. ಇತಿಹಾಸದ ಪುಟ ತಿರುವಿ ನೋಡಿದ್ರೆ ಬನವಾಸಿಯ ಬಗ್ಗೆ ಎಷ್ಟೆಲ್ಲಾ ವಿಶೇಷ ವಿಷಯಗಳು ಗೊತ್ತಾಗುತ್ತೋ ಅಷ್ಟೇ ವಿಶೇಷ ಅಲ್ಲಿನ ಪ್ರಕೃತಿಗೂ ಇದೆ. ವಸಂತಕಾಲ ಶುರುವಾಗ್ತಾ ಇದ್ದಂಗೆ ಹಸಿರನ್ನೇ ಹೊದ್ದಿರೋ ಹಾಗೆ ಭತ್ತದ ಗದ್ದೆಗಳು , ಜುಳು ಜುಳು ಹರಿಯೋ ನದಿ , ಅಲ್ಲಲ್ಲಿ ಧುಮ್ಮಿಕ್ಕೊ ಜಲಪಾತಗಳು ಅಬ್ಬಾ!! ಮತ್ತೇನ್ ಬೇಕು ಬನವಾಸಿ ಸುಂದರವಾದ ಊರು ಅಂತ ಹೇಳೋದಕ್ಕೆ?

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ| ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್ ||

[ತ್ಯಾಗ, ಭೋಗ, ವಿದ್ಯೆ, ಸಂಗೀತ, ಕೂಟ - ಇವೆಲ್ಲಾ ಇರೋ ಜೀವನಾನ ಸಾಗಿಸೋರೆ ನಿಜವಾದ ಮನುಷ್ಯರು. ಅಂಥೋರಾಗಿ ಹುಟ್ಬೇಕು. ಇಲ್ದಿದ್ರೆ ಬನವಾಸೀಲಿ ಮರಿದುಂಬಿನೋ ಕೋಗಿಲೆಯಾಗೋ ಹುಟ್ಬೇಕು.]

ಹೀಗೆ ಹೇಳಿದ್ದು ಆದಿಕವಿ ಪಂಪ. ಆತ 10ನೇ ಶತಮಾನದಲ್ಲಿ ಬನವಾಸಿಲೇ ಜೀವನ ಮಾಡ್ತಿದ್ದ. ಅಲ್ಲಿಗೆ ನೀವು ಆದಷ್ಟು ಬೇಗ ಒಂದು ಟ್ರಿಪ್ ಹಾಕಕ್ಕೆ ಕೆಲವು ಬಲವಾದ ಕಾರಣಗಳ್ನ ಕೊಡ್ತೀವಿ, ಕೇಳಿ.

1. ಪಂಪನ ಬನವಾಸಿ ಒಂದು ಸ್ವರ್ಗ

ಪಂಪ ಹೇಳಿರೋ ಮಾತು ಎಷ್ಟು ನಿಜ ಅನ್ಸುತ್ತೆ ಗೊತ್ತಾ? ಕಾರಣ ಏನಪ್ಪಾ ಅಂದ್ರೆ ಈ ಬನವಾಸಿಲಿ ಎಲ್ಲಾ ಕಾಲದಲ್ಲೂ ಒಂದೊಂದು ಹೊಸತನ ಬರುತ್ತೆ. ಚಳಿಗಾಲದಲ್ಲಿ  ಬನವಾಸಿಲ್ಲಿರೋ ಎಲ್ಲಾ ಕೆರೆಗಳೂ ತಾವರೆ ಹೂಗಳಿಂದ ತುಂಬಿ ನಿಂತಿರುತ್ತೆ. ಮಳೆಗಾಲದಲ್ಲಿ ಮಂಜು ಮುಸ್ಕಿರೋ ವಾತಾವರಣ ಜೊತೆಗೆ ಅಲ್ಲಲ್ಲಿ ಜಲಪಾತಗಳನ್ನ ಸೃಷ್ಟಿ ಮಾಡುತ್ತೆ. ವಸಂತಕಾಲದಲ್ಲಿ ತಣ್ಣಗಿರೋ ಗಾಳಿ ಅದರ ಜೊತೆ ಎಲ್ಲಾ ಹೂಗಳ ಪರಿಮಳ ಕೂಡ ಹೊತ್ತು ಬರುತ್ತೆ. ಮತ್ತೇನ್ ಬೇಕು ಬನವಾಸಿ ಸ್ವರ್ಗ ಅಂತ ಹೇಳೋಕೆ?

ಮೂಲ

2. ಬನವಾಸಿಗೆ ವನವಾಸಿಕ, ಜಯಂತಿಪುರ, ಕೊಂಕಣಪುರ, ನಂದನವನ, ಕನಕಾವತಿ, ಜಲದುರ್ಗಾ, ಸಂಜಯಂತಿ ಹೀಗೆ ಎಷ್ಟೆಷ್ಟೋ ಹೆಸರಿದೆ

ಬೇರೆ ಬೇರೆ ರಾಜವಂಶಗಳು ಆಳಿದ್ರಿಂದ, ಬೇರೆ ಬೇರೆ ದೇಶದ ವಿದ್ವಾಂಸರು ಭೇಟಿ ಕೊಟ್ಟಿದ್ರಿಂದ ಬನವಾಸಿಗೆ ಇಷ್ಟೊಂದು ಹೆಸ್ರು. ಈ ಊರಿನ ಬಗ್ಗೆ ಗ್ರೀಕ್-ರೋಮನ್ ಬರಹಗಾರ ಟಾಲೆಮಿ 2ನೇ ಶತಮಾನದಲ್ಲೇ ತನ್ನ ಬರಹಗಳಲ್ಲಿ ಬರಕೊಂಡಿದ್ದಾನೆ. ಬರಿ ಟಾಲೆಮಿ ಮಾತ್ರ ಅಲ್ಲ ಪರ್ಷಿಯನ್ ವಿದ್ವಾಂಸ ಆಲ್ಬರೂನಿ ಕೂಡ ಇಲ್ಲಿರೋ ಸುಂದರ ದೇವಸ್ಥಾನಗಳ ಬಗ್ಗೆ , ವರದಾ ನದಿ, ಕೋಟೆಗಳ ಬಗ್ಗೆ, ಜೊತೆಗೆ ಅಲ್ಲಿ ಸಿಗೋ ಊಟತಿಂಡಿ ಎಲ್ಲದರ ಬಗ್ಗೆನೂ ಬರ್ದಿದ್ದಾನೆ. ಇದೊಂದು ಮಾಯಾ ನಗರ ಅಂತ ಚಾಮರಸ ಮತ್ತೆ ಕಾಳಿದಾಸ ಕೂಡ ಪದ್ಯ ಬರ್ದಿದಾರೆ.

ಮೂಲ

3. ಮಧುಕೇಶ್ವರ ದೇವಸ್ಥಾನದಲ್ಲಿ ಜೇನುಬಣ್ಣದ ಶಿವಲಿಂಗ ಇದೆ

ಕದಂಬರು ಈ ಊರನ್ನ ಆಳ್ತಾ ಇದ್ದಾಗ ಈ ಮಧುಕೇಶ್ವರ ದೇವಸ್ಥಾನ ಕಟ್ಟಿದ್ದಾರೆ. ಮೊದ್ಲು ಇದು ಮಾಧವ ಅಂದ್ರೆ ವಿಷ್ಣುವೀಣೆ ದೇವಸ್ಥಾನ ಆಗಿತ್ತು. ಆದ್ರೆ ಆಮೇಲೆ ಆಳ್ವಿಕೆ ಮಾಡಿದ್ದ ಹೊಯ್ಸಳರು, ಚಾಲುಕ್ಯರು, ಸೌಂದ ಮತ್ತೆ ವಿಜಯನಗರದ ಅರಸರು ಈ ದೇವಸ್ಥಾನಡಾ ವಾಸ್ತುಶಿಲ್ಪನಾ ಬದ್ಲಾವಣೆ ಮಾಡಿದ್ದಾರೆ. ಪೂರ್ವ ದಿಕ್ಕಿಗೆ ಮುಖ ಮಾಡಿರೋ ಮಧುಕೇಶ್ವರ ದೇವಸ್ಥಾನದಲ್ಲಿ (ಮಧು) ಜೇನುಬಣ್ಣದ ಶಿವಲಿಂಗ ಇದೆ. ಇದರ ಜೊತೆಗೆ ಮಹಿಷಾಸುರ ಮರ್ದಿನಿ, ಗಣೇಶ, ನಂದಿ, ಪಾರ್ವತಿ, ವೀರಭದ್ರ, ನರಸಿಂಹ, ಬಸವಲಿಂಗೇಶ್ವರ ಗುಡಿಗಳೂ ಇವೆ.

 

ಮೂಲ

4. ನೆಲ ಅಗೆದಾಗ ಮಧುಕೇಶ್ವರ ದೇವಸ್ಥಾನದಲ್ಲಿ ಶಾತವಾಹನರ ಕಾಲದ ಶಾಸನ ಸಿಕ್ಕಿವೆ

ಬ್ರಾಹ್ಮಿ, ಪ್ರಾಕೃತ ಭಾಷೆಯ ಬರಹಗಳಿರೋ ನಾಗನ ವಿಗ್ರಹಗಳನ್ನ ಕೆತ್ತನೆಗಳನ್ನ ನೀವಿಲ್ಲಿ ನೋಡ್ಬೋದು. 3ನೇ ಶತಮಾನದಲ್ಲಿ ಆಳಿದ್ದ ಶಾತವಾಹನರ ದೊರೆ ಪುಳುಮಾವಿಯ ಧರ್ಮಪತ್ನಿ ಸವಿನೆನಪಿಗೊಸ್ಕರ ಕೆತ್ತಿರೋ ಕಲ್ಲಿನ ವಿಗ್ರಹಗಳು, ರೋಮನ್ನರ ಕಲ್ಲಿನ ನಾಣ್ಯ, ಮಣ್ಣಿನಿಂದ ಮಾಡಿರೋ ಸ್ಕಂದ - ಕಾರ್ತಿಕೇಯನ ಮೂರ್ತಿಗಳು, ಮರದಲ್ಲಿ ಕೆತ್ತಿರೋ ರಥ ಎಲ್ಲವೂ ನೆಲ ಅಗೆದಾಗ ಸಿಕ್ಕಿವೆ.

ಮೂಲ

5. ಬನವಾಸಿ ಕಲೆ- ಸಂಸ್ಕೃತಿಗೆ ಹೆಸರುವಾಸಿ "ಕದಂಬೋತ್ಸವ"

ಸಂಭ್ರಮವಾಗಿ ಪ್ರತಿ ವರ್ಷ ಆಚರಿಸೋ ಕದಂಬೋತ್ಸವ 3 ದಿನ ನಡೆಯೋ ಹಬ್ಬ. ಸಾಕಷ್ಟು ಜನ ಕಲಾವಿದರು, ಸಂಗೀತಗಾರರು, ನೃತ್ಯಗಾರರು, ಕುಂಬಾರರು, ರಂಗೋಲಿ ಕಲಾವಿದರು, ಕೆತ್ತನೆ ಕೆಲಸ ಮಾಡೋರು, ಬಡಗಿಗಳು, ಬನವಾಸಿಯ ಕಳೆದುಹೋದ ಸಂಭ್ರಮವನ್ನ ಮತ್ತೆ ನೆನಪಿಸೋ ಕೆಲಸವನ್ನ ಈ ಮೂರೂ ದಿನ ಮಾಡ್ತಾರೆ. 

ಮೂಲ

6. ಬನವಾಸಿ ಸ್ಪೆಶಲ್ ಪೈನಾಪಲ್ ಗೊಜ್ಜು

ಬನವಾಸಿ ಊರು ಮಳೆಗಾಲ ಶುರುವಾಗ್ತಿದ್ದಾಗೆ ಹಸಿರು ಹೊದ್ದುಕೊಂಡಿರೋದನ್ನ ನೋಡೋದೇ ಕಣ್ಣಿಗೆ ಒಂಥರಾ ಹಬ್ಬ. ಅದಕ್ಕೆ ಕಾರಣ ಅಲ್ಲಿರೋ ಭತ್ತದ ಗದ್ದೆ. ಈ ಬನವಾಸಿನಲ್ಲಿ ತುಂಬಾ ರುಚಿಯಾಗಿರೋ ಪೈನಾಪಲ್ ಬೆಳೀತಾರೆ. ಹಾಗೆ ತಿನ್ನೋದ್ರ ಜೊತೆ ಪೈನಾಪಲ್ಲಿಂದ ಮಾಡಿರೋ ಗೊಜ್ಜು ತಿನ್ಬೇಕು.  ಇದನ್ನ ಅಲ್ಲಿನ ಖಾನಾವಳಿಗಳಲ್ಲಿ ಅಕ್ಕಿ, ಜೋಳ ಮತ್ತೆ ಸಜ್ಜೆಯಿಂದ ಮಾಡಿರೋ ರೊಟ್ಟಿಗಳ ಜೊತೆ ಪಲ್ಯ , ಚಟ್ನಿ, ಉಪ್ಪಿನಕಾಯಿ ಮತ್ತೆ ಪೈನಾಪಲ್ ಗೊಜ್ಜೂ ಕೊಡ್ತಾರೆ. ಸೂಪರರಾಗಿರುತ್ತೆ.

ಮೂಲ

7. ಬನವಾಸಿಯ ಹೊರಭಾಗದಲ್ಲಿರೋ ಗುಡ್ನಾಪುರದಲ್ಲಿ ರಾಜಾ ರವಿವರ್ಮನ ಕಂಬ ಇದೆ

ಭವ್ಯವಾದ ಮನೆಗಳೂ, ನೃತ್ಯ ಮಾಡೋಕ್ಕೆ ಇದ್ದಂತ ಹಾಲ್ ಅಷ್ಟೇ ಅಲ್ಲ ಒಂದಷ್ಟು ಜೈನ ತೀರ್ಥಂಕರರ ವಿಗ್ರಹಗಳೂ, ದೇವಸ್ಥಾನ, ಎಲ್ಲವೂ ಮಳೆ ನೀರು ಹೆಚ್ಚಾಗಿ ಕೆರೆ ತುಂಬಿ ಹರಿದು ಮುಳುಗೋಗಿರೋದನ್ನೂ ನೋಡ್ಬೋದು. ಪ್ರಾಚ್ಯವಸ್ತು ಸಂಗ್ರಹಕಾರರ ಹುಡ್ಕಿರೋ ಒಂದ್ ವಿಶೇಷವಾದ ಕಂಬ ಇದೆ. ಇದ್ರಲ್ಲಿ ಕದಂಬ ರಾಜ ರವಿವರ್ಮನ ಬಗ್ಗೆ ಕೆತ್ತಿದಾರೆ.

ಮೂಲ

8. ಬಳಪದ ಕಲ್ಲಲ್ಲಿ ಕಟ್ಟಿರೋ ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ

ಬನವಾಸಿಯ ಸುಮಾರು 43 ದೂರಲ್ಲಿರೋ ಶಿರಾಳಿಕೊಪ್ಪ ಅನ್ನೋ ಟೌನ್ ನಲ್ಲೆ ಬಳ್ಳಿಗಾವಿ ಅನ್ನೋ ಹಳ್ಳಿ ಇದೆ. ಸುಮಾರು 54 ದೇವಸ್ಥಾನಗಳನ್ನೂ ನಾವಿಲ್ಲಿ ನೋಡಬೋದು. ಶೈವರಿಗೆ, ವೈಷ್ಣವರಿಗೆ, ಜೈನರಿಗೆ, ಬೌದ್ಧರಿಗೆ ಹೀಗೆ ಎಲ್ಲರ ಆರಾಧನೆಗೂ ಇಲ್ಲಿ ದೇವಾಲಯ ಇದೆ. ಒಂದೆರಡು ದೇವಸ್ಥಾನ ಚಾಲುಕ್ಯರ ಆಳ್ವಿಕೆಯ ನಂತರ ಕಟ್ಟಿರೋದು ಅಂತಾರೆ. ಇಲ್ಲಿರೋ ಕೇದಾರೇಶ್ವರನ ದೇವಸ್ಥಾನ ಕಟ್ಟಿರೋದು ಬಳಪದ ಕಲ್ಲಲ್ಲಿ. ಚಾಲುಕ್ಯ - ಹೊಯ್ಸಳ ಎರಡೂ ಶೈಲಿಗಳನ್ನೂ ನಾವಿಲ್ಲಿ ನೋಡಬೋದು. ಸುಮಾರು 11ನೇ ಶತಮಾನದಲ್ಲಿ ಇದನ್ನ ಕಟ್ಟಿದ್ದಾರೆ ಅನ್ನತ್ತೆ ಇತಿಹಾಸ. ಈ ದೇವಸ್ಥಾನದ ಪ್ರಾಕಾರದಲ್ಲೇ ಒಂದು ಮ್ಯೂಸಿಯಂ ಕೂಡ ಇದೆ.

ಮೂಲ

9. ಬೇಡವಾದ ರತ್ನ ಅನ್ನಿಸಿಕೊಂಡಿರೋ ಬೆಳ್ಳಗಾವಿಯ ತ್ರಿಪುರಾಂತಕೇಶ್ವರ ದೇವಸ್ಥಾನ

ಬೇರೆ ದೇವಸ್ಥಾನಗಳಿಗೆ ಹೋಲಿಸಿದ್ರೆ ಈ ದೇವಸ್ಥಾನ ಅದ್ಯಾಕೋ ಏನೋ ಹೆಚ್ಚು ಪ್ರಚಾರ ಪಡೆದಿಲ್ಲ. ಆದ್ರೆ ಇಲ್ಲಿನ ಕೆತ್ತನೆಗಳು ಮಾತ್ರ ತುಂಬಾ ತುಂಬಾ ಅದ್ಭುತವಾಗಿದೆ. ಕಲ್ಲಿನಲ್ಲಿ ಮಾಡಿರೋ ಕಿಟಕಿಗಳು, ನೃತ್ಯಭಂಗಿಯಲ್ಲಿರೋ ಹುಡುಗಿಯರ ವಿಗ್ರಹಗಳು, ಆಭರಣ ತೊಟ್ಟಿರೋ ದ್ವಾರಪಾಲಕರು, ಪಂಚತಂತ್ರ ಕತೆಗಳ ಕೆತ್ತನೆಗಳು ಇವೆಲ್ಲಾ ಖಂಡಿತಾ ನೋಡಲೇಬೇಕಾದ ಜಾಗ.

ಮೂಲ

ಇಷ್ಟೆಲ್ಲಾ ಗೊತ್ತಾದ್ಮೇಲೆ ಬನವಾಸಿ ನೋಡ್ಲೇಬೇಕು ಅನ್ನಿಸ್ತಾ? ಹಾಗಾದ್ರೆ ಇಲ್ಕೇಳಿ

ಶಿರಸಿಯಿಂದ 22 ಕಿಮಿ ದೂರಲ್ಲಿರೋ ಈ ಬನವಾಸಿಗೆ  ಶಿವಮೊಗ್ಗ, ಹಾವೇರಿಯಿಂದ ಬಸ್ಸು, ಟ್ರೇನು ಎರಡೂ  ಸಿಗುತ್ತೆ. ಶಿರಸಿಯಿಂದ ಬನವಾಸಿಗೂ ಬೇಕಾದಷ್ಟು ಬಸ್ಸುಗಳಿವೆ.

ಬನವಾಸಿಗೆ ಹೋದೋರು ಇವನ್ನೆಲ್ಲಾ ತಿನ್ನದೇ ಬರ್ಲೇಬೇಡಿ.

ಖಾನಾವಳಿಗಳಲ್ಲಿ ಅಕ್ಕಿ ಜೋಳ ಸಜ್ಜೆ ನವಣೆಗಳಲ್ಲಿ ಮಾಡಿರೋ ರೊಟ್ಟಿ ಪಲ್ಯ ಚಟ್ನಿ ಉಪ್ಪಿನಕಾಯಿ ತಿನ್ಲೆಬೇಕು. ಸಿಹಿ ತಿಂಡಿ ಇಷ್ಟ ಪಡೋರು  ಇಲ್ಲಿ ಮಾಡೋ ಒಬ್ಬಟ್ಟು ತಿನ್ನೋದನ್ನ ಮರಿಲೇಬೇಡಿ. ಪೈನಾಪಲ್ ತಿನ್ನದೇ ವಾಪಸ್ ಬರ್ಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಮೆಚ್ಚಿನ ಅಂತೆಕಂತೆ ಈಗ YouTube ನಲ್ಲಿ

ಈ ಬಟನ್ ಒತ್ತಿ subscribe ಮಾಡಿಕೊಳ್ಳಿ:
 

ದೇವರು ನನಗ್ಯಾಕೆ ಇಷ್ಟು ಕಷ್ಟ ಕೊಟ್ಟಿದಾನೆ ಅನ್ನಿಸಿದಾಗ ಈ 22 ಸತ್ಯಗಳ್ನ ನೆನಪು ಮಾಡ್ಕೊಳಿ

ಕಷ್ಟ ಯಾವತ್ತೂ ಕ್ಷಣಿಕ ಕಣ್ರೀ

ಕಷ್ಟ ಬಂದಾಗ ವೆಂಕಟರಮಣನ ಹತ್ತಿರ ಹೋಗೋದು ಇದ್ದೇ ಇದೆ. ಅದರ ಜೊತೆಗೆ ನೀವು ಯೋಚನೆ ಮಾಡೋ ದಿಕ್ಕು ಕೂಡ ಬದಲಾಗಬೇಕಿದೆ. ಕೆಳಗೆ ಕೊಟ್ಟಿರೋ 21 ಪಾಯಿಂಟ್ಗಳ್ನ ನೆನಪಿಡಿ, ಆಗ ನಿಮ್ಮ ಕಷ್ಟ ಕಡಿಮೆ ಆಗೋದ್ರಲ್ಲಿ ಸಂದೇಹ ಇಲ್ಲ:

1. ನಿಮ್ಮನ್ನ ನೀವು ಬದಲಾಯಿಸಿಕೋಬೋದು. ನಿಮ್ಮ ಜೀವನದಲ್ಲಿ... ನಿಮ್ಮ ವ್ಯಕ್ತಿತ್ವದಲ್ಲಿ... ನಿಮಗೆ ಇಷ್ಟವಿಲ್ಲದಿರೋದು ಏನೇನಿದೆಯೋ ಅದರಲ್ಲಿ ಪ್ರತಿಯೊಂದನ್ನೂ ಬದಲಾಯಿಸ್ಕೋಬೋದು.

ಎಷ್ಟೋ ಸಲ ಪ್ರಪಂಚ ನಮಗೆ ಕೊಡೋ ಸಂದೇಶಾನೇ ಬೇರೆ. ನೀನು ಇರೋದೇ ಹೀಗೆ, ನೀನು ಉದ್ಧಾರ ಆಗಲ್ಲ ಅಂತೆಲ್ಲ ಹೇಳ್ತಾ ಇರುತ್ತೆ. ಆದರೆ ಅದೆಲ್ಲ ಸುಳ್ಳು. ನೀವು ಮನಸ್ಸು ಮಾಡಿದರೆ ನಿಮ್ಮನ್ನ ನೀವು ಬದಲಾಯಿಸಿಕೋಬೋದು. ಆದರೆ ಅದಕ್ಕೆ ಮೊದಲಾಗಿ ನಿಮಗೆ ಏನ್ ಬದಲಾಗಬೇಕು ಅನ್ನೋದು ಗೊತ್ತಿರಬೇಕು. ಅದರ ಬಗ್ಗೆ ಸರಿಯಾಗಿ ಯೋಚನೆ ಮಾಡುದ್ರೆ ಹೇಗೆ ಬದಲಾಯಿಸಿಕೋಬೇಕು ಅನ್ನೋದೂ ಸುಲಭವಾಗಿ ನಿಮಗೇ ಅರ್ಥ ಆಗುತ್ತೆ.

2. ನೀವು ಸಂತೋಷವನ್ನ ನಿಮ್ಮ ನೆನ್ನೆಗಳಲ್ಲಿ ಅಥವಾ ನಾಳೆಗಳಲ್ಲಿ ಹುಡುಕಬೇಕಾಗಿಲ್ಲ. ಅದು ಈ ಕ್ಷಣದಲ್ಲೇ ಇದೆ.

ಇದನ್ನಂತೂ ಬಹಳ ಕೇಳಿರ್ತೀರಿ. ಅದರೆ ಇದು ನೂರಕ್ಕೆ ನೂರು ನಿಜ. ಸಂತೋಷ ಅನ್ನೋದು ಒಂದು ಮನಃಸ್ಥಿತಿ ಅಷ್ಟೇ. ಸಂತೋಷವಾಗಿದೀನಿ ಅನ್ಕೊಂಡ್ರೆ ಇದೀರಿ, ಇಲ್ಲ ಅನ್ಕೊಂಡ್ರೆ ಇಲ್ಲ. ನಿಮ್ಮ ಸುತ್ತ ಮುತ್ತ ತಿರುಗಿ ನೋಡಿ, ಅದರಲ್ಲೆಲ್ಲ ಸಂತೋಷ ಅಡಗಿದೆ. ನಿಮ್ಮೊಳಗೆ ನೀವೇ ಇಣುಕಿ ನೋಡಿ, ಅಲ್ಲೂ ಅಡಗಿದೆ.

3. ನಿಮಗೆ ಗೊತ್ತಿಲ್ಲದೆ ನಿಮ್ಮಿಂದ ಸ್ಫೂರ್ತಿ ಪಡ್ಕೊಂಡೋರು ಕೂಡ ಇರ್ತಾರೆ.

ನೀವು ಅನ್ಕೊಂಡಿರಬಹುದು, ನೀವು ಪೂರ್ತಿ ವೇಸ್ಟು ಅಂತ. ಆದರೆ ಹಾಗೇನಿಲ್ಲ. ನಿಮ್ಮ ಈ ಉಪಯೋಗವಿಲ್ಲದ ಚಿಂತನೆಯ ಸುಳಿಯಲ್ಲಿ ಸಿಕ್ಕಿಕೊಂಡು ನಿಮಗೇನೇ ನಿಮ್ಮಲ್ಲಿರೋ ಒಳ್ಳೆ ಗುಣಗಳು ಕಾಣಿಸ್ತಾ ಇರಲ್ಲ, ಅಷ್ಟೇ. ಅದು ಬೇರೆಯವರಿಗೆ ಕಾಣಿಸ್ತಾ ಇರುತ್ತೆ. ಉದಾಹರಣೆಗೆ ನೀವು ಬಹಳ ವಿನಯದಿಂದ ನಡ್ಕೋತಾ ಇರಬಹುದು. ಆ ವಿನಯವನ್ನ ಜನ ಗಮನಿಸದೆ ಇರೋದಿಲ್ಲ. ಅದು ನನಗೂ ಇದ್ದರೆ ಒಳ್ಳೇದು ಅಂತ ಅನ್ಕೊಳೋರೂ ಇರ್ತಾರೆ.

4. ಕಷ್ಟ ಪಡೋದ್ರಿಂದ ನೀವು ಇನ್ನಷ್ಟು ಗಟ್ಟಿ ಆಗ್ತೀರಿ.

ಬೆಟ್ಟ ಹತ್ತೋದ್ರಿಂದ ಕೈಕಾಲು ಗಟ್ಟಿ ಆಗುತ್ತೆ. ಕಷ್ಟ ಅಂತ ಸುಮ್ನೆ ಕೂತಿದ್ದರೆ ಆಗುತ್ತಾ? ಆದ್ದರಿಂದ ಪಡಬೇಕು ಕಣ್ರೀ, ಕಷ್ಟ ಪಡಬೇಕು. ಪೂರ್ತಿ ಸುಖದಲ್ಲೆ‌ ಬೆಳೆದೋರು ಕಷ್ಟದಲ್ಲಿ ಬೆಳದೋರಷ್ಟು ಗಟ್ಟಿ ಅಲ್ಲ.

5. ನೀವು ಮಾಡಿರೋ ತಪ್ಪುಗಳಿಗೆ ಇನ್ನೊಂದು ಹೆಸರಿದೆ: "ಅನುಭವ". ತಪ್ಪುಗಳು 'ಏನ್ ಮಾಡಬಾರದು' ಅಂತ ಹೇಳಿ ಕೊಡುತ್ತವೆ ತಾನೆ? ಆದ್ದರಿಂದ ತಪ್ಪು ಒಂಥರಾ ಗುರು ಇದ್ದಂಗೆ!

ಅಯ್ಯೋ... ಜೀವನದಲ್ಲಿ ತಪ್ಪಾಗಿ ಹೋಗಿದೆ ಅಂತ ತಲೆ ಮೇಲೆ ಕೈ ಕಟ್ಟಿ  ಕೂತ್ಕೊಂಡ್ರೆ ಏನ್ ಉಪಯೋಗ? ಅದರಿಂದ ಕಲಿಯೋದು ಕಲೀರಿ, ಆ ತಪ್ಪಿಗೆ "ನಮಸ್ಕಾರ ಗುರುವೇ" ಅಂತ ಹೇಳಿ ಮುಂದಿನ ದಾರಿ ನೋಡಿ.

6. ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುವಂಥ ವ್ಯಕ್ತಿಯೊಬ್ಬ ನಿಮಗೆ ಯಾವಾಗ ಬೇಕಾದರೂ ಸಿಗಬಹುದು

ಆ ವ್ಯಕ್ತೀನ ನೀವು ಇಲ್ಲೀವರೆಗೆ ಭೇಟಿ ಮಾಡಿಲ್ಲ, ಅಷ್ಟೇ. ಅಥವಾ ಭೇಟಿ ಮಾಡಿದ್ದರೂ ಫಿಲಮ್ಮಲ್ಲಿ ತೋರಿಸೋ ಹಾಗೆ ನಿಮಗೆ ಗೊತ್ತಾಗಿಲ್ಲ, ಅಷ್ಟೇ. ನಿಮ್ಮ ಕಣ್ಣು ಬಿಟ್ಟಿದ್ದರೆ ಇವತ್ತಲ್ಲ ನಾಳೆ ಆ ವ್ಯಕ್ತಿ ಸಿಕ್ಕೇ ಸಿಗ್ತಾನೆ/ಳೆ.

7. ಈಗ ನೀವು ಎಷ್ಟೇ ಕಷ್ಟದಲ್ಲಿದ್ದರೂ... ಎಷ್ಟೇ‌ ನೋವು ಅನುಭವಿಸ್ತಾ ಇದ್ದರೂ... ಇಷ್ಟು ಮಾತ್ರ ನೆನಪಿಡಿ: ಪರಿಸ್ಥಿತಿ ಇನ್ನೂ ಕೆಟ್ಟದಾಗಿರಬಹುದಿತ್ತು! ಅಷ್ಟೇ ಅಲ್ಲ, ನೀವು ಪಡ್ತಿರೋ ಕಷ್ಟ ಶಾಶ್ವತವೇನಲ್ಲ.

ಸುಖ, ದುಃಖ ಎರಡೂ ಇದ್ದು ಹೋಗುವಂಥದ್ದು. ಆದ್ದರಿಂದ ಕಷ್ಟದಲ್ಲಿದೀನಿ, ನೋವು ಅನುಭವಿಸ್ತಾ ಇದೀನಿ ಅಂತ ತುಂಬಾ ನೊಂದುಕೊಬೇಡಿ. ಉದಾಹರಣೆಗೆ... ಆಕ್ಸಿಡೆಂಟ್ ಆಗಿ ಕಾಲು ಮುರಿದಿದ್ದರೆ ಇನ್ನೂ ದೊಡ್ಡ ಅನಾಹುತ ತಪ್ಪಿದೆ ಅಂತ ಸಂತೋಷವಾಗಿರಿ. 2 ತಿಂಗಳಲ್ಲಿ ನಡೆಯೋ ಹಾಗೆ ಆಗುತ್ತೆ ಅಂತ ಡಾಕ್ಟರ್ ಹೇಳಿದರೆ ಸಂತೋಷ ಪಡಿ.

8. ವಯಸ್ಸು, ಜಾತಿ, ಧರ್ಮ, ಲಿಂಗ, ನೋಟ, ದುಡ್ಡು, ನಿಮ್ಮ ಡಿಗ್ರೀ... ಇದ್ಯಾವುದೂ ಮುಖ್ಯವಲ್ಲ. ನೀವು ಮಾಡೋ ಕೆಲಸ, ನಿಮ್ಮ ಮೇಲೆ ನಿಮಗಿರೋ ನಂಬಿಕೆ - ಇವೆರಡೇ ಮುಖ್ಯ.

ನಿಮ್ಮ ಕೆಲಸಾನೇ ಮುಖ್ಯ ಕಣ್ರೀ. ಇವತ್ತಿಂದ ಸರಿಯಾಗಿ ದುಡಿಯೋ ಛಲ ನಿಮಗಿದ್ದರೆ, ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ನಿಮ್ಮ ವಯಸ್ಸು ಜಾತಿ ಗೀತಿ ಎಲ್ಲಾ ಅಷ್ಟು ಮುಖ್ಯ ಅಲ್ಲ.

9. ಇವತ್ತು ತೀರಾ ಕಷ್ಟ ಅನ್ನಿಸ್ತಾ ಇದ್ರೆ ನೆನಪಿಡಿ: ನಾಳೆ ಅನ್ನೋದೂ ಇದೆ. ಕಾಯಿರಿ.

ಎಷ್ಟೋ ಸಮಸ್ಯೆಗಳು ತಮ್ಮಷ್ಟಕ್ಕೆ ತಾವೇ ಸ್ವಲ್ಪ ಸಮಯ ಕೊಟ್ಟರೆ ಮಾಯ ಆಗೋಗ್ತವೆ. ಸ್ವಲ್ಪ ತಾಳ್ಮೆ ಇರಲಿ. ಎಲ್ಲಾ ಇವತ್ತೇ ಸರಿಯಾಗ್ಬೇಕು ಅಂತ ಯಾಕ್ ಅನ್ಕೋತೀರಿ?

10. ನಿಮಗೆ ಗೊತ್ತಿಲ್ಲದೆ ನಿಮ್ಮ ತರಹ ಅದು ಮಾಡಬೇಕು, ಇದು ಮಾಡಬೇಕು, ನಿಮ್ಮ ತರಹ ಇರಬೇಕು ಅನ್ಕೊಳೋರಿರ್ತಾರೆ.

ಹೌದು ಕಣ್ರೀ, ನೀವು ಒಂಥರಾ ರೋಲ್ ಮಾಡೆಲ್ಲು. ನಿಮಗೂ ಒಳ್ಳೇ ಅಭ್ಯಾಸಗಳಿವೆ. ನಿಮ್ಮಿಂದಾನೂ ಜನ ಕಲೀತಾರೆ. ಬೇಕಾದರೆ ನೀವೇ ಕೂತ್ಕೊಂದು ಲೆಕ್ಕ ಹಾಕಬಹುದು, ಯಾರ್ಯಾರು ಅಂತ.

11. ನೀವು ಯಾವುದರ ಬಗ್ಗೆ ಯೋಚ್ನೆ ಮಾಡ್ತೀರೋ ಅದು ನಿಮ್ಮ ಜೀವನಕ್ಕೆ ಹರ್ಕೊಂಡ್ ಬರುತ್ತೆ. ಆದ್ದರಿಂದ ಯಾವಾಗಲೂ ಒಳ್ಳೇ ಯೋಚನೆ ಮಾಡಿ.

ಇದೊಂದು ವಿಚಿತ್ರವಾದ ಸತ್ಯ. "ಅಸ್ತು ದೇವತೆಗಳು" ಅಂತ ಇರ್ತಾರೆ ಅಂತಾರೆ. ಅವರು ಎಲ್ಲಾದಕ್ಕೂ "ಆಸ್ತು, ಅಸ್ತು" ಅಂತಿರ್ತಾರಂತೆ ಅಂತ ನೀವು ಕೇಳಿರಬಹುದು. ಇದೇನು ಬರೀ ಬೊಕ್ಕಳೆ ಅಲ್ಲ. ನಿಜಕ್ಕೂ ನಮ್ಮ ಮನಸ್ಸು ಏನು ಕೆಳುತ್ತೋ ಅದು ಆಗುತ್ತೆ ಅಂತ ಈಗ ಪ್ರಪಂಚದಲ್ಲೆಲ್ಲ ಮಾತಾಡ್ತಿದಾರೆ.

12. ಚಿಕ್ಕ ಚಿಕ್ಕ ಗೆಲುವುಗಳ್ನ ಮರೀಬೇಡಿ, ಅವುಗಳಿಂದಲೇ ದೊಡ್ಡದನ್ನ ಸಾಧಿಸಕ್ಕಾಗೋದು.

ನೀವು ಹಾಕ್ಕೊಂಡಿರೋ ಗುರಿ ದೊಡ್ಡದೇ ಇರಬಹುದು, ಆದ್ರೆ ಎಲ್ಲಾ ಒಂದೇ ಸಲ ಆಗಲ್ಲವಲ್ಲ? ಏಣಿ ಹತ್ತಬೇಕಾದರೆ ಒಂದೊಂದಾಗಿ ಕೋಲಿನ ಮೇಲೆ ಕಾಲು ಇಟ್ಕೊಂಡು ಹೋಗಬೇಕು ತಾನೇ? ಒಂದೇ ಸಲಕ್ಕೆ ಮೇಲೆ ಹೋಗಬೇಕು ಅಂದ್ರೆ?

13. ಹಿಂದಿನ ಸೋಲುಗಳಿಗೆ ನಿಮ್ಮ ಅನುಮತಿ ಇಲ್ಲದೆ ನಿಮ್ಮ ಭವಿಷ್ಯ ತೀರ್ಮಾನಿಸೋ ಶಕ್ತಿ ಇಲ್ಲ. ಆದ್ದರಿಂದ ಅದರಿಂದ ಕಲೀಬೇಕಾದ್ದು ಕಲಿತು ಮುಂದ್-ಮುಂದಕ್ಕೆ ಹೋಗ್ತಾ ಇರಿ.

ಆಗಿದ್ದರ ಬಗ್ಗೆ ಬರೀ ಗೊಳೋ ಅಂತ ಕೂತಿದ್ರೆ ಏನ್ ಉಪಯೋಗ? ಅದರ ಬದಲು ಕಲಿಯೋದು ಕಲೀರಿ, ಮುಂದೆ ಏನ್ ಮಾಡ್ಬೇಕು ಅಂತ ಯೋಚ್ನೆ ಮಾಡಿ. ಆಗಲೇ ಹೇಳಿದ್ವಲ್ಲ, ತಪ್ಪು ಒಂಥರಾ ಗುರು ಇದ್ದಂಗೆ ಅಂತ?

14. ನಿಮ್ಮ ಹತ್ತಿರ ಯಾವುದು ಇಲ್ಲ ಅನ್ನೋ ಯೋಚನೆ ಬಿಟ್ಟು ಯಾವುದು ಇದೆ ಅನ್ನೋದರ ಬಗ್ಗೆ ಯೋಚನೆ ಮಾಡಿ, ಆಗ ನಿಮಗೇ ಗೊತ್ತಾಗುತ್ತೆ, ನೀವೇನು ಅಷ್ಟು ಕೆಟ್ಟದಾಗಿರೋ ಜೀವನ ಮಾಡ್ತಿಲ್ಲ ಅಂತ.

ನನ್ನ ಹತ್ತಿರ ಕಾರ್ ಇಲ್ಲ, ಸ್ವಂತ ಮನೆ ಇಲ್ಲ... ಅಂತ ಅತ್ಕೊಂಡ್ ಕೂತ್ಕೊಂಡ್ರೆ ಅವೆಲ್ಲ ಸಿಕ್ಕಿ ಬಿಡುತ್ತಾ? ಅದರ ಬದಲು ಬೈಕೂ ಇಲ್ಲದಿರೋರು, ಬಾಡಿಗೆ ಮನೇನೂ ಇಲ್ಲದಿರೋರು ಇದಾರೆ ಅಂತ ನೆನಪಿಟ್ಟುಕೊಳ್ಳಿ. ಇವತ್ತಲ್ಲ ನಾಳೆ ನಿಮಗೆ ಕಾರೂ‌ ಸಿಗುತ್ತೆ, ಸ್ವಂತ ಮನೇನೂ ಮಾಡ್ಕೋತೀರಿ. ನೀವು ಅನ್ಕೊಂಡಿರೋಷ್ಟು ಬಡವರೇನು ನೀವಲ್ಲ.

15. ಸಾಮಾನ್ಯವಾಗಿ ರೋಗ ಬರೋದೇ ಸರಿಯಾಗಿಲ್ಲದಿರೋ ಜೀವನಶೈಲಿಯಿಂದ, ಒತ್ತಡದಿಂದ. ನಿಮ್ಮ ಅಭ್ಯಾಸಗಳ್ನ ಬದಲಾಯಿಸಿಕೊಳ್ಳಿ, ಆಗ ಆರೋಗ್ಯದಿಂದ ಇರ್ತೀರಿ.

ಸಾಮಾನ್ಯವಾಗಿ ರೋಗ ಬಂದ್ರೆ ಅದು ನಿಮ್ಮ ತಪ್ಪೇ. ಮೇಲೆ ಹೇಳಿದಂಗೆ ಆ ತಪ್ಪಿಂದ ಕಲೀಬೇಕಾದ್ದನ್ನ ಕಲೀರಿ, ಅಷ್ಟೇ.

16. ನಿಮ್ಮ ತರಹ ಬೇರೆ ಯಾರೂ ಇಲ್ಲ. ನಿಮ್ಮ ನಿಮ್ಮತನವನ್ನ ಬೇರೆ ಯಾರೂ ಕಿತ್ಕೊಂಡ್ ಹೋಗಕ್ಕಾಗಲ್ಲ.

ನಿಮಗೆ ನಿಮ್ಮದೇ ಆದ ಪ್ರತಿಭೆ ಇದೆ. ನ್ಯೂನತೆಗಳೂ ಇವೆ. ನಿಮ್ಮ ತರಹಾನೇ ಬೇರೆ ಯಾರಿದಾರೆ ಹೇಳಿ? ನೀವು ಪ್ರಪಂಚದಲ್ಲಿ ಮಾಡಕ್ಕಾಗೋದನ್ನ ಬೇರೆ ಯಾರ ಕೈಯಲ್ಲೂ ಮಾಡಕ್ಕಾಗಲ್ಲ ಅಂತ ನೆನಪಿಡಿ. ಈ "ಶಕ್ತಿ"ಯನ್ನ ಯಾರೂ ಕಿತ್ಕೊಂಡ್ ಹೋಗಕ್ಕೂ ಆಗಲ್ಲ.

17. ಜೀವನದಲ್ಲಿ ಅವಕಾಶಗಳಿಗೆ ಬರ ಇಲ್ಲ. ನಿಮ್ಮ ಮುಂದೆ ಬಂದು ನಿಂತಾಗ ನಿಮಗೆ ಅದು ಅವಕಾಶ ಅಂತ ಅರ್ಥ ಆಗಬೇಕು, ನೀವು ಅದನ್ನ ತೊಗೋಬೇಕಷ್ಟೆ.

ಎಲ್ಲ ನಾವು ಅನ್ಕೊಂಡಂಗೆ ಕಣ್ರೀ. ನನಗೆ ಎಲ್ಲಾ ಕಟ್ಟದಾಗುತ್ತೆ ಅನ್ಕೊಂಡ್ರೆ ಕೆಟ್ಟದೇ ಆಗುತ್ತೆ. ಒಳ್ಳೇದಾಗುತ್ತೆ ಅನ್ಕೊಂಡ್ರೆ ಒಳ್ಳೇದಾಗುತ್ತೆ. ಎಣ್ಣೆ ಬಂದಾಗ ಕಣ್ಣು ಮುಚ್ಕೊಂಡು ಕೂತ್ಕೋಬೇಡಿ.

18. ಅನವಶ್ಯಕವಾಗಿ ಅವಸರ ಪಟ್ಕೋಬೇಡಿ. ಸರಿಯಾಗಿ ಯೋಚನೆ ಮಾಡಿ ನೋಡಿ, ಸರಿಯಾಗಿ ಪ್ಲಾನ್ ಮಾಡಿ ನೋಡಿ, ಆಗ ನಿಮಗೇ ಅರ್ಥ ಆಗುತ್ತೆ. ಹಾಗಂತ ಟೈಂ ವೇಸ್ಟ್ ಮಾಡಬೇಡಿ.

ಇತ್ತೀಚೆಗೆ ಪ್ರತಿಯೊಂದಕ್ಕೂ ಅವಸರ ಮಾಡ್ಕೋತಿದೀವಿ ಅನ್ನಿಸಲ್ವಾ ನಿಮಗೆ? ಇದೊಂಥರ ವಿಚಿತ್ರ. ನಿಜಕ್ಕೂ ಅಷ್ಟೆಲ್ಲ ಅವಸರ ಬೇಕಾಗೇ ಇರಲ್ಲ. ಆದರೂ ಬೇಗ್-ಬೇಗ ಆಗಬೇಕು ಅನ್ನೋ ಹುಚ್ಚು. ಯಾಕ್ ಬೇಕು? ಅದರ ಬದಲು ಸರಿಯಾಗಿ ಪ್ಲಾನ್ ಮಾಡ್ಕೊಂಡ್ರೆ ರೋಗ ಬರಲ್ಲ ರೀ.

19. ನಿಮಗೆ ಇಷ್ಟವಿಲ್ಲದಿರೋ ಕೆಲಸವನ್ನ ಜೀವನ ಇಡೀ ಮಾಡಬೇಕು ಅಂತೇನಿಲ್ಲ. ನಿಜಕ್ಕೂ ನಿಮ್ಮ ಬಾಸ್ ನೀವೇನೇ. ಕಾಲ ಕೂಡಿ ಬಂದಾಗ ಬಿಟ್ಟು ಬೇರೆ ಕೆಲಸ ಹುಡುಕ್ಕೊಳಿ.

ನಮ್ಮ ಹಿಂದಿನ ಪೀಳಿಗೆಯೋರು ಸಿಕ್ಕಿರೋ ಒಂದ್ ಕೆಲಸಕ್ಕೆ ಇಡೀ ಜೀವನ ಕೊಡ್ತಿದ್ರು. ಆದ್ರೆ ಈಗ ಹಾಗೆ ಮಾಡಬೇಕಗಿಲ್ಲ. ದಿನಾ ಕೆಲಸಕ್ಕೆ ಹೋಗಬೇಕಲ್ಲಪ್ಪ, ಆ ಕಷ್ಟ ಪಡಬೇಕಲ್ಲಪ್ಪ ಅಂತ ಹೋಗ್ತಾ ಇದ್ರೆ ನಿಮಗೆ ಬೇರೆ ದಾರಿ ಇದೆ. ನಿಮ್ಮ ಯೋಗ್ಯತೆ ಎಂಥದ್ದು, ನಿಮಗೆ ಎಂಥ ಕೆಲಸ ಬೇಕು ಅಂತ ಯೋಚನೆ ಮಾಡ್ತಾ ಇರಿ. ಸಿಕ್ಕಾಗ ಹಾರಿಕೊಳ್ಳಿ.

20. ಬೇರೆಯೋರು ಹೇಳಿದ್ದನ್ನೇ ತಲೆ ಮೇಲೆ ಕೂಡಿಸಿಕೊಂಡು ನಿಮ್ಮ ಜೀವನದ ಗುರಿ ಮಾಡ್ಕೋಬೇಕಾಗಿಲ್ಲ. ನಿಮ್ಮ ಗುರಿ ನೀವೇ ಕಂಡಿಡ್ಕೊಳಿ.

ಎಲ್ಲಾರೂ ಅವರವರಿಗೆ ಬೇಕಾದಂಥ ಗುರಿ ಇಟ್ಕೊಂಡಿರ್ತಾರೆ. ನಿಮ್ಮದು ನೀವು ಇಟ್ಕೊಳಿ. ಇಲ್ಲಾಂದ್ರೆ ನಿಮಗೆ ಜೀವನದಲ್ಲಿ ಕಷ್ಟ ಖಂಡಿತ. ಇನ್ನೊಬ್ಬರ ಬಟ್ಟೆ ಹಾಕ್ಕೊಂಡಂಗೆ ಅದು - ಎಲ್ಲೆಲ್ಲೋ ಟೈಟು, ಎಲ್ಲೆಲ್ಲೋ ಲೂಸು!

21. ನಾಳೆ ಏನಾಗುತ್ತೆ ಅಂತ ಯಾರಿಗೂ ಖಡಾಖಂಡಿತವಾಗಿ ಗೊತ್ತಿಲ್ಲ. ಒಳ್ಳೇದಾಗುತ್ತೆ ಅಂತ ಬೇಕಾದ್ರೂ ಅನ್ಕೋಬೋದು, ಕೆಟ್ಟದಾಗುತ್ತೆ ಅಂತ ಬೇಕಾದ್ರೂ ಅನ್ಕೋಬೋದು.

ನೀವೇ ಕೆಟ್ಟದು ಯೋಚನೆ ಮಾಡ್ಕೊಂಡ್ರೆ ಹೇಗೆ? ಆಗಲೇ ಹೇಳಿದ್ವಲ್ಲ, "ಅಸ್ತು ದೇವತೆಗಳು" ಅಂತ ಇರ್ತಾರೆ ಅಂತ? ನನಗೆ ಕೆಟ್ಟದಾಗುತ್ತೆ ಅನ್ಕೊಂಡ್ರೆ "ಆಸ್ತು" (ಹಂಗೇ ಆಗಲಿ)‌ ಅಂತಾರೆ ಅವರು. ನನಗೆ ಒಳ್ಳೇದಾಗುತ್ತೆ ಅನ್ಕೊಂಡ್ರೆ ಅದಕ್ಕೂ "ಅಸ್ತು" ಅಂತಾರೆ. ನಿಮಗೆ ಒಳ್ಳೇದೇ ಆಗಬೇಕು ತಾನೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: