ಈ 11 ಕಾರಣ ಕೇಳಿದ್ಮೇಲೆ ಆದಷ್ಟು ಬೇಗ ಮದುವೆ ಆಗೋದೇ ಒಳ್ಳೇದು ಅಂತ ಒಪ್ಕೋತೀರಿ

ಬೇಗ ಮಕ್ಕಳು ಮಾಡ್ಕೋಬೇಕು ಅನ್ನೋ ಒತ್ತಡ ಇರಲ್ಲ

ಈಗೀಗ ಆದಷ್ಟು ಲೇಟಾಗಿ ಮದುವೆ ಆಗೋದೇ ಒಂಥರಾ ಫ್ಯಾಶನ್ ಆಗೋಗಿದೆ. ಮೂವತ್ತು ದಾಟಿದ ಮೇಲೆ ಮಾಡ್ಕೊಂಡ್ರೆ ಆಯ್ತು ಅನ್ನೋರು ಸಕ್ಕತ್ ಜನ ಇದಾರೆ. ಇಪ್ಪತ್ತು-ಇಪ್ಪತ್ತೈದು ವರ್ಷಕ್ಕೆಲ್ಲ ಮದುವೆ ಆಗೋ ದಿನಗಳು ಹೊಟೋಗಿವೆಯಾ ಅನ್ನಿಸುತ್ತೆ ಒಂದೊಂದ್ಸಲ. ಹಾಗೇನೆ ಸಮಾಜದಲ್ಲೂ "ಇನ್ನೂ ಮದುವೆ ಆಗಿಲ್ವಾ?" ಅಂತ ಕೇಳೋರು ಕೂಡ ಕಡಿಮೆ ಆಗೋಗಿದಾರೆ. ಆದರೆ ನಿಜವಾಗಲೂ ನೋಡುದ್ರೆ ಬೇಗೆ ಮದುವೆ ಆಗೋದು ಅಂಥ ಕೆಟ್ಟ ಐಡಿಯಾ ಏನಲ್ಲ. ಪೂರ್ತಿ ಸೆಟಲ್ ಆಗೋ ಮುಂಚೆ ಮದುವೆ ಆಗಬಾರದು ಅನ್ನೋದ್ರಲ್ಲೂ ಅರ್ಥ ಇದೆ, ಆದರೆ ಬೇಗ ಮದುವೆ ಆಗೋದ್ರಲ್ಲೂ ಬಹಳ ಬಹಳ ಲಾಭಗಳಿವೆ.…

1. ಮದುವೆ ಆಗಕ್ಕೆ ಇದೇ ಸರಿಯಾದ ಸಮಯ ಅನ್ನೋದೇನೂ ಇಲ್ಲ; ಯಾವಾಗ ಬೇಕಾದರೂ ಆಗ್ಬೋದು

ಮದುವೆ ಅನ್ನೋದು ಒಂದು ಮುಖ್ಯವಾದ ನಿರ್ಧಾರ. ಯಾರ್ನ ಮಾದುವೆ ಆಗಬೇಕು ಅನ್ನೋ ನಿರ್ಧಾರ 21ನೇ ವಯಸ್ಸಿಗೆ ಎಷ್ಟು ಕಷ್ಟಾನೋ 40ನೇ ವಯಸ್ಸಲ್ಲೂ ಅಷ್ಟೇ ಕಷ್ಟ. ನಿಜಕ್ಕೂ "ಮದುವೆಗೆ ಈಗ ರೆಡಿ ಇದೀನಿ" ಅನ್ನೋ‌ ಸಮಯ ಬರೋದೇ ಇಲ್ಲ. ಆದ್ದರಿಂದ ಮದುವೆ ಮಾಡ್ಕೋಬೋದು ಅನ್ಸೋರು ಯಾರಾದ್ರೂ ಸಿಕ್ರೆ ಪೀಪಿ ಊದ್ಸಕ್ಕೆ ಕಾಯೋದರಲ್ಲಿ ಅರ್ಥಾನೇ ಇಲ್ಲ.

ಮೂಲ

2. ಬೇಗ ಮದುವೆ ಮಾಡ್ಕೊಂಡ್ರೆ ಆದಷ್ಟು ಬೇಗ ಮಕ್ಕಳು ಮಾಡ್ಕೋಬೇಕು ಅನ್ನೋದಿರಲ್ಲ; ಸ್ವಲ್ಪ ವರ್ಷ ಆರಾಮಾಗಿ ಇರ್ಬೋದು

ಮದುವೆ ಆದ ಕೆಲವು ವರ್ಷ ಆರಾಮಾಗಿರ್ಬೇಕು ಅನ್ನೋ‌ ಆಸೆ ಯಾವ ಗಂಡ-ಹೆಂಡತಿಗೆ ಇರಲ್ಲ ಹೇಳಿ? ವಯಸ್ಸು ಜಾಸ್ತಿ ಆಗೋಗಿದ್ರೆ ಮದುವೆ ಆಗ್ತಿದ್ದಂಗೇ ಮಗು ಮಾಡ್ಕೋಬೇಕು ಅನ್ನೋ ಒತ್ತಡ ಇರುತ್ತೆ. ಯಾಕಂದ್ರೆ ಹೆಣ್ಣಿನ ದೇಹದಲ್ಲಿ ಆಗೋ ವ್ಯತ್ಯಾಸಗಳಿಂದ ಅವಳು ಆದಷ್ಟು ಬೇಗ ತಾಯಿ ಆಗೋದು ಒಳ್ಳೇದು. ಹಾಗೇ ಮಕ್ಕಳು ಇನ್ನೂ ಆಗದೆ ಇದ್ದಾಗ ಅಲ್ಲಿ ಇಲ್ಲಿ ಸುತ್ತಾಡ್ಕೊಂಡು ಮಜ ಮಾಡ್ಕೊಂಡ್ ಇರಬಹುದು. ತಡ ಮಾಡ್ಕೊಂಡ್ರೆ ಇವೆಲ್ಲ ಕಟ್.

ಮೂಲ

3. ಇಪ್ಪತ್ತು-ಚಿಲ್ಲರೆ ವಯಸ್ಸಾಗಿದ್ದಾಗ ಜೀವನ ಸಂಗಾತಿ ಜೊತೆಗಿದ್ದರೆ ಅದರ ಮಜಾನೇ ಬೇರೆ

ಈ ವಯಸ್ಸು ಜೀವನದಲ್ಲಿ ಮಜಾ ಮಾಡೋ ವಯಸ್ಸು. ಒಂದ್ಸಲ ಹೋದ ಮೇಲೆ ಮತ್ತೆ ವಾಪಸ್ ಬರಲ್ಲ. ಈ ವಯಸ್ಸಲ್ಲಿ ಜೀವನಸಂಗಾತಿ ಜೊತೆಗಿದ್ದರೆ ಅದು ಇಡೀ ಜೀವನದ ಮೇಲೆ ಒಂದು ಒಳ್ಳೇ ಪ್ರಭಾವ ಬೀರುತ್ತೆ. ಚೆನ್ನಾಗಿ ಫ್ರೆಂಡ್ಸ್ ಆಗ್ತೀರಿ, ಒಟ್ಟಗೆ ಜೀವನದ ಸವಾಲುಗಳ್ನ ಎದುರಿಸ್ತೀರಿ… ಮೊದಲ ಸಲ ಫಾರಿನ್ಗೆ ಹೋದಾಗ, ನಿಮ್ಮ ಡ್ರೀಂ ಜಾಬ್ ಸಿಕ್ಕಾಗ, ಮೊದಲ ಸಲ ಬೈಕ್ ಅಥವಾ ಕಾರ್ ತೊಗೊಂಡಾಗ… ಜೊತೆಗೆ ನಿಮ್ಮ ಜೀವನಸಂಗಾತಿ ಇದ್ದರೆ ಅದರ ಮಜಾನೇ ಬೇರೆ!

ಮೂಲ

4. ಬೇಗ ಮದುವೆ ಆದ್ರೆ ಹನಿಮೂನ್ ತುಂಬಾ ಎಂಜಾಯ್ ಮಾಡ್ಬೋದು

ಹನಿಮೂನ್ ಅಂದ್ರೆ ಒಂದು ಹೋಟೆಲ್ ರೂಮಲ್ಲಿ ಬಾಗಿಲು ಹಾಕೊಂಡು ನಾಲ್ಕು ದಿನ ಕಳೆಯೋದಲ್ಲ. ಬೇಗ ಮದುವೆ ಆಗಿದ್ರೆ ಪಾರ್ಟಿಗಳಿಗೆ ಹೋಗಬಹುದು, ಟ್ರೆಕ್ಕಿಂಗ್ಗ್ ಹೋಗ್ಬೋದು… ಈಜಕ್ಕೆ ಹೋಗಬಹುದು… ದೇಶದೇಶ ಸುತ್ತಬಹುದು…. ಅದ್ಭುತವಾಗಿ ಹನಿಮೂನ್ ಮಾಡಬಹುದು. ಅದೇ ವಯಸ್ಸಾಗಿದ್ದರೆ ಇವೆಲ್ಲ ಮಾಡೋಕೆ ಮನಸ್ಸೂ ಇರಲ್ಲ, ದೇಹಾನೂ ಕೈ ಕೊಡುತ್ತೆ.

ಮೂಲ

5. ಬೇಗ ಮಕ್ಕಳಾದರೆ ನೀವು ಮಕ್ಕಳ ಜೊತೆ ತುಂಬಾ ಎಂಜಾಯ್ ಮಾಡಬಹುದು

ವಯಸ್ಸಾಗ್ತಾ ಆಗ್ತಾ ಮಕ್ಕಳನ್ನ ಎತ್ಕೊಳೋದೂ ಕಷ್ಟ. ಮಕ್ಕಳು ಏನ್ ಹೇಳುದ್ರೂ ಆಗಲ್ಲ ಅನ್ನಬೇಕಾಗತ್ತೆ. ಕೂಸುಮರಿ ಮಾಡಪ್ಪಾ ಅಂದ್ರೆ ಆಗಲ್ಲ ಅನ್ನಬೇಕಾಗುತ್ತೆ. ಜಯಂಟ್ ವೀಲಲ್ಲಿ ಕೂತ್ಕೊಳಪ್ಪಾ ಅಂದ್ರೆ ಆಗಲ್ಲ ಅಂತೀರಿ. ಕ್ರಿಕೆಟ್ ಆಡಕ್ಕೆ ಬಾರಮ್ಮಾ ಅಂದ್ರೆ ಇಲ್ಲ ಅನ್ನಬೇಕಗುತ್ತೆ. ಒಟ್ನಲ್ಲಿ ಮಕ್ಕಳಾಗೋದು ಲೇಟಾದ್ರೆ ಮಕ್ಕಳಿಗೆ ನೀವು ಪ್ರತಿಯೊಂದಕ್ಕೂ "ಇಲ್ಲ" ಅನ್ನಬೇಕಾಗುತ್ತೆ. ನಿಮ್ಮ ಪ್ರೀತಿ ಕಡಿಮೆ ಅಂತಲ್ಲ, ಆದರೆ ನಿಮ್ಮ ದೇಹಸ್ಥಿತಿ, ನಿಮ್ಮ ಮನಸ್ಥಿತಿ ಆ ಪ್ರೀತಿಗೆ ಅನುಗುಣವಾಗಿ ಇರಲ್ಲ!

ಮೂಲ

6. ಲೇಟಾಗಿ ಮದುವೆ ಆದರೆ ಮಕ್ಕಳು ಇನ್ನೂ ಚಿಕ್ಕೋರಿದ್ದಾಗ್ಲೇ ರಿಟೈರ್ ಆಗಿ ದುಡ್ಡಿನ ಸಮಸ್ಯೆಗಳು ಜಾಸ್ತಿ

ಕೆಲಸ ಮಾಡ್ಕೊಂಡು ಮನೆ ನೋಡ್ಕೊಂಡು ಎಲ್ಲಾ ನಿಭಾಯಿಸಿಕೊಂಡು ಹೋಗೋದು ಸುಲಭದ ಕೆಲಸ ಅಲ್ಲ. ರಿಟೈರ್ ಆದ್ಮೇಲೂ ಮಕ್ಕಳನ್ನ ಬೆಳೆಸೋ ಕೆಲಸ ಸಾಕಷ್ಟು ಬಾಕಿ ಇದ್ದರೆ ಅದೊಂಥರಾ ಕಷ್ಟ. ಇಡೀ ಜೀವನ ಮಕ್ಕಳನ್ನ ನೋಡ್ಕೊಳೋದ್ರಲ್ಲೇ ಕಳ್ದಂಗಾಗುತ್ತೆ. ಸರಿಯಾಗಿ ನೋಡುದ್ರೆ ನೀವು ರಿಟೈರ್ ಆಗೋ ಹೊತ್ತಿಗೆ ನಿಮ್ಮ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತ್ಕೊಂಡಿರಬೇಕು. ನೀವು ಮೂವತ್ತು ದಾಟಿದ ಮೇಲೆ ಮದುವೆ ಆಗ್ತೀನಿ ಅಂದ್ರೆ ಕಷ್ಟ ಇದೆ.

ಮೂಲ

7. ಬೇಗ ಮದುವೆ ಆದ್ರೆ ಗಂಡ-ಹೆಂಡ್ತಿ ಜಾಸ್ತಿ ಹೊಂದ್ಕೊಂಡ್ ಇರ್ತೀರಿ

ವಯಸ್ಸಾಗ್ತಾ ಆಗ್ತಾ ಬೇರೆಯೋರ ಜೊತೆ ಹೊಂದ್ಕೊಂದ್ ಹೋಗೋದು ಕಷ್ಟ. ಮದುವೆಗಳು ಮುರಿದು ಬೀಳೋ ಸಾಧ್ಯತೆ ಜಾಸ್ತಿ. ಯಾಕಂದ್ರೆ ವಯಸ್ಸಾಗ್ತಾ ಆಗ್ತಾ ನಾನು ಅಂದ್ರೆ ಹಿಂಗೆ, ನನ್ನ ವ್ಯಕ್ತಿತ್ವ ಅಂದ್ರೆ ಇದು ಅನ್ನೋ ಅನಿಸಿಕೆಗಳು ಜಾಸ್ತಿ ಮೂಡಿಬಿಡ್ತವೆ. ಅದನ್ನ ಬದಲಾಯಿಸಿಕೊಳ್ಳೋದು ಕಷ್ಟ. ಆದರೆ ಬದಲಾಯಿಸಿಕೊಳ್ಳಲೇ ಬೇಕಲ್ಲ ಮದುವೆ ಆದಮೇಲೆ?!

ಮೂಲ

8. ಮದುವೆ ಮಾಡ್ಕೊಂಡಾಗ ಮನುಷ್ಯ ಬೆಳೀತಾನೆ; ಅದು ನಿಮ್ಮ ಕೆರಿಯರ್ ಮೇಲೂ ಒಳ್ಳೇ ಪ್ರಭಾವ ಬೀರುತ್ತೆ

ಆಗಲೇ‌ ಹೇಳಿದ್ವಲ್ಲ, ಮದುವೆ ಅನ್ನೋದು ಅಂತಿಂಥ ತಿರುವಲ್ಲ ಜೀವನದಲ್ಲಿ. ಬೇಗ ಮದುವೆ ಆದರೆ ಬೇಗ ಜವಾಬ್ದಾರಿಯಿಂದ ಜೀವನ ಮಾಡೋದು ಕಲಿತುಕೊಳ್ತೀರಿ. ಇದರಿಂದ ನಿಮ್ಮ ಕೆಲಸದಲ್ಲೂ ಪ್ರಭಾವ ಕಾಣಿಸುತ್ತೆ. ನೀವು ಮಾಡೋ ಕೆಲಸಕ್ಕೆ ಮೊಟ್ಟಮೊದಲಾಗಿ ಒಂದು ಗೊತ್ತು-ಗುರಿ ಅಂತ ಸಿಗುತ್ತೆ. ಒಂದ್ ಕಡೆ ಅಪ್ಪಾಪೋಲಿ ತರಹ ತಿರುಗಿಕೊಂಡು ಇರೋದೂ ಕಡಿಮೆ ಆಗುತ್ತೆ, ಇನ್ನೊಂದ್ ಕಡೆ ಬರೀ‌ ಕೆಲಸ ಕೆಲಸ ಕೆಲಸ ಅಂತ ದುಡಿದು ಸುಸ್ತಾಗೋದೂ ನಿಲ್ಲುತ್ತೆ… ಯಾಕಂದ್ರೆ ಮನೆಯಲ್ಲಿ ಗಂಡ/ಹೆಂಡ್ತಿ, ಮಕ್ಕಳು… ಎಲ್ಲಾ ಇರ್ತಾರಲ್ಲ, ಅವರನ್ನ ನೋಡ್ಕೋಬೇಕಲ್ಲ?

ಮೂಲ

9. ಬೇಗ ಮದುವೆ ಆಗೋದ್ರಿಂದ ತಂದೆತಾಯಿ ನೆಂಟರಿಷ್ಟರಿಂದೆಲ್ಲ ಅಷ್ಟು ದೂರ ಹೋಗಲ್ಲ, ಇನ್ನಷ್ಟು ಹತ್ತಿರ ಆಗ್ತೀರಿ

ಇಪ್ಪತ್ತು ದಾಟಿದ್ರಿ ಅಂದ್ರೆ ಯಾಕೋ ಏನೋ‌ ಮನೆಯೋರಿಂದೆಲ್ಲ ತುಂಬ ದೂರ ಆಗ್ತೀರಿ. ಆ ಚಿಕ್ಕಮ್ಮ, ಆ ಆತ್ತೆ, ಆ ದೊಡ್ಡಪ್ಪ… ಯಾರೂ ಬೇಡ ಅನ್ನಿಸುತ್ತೆ. ಎಷ್ಟೋ ಜನ ತಂದೆ-ತಾಯೀನೂ ಬಿಟ್ಟು ದೂರ ಇರಕ್ಕೆ ಇಷ್ಟ ಪಡ್ತಾರೆ. ಆದ್ರೆ ಮದುವೆ ಆಂತ ಆದ್ರೆ ಆ ಫಂಕ್ಷನ್ನು ಈ ಮದುವೆ ಆ ಮುಂಜಿ ಅದು ಇದು ಅಂತ ಹೋಗ್ತಾನೇ ಇರ್ತೀರಿ, ನೆಂಟರಿಷ್ಟರನ್ನ ನೋಡ್ತಾನೇ ಇರ್ತೀರಿ. ಇದರಿಂದೆಲ್ಲ ನಿಮ್ಮ ಸುತ್ತ ಜನ ಇರ್ತಾರೆ, ನೀವೂ ಸುಖವಾಗಿ ಇರ್ತೀರಿ. ಲೇಟಾಗಿ ಮದುವೆ ಆದ್ರೆ ಅಷ್ಟರೊಳಗೆ ನೆಂಟರಿಷ್ಟರೆಲ್ಲ ಬೇಡ ಅನ್ನಿಸಿಬಿಡೋ ಸಾಧ್ಯತೆ ಹೆಚ್ಚು.

ಮೂಲ

10. ಬೇಗ ಮಕ್ಕಳಾದರೆ ನಿಮ್ಮ ಮಕ್ಕಳು ನಿಮಗೆ ಫ್ರೆಂಡ್ಸ್ ತರಹ ಇರ್ತಾರೆ

ಮಕ್ಕಳನ್ನ ಇನ್ನಷ್ಟು ಚೆನ್ನಾಗಿ ಅರ್ಥ ಮಾಡ್ಕೋತೀರಿ… ಯಾಕಂದ್ರೆ ನಿಮ್ಮಲ್ಲೂ ಆ ಯೌವನ ಇನ್ನೂ‌ ಇರುತ್ತೆ. ಲೇಟಾಗಿ ಮದುವೆ ಆದರೆ ಮಕ್ಕಳಿಗೂ ನಿಮಗೂ ಒಂಥರಾ ದೂರ ಉಳಿದುಬಿಡುತ್ತೆ. ಅವರ ಮನಸ್ಸು ಅರ್ಥ ಮಾಡ್ಕೊಳೋದೆ ನಿಮಗೆ ಕಷ್ಟ ಆಗೋಗುತ್ತೆ. ಒಟ್ನಲ್ಲಿ ಮಕ್ಕಳು ಬಯಸುವಂಥ ಒಳ್ಳೇ ಅಪ್ಪಾಮ್ಮ ಆಗೋದು ಕಷ್ಟ.

ಮೂಲ

11. ಏನಾದರೂ ಅನಾಹುತಗಳಾಗಿ ಡೈವೋರ್ಸ್ ಆದರೆ ಇನ್ನೊಂದ್ ಮದುವೆಗೆ ಲೇಟ್ ಅನ್ನಿಸಲ್ಲ

ಇದನ್ನೂ ಹೇಳಲೇಬೇಕು ನೋಡಿ. ಈಗಿನ ಕಾಲದಲ್ಲಿ ಒಂದಲ್ಲ ಒಂದು ಕಾರಣದಿಂದ ಡೈವೋರ್ಸ್ಗಳು ಆಗೋದು ಜಾಸ್ತಿ ಆಗ್ತಿದೆ. ಅದು ಇದು ಸುಳ್ಳು ಹೇಳಿ ಮದುವೆ ಮಾಡೋರು ಇರ್ತಾರೆ. ಹೀಗೆಲ್ಲ ಏನಾದರೂ ಆದರೆ ಅಂಥ ಮದುವೆಯಿಂದ ಹೊರಬಂದು ಇನ್ನೊಂದು ಮದುವೆ ಮಾಡ್ಕೊಳಕ್ಕೆ ಮುಜುಗರ ಅನ್ನಿಸಲ್ಲ, ಯಾಕಂದ್ರೆ ಇನ್ನೂ ವಯಸ್ಸಿರುತ್ತೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಬಟಾಣಿ ಇಷ್ಟಪಡೋರೆಲ್ಲಾ ಈ 14 ಲಾಭ ತಿಳ್ಕೊಂಡ್ರೆ ಮನೇಲೆ ಬೆಳ್ಕೊಳಕ್ಕೆ ಶುರು ಮಾಡ್ತೀರ

ವಾಯು ಅಂತ ಸ್ವಲ್ಪ ಜನ ಮುಖ ಮುರೀತಾರೆ

ಬಟಾಣಿ ತಿಂದ್ರೆ ವಾಯು ಬರತ್ತೆ ಅನ್ನೋರೆಲ್ಲಾ ಇಲ್ಕೇಳಿ. ಬಟಾಣಿ ಗಿಡ ನಮ್ ದೇಶದಲ್ಲಿ ಹುಟ್ಟಿದಲ್ಲ. ಇದು ವಿಚಿತ್ರವಾಗಿರೋ ಗಿಡಗಳ ಸಾಲ್ನಲ್ಲಿ ಸೇರತ್ತೆ. ಆದ್ರೂ ಕೂಡಾ ಇದ್ರ ಉಪಯೋಗ ಇದ್ಯಲ್ಲಾ ಅದು ಒಂದೆರಡಲ್ಲ. ಇದ್ರಲ್ಲಿರೋ ಪಿಷ್ಟ ಇದ್ನ ಸಿಹಿಯಾಗಿರೋವಾಗೆ ಮಾಡ್ಸತ್ತೆ. ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರನ್ನ ಗುಣಪಡ್ಸತ್ತೆ. ಅಷ್ಟಲ್ಲದೇ ಉರಿಯೂತಕ್ಕೆ ಸಂಬಂಧಿಸಿದ ಯಾವ್ದೇ ತರದ ತೊಂದ್ರೆ ಇದ್ರೆ ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಕಮ್ಮಿ ಮಾಡ್ಸತ್ತೆ. ಪ್ರೋಟೀನ್ ಮತ್ತೆ ನಾರಿನ ಅಂಶ ಸಕ್ಕತ್ತಾಗಿ ಇರೋದ್ರಿಂದ ಮಧುಮೇಹ ಕಾಯಿಲೆಯನ್ನ ಕಮ್ಮಿ ಮಾಡ್ಸತ್ತೆ.

ಸ್ವಲ್ಪಾನೇ ಕೊಬ್ಬಿರೋದ್ರಿಂದ ಅಷ್ಟೇನ್ ತೊಂದ್ರೆ ಅಗಲ್ಲ. ಬೀಟಾ ಕೆರೋಟಿನ್ , ವಿಟಮಿನ್ ಇ ಸಹಿತ ಇದ್ರಲ್ಲಿದೆ. ಇಷ್ಟೆಲ್ಲಾ ಇರೋ ಬಟಾಣಿಯನ್ನ ನಾವಂತೂ ಮಸಾಲ್ ಪುರಿಯಲ್ಲಿ ಹಾಕಪ್ಪಾ ಇನ್ನೂ ಹಾಕಪ್ಪಾ ಅಂತ ಚಪ್ಪರಿಸ್ಕೊಂಡ್ ತಿಂದೇ ಇದ್ದೀವಿ ಬಿಡಿ. ಇದೇ ತರ ಇನ್ನೂ ಯಾವ್ದಲ್ಲ ಉಪಯೋಗಗಳಿದೆ ಅನ್ನೋದ್ನ ನೋಡ್ತಾ ಹೋಗೋಣ ಬನ್ನಿ. 

1. ಇದ್ರಲ್ಲಿರೋ ಪೌಷ್ಟಿಕಾಂಶಗಳು ಮಂಡಿ ನೋವು ಕಮ್ಮಿಮಾಡತ್ತೆ

ಬಟಾಣಿಗಳಲ್ಲಿ ಬೇರೆ ಬೇರೆ ತರದ ಬಟಾಣಿಗಳಿವೆ. ಫ್ಲಾವನೊಯ್ಡ್ ಗುಂಪಿನ ಬಟಾಣಿಗಳಲ್ಲಿ ಕ್ಯಟಾಚಿನ್ ಮತ್ತೆ ಎಪಿಕ್ಯಟಾಚಿನ್ ಅನ್ನೋ ಆಂಟಿ ಆಕ್ಸಿಡೆಂಟ್ ಇದೆಯಂತೆ. ಹಾಗೇ ಕೆರೋಟಿನಾಯ್ಡ್ ಗುಂಪಿನ ಬಟಾಣಿಗಳಲ್ಲಿ ಆಲ್ಫಾ ಕೆರೋಟಿನಾಯ್ಡ್ ಮತ್ತೆ ಬೀಟಾ ಕೆರೋಟಿನಾಯ್ಡ್ ಆಂಟಿ ಆಕ್ಸಿಡೆಂಟ್ ಇದ್ರೆ ಫಿನಾಲಿಕ್ ಗುಂಪಲ್ಲಿ ಫೆರುಲಿಕ್ ಮತ್ತೆ ಕೆಫಿಕ್ ಇದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮಿನ್ರಲ್, ಜಿಂಕ್, ಒಮೆಗಾ 3 ಫ್ಯಾಟಿ ಆಸಿಡ್, ಇದೆಲ್ಲದ್ರ ಭಂಡಾರಾನೇ ಬಟಾಣಿಗಳಲ್ಲಿ ಅಡ್ಗಿದೆಯಂತೆ. ಇದೆಲ್ಲದ್ರ ಸಹಾಯದಿಂದ ಮಧುಮೇಹ , ಹೃದಯದ ತೊಂದ್ರೆ , ಮಂಡಿ ನೋವ್ಗಳನ್ನ ಕಮ್ಮಿ ಮಾಡ್ತದಂತೆ. 

2. ರಕ್ತದಲ್ಲಿರೋ ಸಕ್ಕರೆ ಪ್ರಮಾಣ ಕಮ್ಮಿ ಮಾಡತ್ತೆ

ರಕ್ತದಲ್ಲಿರೋ ಸಕ್ಕರೆ ಪ್ರಮಾಣವನ್ನ ಕಮ್ಮಿ ಮಾಡ್ಸಕ್ಕೆ ಬಟಾಣಿ ಒಂದೊಳ್ಳೆ ಆಹಾರ ಅಂತ ಕೆಲ್ವು ಆಹಾರ ತಜ್ಞರು ಹೇಳಿದ್ದನ್ನ ಕೇಳಿದ್ ನೆನಪಿದೆ. ಆದ್ರೆ ಹೇಗ್ ಕಮ್ಮಿ ಮಾಡ್ಸತ್ತೆ ಅಂತ ಗೊತ್ತಿರ್ಲಿಲ್ಲ. ಇವಾಗ ಗೊತ್ತಾಗಿದ್ ಹೊಸ್ ವಿಷ್ಯ ಎನಂದ್ರೆ ಇದ್ರಲ್ಲಿರೋ ಪ್ರೋಟೀನ್ ಮತ್ತೆ ನಾರಿನ ಅಂಶ ಪಿಷ್ಟವನ್ನ ತುಂಡ್ಮಾಡಿ ಕಾರ್ಬೋಹೈಡ್ರೇಟ್ಸಗಳನ್ನ ಜೀರ್ಣಾಂಗವ್ಯೂಹದ ಕಡೆಗೆ ತಳ್ಳತ್ತೆ. ಈ ಕಾರ್ಬೋಹೈಡ್ರೇಟ್ಸಗಳು ರಕ್ತದಲ್ಲಿರೋ ಸಕ್ಕರೆಯ ಪ್ರಮಾಣಾನ ಕಡ್ಮೆ ಮಾಡ್ಸತ್ತೆ. 

ಮೂಲ

3. ಇದ್ರಲ್ಲಿರೋ ವಿಟಮಿನ್ ಬಿ ಅಂಶ ಹೃದಯ ಚನ್ನಾಗಿ ಕೆಲಸ ಮಾಡೋ ಹಾಗೆ ನೋಡ್ಕೊಳತ್ತೆ

ಹಾಳು ಮೂಳನ್ನೆಲ್ಲಾ ತಿಂದು ಹೊಟ್ಟೆ ಬರ್ಸಕೊಂಡು ಆಮೇಲೆ ನಿಧಾನವಾಗಿ ಬೇಡ್ದೇ ಇರೋ ಕೊಬ್ಬನ್ನ ಹೆಚ್ಸಿಕೊಂಡ್ರೆ ಹೃದಯದ ಕಾಯ್ಲೆ ಸಾಮಾನ್ಯ. ಬಟಾಣಿಯಲ್ಲಿರೋ ನಿಯಾಸಿನ್ ಅನ್ನೋ ಅಂಶ ಈ ಕೆಟ್ಟ್ ಕೊಬ್ಬನ್ನ ಕರ್ಗಸತ್ತೆ. ಇದ್ರ ಜೊತೆಗೆ ನಾನು ಸಾಥ್ ಕೊಡ್ತೀನಿ ಅಂತ ಒಮೆಗಾ 3 ಫ್ಯಾಟಿ ಆಸಿಡ್ ಬೇರೆ ಇದೆ. ಕೆಟ್ಟ್ ಕೊಬ್ಬಿನ ಜೊತೆ ಹೋಮೋ ಸಿಸ್ಟಿನ್ ಅನ್ನೋದ್ಬೇರೆ ಕೂಡ್ಕಂಡು ತುಂಬಾನೇ ತೊಂದ್ರೆ ಕೊಡತ್ತೆ. ಇದು ಸಹಜವಾಗೇ ಹುಟ್ಕೊಳ್ಳೋ ಅಮೈನೋ ಆಸಿಡ್. ರಕ್ತದಲ್ಲಿ ಇದ್ರ ಪ್ರಮಾಣ ಜಾಸ್ತಿಯಾದ್ರೆ ಹೃದಯ ಸಂಬಂಧಿ ಕಾಯಿಲೆ ಶುರುವಾಗತ್ತೆ. ಇದ್ನ ಕಮ್ಮಿ ಮಾಡ್ಬೇಕಂದ್ರೆ ವಿಟಮಿನ್ ಬಿ  ಜಾಸ್ತಿ ಪ್ರಮಾಣದಲ್ಲಿ ತಗೊಳ್ಬೇಕು. ಬಟಾಣಿಯಲ್ಲಿ ವಿಟಮಿನ್ ಬಿ1 ಬಿ2 ಬಿ3 ಬಿ6 ಇದೆಲ್ಲ ಇದೆ. ಇನ್ಯಾಕ್ ತಡ ಒಂದಿಷ್ಟ್ ಬಾಯ್ಗ್ ಹಾಕ್ಕೊಳ್ಳಿ. 

4. ಆಂಟಿ ಆಕ್ಸಿಡೆಂಟ್ಸ್ ಸಹಾಯದಿಂದ ಹೊಟ್ಟೆ ಕ್ಯಾನ್ಸರ್ ಬರೋದನ್ನ ತಡೆಗಟ್ಟತ್ತೆ

 ಒತ್ತಡ ಮತ್ತು ತಲೆಬಿಸಿ ಜಾಸ್ತಿ ಮಾಡ್ಕೊಳೋದ್ರಿಂದ ಕ್ಯಾನ್ಸರ್ ಬೆಳೀಬೋದು. ನಿಮ್ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಕಮ್ಮಿ ಇದ್ರೆ ಈ ಸಮಸ್ಯೆನಾ ಪರಿಹರ್ಸಕ್ಕೆ ಆಗಲ್ಲ. ಆಗ್ಲೇ ಹೇಳ್ದಾಗೆ ಬಟಾಣಿ ಆಂಟಿ ಆಕ್ಸಿಡೆಂಟ್ಗಳ ಭಂಡಾರಾವೇ ಆಗಿರೋದ್ರಿಂದ ಹೊಟ್ಟೆ ಕ್ಯಾನ್ಸರ್ ಇಂದ ನಮ್ಮನ್ನ ಕಾಪಾಡತ್ತೆ.

ಮೂಲ

5. ಬಟಾಣೀಲಿ ಕ್ಯಾಲೋರಿ ಕಮ್ಮಿ ಇರೋದ್ರಿಂದ ತೂಕ ಇಳಿಸ್ಕೊಳಕ್ಕೆ ಸಹಾಯ ಮಾಡತ್ತೆ

ಒಳ್ಳೆ ಪೋಷಕಾಂಶ ಮತ್ತೆ ಕಮ್ಮಿ ಕ್ಯಾಲೋರಿಯನ್ನ ಹೊಂದಿರೋ ಬಟಾಣಿ ನಿಮ್ ತೂಕ ಇಳ್ಸೋದ್ರಲ್ಲಿ ಅನುಮಾನಾನೇ ಇಲ್ಲ. ಒಂದು ಕಪ್ ಬಟಾಣಿಯಲ್ಲಿ ಸುಮಾರು 118 ಕ್ಯಾಲೋರಿಗಳು ಮಾತ್ರ ಇರತ್ತೆ. ಹಾಗೇ ನೀವ್ ಬಟಾಣಿ ತಿಂದಾದ್ಮೇಲೆ ಇನ್ನೇನ್ ತಿನ್ನೋಕೂ ಮನ್ಸ್ ಬರಲ್ಲ. ಯಾಕಂದ್ರೆ ನಿಮ್ ಹೊಟ್ಟೆ ಅದಾಗ್ಲೇ ತುಂಬಿರತ್ತೆ. ಅದಲ್ದೇ ಹೆಚ್ಚಿನ ಪ್ರಮಾಣದಲ್ಲಿರೋ ನಾರಿನಂಶ ನಮ್ಮನ್ನ ಹಾಳು ಮೂಳು ತಿನ್ನೋಕೆ ಅವಕಾಶ ಮಾಡ್ಕೊಡಲ್ಲ. ಬರೇ ಇದೆ ತಿಂದ್ರೆ ಸಾಕಾಗತ್ತ ಅನ್ನೋರ್ಗೆ ನಮ್ ಉತ್ತರ ಹೌದು. ಯಾಕಂದ್ರೆ ಬೇಯ್ಸಿದ ಬಟಾಣಿಗೆ ಸ್ವಲ್ಪ ಮಟ್ಟಿಗೆ ಉಪ್ಪನ್ನ ಹಾಕ್ಬಿಟ್ಟು ತಿಂದ್ರೆ ಸಕ್ಕತ್ತಾಗ್ ಶಕ್ತಿನೂ ಸಿಗತ್ತೆ. 

6. ಇದ್ರಲ್ಲಿರೋ ನಾರಿನಂಶ ಹೊಟ್ಟೆ ಕಟ್ಕೊಳ್ದೆ ಇರೋ ಹಾಗೆ ನೋಡ್ಕೊಳತ್ತೆ

ಮಲಬದ್ದತೆ ಇದ್ಯಲ್ಲಾ... ಅದು ಎಲ್ಲಾ ಕಾಯ್ಲೆಗೂ ಇಲ್ ಜಾಗ ಇದೆ ಬಾರಪ್ಪಾ ಅನ್ನತ್ತೆ. ಬಟಾಣಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರೋದ್ರಿಂದ ಎಷ್ಟೋ ದಿನ್ಗಳಿಂದ ಕೂಡ್ಕಂಡಿರೋ  ತ್ಯಾಜ್ಯಗಳನ್ನ ಹೊರ್ಗಹಾಕ್ಲಿಕ್ಕೆ ಸಹಾಯ ಮಾಡತ್ತೆ. ಹಾಗೇ ಬಟಾಣಿ ಜೀರ್ಣಾಂಗ ವ್ಯವಸ್ಥೆಗೆ ತುಂಬಾನೇ ಸಾಥ್ ಕೊಡೋದೂ ಇದಕ್ಕೆ ಕಾರಣ ಇರ್ಬೋದು.

ಮೂಲ

7. ಇದ್ರಲ್ಲಿರೋ ವಿಟಮಿನ್ ಕೆ ಮೂಳೆಗೆ ಕ್ಯಾಲ್ಸಿಯಂ ಸರ್ಯಾಗ್ ಸಪ್ಲೈ ಮಾಡತ್ತೆ

ನಮ್ ಮೂಳೆ ಶಕ್ತಿಯುತವಾಗ್ಲಿಕ್ಕೆ ಕ್ಯಾಲ್ಸಿಯಂ ಬೇಕೇ ಬೇಕು. ನಾವೇನ್ ಕ್ಯಾಲ್ಸಿಯಂ ತಿಂದ್ರೂ ನಮ್ ದೇಹ ಅದ್ನ ಸರ್ಯಾಗ್ ತಗೊಳ್ಬೇಕು ತಾನೇ? ಅದ್ನ ಸರ್ಯಾಗ್ ದೇಹಕ್ಕೆ ಕಳ್ಸೋ ಜವಬ್ದಾರಿ ವಿಟಮಿನ್ ಕೆ ದು. ಒಂದ್ ತಟ್ಟೇ ಬೇಯ್ಸಿದ ಬಟಾಣಿಯಲ್ಲಿ ನಮ್ ದೇಹಕ್ಕೆ ಬೇಕಾಗೋ 50 ಪ್ರತಿಶತ ವಿಟಮಿನ್ ಕೆ ಸಿಗತ್ತಂತೆ. ಆಸ್ಟಿಯೋ ಪೊರೋಸಿಸ್ ಅನ್ನೋ ಕಾಯಿಲೆಗೆ ಪೋಲಿಕ್ ಆಮ್ಲ , ವಿಟಮಿನ್ ಬಿ 1 ಬೇಕೇ ಬೇಕು. ಅದು ಬಟಾಣಿಯಲ್ಲೇ ಜಾಸ್ತಿ ಇರೋದ್ರಿಂದ ಇನ್ನೇನ್ ಯೋಚ್ನೆ ಮಾಡ್ತಾ ಕೂತಿದ್ದೀರಾ ? ಹೋಗ್ಬಿಟ್ಟು ಬೇಯ್ಸಿ ತಿನ್ನಿ...

8. ಚರ್ಮ ಹೊಳಿಯೋ ಹಾಗೆ ಮಾಡಿ ಚಿಕ್ಕೋರ ತರ ಕಾಣೋಹಾಗೆ ಮಾಡತ್ತೆ

ನಮ್ ದೇಹದಲ್ಲಿ ಫ್ರೀ ರಾಡಿಕಲ್ ಅನ್ನೋ ಅಂಶ ಇಲ್ದೇ ಹೋಗಿದ್ರೆ ಬಿಸ್ಲು , ಚಳಿ , ಮಳೆಯಂತ ನಮ್ ಚರ್ಮ ಬೇಗನೇ ಸುಕ್ಕು ಗಟ್ತಿತ್ತು. ಬಟಾಣಿಯಲ್ಲಿರೋ ಆಂಟಿ ಆಕ್ಸಿಡೆಂಟ್ ಈ ಫ್ರೀ ರಾಡಿಕಲ್ಗಳ ಆಯಸ್ಸು ಮತ್ತು ಅದ್ರ ಶಕ್ತಿಯನ್ನ ಜಾಸ್ತಿ ಮಾಡ್ಸತ್ತೆ. ಇವು ನಮ್ ದೇಹದಲ್ಲಿರೋ ವಿಷಕಾರಿ ವಸ್ತುಗಳನ್ನ ಹೊಡ್ದೋಡ್ಸಿ ಸುಂದರವಾಗಿರೋ ಹಾಗೇ ನೋಡ್ಕೊಳ್ಳತ್ತೆ. ಹಾಗೇ ಇದ್ರಲ್ಲಿ ವಿಟಮಿನ್ ಸಿ ಪ್ರಮಾಣ ಜಾಸ್ತಿನೇ ಇರೋದ್ರಿಂದ ಚರ್ಮ ಹೊಳೆಯೋದ್ರಲ್ಲಿ ಎರ್ಡ್ ಮಾತಿಲ್ಲ.  

ಮೂಲ

9. ಕಣ್ಣಿನ ದೃಷ್ಟಿ ಚುರುಕು ಮಾಡತ್ತೆ

ಬಟಾಣಿಯಲ್ಲಿ ವಿಟಮಿನ್ ಎ ಇದೆಯಂತ ಆಗ್ಲೇ ಹೇಳಿದ್ವಿ ಅಲ್ವಾ? ಅದೇ ತರ ಲ್ಯುಟೀನ್ ಅನ್ನೋ ಆಂಟಿ ಆಕ್ಸಿಡೆಂಟ್ ಕೂಡಾ ಇದೆ. ಈ ಲ್ಯುಟೀನ್ ಅನ್ನೋದು ಕಣ್ಣಿಗೆ ಬರೋ ಕ್ಯಾನ್ಸರನ್ನ ತಡೆಯೋ ಏಜೆಂಟ್. ಅದೇ ತರ ಅಕ್ಷಿಪಟಲದ ಕಾರ್ಯಕ್ಕೆ ಎನಾದ್ರೂ ತೊಂದ್ರೆಯಾಗ್ದೇ ಇರೋ ಹಾಗೇ ನೋಡ್ಕೊಳ್ಳೋ ಕೆಲ್ಸ ಕೂಡ ಲ್ಯುಟೀನ್ ಮಾಡತ್ತೆ. ಒಂದೇ ಮಾತಲ್ಲಿ ಹೇಳ್ಬೇಕಂದ್ರೆ ಬಟಾಣಿ ಕಣ್ಣಿಗೂ ಒಳ್ಳೆಯದು. 

10. ಇದ್ರಲ್ಲಿರೋ ಫೋಲಿಕ್ ಆಸಿಡ್ ಹೊಟ್ಟೇಲಿರೋ ಮಗು ಚನ್ನಾಗಿ ಬೆಳ್ಯಕ್ಕೆ ಸಹಾಯ ಮಾಡತ್ತೆ

ಬಸುರಿ ಹೆಂಗಸರಿಗೆ ಫೋಲಿಕ್ ಆಸಿಡ್ ಮತ್ತೆ ವಿಟಮಿನ್ ಬಿ ಕಾಂಪ್ಲೆಕ್ಸ್ ಬೇಕೇ ಬೇಕು. ಬಟಾಣಿಯಲ್ಲಿ ಫೋಲಿಕ್ ಆಸಿಡ್ ಜಾಸ್ತಿ ಇರೋದ್ರಿಂದ ಬಸುರಿ ಹೆಂಗಸರು ಇದ್ನ ಕಣ್ಮುಚ್ಕೊಂಡು ತಿನ್ಬೋದು. ಇದ್ರಿಂದ ನರಮಂಡಲದ ವ್ಯವಸ್ಥೆ ಇನ್ನಷ್ಟು ಬಲವಾಗಿ ಹೆರಿಗೆ ಆಗೋದು ತುಂಬಾನೇ ಸುಲಭವಾಗತ್ತೆ. 

ಮೂಲ

11. ಆಗಾಗ ಹುಷಾರ್ ತಪ್ಪಿ ಬೀಳದೆ ಇರೋ ಹಾಗೆ ನೋಡ್ಕೊಳತ್ತೆ

ನಮ್ ದೇಹದಲ್ಲಿರೋ ವ್ಯಾಧಿ ಕ್ಷಮತ್ವ ನಿರ್ಧಾರ ಆಗೋದೇ ವಿಟಮಿನ್ ಎ ಮೂಲಕ. ಒಂದು ತಟ್ಟೇ ಬಟಾಣಿಯಲ್ಲಿ ಸುಮಾರು 22 % ವಿಟಮಿನ್ ಎ ನಮ್ ದೇಹಕ್ಕೆ ಸಿಗತ್ತಂತೆ. ಅದ್ಕೊಸ್ಕರ ಇಮ್ಯುನಿಟಿ ಇಲ್ಲಾಂತ ಕೊರಗ್ಬೇಡಿ. ಬಟಾಣಿ ತಿನ್ನಿ. ಉಸಿರಾಟದ ತೊಂದ್ರೆ ಆಗ್ದೆ ಇರಕ್ಕೂ ವಿಟಮಿನ್ ಎ ಬೇಕಾಗತ್ತೆ. 

12. ಖಿನ್ನತೆ ಕಮ್ಮಿ ಮಾಡತ್ತೆ

ಖಿನ್ನತೆ ಕಾಯ್ಲೇ ಫೋಲಿಕ್ ಆಮ್ಲ, ವಿಟಮಿನ್ಗಳ ಕೊರತೆಯಿಂದ ಬರೋದಂತೆ. ಅದ್ಕೆ ಖಿನ್ನತೆಯಿಂದ ಬಳಲ್ತಾ ಇರೋರಿಗೆ ನೀವು ಬಟಾಣಿಯನ್ನ ಪರಿಹಾರ ಅಂತ ಹೇಳ್ಬಹುದು. 

ಮೂಲ

13. ಚಳಿಗಾಲದಲ್ಲಿ ಕಾಲೂತ ಕಮ್ಮಿ ಮಾಡತ್ತೆ

ಚಳಿಗಾಳದಲ್ಲಿ ಪಾದ ಒಡೆಯೋದು , ಊದ್ಕಂಡ್ ಬಿಡೋದು, ತುರಿಕೆ ಬರೋದು ಇವೆಲ್ಲಾ ಸಾಮಾನ್ಯ. ಇದ್ಕೆ ಇಂಗ್ಲೀಷಲ್ಲಿ ಚಿಲ್ಬ್ಲೇನ್ಸ್ ಅಂತಾರೆ. ಬಟಾಣಿಯಲ್ಲಿ ಅದ್ಕೊಂದು ಒಳ್ಳೆ ಪರಿಹಾರ ಇದೆ. ಬಟಾಣಿ ಬೇಯ್ಸಿದ ನೀರು ತಗೊಂಡು ಅದ್ಕೆ ಒಂದಿಷ್ಟು ಎಳ್ಳೆಣ್ಣೆ ಹಾಕ್ಬಿಟ್ಟು ಅದ್ರಲ್ಲಿ ಪಾದಾನೋ ಕಾಲ್ಬೆರಳನ್ನೋ ಇಟ್ಬಿಟು ಸ್ವಲ್ಪ ಹೊತ್ತಾದ ನಂತರ ತೊಳಿಬೇಕು. ನಿಧಾನ ನಿಧಾನ ಊದ್ಕಂಡಿದ್ದು, ಕೆರೆತ ಇದ್ದಿದ್ದು ಕಮ್ಮಿಯಾಗ್ಬಿಡತ್ತೆ.

14. ಕೂದಲಿನ ಅಂದ ಕಾಪಾಡೋಕೆ ಇದ್ರಲ್ಲಿರೋ ವಿಟಮಿನ್ ಬಿ ಸಹಾಯ ಮಾಡತ್ತೆ 

ಬಟಾಣಿಯಲ್ಲಿರೋ ವಿಟಮಿನ್ ಬಿ , ಫೋಲೆಟ್ , ವಿಟಮಿನ್ ಬಿ 6 ಕೂದಲು ಬೇರಿನಿಂದ ಗಟ್ಟಿಯಾಗೋ ಹಾಗೆ ನೋಡ್ಕೊಳತ್ತೆ. ವಿಟಮಿನ್ ಸಿ ಅನ್ನೋದು ಕೂದ್ಲು ಉದ್ರದೇ ಇರೋ ಹಾಗೆ ಕಾಪಾಡತ್ತೆ. 

ಮೂಲ

ಬಟಾಣಿ ವಾಯು ಅಂದವ್ರೆಲ್ಲಾ, ಇದ್ನ ಓದಿದ್ಮೇಲೆ ಮೂಗಿನ್ ಮೇಲೆ ಬೆರಳಿಟ್ಕೊತಾರೆ ನೋಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: