ಒಂದು ಕನಸಿಂದ ಧರ್ಮಸ್ಥಳಕ್ಕೆ ಧರ್ಮಸ್ಥಳ ಅಂತ ಹೆಸರು ಬಂದ ರೋಚಕ ಕಥೆ

ಬೇರೆ ಹೆಸರಿತ್ತು ಅಂತ ಗೊತ್ತಿತ್ತಾ?

ಧರ್ಮಸ್ಥಳ ಅಂದ್ರೆ ನಮ್ ಕರ್ನಾಟಕದಲ್ಲಿ ಯಾರಿಗ್ ಗೊತ್ತಿಲ್ಲಾ ಕೇಳಿ. ಧರ್ಮಸ್ಥಳ ಅಂತ ಹೆಸ್ರು ಯಾಕೆ ಬಂತು? ಅಲ್ಲಿನ ಸ್ಥಳ ಮಹಿಮೆ ಏನು? ಇದೆಲ್ಲಾ ತಿಳ್ಕೊಳಕ್ಕೆ ಮುಂದೆ ಓದಿ.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹಲವು ಶತಮಾನಗಳ ಇತಿಹಾಸ ಇದೆ. ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಾಚೀನವಾದಂತ ಕ್ಷೇತ್ರ ಇದು.

ಧರ್ಮಸ್ಥಳ ಅಂತ ಹೆಸರು ಬರೋಕು ಮುಂಚೆ ಅದನ್ನ ಕುಡಮ ಅಂತ ಕರೀತಿದ್ರು. ಭಕ್ತರು ಕೇಳಿದ್ದನ್ನು ಕೊಡುವಂತ ಸ್ಥಳ ಇದು ಎಂದರ್ಥ.

ತುಂಬಾ ಹಿಂದೆ ಇಲ್ಲಿ ಜೈನ ಮುಖ್ಯಸ್ಥ ಭೀರ್ಮಣ್ಣ ಪರ್ಗಡೆ ಮತ್ತು ಹೆಂಡತಿ ಅಮ್ಮು ಬಲ್ಲಳ್ತಿ ಜೊತೆ ಕುಡಮದಲ್ಲಿ ವಾಸವಾಗಿದ್ರು. ಅವರ ಮನೆ ಹೆಸರು "ನೆಲ್ಯಾಡಿ ಬೀಡು". ಈ ನೆಲ್ಯಾಡಿ ಬೀಡಿನ ಸಮೀಪ ಚಂದ್ರನಾಥಸ್ವಾಮಿ ದೇವಸ್ಥಾನ ಇತ್ತು. ಪರ್ಗಡೆ ಕುಟುಂಬದೋರ್ಗೆಲ್ಲಾ ದೇವರ ಬಗ್ಗೆ ಭಯಭಕ್ತಿ ತುಂಬಾ ಇತ್ತು. ಅದರ ಜೊತೆ ಅವರ ಮನಸ್ಸು ದೊಡ್ಡದು, ಕೈ ಧಾರಾಳ. ಬಂದವರನ್ನ ಚೆನ್ನಾಗಿ ನೋಡ್ಕೊತಿದ್ರು. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣ್ತಿದ್ರು. ತುಂಬಾ ಸಿಂಪಲ್ ಜೀವನ ನಡೆಸ್ತಿದ್ರು.

ಮೂಲ

ಧರ್ಮದೇವತೆಗಳು ಪರ್ಗಡೆ ದಂಪತಿಗಳ ಕನಸಲ್ಲಿ ಕಾಣಿಸ್ಕೊಂಡು ಮನೆ ಬಿಟ್ಟುಕೊಡಿ ಅಂತಾರೆ

ಒಂದು ದಿನ ಧರ್ಮ ದೇವತೆಗಳು ಮಾರು ವೇಷದಲ್ಲಿ, ಧರ್ಮ ಪಾಲನೆ ಮಾಡೊ ಜಾಗಗಳನ್ನ ಹುಡುಕೊಂಡು ಭೂಮಿಗೆ ಬಂದಿರ್ತಾರೆ. ತನ್ನ ಬಳಗ ಮತ್ತೆ ಕುದುರೆ, ಆನೆ ಜೊತೆ ಜಾಗ ಹುಡುಕ್ತಾ ಹುಡುಕ್ತಾ ನೆಲ್ಯಾಡಿ ಬೀಡಿಗೆ ಬರ್ತಾನೆ. ಎಂಥಾ ಒಳ್ಳೇ ದಿನ ಇದು ಅಂದ್ಕೊಂಡು ಬಂದ ಅತಿಥಿಗಳಿಗೆ ಆದರ ಉಪಚಾರ ಮಾಡ್ತಾ ಮಾಡ್ತಾ ಭೀರ್ಮಣ್ಣ ದಂಪತಿಗಳು ಸಂತೋಷ ಪಡ್ತಾರೆ. ಅವರ ಆದರಾಥಿತ್ಯಕ್ಕೆ ದೇವದೂತರು ಮಾರುಹೋಗ್ತಾರೆ. ನಾವು ಹುಡುಕುತ್ತಿರೋ ಧರ್ಮ ಇಲ್ಲೇ ಇರೋದು ಅಂತ ಅವರಿಗೆ ಮನವರಿಕೆ ಆಗತ್ತೆ.

ಆವತ್ತೇ ರಾತ್ರಿ ಪರ್ಗಡೆ ದಂಪತಿಗಳ ಕನಸಲ್ಲಿ ಈ ಅತಿಥಿಗಳು ಕಾಣಿಸಿಕೊಂಡು "ಓ ಪರ್ಗಡೆ, ನಾವು ನರಮನುಷ್ಯರಲ್ಲ, ತುಂಬಾ ಶಕ್ತಿಯುಳ್ಳ ಧರ್ಮದೇವತೆಗಳು. ನಿಮ್ಮ ಧಾರ್ಮಿಕ ನಂಬಿಕೆ, ಪ್ರಾಮಾಣಿಕತೆ, ಆದರಾತಿಥ್ಯ, ಧರ್ಮಶ್ರದ್ಧೆಗೆ ಮಾರು ಹೋಗಿದ್ದೇವಿ. ನಾವು ಇಲ್ಲೇ ನೆಲ್ಯಾಡಿ ಬೀಡಲ್ಲೆ ಇರಕ್ಕೆ ಇಷ್ಟಪಡ್ತೀವಿ. ನಮಗೆ ಬಿಟ್ಟುಕೊಟ್ಟು ಇಲ್ಲೇ ಸಮೀಪದಲ್ಲಿ ನೀವು ಬೇರೆ ಮನೆ ಕಟ್ಟಿಕೊಳ್ಳಿ. ಇಲ್ಲಿಗೆ ಬಂದು ದಾನ ಧರ್ಮ ಮಾಡುವ ಎಲ್ಲರಿಗೆ ಆತಿಥ್ಯ, ಊಟ ಮತ್ತೆ ಉಳಿದುಕೊಳ್ಳೋದಕ್ಕೆ ವ್ಯವಸ್ಥೆ ಸಿಗುವಂತಾಗಲಿ, ನಿಮಗೆ ಒಳ್ಳೇದಾಗ್ಲಿ" ಎಂದು ಆಶೀರ್ವಾದ ಮಾಡಿ ದೇವತೆಗಳು ಮಾಯ ಆಗ್ತಾರೆ. ಪರ್ಗಡೆ ದಂಪತಿಗಳು ಬೆಳಗ್ಗೆ ಎದ್ದುನೋಡ್ದಾಗ ಮನೆಗೆ ಬಂದಿದ್ದ ಅತಿಥಿಗಳು ಕಾಣಿಸೋದಿಲ್ಲ. ಆದರೆ ಅವರು ತಂಗಿದ್ದ ಜಾಗದಲ್ಲಿ ಕತ್ತಿ ಮತ್ತೆ ಇತರೆ ಆಯುಧಗಳು ಇರ್ತಾವೆ. ತೂಗುಯ್ಯಾಲೆ ಕಟ್ಟಿ ಅದರ ಮೇಲೆ ದೀಪ ಹಚ್ಚಿ ಊದುಕಡ್ಡಿಯನ್ನಿಟ್ಟು ಪೂಜೆ ಮಾಡ್ತಾರೆ. ಆ ಸಂಪ್ರದಾಯ ಈಗಲೂ ಇದೆ.

ಪರ್ಗಡೆ ಮತ್ತವರ ಹೆಂಡತಿ ನೆಲ್ಯಾಡಿ ಬೀಡಿನ ಹತ್ತಿರದಲ್ಲೇ ಬೇರೆ ಮನೆ ಕಟ್ಟಿಕೊಂಡು ಧರ್ಮದ ಆಚರಣೆಗಳನ್ನ ನಡೆಸಿಕೊಂಡು ಹೋಗ್ತಾರೆ

ಮೂಲ

ಮತ್ತೆ ಧರ್ಮದೇವತೆಗಳು ಪರ್ಗಡೆ ದಂಪತಿಗಳ ಕನಸಲ್ಲಿ ಕಾಣಿಸಿಕೊಂಡು ನಾಲ್ಕು ಮಂದಿ ಧರ್ಮದೇವತೆಗಳಿಗೂ ಪ್ರತ್ಯೇಕ ಗುಡಿ ಕಟ್ಟಿಸು ಅಂತ ಹೇಳ್ತಾರೆ

ಧರ್ಮದೇವತೆಗಳು ಪರ್ಗಡೆ ದಂಪತಿಗಳ ಕನಸಲ್ಲಿ ಕಾಣಿಸಿಕೊಂಡು "ಓ ಪರ್ಗಡೆ, ನಾವು ನಾಲ್ಕು ಮಂದಿ ಧರ್ಮದೇವತೆಗಳು - ಕಲಾರಕೈ, ಕಲರಾಹು, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ. ನಾವು ತೋರಿಸಿದ ಜಾಗದಲ್ಲಿ ಪ್ರತಿಯೊಬ್ಬರಿಗೂ ಬೇರೆ ಬೇರೆ ಗುಡಿ ಕಟ್ಟಿಸಬೇಕು ಮತ್ತೆ ಕಾಲಕಾಲಕ್ಕೆ ಧಾರ್ಮಿಕ ಕೆಲಸಗಳಾದ "ಪರ್ವ ನಡಾವಳಿ" ನಡೆಸಿಕೊಡಬೇಕು. ಇದಕ್ಕಾಗಿ ಇಬ್ಬರು ಉತ್ತಮರನ್ನ ಆಯ್ಕೆ ಮಾಡ್ಕೋ. ನೇಮ ನಿಷ್ಠೆಯಿಂದ ಇರ್ಬೇಕು. ಈ ಕೆಲಸಕ್ಕೆ ಅಣ್ಣಪ್ಪ ದೈವವನ್ನ ಕಳುಹಿಸುತ್ತೇವೆ. ಕಾಲಕಾಲಕ್ಕೆ ಧರ್ಮ ಸಂಸ್ಕಾರ ನಡೆಸೋದನ್ನ ಮರೀಬೇಡ. ಈ ಕೆಲಸಗಳು ಸಾಂಗವಾಗಿ ನಡೆಯಲು ನಾಲ್ಕು ಮಂದಿಯನ್ನ ನೀನು ಕೆಲಸಕ್ಕೆ ಇಟ್ಕೋ. ನಮ್ಮ ಮೇಲೆ ನಂಬಿಕೆ ಇಟ್ಟು ನಾವು ಹೇಳಿದಷ್ಟು ಮಾಡು. ದುಷ್ಟ ಶಕ್ತಿಗಳಿಂದ ನಿಮ್ಮ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ, ನಿಮಗೆ ಆಯುರಾರೋಗ್ಯ ಸಿದ್ಧಿಸುವಂತೆ ನೋಡಿಕೊಳ್ತೀವಿ. ಈ ಕ್ಷೇತ್ರವನ್ನ ನಾವು ಇಡೀ ಜಗತ್ತಿಗೆ ಗೊತ್ತಾಗುವಂತೆ ಮಾಡ್ತೀವಿ. ದಾನ ಧರ್ಮ ಮಾಡೋದಕ್ಕೆ ಎಲ್ಲಾ ಕಡೆಯಿಂದ ಕಾಣಿಕೆ ಹರಿದು ಬರುತ್ತೆ. ನಿಮ್ಮ ಮಾತು ನಿಜವಾಗುತ್ತೆ. ಇಲ್ಲಿಗೆ ಬಂದು ದಾನ ಧರ್ಮ ಮಾಡುವ ಎಲ್ಲರಿಗೆ ಆತಿಥ್ಯ, ಊಟ ಮತ್ತೆ ಉಳಿದುಕೊಳ್ಳೋದಕ್ಕೆ ವ್ಯವಸ್ಥೆ ಸಿಗುವಂತಾಗಲಿ. ಈ ಸಂಪ್ರದಾಯ ನಿಮ್ಮ ಮುಂದಿನ ತಲೆಮಾರಿನವರೂ ಮುಂದುವರೆಸಿಕೊಂಡು ಹೋಗಬೇಕು. ನೀವು ಮತ್ತು ನಿಮ್ಮ ಕುಟುಂಬವನ್ನ ರಕ್ಷಿಸುವ ಜವಾಬ್ದಾರಿ ನಮ್ಮದು. ಒಂದು ವೇಳೆ ಇದನ್ನು ನೀವು ಪಾಲಿಸಲಿಲ್ಲ ಎಂದರೆ ತೊಂದರೆ ತಪ್ಪಿದ್ದಲ್ಲ. ಹಾಗಂತ ಭಯ ಬೀಳುವ ಅಗತ್ಯವಿಲ್ಲ. ಉತ್ತಮ ಮಾರ್ಗದಲ್ಲಿ ನಡೆಯಿರಿ ಶಾಂತಿಯಿಂದಿರಿ" ಅಂತ ಹೇಳಿ ಧರ್ಮದೇವತೆಗಳು ಮಾಯಾ ಅಗ್ತಾರೆ.

ಮೂಲ

ಭೀರ್ಮಣ್ಣ ಪರ್ಗಡೆ ಧರ್ಮದೇವತೆಗಳಿಗೆ ಮತ್ತೆ ಅಣ್ಣಪ್ಪ ದೈವಕ್ಕೆ ಗುಡಿ ಕಟ್ಟಿಸ್ತಾರೆ

ಬೆಳಗ್ಗೆ ಎದ್ದ ಕೂಡಲೆ ಭೀರ್ಮಣ್ಣ ಪರ್ಗಡೆ ಅವರು ಹೆಂಡತಿ ಜೊತೆಗೆ ಎಲ್ಲವನ್ನೂ ಮಾತಾಡಿ ಧರ್ಮದೈವಗಳು ಹೇಳಿದಂತ ’ಬಡಿ ನಡೆ’ ಅನ್ನೋ ಅತ್ಯಂತ ಎತ್ತರದ ಪ್ರದೇಶಕ್ಕೆ ಹೋಗಿ ಅಲ್ಲಿ ಧರ್ಮದೇವತೆಗಳಿಗೆ ಮತ್ತೆ ಅಣ್ಣಪ್ಪ ದೈವಕ್ಕೆ ಗುಡಿ ಕಟ್ಟಿಸ್ತಾರೆ. ಹಬ್ಬ ಮತ್ತೆ ಧಾರ್ಮಿಕ ಸಂಪ್ರದಾಯ - ಪರ್ವ ಮತ್ತೆ ನಡಾವಳಿಯನ್ನ ನಡೆಸಿ ಧಾರಾಳವಾಗಿ ದಾನ ಧರ್ಮಗಳನ್ನ ಮುಂದುವರೆಸಿಕೊಂಡು ಹೋಗ್ತಿರ್ತಾರೆ. ಹಬ್ಬಗಳಿಗೆ ಪೂಜೆ ಮಾಡಲು ಬ್ರಾಹ್ಮಣರನ್ನ ಪರ್ಗಡೆ ಕರೀತಾರೆ. ಅವರು ಈ ದೈವಗಳ ಜೊತೆಗೆ ದೇವರೂ ಇದ್ದರೆ ಉತ್ತಮ ಅಂತ ಸಲಹೆ ಕೊಡ್ತಾರೆ. ಆಗ ಪರ್ಗಡೆ ಅವರಿಗೆ ಯೋಚನೆ ಶುರುವಾಗುತ್ತೆ. ಧರ್ಮದೇವತೆಗಳು ಅಣ್ಣಪ್ಪ ಸ್ವಾಮಿಯನ್ನ ಕಳುಹಿಸಿ ಮಂಗಳೂರಿನ ಕದ್ರಿಯಲ್ಲಿದ್ದ ಶ್ರೀಮಂಜುನಾಥನ ಲಿಂಗ ತರ್ಸ್ತಾರೆ. ಪರ್ಗಡೆ ದಂಪತಿಗಳು ಆ ಶಿವಲಿಂಗಕ್ಕೆ ದೇವಸ್ಥಾನ ಕಟ್ಟಿಸ್ತಾರೆ.

ಮೂಲ

ಕುಡುಮದಲ್ಲಿ ಶ್ರೀ ಚಂದ್ರನಾಥ, ಶ್ರೀ ಮಂಜುನಾಥ ಮತ್ತೆ ನಾಲ್ಕು ಮಂದಿ ಧರ್ಮದೇವತೆಗಳಿಗೆ ಏಕಕಾಲದಲ್ಲಿ ಪೂಜೆ ನಡೆಯತ್ತೆ

ನೆಲ್ಯಾಡಿಯ ಹೆಗ್ಗಡೆ ಕುಟುಂಬದೋರು ತಲೆಮಾರುಗಳಿಂದ ಇಲ್ಲಿನ ದೈವಗಳನ್ನ ಆರಾಧಿಸುತ್ತಾ ಬಂದಿದ್ದಾರೆ.

ಮೂಲ

ದೇವರಾಜ ಹೆಗಡೆ ಕಾಲದಲ್ಲಿ ಸೋದೆ ವಾದಿರಾಜ ಸ್ವಾಮಿ ಲಿಂಗವನ್ನ ಪುನರ್ ಪ್ರತಿಷ್ಟಾಪನೆ ಮಾಡ್ತಾರೆ. ಧರ್ಮಸ್ಥಳ ಅಂತ ಹೆಸ್ರು ಕೊಡ್ತಾರೆ.

ದೇವರಾಜ ಹೆಗಡೆ ಕಾಲದಲ್ಲಿ, ಉಡುಪಿಯ ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿಗಳು ಸುಬ್ರಮಣ್ಯಕ್ಕೆ ಹೋಗಿ ಹಿಂದಿರುಗುವಾಗ ಕೊಡುಮಗೆ ಭೇಟಿ ಕೊಡಿ ಅಂತ ದೇವರಾಜ ಹೆಗಡೆ ವಿನಂತಿ ಮಾಡ್ಕೊತಾರೆ. ಅತಿಥಿ ಸತ್ಕಾರಗಳನ್ನು ಸ್ವೀಕರಿಸಿದ ಶ್ರೀ ವಾದಿರಾಜ ಸ್ವಾಮಿಗಳು ಪ್ರಸಾದ ಸ್ವೀಕಾರ ಮಾಡಕ್ಕೆ ಒಪ್ಪಲ್ಲ. ಏನಪ್ಪಾ ಕಾರಣ ಅಂದ್ರೆ ಕೊಡುಮದಲ್ಲಿದ್ದ ಶಿವಲಿಂಗವನ್ನ ದೇವತೆಗಳು ಪ್ರತಿಷ್ಟಾಪನೆ ಮಾಡಿದಾರೆ ಅದಕ್ಕೆ ನಾನು ಒಪ್ಪಲ್ಲ ಅಂತಾರೆ. ಆಗ ದೇವರಾಜ ಹೆಗಡೆಯವರು ಶ್ರೀಗಳಿಗೆ ಪುನರ್ ಪ್ರತಿಷ್ಟಾಪಿಸುವಂತೆ ಕೇಳಿಕೊಳ್ತಾರೆ. ಸಂತೋಷದಿಂದ ಶ್ರೀ ವಾದಿರಾಜ ಸ್ವಾಮಿಗಳು ಒಪ್ಕೊಂಡು ಮತ್ತೆ ಲಿಂಗ ಪ್ರತಿಷ್ಟಾಪನೆಗೆ ಬೇಕಾದ ಪೂಜೆ ವಿಧಿಗಳನ್ನೆಲಾ ಮಾಡ್ತಾರೆ. "ಧರ್ಮ ಸ್ಥಳ" ಎಂದು ನಾಮಕರಣ ಮಾಡುತ್ತಾರೆ.

ಮೂಲ

ಹೀಗಾಗಿ ಕೊಡುಮಕ್ಕೆ "ಧರ್ಮಸ್ಥಳ" ಅಂತ ಹೆಸ್ರು ಬಂತು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: