http://www.adslzone.net/app/uploads/2015/07/proteger-movil-inmersion-agua.jpg

ಪ್ರತಿಯೊಬ್ಬರ ಜೇಬಲ್ಲೂ ಇರೋಂತ ಒಂದು ವಸ್ತು ಅಂದ್ರೆ ಅದು ಮೊಬೈಲ್. ಈವತ್ತು ಮೊಬೈಲ್ ಇಲ್ಲಾಂದ್ರೆ ಯಾವ್ ಕೆಲಸ ಕಾರ್ಯಗಳು ನಡೆಯಲ್ಲ. ಎಲ್ರ ಜೀವನದಲ್ಲಿ ಅಷ್ಟೊಂದು ಪ್ರಭಾವ ಬೀರಿದೆ ಮೊಬೈಲ್. ಅದ್ರಲ್ಲೂ ಸ್ಮಾರ್ಟ್‌ಫೋನ್‍ಗಳಂತೂ ಅವರವರ ಪ್ರತಿಷ್ಠೆಗೆ ತಕ್ಕಂಗೆ ಇರ್ತಾವೆ.  ಇರಲಿ ವಿಚಾರ ಈಗ ಅದಲ್ಲ. ಯಾವಾಗ ಏನ್ ಇಂಪಾರ್ಟೆಂಟ್ ಕಾಲ್ ಬರುತ್ತೋ ಏನೋ ಅಂದ್ಕೊಂಡು ಕೆಲವರು ಅದನ್ನ ಜೇಬಲ್ಲೇ ಇಡ್ಕೊಂಡ್ ಬಾತ್ ರೂಮು ಆ ರೂಮು ಈ ರೂಮು ಅಂತ ಅಡ್ಡಾಡ್ತಿರ್ತಾರೆ. ಅಂತ ಟೈಮಲ್ಲೇ ನೋಡಿ ಕೈಜಾರಿ ಮೊಬೈಲ್ ನೀರಲ್ಲಿ ಡುಬಕ್ ಅಂತ ಬೀಳೋದು. ಇಲ್ಲಾ ಮಳೆಗೆ ಸಿಗಾಕೊಂಡ್ರಂತೂ ಮೊಬೈಲ್ ಕೃಷ್ಣಾರ್ಪಣಮಸ್ತು ಅಂದ್ಕೊಳ್ಳೋರೆ ಹೆಚ್ಚು. ಒಂದ್ವೇಳೆ ಮೊಬೈಲ್ ನೀರಿಗೆ ಬಿದ್ದರೆ ಏನ್ ಮಾಡ್ಬೇಕು? ಮೊದ್ಲು ಗಾಬರಿ ಬೀಳ್ಬೇಡಿ. ಇಲ್ಲಿ ಕೊಟ್ಟಿರೋಂತ 9 ಸ್ಟೆಪ್ಪಲ್ಲಿ ಅದನ್ನ ಸರಿಪಡಿಸ್ಕೋಬೋದು. 

ನೀರಿಗೆ ಬಿದ್ದ ಮೊಬೈಲ್‌ಗೆ ವಾರಂಟಿ ಕಂಡೀಷನ್ಸ್ ಅಪ್ಲೈ ಆಗಲ್ಲ. ಹಾಗಾಗಿ ರಿಪೇರಿ ಮಾಡೋದು ಕಷ್ಟ. ಮುಖ್ಯವಾಗಿ ಅಮೂಲ್ಯವಾದಂತ ಕಾಂಟೆಕ್ಟ್ ನಂಬರ್ಸು, ಫೋಟೋಗಳು, ಡಾಟಾ ಹಾಳಾಯ್ತಲ್ಲಾ ಅನ್ನೋ ಬೇಜಾರೇ ಜಾಸ್ತಿ. ಒಂದ್ವೇಳೆ ನಿಮ್ಮ ಮೊಬೈಲು ನೀರಿಗೆ ಬಿದ್ರೆ ಈ 9 ಸ್ಟೆಪ್ಸ್ ಟ್ರೈ ಮಾಡಿ. 

1. ನೀರಿಂದ ತಕ್ಷಣ ನಿಮ್ಮ ಮೊಬೈಲನ್ನ ಹೊರಗ್ ತೆಗೆದುಬಿಡಿ

ಯಾರೇ ಆಗ್ಲಿ ಮೊಬೈಲ್ ನೀರಿಗೆ ಬಿದ್ ತಕ್ಷಣ ತಲೇನೇ ಓಡಲ್ಲ. ಗಾಬರಿ, ಆತಂಕ, ಏನ್ಮಾಡೋದಪ್ಪಾ ಈಗ ಅಂತ್ಲೇ ಯೋಚಿಸ್ತಿರ್ತಾರೆ. ಮೊಬೈಲ್ ಕಥೆ ಮುಗೀತು ಬಿಡು, ಇನ್ ಅದನ್ನ ಎತ್ಕೊಂಡು ಏನ್ ಮಾಡೋದು ಅಂದ್ಕೊಳ್ಳೋರು ಜಾಸ್ತಿ ಜನ ಇದ್ದಾರೆ. ಆದರೆ ನೀವ್ ಆ ರೀತಿ ಮಾಡೋಕೆ ಹೋಗ್ಬೇಡಿ. ಮೊಬೈಲನ್ನ ಎಷ್ಟು ಬೇಗ ನೀರಿಂದ ಹೊರಗ್ ತೆಗೀತೀರೋ ನಿಮ್ ಮೊಬೈಲು ಅಷ್ಟು ಸೇಫು.

2. ನೀರಿಂದ ತೆಗೆದ ಕೂಡಲೆ ಸ್ವಿಚ್ ಆಫ್ ಮಾಡಿಬಿಡಿ

ಸಾಮಾನ್ಯವಾಗಿ ಯಾವುದೇ ಮೊಬೈಲು ನೀರಿಗೆ ಬಿದ್ದ ಕೂಡ್ಲೆ ಸ್ವಿಚ್ ಆಫ್ ಆಗ್ತಾವೆ. ಒಂದ್ವೇಳೆ ಆಗ್ಲಿಲ್ಲ ಅಂದ್ರೆ ಕೂಡಲೆ ಸ್ವಿಚ್ ಆಫ್ ಮಾಡಿ. ಇಲ್ದಿದ್ರೆ ಶಾರ್ಟ್ ಸರ್ಕ್ಯೂಟ್ ಆಗೋ ಛಾನ್ಸ್ ಇರುತ್ತೆ. 

3. ಬ್ಯಾಟರಿ ತೆಗೆಯೋಕ್ಕೆ ಆದ್ರೆ ಕೂಡಲೆ ತೆಗೀರಿ

ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬಿಚ್ಚಕ್ಕೆ ಬರಲ್ಲ. ಆ ರೀತಿ ಇದ್ದಾಗ ಈ ಸ್ಟೆಪ್ ಬಿಟ್ಟು ಮುಂದೇ ಹೋಗಿ. ಒಂದ್ವೇಳೆ ಬ್ಯಾಟರಿ ಬಿಚ್ಚೋಹಂಗಿದ್ರೆ ಮೊದಲು ಆ ಕೆಲಸ ಮಾಡಿ. ಆ ರೀತಿ ಮಾಡೋಂದ್ರಿಂದ ಫೋನ್‌ಗೆ ಆಗೋ ಇನ್ನಷ್ಟು ಡ್ಯಾಮೇಜನ್ನ ತಡೀಬೋದು.

4. ಫೋನಿಂದ ಸಿಮ್ ಕಾರ್ಡು ಮತ್ತೆ ಮೆಮೊರಿ ಕಾರ್ಡ್ ತೆಗೀರಿ

ಫೋನಲ್ಲಿರೋಂತ ಸಿಮ್ ಕಾರ್ಡು, ಮೆಮೊರಿ ಕಾರ್ಡು, ಕವರು ತೆಗೆದು ಮೈಕ್ರೋಫೈಬರ್ ಬಟ್ಟೆ ಅಥವಾ ಟವೆಲಿಂದ ವರೆಸಿ ತೇವ ಇಲ್ಲದಂತೆ ನೋಡ್ಕೊಳ್ಳಿ. ಯಾವುದೇ ಕಾರಣಕ್ಕೂ ಪೇಪರ್ ಬಳಸಿ ತೇವ ವರೆಸಕ್ಕೆ ಹೋಗ್ಬೇಡಿ. ಇದ್ರಿಂದ ಪೇಪರ್ನ ಸಣ್ಣಸಣ್ಣ ಅಂಶ ಮೊಬೈಲ್ ಸಂಧಿಗಳಲ್ಲಿ ಸಿಕ್ಕಿಕೊಳ್ಳೋ ಛಾನ್ಸ್ ಇದೆ. 

5. ಮೊಬೈಲನ್ನ ವ್ಯಾಕ್ಯೂಮ್ ಬ್ಯಾಗ್ನಲ್ಲಿ ಇಡಿ

ಪ್ಲಾಸ್ಟಿಕ್ ಕವರ್ನಲ್ಲಿ ಮೊಬೈಲನ್ನು ಇಡಿ. ಕವರ್ನಿಂದ ಗಾಳಿ ಹೊರಗ್ ತೆಗೆದ್ಬಿಡಿ. ಆಗ ಅಲ್ಲಿ ಗಾಳಿ ಆಡದೆ ವ್ಯಾಕ್ಯೂಮ್ ಸೃಷ್ಟಿಯಾಗಿ, ಒಳಗೆಲ್ಲೋ ಉಳಿದಿರೋಂತ, ಬಟ್ಟೇಲಿ ವರಸಕ್ಕಾಗದೇ ಇರೋಂತ ತೇವಾಂಶ ಹೊರಗ್ ಬರುತ್ತೆ. 

6. ಒಂದ್ ಬಟ್ಲಲ್ಲಿ ಅಕ್ಕಿ ಹಾಕಿ ಅದ್ರಲ್ಲಿ ಮೊಬೈಲನ್ನ ಇಡಿ

ಮೊಬೈಲಲ್ಲಿ ಇನ್ನೂ ತೇವಾಂಶ ಇದ್ದಂಗೆ ಇದೆ. ಅದು ವ್ಯಾಕ್ಯೂಮ್ ಮಾಡ್ದಾಗ್ಲೂ ಬರ್ಲಿಲ್ಲ ಅಂತ ಅನ್ನಿಸಿದ್ರೆ.. ಒಂದ್ ಕಪ್ಪಲ್ಲಿ ಅಕ್ಕಿ ತಗೊಂಡು ಅದ್ರಲ್ಲಿ ಮೊಬೈಲನ್ನಿಡಿ. ಅಕ್ಕಿ ತೇವಾಂಶಾನ ಹೀರಿಕೊಳ್ಳತ್ತೆ. ಇದ್ರಿಂದ ಮೊಬೈಲ್ ಡ್ರೈ ಆಗತ್ತೆ. ಅಕ್ಕೀಲಿ ಮೊಬೈಲನ್ನ ಕನಿಷ್ಠ ಎರಡು ದಿನ ಆದ್ರೂ ಇಡ್ಬೇಕು.

7. ಸಿಲಿಕಾ ಜೆಲ್ ಸ್ಯಾಚೆಟನ್ನ ಬಳಸಿ

ಒಂದ್ ವೇಳೆ ಅಕ್ಕಿ ಬೇಡ ಅನ್ನಿಸಿದರೆ, ತೇವಾಂಶನ ತೆಗೆಯಕ್ಕೆ ಸಿಲಿಕಾ ಜೆಲ್ ಸ್ಯಾಚೆಟ್‌ಗಳನ್ನಾದ್ರೂ ಬಳಸ್ಕೋಬೋದು. 

8. ಸೂರ್ಯನ್ ಬಿಸ್ಲಲ್ಲಿ ಸ್ವಲ್ಪ ಹೊತ್ತು ಇಡಿ

ಮೊಬೈಲಲ್ಲಿ ಸೇರ್ಕೊಂಡಿರೋ ತೇವಾಂಶನ ತೆಗೆಯೋಕೆ ಇದಂತೂ ತುಂಬಾ ಪರಿಣಾಮಕಾರಿ ಮತ್ತೆ ಅಷ್ಟೇ ಸಿಂಪಲ್ ಸ್ಟೆಪ್. ಸ್ವಲ್ಪ ಹೊತ್ತು ಮೊಬೈಲನ್ನ ಬಿಸ್ಲಲ್ಲಿ ಇಡಿ ಅಷ್ಟೇ. 

9. ಈಗ ಮೊಬೈಲನ್ನ ಸ್ವಿಚ್ ಆನ್ ಮಾಡಿ… ಟಣ್ ಟಣಾ ಟಣ್!

ಮೊಬೈಲ್ ತಜ್ಞರು ಮತ್ತೆ ಅನುಭವಿಗಳು ಹೇಳೋದೇನಂದ್ರೆ ಯಾವುದೇ ಮೊಬೈಲ್ ನೀರಿಗೆ ಬಿದ್ರೆ ಅದರ ಕಥೆ ಗೋವಿಂದ ಗೋವಿಂದ ಅಂತ. ಆ ಮಾತು ನಿಜಾನೂ ಇರ್ಬೋದು. ಆದರೆ ನಾವಿಲ್ಲಿ ತಿಳಿಸಿರೋಂತ ಸ್ಟೆಪ್ಸ್ ಫಾಲೋ ಮಾಡಿದ್ರೆ ನಿಮ್ಮ ಮೊಬೈಲ್ ಟಣ್ ಟಣಾ ಟಣ್ ಅಂತ ಆನ್ ಆಗೋ ಸಾಧ್ಯತೆ ಜಾಸ್ತಿ ಇದೆ. ಯಾವುದೇ ಕಾರಣಕ್ಕೂ ನೀರಿಗೆ ಬಿದ್ದ ನಂತರ ಎರಡು ದಿನದ್ ತನಕ ಮೊಬೈಲನ್ನ ಸ್ವಿಚ್ ಆನ್ ಮಾಡೋಕೆ ಹೋಗ್ಬೇಡಿ. ಯಾಕಂದ್ರೆ ಒಂದೇ ಒಂದ್ ಸಣ್ಣ ಹನಿ ನೀರು ಸೇರ್ಕೊಂಡಿದ್ರೂ ಮೊಬೈಲ್ ಢಮಾರಾಗೋದಂತೂ ಗ್ಯಾರಂಟಿ.