https://resize.indiatvnews.com/en/resize/newbucket/715_-/2017/04/school-uniform-1492683378.jpg

ಆಧುನಿಕ ಸಂಸ್ಕೃತಿ ಬದಲಾವಣೆಯ ಒಂದು ಚಾರಿತ್ರಿಕ ಹಂತವನ್ನು ತಲುಪಿದೆ. ನಮ್ಮ ಕಾಲದ ಕೈಗಾರಿಕಾ ಯುಗದ ವಿಶ್ವ ದೃಷ್ಟಿ ಮತ್ತು ರಿಡಕ್ಶನಿಸ್ಟ್ ಲೋಕ ದೃಷ್ಟಿಗಳೆರಡನ್ನೂ ಸಮಗ್ರ, ಪರಿಸರಾತ್ಮಕ ಮತ್ತು ಬ್ರಹ್ಮಾಂಡದ ಕುರಿತಾದ ವಿಸ್ಮಯಕ್ಕೆ ತೆರೆದುಕೊಂಡಿರುವ ಲೋಕದೃಷ್ಟಿ ತುಂಬಲಿದೆ.

ಇದು ನೆಲೆಗೊಳ್ಳುತ್ತಿರುವುದನ್ನು ಇತ್ತೀಚಿಗಿನ ತಿಂಗಳುಗಳಲ್ಲಿ ನಾನು ಗಮನಿಸಿದ್ದೇನೆ. ಸ್ಥಾಪಿತ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಗ್ರಹಿಕೆಗಳ ಅಂತ್ಯವನ್ನು ಸಾಕಷ್ಟು ಸಂಖ್ಯೆಯ ಬರಹಗಾರರು, ಚಲನಚಿತ್ರ ನಿರ್ಮಾಪಕರು ತಮ್ಮದೇ ದೃಷ್ಟಿಯಿಂದ ಘೋಷಿಸುತ್ತಿದ್ದಾರೆ. ಸ್ಥಾಪಿತ ನಂಬುಗೆಗಳು, ಅಗ್ಗದ ಇಂಧನ ಆಧಾರಿತ ಆರ್ಥಿಕತೆ, ಸಾಮ್ರಾಜ್ಯ, ಒಟ್ಟಾರೆ ಅಮೆರಿಕಾ ಮತ್ತು ನಾಗರಿಕತೆಯ ಅಂತ್ಯದ ಬಗ್ಗೆ ಅವರು ಹೇಳುತ್ತಿದ್ದಾರೆ.

ನಾವೆಲ್ಲಾ ಗುರುತಿಸುವ ಹಾಗೆ ಹವಾಮಾನ ವೈಪರೀತ್ಯ, ತೈಲ ಸಮೃದ್ಧಿ, ಮಣ್ಣು ಮತ್ತು ಇತರ ಸಂಪನ್ಮೂಲಗಳ ನಾಶ, ಪ್ರಬೇಧಗಳ ಅಳಿವು, ವಿಸ್ತೃತ ಬಡತನ ಮತ್ತು ಹಿಂಸೆ ಮುಂತಾದ ಗಂಭೀರ ಸಮಸ್ಯೆಗಳ ಕಾರಣಗಳಿಂದ ನಾವೊಂದು ಜಾಗತಿಕ ಬಿಕ್ಕಟ್ಟಿನ್ನು ಎದುರಿಸುತ್ತಿದ್ದೇವೆ. ಇವಷ್ಟೇ ಅಲ್ಲ, ಇನ್ನೂ ಹಲವು ಸಮಸ್ಯೆಗಳು ನಮ್ಮ ಅಸ್ತಿತ್ವಕ್ಕೇ ಗಂಭೀರ ಅಪಾಯ ತಂದೊಡ್ಡಿವೆ. ತಾಂತ್ರಿಕ ಪರಿಹಾರಗಳೆಲ್ಲಾ ಸಾಕಾಗುವುದಿಲ್ಲ ಎಂಬುದನ್ನು ನಾವು ಗುರುತಿಸಲು ಶುರು ಮಾಡಿದ್ದೇವೆ. ಈ ಬಿಕ್ಕಟ್ಟು ಈ ಭೂಮಿ ಮತ್ತು ಜೀವ ಸಂಕುಲದ ಹಿಂಸಾತ್ಮಕ ಶೋಷಣೆಯನ್ನಾಧರಿಸಿದ ಲೋಕ ದೃಷ್ಟಿಯ ಪರಿಣಾಮದ ನೇರ ಮತ್ತು ಅನಿವಾರ್ಯ ಬಿಕ್ಕಟ್ಟು. ಈ ಲೋಕ ದೃಷ್ಟಿ ಮತ್ತು ಇದನ್ನು ಹೆತ್ತ ಸಂಸ್ಥೆಗಳೆಲ್ಲಾ ನಶಿಸಿಹೋಗಬೇಕು ಎಂದು ನಾವು ಸೂಚಿಸುತ್ತಿದ್ದೇವೆ.

ಈ ಹಿನ್ನೆಲೆಯಲ್ಲಿ ನಾವು ಶಾಲಾಪದ್ಧತಿಯ ಅಂತ್ಯದ ಅಗತ್ಯದ ಬಗ್ಗೆ ಪರಿಶೀಲಿಸಬೇಕು. ಅದಕ್ಕಿಂತಲೂ ಕ್ವಚಿತ್ತಾಗಿ ಅಸ್ತಿತ್ವದಲ್ಲಿರುವ ಅಧಿಕಾರಶಾಹೀ ನಿಯಂತ್ರಣದ ಸಾಮೂಹಿಕ ಶಿಕ್ಷಣದ ವ್ಯವಸ್ಥೆಯನ್ನು ಕೊನೆ ಗಾಣಿಸುವ ಬಗ್ಗೆ ಯೊಚಿಸಬೇಕು.ವರ್ತಮಾನದ ಚಿಂತಕರ ಪ್ರಕಾರ, ಈಗ ಅಂತ್ಯ ಕಾಣುತ್ತಿರುವ ಸಾಂಸ್ಕೃತಿಕ ಚರಿತ್ರೆಯ ಯುಗಕ್ಕೆ ಈ ಆಧುನಿಕ ಶೈಕ್ಷಣಿಕ ವ್ಯವಸ್ಥೆಗಳು ಸೇರಿದ್ದು ಅವು ಈಗ ಅಂತ್ಯಗೀತೆ ಹಾಡುತ್ತಿವೆ. ಯಾಕೆಂದರೆ ಅದು ಮೂಲತಃ ಮತ್ತು ಆತ್ಯಂತಿಕವಾಗಿ ಸುಸ್ಥಿರವೇ ಅಲ್ಲ.

ಅಧಿಕಾರವನ್ನು ಶಕ್ತಿಶಾಲೀ ನಿಯಂತ್ರಕ ಸಂಸ್ಥೆಗಳ ಕೈಯಲ್ಲಿ ಕ್ರೋಢೀಕರಿಸುವ ಸಾಂಸ್ಕೃತಿಕ ಚಾಲನೆಯನ್ನು ರಿಯಾನ್ ಎಸ್ಲರ್ ದಬ್ಬಾಳಿಕೆಗಾರನ ತಾತ್ವಿಕ ಭೂಮಿಕೆ ಎಂದು ಕರೆಯುತ್ತಾರೆ. ಪಾಲುದಾರಿಕೆಯ ಲೋಕದೃಷ್ಟಿ ಬಗ್ಗೆ ಅದಕ್ಕೆ ತಾತ್ಸಾರ. ಈ ಪಾಲುದಾರಿಕೆಯ ಲೋಕದೃಷ್ಟಿ ವ್ಯಕ್ತಿಮೌಲ್ಯಕ್ಕೆ, ವಿವಿಧತೆಗೆ ಸಾವಯವ ಬೆಳವಣಿಗೆಗೆ ಬೆಲೆ ನೀಡುತ್ತದೆ. ಭಿನ್ನಮತೀಯ ಶಿಕ್ಷಣತಜ್ಞರು ಕಳೆದ ಎರಡು ನೂರು ವರ್ಷಗಳಿಂದ  ತೋರಿಸಿಕೊಟ್ಟ ಹಾಗೆ, ಈ ಶಾಲಾ ಶಿಕ್ಷಣ – ಪ್ರಭುತ್ವ, ಸಮಾಜ ಮತ್ತು ವಾಣಿಜ್ಯ ಹಿತಾಸಕ್ತಿಗಳಿಗೆ ಮಣೆ ಹಾಕುತ್ತವೆಯೇ ಹೊರತು, ತರುಣ ಮಾನವರ ಅಗತ್ಯ, ಆಸಕ್ತಿಗಳನ್ನೂ ಪರಿಗಣಿಸಿಲ್ಲ; ಮನುಷ್ಯರ ಪರಿಸರವನ್ನೂ ಪರಿಗಣಿಸಿಲ್ಲ. ಯಾವ ಮಗುವೂ ಹಿಂದುಳಿಯ ಕೂಡದು ಎಂಬ ಕಾರ್ಯಕ್ರಮ ನಿಜಕ್ಕೂ ಮಕ್ಕಳ ಬಗ್ಗೆ ಇರುವುದಲ್ಲ. ಅದು ಕಾರ್ಪೋರೇಟ್ ಪ್ರಭುತ್ವದ ಅಧಿಕಾರದ ಕ್ರೋಢೀಕರಣದ ಬಗ್ಗೆ ಇದೆ ಅಷ್ಟೇ.

ಶೈಕ್ಷಣಿಕ ಭಿನ್ನಮತೀಯರನ್ನು ರಮ್ಯ ಕನಸುಗಾರರೆಂಬಂತೆ ಬಿಂಬಿಸಲಾಗಿದೆ. ಆಧುನಿಕ ದಕ್ಷ ನಿರ್ವಹಿತ ಕೈಗಾರಿಕಾ ಸಮಾಜವನ್ನು ಕಟ್ಟುವ ಪ್ರಾಮುಖ್ಯತೆ ಅರಿಯದವರು; ಅತೀ ಮಗು ಕೇಂದ್ರಿತ  ಮಂದಿ ಎಂಬಂತೆ ಬಿಂಬಿಸಲಾಗಿದೆ. ಒಂದು ಮಹತ್ವದ ಮುಖಾಮುಖಿಯಲ್ಲಿ ಅಮೆರಿಕಾದ ಸಾರ್ವಜನಿಕ ಶಾಲಾ ವ್ಯವಸ್ಥೆಯ ಶಿಲ್ಪಿಗಳಲ್ಲೊಬ್ಬರಾದ ಹೊರೇಸ್ ಮಾನ್ ಶಿಕ್ಷಕರ ಸಮ್ಮೇಳನವೊಂದರಲ್ಲಿ ತತ್ವಜ್ಞಾನಿ, ಶಿಕ್ಷಣತಜ್ಞ ಬ್ರಾನ್ಸನ್ ಅಲ್ಕಾಟ್ ಅವರನ್ನು ಭಾಷಣ ಮಾಡಲು ಬಿಡಲಿಲ್ಲ; ಅವರ ಅಭಿಪ್ರಾಯಗಳು ಪ್ರಭುತ್ವದ ಅಸ್ತಿತ್ವಕ್ಕೆ ವಿರೋಧವಾಗಿವೆ ಅನ್ನುವ ಕಾರಣಕ್ಕೆ.

ಇಂದು ಪ್ರಾಕೃತಿಕ ಜಗತ್ತು ಮತ್ತು ಮನುಜ ಕುಲದ ಮೇಲೆ ಈ ಕೈಗಾರಿಕಾ ಪ್ರಭುತ್ವ ನಡೆಸಿರುವ ಹಿಂಸೆ ಮತ್ತು ವಿನಾಶವನ್ನು ಒಪ್ಪಿಕೊಳ್ಳುವ ಮಟ್ಟಕ್ಕೆ ನಾವು ಬಂದಿದ್ದೇವೆ. ಈ ಪ್ರಭುತ್ವದ ಅಸ್ತಿತ್ವಕ್ಕೆ ವಿರೋಧವಾಗಿರೋದು ತೀರಾ ರಮ್ಯ ನಿಲುವು ಎಂದು ಅನ್ನಿಸುತ್ತಿಲ್ಲ. ಈ ಯಜಮಾನಿಕೆಯ ತಾತ್ವಿಕ ನೆಲಗಟ್ಟಿನ ಅಂತ್ಯವನ್ನು ಸ್ವಾಗತಿಸುವುದು ನಿಜಕ್ಕೂ ಏಕೈಕ ವಾಸ್ತವಿಕ ಮತ್ತು ನೈತಿಕ ಪ್ರತಿಕ್ರಿಯೆ ಎನ್ನಬಹುದು.

ಮನುಷ್ಯ ಚೇತನವನ್ನು ಹತ್ತಿಕ್ಕಿ ಅದನ್ನು ನಿರ್ವಹಿಸುವ ಶಿಕ್ಷಣ ವ್ಯವಸ್ಥೆಯನ್ನು ಸಹಿಸಲು ಸಾಧ್ಯವಿಲ್ಲ. ಅದು ವ್ಯಕ್ತಿಗತ ಚೈತನ್ಯ ಮತ್ತು ಸೃಜನಶೀಲತೆಯನ್ನು ಗ್ರಾಹಕತೆ ಮತ್ತು ಉದ್ಯೋಗ ಶೀಲತೆಗೆ ಇಳಿಸಿಬಿಡುತ್ತೆ.

ಪರೀಕ್ಷೆ, ಗ್ರೇಡಿಂಗ್; ವಯಸ್ಸು ಮತ್ತು ಅಕಡೆಮಿಕ್ ಸಾಧನೆ ಮೇಲೆ ತರುಣರನ್ನು ವಿಭಾಗಿಸುವುದು; ಇಡೀ ಅನುಭವವನ್ನು ಅಧಿಕೃತ ಪಠ್ಯಪುಸ್ತಕಗಳ ಅನುಭವವಾಗಿ ಸಾರಾಂಶಗೊಳಿಸುವುದು, ಶಾಲೆಗಳಲ್ಲಿ ಅಧಿಕಾರದ ವ್ಯವಸ್ಥೆಯನ್ನು ಹೇರುವುದು ಇವೆಲ್ಲ್ಲಾ ಶೋಷಣಾತ್ಮಕ ಕೈಗಾರಿಕಾ ಯುಗದ ಯಜಮಾನೀ ತಾತ್ವಿಕ ಭೂಮಿಕೆಯನ್ನು ಹೇರುವುದಕ್ಕೆ  ಆಗಿರುತ್ತದೆ.

ಶಾಲೆಗಳನ್ನು ನಡೆಸುತ್ತಿರುವ ರಾಜಕೀಯ, ವಾಣಿಜ್ಯ ಮುಖಂಡರಿಗೆ ತಮ್ಮ ಪ್ರಾಥಮಿಕ ಗುರಿ ಏನೆಂಬುದರ ಬಗ್ಗೆ ಸಷ್ಟತೆ ಇದೆ. ಶಿಸ್ತು, ದಕ್ಷತೆ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿ ಅವರ ಗುರಿ. ಇಂದು ಮಕ್ಕಳಿಗೆ  ಆಡಲು ಸಮಯ ನಿರಾಕರಿಸಲಾಗುತ್ತಿದೆ. ಶಾಲೆಯಲ್ಲಿ ಕೂರುವ ಸಮಯ ಮತ್ತು ಹೋಮ್ವರ್ಕ್ ಅವರನ್ನು ಪಳಗಿದ ನಾಗರಿಕರನ್ನಾಗಿಸುವ ದಕ್ಷ ದಾರಿಗಳಾಗಿವೆ. ಆದಿಮ ಅರಣ್ಯಗಳ ನಾಶದಷ್ಟೇ ಘೋರ ಇದು.

ಸಮಗ್ರ ಲೋಕದೃಷ್ಟಿಯೊಂದನ್ನು ನಾವು ಪೋಷಿಸಬೇಕಾಗಿದೆ. ಪರಿಸರದ ತತ್ವಗಳನ್ನು ಗೌರವಿಸುವ, ಆಧ್ಯಾತ್ಮಿಕ ಒಳನೋಟಗಳ ಸಾಧ್ಯತೆ ಇರುವ, ವ್ಯಕ್ತಿಯ ವಿಶಿಷ್ಟ ಸಾಧ್ಯತೆಗಳಿಗೆ ನೀರೆರೆವ ವಿಭಿನ್ನ ಧಾರೆಗಳಿರುವ ಸಮುದಾಯವು ಪರಸ್ಪರ ಕೈಜೋಡಿಸುವ ಲೋಕ ದೃಷ್ಟಿಯೊಂದನ್ನು ನಾವು ಪೋಷಿಸಬೇಕಿದೆ.
ಸಮಗ್ರ ಶಿಕ್ಷಣ ಮಕ್ಕಳನ್ನು ಬೆಳೆಸುವ ಅವರಿಗೆ ಶಿಕ್ಷಣ ನೀಡುವ ಹತ್ತಾರು ವಿಧಾನಗಳಿಗೆ ಈ ಮೌಲ್ಯಗಳನ್ನು ಅನ್ವಯಿಸುತ್ತದೆ. ಸ್ಕೂಲಿಂಗ್ ಇಲ್ಲದ ಸ್ವಾತಂತ್ರ್ಯದ ಖುಷಿಯಿಂದ ಹಿಡಿದು ವಾಲ್ಡ್ರಾಫ್ ಶಾಲೆಯ ಲಯಬದ್ಧ ದಿನದವರೆಗೂ.

ಸಂಸ್ಕೃತಿ ಸ್ಥಿತ್ಯಂತರಗೊಂಡಾಗ ಈ ಸಮಗ್ರ ಲೋಕ ದೃಷ್ಟಿಯು ತಾಂತ್ರಿಕ ಶಾಹಿಯ ಸ್ಥಾನ ತುಂಬಲಿದೆ. ಮಕ್ಕಳು ಮತ್ತು ಕುಟುಂಬಗಳಿಗೆ ವಿವಿಧ ಬಗೆಯ ಕಲಿಕೆಯ ಪರಿಸರಗಳು ಕೈಗೆಟಕುವಂತೆ ಇರುತ್ತವೆ. ಹಾಗೇ ತಮಗೆ ಬೇಕಾದ ವೈಯಕ್ತಿಕ ವಿಧಿಯನ್ನು ಬೆಳೆಸಿಕೊಳ್ಳುವ ಮುಕ್ತ ಅವಕಾಶ ಇರುತ್ತದೆ.

ಅಳೆದು ನಿರ್ವಹಣೆಗೊಳಗಾಗುವ ಬದಲು, ಕಲಿಕೆಯೆಂಬುದು ಹೆಚ್ಚು ಸಾವಯವ ಮತ್ತು ಮಕ್ಕಳ ಬೆಳವಣಿಗೆಯ ಅಗತ್ಯಗಳಿಗೆ; ಪ್ರಕೃತಿಯ ಸುಸ್ಥಿರ ವಿನ್ಯಾಸಗಳಿಗೆ ತಾಳ ಮೇಳ ಹೊಂದಿರುತ್ತೆ.

ಇದು ಸ್ಕೂಲಿಂಗ್ನ ಅಂತ್ಯ ಮತ್ತು ನಿಜ ಶಿಕ್ಷಣದ ಅನ್ವೇಷಣೆ.