ಭಾಳ ಮಂದೀಗೆ ಎಸ್ಟೋ ಸಿಚುವೇಶನ್ನೊಳಗ ಅವರ ಮನಸ ಅದೆಸ್ಟ ಜೋರಂಗ ಅಯ್ಯೋ ನನ್ನಿಂದಾಗದಿಲ್ಲ ಅಂತ ವದರಿ ವದರಿ ಹೇಳಾಕತ್ತಿದ್ದರೂ ಸೈತ ಬ್ಯಾಜಾರ ಮಾಡಿಕೆಂಡ ಓಕೆ ಅಂದ ಬಿಡತಾರ. ನಿಮಗೂ ಸೈತ ಇದ ಪ್ರಾಬ್ಲೆಮ್ಮನ? ಆದರ ಈ ರೀತಿ ಹೇಳದರಿಂದ ನಾವು ನಮ್ಮನ್ನ ನೋಯಿಸಿಗೆಂಡರತವಿ ಅಂತ ವಿಚಾರಾನ ಮಾಡಂಗಿಲ್ಲ.
ಬ್ಯಾರೇದರೂ ನಮ್ಮ ಹಂಗ ಅಂತನೋ, ಇಲ್ಲಾ ಸಿಚುವೇಶನ್ನಿನ ಒತ್ತಡಕ್ಕನೋ ನಿಮ್ಮ ಮನಸಿನ ವಿರುದ್ದ ತಗಳ್ಳಾಕ ಮುಂದಾಗಿ ಬಿಡತೀರಿ. ಕೆಲವೊಂದ ಸಲಾ ಇದರಿಂದ ಹೊರಗ ಬರಾಕ ಯಾರದಾದ್ರೂ ಹೆಲ್ಪನ ಎಕ್ಸಪೆಕ್ಟ್ ಮಾಡಿದರೂ ಆಶ್ಚರ್ಯ ಇಲ್ಲ. ನಿಮಗಿಂತ ಹೆಚಿಗಿ ಬ್ಯಾರೇದರ ಭಾವನೆಗೂಳ ನಿಮಗ ತ್ರಾಸ ಕೊಡಬೋದು.
ಸೈಕಾಲಜಿ ಪ್ರಕಾರ ನಾವ ಯಾವ ರೀಜನ್ನಿಗೆ “ಇಲ್ಲಾ” ಅನ್ನಾಕ ಹಿಂಜರೀತೇವಿ ಅಂತ ತಿಳಕಳ್ಳನ ಬರ್ರಿ.
1. ಇಲ್ಲಾ ಅಂದರ ಅವರಿಗೆ ನೋವಾಕ್ಕತಿ ಅಂತ ಹಿಂಜರೀತೇವಿ
ಅಯ್ಯೋ! ನಾನ ಇಲ್ಲಾ ಅಂದಬಿಟ್ಟರ ಅವರಿಗೆ ತೊಂದ್ರಿ ಆಕ್ಕತಿ. ಅವರ ಏನೋ ಆಸೆ ಇಟಗಂಡ ನನ್ನ ಹಂತೇಲೆ ಬಂದಾರ, ಆ ಆಸೆ ಈಡೇರಸದ ನನ್ನ ಕರ್ತವ್ಯ ಅಲ್ಲನ? ಹಿಂಗ ಅಂದಕಳ್ಳದರಿಂದ ನೀವ ಇಲ್ಲಾ ಅನ್ನಾಕ ಹಿಂಜರೀತೀರಿ.
2. ನಮ್ಮನ ಅವರ ಇಸ್ಟಾ ಪಡದಂಗ ಹೋದರ ಅನ್ನ ಹೆದರಿಕಿಂದಾ
ಫಸ್ಟನೇ ಪಾಯಿಂಟಿನ್ಯಾಗ ಹೇಳಿದ ಹಂಗನ ಇದೂ ಸೈತ. ಆದರ ಇಲ್ಲೆ ನಿಮ್ಮ ಮತ್ತ ಅವರ ರಿಲೇಶನ್ನಿನ ಮುಂದಿನ ಹಂತದ ಬಗ್ಗೆ ವಿಚಾರ ನಿಮಗ. ಇಲ್ಲ ಅಂತನ ಇದ್ದರ ಅವರ ನಿಮ್ಮನ ಇಸ್ಟಾ ಪಡದಂಗ ಹೋದರ?
3. ನಮ್ಮನ ಅವರು ಸ್ವಾರ್ಥಿ ಅಂತ ಅಂದಕಂಡರ ಅನ್ನ ಹೆದರಿಕಿಂದ
ಇಲ್ಲ ಅನ್ನದ ಯಾವಾಗ ಹೇಳ್ರಿ? ನಾವ ಏನಾರಾ ಕೆಲಸಾ ಮಾಡಬೇಕಾದಾಗ. ಯಾರರ ಏನರ ಕೇಳಿಕೆಂಡ ಬಂದಾಗ ಆ ಕೆಲಸ ಮಾಡದಿಲ್ಲ ಅಂದರ ಅವರ ನಮ್ಮನ ಸ್ವಾರ್ಥಿ ಅಂದಕಾಬೋದಲ್ಲಾ? ಇದರ ಸಲವಾಗಿನೂ ನಾವ ಒಮ್ಮಮ್ಮೆ ಇಲ್ಲ ಅನ್ನಂಗಿಲ್ಲ.
4. ಬ್ಯಾರೇದರ ನೋವನ ನಾವ ನಮ್ಮದ ಅಂತ ಕನ್ಸಿಡರ್ ಮಾಡದರಿಂದ
ಒಬ್ಬೊಬ್ಬರ ಇರತಾರ. ಅವರಿಗೆ ಬೀದ್ಯಾಗ ಹೋಗರ ನೋವೆಲ್ಲಾ ತಮ್ಮದ ಅನಸತಿರ್ತತಿ. ಅದಕ್ಕ ಅವರ ಏನ ಕೇಳಿದರೂ ಹೂಂ ಅಂದ ಆಮ್ಯಾಲ ಕಸ್ಟಕ್ಕ ಸಿಕ್ಕ ಹಕ್ಕೆಂತಾರ!
5. ಸಮಾಜದಾಗ ನಮ್ಮ ಬಗ್ಗೆ ಛೊಲೋ ಒಪೀನಿಯನ್ ಮೂಡಬೇಕ ಅನ್ನ ಆಸೆಯಿಂದ
ಸಮಾಜದಾಗ ಛೊಲೋ ಹೆಸರ ಮಾಡರು, ಕೆಲಸಾನ ಮಾಡಿ ತೋರಿಸೋರು. ಅದು ಆಗಲ್ಲ, ಇದು ಆಗಲ್ಲ, ಇಲ್ಲ ಇಲ್ಲ ಅಂತನ್ನೋರ ಅಲ್ಲ. ನಾನೂ ಸಮಾಜದಾಗ ಛೊಲೋ ಹೆಸರ ಮಾಡಬೇಕ ಅಂತ ಯಾದ್ಯಾದಕರ ಹೂಂ ಅಂದ ಆಮ್ಯಾಲ ಕಸ್ಟಕ್ಕ ಸಿಕ್ಕ ಹಕ್ಕೆಂತವಿ ಒಂದೊಂದ ಸಲಾ.
6. ನಾವ ಜಗಳಗಂಟರು ಅಂತ ತಿಳಕಂಡರ ಅನ್ನ ಹೆದರಿಕಿ ಇದ್ದರ
ಇಂತಾದ ಮಾಡಿಕೊಡ್ರಿ ಅಂತ ಕೇಳಿದಾಗ ವಿರುದ್ದಾಗಿ ಮಾತಾಡದ ತಪ್ಪ ಅಂದಕಂಡಿದ್ದರ ನಿಮಗ ಇಲ್ಲ ಅನ್ನಾಕ ಆಗಂಗಿಲ್ಲ. ಹಂಗ ಹೇಳದೇನೂ ಜಗಳ ಅಲ್ಲ, ಆದರ ನಿಮಗ ಹಂಗ ಅನಸತತಿ. ಅದಕ್ಕ ನೀವ ಇಲ್ಲ ಅನ್ನಾಕ ಹಿಂಜರೀತೀರಿ.
7. ಎದರಿಗೀನ ಮನಿಶಾ ನಿಮ್ಮನ ವಿಚಿತ್ರಾಗಿ ನೋಡಬಾರದ ಅಂತ
ಏನಾರ ಕೇಳಿಕೆಂಡ ಬಂದರ ಇಂವಾ ಹೂಂ ಅಂತಾನ ಅಂದಕಂಡಿರತಾರ. ಆಮ್ಯಾಲ ನೀವ ಇಲ್ಲ ಅಂದಾಗ ಅವರೇನರ ನಿಮ್ಮನ “ಇಂವಾ ವಿಚಿತ್ರ” ಅಂದ ಬಿಟ್ಟರ? ಅದಕ್ಕೂ ಹೂಂ ಅಂದ ಆಮ್ಯಾಲ ಕಸ್ಟಾಪಡತೀರಿ.
8. ಇಲ್ಲ ಅನ್ನ ಬದ್ಲೀ ಒಂದೀಟ ಕಸ್ಟಾ ಪಟ್ಟರಾತು ಅಂತ ಅಂದಕಳ್ಳದರಿಂದ
ಕೆಲವರಿಗೆ ತಮ್ಮ ಲಿಮಿಟ್ಟನ ಗೊತ್ತಿರಂಗಿಲ್ಲ. ಮಾಡಬಾರದಸ್ಟ ಕೆಲಸಾ ಮಾಡಿ ಆಮ್ಯಾಲ ಸುಸ್ತಾಗಿ ಒಂದ ದಿನಾ ಮಠಾ ಹತ್ತಿ ಹೊಕ್ಕಾರ. ಅಂಥಾರಿಗೆ ಯಾದಕೂ ಇಲ್ಲ ಅನ್ನಾಕ ಬರಲ್ಲ. ಇನ್ನೊಂದ ಸೊಲ್ಪ ಕೆಲಸಾ ಮಾಡಿದರಾತು ಅನ್ನ ಜನಾ ಅವರ.
ಓದಿದ್ದಾತನ? ಇನ್ನ ಮುಂದಿನ ಸಲಾ ನಿಮಗ ಇಲ್ಲ ಅನಬೇಕು ಅನಿಸಿದಾಗ ಅಂದ ನೋಡತೀರೇನ?
ಇಸ್ಟೊತ್ತೂ ಹೇಳಿದ್ದರಾಗ ನಿಮ್ಮನ ನೀವ ಸೊಲ್ಪರ ಕಂಡರೇನ? ಹಂಗಾದ್ರ ನೀವ ನಿಮ್ಮ ಮನಸಿನ್ಯಾಗನ ಒಂದ ಯುದ್ಧಾ ಮಾಡಬೇಕಾಗಬೋದು. ನಿಮಗ ಯಾವ ಕಾರಣಕ್ಕ ಎದರಿಗಿನ ಮನಿಶಾಗ ಇಲ್ಲಾ ಅನ್ನಾಕ ಆಗಾಕತ್ತಿಲ್ಲ ಅಂತ ತಿಳಕರ್ರಿ. ಅದರಿಂದ ಆದಸ್ಟ ಜಲ್ದೀ ಹೊರಗ ಬರಾಕ ಟ್ರಾಯ್ ಮಾಡ್ರಿ. ನೀವ ನಿಸ್ಟೂರಾಗಿ ಇಲ್ಲ ಅಂತ ಹೇಳಾಕ ಸುರು ಮಾಡಿದ ದಿನಾ ನಿಮ್ಮ ಸೆಲ್ಫ್ ಕಾನ್ಫಿಡೆನ್ಸ್ ಹೆಚಿಗಿ ಆಗಿ ಇಸ್ಟ ದಿನಾ ನೀವ ಬ್ಯಾಡಾಗಿದ್ದ ಜನರಿಂದ ದೂರ ಆಗಾಕನೂ ಸಾಧ್ಯಾಕ್ಕತಿ. ಜನಾ ತಮಗ ತಾವ ನಿಮ್ಮನ ಅದ ಮಾಡ ಇದ ಮಾಡ ಅಂತ ಕೇಳದ ಕಮ್ಮಿ ಮಾಡತಾರ, ನೀವ ಏನ ಅನ್ನದ ಅವರೀಗೂ ಅರ್ಥಾಕ್ಕತಿ.