ಬ್ರಹ್ಮಗ ಒಂದು ಹಗಲು/ರಾತ್ರಿ ಅಂದ್ರ ನಮ್ಮ 167,389,960,000 ವರ್ಷದ ಜೀವನಕ್ಕ ಸರಿಯಂತ. ಬ್ರಹ್ಮ ತಾನು ಜೀವಿಸುವಷ್ಟು ವರ್ಷದಾಗ 36,000 ಬ್ರಹ್ಮಾಂಡಗಳನ್ನ ಸೃಷ್ಟಿಸ್ತಾನಂತ. ಬ್ರಹ್ಮನ ಪ್ರತಿದಿವಸಕ್ಕೂ (ಬ್ರಹ್ಮ ಕಲ್ಪ) 14 ಮನ್ವಂತರಗಳದಾವು. ಪ್ರತೀ ಮನ್ವಂತರದಾಗೂ 72 ಚತುರ್ಯುಗಳದಾವು. ಪ್ರತಿ ಚತುರ್ಯುಗದಾಗೂ 4 ಯುಗಗಳು – ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತ ಕಲಿಯುಗ. ಈಗ ನಾವೆಲ್ಲಾ ಇರೋದು ಕಲಿಯುಗದಾಗ.

ಕಲಿಯುಗದೊಳಗ ನಮ್ಮ ಸುತ್ತಮುತ್ತಾ ಏನೇಲ್ಲಾ ಬದಲಾಕ್ಕತಿ ಅಂತ 5,000 ವರ್ಷಗಳ ಹಿಂದ ಭಾಗವತ ಪುರಾಣದೊಳಗ ಬರದೈತಿ. ಅವು ಈಗಿನ ಕಾಲಕ್ಕ ಎಷ್ಟರ ಮಟ್ಟಿಗೆ ಸರಿ ಅದಾವು ಅನ್ನೋದನ್ನ ನೀವೇ ಓದಿ ನಿರ್ಧಾರ ಮಾಡ್ರಿ…

1. ದುಡ್ಡೇ ದೊಡ್ಡಪ್ಪ ; ಒಳ್ಳೆಯ ವ್ಯಕ್ತಿತ್ವ ಅಂದ್ರ ಯಾವ್ದು, ಒಳ್ಳೆಯ ಗುಣ ಅಂದ್ರ ಯಾವ್ದು, ನ್ಯಾಯ ಅಂದ್ರ ಯಾವ್ದು ಅನ್ನೋದು ಕಲಿಯುಗದೊಳಗ ದುಡ್ಡಿದ್ದವನಿಂದಾನ ಇವೆಲ್ಲಾವು ನಿರ್ಧಾಕ್ಕತಿಶ್ರೀಮದ್ಭಾಗವತ  12.2.2​

2. ಗಂಡಮಕ್ಕಳು ಮತ್ತ ಹೆಣ್ಣಮಕ್ಕಳು ಬರೆ ದೈಹಿಕ ಸುಖಕ್ಕಷ್ಟ ಕೂಡಿ ಇರ್ತಾರ ; ಗಂಡ್ಸಿನ ಗಂಡಸ್ತನ, ಹೆಂಗ್ಸಿನ ಹೆಂಗಸ್ತನ ಎರಡಕ್ಕೂ ಲೈಂಗಿಕ ಅರ್ಥಗಳಷ್ಟ ಉಳ್ಕೊಂಡಿರ್ತತಿ; ವ್ಯಾಪಾರದಾಗ ಮೋಸ-ವಂಚನೆ ಮುಖ್ಯಾಗಿರ್ತೈತಿ; ಜನಿವಾರ ಹಾಕ್ಕೊಂಡ್ರ ಸಾಕು, ಅವರನ್ನ ಬ್ರಾಹ್ಮಣರು ಅಂತ ಕರೀತಾರ – ಶ್ರೀಮದ್ಭಾಗವತ 12.2.3

3. ಭೂಮಿ ಮ್ಯಾಗ ವಂಚಕರ ಜನಸಂಖ್ಯೆ ಹೆಚ್ಚಾಗಿ, ಯಾರ ಹೆಚ್ಚ ಬಲಿಷ್ಠರು ಅಂತ ತೋರಿಸ್ಕೊಂತಾರೋ ಅವರ ರಾಜಕೀಯವಾಗಿ ಮ್ಯಾಲೇರ್ತಾರ -ಶ್ರೀಮದ್ಭಾಗವತ 12.2.7

4. ಎಲ್ಲಾ ಕಡೆ ತಂಡಿ, ಗಾಳಿ, ಜಳಾ, ಮಳೆ ಮತ್ತ ಮಂಜಿನಿಂದ ಜನಕ್ಕ ಸಮಸ್ಯೆಯಾಕ್ಕತಿ; ಜಗಳ, ಹಸಿವು, ಬಾಯಾರಿಕೆ, ರೋಗ-ರುಜಿನಗಳು, ಇವುಗಳ ಹೆದರಿಕಿ ಹೆಚ್ಚಾಕ್ಕತಿ – ಶ್ರೀಮದ್ಭಾಗವತ 12.2.10

5. ಮಕ್ಕಳು ವಯಸ್ಸಾದ ತಂದಿ-ತಾಯಿನ ಜೋಪಾನ ಮಾಡಂಗಿಲ್ಲ – ಶ್ರೀಮದ್ಭಾಗವತ 12.3.42

6. ಊರನ್ಯಾಗೇಲ್ಲಾ ಕಳ್ಳರ ತುಂಬ್ಕೊಂಡಿರ್ತಾರ; ನಾಸ್ತಿಕರು ವೇದಗಳಿಗೆಲ್ಲಾ ಅರ್ಥ ಹೇಳ್ತಾರ; ರಾಜಕೀಯ ನಾಯಕರು ಪ್ರಜೆಗಳನ್ನ ಹೆಚ್ಚುಕಡಿಮಿ ನುಂಗಿ ಹಾಕ್ಕಾರ; ಚಿಂತಕರು ಅನಿಸ್ಕೊಂಡೊರು ತಮ್ಮ ಹೊಟ್ಟಿ ಪೂಜೆ ಮಾಡ್ಕೋಂತಾರ – ಶ್ರೀಮದ್ಭಾಗವತ 12.3.32

7. ಆಳುಗಳೆಲ್ಲಾ ಬರೆ ರೊಕ್ಕಕ್ಕಷ್ಟ ಕೆಲಸಾ ಮಾಡ್ತಾರ. ಆಳು ಕೆಲಸಾ ಮಾಡದಂಗ ಇದ್ದರ ಯಜಮಾನ ಒಂದ ಕ್ಷಣಾನೂ ಕೆಲಸಕ್ಕಿಟ್ಕೊಳಂಗಿಲ್ಲಶ್ರೀಮದ್ಭಾಗವತ 12.3.36

8. ನಾಲ್ಕ ಕಾಸಿನ ಸಲವಾಗಿ ಜನ ಒಬ್ರನೊಬ್ರು ದ್ವೇಷಾ ಮಾಡ್ತಾರಹಣಕ್ಕಾಗಿ ತಮ್ಮ ಜೀವಾ ಕೊಡಾಕೂ ತಯಾರಿರ್ತಾರ, ತಮ್ಮ ಸಂಬಂಧಿಕರನ್ನೂ ಸಹ ಕೊಲ್ಲಾಕೂ ತಯಾರಿರ್ತಾರ – ಶ್ರೀಮದ್ಭಾಗವತ 12.3.41

9. ದೇವರ ಹೆಸರಿನ್ಯಾಗ ಕಾವಿಬಟ್ಟಿ ಉಟ್ಕೊಂಡು ಜನ ರೊಕ್ಕಾ ಮಾಡ್ಕೊಂತಾರ; ಧರ್ಮ ಅಂದ್ರ ಅದರ ಅರ್ಥ ಏನು ಅಂತ ಗೊತ್ತಿಲ್ಲದೇ ಇರೋರು ದೊಡ್ಡ ದೊಡ್ಡ ಸ್ಥಾನಕ್ಕೆರಿ ಧರ್ಮದ ಬಗ್ಗೆ ಪ್ರವಚನ ಮಾಡ್ತಾರ – ಶ್ರೀಮದ್ಭಾಗವತ 12.3.38

10. ಮನುಷ್ಯಾನ ಆಯಸ್ಸು 50 ವರ್ಷಕ್ಕ ಇಳಿತೈತಿ – ಶ್ರೀಮದ್ಭಾಗವತ 12.2.11

11. ಧರ್ಮ, ಸತ್ಯ, ಶುಚಿತ್ವ, ಸಹನೆ, ದಯೆ, ಕರುಣೆ, ದೈಹಿಕ ಶಕ್ತಿ ಮತ್ತ ನೆನಪಿನ ಶಕ್ತಿ ದಿನದಿನಕ್ಕೆ ಕಡಿಮಿ ಆಕ್ಕೊಂತ ಹೊಕ್ಕತಿ; ಇದು ಕಲಿಯ ಪ್ರಭಾವ – ಶ್ರೀಮದ್ಭಾಗವತ 12.2.1

ಇವೆಲ್ಲಾ ಎಷ್ಟ ನಿಜಾ ಅದಾವು ಅಂತ ನಿಮಗ ಅನಸ್ವಲ್ತಾ?

ಇರ್ಲಿ ಇರ್ಲಿ, ಭಾಳ ಬ್ಯಾಸರಾ ಮಾಡ್ಕೊಬ್ಯಾಡ್ರಿ. ಕೃಷ್ಣನ ನಾಮಸ್ಮರಣೆ ಮಾಡಿದ್ರ ಭವಬಂಧನದ ಜಂಜಾಟದಿಂದ ಮುಕ್ತಿ ಸಿಗತೈತಿ ಅಂತಾ ಅದ ಶ್ರೀಮದ್ಭಾಗವತದೊಳಗ ಬರದತಿ (12.2.51).

ಚಿತ್ರಗಳು: ಮೂಲ