ಸಾಮಾನ್ಯವಾಗಿ ಸಂಕ್ರಾಂತಿ ದಿವಸದಿಂದ ಉತ್ತರಾಯಣ ಶುರು ಆಗುತ್ತೆ ಅಂತ ಜನ ತಿಳಿದಿರ್ತಾರೆ. ಆದರೆ ಇದು ಸರಿಯಲ್ಲ.

1. ಉತ್ತರಾಯಣ ಅಂದ್ರೇನು?

ತಿಯರಿ ಬೇಡ. ನೀವು ಸೂರ್ಯನ್ನ ದಿನಾ ಬೆಳಗ್ಗೆ 7 ಗಂಟೆಗೆ (ಅಥವಾ ಯಾವುದೇ ಒಂದು ನಿಗದಿತ ಸಮಯಕ್ಕೆ) ಎಲ್ಲಿದಾನೆ ಅಂತ ನೋಟ್ ಮಾಡ್ಕೋತಾ ಬನ್ನಿ. ದಿನ ಕಳೀತಿದ್ದಂಗೆ ಅವನು ಇಲ್ಲಾ ಉತ್ತರದ ಕಡೆಗೆ ಹೋಗ್ತಾನೆ, ಇಲ್ಲಾ ದಕ್ಷಿಣದ ಕಡೆಗೆ ಹೋಗ್ತಾನೆ. ಉತ್ತರದ ಕಡೆಗೆ ಹೋಗ್ತಿದ್ದರೆ ಈಗ ಉತ್ತರಾಯಣ ಕಾಲ ಅಂತ ಅರ್ಥ. ದಕ್ಷಿಣದ ಕಡೆಗೆ ಹೋಗ್ತಾ ಇದ್ದರೆ ಈಗ ದಕ್ಷಿಣಾಯನ ಕಾಲ ಅಂತ ಅರ್ಥ. ಆಯನ ಅಂದ್ರೆ ಪ್ರಯಾಣ.

2. ಸೂರ್ಯ ಯೂಟರ್ನ್ ಹೊಡೀತಾನಾ?

ಹೌದು. ದಕ್ಷಿಣಾಯನ ಕಾಲದಿಂದ ಉತ್ತರಾಯಣ ಕಾಲಕ್ಕೆ (ಅಥವಾ ಅದರಿಂದ ಇದಕ್ಕೆ) ಬದಲಾವಣೆ ಆಗಬೇಕಾದರೆ ಒಂದಲ್ಲ ಒಂದು ದಿನ ಸೂರ್ಯ ಯೂಟರ್ನ್ ಹೊಡೀಬೇಕು ತಾನೆ? ಹೊಡೆದೇ ಹೊಡೀತಾನೆ. ಉತ್ತರಾಯಣ ಶುರುವಾಗುವ ದಿನ ಅಂತ ಒಂದಿರುತ್ತೆ, ದಕ್ಷಿಣಾಯನ ಶುರುವಾಗುವ ದಿನ ಅಂತ ಒಂದಿರುತ್ತೆ. ಈ ಎರಡು ದಿನಗಳೂ ವರ್ಷಕ್ಕೆ ಒಂದೊಂದು ಬರ್ತವೆ.

3. ಉತ್ತರಾಯಣದ ದಿನ ಯಾವುದು?

ಸದ್ಯಕ್ಕೆ (ಕರ್ನಾಟಕದೊಡನೆ ಇಡೀ ಭಾರತ ಇರುವ) ಉತ್ತರ ಭೂಭಾಗದಲ್ಲಿ ಉತ್ತರಾಯಣದ ದಿನ ಡಿಸೆಂಬರ್ 22. ಅಂದ್ರೆ 22-12-2015ಕ್ಕೆ ಉತ್ತರಾಯಣ ಶುರುವಾಗಿ ಬಿಟ್ಟಿದೆ. ಇದನ್ನೆಲ್ಲ ಈ ವೀಡಿಯೋನಲ್ಲಿ ನೋಡಬಹುದು:

4. ಮಕರ ಸಂಕ್ರಾಂತಿ ದಿನ ಯಾವುದು?

ಈ ದಿನ ಸೂರ್ಯ ಮಕರ ರಾಶಿಗೆ ಬರ್ತಾನೆ, ಅಷ್ಟೆ. ಇದು ಸಾಮಾನ್ಯವಾಗಿ ಜನವರಿ 14 ಅಥವಾ 15ಕ್ಕೆ ಬರುತ್ತೆ. ಈ ದಿನದಿಂದ ಉತ್ತರಾಯಣ ಶುರುವಾಗುತ್ತೆ ಅನ್ನಕ್ಕಾಗಲ್ಲ, ಯಾಕಂದ್ರದು ಈಗಾಗಲೇ ಶುರುವಾಗಿಬಿಟ್ಟಿದೆ.

ellu-flickr.jpgmanasiri

5. ಹಾಗಾದರೆ ಮಕರ ಸಂಕ್ರಾಂತಿಯಿಂದ ಉತ್ತರಾಯಣ ಶುರುವಾಗುತ್ತೆ ಅಂತಾರಲ್ಲ, ಯಾಕೆ?

ಇದು ಸ್ವಲ್ಪ ವಿವರಿಸೋದು ಕಷ್ಟ. ಕಾರಣ ಏನಂದರೆ, ಭೂಮಿ ಯಾವ ಅಕ್ಷದ ಸುತ್ತ ಸುತ್ತುತ್ತಾ ಇದೆಯೋ, ಅದೂ ಸುತ್ತುತ್ತಾ ಇದೆ (26000 ವರ್ಷಕ್ಕೆ ಒಂದು ಸುತ್ತು ಸುತ್ತುತ್ತಂತೆ). ಹೀಗೆ (ಅಕ್ಷ ಕೆಂಪು ಗೀಟು):

789px-Earth_precession-wikipedia.pngwikipedia

ಇದರಿಂದ ಉತ್ತರಾಯಣ ಶುರು ಆಗುವ ದಿವಸ 70 ವರ್ಷಕ್ಕೆ 1 ದಿನ ಬೇಗ ಬರುತ್ತೆ. ಸುಮಾರು ಕ್ರಿ.ಶ. 300ನೇ ಇಸವಿಯ ಹೊತ್ತಿಗೆ ಈ ದಿವಸ ಜನವರಿ 14ಕಕ್ಕೆ ಬಂದಿತ್ತು ಅಂತ ಈ ಆಧಾರದ ಮೇಲೆ ಹೇಳಬಹುದು. ಆಗ ಬರೆದ ‘ಸೂರ್ಯ ಸಿದ್ಧಾಂತ’ ಮುಂತಾದ ಗ್ರಂಥಗಳಲ್ಲಿ ಮಕರ ಸಂಕ್ರಾಂತಿಯಿಂದ ಉತ್ತರಾಯಣ ಶುರುವಾಗುತ್ತೆ ಅಂತ ಬರೆದಿರೋದಕ್ಕೆ ಇದೇ ಕಾರಣ. ಆಗಿನ ಜ್ಯೋತಿಷಿಗಳಿಗೆ ಭೂಮಿಯ ಅಕ್ಷದ 26,000 ವರ್ಷದ ಸುತ್ತುವಿಕೆಯ ಬಗ್ಗೆ ಗೊತ್ತಿರಲಿಲ್ಲ.

ನಮ್ಮ ಹಬ್ಬಗಳಿಗೂ ಸುತ್ತಮುತ್ತಲ ಪ್ರಕೃತಿಗೂ ಎಷ್ಟು ಹತ್ತಿರ, ನೋಡಿ!

(ಇದೆಲ್ಲದರ ಬದಲು ಹ್ಯಾಪಿ ಸಂಕ್ರಾಂತಿ ಅಂದಿದ್ರೆ ಸಾಕಿತ್ತು ಅನ್ನಿಸ್ತಾ ಇದೆ ಈಗ 🙂)

ಹೊರಚಿತ್ರ: arunachalmistic