ಒಮ್ಮೆ ಭಗವಾನ್ ದತ್ತಾತ್ರೇಯನನ್ನು ಕಾಡಿನಲ್ಲಿ ಕಂಡ ಯದುರಾಜನು “ಭಗವಾನ್, ನೀವು ಅತ್ಯಂತ ಸಮರ್ಥರು, ಉತ್ಸಾಹಿಗಳು ಹಾಗೂ ವಿವೇಕವುಳ್ಳವರಾಗಿ ಕಾಣುತ್ತಿದ್ದೀರಿ. ಇಷ್ಟೆಲ್ಲ ಗುಣಗಳುಳ್ಳ ನೀವು, ಎಲ್ಲ ಕಾಮನೆಗಳಿಂದ ಮುಕ್ತರಾಗಿ ಹೀಗೇಕೆ ಕಾಡಿನಲ್ಲಿ ವಾಸಿಸುತ್ತಿದ್ದೀರಿ ? ಆಪ್ತೇಷ್ಟರು ಹಾಗೂ ಕುಟುಂಬದವರು ಇಲ್ಲದಿರುವ ನೀವು, ಇಷ್ಟು ಆನಂದ ಹಾಗೂ ತೃಪ್ತಿಯಿಂದ ಇರಲು ಹೇಗೆ ಸಾಧ್ಯ ?” ಎಂದು ಪ್ರಶ್ನಿಸಿದನು.

ಆಗ ಅವಧೂತನು (ಎಲ್ಲ ಪ್ರಾಪಂಚಿಕ ಕಾಮನೆಗಳನ್ನು ತ್ಯಜಿಸಿದವನು) “ನಾನು ಅನುಭವಿಸುತ್ತಿರುವ ಆನಂದ ಹಾಗೂ ತೃಪ್ತಿಯು, ಆತ್ಮ ಸಾಕ್ಷಾತ್ಕಾರದ ಫಲ. ಅದಕ್ಕೆ ಪೂರಕವಾದ ಜ್ಞಾನವನ್ನು 24 ಗುರುಗಳಂತಿರುವ ಪ್ರಕೃತಿಯಿಂದ ಪಡೆದಿದ್ದೇನೆ. ಇದನ್ನು ನಿನಗೆ ವಿಸ್ತಾರವಾಗಿ ಹೇಳುತ್ತೇನೆ” ಎಂದನು.

ಶ್ರೀ ದತ್ತಾತ್ರೇಯನು 24 ಗುರುಗಳನ್ನು ಪ್ರಕೃತಿಯಿಂದ ಆರಿಸಿಕೊಂಡು, “ಬಹಳಷ್ಟು ಜನ ನನ್ನ ಶಿಕ್ಷಕರು” ಎಂದು ಯದುರಾಜನಿಗೆ ಹೇಳುತ್ತಾ, “ನನ್ನ ಸೂಕ್ಷ್ಮವಾದ ಸಂವೇದನ ಶಕ್ತಿಯಿಂದ ಆರಿಸಿ, ಅವರಿಂದ ಧಾರಾಳವಾಗಿ ಜ್ಞಾನ ಪಡೆದು, ಈ ಭೂಮಿಯಲ್ಲಿ ಓಡಾಡುತ್ತೇನೆ. ಭೂಮಿ, ಗಾಳಿ, ಆಕಾಶ, ಬೆಂಕಿ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ದೀಪದ ಹುಳು, ಆನೆ, ಇರುವೆ, ಮೀನು, ಪಿಂಗಳೆ ಎಂಬ ವೇಶ್ಯೆ, ಕಮ್ಮಾರ, ಮಗು/ಮಕ್ಕಳು, ಚಂದ್ರ, ಜೇನು, ಜಿಂಕೆ, ಬೇಟೆಗಾರ ಹಕ್ಕಿ, ಕನ್ಯೆ, ಹಾವು, ಜೇಡ, ಕಣಜ ಹಾಗು ನೀರು ಇವುಗಳೇ ನನ್ನ 24 ಶಿಕ್ಷಕರು”.

1.ಭೂಮಿ: ಎಲ್ಲ ಜೀವಿಗಳು, ತಮ್ಮ ಪೂರ್ವಜನ್ಮದ ಕರ್ಮಗಳಿಗೆ ಅನುಸಾರವಾಗಿ ವಿವಿಧ ಆಕಾರಗಳನ್ನು ಪಡೆದು ಭೂಮಿಯ ಮೇಲೆ ಜೀವಿಸುತ್ತಾರೆ. ಭೂಮಿಯನ್ನು ಉತ್ತು, ಅಗೆದು ಬಿತ್ತುತ್ತಾರೆ. ಅದರ ಮೇಲೆ ಬೆಂಕಿಯನ್ನು ಉರಿಸುತ್ತಾರೆ. ಅದರೂ ಭೂಮಿಯು ಒಂದು ಕೂದಲಿನ ಎಳೆಯಷ್ಟೂ ತನ್ನ ಜಾಗದಿಂದ ಕದಲುವುದಿಲ್ಲ. ಅಲ್ಲದೇ ಅದು ಎಲ್ಲ ಜೀವ ಜಂತುಗಳಿಗೆ ಆಹಾರ ಕೊಟ್ಟು ಸಲಹುತ್ತದೆ. ಇದನ್ನು ನೋಡಿ ತಿಳಿದುಕೊಂಡಿದ್ದೇನೆಂದರೆ, ಜಾಣನಾದವನು ಎಂತಹುದೇ ಪರಿಸ್ಥಿತಿಯಲ್ಲಿ ತಾಳ್ಮೆ, ಪ್ರೀತಿ ಹಾಗು ನೀತಿ ಎಂದು ತಾನು ತೆಗೆದುಕೊಂಡ ಪ್ರತಿಜ್ಞೆಯಿಂದ ಕದಲಬಾರದು ಹಾಗೂ ಎಲ್ಲ ಜೀವಿಗಳ ಸುಖಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳಬೇಕು. ಬೆಟ್ಟ ಮತ್ತು ನದಿಗಳಿಂದ ಕೂಡಿದ ಭೂಮಿ ನನ್ನ ಮೊದಲ ಗುರು.

2.ಗಾಳಿ: ನಾನು ಗಮನಿಸಿದಂತೆ ಗಾಳಿಯು ಸ್ವಚ್ಛ ಹಾಗು ವಾಸನಾರಹಿತವಾಗಿರುವುದು. ಸುಗಂಧವಾಗಿರಲಿ ಅಥವಾ ದುರ್ಗಂಧವೇ ಆಗಿರಲಿ, ತಾರತಮ್ಯ ಮಾಡದೆ ಅಥವಾ ಆದ್ಯತೆಯನ್ನು ಕೊಡದೆ, ಎಲ್ಲದರ ಮೇಲೂ ಬೀಸುತ್ತದೆ. ಒಂದು ಕ್ಷಣ ಸುತ್ತಲಿನ ಪರಿಸರದ ವಾಸನೆಯನ್ನು ಗ್ರಹಿಸಿದರೂ, ಸ್ವಲ್ಪ ಸಮಯದಲ್ಲಿಯೇ ತನ್ನ ಮೂಲರೂಪವನ್ನು ತೋರಿಸುತ್ತದೆ. ಇದರಿಂದ ಕಲಿತುಕೊಂಡಿದ್ದೇನೆಂದರೆ, ಜಗತ್ತಿನಲ್ಲಿ ಆಧ್ಯಾತ್ಮದ ಹಂಬಲವುಳ್ಳ ಜೀವಿಯು, ಭೌತಿಕ ವಿಷಯಗಳಾದ ಸಂತೋಷ ಹಾಗು ದುಃಖದಿಂದ ಪ್ರಭಾವಿತನಾಗದೆ ಇರಬೇಕು. ನಿರುಪಯುಕ್ತ ವಿಷಯಗಳಿಂದ ತನ್ನ ಹೃದಯದ ಭಾವನೆಗಳು ಹಾಗೂ ಮಾತನ್ನು ಕಲ್ಮಶರಹಿತವಾಗಿ ಇಟ್ಟುಕೊಳ್ಳಬೇಕು. ಗಾಳಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಇದೆಲ್ಲವನ್ನು ಕಲಿತಿದ್ದರಿಂದ, ಗಾಳಿಯು ನನ್ನ ಎರಡನೇ ಗುರು.

3.ಆಕಾಶ:ಆತ್ಮವೂ ಆಕಾಶದಂತೆ, ಸರ್ವವ್ಯಾಪಿ. ಕೆಲವೊಮ್ಮೆ ಆಕಾಶವು (ಅಂತರಿಕ್ಷ) ದಟ್ಟವಾದ ಮೋಡಗಳಿಂದ ಕವಿದಿರುತ್ತದೆ ಹಾಗೂ ಕೆಲವೊಮ್ಮೆ ಧೂಳು ಮತ್ತು ಹೊಗೆಯಿಂದ ಮುಚ್ಚಿಹೋಗುವುದನ್ನು ಗಮನಿಸಿದ್ದೇನೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ವಿವಿಧ ಬಣ್ಣಗಳನ್ನು ಹೊಂದುತ್ತದೆ. ಆದರೆ ವಾಸ್ತವದಲ್ಲಿ, ಅದು ತನ್ನ ವರ್ಣರಹಿತ ಗುಣವನ್ನು ಉಳಿಸಿಕೊಂಡು, ಯಾವುದರಿಂದಲೂ ಮುಟ್ಟಿಸಿಕೊಳ್ಳದೆ, ಕಲುಷಿತಗೊಳ್ಳದೆ ಇರುತ್ತದೆ. ಇದರಿಂದ ನಾನು ಕಲಿತಿದ್ದೇನೆಂದರೆ ನಿಜವಾದ ಯೋಗಿಯು, ಮುಂಬರುವ ಕಾಲದಲ್ಲಿ ಈ ಅದ್ಭುತವಾದ ಜಗತ್ತಿನಲ್ಲಿ, ಆಕಾಶ ಅಥವ ಅಂತರಿಕ್ಷದಂತೆ ಯಾವುದರಿಂದಲೂ ಮುಟ್ಟಿಸಿಕೊಳ್ಳದೆ, ಪ್ರಭಾವಕ್ಕೊಳಪಡದೆ, ತನ್ನ ದೈಹಿಕ ಪ್ರಕ್ರಿಯೆಗಳನ್ನೂ ಮೀರಿ ಇರಬೇಕು. ಅಂತರಿಕ್ಷದಂತೆ, ಅವನ ಅಂತರಾತ್ಮವು ಯಾವುದೇ ವಸ್ತು ಅಥವಾ ವಿಷಯಗಳಿಂದ ಉಂಟಾಗುವ ಭಾವನಾತ್ಮಕ ಪ್ರತಿಕ್ರಿಯೆಗಳಿಂದ ಸ್ವತಂತ್ರವಾಗಿರಬೇಕು. ಹೀಗೆ ಆಕಾಶ ಅಥವಾ ಅಂತರಿಕ್ಷವನ್ನು ನನ್ನ ಮೂರನೆಯ ಗುರುವಾಗಿ ಸ್ವೀಕರಿಸಿದೆ.

4. ಬೆಂಕಿ: ನನ್ನ ನಾಲ್ಕನೆಯ ಗುರು ಬೆಂಕಿಯ ಅಂಶಗಳು. ಒಮ್ಮೊಮ್ಮೆ ಬೆಳಗುವ ಜ್ವಾಲೆಯಂತೆ ಹಾಗು ಕೆಲವೊಮ್ಮೆ ಬೂದಿ ಮುಚ್ಚಿದ ಕೆಂಡದ0ತೆ ಕಾಣಿಸಿಕೊಳ್ಳುತ್ತದೆ. ಆದರೆ ಎಲ್ಲ ಕಾಲದಲ್ಲೂ, ಎಲ್ಲದರಲ್ಲಿಯೂ ಸುಪ್ತರೀತಿಯಿ0ದ ಶಾಖವಾಗಿ ಇರುತ್ತದೆ. ಅಗ್ನಿದೇವನು ಎಲ್ಲರೂ ತನಗೆ ಅರ್ಪಿಸಿದುದನ್ನು ಸ್ವೀಕರಿಸಿ, ಅವರ ನೈತಿಕ ಮೌಲ್ಯವನ್ನು ಪರಿಗಣಿಸದೆ, ಅವರ ಪಾಪಗಳನ್ನು ಸುಡುತ್ತಾನೆ. ಇಷ್ಟಾಗಿಯೂ ಅದು ಅಗ್ನಿದೇವನೆ0ಬ ಪರಿಶುದ್ಧ ದೈವತ್ವವಾಗಿಯೇ ಉಳಿದು, ಇಂತಹ ಭಕ್ತರ ಪಾಪಗಳಿಂದ ಕಳಂಕರಹಿತವಾಗಿರುತ್ತದೆ. ಹಾಗೆಯೇ ಆತ್ಮದ ಅರಿವು ಹೊಂದಿದ ಯೋಗಿಯು, ಎಲ್ಲರಿಂದಲೂ ಆಹಾರ ಸ್ವೀಕರಿಸಿ, ಅವನ ಪಾಪಗಳನ್ನು ಸುಟ್ಟು, ನೀಡಿದವನನ್ನು ಹರಸಬೇಕು. ಬೆಂಕಿ ತನ್ನದೇ ಆದ ನಿರ್ದಿಷ್ಟ ರೂಪವನ್ನು ಹೊಂದಿಲ್ಲದೇ ಇದ್ದರೂ , ಕಟ್ಟಿಗೆಯ ಜೊತೆಗೂಡಿ ಉರಿದಾಗ, ಸ್ಪಷ್ಟವಾದ ರೂಪವನ್ನು ಪಡೆಯುತ್ತದೆ. ಆತ್ಮವೂ ಸಹ ನಿರಾಕಾರನಾಗಿದ್ದರೂ, ಅಯಾಯ ಭೌತಿಕ ಆಕಾರಗಳ ಜೊತೆಗೂಡಿದಾಗ ಕೆಲವೊಮ್ಮೆ ದೇವರು, ಮಾನವರು, ಪ್ರಾಣಿಗಳು ಹಾಗೂ ಗಿಡ-ಮರಗಳಂತೆ ಆಕಾರವನ್ನು ಹೊಂದುತ್ತದೆ. ಜಗತ್ತಿನ ಎಲ್ಲ ಸೃಷ್ಟಿಯ ಆದಿ ಹಾಗೂ ಅಂತ್ಯಗಳು ಎಂದಿಗೂ ನಿಗೂಢವೇ. ಸೃಷ್ಟಿಯ ಎಲ್ಲ ವಸ್ತುಗಳು ತಮ್ಮ ಆದಿ ಮತ್ತು ಅಂತ್ಯಗಳ ನಡುವೆ ಕಾಣಿಸಿಕೊಳ್ಳುತ್ತವೆ. ಅವುಗಳ ಆದಿ ಅಂತ್ಯಗಳೆರಡೂ ಸ್ವಂತ, ಶಾಶ್ವತ, ಬದಲಾವಣೆಯಿಲ್ಲದ, ಅಸ್ಪಷ್ಟ ಮತ್ತು ಸರ್ವವ್ಯಾಪ್ತ. ಬೆಂಕಿಯ ಅಂಶದ ಗುಣ ಕೂಡ ಹೀಗೆಯೆ. ಈ ರೀತಿ ಕಾಣಿಸಿಕೊಳ್ಳುವ ಬೆಂಕಿಯು ತನ್ನೊಡಲನ್ನು ಹೊಕ್ಕ ಎಲ್ಲವನ್ನು ಒಂದೇ ರೀತಿಯ ಬೂದಿಯನ್ನಾಗಿಸುತ್ತದೆ. ಹಾಗೆಯೇ ಅತ್ಮದ ಅರಿವು ಎಂಬ ಜ್ಞಾನ, ಹೀಗೆ ಕಾಣಿಸಿಕೊಂಡ ಎಲ್ಲ ವಸ್ತುಗಳ ರೂಪ ಮತ್ತು ಗುಣಗಳನ್ನು ಭ್ರಮೆಯಂದರಿತು ಅವುಗಳನ್ನು ತಿರಸ್ತರಿಸಿ, ಅವುಗಳ ಗುಣವನ್ನು ಮೂಲದಲ್ಲಿ ಇರುವಂತೆಯೇ ತೋರಿಸಿಕೊಡುತ್ತದೆ. ಈ ಕಾರಣದಿದಂದ ಬೆಂಕಿಯ ಅಂಶಗಳು ನನ್ನ ನಾಲ್ಕನೇ ಗುರು.

5. ಸೂರ್ಯ: ನನ್ನ ಐದನೆಯ ಗುರು ಸೂರ್ಯ. ನಾವು ದಿನನಿತ್ಯ ಕಾಣುವ ಸೂರ್ಯ ಒಂದಾಗಿ ಕಂಡರೂ, ಹಲವಾರು ಪಾತ್ರೆಗಳಲ್ಲಿ ನೋಡಿದಾಗ ಹಲವು ಬಿಂಬಗಳಾಗಿ ಕಾಣುತ್ತದೆ. ಹಾಗೆಯೇ ಭೌತಿಕ ಆಕಾರಕ್ಕೆ ತಕ್ಕಂತೆ ಜೀವಿಗಳು ತಮ್ಮ ನಿಜವಾದ ಆಂತರಿಕ ರೂಪವನ್ನು ವಿವಿಧ ರೂಪಗಳಲ್ಲಿ ಪ್ರಕಟಗೊಳಿಸುತ್ತಾರೆ. ಹೇಗೆ ಸೂರ್ಯ ಪ್ರಕೃತಿಯ ನಾನಾ ರೂಪಗಳನ್ನು ಹೊಳೆಯುವಂತೆ ಮಾಡುತ್ತದೆಯೋ ಹಾಗೆಯೇ ಯೋಗಿಯು ಕೂಡ ತನ್ನ ಭಕ್ತರಿಗೆ ಎಲ್ಲ ವಿಷಯಗಳ ನಿಜರೂಪವನ್ನು ತೋರಿಸಿಕೊಡುತ್ತಾನೆ.

6. ಪಾರಿವಾಳ: ಒಂದು ಪಾರಿವಾಳದಿಂದಲೂ ನಾನು ಜ್ಞಾನ ವನ್ನು ಪಡೆದಿದ್ದೇನೆ. ಒಮ್ಮೆ ಜೋಡಿ ಪಾರಿವಾಳಗಳು ಒಂದು ಮರದ ಮೇಲೆ ಒಟ್ಟಾಗಿ ವಾಸಿಸುತ್ತಿದ್ದವು. ತಮ್ಮ ಮರಿಗಳಿಗೆ ಆಹಾರ ಪೂರೈಸುತ್ತ ಬಹಳ ಪ್ರೀತಿ ಹಾಗೂ ಮಮತೆಯಿಂದ ಸಾಕುತ್ತಿದ್ದವು. ಒಂದು ದಿನ ಒಬ್ಬ ಬೇಡನು ಮರಿಗಳನ್ನು ಬೋನಿನಲ್ಲಿ ಹಿಡಿದನು. ಹೆಣ್ಣು ಹಕ್ಕಿಯು ಕಾಡಿನಿಂದ ಆಹಾರ ಸಂಗ್ರಹಿಸಿ ತನ್ನ ಮಕ್ಕಳಿಗೆ ಉಣಿಸಲು ಹಿಂತಿರುಗಿ ಬಂದಾಗ ಮರಿಗಳಿಗೆ ಒದಗಿದ ಅವಸ್ಥೆಯನ್ನು ನೋಡಿ, ಅವುಗಳನ್ನು ಬಿಟ್ಟಿರಲಾರದೆ, ಮರಿಗಳ ವಿಧಿಯನ್ನು ಹಂಚಿಕೊಳ್ಳಲು ತಾನೂ ಆ ಬೋನಿನಲ್ಲಿ ಹೋಗಿ ಬಂಧಿಯಾಗುತ್ತದೆ. ಸ್ವಲ್ಪ ಸಮಯದ ನಂತರ ಬರುವ ಗಂಡು ಹಕ್ಕಿಯು ತನ್ನ ಕುಟುಂಬದಿಂದ ದೂರವಿರಲಾಗದೆ ತಾನೂ ಬೋನಿನೊಳಗೆ ಸೇರಿ ತನ್ನ ಅಂತ್ಯವನ್ನು ಕಾಣುತ್ತದೆ. ಇದನ್ನು ಪರಾಮರ್ಶಿಸಿದಾಗ ತಿಳಿದಿದ್ದೇನೆಂದರೆ, ಮಾನವನು ಬುದ್ಧಿವಂತನಾಗಿ ಹುಟ್ಟಿದರೂ, ಎಲ್ಲದರ ಮೇಲೂ ಒಡೆತನವನ್ನು ಸಾಧಿಸುವ ವಿಷಚಕ್ರದಲ್ಲಿ ಸಿಲುಕಿ ತನ್ನ ಆಧ್ಯಾತ್ಮದ ವಿನಾಶವನ್ನು ತಂದುಕೊಳ್ಳುತ್ತಾನೆ. ಅಂತರಾರ್ಥವು ಸ್ವತಂತ್ರವಾಗಿದ್ದರೂ ಪಾರಮಾರ್ಥಿಕದೊಂದಿಗೆ ಗುರುತಿಸಿಕೊಂಡಾಗ, ಹುಟ್ಟು, ಸಾವು ಹಾಗೂ ದುಃಖವೆಂಬ ಸುಳಿಯೊಳಗೆ ಸಿಲುಕುತ್ತದೆ. ಹೀಗೆ ಪಾರಿವಾಳವು ನನ್ನ ಆರನೆಯ ಗುರು.

7. ಹೆಬ್ಬಾವು: ಹೆಬ್ಬಾವು ತನ್ನ ಬೇಟೆಯ ಸಲುವಾಗಿಯೂ ವೇಗವಾಗಿ ಸಾಗದ ಒಂದು ಸೋಮಾರಿ ಪ್ರಾಣಿ. ಮರೆಯಲ್ಲಿ ಅವಿತು ತನ್ನ ಮುಂದೆ ಹಾದುಹೋಗುವ ಪ್ರಾಣಿಗಳನ್ನು ತಿನ್ನುತ್ತದೆ, ಆದರೆ ತಾನು ಹಿಡಿದ ಬೇಟೆಯು ತನ್ನ ಹಸಿವನ್ನು ನೀಗಿಸುವುದಕ್ಕೆ ಸಾಕೆ ಎಂಬುದನ್ನು ಯೋಚಿಸುವುದಿಲ್ಲ. ಇದರಿಂದ ನಾನು ಕಲಿತಿದ್ದೇನೆಂದರೆ, ಮಾನವನು ಜ್ಞಾನ ದ ಹುಡುಕಾಟದಲ್ಲಿ ಭೋಗದ ಹಿಂದೆ ಓಡದೆ, ಸಹಜವಾಗಿ ಸಿಗುವಂತಹುದನ್ನು ತೃಪ್ತಿಯಿಂದ ಸ್ವೀಕರಿಸಬೇಕು. ಹೆಬ್ಬಾವಿನಂತೆ ನಿದ್ದೆ ಹಾಗೂ ಜಾಗೃತಾವಸ್ಥೆಯನ್ನು ಬಿಟ್ಟು ಅಂತರಾರ್ಥದ ನಿರಂತರ ಧ್ಯಾನಕ್ಕೆ ಬದ್ಧನಾಗಿರಬೇಕು. ಹೀಗೆ ಹೆಬ್ಬಾವು ನನ್ನ ಏಳನೆಯ ಗುರುವಾಯಿತು.

8. ಸಮುದ್ರ: ಸಾಗರದ ಅದ್ಭುತ ಗುಣದಿಂದ ನಾನು ಅಪಾರ ಜ್ಞಾನ ವನ್ನು ಪಡೆದಿದ್ದೇನೆ. ತುಂಬಿ ಹರಿಯುವ ಎಷ್ಟೇ ನದಿಗಳು ಸಮುದ್ರವನ್ನು ಸೇರಿದರೂ, ಅದು ತನ್ನ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಬೇಸಿಗೆಯಲ್ಲಿ ನದಿಗಳು ಒಣಗಿದರೂ , ಅದರಿಂದ ಸಮುದ್ರದ ಮಟ್ಟವು ಒಂದು ಕೂದಲಿನೆಳೆಯಷ್ಟೂ ಕುಗ್ಗುವುದಿಲ್ಲ. ಹೇಗೆ ಬದುಕಿನಲ್ಲಿ ಅನುಭವಿಸುವ ಸಂತೋಷವು ಜ್ಞಾನಿಯಾದ ಯೋಗಿಯನ್ನು ಹಿಗ್ಗಿಸುವುದಿಲ್ಲವೋ, ಹಾಗೆಯೇ ದುಃಖ ಬಂದಾಗ ಅವನ ಉತ್ಸಾಹವನ್ನು ಕುಗ್ಗಿಸುವುದಿಲ್ಲ. ದಂಡೆಯಲ್ಲಿ ಸಮುದ್ರ ತನ್ನ ಮಿತಿಯನ್ನು ಮೀರುವುದಿಲ್ಲವೋ ಹಾಗೆಯೇ ಜ್ಞಾನಿಯಾದವನು ಭಾವೋದ್ರೇಕಗಳ ಸೆಳೆತದಲ್ಲಿ ತನ್ನ ನೈತಿಕತೆಯ ಉನ್ನತಮಟ್ಟವನ್ನು ಮೀರುವುದಿಲ್ಲ. ಸಮುದ್ರದಂತೆ, ಯಾರಿಂದಲೂ ತೊಂದರೆಗೆ ಒಳಗಾಗದೆ ಅಜೇಯನಾಗಿರುತ್ತಾನೆ. ಅಗಾಧ ಸಾಗರದಂತೆ, ಅವನ ನಿಜವಾದ ಗುಣವನ್ನು ಹಾಗೂ ಜ್ಞಾನದ ಆಳವನ್ನು ಯಾರಿಂದಲೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇದನ್ನು ತಿಳಿಸಿಕೊಟ್ಟ ಸಮುದ್ರವು ನನ್ನ ಎಂಟನೆಯ ಗುರು.

9. ದೀಪದ ಹುಳು: ಹಲವು ಬಾರಿ ನಾನು ಗಮನಿಸಿದಂತೆ ದೀಪದ ಹುಳುವು (ಅಥವಾ, ಸ್ಪಷ್ಟವಾಗಿ ಹೇಳುವುದಾದರೆ, ಒಂದು ಪತಂಗ) ಬೆಂಕಿಯಿಂದ ಪ್ರೇರೇಪಿಸಲ್ಪಟ್ಟು ಅದರಲ್ಲಿ ಜಿಗಿದು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ. ಯೋಚನಾಹೀನ ವ್ಯಕ್ತಿಯೂ, ಸಂತೋಷ ಎಂಬ ಭ್ರಮೆಯಿಂದ ಕೂಡಿ ಅದರಿಂದ ಮೋಹಗೊಂಡು, ಹುಟ್ಟು ಮತ್ತು ಸಾವು ಎಂಬ ಕೊನೆಯಿಲ್ಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಇನ್ನೊಂದು ಕಡೆ, ಬುದ್ಧಿವಂತನು ಜ್ಞಾನದ ಬೆಂಕಿಯನ್ನು ಒಂದು ಕ್ಷಣ ಕಂಡರೂ, ಎಲ್ಲವನ್ನು ಬದಿಯಲ್ಲಿ ಬಿಟ್ಟು, ಅದರಲ್ಲಿ ಧುಮುಕಿ ತನ್ನದು ಬಹಳ ಸಂಕುಚಿತದ ಅಂತರಾರ್ಥ ಎಂಬ ಭ್ರಮೆಯನ್ನು ಸುಟ್ಟುಹಾಕುತ್ತಾನೆ. ಹೀಗೆ ದೀಪದ ಹುಳು ನನ್ನ ಒಂಬತ್ತನೆಯ ಗುರು.

10. ಆನೆ: ಆನೆಯು ನನ್ನ ಹತ್ತನೆಯ ಗುರು. ಮನುಷ್ಯರು ಒಂದು ಹೆಣ್ಣಾನೆಯನ್ನು ಹೋಲುವ ಬೊಂಬೆಯನ್ನು ಕಾಡಿನಲ್ಲಿ ಇಡುತ್ತಾರೆ. ಒಂದು ಸಲಗ ಅದನ್ನು ತನ್ನ ಸಂಗಾತಿಯೆಂದು ತಪ್ಪು ತಿಳಿದು ಅದರ ಬಳಿ ಸಾರಿದಾಗ, ಕಪಟ ಮನುಷ್ಯರು ಬೇಟೆಗಾಗಿ ಅಡಗಿಸಿಟ್ಟ ಸಂಕೋಲೆಯಲ್ಲಿ ಸಿಲುಕಿಕೊಳ್ಳುತ್ತದೆ. ಹೀಗೆಯೇ ನಿಯಂತ್ರಣವಿಲ್ಲದ ಮಾನವನು ತನ್ನ ಸಂಗಾತಿಯೆಂಬ ವ್ಯಾಮೋಹದ ಸಂಕೋಲೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಎಲ್ಲ ಮೋಹಗಳಿಂದ ಬಿಡುಗಡೆ ಬಯಸುವ ವ್ಯಕ್ತಿಯು, ಕಾಮದಿಂದಲೂ ಮುಕ್ತಿ ಹೊಂದುವುದನ್ನು ಕಲಿಯಬೇಕು. ಹೀಗೆ ಆನೆಯೂ ನನ್ನ ಒಂದು ಗುರುವಾಯಿತು.

11. ಇರುವೆ: ಇರುವೆ ಬಹಳಷ್ಟು ಆಹಾರ ಸಾಮಗ್ರಿಯನ್ನು ಸಂಗ್ರಹಿಸಿದರೂ ತಾನೂ ತಿನ್ನದೇ ಇತರರಿಗೂ ದಾನವಾಗಿ ಕೊಡದೆ ಕೂಡಿಟ್ಟುಕೊಳ್ಳುತ್ತದೆ. ಇದರ ಪರಿಣಾಮವಾಗಿ ಇತರ ಶಕ್ತಿಶಾಲಿ ಜೀವಿಗಳು ಇರುವೆಯ ಹತ್ತಿರ ಇರುವ ಸಾಮಗ್ರಿಗಳನ್ನು ಕದಿಯಲು ಪ್ರಚೋದನೆಗೆ ಒಳಗಾಗುತ್ತವೆ. ಹೀಗೆಯೇ ಮನುಷ್ಯನು ಕೇವಲ ಪ್ರಾಪಂಚಿಕ ವಸ್ತುಗಳ ಶೇಖರಣೆಯಿಂದ ಕಳ್ಳತನ ಹಾಗೂ ಕೊಲೆಯಂತಹ ಪರಿಣಾಮಕ್ಕೆ ಬಲಿಯಾಗುತ್ತಾನೆ. ಆದರೆ ಇರುವೆ ಕೆಲವು ಧನಾತ್ಮಕ ಅಂಶಗಳನ್ನೂ ನಮಗೆ ಕಲಿಸುತ್ತದೆ. ಇರುವೆ ಆಯಾಸಗೊಳ್ಳದೇ ಕೆಲಸ ಮಾಡುವ ಜೀವಿ ಹಾಗೂ ಎಷ್ಟೇ ಅಡಚಣೆ ಮತ್ತು ಹಿನ್ನಡೆ ಎದುರಾದರೂ ಎದೆಗುಂದದೆ ಆಹಾರವನ್ನು ಶೇಖರಿಸುತ್ತದೆ. ಹಾಗೆಯೇ ಜ್ಞಾನಾಸಕ್ತ ವ್ಯಕ್ತಿಯು ಆಯಾಸಗೊಳ್ಳದೆ ತನ್ನ ಆತ್ಮ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನ ಪಡಬೇಕು. ಈ ಉದಾತ್ತ ಸತ್ಯವನ್ನು ತಿಳಿಸಿಕೊಟ್ಟ ಈ ಸಣ್ಣ ಇರುವೆಯು ನನ್ನ ಹನ್ನೊಂದನೆಯ ಗುರುವೆಂದೆನಿಸಿತು.

12. ಮೀನು: ಮೀನು ತನ್ನ ದುರಾಸೆಯಿಂದ ಮಿಕವನ್ನು ನುಂಗಲು ಹೋಗಿ ಗಾಳಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಅಂತೆಯೇ ಮನುಷ್ಯನು ಬಾಯಿ ರುಚಿಯ ಅತಿಯಾಸೆಯಿಂದ ಆಗುವ ಅನಾಹುತಕ್ಕೆ ತುತ್ತಾಗುತ್ತಾನೆ ಎಂದು ಮನಗಂಡೆನು. ರುಚಿಯನ್ನು ಗೆದ್ದರೆ ಬೇರೆ ಎಲ್ಲವನ್ನೂ ಗೆದ್ದಂತೆಯೇ. ಮೀನಿನಿಂದ ಮತ್ತೊಂದು ಧನಾತ್ಮಕ ಅಂಶವನ್ನು ತಿಳಿಯಬಹುದು. ಅದು ತನ್ನ ವಾಸಿಸುವ ಸ್ಥಾನವನ್ನು ಅಂದರೆ ನೀರನ್ನು ಎಂದಿಗೂ ತೊರೆಯುವುದಿಲ್ಲ. ಹಾಗೆಯೇ ಮನುಷ್ಯನು ತನ್ನ ನಿಜವಾದ ವ್ಯಕ್ತಿತ್ವದೆಡೆಗಿನ ತನ್ನ ನೋಟವನ್ನು ಬದಲಿಸದೆ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಈ ಕಾರಣದಿಂದ ಮೀನು ನನ್ನ ಹನ್ನೆರಡನೆಯ ಗುರು.

13. ಪಿಂಗಳೆ: ನನ್ನ ಆತ್ಮವನ್ನು ಜಾಗೃತಗೊಳಿಸಿದಂತಹ ಹದಿಮೂರನೆಯ ಗುರು, ಪಿಂಗಳೆ ಎಂಬ ವೇಶ್ಯೆ. ಒಂದು ದಿನ, ಅವಳು ಬಹಳ ಕಾತುರದಿಂದ ಒಬ್ಬ ವಿಶೇಷವಾದ ಗ್ರಾಹಕನು ತನಗೆ ಸಾಕೆನಿಸುವಷ್ಟು ಹಣವನ್ನು ಕೊಡುತ್ತಾನೆ ಎಂಬ ನಂಬಿಕೆಯಿಂದ ಅವನ ಬರುವಿಕೆಗಾಗಿ ಕಾಯುತ್ತಿದ್ದಳು. ತಡರಾತ್ರಿಯವರೆಗೂ ಬಹಳ ಕಾಯ್ದಳು. ಅವನು ಬಾರದಿರಲು, ಮೋಹ ಕಳೆದು, ಅವಳು ಹೀಗೆ ಚಿಂತಿಸಿದಳು. “ಅಯ್ಯೋ, ನಾನೆಷ್ಟು ಮೂರ್ಖಳು! ಶಾಶ್ವತ ಸಂತೋಷ ನೀಡುವ ಗುಣವುಳ್ಳ ಅಂತರಂಗದ ದೈವಿಕ ಆತ್ಮವನ್ನು ಕಡೆಗಣಿಸಿ, ತಿಳಿಗೇಡಿಯಂತೆ ಭೋಗ ಮತ್ತು ದುರಾಸೆಯನ್ನು ಉತ್ತೇಜಿಸುವ ಕಾಮುಕನಿಗಾಗಿ ಕಾಯುತ್ತಿದ್ದೆನಲ್ಲ. ಇನ್ನು ಮೇಲೆ ನನ್ನನ್ನು ನಾನು ಆತ್ಮದ ನಿರೀಕ್ಷಣೆಯಲ್ಲಿ ತೊಡಗಿಸಿಕೊಂಡು, ಅವನಲ್ಲೇ ಲೀನವಾಗಿ, ಶಾಶ್ವತವಾದ ಆಂತರಿಕ ಸುಖವನ್ನು ಪಡೆಯುತ್ತೇನೆ”. ಈ ರೀತಿಯ ಪಶ್ಚಾತ್ತಾಪದಿಂದ ಸುಖವನ್ನು ಅನುಭವಿಸಿದಳು. ಹೀಗೆಯೆ, ಅದರ ಸ್ಪಷ್ಟವಾದ ಉದ್ದೇಶದ ಬಗ್ಗೆ ಚಿಂತಿಸಿದಾಗ ನಾನು ಅರಿತಿದ್ದೇನೆಂದರೆ, ಆಧ್ಯಾತ್ಮದ ಹಂಬಲವುಳ್ಳವನು, ಸಾಧನೆಯ ಸಣ್ಣಪುಟ್ಟ ಅಂಶಗಳಾದಂತಹ ಆಧ್ಯಾತ್ಮಿಕ ಶಕ್ತಿಗಳ ಆಕರ್ಷಣೆಯನ್ನು ತಿರಸ್ಕರಿಸಬೇಕು. ಪ್ರಲೋಭನೆಗೆ ಒಳಗಾಗಿ ಇತರರಿಂದ ವಸ್ತುಗಳನ್ನು ಪಡೆಯುವ ಆಸೆಯೇ ದುಃಖಕ್ಕೆ ಮೂಲ, ಇವೆಲ್ಲವನ್ನೂ ತ್ಯಜಿಸುವುದೇ ನಿರಂತರ ಆನಂದ ಸಾಧಿಸುವುದಕ್ಕೆ ಇರುವ ಒಂದೇ ದಾರಿ ಎಂದು ಕಲಿತೆನು.

14. ಕಮ್ಮಾರ: ಒಮ್ಮೆ ಒಬ್ಬ ಕಮ್ಮಾರ ಬಹಳ ಮಗ್ನನಾಗಿ ಒಂದು ಚೂಪಾದ ಬಾಣ ತಯಾರಿಸುವಲ್ಲಿ ತೊಡಗಿದ್ದನು. ಬೇರೆಲ್ಲವನ್ನು ಎಷ್ಟು ಮರೆತಿದ್ದನೆಂದರೆ, ಹತ್ತಿರದಲ್ಲೇ ಸಾಗಿದ ರಾಜನ ಮೆರವಣಿಗೆಯನ್ನೂ ಸಹ ಗಮನಿಸಲಿಲ್ಲ. ಈ ದೃಶ್ಯವನ್ನು ಕಂಡು ಎಚ್ಚೆತ್ತ ನಾನು ತಿಳಿದ ಸತ್ಯವೇನೆಂದರೆ, ಏಕಾಗ್ರಚಿತ್ತದಿಂದ, ಆಂತರಿಕ ಸತ್ವವನ್ನು ಹೀರಿಕೊಳ್ಳುವ ಉದ್ದೇಶವೆ, ಜಗತ್ತಿನಲ್ಲಿರುವ ಎಲ್ಲ ಸಾಮಾನ್ಯ ಆಸಕ್ತಿಗಳ ಪ್ರಲೋಭನೆಯನ್ನು ತೆಗೆದುಹಾಕುತ್ತದೆ. ಆಧ್ಯಾತ್ಮಿಕ ಸಾಧನೆಗೆ ಬೇಕಾದ ಶಿಸ್ತಿಗೆ ಇದೊಂದೇ ರಹಸ್ಯ. ಹೀಗೆ, ಕಮ್ಮಾರ ನನ್ನ ಹದಿನಾಲ್ಕನೆಯ ಗುರು.

15. ಆಟವಾಡುವ ಹುಡುಗ: ಸಣ್ಣ ಹುಡುಗ ಮತ್ತು ಹುಡುಗಿಯರಿಗೆ ಗೌರವ ಅಥವಾ ಅಗೌರವದ ಬಗ್ಗೆ ಗೊತ್ತಿರುವುದಿಲ್ಲ. ಯಾರ ಮೇಲೂ ದ್ವೇಷ ಸಾಧಿüಸುವುದಿಲ್ಲ ಅಥವಾ ಯಾರ ಬಗ್ಗೆಯೂ ಪೂರ್ವಾಗ್ರಹವನ್ನು ಹೊಂದಿರುವುದಿಲ್ಲ. ಇದು ತನ್ನದು ಅಥವಾ ಇದು ಪರರದು ಎಂಬುದು ತಿಳಿದಿರುವುದಿಲ್ಲ. ಅವರ ಒಳಗಿನಿಂದಲೇ ಮತ್ತು ಅವರ ಕ್ರಿಯಾಶೀಲತೆಯಿಂದಲೇ ಅವರ ಆನಂದವು ಹೊರಹೊಮ್ಮುವುದು ಹಾಗೂ ಅವರು ಆನಂದವಾಗಿರಲು ಹೊರಗಿನ ವಸ್ತುಗಳಾಗಲಿ ಅಥವಾ ಸ್ಥಿತಿಯಾಗಲಿ ಕಾರಣವಲ್ಲ. ಸಂಪೂರ್ಣ ಅರಿವಿನೆಡೆಗೆ ಸಾಗುವ ಯೋಗಿಯೂ ಹೀಗೆಯೇ ಎಂದು ಅರಿತೆನು. ಹೀಗೆ ಒಂದು ಆಟವಾಡುವ ಹುಡುಗ ನನ್ನ ಹದಿನೈದನೆಯ ಗುರುವಾದನು.

16. ಚಂದ್ರ: ಪ್ರಕೃತಿಯಲ್ಲಿ ಗೋಚರಿಸುವ ಎಲ್ಲ ವಸ್ತುಗಳಲ್ಲಿ ಚಂದ್ರ ಅತ್ಯಂತ ಅನನ್ಯವಾಗಿರುವಂತಹುದು. ಶುಕ್ಲಪಕ್ಷದಲ್ಲಿ ಹಿಗ್ಗುತ್ತಾ, ಕೃಷ್ಣಪಕ್ಷದಲ್ಲಿ ಕುಗ್ಗುತ್ತಾ ಇರುವಂತೆ ಗೋಚರಿಸುತ್ತದೆ. ವಾಸ್ತವವಾಗಿ ಅಂತರಿಕ್ಷದಲ್ಲಿ ಚಂದ್ರನು ನಿರಂತರವಾಗಿ ಒಂದೇ ತೆರನಾಗಿ ಇರುತ್ತಾನೆ. ಇದೇ ಗುಣ ಒಬ್ಬ ಮನುಷ್ಯನಲ್ಲಿರುವ ಆತ್ಮನದು ಕೂಡ. ಮನುಷ್ಯನು ತನ್ನ ಬಾಲ್ಯ, ಯೌವ್ವನ, ವಯಸ್ಕ ಹಾಗೂ ವೃದ್ಧಾಪ್ಯದ ವಿವಿಧ ಕಾಲಘಟ್ಟಗಳನ್ನು ದಾಟಿಬಂದರೂ, ಅವನ ಆತ್ಮದಲ್ಲಿ ಬದಲಾವಣೆಯಿರುವುದಿಲ್ಲ. ವಯಸ್ಸಿಗೆ ತಕ್ಕಂತೆ ಆಗುವ ಬದಲಾವಣೆಗಳು ದೇಹಕ್ಕೆ ಹೊರತು ಆತ್ಮಕ್ಕಲ್ಲ. ಅದೂ ಅಲ್ಲದೆ ಚಂದ್ರನು ಸೂರ್ಯನಿಂದ ಹೊಮ್ಮುವ ಬೆಳಕನ್ನಷ್ಟೇ ಪ್ರತಿಫಲಿಸುತ್ತಾನೆ, ತನ್ನ ಸ್ವಂತದ್ದಲ್ಲ. ಹಾಗೆಯೇ ಮನುಷ್ಯನ ಮನಸ್ಸು ಹಾಗೂ ಆತ್ಮ ಅವನ ಆಂತರಿಕ ಅರಿವಿನ ಜ್ಯೋತಿಯ ಪ್ರತಿಫಲನ. ಈ ಸತ್ಯವನ್ನು ಕಲಿಸಿಕೊಟ್ಟ ಚಂದ್ರ ನನ್ನ ಹದಿನಾರನೆಯ ಗುರುವಾದನು.

17. ಜೇನುಹುಳ: ಹೂವಿಂದ ಹೂವಿಗೆ ಹಾರುವ ದುಂಬಿಯು, ಹೂವಿಗೆ ಎಳ್ಳಷ್ಟೂ ತೊಂದರೆಯಾಗದಂತೆ ಮಕರಂದವನ್ನು ಹೀರುತ್ತದೆ. ಹೀಗೆಯೇ ಯೋಗಿಯು ಎಲ್ಲ ಧರ್ಮಗ್ರಂಥಗಳ ಅಧ್ಯಯನ ಮಾಡಿ, ಅದರಿಂದ ತನ್ನ ಆತ್ಮೋನ್ನತಿಗೆ ಪೂರಕವಾಗುವ ಅಂಶಗಳನ್ನು ಮಾತ್ರ ಉಳಿಸಿಕೊಳ್ಳಬೇಕು. ಇಂತಹ ಕಲಿಕೆಯನ್ನು ಪಡೆಯುವುದಕ್ಕೆ ಕಾರಣವಾದ ದುಂಬಿಯು ನನ್ನ ಹದಿನೇಳನೆಯ ಗುರು.

18. ಜಿಂಕೆ: ಜಿಂಕೆಯು ಬಹು ಸುಲಭವಾಗಿ ಸಂಗೀತದೆಡೆಗೆ ಆಕರ್ಷಿತವಾಗುತ್ತದೆಂಬ ಕಾರಣಕ್ಕೆ , ಬೇಟೆಗಾರರು ಜಿಂಕೆಯನ್ನು ಬೇಟೆಯಾಡುವ ಮುನ್ನ ಈ ಆಮಿಷವನ್ನು ಒಡ್ಡುತ್ತಾರೆ. ಭಾವೋದ್ವೇಗ ಮತ್ತು ವಿಷಯಭೋಗಗಳಲ್ಲಿನ ಆಸಕ್ತಿಯು, ಲೌಕಿಕ ಸಂಗೀತದ ದೌರ್ಬಲ್ಯವಿರುವ ಅಧ್ಯಾತ್ಮದ ಅಭ್ಯಾಸಿಯನ್ನು ಅಲ್ಲಿಯೇ ಹೂತುಹೋಗುವಂತೆ ಮಾಡಿ, ಅಲ್ಲಿಯವರೆಗೂ ಪಡೆದ ಆಧ್ಯಾತ್ಮದ ಬೆಳವಣಿಗೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಈ ನಿಜವನ್ನು ತಿಳಿಸಿಕೊಟ್ಟ ಜಿಂಕೆಯು ನನ್ನ ಹದಿನೆಂಟನೆಯ ಗುರು.

19. ಬೇಟೆಗಾರ ಹಕ್ಕಿ : ಬೇಟೆಗಾರ ಹಕ್ಕಿಯು ನನ್ನ ಹತ್ತೊಂಬತ್ತನೆಯ ಗುರು. ಒಂದು ದಿನ ಸತ್ತ ಇಲಿಯೊಂದನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹೋಗುತ್ತಿದ್ದುದನ್ನು ನೋಡಿದೆ. ಕಾಗೆ ಮತ್ತು ಹದ್ದಿನಂತಹ ಇನ್ನಿತರ ಹಕ್ಕಿಗಳು ಒಮ್ಮೆ ಈ ಬೇಟೆಗಾರ ಹಕ್ಕಿಯ ತಲೆಗೆ ಒದೆಯುವುದು ಮತ್ತು ಕೆಲವೊಮ್ಮೆ ಅದರ ಬದಿಗಳನ್ನು ಕೊಕ್ಕಿನಿಂದ ಕುಕ್ಕಿ ಅದು ಕಚ್ಚಿಕೊಂಡ ಬೇಟೆಯನ್ನು ಬೀಳಿಸುವ ಪ್ರಯತ್ನ ಮಾಡತೊಡಗಿದವು. ಹೀಗೆ ಆ ಪಾಪದ ಹಕ್ಕಿಯು ಬಹಳ ತೊಂದರೆಗೆ ಒಳಪಟ್ಟಿತು. ಕೊನೆಗೆ, ಹಕ್ಕಿಯು ಜಾಣತನದಿಂದ ಇಲಿಯನ್ನು ಕೆಳಗೆ ಬೀಳಿಸಲು, ಇತರ ಹಕ್ಕಿಗಳು ಅದರ ಬೆನ್ನಟ್ಟಿ ಹೋದವು. ಇತರರು ಕೊಡುತ್ತಿದ್ದ ತೊಂದರೆಯಿಂದ ಬಿಡುಗಡೆ ಹೊಂದಿ ನಿಟ್ಟುಸಿರುಬಿಟ್ಟಿತು. ಇದರಿಂದ ನಾನು ಕಲಿತಿದ್ದೇನೆಂದರೆ, ಮನುಷ್ಯನು ಪ್ರಾಪಂಚಿಕ ಸುಖದ ಬೆನ್ನಟ್ಟಿ ಹೋದಾಗ, ಇವನಂತೆಯೇ ಸುಖದ ಹಿಂದೆ ಓಡುವ ಇತರರೊಂದಿಗೆ ಕಲಹ ಹಾಗು ವಿರೋಧವನ್ನು ಎದುರಿಸಬೇಕಾಗುತ್ತದೆ. ಇಂತಹ ಪ್ರಾಪಂಚಿಕ ವಸ್ತುಗಳಿಗೆ ಹಾತೊರೆಯುವುದನ್ನು ಜಯಿಸಿದಲ್ಲಿ, ಹೆಚ್ಚಿನ ದುಃಖದಿಂದ ಪಾರಾಗಬಹುದು. ಜಗತ್ತಿನಲ್ಲಿ ಶಾಂತಿಯನ್ನು ಕಾಪಾಡಲು ಇದೇ ಸರಿಯಾದ ಮಾರ್ಗ ಎಂದು ಇದರಿಂದ ಅರಿತೆನು.

20. ಕನ್ಯೆ: ಒಮ್ಮೆ ಒಂದು ಕುಟುಂಬವು ತಮ್ಮ ಮಗನಿಗೆ ಕನ್ಯಾರ್ಥಿಯಾಗಿ ಒಂದು ಹುಡುಗಿಯ ಮನೆಗೆ ಹೋದರು. ಆ ಸಮಯದಲ್ಲಿ ಹುಡುಗಿಯ ತಾಯಿ ಹೊರಹೋಗಿದ್ದರು. ಹೀಗಾಗಿ ಹುಡುಗಿಯು ಸ್ವತಃ ಅತಿಥಿ ಸತ್ಕಾರದಲ್ಲಿ ತೊಡಗಬೇಕಾಯಿತು. ತಿಂಡಿ ತಯಾರಿಸಲು ಬೇಕಾದ ಧಾನ್ಯವನ್ನು ಒನಕೆಯಿಂದ ಕುಟ್ಟತೊಡಗಿದಳು. ಆಗ ಕೈಗೆ ಹಾಕಿದ್ದ ಬಳೆಗಳು ಒಂದಕ್ಕೊಂದು ತಾಗಿ ಶಬ್ದ ಮಾಡಿದವು. ಅತಿಥಿಗಳು ಈ ಶಬ್ದವನ್ನು ಕೇಳಿ ಇವಳಿಂದ ತೊಂದರೆಯಾಯಿತು ಎಂದು ದೂಃಖಪಡಬುಹುದು ಎಂದು ಹೆದರಿದಳು. ಹಿಂದೂ ಸಂಪ್ರದಾಯದ ಕನ್ಯೆಯಾದ ಇವಳು, ಯಾವುದೇ ಸಮಯದಲ್ಲಿ ಬರಿಗೈಯಲ್ಲಿ ಇರಬಾರದೆಂದು ನಿರೀಕ್ಷಿಸುತ್ತಾರೆ. ಎರಡೂ ಕೈಗಳಲ್ಲಿ ಎರಡೆರಡು ಬಳೆಗಳನ್ನು ಉಳಿಸಿ ಮಿಕ್ಕ ಬಳೆಗಳನ್ನು ತೆಗೆದಿರಿಸಿದಳು. ಆಗಲೂ ಅವು ಒಂದಕ್ಕೊಂದು ಬಡಿದು ಶಬ್ದವಾಯಿತು. ಹಾಗಾಗಿ ಒಂದೊಂದೆ ಬಳೆಯನ್ನು ಧರಿಸಿ ತನ್ನ ಕೆಲಸವನ್ನು ನಿಶಬ್ದವಾಗಿ ಪೂರೈಸಿದಳು. ಈ ವಿಚಾರವನ್ನು ಮರುಚಿಂತಿಸಿದಾಗ, ಬಹಳಷ್ಟು ಅಧ್ಯಾತ್ಮದ ಆಕಾಂಕ್ಷಿಗಳು ಒಟ್ಟಿಗೆ ಇದ್ದಾಗ , ಅನವಶ್ಯಕ ಚರ್ಚೆಗಳಾಗುತ್ತವೆಯೇ ಹೊರತು ಏಕಾಗ್ರತೆಯಿಂದ ತಮ್ಮ ಸಾಧನೆಯ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕಾಂತದಲ್ಲಿ ಮಾತ್ರ ಆಧ್ಯಾತ್ಮದ ಹಂಬಲವುಳ್ಳವನು ತನ್ನ ಕಾರ್ಯವನ್ನು ಸಾಧಿಸಲು ಸಾಧ್ಯ. ಈ ನಿಜವನ್ನು ಅರಿತ ನಾನು ಅಂದಿನಿಂದ ಏಕಾಂತಕ್ಕೆ ಶರಣಾದೆ. ಹೀಗೆ ಒಬ್ಬ ಕನ್ಯೆ ನನ್ನ ಇಪ್ಪತ್ತನೆಯ ಗುರುವಾದಳು.

21. ಹಾವು: ಹಾವು ಸ್ವಂತಕ್ಕಾಗಿ ಎಂದಿಗೂ ಮನೆ ಕಟ್ಟುವುದಿಲ್ಲ ಎಂಬುದನ್ನು ಗಮನಿಸಿದ್ದೇನೆ. ಗೆದ್ದಲು ತಮ್ಮ ವಾಸಕ್ಕಾಗಿ ಮಣ್ಣಿನ ಗುಡ್ಡವನ್ನು ಮಾಡಿಕೊಂಡಾಗ, ಹಾವು ನಂತರ ಅದರಲ್ಲಿ ಬಂದು ಸೇರಿಕೊಂಡು ವಾಸಿಸತೊಡಗುತ್ತದೆ. ಹೀಗೆಯೇ ಪ್ರಾಪಂಚಿಕ ಮನುಷ್ಯರು ತಮ್ಮ ವಾಸಕ್ಕಾಗಿ ಒಂದು ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಬಹಳ ಶ್ರಮಪಡುತ್ತಾರೆ, ಆದರೆ ಏಕಾಂತ ಬಯಸುವ ಯೋಗಿ ಇದ್ಯಾವುದನ್ನೂ ಮಾಡುವುದಿಲ್ಲ. ಮನುಷ್ಯ ಮಠಗಳನ್ನು ಕಟ್ಟಿದರೆ, ಯೋಗಿ ಅದರಲ್ಲಿ ವಾಸ ಮಾಡುತ್ತಾನೆ, ಅಥವಾ ಮುರುಕು ಗುಡಿಗಳಲ್ಲಿ ಹಾಗೂ ಮರದ ನೆರಳಿನಲ್ಲಿ ತನ್ನ ಜೀವನ ಸಾಗಿಸುತ್ತಾನೆ. ಹಾವು ತನ್ನ ಹಳೆಯ ಚರ್ಮವನ್ನು ಕಳಚಿ ಪೊರೆಯನ್ನು ಬಿಡುತ್ತದೆ. ಒಬ್ಬ ಯೋಗಿಯು ತನ್ನ ಜೀವಿತದ ಕೊನೆಯಲ್ಲಿ ಉದ್ದೇಶಪೂರ್ವಕವಾಗಿ ಹಾಗೂ ಆತ್ಮದ ಇರುವಿಕೆಯ ಪೂರ್ಣ ಅರಿವಿನೊಂದಿಗೆ ತನ್ನ ದೇಹವನ್ನು ತ್ಯಜಿಸುತ್ತಾನೆ ಹಾಗೂ ಸಾವು ಎಂಬ ಸಂಗತಿಗೆ ಹೆದರುವುದಿಲ್ಲ. ಜೀರ್ಣವಾದ ತನ್ನ ಹಳೆಯ ದೇಹವನ್ನು ಬಹಳ ಖುಷಿಯಿಂದ ಹಳೆಯ ಬಟ್ಟೆಗಳಂತೆ ತ್ಯಜಿಸಿ, ಹೊಸ ಬಟ್ಟೆಗಳನ್ನು ತೊಡುತ್ತಾನೆ. ಇದು ನನ್ನ ಇಪ್ಪತ್ತೊಂದನೆಯ ಗುರು ಕಲಿಸಿದ ಪಾಠ.

22. ಜೇಡ: ಜೇಡ ನನ್ನ ಇಪ್ಪತ್ತೆರಡನೆಯ ಗುರು. ಅದು ತನ್ನ ಬಲೆಯನ್ನು ದ್ರವರೂಪದಲ್ಲಿರುವ ವಸ್ತುವಿನಿಂದ ಹೆಣೆಯುತ್ತದೆ. ಕೆಲ ಸಮಯದ ನಂತರ ಬಲೆಯನ್ನು ತನ್ನೊಳಗೆ ಹುದುಗಿಸಿಕೊಳ್ಳುತ್ತದೆ. ಸೃಷ್ಟಿಕರ್ತನು ತನ್ನೊಳಗಿಂದಲೇ ಎಲ್ಲ ಜೀವಿಗಳ ಸೃಷ್ಟಿಯನ್ನು ಮಾಡಿ, ಆನಂತರ ವಿಸರ್ಜನೆಯ ಸಮಯದಲ್ಲಿ ಎಲ್ಲವನ್ನು ತನ್ನಲ್ಲೇ ವಿಲೀನಗೊಳಿಸುತ್ತಾನೆ. ಪ್ರತ್ಯೇಕ ಆತ್ಮವೂ ಅರಿವು ಹಾಗು ಮನಸ್ಸನ್ನು ತನ್ನಲ್ಲೇ ಇಟ್ಟುಕೊಂಡು, ಮನುಷ್ಯ ಅಥವಾ ಇನ್ಯಾವುದೇ ಜೀವಿಯಾಗಿ ಹುಟ್ಟುವ ಸಮಯದಲ್ಲಿ, ಇಂದ್ರಿಯಗಳಾಗಿ, ಅಂಗಾಂಗಳಾಗಿ ಮತ್ತು ಸಂಪೂರ್ಣ ದೇಹವಾಗಿ ನಿಯೋಜಿಸಲ್ಪಡುತ್ತದೆ. ಅವ್ಯಕ್ತ ಪ್ರವೃತ್ತಿಯನ್ನು ಹೊಂದಿರುವ ಅನುಸಾರವಾಗಿ, ಹುಟ್ಟುವ ಜೀವಿ, ತಾನು ಜೀವಿಸುವುದಕ್ಕೆ ಬೇಕಾಗುವ ಎಲ್ಲ ಸಾಧನಗಳು ಮತ್ತು ವಸ್ತುಗಳನ್ನು ಒಟ್ಟುಗೂಡಿಸುತ್ತದೆ. ಜೀವಿತದ ಕೊನೆಗಾಲದಲ್ಲಿ, ಆತ್ಮವು ಸಾವಿನ ಮೂಲಕ ಎಲ್ಲ ಇಂದ್ರಿಯಗಳು, ಮನಸ್ಸು ಮತ್ತು ಗಳಿಸಿದ ಎಲ್ಲ ಪ್ರವೃತ್ತಿಗಳನ್ನು ಹಿಂತೆಗೆದುಕೊಳ್ಳುತ್ತದೆ. ಹೀಗೆ ನಾನು ಜೇಡನಿಂದ ಕಲಿತೆ.

23. ಕಣಜ: ಕಣಜವೂ ಸಹ ನನ್ನ ಜ್ಞಾನ ಸಂಪಾದನೆಯಲ್ಲಿ ಸಹಾಯ ಮಾಡಿದ ಗುರುಗಳಲ್ಲಿ ಒಂದು. ಕಣಜವು ಒಂದು ಹುಳುವನ್ನು ಸುರಕ್ಷಿತವಾದ ಮೂಲೆಯಲ್ಲಿ ಇಟ್ಟು ಗೂಡಿನಿಂದ ಮುಚ್ಚುತ್ತದೆ. ಅದರ ಸುತ್ತ ತಿರುಗುತ್ತಾ ನಿರಂತರ ಗೂಂಗುಡುತ್ತಿರುತ್ತದೆ. ಈ ನಿರಂತರ ಶಬ್ದದಿಂದ ಹುಳವು ಎಷ್ಟು ಹೆದರಿರುತ್ತದೆಂದರೆ, ಗೂಂಗುಧುತತಿರುವ ಕಣಜವನ್ನು ಹೊರತು ಮತ್ತೇನನ್ನೂ ಅದು ಚಿಂತಿಸಲಾಗದು. ಕಣಜದ ಬಗೆಗಿನ ಈ ಪರಿಯ ನಿರಂತರ ಚಿಂತನೆಯಿಂದ ಆ ಹುಳುವೂ ಕಣಜವೇ ಆಗುತ್ತದೆ, ಇದೇ ರೀತಿಯಲ್ಲಿ ಯಾರು ಪರಮಾತ್ಮನೆಡೆಗೆ ನಿರಂತರ ಚಿಂತಿಸುತ್ತಾನೋ ಅವನು ಆತ್ಮಜಾಗೃತಿಯನ್ನು ಹೊಂದುತ್ತಾನೆ. ಹೀಗೆ ಕಣಜವು ನನ್ನ ಇಪ್ಪತ್ತ್ಮೂರನೆಯ ಗುರು.

24. ನೀರು: ನೀರು ನನ್ನ ಇಪ್ಪತ್ತ್ನಾಲ್ಕನೆಯ ಗುರು. ಎಲ್ಲ ಜೀವಿಗಳ ದಾಹ ತಣಿಸಿ, ಗಿಡ-ಮರ, ಪ್ರಾಣಿ-ಪಕ್ಷಿಗಳನ್ನು ಪೊರೆಯುತ್ತದೆ. ಎಲ್ಲ ಜೀವ ಜಂತುಗಳನ್ನು ಸಲಹಿದರೂ, ಎಲ್ಲವೂ ನನ್ನಿಂದಲೇ ಎಂಬ ಅಹಂಕಾರ ಅದಕ್ಕಿಲ್ಲ. ಬಹಳ ವಿನಮ್ರತೆಯಿಂದ ಅತ್ಯಂತ ತಳಮಟ್ಟದಲ್ಲಿನ ಸ್ಥಾನವನ್ನು ಬೇಡುತ್ತದೆ. ಒಬ್ಬ ಯೋಗಿಯೂ ಅವನ ಆಶ್ರಯಕ್ಕೆ ಬಂದ ಎಲ್ಲ ಜೀವಿಗಳಿಗೆ ಸುಖ, ಶಾಂತಿ ಹಾಗು ಆರೋಗ್ಯವನ್ನು ಕರುಣಿಸಬೇಕು. ಇಷ್ಟಾಗಿಯೂ ಅವನು ಯಾವಾಗಲೂ ಪರಮಾತ್ಮ ಸೃಷ್ಟಿಸಿದ ಎಲ್ಲ ಜೀವಿಗಳಲ್ಲಿ ವಿನಯವಂತನಾಗಿ ಇರಬೇಕು.

ಹೀಗೆ, ಅತ್ಯಂತ ಭಕ್ತಿ ಹಾಗೂ ವಿನಮ್ರತೆಯಿಂದ, ಪರಮಾತ್ಮನ ಎಲ್ಲ ಸೃಷ್ಟಿಯನ್ನು ಗುರುವೆಂದು ಪರಿಗಣಿಸಿ, ಅವರಿಂದ ಅನಂತ ಜ್ಞಾನವನ್ನು ಪಡೆದು ಮತ್ತು ನಿರಂತರ ಸಾಧನೆಯಿಂದ ನನ್ನ ಗುರಿಯಾದ ಆಧ್ಯಾತ್ಮಿಕ ಜ್ಞಾನವನ್ನು ಸಾಧಿಸಿದೆನು.

 

ಶಿಕ್ಷಣ, ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣದ ಕುರಿತಾಗಿ ಕಾಳಜಿ ಇರುವ ಆಸಕ್ತರಿಗೆ ಉಪಯುಕ್ತವಾಗಲೆಂದು ಬೇರೆ ಬೇರೆ ಮೂಲಗಳಿಂದ ಆಯ್ದ ಲೇಖನ ಮತ್ತು ವಿಡಿಯೋಗಳ ಕನ್ನಡ ಅನುವಾದವನ್ನು ದರ್ಪಣ’ ಯೋಜನೆ ನೀಡುತ್ತಿದೆ 

ವಿವರಗಳಿಗೆ ಸಂಪರ್ಕಿಸಿ 

ಎಸ್ಎನ್ಗಣನಾಥ 

9980131765

sngananath@gmail.com