https://s-media-cache-ak0.pinimg.com/736x/77/73/1b/77731b2a1b3b081f4af1002aa259b258.jpg

  " ಹರ ಹರ ಮಹದೇವ" 

ಇವತ್ತು ಮಹಾಶಿವರಾತ್ರಿ. ಶಿವನನ್ನ ನೆನೆಯೋ ಪುಣ್ಯ ದಿನ. ಉಪವಾಸ ಕೂತ್ಕೊಂಡು ಜಾಗರಣೆ ಮಾಡ್ತಾ ಶಿವನಿಗೆ ಬಿಲ್ವಾರ್ಚನೆ ಮಾಡಿ , ಶಿವನಿಗೆ ಸಂಬಂಧಿಸಿದ ಶ್ಲೋಕ , ಕೀರ್ತನೆಗಳನ್ನ ಹೇಳ್ತಾ ಆ ಪುಣ್ಯವನ್ನ ತಮ್ದಾಗಿಸಿಕೊಳ್ಳೋಕೆ ಅದೇಷ್ಟೋ ಜನ ಕಾತರದಿಂದ ಕಾಯ್ತಾ ಇರ್ತಾರೆ . ಶಿವ ಅಂದಕೂಡ್ಲೇ ನೆನಪಾಗೋದು ವಿನಾಶದ ದೇವರಂತ. ವಿನಾಶ ಮಾಡೋದು ಶಿವನ ಕೆಲಸ.

ಆದ್ರೆ ಈ ವಿನಾಶವೊಂದೇ ಶಿವನ ಕೆಲ್ಸ ಅನ್ಕೊಂಡ್ರೆ ದೊಡ್ಡ ತಪ್ಪಾಗತ್ತೆ ಯಾಕಂದ್ರೆ ಇಡೀ ಜಗತ್ತನ್ನ ವಿನಾಶ ಮಾಡೋದಕ್ಕಂತಾನೇ ಹುಟ್ಟಿರೋ ಆ ಹಾಲಾಹಲವನ್ನ ಕುಡಿದು ಜಗತ್ತನ್ನ ಉಳಿಸಿ ನೀಲಕಂಠೇಶ್ವರ ಎನಿಸಿಕೊಂಡ , ತನ್ನ ಪತ್ನಿಗಾಗಿ ತನ್ನರ್ಧ ದೇಹವನ್ನೇ ಕೊಟ್ಟು ಅರ್ಧನಾರೀಶ್ವರ ಎನಿಸಿಕೊಂಡ , ತನ್ನನ್ನ ಯಮನಿಂದ ಕಾಪಾಡು ಅಂತ ಮಾರ್ಕೇಂಡಯ ಶಿವನ ಬಳಿ ಬೇಡಿದಾಗ ಮಾರ್ಕೇಂಡೆಯನ ಜೀವ ಉಳಿಸಿ ಭಕ್ತ ಜನರ ಬಂಧು ಎನಿಸಿಕೊಂಡ ಇದೇ ತರ ಶಿವನ ಬಗ್ಗೆ ಇರೋ ಎಳು ವಿಶೇಷ ಕಥೆಗಳನ್ನ ಇವತ್ತು ಅಂತೆಕಂತೆ ತಂಡ ಶಿವರಾತ್ರಿಯ ಪ್ರಯುಕ್ತ ಹೇಳೋಕೆ ಬರ್ತಾ ಇದ್ದೀವಿ. 

 1) ಲೋಕದ ರಕ್ಷಣೆಗಾಗಿ ಮಹಾಕಾಳಿಯ ಕಾಲಡಿಯಲ್ಲಿ ಬಿದ್ದು ಸಕಲ ಜೀವರಾಶಿ ದೇವ ರಾಕ್ಷಸ ಗಣಗಳನ್ನ ರಕ್ಷಿಸಿದ ಕತೆ

ಜೀವ್ನದಲ್ಲಿ ಹೇಗೆ ತಗ್ಗಿಬಗ್ಗಿ ನಡೀಬೇಕು ಅನ್ನೋದ್ನ ಶಿವ ಮತ್ತೆ ಕಾಳಿಯ ಕತೆ ಕೇಳಿ ತಿಳ್ಕೋಬೇಕು. ಶಿವನಿಗೆ ಕೋಪ ಜಾಸ್ತಿ , ಕೋಪ ಬಂದ್ರೆ ಸಿಕ್ಕಿದ್ದೆಲ್ಲ ನಾಶ ಮಾಡ್ತಾನೆ ಅಂತಿದೆ. ಆದ್ರೆ ಶಿವ ಮತ್ತೆ ಕಾಳಿಯ ಕತೆಯಲ್ಲಿ ಶಿವನ ಪರೋಪಕಾರಿ ಗುಣವನ್ನ ನೋಡ್ಬಹುದು.

ಒಂದ್ಸಲ ಎನಾಯ್ತಂದ್ರೆ ಮಹಾಕಾಳಿ ಭೀಬತ್ಸ ರೂಪವನ್ನ ತಾಳಿದ್ಲು. ಮನುಷ್ಯರಾಗ್ಲಿ , ರಾಕ್ಷಸರಾಗಲಿ , ದೇವಗಣವಾಗ್ಲೀ ಆ ಭೀಬತ್ಸ ರೂಪದ ಎದ್ರಗಡೆ ನಿಲ್ಲೋಕೆ ಆಗ್ಲಿಲ್ಲ ಮೇಲಾಗಿ ಶಾಂತರೂಪಕ್ಕೆ ತರೋದಂತೂ ಆಗ್ದೇ ಇರೋ ಮಾತು. ಈ ಸಮಯದಲ್ಲಿ ಕಾಳಿಯನ್ನ ಕುರಿತು ಕೆಲ್ವೊಂದು ಶ್ಲೋಕಗಳನ್ನ ಪಠಣ ಮಾಡಲಾಯ್ತು. ಅದ್ರಿಂದ ಎನೂ ಪ್ರಯೋಜನವಾಗ್ಲೇ ಇಲ್ಲ. ಕಾಳಿ ಕಾಲಿಟ್ಟಲೆಲ್ಲ ವಿನಾಶ ಆಗ್ತಾ ಇತ್ತು.

ಅದ್ಕೆ ಶಿವ ತನ್ನೆಲ್ಲ ಕೋಪ ತಾಪಗಳನ್ನ ಬಿಟ್ಟು ಮಹಾಕಾಳಿಯ ಕಾಲಡಿಯಲ್ಲಿ ಅಂಗಾತವಾಗಿ ಮಲಗಿದ. ಮಹಾಕಾಳಿ ನಿಧಾನಕ್ಕೆ ಎಲ್ಲವನ್ನ ನಾಶ ಮಾಡ್ತಾ ಬರ್ತಾ ಇರೋವಾಗ ಶಿವ ತನ್ನ ಕಾಲಡಿಯಲ್ಲಿ ಮಲಗಿದ್ದು ಗೊತ್ತಾಗ್ಲೇ ಇಲ್ಲ. ಶಿವನ ಎದೆಯ ಮೇಲೆ ಕಾಳಿ ಕಾಲಿಟ್ಟ ತಕ್ಷಣ ತಾನು ಮಾಡ್ತಾ ಇರೋ ತಪ್ಪು ಅರಿವಾಯಿತು. ಅದೇ ಸಮಯಕ್ಕೆ ಅರುಣೋದಯವಾಗಿ ಮಹಾಕಾಳಿ ನಾಲಗೆಯನ್ನ ಹೊರಹಾಕಿ ತಾನು ಮಾಡಿರೋ ಕೆಲ್ಸಕ್ಕಾಗಿ ವಿಷಾದ ವ್ಯಕ್ತಪಡಿಸ್ತಾಳೆ.

ಇದ್ರಿಂದ ನಾವ್ ಎನ್ ತಿಳ್ಕೊಬಹುದು ಅಂದ್ರೆ ನಿಮ್ಮಲ್ಲಿ ಅದೇಷ್ಟೇ ಶಕ್ತಿ ಇರ್ಬಹುದು ಕೆಲವೊಮ್ಮೆ ನೀವು ಸಮಯಕ್ಕೆ ತಕ್ಕಂತೆ ಶಿವನ ರೀತಿ ತಲೆಬಾಗಬೇಕಾಗತ್ತೆ. 


 

2) ರಾವಣನನ ಸಂಹಾರಕ್ಕಾಗಿ ಹನುಮಂತನ ಅವತಾರ ಎತ್ತಿದ ಕತೆ

ಹನುಮಂತ ದೇವ್ರನ್ನ ನಾವು ಶಿವನ ಹನ್ನೊಂದನೇ ಅವತಾರ ಅಂತ ಕರೀತೇವೆ. ಹನುಮಂತನ್ನನ್ನ ರುದ್ರವತಾರ ಅಂತಾನೂ ಹಾಗೆ  ರುದ್ರ ಮತ್ತೆ ಶಿವನ ಅವತಾರ ಅಂತಾನೂ ಕರೀತಾರೆ. 

 ಹನುಮಂತನ ಕಥೆ ಎಲ್ರಿಗೂ ಗೊತ್ತೆ ಇದೆ. ರಾಮಾಯಣದ ಕಾಲದಲ್ಲಿ ಶ್ರೀ ರಾಮನಿಗೆ ರಾವಣನನ್ನು ಸಂಹಾರ ಮಾಡಲು ಸಹಾಯ ಮಾಡಿದ್ದು  ವಾನರ ಪಡೆ.  ಆ ವಾನರ ಪಡೆಯ ಮುಖ್ಯ ವಾನರನೇ ಶ್ರೀ ಹನುಮಂತ.

ರಾಮ ವಿಷ್ಣುವಿನ ಅವತಾರ. ಹನುಮಂತ ಶಿವನ ಅವತಾರ. ಇಲ್ಲಿ ಶಿವ ತನ್ನ ಅಪರಿಮಿತವಾದ ವಿಷ್ಣು ಭಕ್ತಿಯನ್ನ ಹನುಮಂತನ ರೂಪದಲ್ಲಿ ತೋರ್ಸತಾನೆ. ಇಲ್ಲಿಯೂ ಕೂಡಾ ಹನುಮಂತ ಕೆಟ್ಟದರ ಪರವಾಗಿ ಹೋರಾಡೋ ಕೆಲ್ಸ ಮಾಡ್ತಾನೆ. ಅಂದ್ರೆ ಶಿವ ಕೆಟ್ಟದನ್ನ ನಾಶ ಮಾಡ್ತಾನೆ ಅಂತರ್ಥ. 


 

3)  ಅಮರರಾಗೋ ಬಗೆ ಹೇಗಂದು ಪಾರ್ವತಿ ಕೇಳಿದಾಗ , ಮಾಮೂಲಿ ಗುಹೆಯನ್ನ ಪವಿತ್ರವಾದ ತೀರ್ಥಕ್ಷೇತ್ರವನ್ನಾಗಿ ಮಾಡಿದ ಕತೆ

ಶಿವನ ಭಕ್ತರಿಗೆ ಅಮರನಾಥ ಗುಹೆಯನ್ನೋದು ಅತಿ ಪವಿತ್ರ ಸ್ಥಳ. ಇಲ್ಲಿಯೇ ಪರಶಿವನು ಅಮರರಾಗೋ ಬಗೆ ಹೇಗೆ ಅನ್ನೋದನ್ನ ತನ್ನ ಪತ್ನಿ ಪಾರ್ವತಿಗೆ ಹೇಳಿದ್ದಂತೆ. ಅಮರರಾಗೋ ವಿಷ್ಯ ಗುಪ್ತವಾಗಿಯೇ ತನ್ನ ಪತ್ನಿಗೆ ಹೇಳಬೇಕು ಅಂತ ಶಿವ ಅಂದುಕೊಂಡಾಗ , ಆಯ್ಕೆ ಮಾಡ್ಕೊಂಡಿದ್ದೇ ಗುಹೆಯನ್ನಂತೆ.

ಗುಹೆಯ ದಾರಿಯುದ್ದಕ್ಕೂ ಶಿವ ಕೆಲ್ವೊಂದು ಕೆಲ್ಸವನ್ನ ಮಾಡ್ತಾನೆ. ಆ ಕೆಲ್ಸಗಳಿಂದಾನೇ ಈ ಗುಹೆ ಅತಿ ಪವಿತ್ರ ಅನ್ಸಕೊಳ್ಳತ್ತೆ. ಅಮರಕಥೆಯನ್ನ ಹೇಳೊದಕ್ಕಿಂತ ಮುಂಚೆ ಶಿವ ತನ್ನ ಮಗನನ್ನ , ತನ್ನ ವಾಹನವನ್ನ ಮತ್ತಿತ್ತರ ವಸ್ತುಗಳನ್ನ ಇಲ್ಲಿಯೇ ಬಿಟ್ ಹೋಗ್ತಾನೆ. ಅದೇ ಇವತ್ತಿಗೆ ತೀರ್ಥಕ್ಷೇತ್ರ ಅನ್ಸಕೊಳ್ಳತ್ತೆ.

ಅಮರನಾಥ ಗುಹೆಗೆ ನೀವ್ ಪ್ರಯಾಣ ಮಾಡ್ಬೇಕಂದ್ರೆ ಎರಡು ದಾರಿಗಳಿವೆ. ಪಹ್ಲಗಾಮ್ನಿಂದ ನೀವು ಹೋಗ್ಬಹುದು ಹಾಗೆ ಸೊನ್ಮಾರ್ಗ್ ಬಲ್ಟಾಲ್ನಿಂದಲೂ ಪ್ರಯಾಣ ಆರಂಭಿಸಬಹುದು. ಶಿವ ಅಮರನಾಥ ಗುಹೆಗೆ ಹೋಗಿದ್ದು ಪಹ್ಲಗಾಮ್ ದಾರಿಯಿಂದಾನೇ ಅಂತ ಹೇಳ್ತಾರೆ. 

 

4) ತನ್ನ ಕೋಪವನ್ನ ಕಡ್ಮೆಮಾಡಲು ದೇವಗಣಗಳು ಶಿವನಿಗೆ ನಂದಿಯನ್ನೋ ಗೂಳಿಯನ್ನ ಕೊಟ್ಟ ಕತೆ

ಶಿವ ಮತ್ತೆ ನಂದಿಯ ಸಂಬಂಧ ಬೇರ್ಪಡಿಸಲಾಗದ ಸಂಬಂಧ. ನಂದಿ ಶಿವನ ವಾಹನ ಅಂತ ಹಿಂದೂಧರ್ಮದಲ್ಲಿ ಹೇಳಲಾಗಿದೆ. ನಂದಿ ಸತ್ಯ ಮತ್ತೆ ಸದಾಚರದ ಸಂಕೇತ.

ಸುರಭಿ ಅನ್ನೋದು ಎಲ್ಲಾ ಹಸುಗಳ ತಾಯಿ. ಒಂದ್ಸಲ ಸುರಭಿ ಅಗಾಧವಾದ ಸಂಖ್ಯೆಯಲ್ಲಿ ಬಿಳಿ ಹಸುಗಳಿಗೆ ಜನ್ಮ ನೀಡ್ತಾಳೆ. ಎಲ್ಲ ಹಸುಗಳ ಹಾಲು ಶಿವನ ಮನೆಗೆ ಹರ್ದೋಗತ್ತೆ. ಇದ್ರಿಂದ ಶಿವನ ಧ್ಯಾನಕ್ಕೆ ಭಂಗವಾಗತ್ತೆ. ಶಿವನ ಕೋಪದ ಬಗ್ಗೆ ಕೇಳ್ಬೇಕಾ ಮೂರನೇ ಕಣ್ಣನ್ನ ಬಿಟ್ಟು ಎಲ್ಲಾ ಹಸುಗಳನ್ನ ಸುಟ್ಟಬಿಡ್ತಾನೆ.ಇದ್ರ ಪರಿಣಾಮದಿಂದ ಮೈಮೇಲೆ ಕಪ್ಪು ಬಣ್ಣ  ಕಂದು ಬಣ್ಣವಾಗಿ ಬದ್ಲಾಯಿತು.  ಇದ್ನೆಲ್ಲಾ ನೋಡ್ತಾ ಇದ್ದ ದೇವಗಣಗಳು ಹಸುಗಳನ್ನ ಉಳ್ಸಕೊಳ್ಳೋಕೆ ಶಿವನ ಕೋಪವನ್ನ ಕಮ್ಮಿ ಮಾಡ್ಸಬೇಕಿತ್ತು. ಅದ್ಕೊಸ್ಕರ ಒಂದು ಬಲಿಷ್ಟವಾದ ಗೂಳಿಯನ್ನ ಸೃಷ್ಟಿ ಮಾಡ್ತಾರೆ. ಆ ಗೂಳಿಯೇ ಸುರಭಿ ಮತ್ತೆ ಕಶ್ಯಪರಿಂದ ಹುಟ್ಟಿದ ನಂದಿ.  ಈ ನಂದಿಯಿಂದಾಗಿಯೇ ಅನೇಕ ಹಸುಗಳು ತಮ್ ಪ್ರಾಣವನ್ನ ಉಳ್ಸಕೊಳ್ತಾವೆ. ನಂದಿಯನ್ನ ಪೂಜಿಸಿದ್ರೆ ವರಗಳು ಸಿಗ್ತಾವೆ ಅನ್ನೋ ನಂಬಿಕೆ ಜನ್ರಲಿದೆ. 


 

5) ವಿಷ್ಣುವಿನ ಭಕ್ತಿಗೆ ಮೆಚ್ಚಿ ಸುದರ್ಶನ ಚಕ್ರ ಕೊಟ್ಟ ಕತೆ

ಸುದರ್ಶನ ಚಕ್ರದ ಬಗ್ಗೆ ನೀವ್ ಕೇಳೇ ಇರ್ತೀರಿ ಶ್ರೀ ಕೃಷ್ಣನ ಕೈಯಲ್ಲಿ ಇದೆಯಲ್ಲ ಅದೇ. ಈ ಸುದರ್ಶನ ಚಕ್ರವನ್ನ ವಿಷ್ಣುದೇವರಿಗೆ ಶಿವ ದೇವರು ಕೊಟ್ಟಿದ್ದು. ವಿಷ್ಣುದೇವರು ಶಿವ ದೇವ್ರನ್ನ ಪೂಜಿಸೋಕೆ 1000 ಕಮಲದ ಹೂವನ್ನ ಆಯ್ಕೆಮಾಡ್ಕೊಂಡು ಪೂಜೆ ಶುರು ಮಾಡ್ತಾರೆ. 

 ಶಿವನಿಗೆ ವಿಷ್ಣುವಿನ ಭಕ್ತಿಯನ್ನ ಪರೀಕ್ಷೆ ಮಾಡೋ ಮನಸ್ಸಾಯ್ತು. ಅದ್ಕೆ ಶಿವ ಸಾವಿರ ಕಮಲದಲ್ಲಿ ಒಂದು ಕಮಲವನ್ನ ಕದ್ದು ಇಟ್ಕೊಳ್ತಾನೆ.

ಯಾವಾಗ ವಿಷ್ಣು 1000ನೇ ಕಮಲವನ್ನ ಲಿಂಗದಲ್ಲಿ ಇಡೋಕೆ ಮುಂದಾದಾಗ ಕಮಲದ ಹೂ ಖಾಲಿಯಾಗಿರತ್ತೆ. ತಡ ಮಾಡದೇ ವಿಷ್ಣು ತನ್ನ ಕಣ್ಣನ್ನೇ ತೆಗೆದು ಶಿವನ ಲಿಂಗಕ್ಕೆ ಕಮಲದ ರೂಪದಲ್ಲಿ ಇಡ್ತಾನೆ. ಇದ್ರಿಂದ ಸಂತುಷ್ಟಗೊಂಡ ಶಿವ ವಿಷ್ಣುವಿಗೆ ಸುದರ್ಶನ ಚಕ್ರವನ್ನ ಕೊಡ್ತಾನೆ . ವಿಷ್ಣುವಿಗೆ ಕಮಲನಯನ ಅಂತಾನೂ ಕರೀತಾರೆ. 

 

6) ಪ್ರಣಾದ ಋಷಿಯ ಮದವನ್ನ ಇಳಿಸಲು ಇಡೀ ದೇಹವನ್ನೇ  ಭಸ್ಮವನ್ನಾಗಿ ಮಾರ್ಪಾಡುಮಾಡಿಕೊಂಡ ಕತೆ

ಎಲ್ಲಾ ಸುಟ್ಟೋದ್ ನಂತರ ಉಳಿಯೋದೆ ಭಸ್ಮ ಅನ್ನೋದು ಸತ್ಯವಾದ ಮಾತು. ಶಿವ ಮೈತುಂಬೆಲ್ಲಾ ಭಸ್ಮವನ್ನ ಹಚ್ಕೊಂಡ್ ಇರ್ತಾನೆ. ಶಿವನ ಭಕ್ತರು ಕೂಡಾ ಅಷ್ಟೇ ಮೈ ತುಂಬಾ ಭಸ್ಮ ಹಚ್ಕೊಂಡು ಜಪತಪ ಮಾಡ್ತಾ ಇರ್ತಾರೆ. ಆದ್ರೆ ಶಿವ ಯಾಕೆ ಮೈ ತುಂಬಾ ಬೂದಿಯನ್ನ ಹಚ್ಕೊಳ್ತಾನೆ ಅನ್ನೋ ವಿಷ್ಯ ಇವತ್ತು ನಿಮ್ಗೆ ಹೇಳ್ತಿವಿ ಕೇಳಿ.

ಭ್ರಗು ಮಹರ್ಷಿಯ ಸಂತತಿಯಲ್ಲಿ ಒಬ್ಬ ಋಷಿ ಕಠೋರವಾದ ತಪಸ್ಸನ್ನ ಆಚರಿಸ್ತಾನೆ. ಅವನ ತಪಸ್ ಶಕ್ತಿಯಿಂದ ದಿನೇ ದಿನೇ ಶಕ್ತಿಯುತನಾಗ್ತಾನೆ. ಈ ಋಷಿ ಮೊದಲು ಹಣ್ಣನ್ನ ಮಾತ್ರ ತಿಂದು ಆಮೇಲೆ ಹಸಿರೆಲೆಗಳನ್ನ ತಿಂತಿದ್ದರಂತೆ ಅದ್ಕೆ ಈ ಋಷಿಗೆ ಪ್ರಣಾದ ಅನ್ನೋ ಹೆಸ್ರು ಬಂತು.  ಇದ್ರಿಂದ ಪ್ರಣಾದ ಋಷಿಗೆ ಎಲ್ಲಾ ಸಸ್ಯ ಮತ್ತೆ ಜೀವ ಸಂಕುಲಗಳ ಮೇಲೆ ಹಿಡಿತ ಬಂತು.

ಹೀಗೆ ಒಂದು ದಿನ ಪ್ರಣಾದ ಋಷಿ ತನ್ನ ಉದ್ಯಾನದಲ್ಲಿ ಗಿಡವನ್ನ ಕತ್ತರಿಸುತ್ತಿರುವಾಗ ಮಧ್ಯದ ಬೆರಳು ತುಂಡಾಯ್ತು. ಮಾಮೂಲಾಗಿ ರಕ್ತ ಬರ್ಬೇಕಾದ ಜಾಗದಲ್ಲಿ ಸಸ್ಯರಸ ಬಂತು. ಇದ್ರಿಂದ ಪ್ರಣಾದನಿಗೆ ಅತೀವ ಆನಂದವಾಯ್ತು. ಈ ಭೂಮಿಯ ಮೇಲೆ ನಾನೊಬ್ಬನೇ ಅತಿ ಪವಿತ್ರ ಮನುಷ್ಯ ಅನ್ನೋ ಮದ ತಲೆಗತ್ತಿತು.

ಇದ್ನೆಲ್ಲಾ ಪರಶಿವ ನೋಡ್ತಾ ಇದ್ದ. ಕೂಡಲೇ ವೇಷ ಬದ್ಲಿಸಿ ಒಬ್ಬ ಮುದುಕ ಮನುಷ್ಯನಾಗಿ ಪ್ರಣಾದನ ಎದುರಿಗೆ ನಿಲ್ತಾನೆ. ಯಾಕಿಷ್ಟು ಸಂತೋಷವಾಗಿದ್ದೀಯ ಅಂತ ಕೇಳ್ದಾಗ ನಡ್ದಿರೋ ವಿಷ್ಯಾನ ಹೇಳ್ತಾನೆ . ಇದ್ನ ಕೇಳಿ ಮುದುಕ ನಗ್ತಾ ಹೇಳ್ತಾನೆ ಅದ್ರಲ್ಲೇನಿದೆ ಅಂತ ದೊಡ್ಡ ವಿಷ್ಯ. ಯಾವಾಗ ಮರ ಗಿಡಗಳು ಸುಟ್ಟೋಗತ್ತೋ ಕೊನೆಗೆ ಉಳಿಯುದು ಭಸ್ಮ ಮಾತ್ರ. ಅದೇ ಅಂತಿಮವಾದ ಹಂತ ಅಂತೇಳಿ ತನ್ನ ಬೆರಳನ್ನ ಕತ್ತರಿಸಿಕೊಳ್ತಾನೆ. ಆ ಬೆರಳಿಂದ ಭಸ್ಮ ಬರ್ತಾ ಇರೋದ್ನ ನೋಡಿದ ಪ್ರಣಾದನಿಗೆ ತನ್ನೆದುರಿಗೆ ನಿಂತಿರೋದು ದೇವ್ರು ಅಂತ ಗೊತ್ತಾಗಿ ತನ್ನ ಮದವನ್ನ ಇಳಿಸಿದಕ್ಕೆ ಕಾಲಿಗೆ ಬೀಳ್ತಾನೆ. ಅಲ್ಲಿಂದ ಶಿವನ ಭಕ್ತರೆಲ್ಲ ಮೈ ತುಂಬೆಲ್ಲಾ ಭಸ್ಮವನ್ನ ಹಚ್ಕೊಳ್ತಾರೆ. 

 

7) ತನ್ನ ಸಂಗಾತಿ ಆಗುವವಳನ್ನ ಪರಿಕ್ಷೆ ಮಾಡಿದ ಕತೆ

ಶಿವ ಪಾರ್ವತಿಯನ್ನ ಮದ್ವೆಯಾಗೋಕ್ಕಿಂತ ಮುಂಚೆ ಪಾರ್ವತಿಯನ್ನ ಪರೀಕ್ಷೆ ಮಾಡಿದ ಅನ್ನೋ ಕಥೆ ಕೆಲವು ಕಡೆಯಲ್ಲಿ ಕಂಡು ಬರತ್ತೆ. ಆ ಕಥೆ ಹೀಗಿದೆ ಕೇಳಿ.

ಯಾವಾಗ ಪಾರ್ವತಿ ಶಿವನನ್ನ ಮದ್ವೆಯಾಗೋದಕ್ಕೆ ಇಷ್ಟ ಪಡ್ತಾಳೋ ಆವಾಗ್ಲೇ ಶಿವ ಪಾರ್ವತಿಯ ಪ್ರೀತಿಯ ಪರಿಕ್ಷೆ ಮಾಡೋದಕ್ಕೆ ಬ್ರಾಹ್ಮಣನಾಗಿ ಪಾರ್ವತಿಯ ಬಳಿ ಹೋಗ್ತಾನೆ. ಭಿಕ್ಷುಕನನ್ನ ಮದ್ವೆಯಾಗೋದಕ್ಕಿಂತ ಬೇರೆಯಾರನ್ನಾದ್ರೂ ಮದ್ವೆಯಾಗೋದು ಒಳ್ಳೆಯದು ಅಂತ ಹೇಳ್ದಾಗ ಪಾರ್ವತಿ ಕೋಪದಿಂದ ಬ್ರಾಹ್ಮಣನಿಗೆ " ನಾನು ಮದ್ವೆಯಂತೇನಾದ್ರೂ ಆದ್ರೆ ಅದು ಶಿವನನ್ನೇ " ಇದ್ನ ಕೇಳಿದ ಶಿವ ಸಂತುಷ್ಟಗೊಂಡು ಪಾರ್ವತಿಯನ್ನ ಮದ್ವೆಯಾಗ್ಲಿಕ್ಕೆ ಒಪ್ಕೊಳ್ತಾನೆ. 

ಕೇಳಿದ್ದಿರಲ್ಲಾ ಪರಶಿವನ ಮಹಿಮೆ. ಇವತ್ತಿನ ದಿನ ಪರಶಿವನನ್ನ ನೆನೆದು ಧನ್ಯರಾಗಿ. ಹರ ಹರ ಮಹಾದೇವ .