http://www.hindustantimes.com/rf/image_size_960x540/HT/p2/2017/02/24/Pictures/_f7ff8ee4-fa61-11e6-ab12-d7625b180dd1.jpg

ವಿಷ್ಣು ದಶಾವತಾರದ ಬಗ್ಗೆ ಎಲ್ಲಾರ್ಗೂ ಗೊತ್ತು, ಆದರೆ ಶಿವನೂ ನ್ಯಾಯ-ಧರ್ಮ ರಕ್ಷಣೆಗೆ ಅಂತ ಹತ್ತೊಂಬತ್ತು ಸಲ ಅವತಾರ ಎತ್ತಿದ್ದ ಅಂತ ಹೆಚ್ಚಿನವ್ರಿಗೆ ಗೊತ್ತಿಲ್ಲ. ಶಿವನ ಈ ಅವತಾರಗಳ ಬಗ್ಗೆ ತಿಳ್ಕೊಳ್ಳೋಣ ಬನ್ನಿ.

1. ಪಿಪ್ಪಲಾದ ಅವತಾರ

ಪಿಪ್ಪಲಾದ ಧದೀಚಿ ಮಹರ್ಷಿಯ ಮಗ. ಪಿಪ್ಪಲಾದ ಹುಟ್ಟೋ ಮೊದ್ಲೇ ಧದೀಚಿ ಸತ್ತು ಹೋಗ್ತಾನೆ. ಪಿಪ್ಪಲಾದನಿಗೆ ತನ್ನ ತಂದೆಯ ಸಾವಿಗೆ ಶನಿಯೇ ಕಾರಣ ಅಂತ ಗೊತ್ತಾದಾಗ ಶನಿಗೆ ಶಾಪ ಹಾಕ್ತಾನೆ. ಆ ಶಾಪದಿಂದಾಗಿ ಶನಿ ಅಂತರಿಕ್ಷದಲ್ಲಿ ಅವನ ಸ್ಥಾನದಿಂದ ಕೆಳಗೆ ಬೀಳ್ತಾ ಹೋಗ್ತಾನೆ. ಶನಿ 16 ವರ್ಷಕ್ಕಿಂತ ಚಿಕ್ಕವ್ರಿಗೆ ಕಾಟ ಕೊಡೊಲ್ಲ ಅಂತ ಮಾತು ಕೊಟ್ಟ ಮೇಲೆ ಪಿಪ್ಪಲಾದ ತನ್ನ ಶಾಪ ವಾಪಾಸ್ ತೆಗೋತಾನೆ. ಶನಿದೋಷ ಇರುವಾಗ ಶಿವಧ್ಯಾನ ಮಾಡೋದು ಒಳ್ಳೇದು ಅನ್ನೋ ನಂಬಿಕೆ ಶಿವನ ಈ ಅವತಾರದಿಂದಾನೇ ಬಂದಿರೋದು.

ಮೂಲ

2. ವೀರಭದ್ರ ಅವತಾರ

ದಕ್ಷನ ಮಗಳು ಸತಿ ದಕ್ಷನ ಮಾತನ್ನ ಎದುರಿಸಿ ಶಿವನನ್ನ ಮದುವೆ ಆಗ್ತಾಳೆ. ಒಮ್ಮೆ ದಕ್ಷ ಒಂದು ಯಜ್ಞ ನಡೆಸ್ವಾಗ ಎಲ್ಲಾ ದೇವತೆಗಳ್ನೂ ಕರೆದು ಶಿವನನ್ನ ಮಾತ್ರ ಯಜ್ಞಕ್ಕೆ ಕರಿಯೋದಿಲ್ಲ. ಸತಿ ಶಿವನಿಗೆ ಇಷ್ಟ ಇಲ್ದಿದ್ರೂ ತಾಯಿ ಮನೆಯ ಮೇಲಿನ ಮೋಹದಿಂದ ಯಜ್ಞಕ್ಕೆ ಹೋಗ್ತಾಳೆ. ಅಲ್ಲಿ ದಕ್ಷ ಮಗಳಿಗೆ ಅವಮಾನ ಮಾಡ್ತಾನೆ. ಇದ್ರಿಂದ ಬೇಜಾರಾಗಿ ಸತಿ ಯಜ್ಞಕುಂಡದ ಬೆಂಕಿಗೆ ಬಿದ್ದು ಪ್ರಾಣ ಬಿಡ್ತಾಳೆ. ಇದು ಗೊತ್ತಾಗಿ ಶಿವನಿಗೆ ಸಿಟ್ಟು ಬಂದು ಅವನ ಜಟೆಯಿಂದ ಕೂದಲ ಗಂಟು ಕಿತ್ತು ನೆಲಕ್ಕೆ ಎಸೀತಾನೆ. ಅದ್ರಿಂದ ಹುಟ್ದೋರೇ ವೀರಭದ್ರ ಮತ್ತು ರುದ್ರಕಾಳಿ.  ವೀರಭದ್ರ ಅಜ್ಞಾನ ನಾಶ ಮಾಡ್ತಾನೆ ಅನ್ನೋ ನಂಬಿಕೆ ಇದೆ. ಅವನು ತುಂಬಾ ಎತ್ತರಕ್ಕಿದ್ದ. ಭಯ ಹುಟ್ಟಿಸೋ ಹಾಗಿದ್ದ. ವೀರಭದ್ರನಿಗೆ ಮೂರು ಕಣ್ಣು ಇತ್ತು, ಮೂರೂ ಬೆಂಕಿ ಉಗುಳೋ ಹಾಗಿತ್ತು. ಶಿವನ ಆಜ್ಞೆ ಪ್ರಕಾರ ವೀರಭದ್ರ ದಕ್ಷನ ಯಜ್ಞಕ್ಕೆ ನುಗ್ಗಿ ಯಜ್ಞ ನಡೆಸ್ತಿದ್ದ ಋಷಿಗಳಿಗೆ ಅವಮಾನ ಮಾಡಿ, ಯಜ್ಞದ ಆಹುತಿಗೆ ಇಟ್ಟಿದ್ದ ವಸ್ತುಗಳ್ನೆಲ್ಲಾ ಹಾಳು ಮಾಡಿ ಕೊನೆಗೆ ದಕ್ಷನ ತಲೆ ಕತ್ತರಿಸಿ ಹಾಕ್ತಾನೆ. ಅಷ್ಟಕ್ಕೇ ಸುಮ್ಮನಾಗದೆ, ಇಂದ್ರನನ್ನ ನೆಲಕ್ಕುರುಳ್ಸಿ ಅವ್ನ ಮೇಲೆ ನಡೀತಾನೆ, ಯಮನ ದಂಡವನ್ನ ಮುರಿದು ಹಾಕ್ತಾನೆ, ದೇವತೆಗಳ್ನೆಲ್ಲಾ ಚೆಲ್ಲಾಪಿಲ್ಲಿ ಮಾಡ್ತಾನೆ. ಕೊನೆಗೆ ಕೈಲಾಸಕ್ಕೆ ವಾಪಾಸಾಗ್ತಾನೆ.

3. ಭೈರವ ಅವತಾರ

ಬ್ರಹ್ಮ ತಾನೇ ಸೃಷ್ಟಿಕರ್ತ ಅನ್ನೋ ಅಹಂಕಾರದಲ್ಲಿ ವಿಷ್ಣುವಿಗೆ ತನ್ನನ್ನ ಪೂಜಿಸೋಕೆ ಹೇಳ್ದಾಗ ಶಿವನಿಗೆ ಸಿಟ್ಟು ಬಂದು ಭೈರವನ ಅವತಾರ ತಾಳ್ತಾನೆ. ಈ ಅವತಾರದಲ್ಲಿ ಶಿವ ಬ್ರಹ್ಮನ ಒಂದು ತಲೆಯನ್ನ ಕತ್ತರ್ಸಿ ಹಾಕ್ತಾನೆ. ಆಗಿಂದ ಬ್ರಹ್ಮನಿಗೆ ನಾಲ್ಕೇ ತಲೆ. ಕಾಲಭೈರವನ ಅವತಾರದಲ್ಲಿ ಭೈರವ ಬ್ರಹ್ಮನ ಕತ್ತರಿಸಿದ ತಲೆಯನ್ನ ಕೈಯಲ್ಲಿ ಹಿಡ್ಕೊಂಡಿರ್ತಾನೆ. ಇಷ್ಟಾದ್ಮೇಲೆ, ಶಿವನಿಗೆ ಬ್ರಹ್ಮಹತ್ಯಾ ದೋಷದ ಅಪರಾಧ ಕಾಡತ್ತೆ. ಅದಕ್ಕೇ ಶಿವ, ಬ್ರಹ್ಮನ ತಲೇನ 12 ವರ್ಷ ಕೈಯ್ಯಲ್ಲೇ ಹಿಡ್ಕೊಂಡು ತಿರ್ಗಾಡ್ತಾನೆ. ಈ ಭೈರವನ ಅವತಾರದಲ್ಲಿ ಶಿವ ಶಕ್ತಿಪೀಠಗಳನ್ನ ಕಾಯ್ತಾನೆ ಅನ್ನೋ ನಂಬಿಕೆ ಇದೆ. ಅದಕ್ಕೇ ಪ್ರತೀ ಶಕ್ತಿಪೀಠದಲ್ಲೂ ಒಂದು ಭೈರವನ ದೇವಸ್ಥಾನ ಇದ್ದೇ ಇರತ್ತೆ ನೋಡಿ. 

ಮೂಲ

4. ಅಶ್ವತ್ಥಾಮನ ಅವತಾರ

ದೇವತೆಗಳೂ ರಾಕ್ಷಸರೂ ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿದಾಗ, ಮೊದಲು ವಿಷ ಬರುತ್ತೆ. ಆ ವಿಷಾನಾ ಶಿವ ನುಂಗ್ತಾನೆ. ಆದರೆ ಆ ವಿಷ ಅವ್ನನ್ನ ಸುಡೋಕೆ ಶುರು ಮಾಡುತ್ತೆ. ಅವನ ಒಳಗಿಂದ ವಿಷಪುರುಷ ಹೊರಗೆ ಬರ್ತಾನೆ. ಆಗ ಶಿವ ವಿಷಪುರುಷನಿಗೆ ದ್ವಾಪರಯುಗದಲ್ಲಿ ಬ್ರಾಹ್ಮಣನಾಗಿ ಹುಟ್ಟಿ ದುಷ್ಟ ಕ್ಷತ್ರಿಯರನ್ನ ಸಾಯಿಸೋಕ್ಕೆ ಅವಕಾಶ ಮಾಡಿಕೊಡ್ತಾನೆ. ಅದರ ಪ್ರಕಾರ, ಈ ವಿಷಪುರುಷ ದ್ರೋಣಾಚಾರ್ಯ ಮತ್ತು ಕ್ರಿಪಿಯ ಮಗ ಅಶ್ವತ್ಥಾಮನಾಗಿ ಹುಟ್ತಾನೆ.

5. ಶರಭ ಅವತಾರ

ಶರಭ ಅರ್ಧ ಪ್ರಾಣಿ, ಮತ್ತರ್ಧ ಪಕ್ಷಿ. ಕೆಲವು ಕಥೆಗಳಲ್ಲಿ ಎಂಟು ಕಾಲಿನ ದೈತ್ಯ ಪ್ರಾಣಿ ಅಂತ್ಲೂ ಮತ್ತೆ ಕೆಲವು ಕಥೆಗಳಲ್ಲಿ ಎಂಟು ಕಾಲಿನ ಜಿಂಕೆ ಅಂತ್ಲೂ ಹೇಳಿದ್ದಾರೆ. ವಿಷ್ಣುವಿನ ನರಸಿಂಹ ಅವತಾರವನ್ನ ಸ್ವಲ್ಪ ಪಳಗ್ಸಿ ಶಾಂತ ಮಾಡ್ಲಿಕ್ಕೆ ಶಿವ ಶರಭ ಅವತಾರ ತೆಗೊಂಡ. ಈ ಅವತಾರ ಶರಭೇಶ್ವರ ಮತ್ತು ಶರಭೇಶ್ವರಮೂರ್ತಿ ಅಂತ ಹೆಸರುವಾಸಿ.

ಮೂಲ

6. ಗೃಹಪತಿ ಅವತಾರ

ವಿಶ್ವಾನರ ಮತ್ತೆ ಶುಚಿಶ್ಮತಿ ಅನ್ನೋ ಗಂಡ-ಹೆಂಡತಿ ಇದ್ರು. ವಿಶ್ವಾನರ ಮಹಾ ಶಿವಭಕ್ತ. ಶುಚಿಶ್ಮತಿಗೆ ಶಿವನ ಹಾಗೆಯೇ ಇರೋ ಮಗು ಬೇಕು ಅನ್ನೋ ಆಸೆ ಹುಟ್ಟುತ್ತೆ. ಅದಕ್ಕೇ. ವಿಶ್ವಾನರ ಕಾಶಿಗೆ ಹೋಗಿ ವಿಶ್ವೇಶ್ವರ ಲಿಂಗದ ಮುಂದೆ ಕೂತು ಶಿವಧ್ಯಾನ ಮಾಡ್ತಾನೆ. ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷ ಆಗಿ ಅವನ ಆಸೆಗೆ ಒಪ್ಪಿ ವಿಶ್ವಾನರನ ಮಗನಾಗಿ ಹುಟ್ತಾನೆ. ಬ್ರಹ್ಮ ಈ ಅವತಾರಕ್ಕೆ ಗೃಹಪತಿ ಅಂತ ನಾಮಕರಣ ಮಾಡ್ತಾನೆ. ಗೃಹಪತಿಗೆ ಆರು ವರ್ಷ ಇರ್ಬೇಕಾದ್ರೆ ಎಲ್ಲಾ ವೇದಗಳನ್ನೂ ಓದಿ ಅರ್ಥ ಮಾಡ್ಕೊಂಡಿರ್ತಾನೆ. ಅವನಿಗೆ ಒಂಬತ್ತು ವರ್ಷ ಇದ್ದಾಗ ಗ್ರಹಗತಿಯಿಂದ ಗೃಹಪತಿಯ ಸಾವು ಬೇಗನೆ ಬರಲಿದೆ ಅನ್ನೋ ಸುದ್ದಿಯನ್ನ ನಾರದ ವಿಶ್ವಾನರನಿಗೆ ಹೇಳ್ತಾನೆ. ಗೃಹಪತಿ ತಂದೆ ತಾಯಿಗೆ ಸಮಾಧಾನ ಹೇಳಿ ಸಾವನ್ನ ಗೆಲ್ಲೋ ತಪಸ್ಸು ಮಾಡೋಕೆ ಕಾಶಿಗೆ ಹೋಗ್ತಾನೆ. ಇವನ ತಪಸ್ಸು ನಡೀತಿದ್ದಾಗ ಇಂದ್ರ ಬಂದು ಏನು ವರ ಬೇಕು ಅಂತ ಕೇಳ್ತಾನೆ. ಇಂದ್ರನಿಂದ ವರ ಪಡಿಯೋಕೆ ಗೃಹಪತಿ ಒಪ್ಪದೆ ಇದ್ದಾಗ, ಇಂದ್ರನಿಗೆ ಸಿಟ್ಟು ಬಂದು ವಜ್ರಾಯುಧದಿಂದ ಗೃಹಪತಿಯ ಮೇಲೆ ಆಕ್ರಮಣ ಮಾಡೋಕೆ ಹೋಗ್ತಾನೆ. ಆಗ ಶಿವ ಪ್ರತ್ಯಕ್ಷ ಆಗಿ ಗೃಹಪತಿಯನ್ನ ಕಾಪಾಡ್ತಾನೆ. ಯಾವ ಕಾರಣದಿಂದ್ಲೂ ನಿನಗೆ ಸಾವಿಲ್ಲ ಅನ್ನೋ ವರ ಕೊಡ್ತಾನೆ. ಗೃಹಪತಿ ಕಾಶಿಯಲ್ಲಿ ಪೂಜೆ ಮಾಡಿದ ಶಿವಲಿಂಗ, ಮುಂದೆ ಅಗ್ನೀಶ್ವರ ಲಿಂಗ ಅಂತ ಪ್ರಸಿದ್ಧವಾಗುತ್ತೆ. ಗೃಹಪತಿಯನ್ನ ಶಿವ ಎಲ್ಲಾ ದಿಕ್ಕುಗಳ ದೇವತೆಯನ್ನಾಗಿ ಮಾಡ್ತಾನೆ.

7. ಹನುಮನ ಅವತಾರ

ಅಮೃತಮಂಥನದ ಸಮಯದಲ್ಲಿ ವಿಷ್ಣು ಮೋಹಿನಿಯ ರೂಪದಲ್ಲಿರ್ತಾನಲ್ಲ, ಆಗ ಶಿವನಿಗೆ ಆ ಮೋಹಿನಿಯ ಮೇಲೆ ಆಸೆ ಹುಟ್ಟತ್ತೆ. ಶಿವನ ದೇಹದಿಂದ ಅವನ ವೀರ್ಯ ನೆಲಕ್ಕೆ ಬೀಳುತ್ತೆ. ಅದನ್ನ ಮಹರ್ಷಿಗಳು ಶಿವನ ಒಪ್ಪಿಗೆ ತೆಗೊಂಡು ಅಂಜನಿಯ ಗರ್ಭದಲ್ಲಿ ಸ್ಥಾಪಿಸ್ತಾರೆ. ಅಂಜನಿಗೆ ಹೀಗೆ ಗರ್ಭಧಾರಣೆಯಾಗಿ ಹುಟ್ಟಿದವನೇ ಆಂಜನೇಯ. ಹಾಗಾಗಿ ಹನುಮನನ್ನ ಶಿವನ ಒಂದು ಅಂಶ ಅಂತ ನಂಬ್ತಾರೆ.

ಮೂಲ

8. ವೃಷಭ ಅವತಾರ

ಸಮುದ್ರಮಂಥನ ಆದ ಮೇಲೆ ಸಿಕ್ಕಿದ ಅಮೃತವನ್ನ ದೇವತೆಗಳು ತಾವೇ ಕುಡೀತಾರೆ. ರಾಕ್ಷಸರಿಗೆ ಈ ಮೋಸ ಗೊತ್ತಾಗಿ ದೇವತೆಗಳ ಮೇಲೆ ಆಕ್ರಮಣ ಮಾಡ್ತಾರೆ. ಆದರೆ ರಾಕ್ಷಸರು ಈ ಯುದ್ಧದಲ್ಲಿ ಸೋಲ್ತಾರೆ. ಕೆಲವರು ತಪ್ಪಿಸ್ಕೊಡು ಓಡಿದಾಗ ವಿಷ್ಣು ಅವ್ರನ್ನ ಬೆನ್ನಟ್ಟಿ ಪಾತಾಳಲ್ಲೋಕಕ್ಕೆ ಹೋಗ್ತಾನೆ. ಅಲ್ಲಿ ಕೆಲವರ ಸೌಂದರ್ಯಕ್ಕೆ ಮರುಳಾಗಿ ಅಲ್ಲಿ ವಿಷ್ಣುವಿಗೆ ಕೆಲವು ಮಕ್ಕಳು ಹುಟ್ತಾರೆ. ಈ ಮಕ್ಕಳು ಜನರಿಗೆ ತೊಂದರೆ ಕೊಡೋಕೆ ಶುರು ಮಾಡ್ತಾರೆ. ಎಲ್ಲಾ ದೇವತೆಗಳೂ ಶಿವನ ಸಹಾಯ ಕೇಳ್ತಾರೆ. ಶಿವ ವೃಷಭಾವತಾರದಲ್ಲಿ ಹುಟ್ಟಿ ಪಾತಾಳಲೋಕಕ್ಕೆ ಹೋಗಿ ವಿಷ್ಣೂವಿನ ಮಕ್ಕಳಾದ ರಾಕ್ಷಸರ್ನ ಕೊಂಬಿನಿಂದ ಚುಚ್ಚಿ ಸಾಯಿಸ್ತಾನೆ. ಇದು ವಿಷ್ಣುವಿಗೆ ಗೊತ್ತಾಗಿ ಅವನು ಬಂದು ವೃಷಭನ ಜೊತೆ ಸೆಣಸಾಡ್ತಾನೆ. ಶಿವನನ್ನ ಸೋಲಿಸೋಕೆ ಆಗೊಲ್ಲ. ಕೊನೆಗೆ ಅದು ಶಿವ ಅಂತ ಗೊತ್ತಾದಾಗ ವಿಷ್ಣು ವಿಷ್ಣುಲೋಕಕ್ಕ್ ವಾಪಾಸಾಗ್ತಾನೆ.

9. ಯತಿನಾಥ ಅವತಾರ

ಅರ್ಬುದಾಚಲ ಪರ್ವತದಲ್ಲಿ ಭೀಲ ಅನ್ನೋ ಆದಿವಾಸಿ ಜನಾಂಗಕ್ಕೆ ಸೇರಿದ ಆಹುಕ್ – ಆಹುಕಾ ಹೆಸರಿನ ಗಂಡ-ಹೆಂಡತಿ ಇದ್ರು. ಇಬ್ರೂ ಶಿವಭಕ್ತರು. ಇವರ ಭಕ್ತಿಯನ್ನ ಪರೀಕ್ಷೆ ಮಾಡೋಕೆ ಶಿವ ಯತಿನಾಥ ಅನ್ನೋ ಸನ್ಯಾಸಿಯ ರೂಪದಲ್ಲಿ ಬರ್ತಾನೆ. ಇವರ ಆತಿಥ್ಯ ಸ್ವೀಕರಿಸಿದ ಮೇಲೆ ರಾತ್ರಿ ಮಲಗೋಕೆ ಜಾಗ ಕೇಳ್ತಾನೆ. ಆಗ ಗಂಡ ಆಹುಕ ಅವ್ರ ಮನೆಯಲ್ಲಿ ಇಬ್ರಿಗಷ್ಟೇ ಜಾಗ ಇರೋದು ಅಂತ ಹೇಳಿ ಸ್ಥಳ ಕೊಡೋಕಾಗ್ದೆ ಇರೋದಿಕ್ಕೆ ಕ್ಷಮೆ ಕೇಳ್ತಾನೆ. ಆದರೆ ಆಹುಕಾ ಗಂಡನನ್ನ ಹೊರಗೆ ಮಲಗೋಕೆ ಹೇಳ್ತಾಳೆ. ಹೀಗೆ ರಾತ್ರಿ ಹೊರಗೆ ಮಲಗಿದ ಆಹುಕನನ್ನ ಯಾವ್ದೋ ಕಾಡುಪ್ರಾಣಿಗಳು ಸಾಯ್ಸುತ್ತೆ. ಬೆಳಗ್ಗೆ ಇದು ಗೊತ್ತಾದಾಗ ಯತಿನಾಥನಿಗೆ ತುಂಬಾ ಬೇಜಾರಾಗುತ್ತೆ. ಗಂಡ ಹೋದ ದುಃಖದಲ್ಲಿ ಹೆಂಡತಿ ಆಹುಕಾ ಬೆಂಕಿಗೆ ಬಿದ್ದು ಸಾಯೋದು ಅಂತ ನಿರ್ಧರಿಸ್ತಾಳೆ. ಆಗ ಯತಿನಾಥ ತನ್ನ ನಿಜ ರೂಪ ತೋರಿಸಿ ಆ ಗಂಡ-ಹೆಂಡತಿ ಮುಂದಿನ ಜನ್ಮದಲ್ಲಿ ನಳ-ದಮಯಂತಿಯಾಗಿ ಹುಟ್ಟೋ ಹಾಗೆ ವರ ಕೊಡ್ತಾನೆ. ತಾನೂ ಕೂಡ ಒಂದು ಹಂಸದ ರೂಪದಲ್ಲಿ ಬಂದು ನಳ-ದಮಯಂತಿಯರನ್ನ ಒಂದು ಮಾಡೋದಾಗಿ ಹೇಳ್ತಾನೆ. ಇಷ್ಟು ಆದ್ಮೇಲೆ ಯತಿನಾಥ ಅಲ್ಲೇ ಲಿಂಗವಾಗಿ ಹೋಗ್ತಾನೆ, ಅದನ್ನ ಅಚಲೇಶ್ವರ ಲಿಂಗ ಅಂತ ಕರೀತಾರೆ.

ಮೂಲ

10. ಕೃಷ್ಣದರ್ಶನ ಅವತಾರ

ನಭಗ ಅನ್ನೋ ರಾಜಕುಮಾರ ಒಬ್ಬ ಇರ್ತಾನೆ. ಅವನು ಚಿಕ್ಕಂದ್ನಲ್ಲಿ ವಿದ್ಯೆ ಪಡಿಯೋಕೆ ಗುರುಕುಲಕ್ಕೆ ಹೋಗಿದ್ದ ಸಮಯದಲ್ಲಿ ಅವ್ನನ್ನ ಲೆಕ್ಕಕ್ಕೆ ತೆಗೊಳ್ದೇ ಅವನ ಅಣ್ಣಂದ್ರು ರಾಜ್ಯಾನ ಪಾಲು ಮಾಡ್ಕೋತಾರೆ. ನಭಗ ವಾಪಸ್ಸ್ ಬಂದಾಗ ಅವನಿಗೆ ಪಾಲು ಕೊಡೋದು ಮರ್ತು ಹೋಯ್ತು ಅಂತ ಹೇಳ್ತಾರೆ. ನಭಗನಿಗೆ ಏನು ಮಾಡೋದು ಗೊತ್ತಾಗ್ದೆ ಅವನ ಅಪ್ಪನನ್ನ ಕೇಳ್ತಾನೆ. ಅಪ್ಪ ಅಗ್ನಿರಸ ಅನ್ನೋ ಋಷಿ ಹತ್ರ ಕಳಿಸ್ತಾನೆ. ಈ ಋಷಿಗೆ ಒಂದು ಯಜ್ಞ ಪೂರ್ತಿ ಮಾಡೋ ಆಸೆ ಇರುತ್ತೆ ಆದರೆ ಇಹದ ಬಂಧನಗಳಿಂದಾಗಿ ಅವನಿಗೆ ಅದನ್ನ ಪೂರ್ತಿ ಮಾಡೋಕೆ ಆಗ್ತಿರೊಲ್ಲ. ನಭಗ ಅಗ್ನಿರಸನಿಗೆ ಧರ್ಮದ ಗುಟ್ಟನ್ನೆಲ್ಲ ಹೇಳಿಕೊಡ್ತಾನೆ. ಇದರಿಂದಾಗಿ ಅಗ್ನಿರಸನ ಬಂಧನಗಳು ಕಳಚಿ ಅವನು ಯಜ್ಞ ಪೂರ್ತಿ ಮಾಡೋಕೆ ಸಾಧ್ಯ ಆಗುತ್ತೆ. ನಭಗನ ಜ್ಞಾನವನ್ನ ನೋಡಿ ಸಂತೋಷದಿಂದ ಅಗ್ನಿರಸ ಯಜ್ಞದಲ್ಲಿ ಉಳಿದ ಹಣವನ್ನ ನಭಗನಿಗೆ ಕೊಡ್ತಾನೆ. ಆದರೆ ಆಗ ಶಿವ ಕೃಷ್ಣದರ್ಶನನ ರೂಪದಲ್ಲಿ ಬಂದು ಆ ಹಣ ತನಗೆ ಸೇರ್ಬೇಕು ಅಂತ ಹೇಳ್ತಾನೆ. ನಭಗ ಒಪ್ಪೊಲ್ಲ, ಅಗ್ನಿರಸ ತನಗೆ ಕೊಟ್ಟಿದ್ರಿಂದ ಅದು ತನಗೇ ಸೇರ್ಬೇಕು ಅಂತ ಹೇಳ್ತಾನೆ. ಶಿವ ನಭಗನ ಅಪ್ಪನ ಹತ್ತಿರ ಹೋಗಿ ಸಲಹೆ ಕೇಳೋಕೆ ಹೇಳ್ತಾನೆ. ನಭಗನ ಅಪ್ಪನಿಗೆ ಕೃಷ್ಣದರ್ಶನ ಬೇರೆ ಅಲ್ಲ, ಶಿವ ಬೇರೆ ಅಲ್ಲ ಅಂತ ಗೊತ್ತಾಗಿ ಮಗನಿಗೆ ಹೇಳ್ತಾನೆ. ಅಲ್ಲದೇ ಯಜ್ಞದಲ್ಲಿ ಉಳ್ದಿದಿದ್ದು ಶಿವನಿಗೇ ಸೇರ್ಬೇಕು ಅಂತ ಹೇಳ್ತಾನೆ. ನಭಗ ವಾಪಸ್ಸ್ ಬಂದು ಕೃಷ್ಣದರ್ಶನನ ರೂಪದಲ್ಲಿದ್ದ ಶಿವನನ್ನ ಪೂಜಿಸ್ತಾನೆ. ಶಿವ ನಭಗನಿಗೆ ಆಶೀರ್ವದಿಸಿ ಮುಕ್ತಿ ಪಡಿಯೋ ವರ ಕೊಡ್ತಾನೆ.

11. ಭಿಕ್ಷುವರ್ಯ ಅವತಾರ

ಸತ್ಯರಥ ಅನ್ನೋ ವಿದರ್ಭ ದೇಶದ ರಾಜ ನೆರೆ ರಾಜ್ಯದವರ ಆಕ್ರಮಣದಲ್ಲಿ ಸತ್ತು ಹೋಗ್ತಾನೆ. ಅವನ ಹೆಂಡತಿ ಆಗ ಗರ್ಭಿಣಿ ಆಗಿರ್ತಾಳೆ. ಹೇಗೋ ಜೀವ ಉಳಿಸ್ಕೊಂಡು ತಪ್ಪಿಸ್ಕೊಳ್ತಾಳೆ. ಅವಳು ಒಂದು ಕಾಡಲ್ಲಿ ಮಗುವಿಗೆ ಜನ್ಮ ಕೊಡ್ತಾಳೆ. ಬಾಯಾರಿಕೆಯಾಗಿ ಮಗುವನ್ನ ಅಲ್ಲೇ ಮಲಗ್ಸಿ ಒಂದು ಕೆರೆಗೆ ಹೋಗಿ ನೀರು ಕುಡೀತಿರ್ವಾಗ ಮೊಸಳೆ ಅವ್ಳನ್ನ ಸಾಯ್ಸುತ್ತೆ. ಈ ಕಡೆ ಮಗು ಜೋರು ಅಳ್ತಿರ್ಬೇಕಾದ್ರೆ ಅಲ್ಲೇ ಒಬ್ಳು ಭಿಕ್ಷುಕಿ ಬರ್ತಾಳೆ. ಅವ್ಳಿಗೆ ಈ ಮಗುವನ್ನ ನೋಡಿ ಕರುಣೆ ಉಕ್ಕಿದ್ರೂ ಬಡತನದಿಂದಾಗಿ ಅದನ್ನ ಎತ್ತಿ ಸಾಕೋಕೆ ಭಯ ಪಡ್ತಿರ್ತಾಳೆ. ಆಗ ಶಿವ ಭಿಕ್ಷುಕನೊಬ್ಬನ ರೂಪದಲ್ಲಿ ಬಂದು, ಅವಳಿಗೆ ಆ ಮಗುವಿನ ಅವಸ್ಥೆಯನ್ನೆಲ್ಲಾ ವಿವರಿಸಿ ಅದನ್ನ ಸಾಕೋಕೆ ಹೇಳ್ತಾನೆ. ಇದೇ ಭಿಕ್ಷುವರ್ಯ ಅವತಾರ.

ಮೂಲ

12. ಸುರೇಶ್ವರ ಅವತಾರ

ಉಪಮನ್ಯು ಅನ್ನೋ ಭಕ್ತ ಶಿವನನ್ನ ನೆನೆದು ತಪಸ್ಸು ಮಾಡ್ತಿರ್ತಾನೆ. ಅವನನ್ನ ಪರೀಕ್ಷಿಸ್ಲಿಕ್ಕೆ ಶಿವ-ಪಾರ್ವತಿ ಇಂದ್ರ-ಇಂದ್ರಾಣಿಯರ ರೂಪದಲ್ಲಿ ಪ್ರತ್ಯಕ್ಷ ಆಗಿ ಶಿವನ ಧ್ಯಾನ ನಿಲ್ಸೋಕೆ ಹೇಳ್ತಾರೆ. ತಾವೇ ಏನು ಬೇಕಿದ್ರೂ ಕೊಡೋದಾಗಿ ಹೇಳ್ತಾರೆ. ಅಲ್ಲದೆ ಶಿವನನ್ನ ಬಯ್ಯೋಕೆ ಶುರು ಮಾಡ್ತಾರೆ. ಉಪಮನ್ಯೂಗೆ ಸಿಟ್ಟು ಬಂದು ಇಂದ್ರನ ರೂಪದಲ್ಲಿದ್ದ ಶಿವನ ಮೇಲೆ ದಾಳಿ ಮಾಡೋಕೆ ಹೋಗ್ತಾನೆ. ಶಿವ-ಪಾರ್ವತಿ ಸಂಪ್ರೀತರಾಗಿ ಉಪಮನ್ಯೂಗೆ ತಮ್ಮ ನಿಜ ರೂಪ ತೋರಿಸ್ತಾರೆ. ಇಂದ್ರನ ರೂಪದಲ್ಲಿ ಬಂದಿದ್ದರಿಂದ ಈ ಅವತಾರವನ್ನ ಸುರೇಶ್ವರ ಅವತಾರ ಅಂತ ಕರೀತಾರೆ.

13. ಕಿರಾತ ಅವತಾರ

ಅರ್ಜುನ ಶಿವನನ್ನ ಮೆಚ್ಚಿಸೋಕೆ ತಪಸ್ಸು ಮಾಡ್ತಾ ಇರ್ತಾನೆ. ಪಾಶುಪತಾಸ್ತ್ರ ಪಡಿಯೋದಿಕ್ಕೆ ಈ ತಪಸ್ಸು. ಆಗ ದುರ್ಯೋಧನ ಅರ್ಜುನನನ್ನ ಸಾಯಿಸೋಕೆ ಮೂಕ ಅನ್ನೋ ರಾಕ್ಷಸನನ್ನ ಕಳಿಸ್ತಾನೆ. ಮೂಕ ಕಾಡುಹಂದಿಯ ರೂಪದಲ್ಲಿ ಬರ್ತಾನೆ. ಅರ್ಜುನ ಗಾಢ ತಪಸಲ್ಲಿ ಇದ್ದೋನು ಜೋರು ಸದ್ದು ಕೇಳಿ ಕಣ್ಣು ತೆರೆದ್ರೆ, ಒಬ್ಬ ಬೇಡ ಒಂದು ಕರಡಿಯನ್ನ ಬೆನ್ನಟ್ತಾ ಇರ್ತಾನೆ. ಶಿವನೇ ಈ ಕಿರಾತ ಜನಾಂಗದ ಬೇಡನ ರೂಪದಲ್ಲಿ ಬಂದಿರ್ತಾನೆ. ಕೊನೆಗೆ ಶಿವ ಮತ್ತು ಅರ್ಜುನ ಇಬ್ರೂ ಒಟ್ಟಿಗೇ ಬಾಣ ಬಿಡ್ತಾರೆ. ಇದಕ್ಕೇ ಕಿರಾತ ಮತ್ತು ಅರ್ಜುನರ ಮಧ್ಯೆ ಯುದ್ಧ ಆಗುತ್ತೆ. ಅರ್ಜುನನ ಪರಾಕ್ರಮಕ್ಕೆ ಮೆಚ್ಚಿ ಶಿವ ಪಾಶುಪತಾಸ್ತ್ರ ಕೊಡ್ತಾನೆ.

ಮೂಲ

14. ಸುನತನರ್ತಕ ಅವತಾರ

ಪಾರ್ವತಿ ಪರ್ವತ ರಾಜನ ಮಗಳು. ಅವ್ಳನ್ನ ಮದುವೆ ಆಗೋಕೆ ಪರ್ವತನ ಒಪ್ಪಿಗೆ ಪಡೀವಾಗ ಶಿವ ಸುನತನರ್ತಕ ಅನ್ನೋ ಅವತಾರ ತಾಳ್ತಾನೆ.

15. ಅವಧೂತ ಅವತಾರ

ಇಂದ್ರನ ಅಹಂಕಾರ ಮುರಿಯೋದಿಕ್ಕೆ ಈ ಅವತಾರ.

ಮೂಲ

16. ಯಕ್ಷೇಶ್ವರ ಅವತಾರ

ದೇವತೆಗಳ ಮನಸಲ್ಲಿದ್ದ ಅಹಂಕಾರ ನಾಶ ಮಾಡೋದಿಕ್ಕೆ ಶಿವ ಯಕ್ಷೇಶ್ವರನಾಗಿ ಅವತರಿಸ್ತಾನೆ. ಅಮೃತ ಮಂಥನದ ಸಮಯದಲ್ಲಿ ದೇವತೆಗಳು ದಾನವರನ್ನ ಸೋಲಿಸಿದ ಅಹಂಕಾರದಲ್ಲಿ ಮೆರೀತಿರ್ತಾರೆ. ಇದ್ರಿಂದ ಶಿವನಿಗೆ ಬೇಜಾರಾಗತ್ತೆ. ಆದ್ರಿಂದ ಈ ದೇವತೆಗಳ ದರ್ಪ ಮುರೀಬೇಕು ಅಂತ ಯಕ್ಷನ ಅವತಾರ ತಾಳ್ತಾನೆ. ದೇವತೆಗಳ ಹತ್ತಿರ ಹೋಗಿ, ನಿಮ್ಮೀ ಅಹಂಕಾರಕ್ಕೆ ಏನ್ ಕಾರಣ ಅಂತ ಕೇಳ್ದಾಗ, ನಾವು ರಾಕ್ಷಸರನ್ನ ಗೆದ್ದಿದ್ದೀವಲ್ಲಾ ಅಂತ ಹೇಳ್ತಾರೆ. ಆಗ ಅವನು ನಿಮಗೆ ಈ ಗೆಲುವು ಬಂದಿರೋದು ದೇವರ ಅನುಗ್ರಹದಿಂದ ಅಂತ ಮರೀಬೇಡಿ ಅಂದಾಗ ಅವರು ಅದನ್ನ ಕಿವಿಗೇ ಹಾಕ್ಕೊಳಲ್ಲ.

ಆಗ, ಶಿವ ಸರಿ…ಈ ಹುಲ್ಲನ್ನ ತುಂಡು ಮಾಡಿ ಬಿಸಾಕಿ ನೋಡಣ ಅಂತ ದೇವತೆಗಳಿಗೆ ಹೇಳ್ತಾನೆ. ಇದೇನ್ ಮಹಾ ಕೆಲಸ ಅಂತ ಅವರು ಹುಲ್ಲನ್ನ ಎತ್ಕೊಂಡಾಗ, ಎಷ್ಟೇ ಶಸ್ತ್ರಾಸ್ತ್ರಗಳಿಂದ್ಲೂ ಅದನ್ನ ತುಂಡು ಮಾಡಕ್ಕಾಗಲ್ಲ. ಇದ್ರಿಂದ ದೇವತೆಗಳಿಗೆ ಆಶ್ಚರ್ಯ ಆಗತ್ತೆ. ಆಗ ಒಂದು ಅಶರೀರವಾಣಿ ಈ ಯಕ್ಷ ಸಾಕ್ಷಾತ್ ಶಿವ ಅಂತ ಹೇಳತ್ತೆ. ತಮ್ಮ ತಪ್ಪಿನ ಅರಿವಾಗಿ ದೇವತೆಗಳು ಶಿವನನ್ನ ಕ್ಷಮೆ ಕೇಳ್ತಾರೆ.

17. ಬ್ರಹ್ಮಾಚಾರಿಯಾಗಿ ಅವತಾರ

ಪಾರ್ವತಿ ಶಿವನನ್ನ ಮದುವೆ ಆಗೋಕೆ ಅವ್ನನ್ನ ಮೆಚ್ಚಿಸೋಕೆ ಅಂತ ತಪಸ್ಸು ಮಾಡ್ತಿದ್ದಾಗ ಅವ್ಳನ್ನ ಪರೀಕ್ಷಿಸ್ಲಿಕ್ಕೆ ಶಿವ ಈ ಅವತಾರದಲ್ಲಿ ಬರ್ತಾನೆ.

ಮೂಲ

18. ದೂರ್ವಾಸನ ಅವತಾರ

ಬ್ರಹ್ಮಾಂಡ ಪುರಾಣದ ಪ್ರಕಾರ, ಶಿವ ಮತ್ತು ಬ್ರಹ್ಮನ ನಡುವೆ ದೊಡ್ಡ ಜಗಳ ನಡಿಯತ್ತೆ. ಶಿವಂಗೆ ಇದ್ರಿಂದ ಎಷ್ಟು ಕೋಪ ಬರತ್ತೆ ಅಂದ್ರೆ, ಅವನ ಈ ಕೋಪಕ್ಕೆ ಹೆದರಿ, ದೇವತೆಗಳೆಲ್ರೂ ಅವನಿಂದ ದೂರ ಓಡ್ತಾರೆ. ಅವನ ಹೆಂಡತಿ ಪಾರ್ವತಿ, ಅವನ ಕೋಪದಿಂದ ಬೇಸತ್ತು, ನಿಂಜೊತೆ ಈಗೀಗ ಜೀವನ ಮಾಡೋದೇ ಕಷ್ಟ ಆಗೋಗಿದೆ ಅಂತ ಬೇಜಾರ್ ಮಾಡ್ಕೋತಾಳೆ. ತನ್ನ ಕೋಪದಿಂದ ಆದ ಅವಘಡದಿಂದ ಶಿವನಿಗೂ ಬೇಸರ ಆಗತ್ತೆ. ಅದಕ್ಕೇ ತನ್ನ ಕೋಪದ ಅಂಶಾನ ಅತ್ರೀ ಋಷಿ ಹೆಂಡತಿ ಅನುಸೂಯ ಒಳಗೆ ಬಿಡ್ತಾನೆ. ಈ ಅಂಶದಿಂದ ಹುಟ್ದೋನೇ ದೂರ್ವಾಸ ಮುನಿ.

19. ನಂದಿಕೇಶ್ವರ ಅವತಾರ

ನಂದಿ ಶಿವನ ವಾಹನ. ಶಿವನನ್ನ ನಂದಿಯ ರೂಪದಲ್ಲೂ ಪೂಜಿಸ್ತಾರೆ. ಶಿವ ಜಗತ್ತಿನ ಎಲ್ಲಾ ಪ್ರಾಣಿ ಪಕ್ಷಿಗಳಲ್ಲೂ ವಾಸಿಸ್ತಾನೆ ಅನ್ನೋ ನಂಬಿಕೆ ಇದೆ. ಇದರ ಆಧಾರದ ಮೇಲೇನೇ ನಂದಿ ಅವತಾರ ಆಗಿರೋದು. ಹಳೇ ಕಾಲದಲ್ಲಿ ತುಂಬಾ ಜನ ಹಾಲು, ಮೊಸರು ಮತ್ತು ಬೆಣ್ಣೆ ಮಾರಿ ಜೀವನ ನಡೆಸ್ತಿದ್ರು. ಆದ್ರಿಂದ ಹಸುವಿನ ರೀತೀಲಿರೋ ನಂದಿ ಇವರ ಆರಾಧ್ಯ ದೈವವಾದ. ಶಿವನನ್ನೇ ಹೋಲೋ ಈ ನಂದಿಕೇಶ್ವರಂಗೆ ನಾಲ್ಕು ಕೈಯ್ಯಿದೆ ಅನ್ನೋದೊಂದೇ ವ್ಯತ್ಯಾಸ. ಇವನು ಒಂದು ಕೈಯ್ಯಲ್ಲಿ ಕೊಡಲಿ, ಮತ್ತೊಂದು ಕೈಯ್ಯಲ್ಲಿ ಜಿಂಕೆ ಹಿಡಿದಿರ್ತಾನೆ. ಇನ್ನೆರಡು ಕೈ ಸಾಮಾನ್ಯವಾಗಿ ಶಿವನ ಮೇಲಿನ ಗೌರವದಿಂದ,ಜೋಡ್ಸಿರತ್ತೆ.

ಮೂಲ

ಶಿವ ಇಷ್ಟು ಅವತಾರ ತೆಗೊಂಡಿದ್ದ ಅಂತ ಗೊತ್ತೇ ಇರ್ಲಿಲ್ಲ. ಈ ಕಥೆಗಳ್ನೆಲ್ಲ ಕೇಳಿದ್ ಮೇಲೆ ಶಿವನ ಮೇಲೆ ಭಕ್ತಿ ಹೆಚ್ಚಾಗುತ್ತೆ ಅಲ್ವಾ?