ಫ್ರೆಂಡ್ಸ ನಾನು ನಿಮಗೆಲ್ಲಾ ಒಂದು ಸೂಕ್ಷ್ಮ ವಿಚಾರಾ ಹೇಳಾಕ ಹೊಂಟೇನಿ.

ಮೊನ್ನೆ ಹಂಗ ಮಾತ್ ಮಾತ್ಯಾಗ “ನಿಮಗೇನ ಅಂತಾ ಘನಂದಾರೀ ಕೆಲಸ ಇರತೇತಿ ಮನಿಯಾಗ, ತಣ್ಣಗ ಕುಂತ ಓದಾಕಾಗಂಗಿಲ್ಲೇನ? ಹೌದಪ್ಪ ಯಾರರ ತ್ರಾಸಗೊಡತಾರಾ ಅನ್ನಂಗಿಲ್ಲಾ ಏನಿಲ್ಲಾ…,” ಅಂದೆ. ಅದಕ್ಕ ಅಲ್ಲೇ ಇದ್ದ ಒಬ್ಬ ಹುಡುಗಾ” ಇರತಾರಲ್ಲರೀ ಆಂಟೀ ಅಪ್ಪಾ-ಅಮ್ಮಾ ತ್ರಾಸ ಕೊಡಾಕ….” ಅನ್ನಬೇಕ? “ಏನೊ.. ಹಂಗದ್ರ, ಅವರಿಗೇನ್ ನಿಮ್ಮ ಮ್ಯಾಲೆ ಪ್ರೀತಿ ಇರಂಗಿಲ್ಲೇನು? ಏನೊ ತಪ್ಪಮಾಡಿದಾಗ ಒಮ್ಮೊಮ್ಮೆ ಹೇಳಬೇಕಾಗತದ” ಅಂತ ಸಮಜಾಯಿಷಿ ಕೊಟ್ಟೆ. “ತಪ್ಪಮಾಡಿದ್ರ ಬೈಲಿ. ಆದರ ಮಾಡೋ ಎಲ್ಲಾ ಕೆಲಸದಾಗೂ ತಪ್ಪ ಹುಡಿಕಿ ಬೈದ್ರ…? ನಾವ್ ಸಣ್ಣರಿದ್ದಾಗ ಎಷ್ಟ ಪ್ರೀತಿ ಮಾಡತಿದ್ದರು ಆದರ ಈಗೀಗ ಶತ್ರುಗಳ ಮಾಡದಂಗ ಮಾಡತಾರ! ಅನ್ನೋಮಾತು ಹುಡಗುರ ಬಾಯಿಂದ ಬಂದಿದ್ದ ತಡಾ ನನಗ ಏನ ಹೇಳಬೇಕೋ ತಿಳೀದಾತು. ಅಷ್ಟಕ್ಕೂ ಈ ಮಾತುಗಳು ಬಂದಿದ್ದು 7,8,9,10 ನೇ ತರಗತಿ ಮಕ್ಕಳಿಂದಾ!

ಈಗಿನ ಕಾಲದ್ದ ಮಕ್ಕಳಿಗೆ ಅದು ಇಲ್ಲಾ,ಇದು ಇಲ್ಲಾ,ಅವರ ಹಂಗಿಲ್ಲಾ,ಹಿಂಗಿಲ್ಲಾ…. ನಾವ ಅವರಷ್ಟಿದ್ದಾಗ ಹಿಂಗಿದ್ದವಿ,ಅಷ್ಟ ಕಷ್ಟಾ ಪಡತಿದ್ದವಿ….. ಅತೆಲ್ಲಾ ಹೇಳಕೊತ ನಮ್ಮದ ಮಕ್ಕಳ ಕಣ್ಣಾಗ ಶತ್ರುಗಳಾಗಿ ಬಿಟ್ಟೆವಿ !

ಬೆಳಗಾದ್ರ ಸಾಕು, ಏಳೋ…. ಸೂರ್ಯಾ ನೆತ್ತಿಗೆ ಬಂದಾನಾ…. ಅಂತಾ ಸುರು ಆಗೋ ನಂ so called ಸುಪ್ರಭಾತಾ, ಸಾಕ ಮಕೊ ಇನ್ನ ಅನ್ನೊವರೆಗೂ ಎಲ್ಲಾ ಮಾತು ಆಜ್ಞಾರ್ತಕಾನ ಆಗಿರತಾವು.

ಪಾಪಾ, ಹುಟ್ಟಿದಾಗ ಪ್ರೀತಿ ಮಾಡಿ ದೊಡ್ಡವರಾಗತಾ ಬೈಯ್ಯೊ ನಂ ಚಾಳಿನ ಅರ್ಥಾ ಮಾಡಕೊಳ್ಳಾಕಾಗದ ಮಕ್ಕಳು ಕಂಗಾಲಾಗತಾರ. ಯಾವಾಗಲೂ ಗಂಟ ಮಖಾ, ಜೋರ ದ್ವನಿ, ಅದು ಮಾಡು-ಇದು ಮಾಡು, ಹಿಂಗ ಮಾಡು-ಹಂಗ ಮಾಡು ಅನ್ನೋ ಆಜ್ಞೆಗಳು ಇವೆಲ್ಲಾದರಿಂದಾ ಅವರ ಮನಸ್ಸು ಕುಗ್ಗಿಹೊಗತದ. ಸಾಲ್ಯಾಗು ಒತ್ತಡಾ, ಮನಿಯಾಗೂ ಒತ್ತಡಾ. ನಂ ಅತಿಯಾದ ನಿರೀಕ್ಷೆಯಿಂದ ತತ್ತರಿದರೂ ಅದನ್ನ ಮುಟ್ಟಬೇಕು ಅಂತಾ ಹೆಣಗಾಡತಾವ ನಂ ಕೂಸಗಳು.

# ಹಿಂಗ ಒತ್ತಡಾ ನಿಭಾಯಿಸಾಕ ಆಗಲಾರದೌರಿಗೆ ತಂದಿ-ತಾಯಿ ಅಕ್ಕರೆ ಆಸರೆನೂ ಇಲ್ಲದಂಗಾಗಿ ಈ ಜಗತತ್ತನ್ಯಾಗ ತಮಗ್ಯಾರೂ ಇಲ್ಲಾ ಅಂತ ಆತ್ಮಹತ್ಯಾ ಮಾಡಕೋತಾರಾ.

# ಮನಿಯಾಗ ಸಿಗದಿದ್ದ ಪ್ರೀತಿನ ಹೊರಾಗ ಹುಡಕಾಕ ಹೋಗಿ ಪ್ರೀತಿ-ಪ್ರೇಮದಾಗ ಬೀಳತಾರ, ಮೋಸಹೊಗತಾರ

# ಹಠಮಾರಿತನಾ, ಹಿಂಸಾಪ್ರವೃತ್ತಿ ಬೆಳಸಗೋತಾರಾ ಅಥವಾ

# ತೀರಾ ಹೆದರಿಕಿ, ಅಳಬುರಕಿತನಾ , ಅತಿಯಾದ ಅಂತರ್ಮುಖಿತನಾ ಬೆಳಸಕೊಬೌದು

# ಕೆಟ್ಟೌರ ದೊಸ್ತಿ ಮಾಡಬೌದು. ಕೆಟ್ಟ ಚಟಗೊಳನ್ನೂ ಕಲಿಬೌದು

ಮ್ಯಾಗ ಹೇಳಿದ್ದರಾಗ ಯಾದ ಬೆಳಸಿ ಕೊಂಡ್ರೂ ಅದು ಆಘಾತಕಾರಿನ. ಹಂಗಾರ ಏನ ಮಾಡೋದು? ಇಲ್ಲಿ ಕೇಳರಿ.

* ಟೀನ ಏಜಿಗೆ ಬಂದಂಗ ಮಕ್ಕಳ ದೇಹದಾಗ ಹಾರ್ಮೋನಗಳು ಬದಲಾಗತಿರತಾವು. ಮನಸ್ಸು ಮತ್ತ ದೇಹಾ ಈಗಾಗಲೇ ಗೊಂದಲದಾಗ ಇರತದ. ಅಲ್ಲದ ಶೈಕ್ಷಣಿಕವಾಗಿನೂ ಇವ ವರ್ಷಗೊಳ ಭಾಳ ಮಹತ್ವದ್ದ ಇರತಾವ ಹಂಗಾಗಿ ಮಕ್ಕಳು ಈಗಾಗಲೆ ಒತ್ತಡಾ ಅನಭವಸತಿರತಾರ . ಅದಕ್ಕ ಪಾಲಕರಾಗಿ ನಾವು ಅವರಿಗೆ ಒತ್ತಡಾ ನಿಭಾಯಿಸೋದನ್ನ ಕಲಸಬೇಕು. ಪ್ರೀತಿ, ಸಮಾಧಾನದಿಂದಾ ಮಾತಾಡಸಬೇಕು.

* ಅವರ ಜೋಡಿ ಕಾಲಾ ಕಳೀರಿ. ಅವರಷ್ಟ ಇದ್ದಾಗಿನ ನಿಂ ಅನುಭವಾ ಹಂಚಕೋರಿ. ಇದರಿಂದಾ ಇಂತಾ ಒತ್ತಡ,ಸಮಸ್ಯೆಗಳು ಅವರೊಬ್ಬರಿಗೆ ಅಲ್ಲಾ ಎಲ್ಲಾರಿಗೂ ಇರತಾವ. ಅನ್ನೋ ಸತ್ಯ ಅವರಿಗೆ ತಿಳಿತದ. ಆ ವಯಸ್ಸಿನೋರ ಮಾನಸಿಕ ಸ್ಥಿತಿ, ದುಗುಡ, ಆಸೆಗಳು, ಕಾಮನೆಗಳು, ತ್ರಾಸುಗಳು…. ಎಲ್ಲಾನೂ ಮುಕ್ತವಾಗಿ ಮಕ್ಕಳ ಜೋಡಿ ಚರ್ಚಿಸರಿ. ಹಿಂಗ ಮಾಡೋದ್ರಿಂದಾ ಅವರ ಎಲ್ಲೆರಾ ತಪ್ಪಾಕತ್ತರಾ ಅನಸಿದ್ರ ಒಳ್ಳೆ ದೊಸ್ತನಂಗ ತಿದ್ದಿ ಸರಿ ದಾರಿರೂ ತರಬೌದು.

*  ಯಾವಾಗೂ ಹುಡಗೂರ ಮ್ಯಾಗ ಕಣ್ಣಿಟ್ಟಿರೋದು, ಶಿಸ್ತು ಅದು ಇದು ಅನ್ನೋದಕ್ಕಿಂತಾ ಮಕ್ಕಳಿಗೆ ಸರಿ ತಪ್ಪುಗಳನ್ನ ಕಲಿಸಿ, ಶಿಸ್ತಿನ ಮಹತ್ವ ಹೇಳಿಕೊಟ್ಟು ಫ್ರೀಯಾಗಿ ಬಿಡೋದು ಒಳ್ಳೆದು. ಯಾಕಂದ್ರ ಜೀವನಕ್ಕಿಂತಾ ದೊಡ್ಡ ಗುರು ಯಾರೂ ಇಲ್ಲಾ. ಸ್ವತಃ ತಾಯಿ ಕೂಡಾ. ಹಂಗಂತಾ ಕೆಡಾಕ ಬಿಡ್ರಿ ಅಂತಲ್ಲಾ ಸಂಶಯಾಪಡೋದು, ಸಿಟ್ಟಮಾಡೋದು ಮಾಡದಕ್ಕಿಂತಾ ಮಾರ್ಗದರ್ಶನಾ ನೀಡಿದ್ರ ಛೊಲೊ ಅಂದೆ.

ಪ್ರೀತಿ ಇಲ್ಲದ ಮ್ಯಾಲೆ ಗಿಡಾನೂ ಚಿಗಿಯಂಗಿಲ್ಲಂತ, ಇನ್ನ ಮಕ್ಕಳ ಹೆಂಗ ಬೆಳಿಬೇಕು?

ಅದಕ್ಕ ನಮ್ಮವ ಕೂಸುಗೊಳು ಸಲ್ಪ ಕಣ್ಣಿರ ಒರಸೊಣ, ನಗೋಣ, ನಗಿಸೋಣ, ನಂ ಅಹಂ ಬಿಟ್ಟು ಅವರ ಜೋಡಿ ಬೆರೆಯೋಣ. ‘ಜೀವನದಾಗ ಏನ ಬರಲಿ (ನೀ ಪರೀಕ್ಷೆದಾಗ ನಪಾಸಾದರೂ, ಹುಡುಗಾ/ಹುಡುಗಿ ಕೈ ಕೊಡ್ಡ ಹೊದ್ರು, ದುಡ್ಡಹಾಕಿದ್ದ ಬಿಜಿನೆಸ್ ತೋಪಾದ್ರು) ನಾ ನಿನ್ನ ಜೋಡಿ ಇರತೇನಿ ಯಾವಾಗಲೂ’ ಅನ್ನೋ ನಂಬಿಕಿ ಹುಟ್ಟಸಬೇಕು. ಮನಸ್ಸಕ್ಷಿಗೆ ಸರಿ ಅನಸಿದ್ದ ಎಲ್ಲಾ ಕೆಲಸಕ್ಕೂ ನನ್ನ ಬೆಂಬಲಾ ಅದ ಅಂತ ಅವರಿಗೆ ತಿಳಸಬೇಕು. ಎಲಾಕ್ಕಿಂತಾ ಮುಖ್ಯವಾಗಿ ನಮಗ ಅವರು ಎಷ್ಟ ಮುಖ್ಯಾ ಅನ್ನೋದನ್ನ ಮನದಟ್ಟ ಮಾಡಸಬೇಕು.

ಒಟ್ಟನ್ಯಾಗ ತಂದಿ,ತಾಯಿ ತ್ರಾಸ ಕೊಡತಾರಾ ಅವರ ನಂ ಶತ್ರುಗಳಾಗ್ಯಾರಾ ಅನ್ನೊದನ್ನ ಅವರ ಮನಸಿನಿಂದಾ ಅಳಸಬೇಕು. ಹೌದಿಲ್ಲರಿ?