http://static1.squarespace.com/static/5105c05ce4b08ef8a15f47d6/t/5132902ee4b027b1c050c06f/1362268209587/Sad+Teen.jpg

ಒಂದಲ್ಲಾ ಒಂದ ಟಾಯಮಿನ್ಯಾಗ ಎಲ್ಲಾರೂ ಆತಂಕಾ ಅನುಭವಿಸಿರ್ತೀವಿ. ಇನ್ನೇನ ಆಕ್ಕತೇ ಅನ್ನ ಭಯಾನ  ನಮ್ಮೊಳಗ ಹುಟ್ಟ ಹಾಕಿಬಿಡತತಿ ಆತಂಕಾ. ಒಬ್ಬ ಹುಡಗ/ಹುಡಗಿಗೆ ಪ್ರೊಪೋಸ್ ಮಾಬೇಕ, ಕೆಲಸಕ್ಕ ಇಂಟರ್ವ್ಯೂಕ ಹೋಗಬೇಕ… ಇಂತಾ ಟಾಯಮಿನ್ಯಾಗ ಸಹಜಾಗೇ ಅಂಗೈ ಒಳಗ ಸಣ್ಣಗ ಬೆವರ, ಎದ್ಯಾಗ ಢವಾಢವಾ ಎಲ್ಲಾ ಆಕ್ಕಾವು. ಮನಸ್ಸಿನ್ಯಾಗ ಆತಂಕಾ ಇದ್ದಾಗ ನೆಟ್ಟಗ ನಿದ್ದಿ ಬರಂಗಿಲ್ಲ, ನೆಮ್ಮದಿ ಇರಂಗಿಲ್ಲ, ಯಾ ಕೆಲಸಾನೂ ನೆಟ್ಟಗ ಮಾಡಾಕಾಗಲ್ಲ. ಅದರಾಗೂ ಸೂಕ್ಷ್ಮ ಮನಸಿನೋರ ಆದ್ರಂತೂ ಇನ್ನೂ ತ್ರಾಸ. ಆತಂಕ ಕಡಿಮಿ ಮಾಡಿಕೆಳ್ಳದ ಹೆಂಗ? ಇಲ್ಲೈತಿ ನೋಡ್ರಿ 10 ಐಡಿಯಾ.

1. ನಿಮ್ಮನ್ನ ನೀವ ಕೀಳಾಗಿ ಕಾಣದ ನಿಲ್ಲಸ್ರಿ

ಮನಸಿನ್ಯಾಗ ಛೊಲೋ ವಿಚಾರ ಮಾಡದ್ರಿಂದಾನೂ ಆತಂಕದಿಂದಾ ಹೊರಗ ಬರಬೋದು. ನಿಮ್ಮ ಹಂತೇಲಿರ ಬ್ಯಾರೇ ಕ್ರಾರೆಕ್ಟರ್ಗುಳ್ನ ಐಡೆಂಟಿಫೈ ಮಾಡಿಕೆರ್ರಿ. ಫಾರ್ ಎಕ್ಸಾಂಪಲ್ ಅಂದ್ರ ಬ್ಯಾರೇರ ಬಗ್ಗೆ ಭಾಳ ಅನುಕಂಪ ಇರ್ತತಿ. ಇಲ್ಲಾ ನಿಮ್ಮ ಹಂತೇಲೆ ಛೊಲೋ ಕ್ರಿಯೇಟಿವ್ ವಿಚಾರ ಇರ್ತತಿ. ಅವುಗುಳ ಮ್ಯಾಲ ಲಕ್ಷಾಗೊಡದ್ರಿಂದ ಇಲ್ಲಾ ಏನಾರಾ ಹೊಸಾದ ಕಲೇದ್ರಿಂದಾ ಆತಂಕ ಕಡಿಮಿ ಆಕ್ಕತಿ.

2. ಆತಂಕ ಅನ್ನದ ತಾತ್ಕಾಲಿಕ ಅಂತ ಅರ್ಥಾ ಮಾಡಿಕೆರ್ರಿ

ಇವತ್ತಿದ್ದಂಗ ಇನ್ನೊಂದ ದಿನಾ ಇರಂಗಲಿಲ್ಲ. ವಾತಾವರಣಾನೂ ಅಸ್ಟ ಕ್ಷಣಕ್ಷಣಾನೂ ಚೇಂಜ್ ಆಕ್ಕೆಂತನ ಇರ್ತತಿ. ಇಲ್ಲಿ ಯಾವದೂ ಶಾಶ್ವತ ಅಲ್ಲ. ಆತಂಕನೂ ಸೈತ ಅಸ್ಟ ಕ್ಷಣಿಕ, ಆತಂಕ, ಹೆದರಿಕಿ, ಗಾಬರಿ ಹೆಚಿಗಿ ಮಾಡಿಕೆಳ್ಳದ್ರಿಂದ ನಿಮ್ಮ ಒಳಗಿನ ಶಕ್ತಿನ ಅಳಗ್ಯಾಡಿಸಿಬಿಡತತಿ. “ಈ ಜಗತ್ತಿನ್ಯಾಗ ಯಾವದೂ ಶಾಶ್ವತ ಅಲ್ಲ, ನಮ್ಮ ಸಮಸ್ಯೆಗೂಳೂ ಸೈತ” ಅಂತ ಚಾರ್ಲಿ ಚಾಪ್ಲಿನ್ ಹೇಳಿದ ಮಾತನ ನೆನಪ ಇಟಗರ್ರಿ.

3. ಯದಕ್ಕ ಆತಂಕ ಪಟಗಂಡೀರಿ ಅನ್ನದನ್ನ ಯಾರರ ಹಂತೇಲಾದ್ರೂ ಹೇಳಿಕೆರ್ರಿ

ಆತಂಕ ಅನ್ನದ ಏಕಾಂತವಾದ ಅನುಭವಾ. ಎಸ್ಟ ಒಬ್ಬರ ಇರತಾರೋ ಅಸ್ಟ ಆತಂಕ ಹೆಚಿಗಿ ಆಕ್ಕತಿ ಅನ್ನದ ಗೊತ್ತಿರಲಿ. ನಿಮ್ಮ ಆತಂಕಕ್ಕ ಕಾರಣ ಏನು, ಯಾವ ವಿಚಾರಕ್ಕ ನೀವ ಆತಂಕ ಪಡಾಕತ್ತೀರಿ ಅನ್ನದನ್ನ ನಿಮ್ಮ ಮನಸಿಗೆ ಹತ್ತರಾ ಇರೋರ ಮುಂದ ಹೇಳಿಕೆರ್ರಿ. ಹಂಗಂತ ಯಾರಯಾರ ಹಂತೇಲೆರ ಹೇಳಿಕೆಂಡ್ರ ಆತಂಕ ಕಡಿಮಿ ಆಗಂಗಿಲ್ಲ. ನಿಮ್ಮ ಬಗ್ಗೆ ಅವರಿಗೆ ಛೊಲೋತ್ನ್ಯಾಂಗ ಗೊತ್ತಿರಬೇಕ. ನಿಮ್ಮನ ಅರ್ಥಾ ಮಾಡಿಕೆಳ್ಳ ಅಂಥಾರು ಆಗಿರಬೇಕ ಅಸ್ಟ.

4. ಯಾರಿಂದ ನಿಮಗ ಆತಂಕ ಆಗಾಕತ್ತೈತಿ ಅಂತ ಐಡೆಂಟಿಫೈ ಮಾಡಿಕೆರ್ರಿ

ಕೆಲವ ರಿಲೇಶನ್ನುಗುಳ ನಿಮ್ಮ ಆತಂಕಕ್ಕ ಕಾರಣ ಅನ್ನದಾದ್ರ ಅದನ್ನ ಸೀರಿಯಸ್ಸಾಗಿ ವಿಚಾರ ಮಾಡಾಕಬೇಕ. ಒಬ್ಬರಿಂದ ನಿಮಗ ಭಾಳ ಆತಂಕ ಆಗಾಕತ್ತೈತಿ ಅಂದ್ರ ಅಂತಾ ರಿಲೇಶನ್ ಹರಕಳ್ಳದ ಛೊಲೋ. ಅದರ ಬಗ್ಗೆ ಏನೂ ಬ್ಯಾಜಾರ ಮಾಡಿಕ್ಯಾಬಾಡರಿ.

5. ಪ್ರಾಬ್ಲೆಮ್ನ ಫೇಸ್ ಮಾಡ್ರಿ…. ಓಡಿ ಹೋಗಬಾಡರಿ

ನಿಮ್ಮ ಆತಂಕಕ್ಕ ಕಾರಣ ಆಗಿರ ವಿಚಾರ ಅಥವಾ ಮನಿಶಾನಿಂದ ದೂರ ಸರಕಳ್ಳದ್ರಿಂದ ಆತಂಕ ಇನ್ನೂ ಹೆಚಿಗಿ ಆಕ್ಕತೋ ಹೊರತು ಕಮ್ಮಿ ಆಗಂಗಿಲ್ಲ. ಅದೇನ ಆಕ್ಕತ್ಯೋ ನೋಡೇ ಬಿಡತನಿ ಅಂತ ಎದ್ದ ನಿತಗರ್ರಿ. ಪ್ರಾಬ್ಲೆಮ್ನ ಫೇಸ್ ಮಾಡ್ರಿ. ಆತಂಕ ಅನ್ನದ ಆ ಕ್ಷಣದಾಗ ಆಗೋ ಹೆದರಿಕಿ ಅಸ್ಟ. ನೀವ ಆತಂಕ್ದಾಗನ ಒದ್ದಾಡಿಕೆಂತ ಇದ್ರ ಏನೂ ಮಾಡಾಕಾಗಲ್ಲ. ಪ್ರಾಬ್ಲೆಮ್ನ ಫೇಸ್ ಮಾಡಿದಾಗನ ಆತಂಕದಿಂದಾ ಹೊರಗ ಬರಾಕ ಆಗೋದು.

6. ಒಂದೊಂದ ಸಲಾ ಏನ ಆಗಬೇಕ ಅಂತ ಇರತೈತೋ ಅದೇ ಆಕ್ಕತಿ, ತಪ್ಪಸಾಕ ಆಗಲ್ಲ ಅನ್ನದ ಮರೀಬಾಡರಿ

ಆಗಬೇಕು ಅಂತ ಇದ್ದರ ಅದನ್ನ ಯಾರ ಕೈಲೆನೂ ತಪ್ಪದಾಕ ಆಗಲ್ಲ. ಆದರ ಆ ಟಾಯಮಿನ್ಯಾಗ ನೀವ ಹೆಂಗ ರಿಯಾಕ್ಟ್ ಮಾಡತೀರಿ ಅನ್ನದ ನಿಮ್ಮ ಕೈಯ್ಯಾಗ ಐತಿ. ಆತಂಕ ಹೆಚಿಗಿ ಮಾಡಿಕೆಳ್ಳದು ಬಿಡದು ಅಸ್ಟ. “ಪ್ರೆಶರ್ರಿನಿಂದಾ ನಾವ ಯಾರೂ ಸಾಯಂಗಿಲ್ಲ, ಅದಕ್ಕ ನಾವ ಹೆಂಗ ರಿಯಾಕ್ಟ್ ಮಾಡತವಿ ಅನ್ನದರ ಮ್ಯಾಲ ಅದ ಡಿಪೆಂಟ್ ಆಗೇತಿ” ಅಂತ ಸ್ಟ್ರೆಸ್ ಸಂಶೋಧನಾ ಪಿತಾಮಹ ಡಾll ಹನ್ಸ್ ಸೆಲ್ಯೇ ಹೇಳಿರ ಮಾತನ ಲಕ್ಷ್ಯಾದಾಗ ಇಟಗರ್ರಿ.

7. ಆತಂಕ ಮಾಡಿಕೆಳ್ಳದ್ರಿಂದ ಏನೂ ಸಾಧಿಸಾಕ ಆಗಲ್ಲ ಅನ್ನದ ಮರೀಬಾಡರಿ

ಆತಂಕದಿಂದ ಗುರಿ ಮುಟ್ಟಾಕ ಆಗಲ್ಲ. ಆತಂಕ ಪಟಗಂತ ಪಟಗಂತ ಹೆಲ್ತ ಹಾಳಾಕ್ಕತಿ, ಇದ್ರಿಂದ ಟಾಯಮ ಹಾಳಾಕ್ಕತೇ ಹೊರತು, ಲೈಫಿನ್ಯಾಗ ಏನೂ ಸಾಧಿಸಾಕ ಆಗಂಗಿಲ್ಲ. ಆತಂಕದಿಂದಾ ಲೈಫಿನ್ಯಾಗ ಲಾಸ್ ಐತೇ ಹೊರತು ಲಾಭ ಅಂತೂ ಇಲ್ಲ. ಅದಕ್ಕ ಆತಂಕಾನ ಅಲ್ಲೇ ಬಿಟ್ಟ… ಮುಂದ ನಡೆಯೋದ ಶ್ಯಾಣೇರ ಲಕ್ಷಣಾ.

8. ಪ್ರಾಣಾಯಾಮ, ಮೆಡಿಟೇಶನ್ನು, ಎಕ್ಸರ್ಸೈಜು ಮಾಡದ್ರಿಂದ ಮನಸನ ಕೂಲಾಗಿಟಗರ್ರಿ

ಡೀಪಾಗಿ ಉಸರ ಎಳಕರ್ರಿ, ಸ್ವಲ್ಪ ಹೊತ್ತ ಹಂಗ ಬಿಗಿ ಹಿಡದ ಅಮ್ಯಾಲ ಸ್ಲೋ ಆಗಿ ಉಸರ ಹೊರಗ ಬಿಡ್ರಿ. ಇದರಿಂದಾ ಮನಸಿನ ಭಾರ ಕಡಿಮಿ ಆಕ್ಕತಿ. ಒಂದ ಕಪ್ ಕಾಫಿ ಕುಡೀರಿ, ಎಕ್ಸರ್ಸೈಜ್ ಮಾಡ್ರಿ, ಯೋಗಾ ಮಾಡ್ರಿ, ಮೆಡಿಟೇಶನ್ ಮಾಡ್ರಿ, ಪ್ರಾಣಾಯಾಮ ಮಾಡ್ರಿ. ಇದ್ರಿಂದ ನಿಮ್ಮ ದೇಹ ಮನಸು ಆತಂಕದಿಂದ ಹೊರಗ ಬರತತಿ. ಆತಂಕ ಹೆಚಿಗಿ ಆದಸ್ಟೂ ನಮ್ಮ ದೇಹದೊಳಗ ಅಡ್ರೆನಾಲಿನ್ ಪ್ರಮಾಣ ಹೆಚಿಗಿ ಆಕ್ಕತಿ. ಎಕ್ಸರ್ಸೈಜ್ ಅದನ್ನ ಕರಗಿಸತತಿ. ಬಿಸಿ ನೀರಿನ್ಯಾಗ ಸುಖವಾಗಿ ಒಂದ ಜಳಕಾ ಮಾಡ್ರಿ. ಛೊಲೋ ಮ್ಯೂಸಿಕ್ ಕೇಳ್ರಿ. ಇಂಟರ್ನೆಟ್ಟಿನ್ಯಾಗ ಈಜಾಡ್ರಿ, ನಿಮಗ ಲೈಕ ಆಗೋ ಪಿಚ್ಚರ್ ನೋಡ್ರಿ. ರಿಲ್ಯಾಕ್ಸ್ ಆಗಾಕ ಏನ ಒಂದ ಮಾಡ್ರಿ. ಆತಂಕ ಪಟಗಂತ ಮಾತ್ರ ಕುತಗಾಬಾಡರಿ.

9. ನಿಮ್ಮ ಹೆಲ್ತಗಿಂತಾ ಇಂಪಾರ್ಟೆಂಟ್ ಯಾವದೂ ಅಲ್ಲ ಅನ್ನದ ತಲ್ಯಾಗಿರ್ಲಿ

ಯಾಕ್ಚುವಲ್ ಪ್ರಾಬ್ಲೆಮ್ ಏನು ಅನ್ನದನ್ನ ಫಸ್ಟ ತಿಳಕರ್ರಿ. ಸುಮ್ಮನ ಮನಸಿನ್ಯಾಗ ಹಂಗ ಆಗಿರತತಿ, ಹಿಂಗ ಆಗಿರತತಿ ಅಂತ ಕಲ್ಪನಾ ಮಾಡಿಕೆಳ್ಳದ್ರಿಂದ ಪ್ರಾಬ್ಲೆಮ್ ಇನ್ನಷ್ಟ ದೊಡ್ಡದಾಗಿ ಕಾಣಾಕ ಸ್ಟಾರ್ಟ್ ಆಕ್ಕತಿ. ಯಾವ ಪ್ರಾಬ್ಲೆಮ್ಮೂ ನಾವ ಅಂದಕಂಡಷ್ಟ ದೊಡ್ಡದಿರಲ್ಲ. ಹೆಲ್ತಿಗಿಂತ ಇಂಪಾರ್ಟೆಂಟ್ ಯಾವದೂ ಅಲ್ಲ. ಆತಂಕ, ಹೆದರೀಕಿ, ಪ್ರೆಶರ್ ಅನ್ನದ ಪಾಯಿಸನ್ ಇದ್ದಂಗ ಅನ್ನದ ತಲ್ಯಾಗಿರ್ಲಿ.

10. ಹಿಂದನೂ ನಿಮಗ ಆತಂಕ ಆಗಿತ್ತು, ಆವಾಗನೂ ನೀವ ಗೆದ್ದ ಹೊರಗ ಬಂದಿದ್ರಿ ಅನ್ನದ ನೆನಪ ಮಾಡಿಕೆರ್ರಿ

ಯಾವಾಗನೂ ಆತಂಕ ಆಗಿದ್ದಾಗ ಅದರಿಂದ ಹೊರಗ ಬರಾಕ ಆಗದ ಇಲ್ಲನೋ ಅನಿಸತಿರ್ತತಿ. ಆದರ ನಿಮಗ ಎಸ್ಟೋ ಸಲಾ ಎಂತೆಂಥದೋ ಆತಂಕಗಳಿಂದ ಹೊರಗ ಬಂದಿರ ಎಕ್ಸಪೀರಿಯೆನ್ಸ್ ಇರ್ತತಿ. ಬೇಕಂದರ ವಿಚಾರ ಮಾಡಿ ನೋಡ್ರಿ. ಹಂಗ ಈ ಸಲಾನೂ ಲಾಸ್ಟಿಗೆ ಎಲ್ಲಾ ಸರಿ ಹೊಕ್ಕತಿ. ಯಾಕ ಅಂತೀರ್ಯಾ? ಯಾಕ ಅಂದ್ರ ಈ ಆತಂಕಗುಳು ಎಲ್ಲಾ ಬರದ ನಿಮ್ಮನ್ನ ಟೆಸ್ಟ ಮಾಡಾಕ. ನೀವ ಗೆದ್ದ ಗೆಲ್ಲತೀರಿ. ಟ್ರಾಯ್ ಮಾಡಬೇಕಸ್ಟ.

ಇಸ್ಟ ಮಾಡಿದ್ರ ನಿಮ್ಮ ಆತಂಕ ಎಸ್ಟ ಹೊತ್ತ ಉಳೀತೇತಿ? ವಿಚಾರಾ ಮಾಡ್ರಿ. ಹಿಂಗ ಮಾಡದ ಬಿಟ್ಟ ಏನೂ ಹೊಳೀವಲ್ದು ಅಂತ ಕುತಗಂಡ್ರ ಕುತಗಂಡ ಇರಬೇಕಾಕ್ಕತಿ…. ಏಳ್ರಿ ಮ್ಯಾಲೇಳ್ರಿ!