https://i9.dainikbhaskar.com/thumbnails/600x519/web2images/www.dailybhaskar.com/2017/07/05/ravana-1_1499252427.jpg

ಎಲ್ಲರೂ ಒಂದಲ್ಲ ಒಂದು ಸಲ ರಾಮಾಯಣದ ಬಗ್ಗೆ, ಕೇಳಿರ್ತೀವಿ, ಓದಿರ್ತೀವಿ ಅಥವಾ ಟೀವಿಲಿ ನೋಡಿರ್ತೀವಿ. ರಾಮಾಯಣದಲ್ಲಿರೋ ಅಣ್ಣ ತಮ್ಮಂದಿರ ಅನ್ಯೋನ್ಯತೆ, ಪಿತೃ ವಾಕ್ಯ ಪರಿಪಾಲನೆ, ಸೀತಾಪಹರಣ, ಲಂಕಾ ದಹನ, ರಾವಣ ಸಂಹಾರ…. ಇದೆಲ್ಲಾ ಸಾಮಾನ್ಯವಾಗಿ ನಾವು ತಿಳ್ಕೊಂಡಿರ್ತ್ತೀವಿ.

ಇನ್ನೊಂದ್ ವಿಷಯ ಏನಪ್ಪಾ ಅಂದ್ರೆ,  ಸೀತೇನ ರಾವಣ ಅಪಹರಣ ಮಾಡಿದ್ದೇ ಅವನ ಸಾವಿಗೆ ಕಾರಣ ಆಯಿತು ಅನ್ನೋದು ನಾವು ನಮ್ಮ ಅಜ್ಜಿ ತಾತಂದಿರ ಕಾಲದಿಂದ ಕೇಳ್ಕೊಂಡು ಬಂದಿರೋ ಕಥೆ. ಆದ್ರೆ ನಾವೆಲ್ಲಾ ತಿಳ್ಕೊಂಡಿರೋ ಹಾಗೆ ಬರೀ ಸೀತಾಪಹರಣದಿಂದ ಅವನಿಗೆ ಈ ಗತಿ ಬರ್ಲಿಲ್ಲ. ಸೀತೆ ಅಲ್ಲದೆ ಇನ್ನೂ 4 ಹೆಂಗಸರ ಶಾಪಾನೂ ಅವನ ವಿನಾಶಕ್ಕೆ ಕಾರಣ ಆಯ್ತು. ಇದರ ಬಗ್ಗೆ ನಿಮಗೂ ಗೊತ್ತಿರ್ಲಿಲ್ಲ ತಾನೇ? ಆ ಕಥೆ ಇಲ್ಲಿ ಓದಿ…

1. “ಇನ್ನೊಂದು ಸಲ ಯಾವುದೇ ಹೆಂಗಸು ಜೊತೆ ಹೀಗೆ ನಡ್ಕೊಂಡ್ರೆ, ನಿನ್ನ ತಲೆ ನೂರು ಹೋಳಾಗಿ ಹೋಗಲಿ” – ರಂಭೆ

ರಾವಣ ಒಂದು ಸಲ ದೇವಲೋಕಕ್ಕೆ ಹೋದಾಗ ರಂಭೆನ ನೋಡ್ತಾನೆ. ಅವಳ ಸೌಂದರ್ಯಕ್ಕೆ ಮನಸೋತು ಹೇಗಾದ್ರೂ ಮಾಡಿ ಅವಳನ್ನ ಲಂಕೆಗೆ ಕರ್ಕೊಂಡು ಹೋಗ್ಬೇಕು ಅಂತ, ಅವಳನ್ನ ಬಲವಂತವಾಗಿ ಕರ್ಕೊಂಡು ಹೋಗೋ ಪ್ರಯತ್ನ ಮಾಡ್ತಾನೆ. ಇದರಿಂದ ಕೋಪಗೊಂಡ ನಳಕುಬೇರ (ಕೆಲವೊಂದು ಗ್ರಂಥಗಳಲ್ಲಿ ಬ್ರಹ್ಮ ಅಂತಾನೂ ಉಲ್ಲೇಖ ಆಗಿದೆ ) ತನ್ನ ಹೆಂಡತಿಗೆ ಈ ರೀತಿ ಅವಮಾನ ಮಾಡಿದ್ದಕ್ಕೆ ಶಾಪ ಕೊಡ್ತಾನೆ.  ಶಾಪ ಏನಪ್ಪಾ ಅಂದ್ರೆ ” ಇನ್ನೊಂದು ಸಲ ಯಾವುದೇ ಸ್ತ್ರೀ ಜೊತೆ ಹೀಗೆ ನಡ್ಕೊಂಡ್ರೆ, ನಿನ್ನ ತಲೆ ನೂರು ಹೋಳಾಗಿ ಹೋಗಲಿ” ಅಂತ. ರಂಭೇನ ನೋಡಿ ಇಷ್ಟೆಲ್ಲಾ ರಾದ್ದಂಥ ಮಾಡ್ಕೊಂಡ್ ರಾವಣನಿಗೆ ರಂಭೆ ತನ್ನ ಅಣ್ಣ ಕುಬೇರನ ಮಗ ನಳಕುಬೇರನ ಹೆಂಡತಿ ಅಂತ ಚೆನ್ನಾಗೇ ಗೊತ್ತಿತ್ತು. ಆದ್ರೂ ಹೀಗೆ ಅನುಚಿತವಾಗಿ ನಡ್ಕೊಂಡಿದ್ದ.

ಈ ಶಾಪಾನೇ ರಾವಣ ಸೀತೆ ಮೈ ಮುಟ್ಟದ ಹಾಗೆ ಕಾಪಾಡಿದ್ದು.

ಮೂಲ

2. “ನೀನು ಯಾವ ಕಾಮಾಸಕ್ತಿಯಿಂದ ಕುರುಡ ಆಗಿದ್ದಿಯೋ ಅದೇ ಒಂದು ದಿನ ನಿನ್ನ ಅವನತಿಗೆ ಕಾರಣ ಆಗ್ಲಿ” – ಮಂಡೋದರಿ ಅಕ್ಕ ಮಾಯಾ

ಮಾಯಾ ವೈಜಯಂತಪುರದ ರಾಜ ಶಂಭರನ ಹೆಂಡತಿ. ಒಂದ್ಸಲ ಶಂಭರ ಇಲ್ಲದಿದ್ದಾಗ ಮಾಯಾನ ಒಲಿಸಕ್ಕೆ ರಾವಣ ನೋಡ್ತಾನಂತೆ. ಈ ವಿಷಯ ಗೊತ್ತಾಗಿ ಶಂಭರ ರಾವಣನನ್ನ ಜೈಲಲ್ಲಿ ಕೂಡಿ ಹಾಕ್ತಾನೆ. ಈ ಟೈಮಲ್ಲೇ ದಶರಥ ಮಹಾರಾಜಾ ರಾವಣನ ಜೊತೆ ಯುದ್ಧ ಮಾಡ್ತಾನೆ. ಈ ಯುದ್ಧದಲ್ಲಿ ಶಂಭರ ಸತ್ತಾಗ, ಮಾಯಾ ದೇಹತ್ಯಾಗ ಮಾಡಕ್ಕೆ ನಿರ್ಧಾರ ಮಾಡ್ತಾಳೆ. ಆದ್ರೆ ರಾವಣ ತನ್ನ ಜೊತೆ ಲಂಕೆಗೆ ಬಾ ಅಂತ ಕರೀತಾನೆ.. ಆಗ ಮಾಯಾ ” ನೀನು ಯಾವ ಕಾಮಾಸಕ್ತಿಯಿಂದ ಕುರುಡ ಆಗಿದ್ದಿಯೋ ಅದೇ ಒಂದು ದಿನ ನಿನ್ನ ಅವನತಿಗೆ ಕಾರಣ ಆಗ್ಲಿ” ಅಂತ ಶಾಪ ಕೊಡ್ತಾಳೆ .

ಮೂಲ

3. “ನಾನೇ ನಿನ್ನ ಸಾವಿಗೆ ಕಾರಣಳಾಗ್ತೀನಿ” – ಶೂರ್ಪಣಖಿ

ಏನಪ್ಪಾ ಇವರು? ನಾವು ಶೂರ್ಪಣಖಿ ರಾವಣನ ತಂಗಿ ಅಂದ್ಕೊಂಡಿದ್ರೆ ಇವ್ರು ಅವಳೇ ರಾವಣ ಸಾಯಕ್ಕೆ ಒಂದು ಕಾರಣ ಅಂತಿದ್ದಾರಲ್ಲ ಅಂತ ಆಶ್ಚರ್ಯ ಆಯ್ತಾ?  ಮುಂದೆ ಓದಿ ನಿಮಗೇ ಗೊತ್ತಾಗುತ್ತೆ…

ಕಾಲಕೇಯ ಅನ್ನೋ ರಾಜನ ಆಸ್ಥಾನದಲ್ಲಿ ವಿದ್ಯುತ್ತುಜಿನ್ನ್ ಅನ್ನೋ ಸೇನಾಧಿಪತಿ ಇರ್ತಾನೆ. ಅವನೇ ಈ ಶೂರ್ಪಣಖಿ ಗಂಡ. ರಾವಣ ಪ್ರಪಂಚಾನೇ ತನ್ನ ಕೈವಶ ಮಾಡ್ಕೋಬೇಕು ಅಂತ ಯುದ್ದ ಮಾಡಕ್ಕೆ ಹೊರಟಾಗ, ಕಾಲಕೇಯನ ಮೇಲೂ ಯುದ್ಧ ಮಾಡ್ತಾನೆ. ಆ ಯುದ್ಧದಲ್ಲಿ ಶೂರ್ಪಣಖಿ ಗಂಡ ಸಾಯ್ತಾನೆ. ಆಗ ದುಃಖ, ಕೋಪದಿಂದ ಶೂರ್ಪನಖಿನೂ ರಾವಣನಿಗೆ ಶಾಪ ಕೊಟ್ಟು, ತಾನೇ ಒಂದು ರೀತೀಲಿ ರಾವಣನ ಸಾವಿಗೆ ಕಾರಣ ಆಗ್ತೀನಿ ಅಂತ ಪಣ ತೊಡ್ತಾಳೆ.

ಮೂಲ

4. “ನಿನ್ನ ಸಾವಿಗೆ ಒಂದು ಹೆಣ್ಣೇ ಕಾರಣವಾಗಲಿ” – ತಪಸ್ವಿನಿ (ವಿಷ್ಣುಭಕ್ತೆ)

ಇದು ಯಾರು? ರಾಮಾಯಣಕ್ಕೆ ಹೊಸದಾಗಿ ಸೊರ್ಕೊಂಡೋರು ಅನ್ಕೋಬೇಡಿ… ರಾವಣ ತನ್ನ ಪುಷ್ಪಕ ವಿಮಾನದಲ್ಲಿ ಸುತ್ತಾಡ್ತಿರೋವಾಗ, ವಿಷ್ಣು ಪರಮ ಭಕ್ತೆಯಾಗಿರೋ, ವಿಷ್ಣುನ ಮೆಚ್ಚಿಸಿ ಮಾಡುವೆ ಆಗ್ಬೇಕು ಅಂತ ಘೋರ ತಪಸ್ಸು ಮಾಡ್ತಿರೋ ಒಬ್ಬ ತಪಸ್ವಿನಿನ ನೋಡ್ತಾನೆ, ಅವಳ ಮೇಲೆ ಅವನಿಗೆ ವ್ಯಾಮೋಹ ಉಂಟಾಗುತ್ತೆ. ಅವಳನ್ನ ತನ್ನ ಜೊತೆ ಕರ್ಕೊಂಡು ಹೋಗ್ಬೇಕು ಅಂತ ಅವಳನ್ನ ಬಲವಂತ ಮಾಡ್ತಾನೆ. ರಾವಣನ ಈ ವರ್ತನೆ ನೋಡಿ ಅವಳು ತಕ್ಷಣ ದೇಹತ್ಯಾಗ ಮಾಡುತ್ತ, ರಾವಣನಿಗೆ “ನಿನ್ನ ಸಾವಿಗೆ ಒಂದು ಹೆಣ್ಣೇ ಕಾರಣವಾಗಲಿ” ಅಂತ ಶಾಪ ಕೊಡ್ತಾಳೆ.

ಮೂಲ

ಮುಂದೆ ತ್ರೇತಾಯುಗದಲ್ಲಿ ಯಾವಾಗ ರಾವಣ ಸೀತಾಪಹರಣ ಮಾಡ್ತಾನೋ, ಆಗ ಈ ಎಲ್ಲಾ ಸ್ತ್ರೀಯರ ಶಾಪದ ಫಲ ಅನ್ನೋ ಹಾಗೆ, ಸೀತೆ ಅನ್ನೋ ಹೆಣ್ಣಿನ ಕಾರಣದಿಂದಲೇ ರಾಮನಿಂದ ಸಂಹಾರ ಆಗ್ತಾನೆ.