https://i.ytimg.com/vi/lGfq5d3q8Ws/maxresdefault.jpg

"ಬೇಗ ಮಲಗಿ ಬೇಗ ಎಳು" ಅಂತ ನಮ್ ಹಿರೀರು ಹೇಳ್ತಾ ಇರ್ತಾರೆ. ಅದ್ನ ಈಗೀನ ಕಾಲದಲ್ಲಂತೂ ನಾವ್ ಪಾಲ್ಸಲ್ಲ ಬಿಡಿ. ಫೇಸ್ಬುಕ್ಕು, ವಾಟ್ಸಾಪ್ಪೂ ,ಇನ್ಸಟಾಗ್ರಾಂ ಬಿಟ್ಟು ನಿದ್ದೆಗೆ ಹೋಗ್ಬೇಕಾದ್ರೆ ಗಟ್ಟಿ ಮನಸ್ಸು ಬೇಕು. ಅದೆಲ್ಲಾ ದಾಟ್ಕಂಡು ನಿದ್ದೆ ಮಾಡೋಕೆ ರೆಡಿಯಾದ್ರೆ  ಥೂ….. ನಿದ್ದೆನೇ ಬರಲ್ಲ.

ಎಷ್ಟ್ ಸಾರಿ ಮಗ್ಗಲು ಬದ್ಲಾಯಿಸಿದ್ರೂ ನಿದ್ರೆ ಬರಲ್ಲಾ ರೀ. ನಿದ್ರೆ ಬರ್ತಾ ಇಲ್ಲಾಂತ ನಿಧಾನ ನಿಧಾನವಾಗಿ ಹತಾಶೆ ಶುರು ಆಗತ್ತೆ. ಹತಾಶೆ ಶುರು ಆದ್ರೆ ಮುಗೀತು ನಾಳೆ ದಿನ ಅದ್ರ ಪ್ರತಿಫಲ ಅನುಭವಿಸ್ಬೇಕು. ಈ ರೀತಿ ನಿದ್ರೆ ಕೆಟ್ಕೊಂಡ್ರೆ ನಾಳೆ ಗತಿ ಎನು? ಎಲ್ಲಾ ಹಾಳಾಗತ್ತೆ. ಅದ್ಕೆ ಹಿರೀರು ಹೇಳಿದ್ದು… ಬೇಗ ಮಲ್ಗಿ ಬೇಗ ಎಳು ಅಂತ .

ವಿಷ್ಯ ಏನಪ್ಪಾ ಅಂದ್ರೆ, ಯೋಗಾಸನ ಮಾಡೋದ್ರಿಂದ ಚೆನ್ನಾಗಿ ನಿದ್ರೆ ಬರತ್ತೆ. ಇಂತಹದ್ದೇ ಆಸನ ಅಂತ ಇರತ್ತೆ. ಅದ್ಯಾವ್ದು ಅಂತ ಇಲ್ಲಿ ತಿಳ್ಕೊಂಡು ಇವತ್ತೀನಿಂದಾನೇ ಮಾಡಕ್ಕೆ ಶುರು ಮಾಡಿ. ಈ ಆಸನಗಳು ನಿಮ್ಮಲ್ಲಿರೋ ಒತ್ತಡಾನ ಕಡ್ಮೆ ಮಾಡತ್ತೆ. ಅದ್ರಿಂದ ನಿದ್ರೆ ಚೆನ್ನಾಗಿ ಬರತ್ತೆ. ಈ ಅಸನಗಳನ್ನ ನೀವು ಬೆಡ್ ಮೇಲೇನೆ ಮಾಡ್ಬಹುದು. ಹಾಸಿಗೆ ತುದೀಲಿ ಇದ್ದು ಎನಾದ್ರೂ ಮಾಡೋಕೆ ಪ್ರಯತ್ನ ಪಟ್ರೆ ನೆಲಕ್ಕೆ ಬೀಳೋ ಚಾನ್ಸ್ ಇರತ್ತೆ. ಅದ್ಕೆ ಬೆಡ್ಮೇಲೆ ಸರಿಯಾದ ಜಾಗ ಹುಡ್ಕೊಳ್ಳಿ. 

1. ಪಶ್ಚಿಮೋತ್ತಾನಾಸನ (ಪಶ್ಚಿಮ ಉತ್ತಾನ ಆಸನ)

ಈ ಆಸನ ನಿಮ್ ಬೆನ್ನುಮೂಳೆ ಮೇಲೆ ಬೀಳೋ ಒತ್ತಡಾನ ಕಮ್ಮಿ ಮಾಡತ್ತೆ. ಹೊಟ್ಟೆ ತೊಡೆಗೆ ತಾಗೋದ್ರಿಂದ ನಮ್ಮಲ್ಲಿರೋ ಪ್ಯಾರಾ ಸಿಂಪಥೆಟಿಕ್ ನರ್ವಸ್ ಸಿಸ್ಟಮ್ ಚುರುಕಾಗತ್ತೆ. ಅಷ್ಟೆ ಅಲ್ಲದೇ ಅಡ್ರಿನಲ್ ಗ್ರಂಥಿಗೂ ಸಹ ಸರ್ಯಾಗ್ ಕೆಲ್ಸ ಕೊಡತ್ತೆ. ಕರುಳಿನ ಮೇಲೆ ಚೆನ್ನಾಗೇ ಒತ್ತಡ ಬೀಳೋದ್ರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡತ್ತೆ. ಜನನಾಂಗಗಳಿಗೂ ಒಳ್ಳೇದು ಹಾಗೇ ವೀರ್ಯ ಉತ್ಪಾದನೆಗೂ ಕೂಡಾ ಸಹಾಯ ಆಗತ್ತೆ. 

ಮಾಡೋ ರೀತಿ

* ಮುಂದಕ್ಕೆ ಕಾಲು ಚಾಚಿ ಕೂತ್ಕೊಳಿ.

*ಆಮೇಲೆ ಉಸಿರನ್ನ ಧೀರ್ಘವಾಗಿ ಒಳಗೆ ತಗೊಳ್ತಾ  ಎರಡೂ ಕೈಗಳನ್ನ ಮುಂದಿನಿಂದ ತಲೆಯ ಮೇಲಕ್ಕೆ ಎತ್ತಿ.

*ಈಗ ಉಸಿರನ್ನ ಬಿಡ್ತಾ ಮುಂದಕ್ಕೆ ಎಷ್ಟು ಸಾಧ್ಯಾನೋ ಅಷ್ಟು ಬಗ್ಗಿ ತಲೆ ಕೆಳಗೆ ಮಾಡಿ ( ಸಾಧ್ಯ ಅನ್ಸಿದ್ರೆ ಕಾಲ್ಬೆರಳನ್ನೋ  ಅಥ್ವಾ ಪಾದಾನೋ ಹಿಡ್ಕೊಳಿ) 

*30 ಸೆಕೆಂಡು ಹಾಗೇ ಉಸಿರಾಡ್ತ ಇರಿ. ಈ ಸ್ಥಿತೀಲಿ  ಹಾಯಾಗಿರ್ಬೇಕು ಅಂದ್ರೆ ಕಾಲ್ಗಳ ಮಧ್ಯೆ ಸಣ್ಣದಾದ ತಲೆದಿಂಬ್ ಇಟ್ಕೊಳಿ..

*30 ಸೆಕೆಂಡು ಆದ್ಮೇಲೆ ಉಸಿರ್ ತಗೊಳ್ತಾ ಎರಡೂ ಕೈಯನ್ನ ಮೇಲಕ್ಕೆ ಎತ್ತಿ ಹಾಗೇ ಉಸಿರು ಬಿಡ್ತಾ ಕೈ ಕೆಳಗೆ ಇಳಿಸಿ.

 

ಮೂಲ

2. ಬದ್ದ ಕೋನಾಸನ 

ಈ ಆಸನ ಮಾಡೋದ್ರಿಂದ ಬೆನ್ನು , ಸೊಂಟ , ಜನನಾಂಗ , ಹೊಟ್ಟೆಯ ಭಾಗಗಳ ಸ್ನಾಯುಗಳೆಲ್ಲ ಚುರುಕಾಗಿ ರಕ್ತ ಸಂಚಲನವಾಗೋಕೆ ಸಹಾಯ ಮಾಡತ್ತೆ. ಪ್ರೋಸ್ಟೇಟ್ ಗ್ರಂಥಿಗೂ ಹಾಗೂ ಕಿಡ್ನಿಗೂ ಒಳ್ಳೆ ರಕ್ತಾನ ಸರಬರಾಜು ಮಾಡೋದ್ರಿಂದ ಅದ್ರ ಆರೋಗ್ಯವನ್ನ ಕೂಡಾ ಕಾಪಾಡತ್ತೆ. ಬೆನ್ನು ನೋವೇನಾದ್ರೂ ಇದ್ರೆ ಈ ಆಸನ ತುಂಬಾನೇ ಒಳ್ಳೇದು.

ಮಾಡೋ ರೀತಿ

*  ಮುಂದಕ್ಕೆ ಕಾಲು ಚಾಚಿ ಕೂತ್ಕೊಳಿ. 

*  ಮಂಡಿಯನ್ನ ಅಗಲಿಸಿ , ಪಾದದ ಹಿಂಭಾಗ ಜನನಾಂಗಗಳ ಸಮೀಪಕ್ಕೆ ಬರೋ ಹಾಗೆ ಕೂತ್ಕಳಿ

* ಎರಡು ಪಾದಗಳನ್ನ ಪುಸ್ತಕ ತೆರೆಯೋ ತರ ಕೈಯಿಂದ ಹಿಡ್ಕೊಳಿ.

* ಉಸಿರನ್ನ ತಗೊಳ್ತಾ ಗದ್ದವನ್ನ ಮೇಲಕ್ಕೆತ್ತಿ ಉಸಿರನ್ನ ಬಿಡ್ತಾ  ಗದ್ದಾನ ಎದೆಯ ಮೇಲ್ಭಾಗಕ್ಕೆ ತಾಗಿಸಿ.

* 30 ಸೆಕೆಂಡು ಹಾಗೇ ಉಸಿರಾಡ್ತ ಇರಿ. ಇನ್ನೂ ಜಾಸ್ತಿ ಈ ಸ್ಥಿತಿಯಲ್ಲಿ ಹಾಯಾಗಿರ್ಬೇಕು ಅಂದ್ರೆ ಪ್ರಷ್ಟದ ಕೆಳ್ಗೆ ಸಣ್ಣದಾದ ತಲೆದಿಂಬನ್ನ ಇಟ್ಕೊಳ್ಳಿ.

 * 30 ಸೆಕೆಂಡು ಆದ ಮೇಲೆ ಉಸಿರು ತಗೊಳ್ತಾ ಗದ್ದಾನ ಎತ್ತಿ ಉಸಿರು ಬಿಡ್ತಾ ಮೊದಲಿನ ತರ ಕೂತ್ಕೊಳಿ.

 

ಮೂಲ

3. ಸುಪ್ತ ಬದ್ದಕೋನಾಸನ

ಮಾಡೋ ರೀತಿ

ಈ ಮೊದಲು ಮಾಡಿದ ಬದ್ದಕೋನಾಸನದ ಇನ್ನೊಂದು ಬದಲಾವಣೆ ಇದು.

* ಮೊದಲಿನ ಆಸನ ಮುಗಿದ ತಕ್ಷಣ ಮೊಣಕೈಯ ಸಹಾಯದಿಂದ ನಿಧಾನವಾಗಿ ಬೆನ್ಮೇಲೇ ಮಲಕ್ಕೊಳ್ಳಿ 

* ಎರಡೂ ಕೈಗಳನ್ನ ಅಕ್ಕ ಪಕ್ಕದಲ್ಲೋ ಇಲ್ಲ ಕೆಳ್ಗಿನ ಹೊಟ್ಟೆಯಲ್ಲೋ ಅಥ್ವಾ ತಲೆಯ ಮೇಲ್ಗಡೆಯಿಂದಾನೋ ಹಿಡ್ಕೊಳ್ಳಿ

* 30 ಸೆಕೆಂಡು ಹಾಗೇ ಉಸಿರಾಡ್ತ ಇರಿ. ನಂತರ ರಿಲೀಸ್ ಮಾಡಿ.

ಮೂಲ

4. ಆನಂದ ಬಾಲಾಸನ 

ಮಾಡೋ ರೀತಿ

* ಈ ಆಸನದಲ್ಲಿ ಎರಡು ಕಾಲ್ಗಳನ್ನ ಮೇಲಕ್ಕೆತ್ತಿಟ್ಕೊಳ್ಳಿ. 

* ಎರಡು ಹಸ್ತಗಳಿಂದ ಪಾದ ಇಲ್ಲ ಪಾದದ ಕೀಲನ್ನ ಇಟ್ಕೊಳ್ಳಿ. 

* ಎರಡು ಮಂಡಿಗಳ ಮಧ್ಯದಲ್ಲಿ ಸ್ವಲ್ಪಾ ಜಾಸ್ತಿನೇ ಜಾಗ ಇದ್ದೂ ಹಾಯಾಗಿರ್ಲಿ.

* ಉಸಿರು ತಗೊಳ್ತಾ ಬೆನ್ಮೂಳೆಯನ್ನ ಮೇಲಕ್ಕೆ ಜಗ್ಗಿ ಉಸಿರು ಬಿಡ್ತಾ ಕಾಲಿನ ಮಂಡಿಯನ್ನ ನೆಲಕ್ಕೆ ತಾಗ್ಸಕ್ಕೆ ಪ್ರಯತ್ನ ಪಡಿ. ತಾಗ್ಸಲೇಬೇಕು ಅಂತೇನಿಲ್ಲ. ನಿಮ್ಗೆ ಎಷ್ಟಾಗತ್ತೋ ಅಷ್ಟು ಪ್ರಯತ್ನ ಪಡಿ.

* ನೇರವಾಗಿ ನೋಡಿದ್ರೂ ಪರ್ವಾಗಿಲ್ಲ, ಇಲ್ಲ ಬಲ ಅಥ್ವಾ ಎಡಕ್ಕೆ ನೋಡಿದ್ರೂ ಪರ್ವಾಗಿಲ್ಲ.

* 30 ಸೆಕೆಂಡು ಹಾಗೇ ಉಸಿರಾಡ್ತ ಇರಿ.

*  30 ಸೆಕೆಂಡು ಆದ್ಮೇಲೆ ಉಸಿರನ್ನ ಬಿಡ್ತಾ ಕಾಲುಗಳನ್ನ ಮುಂದಕ್ಕೆ ಚಾಚ್ಕೊಂಡು ಅಲ್ಲೇ ಮಲ್ಕೊಳ್ಳಿ  ಅದ್ರಲ್ಲೇ ಇನ್ನೊಂದು ಆಸನ ಮಾಡ್ಬಹುದು.

ಮೂಲ

5. ಸುಪ್ತ ಪಾದಾಂಗುಷ್ಟಾಸನ

ಈ ಆಸನದಿಂದ ಬೆನ್ನೇನಾದ್ರೂ ಸ್ಟಿಫ್ ಆಗಿದ್ರೆ, ನೋವು ಬಂದಿದ್ರೆ ಪರಿಹರಿಸ್ಕೋಬೋದು. 

ಮಾಡೋ ರೀತಿ

*ಈ ಮೊದಲು ಮಾಡಿದ ಅಸನ ಮುಗಿದ ನಂತರ ಉಸಿರನ್ನ ತಗೊಳ್ತಾ ಬಲಗಾಲನ್ನ ಮಡಚಿ ಕಾಲ್ಬೆರಳನ್ನ ಹಿಡ್ಕೊಳ್ಳಿ. ಇನ್ನೊಂದು ಕಾಲು ಹಾಗೇ ಮುಂದಕ್ಕೆ ಚಾಚಿರ್ಲಿ 

*ಮಡಚಿದ ಬಲಗಾಲನ್ನ ನಿಧಾನಕ್ಕೆ ನೇರ ಮಾಡಿ , ಈಗ ಉಸಿರು ಬಿಡ್ತಾ  ನಿಮ್ಮ ಮುಖದ ಹತ್ತಿರಕ್ಕೆ ತನ್ನಿ.

*ಈಗ ಉಸಿರನ್ನ ತಗೊಳ್ತಾ ಬಲಗಾಲನ್ನ ನೇರವಾಗಿ ಎತ್ತಿ . ಎತ್ತಿದ ನಂತರ ಉಸಿರು ಬಿಡ್ತಾ ಮಂಡಿಯನ್ನ ಮಡ್ಚಿ ಮಂಡಿ ಮತ್ತೆ ಪಾದದ ಕೀಲುಗಳ ನಡುವಿನ ಭಾಗವನ್ನ ( ಶಿನ್ ) ಹಿಡ್ಕೊಳ್ಳಿ. 

* 30 ಸೆಕೆಂಡು ಹಾಗೇ ಉಸಿರಾಡ್ತ ಇರಿ. ಕಟ್ಟಿಕೊಳ್ಳೋ ಸುದ್ದಿಗೇ ಹೋಗ್ಬೇಡಿ.

*  30 ಸೆಕೆಂಡು ಆದ್ಮೇಲೆ ಉಸಿರನ್ನ ಬಿಡ್ತಾ ಕಾಲಗಳನ್ನ ಮುಂದಕ್ಕೆ ಚಾಚಿ ಇನ್ನೊಂದು ಕಾಲಲ್ಲಿ ಮಾಡಿ . ಎರಡು ಕಡೇ ಆದ್ಮೇಲೆ ಅದ್ರಲ್ಲೇ ಇನ್ನೊಂದು ಆಸನ ಮಾಡ್ಬಹುದು. 

ಮೂಲ

6. ಪವನ ಮುಕ್ತಾಸನ 

ಈ ಮೇಲೆ ಮಾಡಿದ ಎಲ್ಲಾ ಆಸನದ ಅಷ್ಟೂ ಉಪಯೋಗ ಒಂದ್ರಲ್ಲೇ ಸಿಗ್ಬೇಕಂದ್ರೆ ಈ ಆಸನ ಮಾಡ್ಬೇಕು. ಇದು ಅತಿಸಾರಕ್ಕೆ ಒಳ್ಳೆ ಉಪಾಯ.

ಮಾಡೋ ರೀತಿ

* ಮಲ್ಗಿದ ಸ್ಥಳದಿಂದ ಉಸಿರು ತಗೊಳ್ತಾ ಕಾಲನ್ನ ಮೇಲಕ್ಕೆ ಎತ್ತಿ. 

* ಉಸಿರು ಬಿಡ್ತಾ ಮಂಡೀನ ಎದೆ ಹತ್ತಿರಕ್ಕೆ ತಗೊಂಡು ಬಂದು ಮಡ್ಚಿ . ಸಾಧ್ಯವಾದ್ರೆ ಮಂಡಿ ಮಡಚುವ ಸಮಯದಲ್ಲೇ ತಲೆ ಎತ್ತಿ ಗದ್ದವನ್ನ ಮಂಡಿಗೆ ತಾಗ್ಸೋ ಪ್ರಯತ್ನ ಮಾಡಿ.

* ಇಲ್ಲಿ ನೀವು 30 ಸೆಕೆಂಡುಗಳ ಕಾಲ ನಿಲ್ಬೇಕಂತಿಲ್ಲ… ಬಲ್ಗಾಲು ಎಡಗಾಲು ಅಂತ ಸ್ಪೀಡಾಗಿ ಮಾಡ್ಬಹುದು. 

* ಒಂದತ್ತು ಸಲ ಆದ್ಮೇಲೆ ಉಸಿರು ಬಿಡ್ತಾ ಕಾಲನ್ನ ಮುಂದಕ್ಕೆ ಚಾಚ್ಕಂಡು ಮಲ್ಗಿ .

ಮೂಲ

7. ಜಠರ ಪರಿವರ್ತನಾಸನ

ಮಾಡೋ ರೀತಿ

 * ಬೆನ್ನ ಮೇಲೆ ಮಲ್ಗಿದ ಸ್ಥಿತಿಯಿಂದ ಎರಡು ಕೈಗಳನ್ನ ಭುಜದ ನೇರವಾಗಿ ಹಸ್ತ ಮೇಲೆ ಬರೋ ಹಾಗೆ ಇಟ್ಕೊಳ್ಳಿ. 

* ಉಸಿರು ತಗೊಳ್ತಾ ಬಲಗಾಲನ್ನ ಎತ್ತಿ ಮಂಡಿ ಮಡಚಿ.

 * ಉಸಿರು ಬಿಡ್ತಾ ಮಂಡೀನ ಎಡ್ಗಡೆಗೇ ತಿರುಗಿಸಿ  ನೆಲಕ್ಕೆ ತಾಗತ್ತಾ ಅಂತ ನೋಡಿ, ಆದ್ರೆ ಯಾವ್ದೇ ಕಾರಣಕ್ಕೂ ಭುಜ ಎತ್ಬೇಡಿ.

* ನಿಮ್ ವಿರುದ್ದ ದಿಕ್ಕಿನಲ್ಲಿ ಮುಖ ಇಟ್ಕೊಳ್ಳಿ.

* 30 ಸೆಕೆಂಡುಗಳ ಕಾಲ ಇದೇ ಭಂಗಿಯಲ್ಲಿರಿ. 

* 30 ಸೆಕೆಂಡುಗಳ ನಂತರ ಉಸಿರು ತಗೊಳ್ತಾ ಬಲಗಾಲನ್ನ ಮೇಲಕ್ಕೆ ಎತ್ತಿ.

* ಉಸಿರು ಬಿಡ್ತಾ ಬಲಗಾಲನ್ನ ಮುಂದಕ್ಕೆ ಚಾಚಿ. 

 * ಈಗ ಎಡಗಾಲಲ್ಲಿ ಅದ್ನೇ ಮಾಡಿ.

ಮೂಲ

8. ಬಾಲಾಸನ 

ಮಾಡೋ ರೀತಿ

* ಮಂಡಿಯ ಮೇಲೇ ಕೂತ್ಕಳಿ. 

* ಉಸಿರು ತಗೊಳ್ತಾ ನಿಧಾನವಾಗಿ ಎರಡೂ ಕೈಗಳನ್ನ ಮುಂದಿನಿಂದ ಮೇಲಕ್ಕೆತ್ತಿ.

* ಉಸಿರು ಬಿಡ್ತಾ ನಿಧಾನಕ್ಕೆ ಮುಂದಕ್ಕೆ ಬಗ್ಗಿ ತಲೆ ನೆಲಕ್ಕೆ ತಾಗಿಸಿ, ಎರಡೂ ಕೈಗಳನ್ನ ಅಕ್ಕ ಪಕ್ಕದಲ್ಲಿ ಅಥ್ವಾ ಎದ್ರುಗಡೆ ಇಡಿ.

* 30 ಸೆಕೆಂಡುಗಳ ಕಾಲ ಇದೇ ಭಂಗಿಯಲ್ಲಿರಿ. 

* 30 ಸೆಕೆಂಡುಗಳ ನಂತರ ಉಸಿರು ತಗೊಳ್ತಾ ಎರಡು ಕೈಗಳನ್ನ ಮೇಲಕ್ಕೆ ಎತ್ತಿ.

* ಉಸಿರು ಬಿಡ್ತಾ ಕೈಗಳನ್ನ ಮೊದ್ಲಿನ ಸ್ಥಿತಿಯಲ್ಲೇ ಇಟ್ಕೊಳ್ಳಿ.

ಮೂಲ

9. ವಿಪರೀತ ಕರಣಿ ಮುದ್ರಾ 

ಮಾಡೋ ರೀತಿ

* ಇದನ್ನ ಮಾಡಕ್ಕೆ ನಿಮ್ಗೆ ಗೋಡೆಯ ಸಹಾಯ ಬೇಕಾಗತ್ತೆ.

* ನಿಮ್ ಪೃಷ್ಟ ಭಾಗವನ್ನ ಗೋಡೆಯ ಕೆಳಭಾಗಕ್ಕೆ ತಾಗಿಸಿ.

* ಎರಡೂ ಕಾಲನ್ನ ಉಸಿರು ತಗೊಳ್ತಾ ಗೋಡೆ ಮೇಲಕ್ಕೆ ಇಡಿ.

* ಉಸಿರು ಬಿಟ್ಟು ಇಲ್ಲಿ ನೀವು ಎಷ್ಟು ಹೊತ್ತು ಬೇಕಾದ್ರೂ ಇರ್ಬಹುದು ಇದು ನಿಮ್ಗೆ ತುಂಬಾನೇ ಆರಾಮ ಅನ್ಸತ್ತೆ.

* ಕಾಲ್ಗಳ ಮಧ್ಯೆ ಅಂತರವಿರಲಿ.

* ತೊಡೆ ನೋವು ಜಾಸ್ತಿ ಇದ್ರೆ ಅಂತರ ಜಾಸ್ತಿ ಇರಲಿ.

ಮೂಲ

10. ಶವಾಸನ 

ಮಾಡೋ ರೀತಿ

* ಇದ್ನ ಯಾರ್ ಬೇಕಾದ್ರೂ ಮಾಡ್ಬಹುದು.

* ಬೆನ್ಮೇಲೆ ಮಲಗಿ ಕಾಲ್ಗಳ ನಡುವೆ ಅಂತರ 60 ಸೆಂಟಿಮೀಟರ್ ಇರ್ಲಿ.

* ಕೈ ಮತ್ತು ಸೊಂಟದ ಮಧ್ಯೆ ಅಂತರ 30 ಸೆಂಟಿಮೀಟರ್ ಇರ್ಲಿ.

* ಯಾವ್ದೇ ರೀತಿಯ ಸ್ನಾಯು ಸೆಳೆತ ಇರ್ಲಿ ವಿಶ್ರಾಂತರಾಗಿ. 

* ನಿಮ್ಗೆ ಹೇಗೇ ಆರಾಂ ಅನ್ಸತ್ತೋ ಹಾಗೇ ಮಲ್ಗಿ. 

ಮೂಲ

ಮಲ್ಕೊಂಡು ನಿದ್ರೆ ಬರ್ದೇ ಒದ್ದಾಡೋದ್ ಬೇಡ, ಬೆಡ್ಡಲ್ಲೇ ಆಗೋವಂತ ಯೋಗಾಸನ ಮಾಡಿ ಆರಾಮಾಗಿ ಮಲ್ಗಿ.