http://www.nanjangudsrsmutt.org/wp-content/uploads/2016/07/Nawab-tests-Rayaru-and-lose.jpg

ರಾಘವೇಂದ್ರ ಗುರುಗಳು ಮಂತ್ರಾಲಯದಲ್ಲಿ ಬೃಂದಾವನಸ್ಥರಾಗಿದ್ದು ಎಲ್ರಿಗೂ ಗೊತ್ತು. ಆದ್ರೆ ಅಲ್ಲೇ ಯಾಕೆ ಅಂತ ಕಾರಣ ಗೊತ್ತಾ? ಓದಿ ತಿಳ್ಕೊಳಿ.

1. ರಾಘವೇಂದ್ರ ಸ್ವಾಮಿಗಳಿಗೆ “ಮಂಚಾಲೆ” ಸಿಕ್ಕಿದ್ದು…

ಒಬ್ಬ ನವಾಬ ದಿವಾನ್ ವೆಂಕಣ್ಣನ್ ಮೂಲಕ ರಾಯರ ಬಗ್ಗೆ ಕೇಳಿದ್ದ. ಆದ್ರೆ ನಂಬಿಕೆ ಬರ್ದೇ ಒಂದು ಪರೀಕ್ಷೆ ಮಾಡ್ತಾನೆ. ಅದರಿಂದ ನವಾಬಂಗೆ ರಾಯರ ದೈವಿಕ ಗುಣ ಗೊತ್ತಾಗತ್ತೆ. ರಾಯರನ್ನ ಪರೀಕ್ಷೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅಂತ ಅವ್ರಿಗೆ ಬೇಕಾದಷ್ಟು ಊರುಗಳ್ನ ತೆಗೊಳ್ಳೋಕೆ ಹೇಳ್ತಾನೆ. ರಾಯರು ಮೊದಲು ಬೇಡ ಅಂದ್ರೂ ಅವನ ಒತ್ತಾಯಕ್ಕೆ ಕೊನೆಗೆ ತುಂಗಭದ್ರಾ ನದಿ ದಡದಲ್ಲಿದ್ದ “ಮಂಚಾಲೆ” ಯನ್ನ ಕೇಳ್ತಾರೆ. ಅದೊಂದು ಬರಡು ಭೂಮಿ ಆಗಿರುತ್ತೆ. ಬೇರೆ ಸ್ಥಳ ತೆಗೊಳ್ಳೋಕೆ ಕೇಳ್ಕೊಂಡ್ರೂ ರಾಯರು ಒಪ್ಪಲ್ಲ. ಒಂದೊಳ್ಳೆ ದಿನ ನೋಡಿ ರಾಯರು ಮಂಚಾಲೆ ಪ್ರವೇಶಿಸಿ ಮಂಚಾಲಮ್ಮನಿಗೆ ಪೂಜೆ ಮಾಡಿ ಅಲ್ಲೇ ಬೃಂದಾವನಸ್ಥರಾಗಕ್ಕೆ ಅನುಮತಿ ಕೇಳ್ತಾರೆ.

ಮೂಲ

2. ಮಂಚಾಲೆಯ ಇತಿಹಾಸವನ್ನ ಶಿಷ್ಯರಿಗೆ ಹೇಳಿದ್ದು…

ರಾಯರು ಅವರ ಹತ್ತಿರದ ಶಿಷ್ಯರ್ನ ಮತ್ತೆ ದಿವಾನ್ ವೆಂಕಣ್ಣನ್ನ ಕರ್ದು ಮಂಚಾಲೇಲಿ ಬೃಂದಾವನ ಪ್ರವೇಶಿಸೋ ಉದ್ದೇಶ ಇರೋದಾಗಿ ಹೇಳ್ತಾರೆ. ಅವರ ಭಕ್ತರಿಗೆ ಇದನ್ನ ಕೇಳಿ ತುಂಬಾ ಬೇಜಾರಾದ್ರೂ, ಇದು ದೈವೇಚ್ಛೆ ಆಗಿದ್ರಿಂದ ಅದನ್ನ ಬದ್ಲಾಯಿಸ್ಲಿಕ್ಕೆ ಆಗಲ್ಲ ಅಂತ ಸುಮ್ನಾಗ್ತಾರೆ.

ಅವ್ರಿಗೆಲ್ಲಾ ಈ ಮಂಚಾಲೆ ಮಹತ್ವ ಏನು ಅನ್ನೋ ಪ್ರಶ್ನೆ ಬಂದಾಗ, ರಾಯರು ಮಂಚಾಲೇಗಿರೋ ಧಾರ್ಮಿಕ ಮಹತ್ವ ಹೇಳ್ತಾರೆ:

ಅಲ್ಲಿ ವಿಷ್ಣು ಭಕ್ತ ಪ್ರಹ್ಲಾದ ಒಂದು ದೊಡ್ಡ ಯಜ್ಞ ಮಾಡಿದ್ರಿಂದ ಆ ಸ್ಥಳ ಯಾವಾಗ್ಲೂ ಪವಿತ್ರ ಅಂತೆ. ಮಂತ್ರಾಲಾಯಾಂಬಿಕ ಅಥ್ವಾ ಮಂಚಾಲಮ್ಮ ಪ್ರಹ್ಲಾದನ ಕುಲದೇವತೆ. ದ್ವಾಪರಯುಗದಲ್ಲಿ ಅಶ್ವಮೇಧ ಯಾಗ ನಡೆದ ಸಂದರ್ಭದಲ್ಲಿ ಅರ್ಜುನ ಅಶ್ವಮೇಧದ ಕುದುರೆಯನ್ನ ಕಾವಲು ಕಾಯೋವಾಗ ಅನುಸಾಲ್ವ ಅನ್ನೋ ರಾಜನ ಜೊತೆ ಮಂಚಾಲೆಯಲ್ಲಿ ಯುದ್ಧ ಮಾಡ್ಬೇಕಾಗಿ ಬರತ್ತೆ. ಅನುಸಾಲ್ವನ ರಥ ಪ್ರಹ್ಲಾದ ಯಾಗ ಮಾಡಿದ ಯಜ್ಞಕುಂಡದ ಮೇಲೆ ಇರುತ್ತೆ, ಅವ್ನಿಗೇ ಗೊತ್ತಿಲ್ದೆ. ಇದ್ರಿಂದಾಗಿ ಅನುಸಾಲ್ವನನ್ನ ಯಾರೂ ಸೋಲ್ಸಕ್ಕೇ ಆಗ್ತಿರಲ್ಲ. ಅರ್ಜುನ ಏನು ಮಾಡೋಕೂ ಗೊತ್ತಾಗ್ದೆ ಕೃಷ್ಣನ ಸಹಾಯ ಕೇಳ್ತಾನೆ. ಕೃಷ್ಣ ಅರ್ಜುನಂಗೆ ಅವ್ನ ರಥಾನ ಸ್ವಲ್ಪ ಹಿಂದೆ ತೆಗಿಯೋಕೆ ಹೇಳ್ತಾನೆ. ಅರ್ಜುನ ಸೋತು ಹಿಂದೆ ಹೋಗ್ತಿದ್ದಾನೆ ಅಂದ್ಕೊಂಡು ಅನುಸಾಲ್ವ ಅವ್ನನ್ನ ಅಟ್ಟಿಸ್ಕೊಂಡು ಹೋಗ್ತಾನೆ. ಹೀಗೆ ಅಟ್ಟಿಸ್ಕೊಂಡು ಹೋದಾಗ, ಅವ್ನ ರಥ ಆ ಪವಿತ್ರ ಸ್ಥಳದಿಂದ ದೂರ ಸರ್ದಿದ್ರಿಂದ ಅವ್ನಿಗೆ ಇದ್ದ ಶಕ್ತಿ ಕಳ್ದು ಹೋಗಿ ಅವ್ನು ಯುದ್ಧದಲ್ಲಿ ಕೂಡ್ಲೇ ಸೋತು ಹೋಗ್ತಾನೆ. ಇದು ಆ ಸ್ಥಳದ ಶಕ್ತಿ!

3. ದಿವಾನ್ ವೆಂಕಣ್ಣ ಮಂಚಾಲಮ್ಮನ ಗುಡಿ ಪಕ್ಕ ರಾಯರಿಗೆ ಬೃಂದಾವನ ಕಟ್ಟಿದ್ರೂ ಬೇಡ ಅಂದಿದ್ದು…

ದಿವಾನ್ ವೆಂಕಣ್ಣ ಮಂಚಾಲಮ್ಮನ್ ದೇವಸ್ಥಾನದ ಪಕ್ಕದಲ್ಲೇ ಒಂದು ಸುಂದರವಾದ ಗರ್ಭಗುಡಿ ಕಟ್ಟಿಸ್ತಾನೆ. ರಾಯರಿಗೆ ಬೃಂದಾವನಾನೂ ಕಟ್ಟಿ ಕೊಡ್ತಾನೆ. ಆದ್ರೆ ರಾಯರಿಗೆ ಅದನ್ನ ಉಪ್ಯೋಗ್ಸೋಕೆ ಇಷ್ಟ ಇಲ್ದೇ ಅದನ್ನ ಮುಂದೆ ಯಾರಿಗಾದ್ರೂ ಉಪ್ಯೋಗ್ಸಕ್ಕೆ ಹೇಳ್ತಾರೆ. ವೆಂಕಣ್ಣ ಕಟ್ಟಿಸಿ ರಾಯರು ಬೇಡಾಂತ ಹೇಳಿದ್ ಬೃಂದಾವನಾನ ಮುಂದೆ ವಾದೀಂದ್ರ ತೀರ್ಥರು ಉಪ್ಯೋಗಿಸ್ತಾರೆ.

ಮೂಲ

4. ಕೃತಯುಗದಲ್ಲಿ ಸೀತೇನಾ ಹುಡುಕ್ತಾ ರಾಮ ಮಂಚಾಲೆಗೆ ಬಂದಿದ್ದು…

ರಾಯರು ವೆಂಕಣ್ಣನ್ನ ಒಂದು ದೂರದ ಜಾಗಕ್ಕೆ ಕರ್ಕೊಂಡು ಹೋಗಿ ಒಂದು ಕಪ್ಪು ಕಲ್ಲನ್ನ ತೋರಿಸ್ತಾರೆ. ಆ ಕಲ್ಲಲ್ಲಿ ಬೃಂದಾವನ ಕಟ್ಸು ಅಂತ ಹೇಳ್ತಾರೆ. ರಾಯರು ಆ ಕಲ್ಲಿನ ಮಹತ್ವಾನೂ ಹೇಳ್ತಾರೆ – ಸೀತೇನ ಹುಡುಕ್ತಾ ರಾಮ ಇಲ್ಲಿ ಬಂದಿದ್ದಾಗ, ಈ ಕಲ್ಲಿನ ಮೇಲೆ  ಸ್ವಲ್ಪ ಹೊತ್ತು ವಿಶ್ರಾಂತಿ ತಗೊಂಡಿದ್ನಂತೆ. ” ಅವನ ಸ್ಪರ್ಶದಿಂದ ಪವಿತ್ರವಾದ ಈ ಕಲ್ಲಿಂದ್ಲೇ ನನ್ನ ಬೃಂದಾವನ ಕಟ್ಬೇಕು” ಅಂತಾರೆ. ಒಳ್ಳೆ ಮುಹೂರ್ತದಲ್ಲಿ ರಾಯರು ತಮ್ಮ ಯೋಗ್ಯ ಶಿಷ್ಯರೊಬ್ರಿಗೆ ಸನ್ಯಾಸ ದೀಕ್ಷೆ ಕೊಟ್ಟು ಯೋಗೀಂದ್ರ ತೀರ್ಥ ಅನ್ನೋ ಆಶ್ರಮನಾಮ ಕೊಡ್ತಾರೆ. ತಮಗೆ ಕೊಡ್ತಿದ್ದ ಗೌರವಾನೇ ಯೋಗೀಂದ್ರ ತೀರ್ಥರಿಗೂ ಕೊಡ್ಬೇಕು ಅಂತ ಎಲ್ರಿಗೂ ಕೇಳ್ಕೋತಾರೆ.

5. ಆಗ ರಾಮ ಕೂತಿದ್ದ ಕಪ್ಪು ಕಲ್ಲಿಂದಾನೇ ಬೃಂದಾವನ ಮಾಡಿಸಿಕೊಂಡು ಜೀವಂತವಾಗಿ ಪ್ರವೇಶಿಸಿದ್ದು…

ಕ್ರಿ.ಪೂ. 1671, ವಿರೋಧೀಕೃತ ಸಂವತ್ಸರದ ಶ್ರಾವಣ ಕೃಷ್ಣ ಪಕ್ಷದ ಎರಡ್ನೇ ದಿನ ಸಾವ್ರಾರು ಜನರ ಸಮ್ಮುಖದಲ್ಲಿ ರಾಯರು ಜೀವಂತವಾಗಿ ಬೃಂದಾವನ ಪ್ರವೇಶ ಮಾಡ್ತಾರೆ. ಇವರಿಗೆ ಮೊದ್ಲು ವಾದಿರಾಜ ತೀರ್ಥ ಒಬ್ರೇ ಹೀಗೆ ಮಾಡಿರೋದು.

ಯಾವತ್ತಿನ್ ತರ, ರಾಯ್ರು ಮುಂಜಾನೆ ಬೇಗ ಎದ್ದು ಹರಿನಾಮ ಮಾಡ್ತಾ ಸ್ನಾನ ಮುಗಿಸ್ತಾರೆ. ಜಪ ಮತ್ತು ಧ್ಯಾನ ಆದ್ಮೇಲೆ ಶ್ರೀಮದ್ ಆಚಾರ್ಯರ ಬಗ್ಗೆ ಕೊನೆ ಸಲ ಪ್ರವಚನ ಕೊಡ್ತಾರೆ. ಅವ್ರ ಶಿಷ್ಯರಿಗೆ ಇದು ರಾಯರ ಕೊನೆ ಪ್ರವಚನ ಅನ್ನೋ ಯೋಚ್ನೆಯಿಂದ್ಲೇ ಬೇಜಾರಾಗಿರತ್ತೆ. ಅವತ್ತು ರಾಯರು ಆಚಾರ್ಯ ಮಧ್ವರ ಬ್ರಹ್ಮಸೂತ್ರ ಭಾಷ್ಯ ಮತ್ತು ಅದರ ಬಗ್ಗೆ ಜಯತೀರ್ಥರ ವಿಶ್ಲೇಷಣೆ ಬಗ್ಗೆ ಮಾತಾಡ್ತಿದ್ರೆ ಕೇಳ್ತಿದ್ದ ಜನ್ರಿಗೆ ಇನ್ನು ಮುಂದೆ ಈ ಜ್ಞಾನಿಯನ್ನ ನೋಡೋಕೆ ಆಗೊಲ್ವಲ್ಲಾ ಅನ್ನೋ ಯೋಚ್ನೆಯಿಂದ ದುಃಖ ಆಗ್ತಿರತ್ತೆ.

ಪ್ರವಚನ ಮುಗಿದ್ಮೇಲೆ ಮತ್ತೆ ಸ್ನಾನ ಮಾಡಿ ಶ್ರೀ ಮೂಲ ರಾಮ ಮತ್ತು ಸಂಸ್ಥಾನದ ಬೇರೆ ದೇವತೆಗಳಿಗೆ ಪೂಜೆ ಮಾಡ್ತಾರೆ. ಪೂಜೆ ಎಲ್ಲಾ ಮುಗಿದ್ಮೇಲೆ ಭಕ್ತರಿಗೆ ತೀರ್ಥ, ಪ್ರಸಾದ, ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸ್ತಾರೆ.  ಮತ್ತೆ ಬೃಂದಾವನಸ್ಥರಾಗ್ಲಿಕ್ಕೆ ಆರಿಸಿದ ಸ್ಥಳದಲ್ಲಿ ಪದ್ಮಾಸನ ಹಾಕಿ ಕೂರ್ತಾರೆ. ಕೈಯಲ್ಲಿ ಜಪಮಾಲೆ, ಕಣ್ಮುಂದೆ ಮೂಲಗ್ರಂಥಗಳು, ಸರ್ವ ಮೂಲ, ಟೀಕೆ ಮತ್ತು ಟಿಪ್ಪಣಿಯ ಗ್ರಂಥಗಳನ್ನ ವ್ಯಾಸ ಪೀಠದ ಮೇಲಿಟ್ಟಿರ್ತಾರೆ. ಸ್ವಲ್ಪ ಹೊತ್ತು ಯಾವ್ದೋ ಯೋಚ್ನೇಲಿ ಕಳೆದು ಹೋಗಿದ್ದ ರಾಯರು ಕೊನೆ ಸಲ ದ್ವೈತ ಸಿದ್ಧಾಂತದ ಸಾರ ಬಿಚ್ಚಿಡ್ತಾರೆ. ಅವರ ಮಾತ್ ಕೇಳ್ತಿದ್ದ ಭಕ್ತರಿಗೆ ಅವರು ಎಂಥ ಜ್ಞಾನಿ ಅನ್ನೋದು ಮತ್ತೆ ಮನವರಿಕೆ ಆಗುತ್ತೆ. ಕಣ್ಣೀರು ಹಾಕಿದ್ರೆ ರಾಯರಿಗೆ ಇಷ್ಟ ಆಗೊಲ್ಲ ಅನ್ನೋ ಒಂದೇ ಕಾರಣಕ್ಕೆ ಎಲ್ರೂ ಅಳು ತಡ್ಕೋತಾರೆ.

ಇದಾದ್ಮೇಲೆ ರಾಯರು ಪ್ರಣವ ಮಂತ್ರ ಜಪಿಸೋಕೆ ಶುರು ಮಾಡ್ತಾರೆ. ಸ್ವಲ್ಪ ಹೊತ್ತಲ್ಲೇ ಧ್ಯಾನದಲ್ಲಿ ಕಳ್ದು ಹೋಗ್ತಾರೆ. ಧ್ಯಾನಸ್ಥ ಸ್ಥಿತಿಯ ತುತ್ತತುದಿಯನ್ನ ತಲುಪ್ದಾಗ, ಅಪರೂಪದ ಪ್ರಭೆಯಿಂದ ಕಂಗೊಳಿಸ್ತಾ ಇದ್ದ ರಾಯರ ಜಪಮಾಲೆ ಹಿಡಿದಿದ್ದ ಕೈ, ಒಮ್ಮೆಗೆ ಸ್ತಬ್ಧ ಆಗುತ್ತೆ.

ಮೂಲ

6. ಬೃಂದಾವನದ ಮೇಲೆ ಹನ್ನೆರಡು ಸಾವಿರ ವರಹಗಳ ಅಭಿಷೇಕ ಮಾಡಿದ್ದು…

ಇದು ಸೂಚನೆ ಅಂತ ಅರ್ಥ ಮಾಡ್ಕೊಂಡು ವೆಂಕಣ್ಣ ಮತ್ತು ಶಿಷ್ಯರು ರಾಯರ ಸುತ್ತ ಕಲ್ಲನ್ನ ಜೋಡ್ಸಕ್ಕೆ ಶುರು ಮಾಡ್ತಾರೆ. ತಲೆವರ್ಗೂ ಜೋಡಿಸಿ, ರಾಯರು ಮೊದ್ಲೇ ಹೇಳಿದ್ ಹಾಗೆ ಗಂಡಕಿ ನದಿಯಿಂದ ವಿಶೇಷವಾಗಿ ತರ್ಸಿದ್ದ ಇನ್ನೂರು ಸಾಲಿಗ್ರಾಮಗಳ್ನ ಹಾಕಿದ್ದ ಒಂದು ತಾಮ್ರದ ಪೆಟ್ಟಿಗೆ ಇಟ್ಟು ಅದರ ಮೇಲೆ ಮತ್ತೆ ಕಲ್ಲ್ ಜೋಡಿಸ್ತಾರೆ. ಬೃಂದಾವನದ ಮೇಲೆ ಹನ್ನೆರಡು ಸಾವಿರ ವರಹಗಳ ಅಭಿಷೇಕ ಮಾಡ್ತಾರೆ!

7. ಶಿಷ್ಯ ಅಪ್ಪಣ್ಣಾಚಾರ್ಯರಿಗೆ ತುಂಗಾಭದ್ರಾ ನದಿ ಇಬ್ಭಾಗವಾಗಿ ದಾರಿ ಮಾಡಿಕೊಟ್ಟಿದ್ದು…

ರಾಯರ ಶಿಷ್ಯ ಅಪ್ಪಣ್ಣಾಚಾರ್ಯ ಅಂತ ಒಬ್ರಿದ್ರು. ರಾಯರ ಬಗ್ಗೆ ಹೆಚ್ಚಿನ ಮಂತ್ರ, ಸ್ತೋತ್ರಗಳ್ನ ಬರ್ದೋರು ಇವ್ರೇ. ರಾಯರು ಬೃಂದಾವನ ಪ್ರವೇಶ ಮಾಡೋ ದಿನ ಇವ್ರು ತುಂಗಾಭದ್ರಾ ನದಿಯ ಆಚೆ ಕಡೆ ಇರ್ತಾರೆ. ನದಿ ರಭಸವಾಗಿ ಹರೀತಿದ್ರಿಂದ, ಅವ್ರು ಸಮಯಕ್ಕೆಮಂಚಾಲೆ ತಲುಪಕ್ಕಾಗಲ್ಲ. ಮಂಚಾಲೆ ಕಡೆ ಹೋಗ್ತಿದ್ದ ಅಪ್ಪಣ್ಣಾಚಾರ್ಯರ ತಲೇಲಿ ರಾಯರ ಯೋಚ್ನೇನೇ ತುಂಬಿರುತ್ತೆ. ಹೀಗೆ ಬರ್ತಿದ್ದಾಗ್ಲೇ ” ಶ್ರೀ ಪೂರ್ಣಬೋಧ ಗುರು ತೀರ್ಥ ಪಯೋಬ್ಧಿ ಪಾರಾ” ಅನ್ನೋ ಪ್ರಸಿದ್ಧ ರಾಘವೇಂದ್ರ ಸ್ತೋತ್ರಾನ ರಚಿಸಿದ್ದು. ಹೊಳೆಯ ರಭಸಾನೂ ಲೆಕ್ಕಿಸ್ದೆ ಧುಮುಕಿದ್ರೆ ರಾಯರ ಕೃಪೆಯಿಂದ ನದಿ ಇಬ್ಭಾಗ ಆಗಿ ಇವ್ರಿಗೆ ದಾರಿ ಕೊಡುತ್ತೆ. ಹಂಗೂ ತಡ ಆಗೋಗತ್ತೆ.

ಮೂಲ

8. ಬೃಂದಾವನದ ಒಳಗಿಂದ ರಾಯರು ಅಪ್ಪಣ್ಣನ “ಶ್ರೀ ರಾಯರ ಸ್ತೋತ್ರ”ಕ್ಕೆ ಕೊನೆ ಸಾಲು ಹೇಳಿದ್ದು…

ಬೃಂದಾವನದ ಹತ್ತಿರ ಬಂದಾಗ ಕೊನೆಯ ಕಲ್ಲನ್ನ ಜೋಡ್ಸಾಗಿರತ್ತೆ ಮತ್ತೆ ಯಾವತ್ತೂ ರಾಯರ ದರ್ಶನ ಆಗದ ಹಾಗಾಗಿರುತ್ತೆ . ಅಪ್ಪಣ್ಣಾಚಾರ್ಯರು ದುಃಖದಿಂದ ಕಣ್ಣೀರು ಹಾಕ್ತಾರೆ, ಗಂಟ್ಲು ಕಟ್ಟುತ್ತೆ. ಅವರು ರಚಿಸ್ತಿದ್ದ ಸ್ತೋತ್ರದ ಕೊನೆಯ ಚರಣ “ಕೀರ್ತಿರ್ ದಿಗ್ವಿಜಿತಾ ವಿಭೂತಿರತುಲಾ” ಅಂತ ಇರುತ್ತೆ. ಅಲ್ಲಿಂದ ಮುಂದೆ ಹಾಡಕ್ಕೆ ಅವ್ರ ಕೈಯ್ಯಲ್ಲಾಗ್ತಿರಲ್ಲ. ಅಗ ಬೃಂದಾವನದ ಒಳ್ಗಿಂದ “ಸಾಕ್ಷಿ ಹಯ ಸ್ಯೋತ್ರ ಹೀ” ಅನ್ನೋ ಧ್ವನಿ ಬರುತ್ತೆ! ಇದರ ಅರ್ಥ “ಹಯಗ್ರೀವ ದೇವತೆ ಅಪ್ಪಣ್ಣಾಚಾರ್ಯರ ಮಾತಿಗೆಲ್ಲ ಸಾಕ್ಷಿ ಆಗಿದ್ದು, ಅದನ್ನೆಲ್ಲ ನಿಜ ಮಾಡ್ತಾನೆ.” ಅಂತ.

ಮೂಲ

ಈ ಸ್ತೋತ್ರಾನ ಜಪಿಸೋರಿಗೆ ರಾಯರ ಅನುಗ್ರಹ ಯಾವತ್ತೂ ಇರತ್ತೆ ಅನ್ನೋ ಗಟ್ಟಿಯಾದ ನಂಬಿಕೆ ಇವತ್ಗೂ ಭಕ್ತರಲ್ಲಿದೆ.

ನಿಮ್ಗೂ ಮಂತ್ರಾಲಯದ ಮಹಾತ್ಮೆ ಕೇಳಿ ಮೈ ಜುಂ ಅನ್ನಿಸ್ತಾ?