https://si.wsj.net/public/resources/images/BN-VR282_1018YA_M_20171018190029.jpg

ನಮ್ಮ ಪುರಾಣಗಳಲ್ಲಿ, ಸನಾತನ ಧರ್ಮದಲ್ಲಿ ಹೇಳಿರೋ ನಾಲ್ಕು ಪುಣ್ಯಕ್ಷೇತ್ರಗಳಲ್ಲಿ ಒಂದು ಯಮುನೋತ್ರಿ. ಇದು ಈಗಿನ ಉತ್ತರಾಖಂಡ ರಾಜ್ಯದಲ್ಲಿದೆ. ಇನ್ನುಳಿದ 3 ಪುಣ್ಯಕ್ಷೇತ್ರಗಳು ಅಂದ್ರೆ ಗಂಗೋತ್ರಿ, ಕೇದಾರನಾಥ್ ಹಾಗೂ ಬದ್ರಿನಾಥ್. ಈ ನಾಲ್ಕು ಕ್ಷೇತ್ರಗಳನ್ನ ಛೋಟಾ ಚಾರ್ಧಾಮ್ ಅಂತ ಕರೀತಾರೆ. ಯಮುನೋತ್ರಿಯು ಉತ್ತರ ಕಾಶಿ ಜಿಲ್ಲೆಯ, ಪಶ್ಚಿಮ ಗರ್ವಾಲ್ ಹಿಮಾಲಯದ ಸಾಲಿನಲ್ಲಿ, ಸಮುದ್ರ ಮಟ್ಟದಿಂದ 3323 ಮೀಟರ್ ಎತ್ತರದಲ್ಲಿದೆ. ಪ್ರತಿವರ್ಷ ಏಪ್ರಿಲ್ನಿಂದ ನವೆಂಬರ್ ತಿಂಗಳ ಒಳಗೆ ಇಲ್ಲಿಗೆ ಲಕ್ಷಾಂತರ ಭಕ್ತರು ಬಂದು ಯಮುನೋತ್ರಿ ದೇವಿಯ ದರ್ಶನ ಪಡೀತಾರೆ.  ಪ್ರತಿವರ್ಷ ಏಪ್ರಿಲ್ನಿಂದ ನವೆಂಬರ್ ತಿಂಗಳ ಒಳಗೆ ಇಲ್ಲಿಗೆ ಲಕ್ಷಾಂತರ ಭಕ್ತರು ಬಂದು ಯಮುನೋತ್ರಿ ದೇವಿಯ ದರ್ಶನ ಪಡೀತಾರೆ. ಈ ದೇವಿಯು ಯಮುನಾ ನದಿಯ ಮೂರ್ತಿರೂಪ.

ಯಮುನಾ ನದಿ ಹೇಗೆ ಹುಟ್ಟಿದ್ದು?

ಸ್ಕಂದ ಪುರಾಣದಲ್ಲಿ ಹೇಳಿರೋ ಪ್ರಕಾರ ಗಂಗೆ ಹೇಗೆ ವಿಷ್ಣುವಿನ ಪಾದದಿಂದ ಹುಟ್ಟಿದಳೋ ಹಾಗೆ ಯಮುನೆ ವಿಷ್ಣುವಿನ ಕಣ್ಣೀರಿನಿಂದ ಹುಟ್ಟಿದಂತೆ. ಒಂದು ಸಲ ದೇವತಗಳಿಗೂ ರಾಕ್ಷಸರಿಗೂ ಯುದ್ಧ ಆದಮೇಲೆ, ವಿಷ್ಣು ವಿಶ್ರಾಂತಿ ಪಡೀತಾ ಕಣ್ಣು ಮುಚ್ಚಿದಾಗ, ಒಂದೆರಡು ಹನಿ ಕಣ್ಣೀರು ತಪಸ್ಸು ಮಾಡುತ್ತಿದ್ದ ಸಂಧ್ಯಾಳ ತೊಡೆ ಮೇಲೆ ಬಿತ್ತಂತೆ. ತನ್ನ ತಪಸ್ಸಿನ ಫಲ ಅಂತ ತಿಳಿದು ಸಂಧ್ಯಾ ಆ ಕಣ್ಣೀರಿನ ಹನಿಗಳನ್ನು ಕುಡಿದಳಂತೆ. (ಸಂಧ್ಯ, ಸಂಗ್ಯ, ಸರನ್ಯೂ, ಸಂಜನಾ ಎಲ್ಲ ಹೆಸರಗಳೂ ಇವಳದ್ದೇ).

ಈ ಸಮಯದಲ್ಲಿ ಆಕಾಶದಲ್ಲಿ  ಒಂದು ಭವಿಷ್ಯವಾಣಿ ಕೇಳಿಬಂದು, ಅದರಲ್ಲಿ "ಮುಂದೆ ನೀನು ಸೂರ್ಯ ದೇವನನ್ನು ಮದುವೆ ಆದಾಗ, ಅವನಿಂದ ನಿನಗೆ 3 ಮಕ್ಕಳು ಹುಟ್ತಾರೆ, ಈ ಮೂವರಲ್ಲಿ ಒಂದು ಹೆಣ್ಣು ಮಗು. ಈ ಹೆಣ್ಣುಮಗುವನ್ನ ಪ್ರಪಂಚದಲ್ಲಿ ಎಲ್ಲರೂ ಪೂಜಿಸ್ತಾರೆ, ಅಷ್ಟೇ ಅಲ್ಲ ಮುಂದೆ ದ್ವಾಪರ ಯುಗದಲ್ಲಿ ಅವಳು ಕೃಷ್ಣನ ರಾಣಿಯಾಗುತ್ತಾಳೆ , ಗಂಡು ಮಕ್ಕಳಲ್ಲಿ ಒಬ್ಬ ರಕ್ಷಕ ಮತ್ತೊಬ್ಬ ವಿಧ್ವಂಸಕ ಆಗ್ತಾರೆ" ಅಂತ ಹೇಳುತ್ತಂತೆ.

ಕಶ್ಯಪ ಹಾಗೂ ಅದಿತಿಯ ಮಗನಾದ ಸೂರ್ಯದೇವನ ಜೊತೆ ವಿಶ್ವಕರ್ಮನ ಮಗಳಾದ ಸಂಧ್ಯಾಳ ಜೊತೆ ಮದ್ವೆ ಆಗತ್ತೆ. ಇವಳು ಮೂರೂ ಲೋಕದಲ್ಲಿ ಸುರೇಣು ಅನ್ನೋ ಹೆಸರಿಂದ ಪ್ರಸಿದ್ದಿ ಆಗಿರ್ತಾಳೆ. ಮದುವೆ ನಂತರ ಸಂಧ್ಯಾಳಿಗೆ ಒಂದು ಹೆಣ್ಣು ಒಂದು ಗಂಡು ಮಗು (ಅವಳಿ ಮಕ್ಕಳು) ಹುಟ್ಟುತ್ತಾರೆ, ಆಮೇಲೆ ಮತ್ತೊಬ್ಬ ಗಂಡುಮಗು. ಅವಳಿಮಕ್ಕಳಿಕೆಗೆ ಯಮುನಾ – ಯಮ ಅಂತ ಹೆಸರಿಡ್ತಾರೆ, ಹಾಗೆ ಮೂರನೇ ಮಗುವಿಗೆ ಶ್ರದ್ಧ ದೇವ ಅಂತ ಹೆಸರಿಡ್ತಾರೆ, ಮುಂದೆ ಇವನು ವೈಸ್ವತ ಮನು ಅನ್ನೋ ಹೆಸರಿಂದ ಪ್ರಸಿದ್ದಿ ಆಗ್ತಾನೆ. 

ದಿನ ಕಳೆದಂತೆ ಸಂಧ್ಯಾಳಿಗೆ ಸೂರ್ಯದೇವನ ಶಾಖ ತಡೆಯೋದಕ್ಕೆ ತನ್ನ ಹಾಗೆ ಇರೋ ಇನ್ನೊಬ್ಬಳನ್ನು ಸೃಷ್ಟಿ ಮಾಡಿ ಅವಳಿಗೆ ಛಾಯಾ ಅಂತ ಹೆಸರಿಟ್ಟು, ತಾನು ಬರುವವರೆಗೂ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೋ, ಈ ರಹಸ್ಯ ಯಾರಿಗೂ ಹೇಳಬೇಡ ಅಂತ ಹೇಳ್ತಾಳೆ. ಛಾಯಾ ತನ್ನ ಕೂದಲನ್ನು ಎಲ್ಲಿಯವರೆಗೆ ಯಾರೂ ಮುಟ್ಟುವುದಿಲ್ಲವೋ ಅಲ್ಲಿಯವರೆಗೂ ಈ ರಹಸ್ಯವಾಗಿರುತ್ತೆ, ಯಾರಾದರೂ ಮುಟ್ಟಿದರೆ ಹೇಳ್ತೀನಿ ಅಂತಾಳೆ.

ಇದೆಲ್ಲ ವ್ಯವಸ್ಥೆ ಮಾಡಿ ಸಂಧ್ಯಾ ತನ್ನ ತಂದೆ ಮನೆಗೆ ಬರ್ತಿರೋದನ್ನ ಗಮನಿಸಿ ವಿಶ್ವಕರ್ಮ ತನ್ನ ಆತಂಕ ಏನು ಅಂತ ಅವಳಿಗೆ ಹೇಳಿ ಗಂಡನ ಮನೆಗೆ ಹೋಗುವಂತೆ ಹೇಳ್ತಾನೆ. ಆದರೆ ತಂದೆಯ ಮಾತು ಕೇಳದೆ ಸಂಧ್ಯಾ ಕುದುರೆಯ ರೂಪ ಧರಿಸಿ ಕುರು ರಾಜ್ಯದಲ್ಲಿ ಸುತ್ತಾಡುತ್ತ ಇರ್ತಾಳೆ.

ಸೂರ್ಯ ದೇವನೂ ಛಾಯಾಳನ್ನೇ ಸಂಧ್ಯಾ ಅಂತ ಅಂಕೊಂಡಿರ್ತಾನೆ, ಇವರಿಬ್ಬರಿಗೆ ಹುಟ್ಟಿದ ಮಗನೆ ಶನಿ. ಛಾಯಾ ಎಲ್ಲ  ಮಕ್ಕಳನ್ನೂ ಪ್ರೀತಿಸುತ್ತಿದ್ದರೂ ಶನಿ ಮೇಲೆ ಒಲವು ಹೆಚ್ಚಿರುತ್ತೆ, ಇದನ್ನು ಯಮನಿಗೆ ಸಹಿಸೋದಕ್ಕೆ ಆಗ್ತಾ ಇರಲ್ಲ. ಇದ್ರಿಂದ ಕೋಪ ಬಂದು ಯಮ ಛಾಯಾಗೆ ಹೊಡೆಯೋದಕ್ಕೆ ಹೋಗ್ತಾನೆ, ಆಗ ಛಾಯಾ ನಿನ್ನ ಕಾಲು ಬಿದ್ದು ಹೋಗ್ಲಿ ಅಂತ ಶಾಪ ಕೊಡ್ತಾಳೆ. ಇದನ್ನ ಸೂರ್ಯನಿಗೆ ಹೇಳಿ ತನ್ನ ಕಾಲನ್ನು ಉಳಿಸು ಅಂತ ಯಮ ಕೇಳ್ಕೋತಾನೆ, ಆದ್ರೆ ಶಾಪ ವಿಮೋಚನೆ ಮಾಡಕ್ಕಾಗಲ್ಲ, ಕೆಲವು ಹುಳುಗಳು ನಿನ್ನ ದೇಹದ ಮಾಂಸ ತಿಂದು ಭೂ ಲೋಕಕ್ಕೆ ಹೋಗುತ್ತೆ, ಇದ್ರಿಂದ ನೀನು ಪೂರ್ತಿ ಕಾಲು ಕಳೆದುಕೊಳ್ಳೊಬೇಕಾಗಿಲ್ಲ, ಶಾಪ ಫಲಿಸಿದ ಹಾಗೂ ಆಗುತ್ತೆ ಅಂತ ಹೇಳ್ತಾನೆ.

ಎಲ್ಲ ಮಕ್ಕಳನ್ನೂ ಯಾಕೆ ಒಂದೇ ರೀತಿ ನೋಡುತ್ತಿಲ್ಲ ಅಂತ ಛಾಯಾಳನ್ನ ಸೂರ್ಯ ಪ್ರಶ್ನೆ ಮಾಡಿದಾಗ, ಅವಳು ಅದಕ್ಕೆ ಗಮನ ಕೊಡದೆ ಸುಮ್ನಿರ್ತಾಳೆ, ಸೂರ್ಯನಿಗೆ ಕೋಪ ಬಂದು ಅವಳಿಗೆ ಶಾಪ ಕೊಡೋದಕ್ಕೆ ಅಂತ ಅವಳ ಕೂದಲು ಹಿಡ್ಕೊಂಡಾಗ ಛಾಯಾ ಹಿಂದೆ ನಡೆದ ಕಥೇನೆಲ್ಲ ವಿವರಿಸ್ತಾಳೆ. ಇದನ್ನ ಕೇಳಿ ಕೋಪದಿಂದ ಸೂರ್ಯ ವಿಶ್ವಕರ್ಮನ ಮನೆಗೆ ಹೋಗ್ತಾನೆ.

ಸೂರ್ಯನ್ನ ನೋಡಿದ ವಿಶ್ವಕರ್ಮ ಅವನ ಕಾಲಿಗೆ ಬಿದ್ದು ತನ್ನ ಮಗಳು ಸಂಧ್ಯಾ ಮಾಡಿರೋ ತಪ್ಪನ್ನ ಕ್ಷಮಿಸು ಅಂತ ಕೇಳ್ಕೋತಾನೆ. ನಿನ್ನ ತಾಪ ತಡೆಯೋದಕ್ಕೆ ಆಗದೆ ಅವಳು ಹೀಗೆ ಮಾಡಿದ್ದಾಳೆ, ನೀನು ಒಪ್ಪಿಕೊಂಡ್ರೆ ನಾನು ನಿನ್ನ ಶಾಖ ಕಮ್ಮಿ ಮಾಡಿ ನೀನು ಇನ್ನೂ ಚೆನ್ನಾಗಿ, ಸುಂದರವಾಗಿ ಕಾಣೋಹಾಗೆ ಮಾಡ್ತೀನಿ ಅಂತ ಹೇಳ್ತಾನೆ, ಇದಕ್ಕೆ ಸೂರ್ಯ ಒಪ್ಕೋತಾನೆ. ಈ ಶಾಖ ಕಮ್ಮಿ ಮಾಡೋವಾಗಲೇ ದಯಾ, ಅರ್ಯಮ, ಮಿತ್ರ, ವರುಣ, ಅರ್ಷಮಂಗ, ಇಂದ್ರ, ವಿವಸ್ವಾನ್, ಪುಷ, ಪರ್ಜನ್ಯ, ಅಜ್ಧಾನ್ಯ, ಜಘನ್ಯ ಹಾಗೂ ಹರ್ಷ ಅನ್ನೋ 12 ಆದಿತ್ಯರು ರೂಪ ತಾಳಿದ್ದು. ಇದಾದಮೇಲೆ ಸೂರ್ಯ ಕುದುರೆ ತೆಗದುಕೊಂಡು ಸಂಧ್ಯಾಳನ್ನು ಹುಡುಕಿಕೊಂಡು ಹೋಗಿ, ಕುದುರೆ ರೂಪದಲ್ಲಿದ್ದು ತಪಸ್ಸು ಮಾಡುತ್ತಿದ್ದ ತನ್ನ ಹೆಂಡತಿಯನ್ನು ಸೇರ್ತಾನೆ, ಆಗ ಅವರಿಗೆ ಹುಟ್ಟಿದ ಮಕ್ಕಳೇ ಅಶ್ವಿನಿ ಕುಮಾರರು.

ಯಮುನೆಯ ಮೂಲ – ಸಪ್ತ ಋಷಿ ಕುಂಡ

ಗಂಗಾ ಮಾತೆಯು ತಾನು ಭೂಲೋಕಕ್ಕೆ ಬರುವ ಮೊದಲು ಭಗೀರಥನಿಗೆ ತನಗೆ ದಾರಿ ತೋರಿಸುವಂತೆಯೂ, ಹಿಮಾಲಯದ ಸಾಲಿನಲ್ಲಿ ಎಲ್ಲೆಲ್ಲಿ ನೀರಿನ ಅವಶ್ಯಕತೆ ಇದೆಯೋ ಆ ದಾರಿಯಲ್ಲಿ ಕರೆದುಕೊಂಡು ಹೋಗುವಂತೆ ಹೇಳ್ತಾಳೆ. ಹೀಗೆ ಹೋಗ್ತಿರೋವಾಗ ನಾಗ ದೇವತೆಗಳು ಗಂಗೇನ ಅಪಹರಿಸ್ತಾರೆ. ಭಗೀರಥನು ಗಂಗೇನ ಹುಡುಕ್ತಾ ಇರ್ತಾನೆ. ಅವನು ಕಳಿಂದ ಅನ್ನೋ ಬೆಟ್ಟದ ಹತ್ತಿರ ಹುಡುಕಾಡುತ್ತಾ ಇರುವಾಗ, ಇವನ ದುಃಖ ನೋಡಲಾಗದೆ ವಿಷ್ಣುವಿನ ಕಣ್ಣಿಂದ ಕೆಲವು ನೀರಿನ ಹನಿಗಳು ಈ ಬೆಟ್ಟದ ತುದಿಯ ಮೇಲೆ ಬಿದ್ದು ಒಂದು ಸರೋವರ ಸೃಷ್ಟಿಯಾಗುತ್ತೆ. ಭಗೀರಥ ಇದರ ಹತ್ತಿರ ಬರ್ತಾನೆ, ಇಲ್ಲಿಂದ ಒಬ್ಬ ದೇವತೆ ಎದ್ದು ಬರ್ತಾಳೆ, ಭಗೀರಥ ಅವಳನ್ನೇ ಗಂಗಾ ಮಾತೆ ಅಂತ ತಿಳ್ಕೋತಾನೆ. ಅವಳನ್ನು ಕಂಡು ಎಲ್ಲಿ ಹೋಗಿದ್ದೆ? ನೀನು ಕಾಣಿಸದೆ ನನಗೆ ತುಂಬಾನೇ ದುಃಖ ಆಗಿತ್ತು ಅಂತ ಹೇಳ್ತಾನೆ. ಆಗ ಆ ದೇವಿಯು ನಾನು ಗಂಗೆ ಅಲ್ಲ ಅವಳ ತಂಗಿ ಯಮುನೆ ಅಂತ ಹೇಳ್ತಾಳೆ.

ನೀನು ಗಂಗೆಯನ್ನು ಹುಡುಕಲು ಪರದಾಡುತ್ತಿರುವದನ್ನು ನೋಡಲು ಸಹಿಸಲಾಗದೆ ವಿಷ್ಣುವು ನಿನಗೆ ದಾರಿ ತೋರಿಸಲು ನನ್ನನ್ನು ಇಲ್ಲಿಗೆ ಕಳಿಸಿದ್ದಾನೆ ಅಂತ ಹೇಳ್ತಾಳೆ. ಶೇಷಾವತಾರಿ ನಾಗಾರಾಜನು ಗಂಗೆಯ ದರ್ಶನ ಪಡೆಯೋದಕ್ಕೆ ಅಂತ ಅವಳನ್ನು ತನ್ನ ಲೋಕಕ್ಕೆ ಕರ್ಕೊಂಡು ಹೋಗಿದ್ದಾನೆ. ಈ ಶ್ಲೋಕ ಹೇಳ್ತ ನೀನು ಅಲ್ಲಿಗೆ ಹೋಗಬಹುದು ಅಂತ ಒಂದು ಶ್ಲೋಕ ಹೇಳಿಕೊಡ್ತಾಳೆ. ಆ ಶ್ಲೋಕ ಹೇಳ್ತಾ ಭಗೀರಥ ನಾಗಲೋಕಕ್ಕೆ ಹೋಗ್ತಾನೆ. ಅಲ್ಲಿ ಗಂಗೆ ಆ ಮಂತ್ರವನ್ನೇ ಹೇಳುತ್ತಾ ಅನಂತನಾಗನಿಗೆ ಪೂಜೆ ಮಾಡ್ತಾ ಇರೋದನ್ನ ನೋಡ್ತಾನೆ.

ಈ ಸಮಯದಲ್ಲಿ ಗಂಗೆ ನಾಗರಾಜನಿಗೆ ತಾನು ಭಗೀರಥನಿಗೆ ಕೊಟ್ಟಿರುವ ಮಾತಿನ ಬಗ್ಗೆ ತಿಳಿಸಿ ಈಗ ತಾನು ಅವನ ಜೊತೆ ಹೋಗಬೇಕೆಂದೂ, ಕಲಿಯುಗದ ಅಂತ್ಯದಲ್ಲಿ ಯಾವಾಗ ಜನರು ದೇವರು, ಭಕ್ತಿ, ಪೂಜೆ ಇದೆಲ್ಲ ಮರೆತು ಇರ್ತಾರೋ ಆಗ ನಾನು ಇಲ್ಲಿಗೆ ವಾಪಾಸ್ ಬರ್ತೀನಿ ಅಂತ ಮಾತು ಕೊಡ್ತಾಳೆ. ಗಂಗೆ ಮಾತು ಕೊಟ್ಟಮೇಲೆ ಅವಳನ್ನು ಬಿಡುಗಡೆ ಮಾಡಿ ಭಗೀರಥನ ಜೊತೆ ಕಳಿಸ್ತಾರೆ.

ಭಗೀರಥನಿಗೆ ಮಂತ್ರ ಹೇಳಿಕೊಟ್ಟಮೇಲೆ ಯಮುನೆ ತಾನು ಎದ್ದು ಬಂದಿದ್ದ ಸರೋವರಕ್ಕೆ ಹೋಗುತ್ತಾಳೆ. ಇದನ್ನೇ ಈಗ ಸಪ್ತ ಋಷಿ ಕುಂಡ ಅಂತ ಕರೀತಾರೆ. ಇಲ್ಲಿ ಸುಮಾರು ಋಷಿವರ್ಯರು ತಪಸ್ಸು ಮಾಡಿ ಮುಕ್ತಿ ಪಡೆದಿದ್ದಾರೆ ಅಂತ ಹೇಳ್ತಾರೆ.onlinecg.in

ಯಮುನೆ ಯಮುನೋತ್ರಿಗೆ ಬಂದಿದ್ದು ಹೇಗೆ?

ದ್ವಾಪರ ಯುಗದಲ್ಲಿ ಜಯಮುನಿ ಅನ್ನೋ ಋಷಿಯು, ಯಮುನೆಯನ್ನು ಒಲಿಸಿಕೊಂಡು ಅವಳ ಅನುಗ್ರಹ ಪಡೆಯಲು  ತಪ್ಪಸ್ಸು ಮಾಡಿದ್ನಂತೆ. ಇದರಿಂದ ಅವನ ತಪಸ್ಸಿಗೆ ಸೋತ ಯಮುನೆಯು ಸಪ್ತ ರಿಷಿ ಕುಂಡದಿಂದ ಝರಿ ರೂಪದಲ್ಲಿ ಹರಿದು ಬಂದು ಜಯಮುನಿಗೆ ಸಣ್ಣ ಹುಡುಗಿಯ ರೂಪದಲ್ಲಿ ದರ್ಶನ ಕೊಟ್ಟಳಂತೆ.

ನಾನು ನಿನ್ನ ತಪಸ್ಸಿಗೆ ಮೆಚ್ಚಿ ಬಂದಿದ್ದೇನೆ, ನಿನಗೆ ಏನು ವಾರ ಬೇಕೋ ಕೇಳು ಅಂತ ಹೇಳ್ತಾಳೆ. ಅದಕ್ಕೆ ಜಯಮುನಿಯು ಗಂಗೆಯು ಮೂರು ಲೋಕಗಳ ಶುದ್ಧಿ ಮಾಡಿದರೆ, ನಿನಗೆ ಮೂರೂ ಲೋಕಗಳಲ್ಲಿ ವಿಮೋಚನೆ ಕೊಡಿಸೋ ಶಕ್ತಿ ನಿನಗಿದೆ. ಭವಿಷ್ಯದಲ್ಲಿ ಬಹಳಷ್ಟು ಭಕ್ತರು ನಿನ್ನ ಬಳಿಗೆ ಬಂದು ನಿನ್ನ ಪದಗಳಿಗೆ ಎರಗಿ ವಿಮೋಚನೆ ಪಡ್ಕೋತಾರೆ, ಆದರೆ ಅಲ್ಲಿಗೆ ಎಲ್ಲರಿಗೂ ಬರಲು ಕಷ್ಟವಾಗುತ್ತೆ. ಹಾಗಾಗಿ ನೀವು ಇಲ್ಲಿ ಒಂದು ಬಿಸಿನೀರಿನ ಝರಿಯಂತೆ ಹರಿಯಬೇಕು ಅಂತ ಕೇಳ್ಕೋತೀನಿ, ಯಾರು ಇಲ್ಲಿ ಬಂದು ಸ್ನಾನ ಮಾಡ್ತಾರೋ ಅವರಿಗೆ ವಿಮೋಚನೆ ಸಿಗಲಿ ಅಂತ ಪ್ರಾರ್ಥನೆ ಮಾಡ್ಕೋತಾನೆ.

ಈ ಸಮಯದಲ್ಲಿ ಯಮುನೆಯು ತನ್ನ ತಂದೆ ಸೂರ್ಯದೇವನನ್ನು ಪ್ರಾರ್ಥಿಸಿ ತನ್ನ ಒಂದು ಕಿರಣದಿಂದ ಇಲ್ಲಿ ನೀರು ಬಿಸಿಯಾಗಿರುವಂತೆ ಮಾಡಲು ಕೇಳಿಕೊಳ್ತಾಳೆ. ಇದಾದ ನಂತರ ಜಯಮುನಿಗೆ ಯಮುನಾದೇವಿಯು ಮುಂದೆ ಈ ಜಾಗವು ಜಮುನೋತ್ರಿ ಅಂತಾನೂ ಪ್ರಸಿದ್ಧಿ ಆಗುತ್ತೆ ಅಂತ ಹೇಳ್ತಾಳೆ.

ಈ ಬಿಸಿ ನೀರಿನ ಝರಿ ಶುರುವಾಗುವ ಜಾಗವನ್ನು ಮುಖಾರವಿಂದ ಅಂತ ಕರೀತಾರೆ, ಜಯಮುನಿಯು ತಾಪಸ್ಸು ಮಡಿದ ಜಾಗವನ್ನು ದಿವ್ಯ ಶಿಲೆ ಅಂತ ಕರೀತಾರೆ. ಈ ಶಿಲೆಯ ಹತ್ತಿರ ಯಉಮಾದೇವಿಯ ಕೃಪೆಗೆ ಪಾತ್ರರಾಗಲು ಜನ ಪೂಜೆ ಮಾಡ್ತಾರೆ. ಹೀಗೆ ಬಿಸಿನೀರಿನ ಝರಿಯಾಗಿ ಹರಿಯುವಾಗ ಒಂದು ಹನಿಯು ಉತ್ತರದ ಕಡೆಗೂ ಇನ್ನೊಂದು ಹನಿಯು ದಕ್ಷಿಣದ ಕಡೆಗೂ ಚಿಮ್ಮುತ್ತೆ, ಇದೆ ಮುಂದೆ ವಿಷ್ಣು ಕುಂಡ ಹಾಗೆ ಸೂರ್ಯ ಕುಂಡ ಅನ್ನೋ ಹೆಸರು ಪಡ್ಕೊಳ್ಳುತ್ತೆ. ಈಗಲೂ ಯಮುನಾ ನದಿಯನ್ನು ಜಮುನಾ ಅಂತಾನೂ ಕರೀತಾರೆ.

punjabkesari.in

ಯಾತ್ರೆ, ದೇವರು ಅಂತ  ಆದ್ರೂ ಸರಿ ಅದ್ರಲ್ಲೆಲ್ಲ ನಂಬಿಕೆ ಇಲ್ಲ ಅಂದ್ರೂ ಸರಿ ಈ ಸೃಷ್ಟಿಯ ಸೊಬಗನ್ನು ಸವಿಯೋದಕ್ಕೆ ಒಂದುಸಲನಾದ್ರೂ ಹೋಗಲೇ ಬೇಕು ಅನ್ಸುತ್ತೆ.