http://13462-presscdn-0-60.pagely.netdna-cdn.com/wp-content/uploads/2014/09/Navaratri-11.jpg

ಬ್ರಹ್ಮನಿಂದ ವರ ಪಡ್ಕೊಂಡ "ಮಹಿಷಾಸುರ" ಜನಕ್ಕೆ ತುಂಬಾ ಕಾಟ ಕೊಡ್ತಿದ್ದ. ಅವನನ್ನ ಸಾಯ್ಸೋದಕ್ಕೆ ದೇವಾನುದೇವತೆಗಳೆಲ್ಲ ಅವರವರ ದೇಹದ ಒಂದೊಂದು ಅಂಶಾನ ತೆಗೆದು ಆದಿಶಕ್ತಿಯನ್ನ ಸೃಷ್ಟಿ ಮಾಡ್ತಾರೆ. ಮಹಿಷನ ಮೇಲೆ ಯುದ್ದ ಮಾಡಕ್ಕೆ ಕಳ್ಸಿ ಅವನನ್ನು ಸಂಹಾರ ಮಾಡ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ಸಹಾಯದಿಂದ ಮಹಿಷನನ್ನ ಶಕ್ತಿ ಮತ್ತೆ ಯುಕ್ತಿಯಿಂದ ಕೊಲ್ತಾಳೆ ದುರ್ಗಾ ಮಾತೆ. ಹಾಗಾಗಿ ಹತ್ನೇ ದಿನ ವಿಜಯದಶಮಿ ಆಚರಿಸೋದು ವಾಡಿಕೆ. ದೇವಾನುದೇವತೆಗಳೆಲ್ಲ ತಮ್ಮ ಶಕ್ತಿಯನ್ನ ದುರ್ಗೆಗೆ ಕೊಟ್ಟಾಗ ಅವರೆಲ್ಲಾ ಕಲ್ ತರ ಆಗಿರ್ತಾರೆ, ಅಂದ್ರೆ ಗೊಂಬೆಗಳ ತರ. ಅವರೆಲ್ಲಾ ಮಾಡಿದ ತ್ಯಾಗದ ನೆನಪಿಗಾಗಿ ದಸರಾ ಹಬ್ಬದಲ್ಲಿ ಬೊಂಬೆ ಕೂಡಿಸೋ ಪರಿಪಾಠ ಬೆಳ್ಕೊಂಡ್ ಬಂದಿದೆ. ಇದು ವಿಜಯನಗರ ಅರಸರ ಕಾಲದಿಂದಲೂ ವಾಡಿಕೆಯಲ್ಲಿದೆ.

ಮಹಾಲಯ ಅಮಾವಾಸ್ಯೆ ಆದ್ಮೇಲೆ ಮಾರನೆ ದಿನ ಬರುವ ಆಶ್ವಯುಜ ಪಾಡ್ಯ ಎಲ್ರ ಮನೇಲೂ ಒಂಥರಾ ಹಬ್ಬ ಇದ್ದಂಗೆ. ಮೈಸೂರು ಕಡೆ ಹೆಣ್ಮಕ್ಳಂತೂ ಈ ದಿನಕ್ಕಾಗಿ ಕಾಯ್ತಾ ಇರ್ತಾರೆ. ಯಾಕಂದ್ರೆ ಬೊಂಬೆ ಕೂರಿಸ್ಬೋದು ಅಂತ. ಸರಿ, ಈಗ ಬೊಂಬೆ ಕೂರಿಸೋದು ಹೇಗೆ ಅಂತ ನೋಡೋಣ ಬನ್ನಿ.  

ಹೀಗೇ ಕೂಡಿಸಬೇಕು ಅಂತೇನಿಲ್ಲ, ಆದ್ರೆ ಸ್ವಲ್ಪ ಈ‌ ತರಹ ಕೂಡಿಸಿದರೆ ಅದು ಮೈಸೂರ ಸ್ಟೈಲು ಅನ್ನಿಸಿಕೊಳೋದ್ರಲ್ಲಿ ಸಂದೇಹ ಇಲ್ಲ

ಹಂತ ಹಂತವಾಗಿ ಹಲಗೆಯನ್ನ ಮೆಟ್ಟಿಲಿನ ತರ ಜೋಡಿಸಿ ಬೇರೆಬೇರೆ ಹಂತದಲ್ಲಿ ನಾನಾ ತರದ ಬಣ್ಣ ಬಣ್ಣದ ಬೊಂಬೆ ಕೂರುಸ್ತಾರೆ. ಮೆಟ್ಟಿಲಿನ ಮೇಲ್ಭಾಗದಲ್ಲಿ ದೇವತೆಗಳು ಆಮೇಲೆ ಒಂದೊಂದೇ ಸ್ಟೆಪ್ಪು ಕೆಳಕ್ಕೆ ಬರ್ತಿದ್ದಂಗೆ ಭೂಮಿ ಮೇಲಿನ ಪ್ರಾಣಿ ಪಕ್ಷಿಗಳನ್ನ ಕೂರಿಸೋದು ವಾಡಿಕೆ.

1 ರಿಂದ 3ನೇ ಮೆಟ್ಟಿಲಲ್ಲಿ ದೇವರನ್ನ ಕೂಡಿಸಿ

ಮೇಲಿರೋ ಮೂರು ಮೆಟ್ಟಿಲುಗಳು ದೇವಾನು ದೇವತೆಗಳಿಗೆ ಮೀಸಲಿಡ್ತಾರೆ. ಈ ಮೂರು ಮೆಟ್ಟಿಲಿನ ಮೇಲೆ ಬೇರೆಬೇರೆ ದೇವರುಗಳ ಗೊಂಬೆಗಳನ್ನು ಕೂರಿಸೋದು ಮುಂಚೆಯಿಂದ್ಲೂ ವಾಡಿಕೆಯಂತೆ ನಡೆದುಕೊಂಡು ಬಂದಿದೆ. 

4 ರಿಂದ 6ನೇ ಮೆಟ್ಟಿಲಲ್ಲಿ ಸಾಧು ಸಂತರು, ರಾಜ-ರಾಣೀರು

ಅಮೇಲಿನ ಮೂರು ಮೆಟ್ಟಿಲು ನರದೇವತೆ, ತುಂಬಾ ಪ್ರಸಿದ್ಧರಾದ ಋಷಿ ಮುನಿಗಳು, ಸಾಧು ಸಂತರು, ರಾಜ ರಾಣೀರಿಗೆ ಮೀಸಲಾಗಿಟ್ತಾರೆ. ಹೆಚ್ಚಾಗಿ ಮೈಸೂರನ್ನು ಆಳಿದ ರಾಜರ ಗೊಂಬೆಗಳನ್ನ ಇಲ್ಲಿ ಕೂರಿಸ್ತಾರೆ. ಈ ಮೂರು ಮೆಟ್ಟಿಲುಗಳ ಮೇಲೆ ವಿಶೇಷವಾಗಿ ಮೈಸೂರು ರಾಜರ ಗೊಂಬೆಗಳನ್ನ ಕೂರಿಸೋದು ಮುಂಚೆಯಿಂದ್ಲೂ ನಡ್ಕೊಂಡ್ ಬಂದಿರೋ ಪದ್ಧತಿ.

7 ನೇ ಮೆಟ್ಟಿಲಲ್ಲಿ ಹಬ್ಬ ಹರಿದಿನ ಹೇಗೆ ಮಾಡ್ತಾರೆ ಅಂತ ತೋರಿಸಿ

ಈ ಮೆಟ್ಟಿಲಿನ ಮೇಲೆ ಹಿಂದೂ ಹಬ್ಬ ಹರಿದಿನಗಳನ್ನ ಹೇಗೆ ಆಚರಿಸ್ತಾರೆ, ಆವತ್ತು ಜನ ಹೇಗೆ ಖುಷಿಪಡ್ತಿದ್ದಾರೆ ಅಂತ ತೋರಿಸೋ ಬೊಂಬೆಗಳನ್ನ ಕೂರಿಸೋದು ನಡೆದುಕೊಂಡು ಬಂದಿರೋ ಪದ್ಧತಿ.

8ನೇ ಮೆಟ್ಲು ಮೇಲೆ ದಿನಾ ನಾವು ನೋಡೋ ಅಂತ ವ್ಯಕ್ತಿ , ಘಟನೆಗಳ್ನ ತೋರಿಸುವಂಥ ಬೊಂಬೆಗಳ್ನ ಇಡಿ

ಈ ಮೆಟ್ಟಿಲಿನ ಮೇಲೆ ದಿನ ನೋಡೋ ಅಂತ ಸನ್ನಿವೇಶ, ಘಟನೆಯನ್ನು ಹೇಳೋ ಬೊಂಬೆಗಳನ್ನು ಕೂರಿಸ್ತಾರೆ. ಅಂದ್ರೆ ಪಾರ್ಕು, ಅಂಗಡಿ, ತರಕಾರಿ ಮಾರೋರ್ವು ಈ ತರ ಬೇರೆಬೇರೆ ಬೊಂಬೆಗಳನ್ನ ಕೂರಿಸೋದು ವಾಡಿಕೆ. 

9ನೇ ಮೆಟ್ಟಿಲಲ್ಲಿ ಇವತ್ತಿನ ಜನ, ಪ್ರಾಣಿ-ಪಕ್ಷಿಗಳು – ಇದನ್ನೆಲ್ಲ ಬಿಂಬಿಸುವಂಥ ಬೊಂಬೆ ಇಡಿ

ಕೊನೇ ಮೆಟ್ಲ್ ಮೇಲೆ ಮನುಷ್ಯ ವಿಕಾಸ ಆಗಿದ್ದು ಹೇಗೆ ಅಂತ ತೋರಿಸೋ  ಬೊಂಬೆಗಳು ಅಥವಾ ಬೇರೆ ಪ್ರಾಣಿಗಳ ಬೊಂಬೆಗಳನ್ನ ಕೂರಿಸೋದು ವಾಡಿಕೆ. 

ನಿಜಕ್ಕೂ‌ ನೋಡಿದರೆ ಬೊಂಬೆಗಳನ್ನ ಹೀಗೇ ಕೂರಿಸ್ಬೇಕು ಅನ್ನೋ ರೂಲು ಎಲ್ಲೂ ಇಲ್ಲ. ಪ್ರತಿಯೊಬ್ಬರು ಅವರವರ ಮನೇಲಿ ಇರೋ ಬೊಂಬೆಗಳಿಗೆ ತಕ್ಕಂತೆ ಮೆಟ್ಟಿಲನ್ನ ಮಾಡಿ ಅದಕ್ಕೆ ತಕ್ಕಂಗೆ ಬೊಂಬೆ ಕೂರಿಸೋದು ವಾಡಿಕೆ. ಆದ್ರೆ ಮೈಸೂರಲ್ಲಿ ನೂರಾರು ವರ್ಷದಿಂದ ಹೆಚ್ಚು-ಕಡಿಮೆ ಇಲ್ಲಿ ಮೇಲೆ ಹೇಳಿರೋ ರೀತೀಲಿ ಕೂಡುಸ್ಕೋತಾ ಬಂದಿದಾರೆ, ಅಷ್ಟೆ. ಚೆನ್ನಾಗಿರುತ್ತೆ ಅಲ್ವಾ?