ಅಡುಗೆ ಘಮ, ಸೆಂಟ್ ಸುಗಂಧ ಕಡೇಗೆ ಒಂದಷ್ಟು ಪದಾರ್ಥ ಚೆನ್ನಾಗಿದ್ಯಾ ಹಾಳಾಗಿದ್ಯ ಅಂತ ತಿಳ್ಕೊಳಕ್ಕೂ ಮೂಗು ಬೇಕು. ಆದ್ರೆ ಅದೇ ಮೂಗು ಕೈಕೊಟ್ರೆ? ತಲೆನೇ ಓಡಲ್ಲ. ಹವಾಮಾನದ್ ಪರಿಣಾಮನೋ ಅಥ್ವ ದೇಹದಲ್ಲಾಗೋ ಬದಲಾವಣೆಯಿಂದನೋ ಮೂಗಿನ ಒಳಭಾಗ ಒಣಗಿ ಗಾಯ ಆಗ್ಬೋದು. ಅಷ್ಟೆ ಅಲ್ಲ ಇದಕ್ಕೆ ಮೊಳಕೆನಲ್ಲೇ ಏನಾದ್ರೂ ಚಿಕಿತ್ಸೆ ಮಾಡ್ಲಿಲ್ಲ ಅಂದ್ರೆ ಮುಂದೆ ಸೈನಸ್, ತಲೆನೋವು ಇವಕ್ಕೆಲ್ಲಾ ಕಾರಣ ಆಗ್ಬೋದು. ಜೊತೆಗೆ ಮೂಗಲ್ಲಿ ಇಂಥ ಕಿರಿಕಿರಿ ಆಗ್ತಿದ್ರೆ ಯಾವ್ ಕೆಲ್ಸ ಮಾಡಕ್ಕೂ ಮೂಡ್ ಇರಲ್ಲ. ಇದರ ಅಡ್ಡಪರಿಣಾಮ ಅಂದ್ರೆ, ಯಾವುದೇ ರೋಗ ಗಾಳಿ ಮೂಲಕ ನಮ್ಗೆ ಅಂಟ್ಕೊಬೇಕು ಅಂದ್ರೆ ಅದಕ್ಕೆ ಮೊದಲ ವಿರೋಧ ಮೂಗಿನ ಒದ್ದೆ ಅಂಶ ಅಥವ ಮ್ಯೂಕಸ್ ಇಂದ ಆಗತ್ತೆ. ಅದೇ ಒಣಗಿ ಹೋದ್ರೆ, ಖಾಯಿಲೆಗಳು ಸರಾಗವಾಗಿ ಬರತ್ತೆ. ಜೊತೆಗೆ ಕಣ್ಣು ಸೋರೋದು, ನಾಲಗೆ ಒಣಗೋದು ಇವೂ ಆಗಬೋದು. ಇನ್ನು ಚಿಕಿತ್ಸೆ ಅಂದ್ರೆ, ಡಾಕ್ಟರ್ ಹತ್ರ ಹೋಗಿ ಒಂದಷ್ಟು ದುಡ್ಡು ಸುರಿದು ಮೂಗಿಗೆ ಸೇವೆ ಮಾಡೋದ್ ಬೇಡ. ಮನೇಲೇ ಇದಕ್ಕೆ ಮದ್ದು ಮಾಡಿ ಒಣಗಿರೋ ಮೂಗನ್ನ ರಿಪೇರಿ ಮಾಡ್ಕೊಬೋದು. ಹೇಗೆ ಏನು ಅಂತ ಅಂತೆಕಂತೆ ಇಲ್ಲಿ ನಿಮ್ಗೋಸ್ಕರ ಹೇಳ್ತಿದೆ. ತಿಳ್ಕೊಂಡಿರಿ ಖಂಡಿತಾ ಬೇಕಾಗತ್ತೆ.

ಒಣಮೂಗು ಅಂದ್ರೆ ಏನು?

ಮೂಗಿನ ಹೊಳ್ಳೆನಲ್ಲಿರೋ ದ್ರವ ಪದಾರ್ಥ ಅಥ್ವ ತೇವಾಂಶ ಒಣಗಿ, ಮ್ಯೂಕಸ್/ಸಿಂಬಳ ಉತ್ಪತ್ತಿ ಆಗದೇ ಇರೋದೇ ಒಣಮೂಗು.

ಒಣಮೂಗನ್ನ ಸರಿಪಡಿಸೋದಕ್ಕೆ ಇದ್ರಲ್ಲಿ ಯಾವ್ ಪದಾರ್ಥ ಸಿಕ್ಕುದ್ರೂ ಸಾಕು

– ಕೊಬ್ಬರಿ ಎಣ್ಣೆ

– ಉಪ್ಪುನೀರಿನ ಸ್ಪ್ರೇ

– ವಿಟಮಿನ್ ಈ ಎಣ್ಣೆ

– ಆಲೀವ್ ಎಣ್ಣೆ

– ಎಳ್ಳೆಣ್ಣೆ

– ಹಬೆ

– ತೇವಾಂಶ ಉತ್ಪತ್ತಿ ಮಾಡೋ ಉಪಕರಣ

– ಆವಿ ಸ್ನಾನ

ಕೊಬ್ಬರಿ ಎಣ್ಣೆ

cdn2.stylecraze.com
ಏನ್ ಮಾಡ್ಬೇಕು ; ಒಂದು ಅಥ್ವ ಎರಡು ಹನಿ ಕೊಬ್ಬರಿ ಎಣ್ಣೆನ ಎರಡೂ ಮೂಗಿನ ಹೊಳ್ಳೆಗೆ ಹಾಕ್ಕೊಬೇಕು.

ಎಷ್ಟು ಸಲ : ದಿನಕ್ಕೆ ಒಂದು ಸಲ ಸಾಕು. ಇದ್ರಿಂದ ಒಣಮೂಗು ಮೃದು ಆಗತ್ತೆ.

ಹೇಗ್ ಕೆಲ್ಸ ಮಾಡತ್ತೆ : ಸರ್ವಕ್ಕೂ ಕೊಬ್ಬರಿ ಎಣ್ಣೆ ಮದ್ದು ಅನ್ನೋ ಮಾತೇ ಇದೆ. ಇದಕ್ಕೆ ಗಾಯನ ವಾಸಿ ಮಾಡೋ ವಿಶೇಷ ಗುಣ ಇದೆ. ಜೊತೆಗೆ ಒಣಗಿದ ಚರ್ಮ, ಜೀವಕೋಶನೆಲ್ಲಾ ಮೃದು ಮಾಡಿ, ಹೊಸದಾಗಿ ಅವು ಹುಟ್ಟೋ ಹಾಗ್ ಮಾಡತ್ತೆ.

ಉಪ್ಪುನೀರಿನ ಸ್ಪ್ರೇ

cdn2.stylecraze.com
ಸ್ಪ್ರೇ ತಯಾರು ಮಾಡಕ್ಕೆ ಇವುಗಳು ಬೇಕು

– 1 ಚಮಚ ಶುದ್ಧ ಉಪ್ಪು / ಸಮುದ್ರದ್ ಉಪ್ಪು

– 1/2 ಬಟ್ಟಲು ನೀರು

– ಸ್ಪ್ರೇ ಬಾಟಲ್

 

ಏನ್ ಮಾಡ್ಬೇಕು : ಉಪ್ಪನ್ನ ನೀರಲ್ಲಿ ಕದರಿ, ಪೂರ್ತಿ ಕರಗಿದ್ ಮೇಲೆ, ಸ್ಪ್ರೇ ಬಾಟಲಲ್ಲಿ ತುಂಬಿ. ತಲೆನ ಕೆಳಕ್ಕೆ ಬಗ್ಗಿಸಿ, ಮೂಗಿನ ಎರಡೂ ಹೊಳ್ಳೆಗಳಿಗೆ ದ್ರವ ಸ್ಪ್ರೇ ಮಾಡ್ಕೊಳಿ. ಬೇಕಾದ್ರೆ ಅದೇ ದ್ರವನ ಕೈಗೆ ಹಚ್ಕೊಂಡು, ಮೂಗ್ ಹತ್ರ ಇಟ್ಕೊಂಡು, ಜೋರಾಗಿ ಉಸಿರು ತೊಗೋಳಿ. ಒಂದ್ ಹತ್ತು ಸೆಕೆಂಡ್ ಬಿಟ್ಟು ಉಸಿರು ಬಿಡಿ. ಸೈನಸ್ ಕ್ಯಾವಿಟಿಗೆಲ್ಲಾ ಉಪ್ಪಿನಾಂಶ ಹೋಗಿ, ಮುಚ್ಚಿರೋ ರಂದ್ರ ತೆರ್ಕೊಳತ್ತೆ.

ಎಷ್ಟು ಸಲ : ದಿನಕ್ಕೆ 3 ರಿಂದ 4 ಸಲ.

ಹೇಗ್ ಕೆಲ್ಸ ಮಾಡತ್ತೆ : ಸಮುದ್ರ ತೀರದ ವಾತಾವರಣದಲ್ಲಿ ಯಾವಾಗ್ಲೂ ತೇವಾಂಶ ಇರತ್ತೆ ಅಲ್ವ. ಅದೇ ಕಾರಣ ಮೂಗಿಗೆ ಈ ಸ್ಪ್ರೇ ಹೊಡ್ಕೊಳಕ್ಕೆ. ಇದು ಮೂಗಿನ ಹೊಳ್ಳೆ ಯಾವಾಗ್ಲೂ ಒದ್ದೆಯಾಗಿರೋ ಹಾಗ್ ನೋಡ್ಕೊಳತ್ತೆ. ಗಾಯ ಬೇಗ ಮಾಯತ್ತೆ.

ಕಿವಿಮಾತು : ಅಡುಗೆಗೆ ಬಳಸೋ ಉಪ್ಪನ್ನ ಒಣಮೂಗು ನಿವಾರಣೆಗೆ ಉಪ್ಯೋಗುಸ್ಬೇಡಿ. ಅದ್ರಲ್ಲಿ ಮಾಡಿರೋ ಕೆಲವು ಮಿಶ್ರಣ, ಮೂಗಿಗೆ ಕಿರಿಕಿರಿ ಮಾಡತ್ತೆ. ಉರಿ ಜಾಸ್ತಿಯಾಗತ್ತೆ.

ವಿಟಮಿನ್ ಈ ಎಣ್ಣೆ

cdn2.stylecraze.com
ಏನ್ ಮಾಡ್ಬೇಕು : ವಿಟಮಿನ್ ಈ ಎಣ್ಣೆ ಇರೋ ಪುಟ್ಟ ಪುಟ್ಟ ಕ್ಯಾಪ್ಸೂಲ್ ಸಿಗತ್ತೆ. ಅದ್ರಲ್ಲಿ ಒಂದಷ್ಟು ಹನಿಗಳು ಮಾತ್ರ ಎಣ್ಣೆ ಇರತ್ತೆ. ತಲೆನ ಮೇಲಕ್ಕೆ ಎತ್ತಿ ಮೂಗಿನ ಎರಡೂ ಹೊಳ್ಳೆಗೆ ಎರಡೆರಡು ಹನಿ ವಿಟಮಿನ್ ಈ ಎಣ್ಣೆ ಹಾಕ್ಕೊಳಿ.

ಎಷ್ಟುಸಲ : ದಿನಕ್ಕೆ ಎರಡು ಸಲ ಸಾಕು.

ಹೇಗ್ ಕೆಲ್ಸ ಮಾಡತ್ತೆ : ಚರ್ಮದಲ್ಲಿ ತೇವಾಂಶ ಸದಾ ಇರೋದಕ್ಕೆ, ಹೊಸ ಹೊಸ ಜೀವಕೋಶ ಉತ್ಪತ್ತಿಯಾಗಕ್ಕೆ ವಿಟಮಿನ್ ಈ ಎಣ್ಣೆ ಸಹಾಯ ಮಾಡತ್ತೆ. ಹಾಗಾಗಿ ಒಣಗಿರೋ ಮೂಗಲ್ಲಿ ಮ್ಯೂಕಸ್ ಬೇಗ ಉತ್ಪತ್ತಿ ಆಗೋಹಾಗ್ ನೋಡ್ಕೊಳತ್ತೆ. ಜೊತೆಗೆ ಉರಿ ಊತ ಇದನ್ನೆಲ್ಲಾ ತುಂಬಾ ಬೇಗ ಶಮನ ಮಾಡೋದ್ರಿಂದ ಮೂಗಲ್ಲಿ ಗಾಯ ಆಗಿದ್ರೆ, ನೋವಿಲ್ದೇ ವಾಸಿ ಆಗತ್ತೆ.

ಆಲೀವ್ ಎಣ್ಣೆ

cdn2.stylecraze.com
ಏನ್ ಮಾಡ್ಬೇಕು : ಶುದ್ಧ ಆಲೀವ್ ಎಣ್ಣೆನ ಡಾಪರ್ ಬಾಟಲ್ನಲ್ಲಿ ಹಾಕಿ, ಮೂಗಿನ ಎರಡೂ ಹೊಳ್ಳೆಗೆ ಒಂದೆರಡು ಹನಿ ಹನಿಸಿ.

ಎಷ್ಟು ಸಲ್ : ದಿನಕ್ಕೆ ಎರಡು ಸಲ ಸಾಕು.

ಹೇಗ್ ಕೆಲ್ಸ ಮಾಡತ್ತೆ : ಕೊಬ್ಬರಿ ಎಣ್ಣೆ ಥರನೇ ಆಲೀವ್ ಎಣ್ಣೆ ಕೂಡ ಚರ್ಮ ಒಣಗದೇ ಇರೋಹಾಗ್ ನೋಡ್ಕೊಳತ್ತೆ. ಒಣಗಿದ್ರೆ ತೇವಾಂಶ ಉತ್ಪತ್ತಿ ಮಾಡತ್ತೆ. ಜೊತೆಗೆ ಒಣಗಿದ ಮ್ಯೂಕಸ್ ಇಂದ ಆಗೋ ಕಿರಿಕಿರಿ, ಊತ ಇವನ್ನೆಲ್ಲಾ ಆದಷ್ಟು ಬೇಗ ಶಮನ ಮಾಡತ್ತೆ.

ಎಳ್ಳೆಣ್ಣೆ

cdn2.stylecraze.com
ಏನ್ ಮಾಡ್ಬೇಕು : ಎಳ್ಳೆಣ್ಣೆನ ಡಾಪರ್ ಬಾಟಲ್ನಲ್ಲಿ ಹಾಕಿ, ತಲೆನ ಎತ್ತಿ, ಮೂಗಿನ ಎರಡೂ ಹೊಳ್ಳೆಗೆ ಒಂದೊಂದು ಹನಿ ಹಾಕ್ಕೊಂಡು, ಆಳವಾಗಿ ಉಸಿರು ತೊಗೊಳಿ. ಆಗ ಎಣ್ಣೆ ಮೂಗಿನ ಆಳಕ್ಕೆ ಹೋಗತ್ತೆ.

ಎಷ್ಟು ಸಲ : ದಿನಕ್ಕೆ ಎರಡು ಸಲ ಸಾಕು.

ಹೇಗ್ ಕೆಲ್ಸ ಮಾಡತ್ತೆ : ಎಳ್ಳೆಣ್ಣೆನಲ್ಲಿ ವಿಟಮಿನ್ ಈ ಅಂಶ ದಂಡಿಯಾಗಿದೆ. ಹಾಗಾಗಿ ಚರ್ಮಕ್ಕೆ ಗಾಯ ಆಗಿದ್ರೆ ಬೇಗ ವಾಸಿಯಾಗಕ್ಕೆ, ಜೊತೆಗೆ ಒಣಗಿರೋ ಚರ್ಮನ ಬೇಗ ಗುಣಪಡ್ಸತ್ತೆ. ಅದ್ರಲ್ಲೂ ಮೂಗಿಗೆ ಚಿಕಿತ್ಸೆ ಮಾಡಕ್ಕೆ ಎಳ್ಳೆಣ್ಣೆ ಎಲ್ಲಾದಕ್ಕಿಂತನೂ ಉತ್ತಮ ಆಯ್ಕೆ.

ಹಬೆ ಚಿಕಿತ್ಸೆ

cdn2.stylecraze.com
ಏನ್ ಮಾಡ್ಬೇಕು : ಹಬೆಯಾಡ್ತಿರೋ ಬಿಸಿನೀರನ್ನ ಒಂದ್ ದೊಡ್ಡ ಪಾತ್ರೆನಲ್ಲಿ ಹಾಕಿ, ತಲೆ ಮತ್ತೆ ಕುತ್ತಿಗೆ ಮುಚ್ಚೋ ಹಾಗೆ ಟವಲ್ ಹಾಕ್ಕೊಂಡು, ಸುಮಾರು ಹತ್ತು ನಿಮಿಷ ಆಳವಾಗಿ ಉಸಿರಾಡ್ತಾ ಹಬೆ ತೊಗೊಳಿ. ನೀರು ತಣ್ಣಗಾಯ್ತು ಅನ್ಸಿದ್ಮೇಲೆ, ಟವಲ್ ತೆಗೆದು, ನಿಧಾನಕ್ಕೆ ಮೂಗಿನ ಹೊಳ್ಳೆಗಳ್ನ ಅರಳಿಸಿ, ಉಸಿರಾಡಿ.

ಎಷ್ಟು ಸಲ : ದಿನಕ್ಕೆ 2 ರಿಂದ 4 ಸಲ ತೊಗೋಬಹುದು.

ಹೇಗ್ ಕೆಲ್ಸ ಮಾಡತ್ತೆ : ಹಬೆ ತಾಕಿದಷ್ಟೂ, ಒಣಗಿರೋ ಚರ್ಮ ಒದ್ದೆಯಾಗಿ ಮೆತ್ತಗಾಗತ್ತೆ. ಮ್ಯೂಕಸ್ ಮತ್ತೆ ಆ ಒದ್ದೆ ಚರ್ಮದಲ್ಲಿ ಉತ್ಪತ್ತಿಯಾಗತ್ತೆ. ಜೊತೆಗೆ ಮೂಗಲ್ಲಿ ಗಾಯ ಆಗಿದ್ರೆ, ಹೀಗ್ ಹಬೆ ತೊಗೊಳೋದ್ರಿಂದ ಹಿತವಾಗಿರತ್ತೆ.

ತೇವಾಂಶ ಉತ್ಪತ್ತಿ ಮಾಡೋ ಉಪಕರಣ

cdn2.stylecraze.com
ಒಣ ಹವೆ ಇದ್ರೆ ಖಂಡಿತಾ ಮೊದ್ಲು ಮೂಗಿನ ಹೊಳ್ಳೆನಲ್ಲಿ ಪರಿಣಾಮ ಬೀರತ್ತೆ. ಅಲ್ಲೂ ಮ್ಯೂಕಸ್ ಒಣಗಿ, ಹಿಂಸೆ ಆಗತ್ತೆ. ಆದ್ರೆ ಹವಾಮಾನ ಹೇಗ್ ಬದ್ಲಾಯಿಸದು ಅಂತಿರಾ? ತುಂಬಾ ಸಿಂಪಲ್ ಕಣ್ರಿ. ನೀವು ಜಾಸ್ತಿ ಹೊತ್ತು ಕಾಲ ಕಳಿಯೋ ಕೋಣೆನಲ್ಲಿ ತೇವಾಂಶ ಉತ್ಪತ್ತಿ ಮಾಡೋ ಉಪಕರಣಗಳ್ನ, ವೇಪೋರೈಝರ್ ಇಟ್ಕೊಬೋದು. ಆ ಕೋಣೆನಲ್ಲಿ ಶಾಖ ಬರ್ಸೋ ಉಪಕರಣಗಳು ಇದ್ರೆ, ಈ ವಿಧಾನ ಅನುಸರಿಸಿ.

ಎಷ್ಟು ಸಲ : ದಿನದಲ್ಲಿ ಒಂದ್ ಎರಡು ಗಂಟೆ ಹಾಕಿ. ಮತ್ತೆ ಆರಿಸಿ. ಮತ್ತೆ ಹಾಕಿ. ಉಸಿರಾಡುವಾಗ ಗೊತ್ತಾಗತ್ತಲ್ಲಾ ಆಗೆಲ್ಲಾ ಹಾಕ್ಕೊಬೋದು.

ಹೇಗ್ ಕೆಲ್ಸ ಮಾಡತ್ತೆ : ಈ ಉಪಕರಣಗಳ ಒಳಗೆ ಹಾಕಿರೋದು ನೀರು. ಹಾಗಾಗಿ ಅದೇ ನೀರು ವತಾವರಣದಲ್ಲೂ ಸೇರ್ಕೊಂಡು ತೇವಾಂಶ ಜಾಸ್ತಿಮಾಡತ್ತೆ. ಅಥ್ವ ಸಮವಾಗಿರೋಹಾಗ್ ನೋಡ್ಕೊಳತ್ತೆ.

ಆವಿ ಸ್ನಾನ

cdn2.stylecraze.com
ಏನ್ ಮಾಡ್ಬೇಕು : ಆವಿ ಸ್ನಾನ ಅಂದ್ರೆ ಯಾರಿಗ್ ಇಷ್ಟ ಆಗಲ್ಲ ಹೇಳಿ? ಬೆಚ್ಹಗೆ ಜೊತೆಗೆ ಹಿತವಾಗಿರತ್ತೆ. ಪೂರ್ತಿಯಾಗಿ ಆವಿಸ್ನಾನ ಮಾಡಕ್ಕೆ ಆಗಲ್ಲ ಅನ್ನೋರು ಹೀಗ್ ಮಾಡ್ಬೋದು. ಬಿಸಿನೀರಲ್ಲಿ ಅದ್ದಿರೊ ಮಂದವಾದ್ ಟವಲ್ಲಿಗೆ ಸುಗಂಧದ್ ಎಣ್ಣೆ ಒಂದೆರಡು ಹನಿ ಹಾಕಿ, ಟವಲ್ ತೊಟ್ಟಿಕ್ಕೋದ್ ನಿಂತಮೇಲೆ, ತಲೆಗೆ ಪೇಟದ್ ಥರ ಸುತ್ಕೊಂಡು, ಆರಾಮಾಗಿ ಕಣ್ಮುಚ್ಕೊಂಡು ಕೂತ್ಕೊಳಿ. ಆದ್ರೆ ಜಾಸ್ತಿ ಹೊತ್ತು ಹೀಗಿರ್ಬೇಡಿ. ಕಾಲುಗಂಟೆ ಸಾಕು. ಇಲ್ಲ ಅಂದ್ರೆ ಒಣ ಮೂಗು, ಸೋರೋ ಮೂಗಾಗತ್ತೆ.

ಹೇಗ್ ಕೆಲ್ಸ ಮಾಡತ್ತೆ : ಆವಿ ನಮ್ ಚರ್ಮದ್ ಕಣ ಕಣಕ್ಕೂ ಆಳವಾಗಿ ತೂರತ್ತೆ. ಅದ್ರಲ್ಲೂ ಬಿಸಿನೀರಿನ್ ಆವಿ, ಮೃದುವಾಗಿರೊ ತಲೆಬುರುಡೆ ಚರ್ಮದ್ ಮೂಲಕ ಒಳಕ್ಕೆ ಹೋಗಿ, ಮೂಗಿಗೆ ಕನೆಕ್ತ್ ಆಗಿರೋ ನರಗಳನ್ನ, ಜೀವಕೋಶಗಳ್ನ ಬೆಚ್ಚಗೆ ಮಾಡಿ, ಸಕ್ರಿಯಗೊಳ್ಸತ್ತೆ. ಆಗ ಮೂಗಿನ ಹೊಳ್ಳೆನಲ್ಲಿ ತಂತಾನೇ ಮ್ಯೂಕಸ್ ಉತ್ಪತ್ತಿ ಆಗತ್ತೆ.

ಅಪ್ಪಿತಪ್ಪಿನೂ ಇದನ್ನ ಮಾಡ್ಬೇಡಿ

ಸುಮಾರ್ ಜನ, ನೆಗಡಿ ಆದಾಗ ಅಥ್ವ ಮೂಗು ಕಟ್ಕೊಂಡಿದೆ, ಒಣಗಿದೆ ಅಂತ ವಿಕ್ಸ್, ಪೆಟ್ರೋಲಿಯಂ ಜೆಲ್ಲಿ ಇದನ್ನೆಲ್ಲಾ ಮೂಗಿನ ಹೊಳ್ಳೆ ಒಳಗೆ ಹಾಕಿ ಸವರ್ತಾರೆ. ಅದು ತುಂಬಾ ತಪ್ಪು. ಅದ್ರಿಂದ ಚರ್ಮಕ್ಕೆ ಸಿಕ್ಕಾಪಟ್ಟೆ ಹಾನಿಯಾಗತ್ತೆ. ಗಾಯ ಇನ್ನೂ ಕೀತ್ಕೊಳತ್ತೆ. ಅದ್ರಲ್ಲೂ ಪೆಟ್ರೋಲಿಯಂ ಜೆಲ್ಲಿ ಮೂಗಿನ್ ಒಳ್ಗೆ ಹಚ್ಚಿದ್ರೆ, ಒಂದ್ ಥರದ್ ನ್ಯುಮೋನಿಯ ಖಾಯಿಲೆ ಬರೋ ಸಾಧ್ಯತೆ ಇದೆ. ಹಾಗಾಗಿ ಇಂಥ ತಪ್ಪು ಮಾಡ್ಬೇಡಿ.

ಗೊತ್ತಾಯ್ತಲ್ಲ. ಮೂಗು ಒಣಗಿ ಗಾಯ ಗೀಯ ಆಗಿದ್ರೆ ಹೇಗ್ ಸರಿಮಾಡ್ಕೊಬೇಕು ಅಂತಾ. ಸರಳ ಉಪಾಯಗಳು.