ಎಲ್ಲರೂ ಮುಖವಾಡ ಹಾಕಿಕೊಂಡಿರುವವರೇ. ಇಲ್ಲ ಎನ್ನುವವರೂ ಅಷ್ಟೆ. ಜೀವನದ ಬೇರೆ ಬೇರೆ ಹಂತಗಳಲ್ಲಿ ನಮ್ಮ ಮನುಷ್ಯತ್ವವನ್ನು ತಡೆದಿಟ್ಟುಕೊಂಡಿರು ಎಂದು ಪ್ರಪಂಚ ನಮಗೆ ಹೇಳುತ್ತದೆ. ಆದರೂ ಅದು ತನ್ನದೇ ರೀತಿಯಲ್ಲಿ ಹೊರಬರುತ್ತದೆ. ಬೇಡವೆಂದರೂ ಬರುತ್ತದೆ.

ಹಾಗೆ ಹೊರಬರುವ ಸನ್ನಿವೇಶಗಳನ್ನು ಈ 25 ಫೋಟೋಗಳು ನಿಮ್ಮ ಮುಂದೆ ತಂದಿಡಲಿವೆ. ಇದನ್ನು ನಿಮಗಾಗಿ ನಾನು ಇಲ್ಲಿ ಹಾಕುತ್ತಿರುವುದರ ಉದ್ದೇಶ ಇಷ್ಟೇ: ನಾವು ಮೊಟ್ಟಮೊದಲಿಗೆ ಮನುಷ್ಯರು ಎಂದು ನೆನಪಿಸಲು. ಮಿಕ್ಕಿದ್ದೆಲ್ಲ – ನಮ್ಮ ಕಸುಬು, ನಮ್ಮ ದೇಶ, ನಮ್ಮ ಧರ್ಮ, ನಮ್ಮ ದುಡ್ಡು, ನಮ್ಮ ಅಂತಸ್ತು – ಎಲ್ಲ – ನಮ್ಮ ಮನುಷ್ಯತ್ವವನ್ನು ಮರೆಮಾಚುವಂಥವೇ. ಪರದೆ ಸರಿದರೆ ಮನುಷ್ಯತ್ವ ಹೊಳೆಯುತ್ತದೆ…

1. ಆಸ್ಟ್ರೇಲಿಯಾನಲ್ಲಿ 2009ನೇ ಇಸವಿಯಲ್ಲಿ ಕಾಳ್ಗಿಚ್ಚು ತಡೆಯುವ ತಂಡದ ಈತನಿಗೆ ಹತ್ತಿರದ ಕ್ವಾಲಾ ಒಂದರ ಬಾಯರಿಕೆ ಹೇಗೆ ಅರ್ಥವಾಯಿತು?

2. 1967ರಲ್ಲಿ ವಾಷಿಂಗ್ಟನ್ ಡೀಸಿಯ ಪೆಂಟಗನ್ ನಲ್ಲಿ ಯುದ್ಧವನ್ನು ವಿರೋಧಿಸಿ ಒಂದು ಪ್ರತಿಭಟನೆ ನಡೆಯುತ್ತೆ. ಅದರಲ್ಲಿ ಈ 17 ವರ್ಷದ ಹುಡುಗಿ ಮಿಲಿಟರಿಯವರ ಗನ್ನುಗಳನ್ನು ಒಂದು ಹೂವಿಂದ ಎದುರಿಸಿದಾಗ ಅವರ ಕರುಳು ಕಿತ್ತಿ ಬರುತ್ತದೆ.

3. ಕೊರಿಯಾ ಯುದ್ಧಕ್ಕೆ ಹೋಗಿದ್ದ ಗಂಡ ಜೋಸೆಫ್ ಗ್ಯಾಂಟ್ 63 ವರ್ಷದ ನಂತರ ಬಂದಾಗ ಸತ್ತಿರುತ್ತಾನೆ. ಆಗ ಮುದುಕಿ ಅಳುವ ಮಗುವಾಗುತ್ತಾಳೆ.

4. ಅದೇ ಕೊರಿಯಾ ಯುದ್ಧ ನಡೀತಿದ್ದಾಗ ಒಬ್ಬ ಅಮೇರಿಕದ ಯೋಧ ಸಾವಿನ ವ್ಯಾಪಾರದ ನಡುವೆ ಈಗೀಗ ಹುಟ್ಟಿ ಅನಾಥವಾಗಿದ್ದ ಬೆಕ್ಕೊಂದಕ್ಕೆ ಹಾಲುಣಿಸಿ ಬದುಕಿಸುತ್ತಾನೆ.

5. ಚೈನಾನಲ್ಲಿ ರೈಲಿಗೆ ಕಾಯುತ್ತಿರುವಾಗ ಮುದುಕನೊಬ್ಬ ಕುಸಿದು ಬೀಳುತ್ತಾನೆ. ಹುಟ್ಟು-ಸಾವುಗಳ ಇರುವಿಕೆಯನ್ನೇ ಪ್ರಶ್ನಿಸುವ ಬೌದ್ಧ ಭಿಕ್ಷುವೊಬ್ಬ ಹಿಂದು-ಮುಂದು ನೋಡದೆ ಗಾಬರಿಗೊಂಡು ನಾಡಿ ಪರೀಕ್ಷೆ ಮಾಡುತ್ತಾನೆ.

6. ರೇಡಿಯೇಶನ್ ಸ್ಕ್ರೀನಿಂಗಿಗಾಗಿ ಒಳಗೆ ಹೋಗಿರುವ ಈ ಜಪಾನ್ ಹುಡುಗಿಗೆ ತನ್ನ ನಾಯೀನ ಮತ್ತೆ ನೋಡಕ್ಕಾಗುತ್ತೋ ಇಲ್ಲವೋ ಅನ್ನೋ ಚಿಂತೆಯಾಗುತ್ತದೆ.

7. ಉತ್ತರ ಕೊರಿಯಾದ ತನ್ನ ನೆಂಟನನ್ನು ಬೀಳ್ಕೊಡುವಾಗ ಈ ದಕ್ಷಿಣ ಕೊರಿಯಾದ ಮುದುಕನಿಗೆ ಕಣ್ಣು ತುಂಬಿ ಬಂತು. ಅಕ್ಟೋಬರ್ 2010ರಲ್ಲಿ 3 ದಿನದ ಮಟ್ಟಿಗೆ ಗಡಿಯ ಆಚೀಚಿನ ನೆಂಟರಿಷ್ಟರಿಗೆ ಭೇಟಿಯಾಗುವ ಅವಕಾಶ ಒದ್ದಗಿಸಿರುತ್ತಾರೆ.

8. ವ್ಯಾಂಕೂವರ್ ನಲ್ಲಿ ಪೋಲೀಸೊಬ್ಬನು ಜೂನ್ 2011ರಲ್ಲಿ ಈ ಹುಡುಗಿಯನ್ನು ಹೊಡೆದು ಬೀಳಿಸುತ್ತಾನೆ. ಆಗ ಈ ಹುಡುಗ ಅವಳಿಗೆ ಹಲ್ಲೆ ನಡೆಯುತ್ತಿರುವ ಜಾಗದಲ್ಲೇ ಹೀಗೆ ಮುತ್ತು ಕೊಟ್ಟು ದ್ವೇಷಕ್ಕೂ ಪ್ರೇಮಕ್ಕೂ ಇರುವ ವ್ಯತ್ಯಾಸವನ್ನು ತೋರಿಸುತ್ತಾನೆ. ಪೋಲೀಸರಿಗೆ ಮನುಷ್ಯತ್ವ ನೆನಪಾದಂತಾಗಿ ಸುಮ್ಮನೆ ನಿಂತುಬಿಡ್ತಾರೆ.

9. ಅಮೇರಿಕದ ಪ್ರೆಸಿಡೆಂಟ್ ರೂಸ್ವೆಲ್ಟನ್ನು ಮಣ್ಣು ಮಾಡುವ ದಿನ ಅವನ ಆಪ್ತ ಸ್ನೇಹಿತನಾದ ನೌಕಾಪಡೆಯ ಗ್ರಹಮ್ ಜ್ಯಾಕ್ಸನ್ ಅಕಾರ್ಡಿಯನ್ ಬಾರಿಸಲು ಮುಂದಾಗುತ್ತಾನೆ. ಆದರೆ ಅವನಿಗೆ ತನ್ನ ಭಾವನೆಗಳ್ನ ತಡೆದುಕೊಳೋದಕ್ಕೆ ಆಗಲ್ಲ.

10. ಚೆಚೆನ್ಯಾನಲ್ಲಿ ಯುದ್ಧ ನಡೀತಿರುವಾಗ ಮನೆ-ಮಠ ಎಲ್ಲ ನಾಶವಾಗಿ ಈ ಪಿಯಾನೋ ಅಬ್ಬೇಪಾರಿಯಾಗಿ ನಿಂತಿರುತ್ತದೆ. ಗುಂಡಿನ ಸದ್ದಿನ ನಡುವೆಯೂ ರಷ್ಯಾ ಯೋಧನೊಬ್ಬನಿಗೆ ನುಡಿಸದೆ ಇರಲಾಗುವುದಿಲ್ಲ.

11. ಅಕ್ಟೋಬರ್ 16, 2013ರಂದು ತನ್ನ ಮದುವೆಯ ವಾರ್ಷಿಕೋತ್ಸವದ ದಿನ ಈಕೆ ಗಂಡನನ್ನು ಮಾತನಾಡಿಸಕ್ಕೆ ಸ್ಮಶಾನಕ್ಕೆ ಬರ್ತಾಳೆ… ಹಳೆಯದೆಲ್ಲ ನೆನಪಾಗಿ ಮಗುವಿನಂತೆ ಅತ್ತುಬಿಡ್ತಾಳೆ…

12. ಜೂನ್ 5, 1989ರಂದು ಚೈನಾದ ಟಿಯಾನನ್ಮೆನ್ ಚೌಕದಲ್ಲಿ ಯುದ್ಧದ ಟ್ಯಾಂಕುಗಳ್ನ ಎದುರಿಸಿ ಒಬ್ಬಂಟಿಯಾಗಿ ನಿಂತು ಇವನು ಮನುಷ್ಯತ್ವಕ್ಕೂ ಚೈನಾ ಸರ್ಕಾರದ ಅಮಾನುಷ ನಡತೆಗೂ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತಾನೆ.

13. ಬ್ರಜ಼ಿಲ್ ದೇಶದ ಡಿಯೆಗೊ ಟೊರ್ಕ್ವಾಟೋ ಅನ್ನುವ ಈ 13 ವರ್ಷದ ಹುಡುಗ ತನ್ನ ಸಂಗೀತದ ಗುರು ಮಣ್ಣಾದಾಗ ಅವನಿಗಾಗಿ ಸಂಗೀತ ಬಾರಿಸಲು ಹೊರಡುತ್ತಾನೆ. ಒಂದೊಂದು ಸ್ವರದಲ್ಲೂ ಗುರು ನೆನಪಾಗಿ ಬಿಕ್ಕಿ ಬಿಕ್ಕಿ ಅತ್ತುಬಿಡುತ್ತಾನೆ.

14. ಎರಡನೇ ಮಹಾಯುದ್ಧದಲ್ಲಿ ನಾಜ಼ಿಗಳು ಪ್ಯಾರಿಸ್ನ ತಮ್ಮದಾಗಿಸಿಕೊಂಡಾಗ ಈ ಫ್ರೆಂಚ್ ಗಂಡಸಿಗೆ ಅಳು ತಡೆದುಕೊಳ್ಳಲು ಆಗುವುದಿಲ್ಲ.

15. ಮಾರ್ಚ್ 2011ರಲ್ಲಿ ಜಪಾನನ್ನು ನರಕವಾಗಿಸಿದ ಸುನಾಮಿಯಲ್ಲಿ 4 ದಿನ ಕಾಣೆಯಾಗಿದ್ದ 4 ತಿಂಗಳ ಮಗು ಸಿಕ್ಕಾಗ ಈತನ ಮನುಷ್ಯತ್ವ ಉಕ್ಕಿ ಬರುತ್ತದೆ.

16. ಬಾಂಗ್ಲಾದೇಶದಲ್ಲಿ ಒಂದು ಫ್ಯಾಕ್ಟರಿ ಕುಸಿದು ಬಿದ್ದು ಹಲವರು ಸತ್ತಾಗ ಈ ಜೋಡಿ ತನ್ನ ಕೊನೆಯ ಅಪ್ಪುಗೆಯಲ್ಲಿರುತ್ತದೆ.

17. ಮೇ 2008ರಲ್ಲಿ ಚಂಡಮಾರುತ ಹೊಡೆದು ಮಯಾನ್ಮಾರ್ (ಬರ್ಮಾ) ನಲ್ಲಿ ಅಸಂಖ್ಯಾತ ಜನರು ಸತ್ತಾಗ ಆ ಸ್ಮಶಾನ ಮೌನದಲ್ಲಿ ಈ ಹುಡುಗ ಬಿಕ್ಕಿ ಬಿಕ್ಕಿ ಅತ್ತು ಮಳೆಯಲ್ಲಿ ನೆನೆಯುತ್ತಾನೆ.

18. ವ್ಯಾಂಕೂವರ್ನಲ್ಲಿ 9/11 ನಲ್ಲಿ ಸತ್ತವರ ನೆನಪಿನಲ್ಲಿ ಆಯೋಜಿಸಿದ್ದ ಸಂಗೀತ ಕಚೇರಿಯಲ್ಲಿ ಈಕೆಯ ಪಿಟೀಲು ವಾದನದಲ್ಲಿ ಕಂಬನಿಯ ತೇವವಿರುತ್ತದೆ.

19. ಮಾರ್ಚ್ 2011ರಲ್ಲಿ ಸುನಾಮಿಯಿಂದ ತನ್ನ ಪ್ರಪಂಚವೇ ಕುಸಿದು ಬಿದ್ದಂತಾಗಿ ಈಕೆ ಒಬ್ಬಳೇ ಅಳುವಿನ ಮೊರೆ ಹೋಗುತ್ತಾಳೆ.

20. ಎಲ್ಲರನ್ನು ನಗಿಸುವ ಈ ಬೊಂಬೆಯೊಳಗೆ ಸನ್ನಿವೇಶಗಳ ಕೈಗೊಂಬೆಯೊಂದಿರುತ್ತದೆ.

21. ಚೈನಾದ ಪ್ಯಾರಾಮಿಲಿಟರಿಯ ಯೋಧನೊಬ್ಬ ಕೆಲಸಕ್ಕೆ ಹೊರಡುವ ಮುನ್ನ ತನ್ನ ಹೆಂಡತಿ-ಮಕ್ಕಳನ್ನು ನೆನಪಿಸಿಕೊಳ್ಳಬಾರದು ಎಂದಿದ್ದರೂ ನೆನಪಿಗೆ ಬರುತ್ತಾರೆ.

22. ರಷ್ಯಾದ ಯೋಧನೊಬ್ಬ ತಾನು ಯುದ್ಧದಲ್ಲಿ ಬಳಸಿದ ಟ್ಯಾಂಕ್ ಒಂದಕ್ಕೆ ತಲೆಬಗ್ಗಿಸಿ ತನ್ನ ಗೌರವ ಸಲ್ಲಿಸುತ್ತಾನೆ. ಏಕೆಂದರೆ ಅದರಲ್ಲಿ ತನ್ನ ಜೊತೆಯಿದ್ದು ಈಗಿಲ್ಲದವರ ನೆನಪಡಗಿರುತ್ತದೆ. ಈಗ ಈ ಟ್ಯಾಂಕ್ ಒಂದು ಮ್ಯೂಸಿಯಂ ಆಗಿದೆ.

23. ತನ್ನ ಪಕ್ಕದ ಹೆಣ ತನ್ನ ಗೆಳೆಯನದು ಅಂತ ತಿಳಿದ ಸಾರ್ಜೆಂಟ್ ಕೆನ್ ಕೊಜ಼ಾಕೀವಿಜ಼್ (23) ತನ್ನ ಭಾವನೆಗಳನ್ನ ತಡೆದುಕೊಳಲ್ಲಾರದೆ ಹೋಗ್ತಾನೆ.

24. 2011ರಲ್ಲಿ ಕಾಯ್ರೋನಲ್ಲಿ ದಂಗೆಗಳಾದಾಗ ಕ್ರೈಸ್ತ ಮತದವರು ಮುಸಲ್ಮಾನರನ್ನು ಕಾಪಾಡುತ್ತಾರೆ. ಇಬ್ಬರಿಗೂ ಸಮಾನವಾದ ಮನಷ್ಯತ್ವವಲ್ಲದೆ ಇನ್ನೇನು ಅವರನ್ನು ಪ್ರೇರಿಸಿದ್ದು?

25. ಅಫ್ಘಾನಿಸ್ತಾನದಲ್ಲಿ ಗನ್ ಹಿಡಿದು ಯುದ್ಧ ಮಾಡುತ್ತಿರುವ ಯೋಧನಿಗೆ ಹೋಗಿ ಈ ತಾತ ಟೀ ಕೊಟ್ಟು ಅವನ ಮುಖವಾಡವನ್ನು ಕಳಚುತ್ತಾನೆ.

ಚಿತ್ರಗಳು: emlii, lifebuzz, unmotivating