ಭಾರತದ ಎರಡು ಪ್ರಮುಖವಾದ ಮಹಾ ಕಾವ್ಯಗಳಲ್ಲಿ ಮಹಾಭಾರತ ಎಲ್ಲಾ ಯುಗಕ್ಕೂ ಪ್ರಸ್ತುತ ಅನ್ಬೋದು. ಅದ್ರಲ್ಲಿ ಬರೋ ಒಂದೊಂದು ಪಾತ್ರನೂ ಒಂದೊಂದು ಸಂದೇಶ ಸಾರತ್ತೆ. ಅದೇ ಪಟ್ಟಿನಲ್ಲಿ ಬರೋ ಒಬ್ಬ ಮಹಾನ್ ವ್ಯಕ್ತಿ ವಿದುರ. ಬುದ್ಧಿವಂತಿಕೆಗೆ, ತಾಳ್ಮೆಗೆ ಇನ್ನೊಂದ್ ಹೆಸರೇ ಈ ವಿದುರ. ಹೆಚ್ಚು ಜನಕ್ಕೆ ಗೊತ್ತಿಲ್ದಿರೋ ವಿದುರನ ಬಗ್ಗೆ  ಅತೀ ಮುಖ್ಯ ಅನ್ಸೋ ವಿಷಯಗಳನ್ನ ನಿಮ್ಗೋಸ್ಕರ ಇಲ್ಲಿ ಕೊಟ್ಟಿದಿವಿ. ಓದಿದದ್ಮೇಲೆ ಮಹಾಭಾರತದಲ್ಲಿ ವಿದುರನ ಮಹತ್ವ ಏನು ಅಂತ ನಿಮ್ಗೂ ಗೊತ್ತಾಗತ್ತೆ.

ಹಸ್ತಿನಾಪುರದ ಮಹಾರಾಜರಾದ ಧೃತರಾಷ್ಟ್ರ ಮತ್ತೆ ಪಾಂಡುವಿನ ಮಲ ಸಹೋದರನೇ ವಿದುರ. ಹುಟ್ಟಿದ್ದು ವ್ಯಾಸ ಮಹರ್ಷಿ ಮತ್ತೆ ದಾಸಿ ಸೂದ್ರಿಯ ಮಗನಾಗಿ. ಅಂದ್ರೆ ಸೂತ ಪುತ್ರನಾಗಿ.

1. ಪಾಂಡು ಮತ್ತು ಧೃತರಾಷ್ಟ್ರ ಹುಟ್ಟುವಾಗ್ಲೇ ದುರ್ಬಲರು

ಅಂಬಿಕೆ ಮತ್ತೆ ಅಂಬಾಲಿಕೆ ಇಬ್ರೂ ಹಸ್ತಿನಾಪುರದ ರಾಜ ವಿಚಿತ್ರವೀರ್ಯನ ರಾಣೀರು. ಆದರೆ ಈ ದಂಪತಿಗಳ್ಗೆ ಮಕ್ಕಳಾಗೋ ಮೊದ್ಲೇ  ವಿಚಿತ್ರವೀರ್ಯ ಸತ್ತೋಗ್ತಾನೆ. ಆಗ ರಾಜಮಾತೆ ಸತ್ಯವತಿ, ಹೇಗಾದ್ರು ಮಾಡಿ ಕುರವಂಶಾನ  ಬೆಳಿಸ್ಬೇಕು ಅನ್ನೋ ಉದ್ದೇಶದಿಂದ, ತಾನು ಕುರುಕುಲದ ರಾಜ ಶಂತನುವನ್ನ ಮದುವೆಯಾಗೋ ಮೊದ್ಲು ಪರಾಶರ ಮುನಿಗಳಿಂದ ಗರ್ಭ ಧರಿಸಿ ಪಡೆದಿದ್ದ ವ್ಯಾಸ ಮಹರ್ಷಿನ ಕರೆಸಿ, ತನ್ನ ಇಬ್ರು ಸೊಸೇರಿಗೂ ತಾಯ್ತನ ಸಿಗೋಹಾಗೆ  ಮಾಡು ಅಂತ ಕೇಳ್ಕೊತಾಳೆ. ಇದಕ್ಕೆ ಆಗಿನ್ ಕಾಲ್ದಲ್ಲಿ ನಿಯೋಗ ಮಾಡ್ಸಿ ಮಕ್ಕಳನ್ನ ಪಡಿಯೋದು ಅಂತಿದ್ರು. ತಾಯಿ ಏನೋ ಹೇಳ್ಬಿಟ್ಳು…  ಆದ್ರೆ ವ್ಯಾಸರಿಗೆ ಇಬ್ಬಂದಿ ಪರಿಸ್ಥಿತಿ. ಕಾಡಿನಲ್ಲಿ ಆಶ್ರಮ ಕಟ್ಕೊಂಡು ಸರ್ವಸಂಗ ಪರಿತ್ಯಾಗಿ ಥರ ಬದುಕ್ತಿರೋ ತನ್ನಿಂದ ಹೇಗೆ ಈ ಕೆಲ್ಸ ಆಗತ್ತೆ ಅಂತ. ಜೊತೆಗೆ ಅಂಬಿಕೆ ಮತ್ತೆ ಅಂಬಾಲಿಕೆಯರ್ಗೂ ಮುಜುಗರ. ಆಶ್ರಮ ವಾಸಿ ಅಂದ್ಮೇಲೇ ರಾಜಮನೆತನದವ್ರ ಥರ ನಾಜೂಕಾಗಿರ್ತಾರ? ಖಂಡಿತಾ ಇಲ್ಲ. ಜಟೆ ಬಿಟ್ಕೊಂಡು, ನಾರುಮಡಿ ಉಟ್ಕೊಂಡು, ಒಟ್ನಲ್ಲಿ ಈ ಇಬ್ರು ಸುಕುಮಾರಿ ರಾಣೀರ  ಕಣ್ಣಿಗೆ ಭಯಂಕರ್ವಾಗಿ ಕಾಣ್ತಾರೆ. ಹಾಗಾಗಿ ವ್ಯಾಸ ಮಹರ್ಷಿ ಮುದ್ಲು ನಿಯೋಗಕ್ಕೆ ಅಂತ ಅಂಬಿಕೆ ಹತ್ರ ಬಂದಾಗ, ಅವ್ಳು ಭಯಂದಿದ ಗಟ್ಟಿಯಾಗಿ ಕಣ್ಮುಚ್ಚಿಬಿಡ್ತಾಳೆ. ಇನ್ನು ಅಂಬಾಲಿಕೆ ಕಣ್ಣು ಮುಚ್ಲಿಲ್ಲ ಅಂದ್ರೂ ಭಯದಿಂದ ಥರ ಥರ ಅಂತ ನಡುಗೋಗ್ತಾಳೆ. ಆದ್ದರಿಂದ್ಲೇ ಅಂಬಿಕೆ ಮಗ(ಧೃತರಾಷ್ಟ್ರ) ದೃಷ್ಟಿಹೀನನಾಗಿ ಹುಟ್ತಾನೆ ಮತ್ತೆ ಅಂಬಾಲಿಕೆ ಮಗ(ಪಾಂಡು) ಬಲಹೀನನಾಗಿ ಹುಟ್ತಾನೆ ಅಂತ ಹೇಳ್ತಾರೆ.

2. ವಿದುರ ಹುಟ್ಟಿದ್ದು ಹೀಗೆ

ವ್ಯಾಸ ಸತ್ಯ ಹೇಳ್ದಾಗ ಸತ್ಯವತಿಗೆ ತುಂಬಾ ಚಿಂತೆಯಾಗತ್ತೆ. ಐಬಿರೋ ಮಕ್ಕುಳು ಹುಟ್ಟುದ್ರೆ ರಾಜ್ಯಭಾರ ಮಾಡೋರು ಯಾರು ಅಂತ ಯೋಚ್ನೆಯಾಗತ್ತೆ. ಆಗ ಅವಳು ವ್ಯಾಸನ್ನ ಒಪ್ಸಿ, ಅಂಬಿಕೆಗೆ ಇನ್ನೊಂದ್ಸಲ ನಿಯೋಗ ಮಾಡು ಅಂತ ಕೇಳ್ತಾಳೆ. ಮೊದ್ಲೇ ಹೆದುರ್ಕೊಂಡಿದ್ದ ಅಂಬಿಕೆ, ಈ ಸಲ ತನ್ನ ನಂಬಿಕಸ್ಥ ದಾಸೀನ ವ್ಯಾಸನ ಹತ್ರ ಕಳಿಸ್ತಾಳೆ. ಆ ದಾಸಿ ತುಂಬಾ ಧೈರ್ಯವಂತೆ. ಜೊತೆಗೆ ತನ್ನ ರಾಣಿಗೆ ನಿಷ್ಠೆಯಿಂದಯಿರ್ತಾಳೆ. ವ್ಯಾಸನ್ನ ನೋಡಿ ಭಯ ಪಡಲ್ಲ. ಹಾಗಾಗಿ, ವಿದುರನಂಥ ಆರೋಗ್ಯವಂತ ಮಗೂಗೆ ಜನ್ಮ ಕೊಡ್ತಾಳೆ.

3. ವಿದುರನಿಗೆ ಎಲ್ಲಾ ಅರ್ಹತೆಗಳಿದ್ರೂ ರಾಜನ ಪಟ್ಟ ಸಿಗ್ಲಿಲ್ಲ

ವಿದುರ, ಧೃತರಾಷ್ಟ್ರ ಪಾಂಡು ಬೆಳೆದಿದ್ದು,ಪಳಗಿದ್ದು ಎಲ್ಲಾ ಭೀಷ್ಮ ಪಿತಾಮಹರ ಕೈಕೆಳಗೆ. ಆದ್ರೂ ವಿದುರನ ತಂದೆ ತಾಯಿಯರ ಪೈಕಿ ಒಬ್ರೂ ರಾಜಮನೆತನದವ್ರಲ್ವಲ್ಲ…  ಹಾಗಾಗಿ ಈತನಿಗೆ ಪಟ್ಟ ಕಟ್ಟಲ್ಲ. ಬದಲಾಗಿ ತನ್ನ ಸಹೋದರರಿಗೆ ಸಲಹೆಗಾರನಾಗಿ, ಮಹಾಮಂತ್ರಿಯಾಗಿ ಕಾರ್ಯ ನಿರ್ವಹಿಸೋ ಜವಾಬ್ದಾರಿನ ವಹಿಸಲಾಗತ್ತೆ. ಮೊಮ್ಮಕ್ಕಳು ಬೆಳೆದು ವಯಸ್ಸಿಗೆ ಬಂದ್ಮೇಲೆ, ಎಲ್ಲರ ವಿದ್ಯಾಭ್ಯಾಸ ಹೇಗ್ ನಡೆದಿದೆ? ಯಾರಿಗೆ ಯಾವ ವಿಶೇಷತೆ ಇದೆ ಅಂತ ಸತ್ಯವತಿ ಭೀಷ್ಮನ್ನ ಕೇಳ್ತಾಳೆ. ಆಗ ಭೀಷ್ಮ ಧೃತರಾಷ್ಟ್ರನ ದೈಹಿಕ ಶಕ್ತಿ, ಪಾಂಡುವಿನ ಸೇನಾಬಲ ಮತ್ತೆ ವಿದುರನ ಬುದ್ಧಿವಂತಿಕೇನ ಹೊಗಳ್ತಾರೆ. ಆದ್ರೆ ಪಟ್ಟಕಟ್ಟೋ ವಿಷ್ಯಕ್ಕೆ  ಬಂದಾಗ ವಿದುರ ಒಂದು ಆನೇನ ರಾಜ ಸಭೆಗೆ ತಂದು, ಅಣ್ಣಂದಿರ ಸಾಮರ್ಥ್ಯ ಪರೀಕ್ಷೆ ಮಾಡ್ತಾನೆ, ಹಿರಿಯ ಆದ್ರೂ ಧೃತರಾಷ್ಟ್ರಂಗೆ ದೃಷ್ಟಿ ಇರಲ್ವಲ್ಲ, ಪರೀಕ್ಷೆನ ಎದುರ್ಸಕ್ಕಾಗಲ್ಲ. ಹಾಗಾಗಿ ಮಹಾಮಂತ್ರಿ ಸ್ಥಾನದಲ್ಲಿದ್ದ ವಿದುರ, ಪಾಂಡುನೇ ರಾಜನಾಗಕ್ಕೆ ತಕ್ಕವನು  ಅಂತ ತನ್ನ ಅಭಿಪ್ರಾಯ ಹೇಳ್ತಾನೆ. ಧೃತರಾಷ್ಟ್ರಂಗೆ ವಿದುರ ಹೇಳ್ತಿರೋದ್ರಲ್ಲಿ ಸತ್ಯ ಇದೆ ಅಂತ ಗೊತ್ತಿದ್ರೂ ಹೀಗ್ ಮಾಡ್ಬಿಟ್ನಲ್ಲ ಅಂತ ಅವನ ಮೇಲೆ ಅಸಮಾಧಾನ ಹುಟ್ಟತ್ತೆ.

4. ರಾಜ ಆಗ್ಲಿಲ್ಲ, ಆದ್ರೆ ಎಲ್ಲಾ ಆಡಳಿತದ ಭಾರ ವಿದುರನ ಹೆಗಲ್ಮೇಲೇ ಇತ್ತು

ಪಾಂಡುಗೆ ಒಂದು ಹಂತದಲ್ಲಿ ಜೀವನದಲ್ಲಿ ಜಿಗುಪ್ಸೆ ಬಂದು, ಸಿಂಹಾಸನ ಬಿಟ್ಟು, ತನ್ನ ರಾಣೀರನ್ನ ಕರ್ಕೊಂಡು ಕಾಡಲ್ಲಿ ವಾಸಮಾಡಕ್ಕೆ ಹೊರಟುಹೋಗ್ತಾನೆ. ಮುಂದೆ ಅಲ್ಲೇ ಸತ್ತೋಗ್ತಾನೆ ವಾಪಸ್ ಬರಲ್ಲ. ಆ ಸಂದರ್ಭದಲ್ಲಿ ಬೇರೆ ವಿಧಿ ಇಲ್ದೇ ಧೃತರಾಷ್ಟ್ರಂಗೇ ರಾಜನ ಪಟ್ಟ ಕಟ್ತಾರೆ. ಆದರೆ ಹೆಜ್ಜೆ ಹೆಜ್ಜೆಗೂ ರಾಜ್ಯಭಾರದ ತಂತ್ರ, ಸಲಹೆ ಸೂಚನೆ ಕೊಡ್ತಾ ಮಾರ್ಗದರ್ಶನ ಮಾಡಿದ್ದು ವಿದುರ. ಹೀಗೆ, ಧೃತರಾಷ್ಟ್ರನ ಮಗ ದುರ್ಯೋಧನ ಪಟ್ಟಕ್ಕೆ ಬರೋವರ್ಗೂ ಆತನ ಕಣ್ಣಾಗಿದ್ಕೊಂಡು ಆಡಳಿತ ನೋಡ್ಕೊಂಡಿದ್ದು ವಿದುರ.

5. ಕೆಲವು ಕಥೆಗಳ ಪ್ರಕಾರ ವಿದುರಾನೇ ಹಿರೀ ಮಗ

ಮಹಾಭಾರತದ ಎಷ್ಟೊಂದು ಆವೃತ್ತಿಗಳಿವೆ. ಅವುಗಳ ಪೈಕಿ ಒಂದ್ರಲ್ಲಿ ವಿದುರನ್ನ ಹಿರಿಯವ್ನು ಅಂತ ಹೇಳ್ತಾರೆ. ಆ ಕಥೆ ಹೀಗಿದೆ- ಭೀಷ್ಮರು ವಿದುರನ ಜೊತೆ ಮೂರೂಜನ ಅಣ್ಣತಮ್ಮಂದಿರ ಮದುವೆ ಬಗ್ಗೆ ಚರ್ಚೆ ಮಾಡ್ತಾ, ಮೊದ್ಲು ವಿದುರಂಗೆ ಯಾದವ ಕನ್ಯೆಯ ಪ್ರಸ್ತಾಪ ಇಡ್ತಾರೆ. ಆಮೇಲಿಂದ ಧೃತರಾಷ್ಟ್ರಂಗೆ ಗಾಂಧಾರಿ ಮತ್ತೆ ಪಾಂಡುಗೆ ಕುಂತಿಯ ಜೊತೆ ಮದುವೆ ಮಾಡೋ ಆಲೋಚೆನೆ ಇದೆ ಅಂತ ಹೇಳ್ತಾರೆ. ಹಾಗಾದ್ರೆ ವಿದುರ ಅವ್ರಿಬ್ರಿಗೂ ಅಣ್ಣನಾಗಿದ್ನಾ ಅಂತ ಅನುಮಾನ ಬರತ್ತೆ. ಈ ಕಥೆ ಪ್ರಕಾರ, ನಿಯೋಗದ ಸಮಯದಲ್ಲಿ ಅಂಬಿಕೆ ಹೆದುರ್ಕೊಂಡು ಮೊದ್ಲು ವ್ಯಾಸರ ಹತ್ರ ತನ್ನ ದಾಸೀನ ಕಳಿಸ್ತಾಳೆ. ವಿಧಿ ಆಟ ಅನ್ನೋಹಾಗೆ ವ್ಯಾಸರಿಂದ ಭವಿಷ್ಯದ ದೃಷ್ಟಿನಲ್ಲಿ ಈ ಮಹಾಕಾರ್ಯ ಆಗ್ಬೇಕಿತ್ತು. ಹಾಗಾಗಿ ವಿದುರನ್ನ ಧರ್ಮದ ಅಪರಾವತಾರವಾಗಿ ದಾಸಿಗೆ ಹುಟ್ಟೋ ಹಾಗೆ ಮಾಡ್ತಾರೆ. ಈ ಘಟನೆ, ವೇದಕಾಲದಿಂದ ಉಪನಿಷತ್ ಕಾಲಕ್ಕೆ ಆಗೋ ಮಹತ್ವವಾದ ಬದಲಾವಣೆ ಅಂತ ಹೇಳ್ಬೋದು. ಮುಂದೆ ಸಮಕಾಲೀನ ಬರಹಗಾರರು ಈ ವಿಷ್ಯಕ್ಕೆ ಅಷ್ಟೊಂದ್ ಪ್ರಾಮುಖ್ಯತೆ ಕೊಡ್ಲಿಲ್ಲ. ಇದಾದ್ಮೇಲೆ ಅಂಬಿಕೆ ವ್ಯಾಸರನ್ನ ನೋದ್ದಾಗ ಹೆದುರ್ಕೊಂಡು, ಬಲಹೀನ ಪಾಂಡುನ ಹೆತ್ತ ಕಥೆ ಗೊತ್ತೇ ಇದೆ.

6. ದುರ್ಯೋಧನ ಲಾಕ್ಷಾಗೃಹದಲ್ಲಿ ಪಾಂಡವರನ್ನ ಕೊಲ್ಬೇಕು ಅಂತ ಸಂಚು ಮಾಡಿದಾಗ ವಿದುರಾನೇ ಕಾಪಾಡಿದ್ದು

ಪಾಂಡವರು ಕೃಷ್ಣನ್ನ ಬಿಟ್ರೆ ತುಂಬಾ ಗೌರವದಿಂದ ನೋಡ್ತಿದ್ದ ಇನ್ನೊಬ್ಬ ವ್ಯಕ್ತಿ ಅಂದ್ರೆ ಅದು ವಿದುರ. ಪಾಂಡವರನ್ನ ಹೇಗಾದ್ರೂ ಮಾಡಿ ನಾಶ ಮಾಡ್ಬೇಕು ಅಂತ ದುರ್ಯೋಧನ ಮಾಡ್ತಿದ್ದ ಎಲ್ಲಾ ಸಂಚುಗಳನ್ನೂ ತಲೆಕೆಳಗು ಮಾಡಿ, ಕಾಪಾಡಿದ್ದು ವಿದುರ. ಅದೇ ರೀತಿ ಒಂದ್ಸಲ ಲಾಕ್ಷಾಗೃಹದಲ್ಲಿ (ಅರಗಿನಲ್ಲಿ ಮಾಡಿದ್ದ ಅರಮನೆ ) ಪಾಂಡವರನ್ನ ಸುಟ್ಟು ಕೊಲ್ಬೇಕು ಅಂತ ದುರ್ಯೋಧನ ಕುತಂತ್ರ ಮಾಡ್ದಾಗ, ಆ ಅರಮನೆನಲ್ಲಿ ಸುರಂಗ ಮಾರ್ಗ ಕೊರೆಸಿ, ಪಾಂಡವರು ಬಚಾವಾಗೋಹಾಗೆ ವಿದುರ ಪ್ರತಿತಂತ್ರ ಮಾಡ್ತಾನೆ.

7. ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ವಿದುರ ಪಾಂಡವರ ಪಕ್ಷ ಬರಕ್ಕೆ ಬಲವಾದ ಕಾರಣವಿದೆ

ದ್ರೌಪದಿ ವಸ್ತ್ರಾಪಹರಣಾನ  ಕುರು ರಾಜ ಸಭೆನಲ್ಲಿ ಖಂಡಿಸೋ ಇಬ್ರೇ ಇಬ್ರು ವ್ಯಕ್ತಿಗಳು ಅಂದ್ರೆ, ದುರ್ಯೋಧನನ ತಮ್ಮ ರಾಜಕುಮಾರ ವಿಕರ್ಣ ಮತ್ತೆ ಮಹಾಮಂತ್ರಿ ವಿದುರ. ಆಗ ದುರ್ಯೋಧನ ಸಿಟ್ಟು ಮಾಡ್ಕೊಂಡು ವಿದುರನ್ನ ಕೃತಜ್ಞತೆ ಇಲ್ದೇಯಿರೋನು, ತನ್ನ ಮಂತ್ರಿಯಾಗಿ ಸೋತೋರ ಪರ ಮಾತಾಡ್ತಿದಾನೆ ಅಂತ ನಿಷ್ಟೂರ್ವಾಗಿ ಹೇಳ್ತಾನೆ. ಆಗ ಧೃತರಾಷ್ಟ್ರ ಇನ್ನೇನು ಮಗಂಗೆ ಬೈದು ಬುದ್ದಿ ಹೇಳ್ಬೇಕು ಅನ್ನುವಾಮೂಲಗ, ಹಿಂದೆ ರಾಜನ್ನ ಆಯ್ಕೆ ಮಾಡುವಾಗ, ದೃಷ್ಟಿ ಇಲ್ದಿರೋ ಕಾರಣ ಧೃತರಾಷ್ಟ್ರ ರಾಜ ಆಗೋದು  ಬೇಡ ಅಂತ ವಿದುರ ಹೇಳಿದ ಮಾತು ನೆನಪಾಗತ್ತೆ. ಹಾಗಾಗಿ ನಾಲಿಗೆ ತುದಿವರ್ಗೂ ಬರೋ ಬುದ್ಧಿಮಾತನ್ನ ತಡೆದು, ಹಾಗೆಲ್ಲ ಬೈಬಾರ್ದು ಮಗನೆ ಅಂತ ಸುಮ್ನೆ ಗದರಿಸ್ತಾನೆ ಅಷ್ಟೆ. ಆದ್ರೆ ತಂದೆ ಮಕ್ಕಳು ಮಾಡೋ ಈ ಘನಕಾರ್ಯಕ್ಕೆ ವಿದುರ ಕುರುಕ್ಷೇತ್ರ ಯುದ್ದದ ಸಂದರ್ಭದಲ್ಲಿ ಪಾಂಡವರ ಪಕ್ಷ ವಹಿಸ್ಕೊಂಡು ಸರಿಯಾದ ಉತ್ತರ ಕೊಡ್ತಾನೆ. ಯಾಕಂದ್ರೆ ಭೀಷ್ಮ, ದ್ರೋಣಾಚಾರ್ಯ, ಕೃಪಾಚಾರ್ಯ, ಕರ್ಣ ಮುಂತಾದೋರ ಥರ ವಿದುರ ಯಾವತ್ತೂ ಹಸ್ತಿನಾಪುರದ ಸಿಂಹಾಸನದ ಹಂಗಲ್ಲಿ ಇರಲ್ಲ. ಆದ್ರೆ ತಾನೂ ಕುರುಕುಲಕ್ಕೆ ಸೇರ್ದೋನಾದ್ರಿಂದ ಕುರು ಕುಟುಂಬಕ್ಕೆ ಬದ್ದನಾಗಿರ್ತಾನೆ. ಯಾವಾಗ ಧೃತರಾಷ್ಟ್ರ ಅಣ್ಣ-ತಮ್ಮಂದಿರು ಅನ್ನೋ ಯಾವ ಸಂಬಂಧಕ್ಕೂ ಬೆಲೆ ಕೊಡಲ್ಲ ಅನ್ನೋದ್ ಗೊತ್ತಾಗತ್ತೋ ಆಗ ವಿದುರ ಎರಡ್ನೇ ಯೋಚ್ನೆ ಮಾಡ್ದೇ ಧರ್ಮದ ಪರ, ಅಂದ್ರೆ ಪಾಂಡವರ ಪಕ್ಷ ಸೇರ್ತಾನೆ.

8. ಕೃಷ್ಣ ವಿದುರನ್ನ ಧರ್ಮರಾಜ ಅಂತ ಗೌರವಿಸುತಿದ್ದ

ಮತ್ತಿನ್ಯಾರೂ ಅಲ್ಲ. ಕೃಷ್ಣ. ವಿದುರನ್ನ ಧರ್ಮರಾಜ, ಅಂದ್ರೆ ಸತ್ಯಕ್ಕೆ ಅಧಿಪತಿ ಅಂತ ಪರಿಗಣಿಸಿ ತುಂಬಾ ಗೌರವದಿಂದ ಕಾಣ್ತಿದ್ದ. ವಿದುರಂಗೆ ಪ್ರಜೆಗಳ ಕ್ಷೇಮದ ಬಗ್ಗೆ ಇದ್ದ ಕಾಳಜಿ ಮತ್ತೆ ರಾಜನೀತಿ, ವೇದ, ಉಪನಿಷತ್ತಿನಲ್ಲಿ ಇದ್ದ ಅಗಾಧವಾದ ಪಾಂಡಿತ್ಯ ಇದೆಲ್ಲಾ ಆತನಿಗೆ ಗೌರವ ತಂದ್ಕೊಟ್ಟಿತ್ತು.

9. ಕೃಷ್ಣ ಸಂಧಾನಕ್ಕೆ ಹಸ್ತಿನಾಪುರಕ್ಕೆ ಬಂದಾಗ ಅರಮನೆ ಬಿಟ್ಟು ವಿದುರನ ಮನೇಲಿ ಉಳ್ಕೊತಾನೆ

ಕೌರವರು ಮತ್ತೆ ಪಾಂಡವರ ಮಧ್ಯ ನಡಿಯೋ ಯುದ್ಧಾನ ಹೇಗಾದ್ರೂ ಮಾಡಿ ನಿಲ್ಲಿಸ್ಬೇಕು ಅಂತ ಕೃಷ್ಣ ಸಂಧಾನದ ಮಾತುಕಥೆಗೆ ಹಸ್ತಿನಾಪುರಕ್ಕೆ ಬಂದಾಗ, ದುರ್ಯೋಧನ ಏನೋ ರಾಜ ಮರ್ಯಾದೆ ಮಾಡ್ತಾನೆ ಆದ್ರೆ ಕೃಷ್ಣಂಗೆ ಅಲ್ಲಿ ಉಳ್ಕೊಳದು ಸರಿ ಅನ್ಸಲ್ಲ. ಯಾಕಂದ್ರೆ ಅರಮನೇಲ್ ಇದ್ದೋರೆಲ್ಲಾ ಕೌರವರ ಪರವಾಗಿದ್ದೋರೆ.  ಯಾರ ಕಡೇಗೂ ಸೇರ್ದೆ ತಟಸ್ಥವಾಗಿದ್ದಿದ್ದು ಅಂದ್ರೆ ವಿದುರ ಮಾತ್ರ. ಹಾಗಾಗಿ ವಿದುರನ ಮನೇಲೇ ರಾತ್ರಿ ಉಳ್ಕೊತಾನೆ. ಇಲ್ಲಿ ಒಂದು ಸೂಕ್ಶ್ಮವಾದ ವಿಷ್ಯ ಇದೆ. ಅದೇ ಋಣದ ಹಂಗು. ಕೃಷ್ಣ ಸಂಧಾನದ ಮಾತುಕಥೆಗೆ  ಬರ್ತಿದಾನೆ ಅಂತ ಗೊತ್ತಾದ ತಕ್ಷಣ ದುರ್ಯೋಧನ ತನ್ನ ಅರಮನೇನ  ಸುಂದರ್ವಾಗಿ ಅಲಂಕಾರ ಮಾಡ್ಸಿ, ಕೃಷ್ಣಂಗೆ ಇಷ್ಟವಾದ ಅಡುಗೆ ತಿಂಡಿನೆಲ್ಲಾ ಮಾಡಿಸ್ತಾನೆ. ಜೊತೆಗೆ ಕೃಷ್ಣ, ದೂತನ ಜವಾಬ್ದಾರಿ ವಹಿಸಿ ಬಂದಿದ್ರೂ ತಾನೇ ಅದ್ಧೂರಿಯಾಗಿ ಸ್ವಾಗತ ಕೂಡ ಮಾಡಿ ಅವನ ಮನ ಒಲಿಸಕ್ಕೆ ನೋಡ್ತಾನೆ. ಕಾರಣ ತನ್ನ ಆತಿಥ್ಯದಿಂದ ಖುಷಿಯಾಗಿ ಕೃಷ್ಣ ತನ್ನ ಪಕ್ಷ ವಹಿಸ್ಬೋದು ಅಥವ ತನ್ನ ಅನ್ನದ ಋಣಕ್ಕೆ  ಬಿದ್ದು ತಾನ್ ಹೇಳ್ದಂಗೆ ಕೇಳ್ಬೋದು ಅಂತ. ಆದ್ರೆ ಇದನ್ನೆಲ್ಲಾ ಮೊದ್ಲೇ ಯೋಚ್ನೆ ಮಾಡಿದ್ದ ಕೃಷ್ಣ, ದುರ್ಯೋಧನನ ಅರಮನೆನಲ್ಲಿ ಊಟ ತಿಂಡಿ ಇರ್ಲಿ ಒಂದು ಹನಿ ನೀರೂ ಕುಡಿಯಲ್ಲ. ಬಂದ ಕೆಲ್ಸ ಮುಗೀತಿದ್ದಂಗೇ ಜಾಗ ಖಾಲಿ ಮಾಡ್ತಾನೆ. ತಾನು ತುಂಬಾ ನಂಬೋ ವಿದುರನ ಸಾಧಾರಣವಾದ ಮನೆಗೇ ಊಟಕ್ಕೆ ಹೋಗ್ತಾನೆ. ಇದ್ರಿಂದ ದುರ್ಯೋಧನಂಗೆ ನಿರಾಸೆ ಆಗತ್ತೆ ನಿಜ ಆದ್ರೆ ಯಾವ ಕಾರಣಕ್ಕೂ ಕೃಷ್ಣ ಅವ್ರ ಋಣದಲ್ಲಿ ಸಿಕ್ಕಿಬೀಳಲ್ಲ.

10. ವಿದುರಂಗೂ ಕೃಷ್ಣಂಗೂ ಇದ್ದ ನಂಟು

ಕೃಷ್ಣ ಯಾಕೆ ದುರ್ಯೋಧನನ ಅರಮನೇಲಿ ರಾತ್ರಿ ಕಳೀಲಿಲ್ಲ ಅನ್ನೋದ್ ಗೊತ್ತಾಯ್ತು ಆದ್ರೆ, ವಿದುರನ ಮನೇನೇ ಯಾಕೆ ಅನ್ನೋ ಪ್ರಶ್ನೆ ಬಂದಾಗ, ಅದು ಬರೀ ದುರ್ಯೋಧನನ ಋಣಭಾರದಿಂದ ತಪ್ಪುಸ್ಕೊಳಕ್ಕೆ ಅಂದ್ರೆ ತಪ್ಪಾಗತ್ತೆ. ಇವ್ರಿಬ್ಬರ ಮಧ್ಯ ನಿಜವಾದ ಗೆಳೆತನ ಇರತ್ತೆ. ಯಾರ ಮನೇಲಾದ್ರೂ ಊಟ ಮಾಡ್ಬೇಕು, ಉಳ್ಕೊಬೇಕು ಅಂದ್ರೆ ಕೃಷ್ಣಂದು ತನ್ನದೇ ಆದ ನಂಬಿಕೆ ಇತ್ತು. ಒಂದು ತುಂಬಾ ಹಸಿವಾಗಿರ್ಬೇಕು ಮತ್ತೆ ಆ ಮನೆಯವ್ರೂ ಮನಸ್ಪೂರ್ತಿಯಾಗಿ ಊಟ ಬಡಿಸ್ಬೇಕು. ವಿದುರನ ಮನೇಲಿ ಇವೆರಡಕ್ಕೂ ಕೊರತೆ ಇರ್ಲಿಲ್ಲ. ಎಲ್ರೂ ಕೃಷ್ಣನ್ನ ಆತ್ಮೀಯವಾಗಿ ಕಾಣ್ತಿದ್ರು. ವಿದುರನ ಆಥಿತ್ಯದಲ್ಲಿ ಆಡಂಬರ ಇಲ್ದೇ ಇದ್ರೂ ಕಪಟ ಇರ್ಲಿಲ್ಲ. ಪ್ರೀತಿಯಿಂದ ಕೃಷ್ಣನ್ನ ಬರಮಾಡ್ಕೋತಿದ್ದ. ಹಾಗೆನೇ, ಅವ್ನು ತನ್ನ ಮನೇಲಿ ಉಳ್ಕೊಬೇಕು ಅನ್ನೋದ್ರ ಹಿಂದೆ ಯಾವದೇ ಸ್ವಾರ್ಥ ಇರ್ಲಿಲ್ಲ . ಆದ್ರೆ ದುರ್ಯೋಧನ ಹಾಗಲ್ಲ. ಕೃಷ್ಣ ತನ್ನ ಪರ ಇದ್ರೆ ಸಾಕು ಎಂಥಾ ಯುದ್ಧ ಬೇಕಾದ್ರೂ ಗೆಲ್ಬೋದು ಅಂತಾ ಅವ್ನಿಗೆ ಗೊತ್ತಿತ್ತು. ಹಾಗಾಗಿ ಸ್ವಾರ್ಥದಿಂದ ಏನೇನೋ ಪ್ರಯತ್ನಗಳ್ನ ಮಾಡ್ತಾನೆ ಅವುಗಳಲ್ಲಿ ಇದೂ ಒಂದು. ಅದನ್ನೆಲ್ಲಾ ಮುಲಾಜಿಲ್ದೇ ತಿರಸ್ಕಾರ ಮಾಡಿ, ದುರ್ಯೋಧನನ ಕುತಂತ್ರದಿಂದ ತಪ್ಪುಸ್ಕೊಳೋ ಕೃಷ್ಣ, ತನ್ನ ಆತ್ಮೀಯ ಗೆಳೆಯ ವಿದುರನ ಮನೇಲಿ ನೆಮ್ಮದಿಯಾಗಿ ರಾತ್ರಿ ಕಳೀತಾನೆ. ಹಾಗಂತ ಹಸ್ತಿನಾಪುರದಲ್ಲಿ ಅವ್ನಿಗೆ ಬೇರೆ ಇನ್ಯಾರ್ ಮನೆನೂ ಇರ್ಲಿಲ್ಲ ಅಂತಲ್ಲ. ವಿದುರ ಕೃಷ್ಣನ ಮನಸ್ಸು ಗೆದ್ದು, ನಂಬಿಕೆ ಗಳುಸ್ಕೊಂಡಿದ್ದ ಅಂತ ಅರ್ಥ.

11. ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ವಿದುರ ರಾಜಿನಾಮೆ ಕೊಡ್ತಾನೆ

ಮಹಾಭಾರತದ ಸನತ್ಸುಜಾತೀಯ ಭಾಗದಲ್ಲಿ ಒಂದು ವಿಷ್ಯ ಪ್ರಸ್ತಾಪ ಆಗಿದೆ. ಏನಪ್ಪ ಅಂದ್ರೆ, ಕುರುಕ್ಷೇತ್ರ ಯುದ್ದಕ್ಕೂ ಮೊದ್ಲು ಧೃತರಾಷ್ಟ್ರ, ಮೃತ್ಯುವಿನ ಬಗ್ಗೆ ತನಗಿದ್ದ ಅನುಮಾನಗಳ್ನ ಬಗೆಹರುಸ್ಕೊಬೇಕು ಅಂದಾಗ, ವಿದುರನೇ ಸನತ್ಸುಜಾತ ಮಹರ್ಷಿನ ಆಸ್ಥಾನಕ್ಕೆ ಆಹ್ವಾನಿಸಿ, ಗೌರವದಿಂದ ಸ್ವಾಗತಿಸ್ತಾನೆ. ಆಗ ನಡಿಯೋ ಮಾತುಕಥೆನಲ್ಲಿ ಯುದ್ಧದ ಪರಿಣಾಮ, ಆಗ್ಬೋದಾಗಿರೋ ಸಾವು ನೋವಿನ ಏಟು ಇದೆಲ್ಲಾ ಕೇಳಿ, ಈ ಯುದ್ಧ ಅಧರ್ಮ ಅನ್ಸತ್ತೆ. ಹಾಗಾಗಿ, ಕುರುಕ್ಷೇತ್ರ ಯುದ್ಧಾನ ಧಿಕ್ಕರಿಸಿ, ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡ್ತಾನೆ.

12. ಯುದ್ಧ ಮುಗುದ್ಮೇಲೆ ತಿರುಗ ಮಂತ್ರಿಯಾಗಕ್ಕೆ ಒಪ್ಪಲ್ಲ

ಕುರುಕ್ಷೇತ್ರ ಯುದ್ಧ ಮುಗುದ್ಮೇಲೆ, ಯುಧಿಷ್ಟಿರ ವಿದುರನ್ನ ಹಸ್ತಿನಾಪುರದ ಪ್ರಧಾನ ಮಂತ್ರಿಯಾಗಿ ನೇಮಕ ಮಾಡ್ಕೊತಾನೆ. ಅಷ್ಟೇ ಅಲ್ಲ ವಿದುರನ ಸಾಮರ್ಥ್ಯಕ್ಕೆ ತಕ್ಕ ಸ್ಥಾನ ಮಾನ ಮತ್ತೆ ಅಧಿಕಾರನೂ ಕೊಡ್ತಾನೆ. ಆದ್ರೆ ಯುದ್ಧದಲ್ಲಿ ನಡೆದಿದ್ದ ಲಕ್ಷಾಂತರ ಸಾವು ನೋವು ಮತ್ತೆ ದಿನೇ ದಿನೇ ಹೆಚ್ತಾಯಿದ್ದ ವಯಸ್ಸು ಇದೆಲ್ಲಾ ವಿದುರಂಗೆ ಜಿಗುಪ್ಸೆ ತಂದಿರತ್ತೆ. ಮಂತ್ರಿಯಾಗಿ ಜವಾಬ್ದಾರಿ ವಹಿಸ್ಕೊಳೋ ಮನಸ್ಸೂ ಇರಲ್ಲ. ಹಾಗಾಗಿ ಸ್ವಲ್ಪ ಸಮಯದಲ್ಲೇ ನಿವೃತ್ತಿ ಪಡ್ಕೊಂಡು, ಧೃತರಾಷ್ಟ್ರ,ಗಾಂಧಾರಿ, ಕುಂತಿ ಜೊತೆ ವಾನಪ್ರಸ್ಥಾಶ್ರಮಕ್ಕೆ ಹೋಗ್ತಾನೆ. ಸುಮಾರ್ ವರ್ಷ ಘೋರವಾದ ತಪಸ್ಸು ಮಾಡಿ, ಕಾಡು ಮೇಡೆಲ್ಲಾ ಸುತ್ತಾಡಿ ಸತ್ತೋಗ್ತಾನೆ.

13. ವಿದುರ ಯಾವತ್ತೂ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡ್ಕೊಳಿಲ್ಲ

ಯಾರು ಎಂಥಾ ಆಮಿಷ ತೋರ್ಸುದ್ರೂ ಅದನ್ನೆಲ್ಲಾ ಕಣ್ಣೆತ್ತೂ ನೋಡ್ಲಿಲ್ಲ. ಸದಾ ಸತ್ಯದ ದಾರೀಲಿ ನಡೆದ, ಕರ್ತವ್ಯನಿಷ್ಠೆ ಇಟ್ಕೊಂಡಿದ್ದ, ನಿಷ್ಪಕ್ಷಪಾತವಾದ ತೀರ್ಪು ನೀಡೋದ್ರಿಂದ ಮತ್ತೆ ಸ್ವಧರ್ಮ ಪಾಲಿಸೋದ್ರಲ್ಲಿ ಇಟ್ಕೊಂಡಿದ್ದ ಅಚಲವಾದ ನಂಬಿಕೆ ಇವೆಲ್ಲಾ ಎಲ್ಲರಿಗೂ, ಎಲ್ಲಾ ಕಾಲಕ್ಕೂ ಯುಗಕ್ಕೂ ಆದರ್ಷಪ್ರಾಯವಾಗಿರೋ ಗುಣಗಳು. ಹಾಗಾಗಿ ವಿದುರನ್ನ ಇಡೀ ಮಹಭಾರತದಲ್ಲಿ ಆತ್ಮಸಾಕ್ಷಿಯ ಸಾಕಾರಮೂರ್ತಿ ಅಂತ ಕರೀತಾರೆ.

14. ಒಂದರ್ಥದಲ್ಲಿ ವಿದುರ ಯುಧಿಷ್ಟಿರನ ತಂದೆ

ವಿದುರನ ಹುಟ್ಟಿನ ಹಿಂದಿರೋ ಗುಟ್ಟು ಮತ್ತೆ ಉದ್ದೇಶ ಅಂದ್ರೆ, ಸಾಕ್ಷಾತ್ ಯಮರಾಜನೇ ಋಷಿಯೊಬ್ಬರ ಶಾಪಕ್ಕೆ ಗುರಿಯಾಗಿ, ಭೂಮಿಮೇಲೆ ಈ ಅವತಾರ ತಾಳಿರ್ತಾನೆ ಅಂತ. ಇನ್ನೊಂದ್ದು ಕಡೆ ನಮಗೆಲ್ಲಾ ಗೊತ್ತಿರೋ ಹಾಗೆ ಯುಧಿಷ್ಠಿರ ಯಮಧರ್ಮನ ಮಗ. ಹಾಗಾಗಿ ಒಂದರ್ಥದಲ್ಲಿ ವಿದುರನೇ ಯುಧಿಷ್ಟಿರನ ತಂದೆ.

ಇದಕ್ಕೆ ಹಿಂದೆ ಒಂದು ಕಥೆ ಇದೆ. ಮಾಂಡವ್ಯ ಋಷಿ ಮೇಲೆ ಒಂದು ಆರೋಪ ಬರತ್ತೆ. ಏನಪ್ಪ ಅಂದ್ರೆ, ಒಂದು ಕಳ್ಳರ ಗುಂಪು, ತಾವು ಕದ್ದಿರೋ ಮಾಲನ್ನ ಋಷಿಯ ಆಶ್ರಮದ ಒಂದ್ಮೂಲೆನಲ್ಲಿ ಬಚ್ಚಿಟ್ಟಿರ್ತಾರೆ. ಆದ್ರೆ ಆ ಕಳ್ಳತನದ ಆರೋಪ ಈ ಋಷಿ ಮೇಲೆ  ಬಂದಿರತ್ತೆ. ಆದ್ರೆ ಪಾಪ ಮಾಂಡವ್ಯ ಋಷಿಗೆ ಇದ್ಯಾವ್ದೂ ಗೊತ್ತಿರಲ್ಲ. ಕಳ್ಳರು ಬಂದಿದ್ದ ಹೊತ್ತಲ್ಲಿ ಆತ ಯಾವ್ದೋ ದೀರ್ಘವಾದ ಆಲೋಚನೆನಲ್ಲಿ ಇರ್ತಾನೆ. ಹಾಗಾಗಿ ಕಳ್ಳರು ಬಂದಿದ್ದು, ಕದ್ದ ಮಾಲನ್ನ ಬಚ್ಚಿಟ್ಟಿದ್ದು ಯಾವ್ದೂ ಗೊತ್ತೇ ಇರಲ್ಲ. ಆದ್ರೂ ರಾಜನ ಮುಂದೆ ಈ ವಿಷ್ಯ ಇತ್ಯರ್ಥಕ್ಕೆ ಬಂದಾಗ, ತಪ್ಪಾಗಿ ಋಷಿ ವಿರುದ್ಧ ಸಾವಿನ ಶೂಲಕ್ಕೇರಿಸ್ಬೇಕು ಅಂತ ತಪ್ಪಾಗಿ ತೀರ್ಪು ಕೊಡ್ತಾನೆ.

ರಾಜ ತಪ್ಪಾಗಿ ತೀರ್ಪು ಕೊಟ್ಟು ಮಾಂಡವ್ಯ ಋಷಿಗೆ ಮರಣದಂಡನೆ ಕೊಟ್ಟಾದ ಮೇಲೆ, ಸತ್ತು ಯಮಧರ್ಮನ ಆಸ್ಥಾನಕ್ಕೆ ಪಾಪ ಪುಣ್ಯಗಳ ಲೆಕ್ಕಾಚಾರಕ್ಕೆ ಹೋಗ್ತಾನೆ. ಆಗ ಯಮಧರ್ಮ, ಮಾಂಡವ್ಯ ಋಷಿ ಚಿಕ್ಕ ಹುಡುಗನಾಗಿದ್ದಾಗ ಹಕ್ಕಿಗಳ್ನ ಹಿಂಸೆಮಾಡಿದ್ದಕ್ಕೆ ಅದನ್ನ ಪಾಪ ಅಂತ ಪರಿಗಣಿಸಿ, ಶಿಕ್ಷೆ ಕೊಡ್ತಾನೆ. ಆದ್ರೆ ಚಿಕ್ಕ, ಮುಗ್ಧ ಹುಡುಗನ ತಪ್ಪಿಗೆ ಕೊಟ್ಟ ಶಿಕ್ಷೆ ತುಂಬಾ ದೊಡ್ಡದಾಗಿರತ್ತೆ. ಅದನ್ನ ಧಿಕ್ಕರಿಸಿ ಮಾಂಡವ್ಯ ಋಷಿ ಯಮಧರ್ಮನಿಗೆ ಶಾಪ ಕೊಡ್ತಾನೆ. ನೀನೂ ಸಾಧಾರಣ ಮನುಷ್ಯನಾಗಿ ಭೂಮಿ ಮೇಲೆ ಹುಟ್ಟು ಆಗ ಮಕ್ಕಳ ಮನಸ್ಥಿತಿ ಏನೂಂತ ಗೊತ್ತಾಗತ್ತೆ ಅಂತಾನೆ. ಹಾಗಂತ ಯಮಧರ್ಮನಂಥಾ ಧರ್ಮನಿಷ್ಠನ ಜನ್ಮ ವ್ಯರ್ಥ ಆಗ್ಬಾರ್ದು ಅಲ್ವ. ಹಾಗಾಗಿ ವಿಚಿತ್ರವೀರ್ಯನ ರಾಣಿ ಅಂಬಾಲಿಕೆಯ ದಾಸಿಯ ಹಾಗು ವ್ಯಾಸ ಮಹರ್ಷಿಯ ಮಗನಾಗಿ, ಧರ್ಮಕ್ಕೆ ಇನ್ನೊಂದು ಹೆಸರಾಗಿ, ಒಂದು ಮಹತ್ವವಾದ ಜವಾಬ್ದಾರಿ ನಿರ್ವಹಿಸಕ್ಕೆ ಅಂತಾನೆ ಯಮ ವಿದುರನಾಗಿ ಹುಟ್ತಾನೆ.

15. ವಿದುರ ನೀತಿ, ಚಾಣಕ್ಯ ನೀತಿಯಷ್ಟೇ ಮಹೋನ್ನತವಾದದ್ದು

ಇನ್ನೊಂದು ವಿಷಯ ಅಂದ್ರೆ, ವಿದುರ ಮತ್ತೆ ಧೃತರಾಷ್ಟ್ರನ ಮಧ್ಯ ನಡೆದಿರೋ ಸಂವಾದ, ಸಂಭಾಷಣೆ, ಚರ್ಚೆ, ರಾಜಕೀಯ ಮತ್ತೆ ಧರ್ಮ ಜಿಜ್ಞಾಸೆ ಇದೆಲ್ಲಾ ಒಟ್ಟುಗೂಡ್ಸಿ ತಯಾರ್ಸಿರೋದೇ ವಿದುರ ನೀತಿ. ಚಾಣಕ್ಯನ ಸಲಹೆ, ಕಿವಿಮಾತು ಮತ್ತೆ ಆಡಳಿತದ ವಿಷ್ಯದಲ್ಲಿ ಕೊಟ್ಟಿರೋ ಸೂಚನೆ ಇದೆಲ್ಲಾ ಸೇರ್ಸಿ ತಯಾರ್ಸಿರೋ ಪ್ರಸಿದ್ಧ ಚಾಣಕ್ಯ ನೀತಿಗೆ ಎಷ್ಟು ಪ್ರಾಮುಖ್ಯತೆ ಇದ್ಯೋ ವಿದುರ ನೀತಿಗೂ ಅಷ್ಟೇ ಮಹತ್ವ ಇದೆ.

16. ಇಂಥಾ ಲೋಕಮಾನ್ಯ ವಿದುರಂಗೆ ಕೈಯೆತ್ತಿ ಮುಗಿಬೇಕು

ಮಹಾಭಾರತದಲ್ಲಿ ವಿದುರನ ಪಾತ್ರ ತುಂಬಾ ಮುಖ್ಯವಾದದ್ದು. ಹೇಗೆ ಯಾರ ಹಂಗಲ್ಲೂ ಇಲ್ದೇ ಸ್ವಾಭಿಮಾನ್ದಿಂದ ಬದುಕ್ಬೋದು, ರಾಜ ಕುಟುಂಬದೋರ ಸ್ವಾರ್ಥದಿಂದ ತನ್ನ ಜನ್ಮ ಆಗಿದ್ರೂ ಅವ್ರ ಯಾವ ಸಂಬಂಧದ ಅಪೇಕ್ಷೆನೂ ಇಲ್ದೆ ತಾನಾಯ್ತು ತನ್ನ  ಕರ್ತವ್ಯ ಆಯ್ತು ಅಂತ ಶಾಂತವಾಗಿ ಇದ್ಬಿಟ್ಟಿದ್ದು, ಜೊತೆಗೆ ಕೃಷ್ಣನ ಮೇಲಿದ್ದ ಅಪಾರವಾದ ಭಕ್ತಿ, ಗೌರವ ಪ್ರೀತಿ ಇದೆಲ್ಲಾ ವಿದುರನ್ನ ಒಂದು ಮೆಟ್ಟಿಲು ಮೇಲಕ್ಕೇ ನಿಲ್ಸತ್ತೆ. ಇನ್ನೊಂದು  ರೀತಿಲಿ ನೋಡುದ್ರೆ, ಕುಟುಂಬದ ವಿಷ್ಯದಲ್ಲಿ ಕರ್ಣಂಗಿಂತಾ ದುರದೃಷ್ಟ ವ್ಯಕ್ತಿ ವಿದುರ. ಕರ್ಣಂಗಾದ್ರೂ ಸಾಕಿದ ತಂದೆ ತಾಯಿ ಇದ್ರು, ಆಮೇಲೆ ಪ್ರಾಣ ಸ್ನೇಹಿತನಾಗಿ ದುರ್ಯೋಧನ ಸಿಗ್ತಾನೆ, ರಾಜ್ಯ ಸಿಗತ್ತೆ, ಅಧಿಕಾರ ಸಿಗತ್ತೆ. ಕಡೇಗಾಲ್ದಲ್ಲಿ ಹೆತ್ತ ತಾಯಿ ಯಾರು ಅನ್ನೋದ್ ಗೊತ್ತಾದ್ರೂ ಅಂಥಾ ಯಾವ ವ್ಯತ್ಯಾಸನೂ ಆಗಲ್ಲ. ಆದ್ರೆ ವಿದುರಂಗೆ ತಂದೆ ಜೊತೆ ಕಾಲಕಳಿಯೋ ಅವಕಾಶ ಸಿಗಲ್ಲ. ಒಡಹುಟ್ಟಿದವರು ಎದುರಿಗಿದ್ರೂ ಆ ಬಾಂಧವ್ಯ ಇರಲ್ಲ. ಯಾವ ಅಂಗವೈಕಲ್ಯ ಇಲ್ದೇ ಆರೋಗ್ಯವಾಗಿ ಹುಟ್ಟುದ್ರೂ ರಾಜ್ಯ, ಅಧಿಕಾರ ಸಿಗಲ್ಲ. ತನ್ನ ರಾಜ್ಯದಲ್ಲೇ, ತನ್ನೋರ ಮಧ್ಯಾನೇ ಕಡೇವರ್ಗೂ ಊಳಿಗದೋನಾಗೇ ಉಳ್ಕೊಂಡ್ಬಿಡ್ತಾನೆ. ಹೀಗೆ ಎಲ್ಲಾ ವಿಷ್ಯದಲ್ಲೂ ವಂಚನೆಗೊಳಗಾಗೋ ವಿದುರ, ಅದನ್ನೇ ನೆಪ ಮಾಡ್ಕೊಂಡು ಯಾವತ್ತೂ ನ್ಯಾಯ ನೀತಿ ಬಿಡಲ್ಲ ಮತ್ತೆ ಕರ್ತವ್ಯ ನಿಷ್ಠೆ ಮರಿಯಲ್ಲ. ಹಾಗಾಗಿ ಗೌರವ ಜಾಸ್ತಿಯಾಗತ್ತೆ.