https://cdn-images-1.medium.com/max/1024/1*tqGu0huqJMBlDO0RccXZ5A.jpeg

ವ್ಯಾಸಮಹರ್ಷಿಗಳು ಗಣೇಶಂಗೆ ಹೇಳಿ ಬರೆಸಿದ ಮಹಾಭಾರತದ ಕಥೆ ಬಗ್ಗೆ ಎಲ್ಲ್ರಿಗೂ ಗೊತ್ತೇ ಇದೆ. ಕುರುಕುಲದ ಕಥೆ ಇಂದ ಹಿಡ್ದು, ಪಾಂಡವ್ರು ಸ್ವರ್ಗ ತಲ್ಪೋವರ್ಗೆ 18 ಸರ್ಗಗಳಲ್ಲಿ ಬರೋ ಈ ಕಥೆ ಒಂದ್ಲಕ್ಷ ಶ್ಲೋಕಕ್ಕೂ ಹೆಚ್ಚಿದೆ ಅಂತ ಸುಮಾರು ಜನಕ್ಕೆ ಗೊತ್ತಿರಲ್ಲ. ಕಮ್ಮೀ ಅಂದ್ರೂ ಇವತ್ತಿನ ನಾಲ್ಕು ಸಾವಿರ ಪುಟಗಳಷ್ಟರ ಕಥೆ ಇದು. ಇದ್ರ ಬಗ್ಗೆ ನೀವೇನ್ ಹೊಸ್ದಾಗಿ ಹೇಳೋದಿದೆ ಅಂತೀರಾ? ಇಲ್ಲಿನ ಕೆಲ್ವು ಘಟನೆಗಳು, ವಿಚಾರಗಳು ಎಷ್ಟೋ ಸಾರಿ ನಮ್ಗೆ ಗೊತ್ತೇ ಇರಲ್ಲ. ಈ ಕಥೆಗಳೆಲ್ಲ ಎಲ್ಲಿ ಸಿಗ್ತವೆ ಅಂತ ಕೇಳಿದ್ರೆ, ಅವ್ಗಳ ಮೂಲ ತೋರಿಸಕ್ಕೆ ಕಷ್ಟ ಆಗತ್ತೆ. ಯಾಕಂದ್ರೆ ಕೆಲ್ವು ಬಾಯಿಂದ ಬಾಯ್ಗೆ ಹರಿದ್ಬಂದಿರೋ ಜಾನಪದ ಕಥೆ ರೂಪ್ದಲ್ಲೂ ಇರ್ಬೋದು. ಆದ್ರಿಂದ ಮೂಲನ್ನ ಹುಡ್ಕೋದು ಬಿಟ್ಟು ಈ ಕಥೆಗ್ಳು ನಮ್ಮನ್ನ ಮೋಡಿ ಮಾಡೋದ್ರಿಂದ, ಬೆರಗ್ಗೋಳಿಸೋದ್ರಿಂದ ನಿಮ್ಜೊತೆ ಹಂಚ್ಕೋತಿದ್ದೀವಿ.

ಇಂಥ ಹತ್ತು ವಿಚಾರಗಳ್ನ ಓದದ್ರೆ ಆಶ್ಚರ್ಯ ಆಗೋದ್ರಲ್ಲಿ ಸಂದೇಹಾನೇ ಇಲ್ಲ. ಒಂದ್ಸಾರಿ ಓದ್ನೋಡಿ

1) ಜಯ-ವಿಜಯ ಅಂತ ವಿಷ್ಣುವಿನ ಸಾನ್ನಿಧ್ಯ ಕಾಯೋ ದ್ವಾರಪಾಲಕ್ರು ಇದ್ರಂತೆ. ಅವ್ರೇ ಮಹಾಭಾರತದಲ್ಲಿ ಕೃಷ್ಣನ್ನ ಎದ್ರು ಹಾಕೊಳ್ಳೋ ಶಿಶುಪಾಲ-ದಂತವಕ್ರರು

ಈ ಜಯ-ವಿಜಯ್ರ ಅವತಾರಗಳು ಇನ್ನೂ ಇವೆ. ಪ್ರಹ್ಲಾದನ ಕಥೇಲಿ ಬರೋ ಹಿರಣ್ಯಾಕ್ಷ-ಹಿರಣ್ಯಕಶಿಪು, ರಾಮಾಯಣದ ರಾವಣ-ಕುಂಭಕರ್ಣ ಇವ್ರೇ. ಇವ್ರ್ಯಾಕೆ ಇಂಥಾ ಅವ್ತಾರಗಳಲ್ಲಿ ಕಾಣಿಸ್ಕೋತಾರೆ ಅಂತ ಯಾರ್ಗಾದ್ರೂ ಸಹಜ್ವಾಗೇ ಕುತೂಹಲ ಆಗತ್ತೆ. ಒಂದ್ಸಾರಿ ಬ್ರಹ್ಮಕುಮಾರರನ್ನ ವಿಷ್ಣು ಸಾನ್ನಿಧ್ಯಕ್ಕೆ ಬಿಡ್ದೆ ಗೋಳು ಹಾಕೊಂಡ್ರಂತೆ. ಕೇಳ್ಬೇಕಾ, ಭೂಮಿ ಮೇಲೆ ಏಳು ಜನ್ಮ ಎತ್ಬಿಟ್ಟು ಬನ್ನಿ ಅಂತ ಶಾಪ ಕೊಟ್ಟು ಹೋದ್ರು. ವಿಷ್ಣುಗೆ ಇದ್ಗೊತ್ತಾಗಿ ಜಯ-ವಿಜಯ್ರ ಮೇಲಿನ್ಕರುಣೆಯಿಂದ ಈ ಶಾಪಕ್ಕೆ ಒಂದು ಉಶ್ಶಾಪ ಹೇಳಿದ್ನಂತೆ: ನೋಡಿ, ಶಾಪದ ಏಳು ಜನ್ಮ ನನ್ನ ಭಕ್ರರಾಗಿ ಭೂಮಿ ಮೇಲ್ಕಳೀಬೋದು. ಇದು ಭೋ ಕಷ್ಟ ಅಂದ್ರೆ, ಮೂರು ಜನ್ಮ ನನ್ನ ದ್ವೇಷಿಸ್ತಾ, ನನ್ನ ಶತ್ರುಗಳಾಗಿ ಕಳೀಬೋದು. ನಿಮ್ಮ ಆಯ್ಕೆ ಏನು ಅಂದ್ನಂತೆ. ಅವ್ರಿಗೆ ಮೂರು ಜನ್ಮ ದೂರ ಇರದೇ ಸುಲ್ಭ ಅನ್ಸಿ ಈ ಮೂರು ಜೋಡಿ ವಿಷ್ಣುದ್ವೇಷಿಗಳಾಗಿ ಹುಟ್ಟಿದ್ರಂತೆ.

2) ದುರ್ಯೋಧನ ಏನಾದ್ರೂ ಕೃಷ್ಣನ ಗೀತೋಪದೇಶ ಕೇಳಿದ್ರೆ ಕುರುಕ್ಷೇತ್ರ ಯುದ್ಧಾನೇ ನಡೀತಿರ್ಲಿಲ್ವಂತೆ

ಕೃಷ್ಣ ಸಂಧಾನಕ್ಕಾಗಿ ಬಂದಾಗ ಗೀತೋಪದೇಶದ ಥರಾನೇ ದುರ್ಯೋಧಂಗೂ ಯಾವ್ದು ಧರ್ಮ, ಯಾವ್ದು ಅಲ್ಲ ಅಂತ ತಿಳ್ಸಕ್ಕೆ ಪ್ರಯತ್ನ ಪಟ್ಟ. ಆದ್ರೆ ಅವ್ನಾದ್ರೋ, ನಂಗೆ ಇದೆಲ್ಲಾ ಚೆನ್ನಾಗೇ ಗೊತ್ತು. ನಾನೇನ್ಮಾಡ್ಲಿ? ಧರ್ಮದಲ್ಲಿ ನಂಗೆ ಆಸಕ್ತೀನೆ ಹುಟ್ಟಲ್ಲ, ಅಧರ್ಮದಿಂದ ಬಿಡಿಸ್ಕೊಳ್ಳಕ್ಕೆ ಆಗಲ್ಲ ಅಂತ ಕೈಬೀಸಿ ನಡೆದ್ಬಿಟ್ಟ.

3) ಪಾಂಡವರ ಪತ್ನಿ ದ್ರೌಪದಿ ದುರ್ಗಾದೇವಿ ಅವತಾರ ಅಂತೆ

ಏಕಾಂತದಲ್ಲಿ ದ್ರೌಪದಿ ಜೊತೆ ಯುಧಿಷ್ಠಿರ ಇದ್ದಾಗ ಅಚಾನಕ್ ಅಲ್ಲಿಗೆ ಬಂದ ಭೀಮ, ಯುಧಿಷ್ಠಿರ ದ್ರೌಪದಿ ಕಾಲ್ತೊಳೀತಾ ಇರೋದ್ನ ನೋಡಿದ್ನಂತೆ. ಅರ್ಥ್ವಾಗ್ದೆ ಕೃಷ್ಣನ್ನ ಕೇಳ್ದಾಗ, ಕೃಷ್ಣ ಅವ್ನನ್ನ ರಾತ್ರಿ ಕಾಡಿಗೆ ಕರೆದ್ಕೊಂಡೋಗಿ ಮರದ ಮೇಲೆ ಕೂರಕ್ಕೆ ಹೇಳಿದ್ನಂತೆ. ರಾತ್ರಿ ಅಲ್ಲಿ ದುರ್ಗೆಯಾಗಿ ಬಟ್ಲು ಹಿಡ್ಕೊಂಡು ಬಂದ ದ್ರೌಪದಿ, ಭೀಮ ಮಾಡ್ದ ತಪ್ಗೆ ಬಟ್ಲು ತುಂಬಾ ರಕ್ತ ಕೇಳಿದ್ಲಂತೆ ! ಭಯ ಬಿದ್ದು ಭೀಮ ತಾಯ್ಗೆ ಇದ್ನ ಹೇಳಿ, ಕಾಪಾಡಮ್ಮ ಅಂದ್ನಂತೆ. ತಾಯಿ ಕುಂತಿ ದ್ರೌಪದಿ ಜೊತೆ ಮಾತಾಡಿ, ಬಟ್ಲನ್ನ ಭೀಮ ರಕ್ತದಿಂದ ಭರ್ತಿ ಮಾಡ್ತಾನೆ, ಆದ್ರೆ ಅದು ಅವಂದಲ್ಲ, ದುಶ್ಶಾಸನನ ಎದೆ ಬಗ್ದಾಗ ಬರೋ ರಕ್ತದಿಂದ, ಅಂತ ಸಮಾಧಾನ ಮಾಡಿ ಭೀಮನ್ನ ಕಾಪಾಡಿದ್ಳಂತೆ.

4) ಪಾಂಡವ್ರಲ್ಲಿ ಒಬ್ಬಂಗೆ ಮುಂದೆ ಮಹಾಭಾರತ ಯುದ್ಧ ನಡ್ಯತ್ತೆ ಅಂತ ತಿಳಿದಿತ್ತು

ಪಾಂಡು ತಾನ್ ಸತ್ತಾಗ ತನ್ನ ದೇಹ್ದ ಮಾಂಸನ್ನ ಮಕ್ಳು ತಿನ್ಬೇಕು, ಅದ್ರಿಂದ ತನ್ನ ಅನುಭವ, ಜ್ಞಾನ ಮಕ್ಳಿಗೆ ಸಿಗೋ ಥರಾ ಆಗ್ಲಿ ಅಂತ ಇಷ್ಟ ಪಟ್ಟಿದ್ನಂತೆ. ಸಹದೇವ ಮೂರು ತುಂಡು ತಿಂದು ಮಹಾನ್ ಜ್ಯೋತಿಷಿ ಆದ್ನಂತೆ. ಅದ್ರೆ ತನ್ಗೆ ಗೊತ್ತಿರೋದ್ನ ಯಾರ್ಗಾದ್ರೂ ಹೇಳಿದ್ರೆ, ತನ್ಗೇ ಮರಣಾಂತಕ ಭೀತಿ ಇದೆ ಅಂತ ಗೊತ್ತಿದ್ರಿಂದ ಯಾರ್ಜೊತೇನೂ ಕುರುಕ್ಷೇತ್ರದಲ್ಲಿ ಮುಂದೆ ನಡ್ಯೋ ಯುದ್ಧದ ಬಗ್ಗೆ ಬಾಯ್ಬಿಡ್ಲಿಲ್ವಂತೆ.

5) ಶಕುನಿ ತನ್ ಭಾವ ಧೃತರಾಷ್ಟ್ರನ್ನ ಹಾಳ್ಮಾಡಕ್ಕೇ ಅಂತಾನೇ ಹಸ್ತಿನಾಪುರಕ್ಕೆ ಬಂದ್ನಂತೆ

ತನ್ನ ಅಕ್ಕನ್ನ ಕುರುಡಂಗೆ ಮದ್ವೆ ಮಾಡ್ಕೊಟ್ರು ಅನ್ನೊ ಕೋಪ್ದಲ್ಲೇ ಗಾಂಧಾರ ದೇಶ್ದ ರಾಜ್ಕುಮಾರ ಶಕುನಿ ಅಕ್ಕನ ಮನೆ ಸೇರಿಕೊಂಡು ಸಂಚು ಮಾಡ್ತಾನೆ. ಅವ್ರಪ್ಪ ಸುಬಲ ಸಾಯ್ಬೇಕಾದ್ರೆ ಶಕುನಿಗೆ ಅವ್ನ ಬೆನ್ನೆಲ್ಬಿಂದ ದಾಳ ಮಾಡ್ಕೊಂಡ್ರೆ ಅದಕ್ಕೆ ಕೇಳಿದ ಗರ ಉರುಳ್ಸೋ ಮಾಂತ್ರಿಕ ಶಕ್ತಿ ಬರತ್ತೆ ಅಂತ ಹುರಿದುಂಬಿಸದ್ನಂತೆ. ಇಂಥಾ ದಾಳ ಇಟ್ಕೊಂಡು ಶಕುನಿ ಹೇಗೆ ಧುರ್ಯೋಧನನ್ನ ಆಡಿಸ್ದ, ಕುರುವಂಶನ್ನ ಹಾಳ್ಮಾಡ್ದ ಅನ್ನೋದು ಎಲ್ಲ್ರಿಗೂ ಗೊತ್ತೇ ಇದೆ.


6) ಭೀಷ್ಮನ ಹತ್ರ ಇದ್ದ ಐದು ಬಾಣ್ಗಳು ಕೌರವರನ್ನ ಯುದ್ಧದಲ್ಲಿ ಗೆಲ್ಲಿಸ್ತಿತ್ತಂತೆ

ಪಿತಾಮಹ ಭೀಷ್ಮ ಪಾಂಡವ್ರ ಮೇಲಿನ್ ಪ್ರೀತಿಯಿಂದ ಮನಸ್ಸಿಟ್ಟು ಯುದ್ಧ ಮಾಡ್ತಿಲ್ಲ ಅಂತ ಗೊತ್ತಾಗಿ ದುರ್ಯೋಧನ ಅವ್ರ ಹತ್ರ ಹೋಗಿ ಅವಲತ್ಕೊಂಡ್ನಂತೆ. ಅವ್ರಾಗ ಕನಿಕರಿಸಿ ಐದು ಜನ ಪಾಂಡವ್ರನ್ನ ಕೊಲ್ಲಕ್ಕೆ ಅಂತ ಐದು ಬಾಣ ತಯಾರು ಮಾಡ್ಕೊಂಡ್ರಂತೆ. ಆದ್ರೆ ಅವ್ರ ಮೇಲೆ ನಂಬ್ಕೆ ಬರ್ದೆ ಆ ಐದು ಬಾಣನ್ನ ತಾನೇ ತೊಗೊಂಡು ಯುದ್ಧಕ್ಕೆ ಹೋದ್ನಂತೆ ಕೌರವ. ಅಷ್ಟ್ರಲ್ಲಿ ಕೃಷ್ಣಂಗದು ಗೊತ್ತಾಗಿ, ಅದನ್ನ ಉಪಾಯ್ದಿಂದ ತೊಗೊಂಡು ಬಾ ಅಂತ ಅರ್ಜುನನ್ನ ಕಳ್ಸಿದ್ನಂತೆ. ಅರ್ಜುನ ಕೌರವ್ನ ಹತ್ರ ಹೋಗಿ, ನಾ ಹಿಂದೆ ನಿನ್ನ ಜೀವ ಉಳ್ಸಿದ್ದು ನೆನ್ಪು ಮಾಡ್ಕೋ ಅಂತೆಲ್ಲಾ ಹೇಳಿ, ಅವ್ನಿಂದ ಆ ಐದು ಬಾಣನ್ನ ಕಸಿದ್ಕೊಂಡ್ನಂತೆ. ಕೌರವ ಮತ್ತೆ ಭೀಷ್ಮರ ಹತ್ರಹೋಗಿ ಇನ್ನೊಂದು ಐದು ಮಾಡ್ಕೊಡಿ ಅಂತ ಅಂಗ್ಲಾಚಿದ್ರೂ ಅವ್ರೇನೂ ಅದಕ್ಕೆ ಸೊಪ್ಪುಹಾಕ್ಲಿಲ್ವಂತೆ.


7) ಯಾವ್ದೋ ಗಂಧರ್ವಂಗೆ ಸಹಾಯ ಮಾಡ್ತೀನಿ ಅಂತ ಕೃಷ್ಣನ್ಮೇಲೇ ಯುದ್ದಕ್ಕೆ ಹೋಗಿದ್ನಂತೆ ಅರ್ಜುನ

ಕೃಷ್ಣನ ದ್ವಾರ್ಕೆಗೆ ಹತ್ರದಲ್ಲೆ ಹುಚ್ಚುಚ್ಚಾಗಿ ರಥಾನ ಆಗಸ್ದಲ್ಲಿ ಹಾರಿಸ್ತಿದ್ದ ಗಂಧರ್ವ ಒಬ್ನು ಒಂದ್ಸಾರ್ತಿ ಕೃಷ್ಣ ಆಯ ತಪ್ಪಿ ಬೀಳೋ ಥರಾ ಹತ್ರದಲ್ಲೇ ಹೋದ್ನಂತೆ. ಅವನ ಕೊಬ್ಬನ್ನ ಇಳಿಸ್ತೀನಿ ಅಂತ ಕೃಷ್ಣ ಹೇಳ್ದಾಗ ಹೆದ್ರಿ ಬ್ರಹ್ಮ, ಶಿವರ ಮೊರೆ ಹೊಕ್ಕ್ರೆ ಅವ್ರು ಕೃಷ್ಣಂಗೇ ಶರಣಾಗು ಅಂತ ಕಿವಿಮಾತು ಹೇಳಿದ್ರಂತೆ. ಆದ್ರೆ ಜಗ್ಳ ತಂದಿಡೋ ನಾರದ ಮಾತ್ರ ಅರ್ಜುನನ್ನ ಸಹಾಯ ಕೇಳು ಹೋಗು ಅಂತ ಕಿವಿ ಊದಿದ್ನಂತೆ. ಮನ್ಸಿಲ್ದಿದ್ರೂ ಗಂಧರ್ವಂಗೆ ಸಹಾಯ ಮಾಡ್ತೀನಿ ಅಂತ ಮಾತ್ಕೊಟ್ಟು ಕೃಷ್ಣನ್ಮೇಲೇ ಯುದ್ಧಕ್ಕೆ ಹೊರಟ್ನಂತೆ ಅರ್ಜುನ. ಆಗ ಬ್ರಹ್ಮ ಪ್ರತ್ಯಕ್ಷನಾಗಿ ಆ ಗಂಧರ್ವನ್ನ ಕೃಷ್ಣಂಗೆ ಒಪ್ಸೋಹಾಗೆ ಅರ್ಜುನನ ಮನವೊಲ್ಸಿದ್ನಂತೆ. ಇದಕ್ಕೆ ಅರ್ಜುನ ಒಪ್ಕೊಂಡಾಗ ಕೃಷ್ಣ, “ಮುಂದೆ ಬರೋ ಯುದ್ಧದಲ್ಲಿ ನಿನ್ನ ಅಣ್ಣ-ತಮ್ಮಂದ್ರೊಂದ್ಗೆ ಹೋರಾಡಕ್ಕೆ ಬೇಕಿರೋ ತರಬೇತಿ ಅಂತ ಅಂದ್ಕೋ” ಅಂತ ಸಮಾಧಾನ ಮಾಡಿದ್ನಂತೆ.

8) ಎಲ್ಲಾ ಪಾಂಡವ್ರಿಗೂ ಅಗಾಧವಾದ ಬಲ, ಚಿತ್ರ-ವಿಚಿತ್ರ ಶಕ್ತಿ ಇತ್ತು

ನಕುಲಂಗೆ ಎಂಥಾ ಮಳೇಲೂ ಬೀಳೋ ಮಳೆ ಹನಿಗಳಿಂದ ತಪ್ಪಿಸ್ಕೊಳ್ಳೋ ಅಷ್ಟು ವೇಗ್ವಾಗಿ ಕುದ್ರೆ ಓಡ್ಸೋ ಶಕ್ತಿ ಇತ್ತಂತೆ ! ಯುಧಿಷ್ಠಿರಂಗೆ ಏನಾದ್ರೂ ನಿಜ್ವಾಗ್ಲೂ ಕೋಪ ಬಂತೂ ಅಂದ್ರೆ ಅವ್ನ ಎದ್ರಿಗೆ ಇರೋರು ಸುಟ್ಟು ಬೂದಿ ಆಗ್ತಿದ್ರಂತೆ !!

9) ರಾಮಾಯ್ಣಕ್ಕೂ, ಭಾರತಕ್ಕೂ ಇರೋ ಸೇತು ಹನ್ಮಂತನ ಕಥೆ ಮಾತ್ರಾನೇ ಅಲ್ಲ. ಒಂದ್ಸಾರಿ ಕೃಷ್ಣ ಅರ್ಜುನನ ಜೀವನ್ನ ರಾಮಸೇತು ಹತ್ರ ರಕ್ಷಿಸಿದ್ದ್ನಂತೆ

ಒಂದ್ಸಾರಿ ಕೃಷ್ಣ ಅರ್ಜುನಂಗೆ ಶ್ರೀರಾಮನಂತ ಬಿಲ್ಲಾಳು ಯಾರು ಇಲ್ಲ ಅಂತ ಹೇಳಿದ್ನ ಮನ್ಸಲಿಟ್ಟು, ರಾಮೇಶ್ವರದಲ್ಲಿ ರಾಮಸೇತು ನೋಡ್ತಾ, “ಅಂಥ ದೊಡ್ಡ ಬಿಲ್ಗಾರಂಗೆ ಕಪಿಗಳ ಕೈಲಿ ಸೇತ್ವೆ ಕಟ್ಸಿಕೊಳ್ಳೊ ದರ್ದಾದ್ರೂ ಏನಿತ್ತು” ಅನ್ನೋ ಸಂಶಯ ಹುಟ್ತಂತೆ. ಹನ್ಮಂತಂಗೆ ಈ ಸಂಶಯ ಪಿಶಾಚಿ ಅರ್ಜುನನ ತಲೆಹೊಕ್ಕಿರದು ಗೊತ್ತಾಗಿ, “ನಮ್ಮಂತ ಗಡದ್ದು ವಾನರರ ಭಾರನ್ನ ಬಾಣದ್ಸೇತ್ವೆ ಹೊರಕ್ಕೆ ಆಗ್ತಾ ಇರ್ಲಿಲ್ಲ” ಅಂತ ಸಮಾಧಾನ ಹೇಳದ್ರೆ, ಅರ್ಜುನ ಇನ್ನೂ ಕೆರಳಿ, “ನಾನು ಅಂಥಾ ಸೇತ್ವೆ ಕಟ್ಟಿ ತೋರಿಸ್ತೀನಿ. ಅದ್ರ ಮೇಲೆ ನೀನು ನಡ್ಯಕ್ಕಾದ್ರೆ ನಾನ್ಗೆದ್ದಂಗೆ” ಅಂತ ಸವಾಲು ಹಾಕಿದ್ನಂತೆ. ಅಷ್ಟಕ್ಕೇ ಸುಮ್ನಿರದೆ, “ಅಕಸ್ಮಾತ್ ಭಾರ ತಡ್ಕೊದಿದ್ರೆ ಸೇತ್ವೇಗೆ ನಾನೇ ಬೆಂಕಿ ಕೊಟ್ಟು, ನಾನೂ ಜೊತೆಗೆ ಹಾರ್ಕೊಂಡು ಆತ್ಮದಾಹ ಮಾಡ್ಕೋತೀನಿ” ಅಂತ ಕೊಚ್ಕೊಂಡ್ನಂತೆ. ಆಯ್ತು ಅಂತ ಅವ್ನು ಕಟ್ದ ಸೇತ್ವೇ ಮೇಲೆ ಬಾಲನ್ನ ಮಾತ್ರ ಬಿಟ್ನಂತೆ ಹನ್ಮಂತ. ಬಾಲದ ಭಾರನ್ನೇ ತಡೀದೆ ಸೇತ್ವೆ ಕುಸಿದ್ಬಿತ್ತಂತೆ. ಕೊಟ್ಟ ಮಾತ್ಗೆ ತಪ್ದೇ ಅರ್ಜುನ ಆತ್ಮಾಹುತಿಗೆ ಮುಂದಾದ್ನಂತೆ. ಅಷ್ಟೊತ್ತಿಗೆ ಅಲ್ಲಿಗೆ ಸಾಧು ವೇಷ್ದಲ್ಲಿ ಕೃಷ್ಣ ಬಂದು, “ಇನ್ನೊಂದ್ಸಾರಿ ಕಟ್ಟು, ನಾನು ಸಾಕ್ಷಿಯಾಗಿರ್ತೀನಿ” ಅಂತ ಅರ್ಜುನಂಗೆ ಆಶ್ವಾಸ್ನೆ ಕೊಟ್ನಂತೆ. ಈ ಸಲ ಹನ್ಮಂತ ಕುಪ್ಪಳಿಸಿದ್ರೂ ಸೇತ್ವೆ ಅಲ್ಲಾಡ್ಲಿಲ್ವಂತೆ. ಅರ್ಜುನ, ಹನ್ಮಂತ ಇಬ್ರೂ ಆಶ್ಚರ್ಯದಿಂದ ನೋಡಿದ್ರೆ ಕೃಷ್ಣಾನೆ ಸೇತ್ವೇಗೆ ಹೆಗಲ್ಕೊಟ್ಟು ನಿಂತಿದ್ನಂತೆ. ಅರ್ಜುನ ಕೃಷ್ಣನ್ನೋಡಿದ್ರೆ, ಹನ್ಮಂತ ತನ್ನ ಇಷ್ಟದೈವ ರಾಮನ್ನ ಕಂಡ್ನಂತೆ.

10) ಜಗತ್ತಿನ ಅತಿ ಶಕ್ತಿಶಾಲಿ ಯೋಧ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ದೇ, ಕೇವಲ ನೋಟ ನೋಡ್ತಿದ್ನಂತೆ

ಕುರುಕ್ಷೇತ್ರ ಯುದ್ಧನ್ನ ಸಾಕ್ಷಿ ಥರಾ ಬೆಟ್ಟದ್ಮೇಲಿಂದ ನೋಡಿದ ಮಹಾನ್ ಯೋದ್ಧ ಬೇರೇ ಯಾರೂ ಅಲ್ಲ, ಭೀಮನ ಮೊಮ್ಮೊಗ, ಘಟೋತ್ಕಚನ ಮಗ, ಬಾರ್ಬರೀಕ. ಶಿವನಿಂದ ಮೂರು ಅತಿ ಶಕ್ತಿಶಾಲಿ ಬಾಣಗಳ್ನ, ಅಗ್ನಿ ಇಂದ ಬಿಲ್ಲನ್ನ ವರವಾಗಿ ಪಡೆದಿದ್ದ ಈತನ್ನ ಎದುರಿಸೋರು ಯಾರೂ ಇರ್ಲಿಲ್ವಂತೆ. ಇವ್ನ ಬಾಣ್ಗಳ ಶಕ್ತಿ ಪರೀಕ್ಷೆ ಮಾಡಿದ ಕೃಷ್ಣ, ಇವ್ನೇನಾದ್ರೂ ಕೌರವರ ಪಕ್ಷ ವಹ್ಸಿದ್ರೆ ಏನ್ಕತೆ ಅಂತ ಚಿಂತೆಗೊಳ್ಗಾದ್ನಂತೆ. “ನೀನು ಯಾರ ಪಕ್ಷ ಸೇರ್ತಿಯ?” ಅಂತ ಕೇಳಿದ್ರೆ, ಬಾರ್ಬರೀಕ, “ಬಲ ಕಡ್ಮೆ ಇರೋರ ಜೊತೆ ಇರ್ತೀನಿ ಅಂತ ನನ್ತಾಯಿಗೆ ಮಾತ್ಕೊಟ್ಟಿದ್ದೀನಿ” ಅಂದ್ನಂತೆ. ಕೃಷ್ಣ ಉಪಾಯ್ದಿಂದ, “ಅಲ್ಲ, ನೀನು ಪಾಂಡವ್ರತ್ರ ಕಮ್ಮಿ ಸೈನ್ಯ ಇದೆ ಅಂತ ಅವ್ರ ಜೊತೆ ಸೇರಿದ್ರೆ, ಕೌರವ್ರ ಬಲ ಕುಗ್ಗತ್ತೆ. ಆಗ ನೀನು ಅವ್ರ ಪರ ಆಗ್ಬೇಕಾಗತ್ತೆ. ಹೀಗೆ ಈ ಕಡೆ, ಆ ಕಡೆ ಅಂತ ಎರಡೂ ಕಡೆಯಿಂದ ಯುದ್ಧ ಮಾಡಿ ಅಪಾರ ಸಾವು-ನೋವ್ಗೆ ಕಾರಣ ಆಗೋ ಬದ್ಲು, ಯುದ್ಧದಿಂದ ಹೊರ್ಗಿರದೇ ಒಳ್ಳೇದು” ಅಂತ ಅವ್ನ ಮನ್ಸನ್ನ ಗೆದ್ನಂತೆ. ಆದ್ಕಾರಣ ಅವ್ನು ಸುಮ್ನೆ ಸಾಕ್ಷಿಯಾಗಿ ಯುದ್ಧ ನೋಡ್ಬೇಕಾಗ್ಬಂತಂತೆ.

ಗೊತ್ತಿತ್ತಾ?