ಅನೇಕ ಪುರಾಣ ಕಥೆಗಳು, ದಂತಕಥೆಗಳು ಮತ್ತು ಕಥೆಗಳಲ್ಲಿ ಪ್ರಮುಖವಾದದ್ದು, ಜಲಪಾತಗಳು. ಭಾರತೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಹಲವಾರು ವರ್ಷದಿಂದ ವಿಶೇಷ ಸ್ಥಾನ ಪಡ್ಕೊಂಡಿದೆ.

ಬೇಸಿಗೆಯಲ್ಲಿ ನೀರು ಕಮ್ಮಿ ಇದ್ರೂ ತಂಪೆರೆದು ಮನಸ್ಸಿಗೆ ಮುದ ನೀಡೋ ಈ ಜಲಪಾತಗಳು, ಮಳೆಗಾಲದಲ್ಲಿ ಮೈದುಂಬಿ ಧುಮುಕುವಾಗ ನೋಡೋದಕ್ಕೆ ಎರಡು ಕಣ್ಣು ಸಾಲಲ್ಲ.

ಪ್ರವಾಸ ಇಷ್ಟ ಪಡೋವ್ರು, ಜಲಪಾತ ನೋಡೋ ಆಸೆ ಇರೋವ್ರು ನಿಮ್ಮ ಪಟ್ಟಿಯಲ್ಲಿ , ಈಗ ನಾವು ಹೇಳ್ತಿರೋ ಯಾವುದೇ ಜಲಪಾತ ಇಲ್ಲ ಅಂದ್ರೆ ಸೇರಿಸ್ಕೊಳ್ಳೋದಕ್ಕೆ ಮರೀಬೇಡಿ.

 1. ಹೊಗೇನಕಲ್ ಜಲಪಾತ, ತಮಿಳುನಾಡು.

ಇದನ್ನ ಭಾರತದ ನಯಾಗರ ಅಂತಾನೆ ಕರೀತಾರೆ. ಬೆಂಗಳೂರಿಂದ 180 ಕಿಲೋಮೀಟರು ದೂರದಲ್ಲಿದೆ. ಕಾವೇರಿ ನದಿ ಇಲ್ಲಿ ಜಲಪಾತವಾಗಿ ಧುಮುಕೋದು.

 1. ಎಲಿಫೆಂಟ್/ ಆನೆ ಜಲಪಾತ, ಖಾಸಿ ಬೆಟ್ಟ, ಶಿಲೊಂಗ್ ಹತ್ತಿರ , ಮೇಘಾಲಯ.

ಮೇಘಾಲಯದ ರಾಜಧಾನಿ ಶಿಲಾಂಗ್ ಹತ್ತಿರ ಇರೋ ಈ ಜಲಪಾತ ಇಲ್ಲಿನ ಅದ್ಭುತ ರಮಣೀಯ ದೃಶ್ಯಗಳಿಗೆ ಮತ್ತೊಂದು ಗರಿ ಇತ್ತು ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ.

 1. ಎಥಿಪೋಥಾಲಾ ಜಲಪಾತ, ಗುಂಟೂರು ಜಿಲ್ಲೆ,ಆಂಧ್ರಪ್ರದೇಶ.

ಕೃಷ್ಣ ನದಿಯ ಉಪನದಿ ಚಂದ್ರವಂಕದಿಂದ  70 ಅಡಿ ಎತ್ತರದಿಂದ ಧುಮುಕಿ ಈ ಜಲಪಾತ ಆಗಿದೆ. ಈ ಜಲಪಾತದಲ್ಲಿ 3 ನದಿಗಳು ಸೇರಿವೆ – ಚಂದ್ರವಂಕ, ನಕ್ಕಲ ಹಾಗೂ ತುಮ್ಮಲ.

 1. ರಾಜ್ ದರಿ ಹಾಗೂ ದೇವ್ ದರಿ ಜಲಪಾತ, ವಾರಾಣಸಿ, ಉತ್ತರಪ್ರದೇಶ.

ವಾರಣಾಸಿ ಹತ್ತಿರ ಇರೋ ಜಲಪಾತ ಇಲ್ಲಿ ಬರೋ ಪ್ರವಾಸಿಗರ ಮನ ಸೆಳೆಯುತ್ತೆ. ಸೆಪ್ಟೆಂಬರ್ ಇಂದ ಮಾರ್ಚ್ ತಿಂಗಳ ಒಳಗೆ ಇಲ್ಲಿಗೆ ಭೇಟಿ ಕೊಡೋದಕ್ಕೆ ಒಳ್ಳೇ ಸಮಯ.

 1. ಜೋಗ್ ಫಾಲ್ಸ್, ಕರ್ನಾಟಕ.

ಇದನ್ನ ಗೇರುಸೊಪ್ಪ ಜಲಪಾತ ಅಂತಾನೂ ಕರೀತಾರೆ. ಭಾರತದಲ್ಲಿರೋ ಅತ್ಯಂತ ಎತ್ತರದಿಂದ ಧುಮುಕೋ ಜಲಪಾತ ದಲ್ಲಿ ಇದಕ್ಕೆ 2 ಸ್ಥಾನ. ಸಾಗರ ಜಿಲ್ಲೆಯಲ್ಲಿರೋ ಈ ಜಲಪಾತ ಶರಾವತಿ ನದಿಯಿಂದ ಆಗಿದೆ. ಇದು 830 ಅಡಿ ಎತ್ತರದಿಂದ ಧುಮುಕುತ್ತೆ.

 1. ದೂಧ್ ಸಾಗರ್ ಜಲಪಾತ, ಗೋವಾ.

ನಿಮ್ಮ ಮನಸೂರೆಗೊಂಡು ರೋಮಾಂಚನ ನೀಡೋ ಈ ಜಲಪಾತಕ್ಕೆ ಮಳೆಗಾಲದಲ್ಲಿ ಹೋಗಬೇಕು. ಗೋವಾದಿಂದ ಬರಿ 60 ಕಿಲೋಮೀಟರು ದೂರದಲ್ಲಿದೆ. ಗೋವಾ ಪ್ರವಾಸಕ್ಕೆ ಹೋದವರು ಇಲ್ಲಿಗೆ ಹೋಗದೆ ಬರೋದು ಕಮ್ಮಿ.

 1. ನೊಹಕ್ಕಲಿಕೈ ಜಲಪಾತ, ಚಿರಾಪುಂಜಿ.

ಭಾರತದಲ್ಲೇ ಅತ್ಯಂತ ಎತ್ತರದಿಂದ ಧುಮುಕೋ ಮನೋಹರ ಜಲಪಾತ ಇದು. ವರ್ಷ ಇಡೀ ಇಲ್ಲಿ ನೀರು ಇರುತ್ತೆ. ಇಲ್ಲಿ ನೀರು 1115 ಅಡಿ ಎತ್ತರದಿಂದ ಧುಮುಕುತ್ತೆ.

 1. ಧುವಂಧರ್ ಜಲಪಾತ, ಜಬಲ್ ಪುರ್ , ಮಧ್ಯಪ್ರದೇಶ.

ಜಬಲ್ ಪುರ್ ಸುತ್ತಮುತ್ತ ಇರೋ ಹಲವಾರು ಜಲಪಾತಗಳಲ್ಲಿ ಒಂದಾದ ಇದಕ್ಕೆ, ಜಲಪಾತದಿಂದ ಹೊಗೆಯ ರೂಪದಲ್ಲಿ ಬರೋ ನೀರಿನ ಹಬೆಯಿಂದ ಈ ಹೆಸರು ಬಂದಿದೆ. 10 ಮೀಟರ್ ಎತ್ತರದಿಂದ ನರ್ಮದಾ ನದಿ ಇಲ್ಲಿ ಧುಮುಕುತ್ತಾಳೆ.

 1. ನೊಹ್ಂಗ್ಂಗ್ತಿಯಾಂಗ್ ಜಲಪಾತ / 7 ಸಹೋದರಿಯರ ಜಲಪಾತ, ಚಿರಾಪುಂಜಿ, ಮೇಘಾಲಯ.

315 ಮೀಟರ್ ಎತ್ತರದಿಂದ 7 ಕವಲುಗಳಲ್ಲಿ ಧುಮುಕೋ ಈ ಜಲಪಾತ, 7 ಸಹೋದರಿಯರ ಜಲಪಾತ, ಮಾವ್ಸ್ಮಾಯಿ ಜಲಪಾತ ಅನ್ನೋ ಹೆಸರಿಂದ ಪ್ರಸಿದ್ದಿ.

 1. ಚುನ್ನ ಸಮ್ಮರ್ ಫಾಲ್ಸ್, ರಾಕ್ ಗಾರ್ಡನ್, ಡಾರ್ಜಲಿಂಗ್, ಪಶ್ಚಿಮ ಬಂಗಾಳ.

ಡಾರ್ಜಲಿಂಗ್ ಗಿರಿಧಾಮ ಪ್ರದೇಶದಲ್ಲಿ ಈ ಜಲಪಾತ ತುಂಬಾ ಪ್ರಸಿದ್ದಿಯಾಗಿದೆ. ಈ ಜಲಪಾತ ನೋಡಕ್ಕೆ ಜನ ಬರಲಿ ಅಂತ ಈ ಬಂಡೆಗಳ ಉದ್ಯಾನವನ ಮಾಡಿದ್ದಾರೆ.

 1. ಅಟ್ಟಕಲ್ ಜಲಪಾತ, ಮುನ್ನಾರ್, ಕೇರಳ.

ಕೇರಳದ ಮುನ್ನಾರ್ ಪ್ರದೇಶದಲ್ಲಿರೋ ಹಲವಾರು ಜಲಪಾತಗಳಲ್ಲಿ ಇದು ಪ್ರಸಿದ್ದಿ. ಮುನ್ನಾರ್ ನಗರದಿಂದ ಪಳ್ಳಿವಾಸಲ್ ಅನ್ನೋ ಊರಿನ ಕಡೆಗೆ 9 ಕಿಲೋಮೀಟರು ಹೋದರೆ ಈ ಜಲಪಾತ ಸಿಗುತ್ತೆ.

 1. ಸಿಲ್ವರ್ ಕ್ಯಾಸ್ಕೇಡ್ (ನೀಲಗಿರಿಸ್ ಜಲಪಾತ), ಕೊಡೈಕೆನಾಲ್, ತಮಿಳುನಾಡು.

ಕೊಡೈ ರೋಡ್ ನಿಂದ ಕೊಡೈಕೆನಾಲ್ ಗೆ ಹೋಗೋವಾಗ, ಅದಕ್ಕಿಂತ 8 ಕಿಲೋಮೀಟರು ಹಿಂದೆಯೇ ಈ ಜಲಪಾತ ಸಿಗುತ್ತೆ. ಇಲ್ಲಿನ ಕೆರೆಯಿಂದ ಹೆಚ್ಚಾಗಿ ಹೊರ ಹರಿಯೋ ನೀರಿಂದ ಈ ಜಲಪಾತ ಆಗಿದೆ. ಸುಮಾರು 180 ಅಡಿ ಎತ್ತರದಿಂದ ಧುಮುಕುತ್ತೆ.

 1. ಅಬ್ಬೆ ಜಲಪಾತ, ಕೊಡಗು, ಕರ್ನಾಟಕ.

70 ಅಡಿ ಎತ್ತರದಿಂದ ಧುಮುಕೋ ಈ ಜಲಪಾತ ಕೊಡಗಿನ ಆಕರ್ಷಣೆಗಳಲ್ಲಿ ಒಂದು. ಇದು ನಿಮ್ಮ ಮನಸೂರೆಗೊಳ್ಳೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಬೆಂಗಳೂರಿಂದ ಸುಮಾರು 268 ಕಿಲೋಮೀಟರು ದೂರದಲ್ಲಿದೆ.

 1. ಚಿತ್ರಕುಟ್ ಜಲಪಾತ, ಛತ್ತೀಸ್ಗಢ.

ಈ ಪ್ರಸಿದ್ದವಾದ ಜಲಪಾತ ಇಂದ್ರಾವತಿ ನದಿಯಿಂದ ಆಗಿದೆ. ಜಾಗದಲ್ ಪುರದಿಂದ ಪಶ್ಚಿಮದಲ್ಲಿದೆ.ಸುಮಾರು 30 ಮೀಟರ್ ಎತ್ತರದಿಂದ ನೀರು ಧುಮುಕುತ್ತೆ.

 1. ಕೆಂಪ್ಟಿ ಫಾಲ್ಸ್, ಮಸ್ಸೂರಿ, ಉತ್ತರಾಖಂಡ್.

ಕೆಂಪ್ಟಿ ಜಲಪಾತವು ಮುಸೂರಿಯಿಂದ 13 ಕಿ.ಮೀ ದೂರದಲ್ಲಿ ಚಕ್ರತಾ ರಸ್ತೆಯಲ್ಲಿದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 1,364 ಮೀಟರ್ ಎತ್ತರದಲ್ಲಿದೆ ಮತ್ತು ಪರ್ವತ ಶ್ರೇಣಿಗಳು 4,500 ಅಡಿ ಎತ್ತರದಲ್ಲಿದೆ.

 1. ಕುಟ್ರಾಲಂ ಜಲಪಾತ, ತಮಿಳುನಾಡು.

ತಿರುನೆಲ್ವೇಲಿ ಜಿಲ್ಲೆಯಲ್ಲಿ, ಕುಟ್ರಾಲಂ ಜಲಪಾತವು ಹಲವಾರು ಜಲಪಾತಗಳನ್ನು ಒಳಗೊಂಡಿದೆ. ಮಳೆಗಾಲದಲ್ಲಿ ಅದರಲ್ಲೂ ಜೂನ್ ನಿಂದ ಸೆಪ್ಟೆಂಬರ್ ಒಳಗೆ ಇಲ್ಲಿ ಹೋದರೆ ಮಾತ್ರ ನೀರು ಇರುತ್ತೆ. ಈ ಸಮಯದಲ್ಲಿ 24 ಗಂಟೆ ಪ್ರವಾಸಿಗರು ಭೇಟಿಮಾಡಬಹುದು. ಲೈಟ್, ಪೊಲೀಸ್ ಕಾವಲು, ಬಟ್ಟೆ ಬದಲಾಯಿಸಲು ಬೇಕಾದ ವ್ಯವಸ್ಥೆ ಇದೆ.

 1. ಗಗನ ಚುಕ್ಕಿ ಭರ ಚುಕ್ಕಿ ಜಲಪಾತ, ಶಿವನ ಸಮುದ್ರ, ಕರ್ನಾಟಕ.

ಶಿವನಸಮುದ್ರವನ್ನ ಒಂದು ದ್ವೀಪ ಅಂಟಿಗೆ ಹೇಳಬಹುದು. ಈ ಜಲಪಾತ ಪ್ರಪಂಚದಲ್ಲೇ ಅತ್ಯಂತ ಸುಂದರವಾದ 100 ಜಲಪಾತಗಳಲ್ಲಿ ಒಂದು ಅಂತ ಗುರುತಿಸಿದ್ದಾರೆ.

 1. ಥೋಸ್ಘರ್ ಜಲಪಾತ, ಮಹಾರಾಷ್ಟ್ರ.

ಇದು ಸತಾರ ದಿಂದ 20 ಕಿಲೋಮೀಟರು ದೂರದಲ್ಲಿದೆ. ಇದು ಹಲವಾರು ಜಲಪಾತಗಳ ಗುಂಪಾಗಿದ್ದು ಇದರಲ್ಲಿ 15 ಮೀಟರ್ ಎತ್ತರದಿಂದ ಧುಮುಕೋ ಜಲಪಾತದಿಂದ ಹಿಡಿದು 500 ಮೀಟರ್ ಎತ್ತರದಿಂದ ಧುಮುಕೋ ಜಲಪಾತ ಕೂಡ ಇದೆ.

 1. ಹಿರ್ನಿ ಜಲಪಾತಗಳು, ಜಾರ್ಖಂಡ್.

37 ಮೀಟರ್ ಎತ್ತರದಿಂದ ಧುಮುಕೋ ಈ ಅದ್ಭುತ ಜಲಪಾತಗಳನ್ನು ರಾಂಚಿಯಿಂದ ಒಂದು ದಿನ ಪ್ರವಾಸಕ್ಕೆ ಭೇಟಿ ನೀಡಬಹುದು.

 1. ಲುಕಾಮ್ ಜಲಪಾತ, ಮುನ್ನಾರ್, ಕೇರಳ.

ಮುನ್ನಾರ್ ಪಟ್ಟಣದಿಂದ ಕೇವಲ 5 ನಿಮಿಷಗಳ ದೂರದಲ್ಲಿರುವ ಲುಕ್ಕಂ (ಅಥವಾ ಲಕಮ್) ಜಲಪಾತವು ಈ  ಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

 1. ಪಾಂಶುಟಿಯ ಗ್ರಾಮ, ಪೂರ್ವ ಖಾಸಿ ಬೆಟ್ಟ, ಮೇಘಾಲಯ.

ದೇಶದ ಅತಿ ಎತ್ತರದ ಜಲಪಾತ ಹೊಂದಿರೋ ರಾಜ್ಯ ಅಂತ ಹೆಸರು ಮಾಡಿರೋ ಮೇಘಾಲಯದಲ್ಲೇ ಇದು ಇರೋದು. ವರ್ಷದ ಯಾವುದೇ ಕಾಲದಲ್ಲಿ ಹೋದರು ನಿಮಗೆ ರಸದೌತಣ ಬಡಿಸೋದಕ್ಕೆ ಸಜ್ಜಾಗಿವೆ ಇಲ್ಲಿನ ಜಲಪಾತಗಳು.

 1. ಸರ್ಕಾರ್ಪತಿ, ಪೊಲ್ಲಾಚಿ, ತಮಿಳುನಾಡು.

ಇದರಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ, ಆದರೆ ಪೊಲ್ಲಾಚಿ ಪ್ರದೇಶವನ್ನು ಭೇಟಿ ಮಾಡಿದ ಪ್ರವಾಸಿಗರು ಖಂಡಿತ ನೋಡಲೇಬೇಕಾದ ಜಾಗ ಅಂತ ಹೇಳ್ತಾರೆ . ಪೊಲ್ಲಾಚಿಯಿಂದ 35 ಕಿ.ಮೀ ದೂರದಲ್ಲಿರುವ ಸರ್ಕಾರ್ಪತಿಯು ಈ ಪ್ರದೇಶದ ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಅದ್ಭುತವಾದ ಅನುಭವ ಕೊಡುತ್ತೆ.

 1. ಇರುಪ್ಪು ಜಲಪಾತ, ಕೊಡಗು, ಕರ್ನಾಟಕ.

ಇದು ಕೊಡಗಿನ ಬ್ರಹ್ಮಗಿರಿ ಬೆಟ್ಟದ ಪ್ರದೇಶದಲ್ಲಿದೆ. ಕೇರಳದ ವಯನಾಡು ಜಿಲ್ಲೆಗೂ ಇದು ಸಮೀಪದಲ್ಲಿದೆ, 170 ಅಡಿ ಎತ್ತರದಿಂದ ಧುಮುಕೋ ಈ ಜಲಪಾತದ ಉಲ್ಲೇಖ ರಾಮಾಯಣದಲ್ಲಿದೆ. ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಇಲ್ಲಿ ಬಂದಾಗ, ರಾಮನಿಗೆ ಬಾಯಾರಿಕೆಯಾಗಿ ಲಕ್ಷ್ಮಣನನ್ನು ನೀರು ಕೇಳಿದಾಗ, ಅವನು ಬಾಣ ಹೊಡೆದು ನೀರು ಬರುವಂತೆ ಮಾಡಿದಾಗ ಉದ್ಭವವಾದದ್ದೇ ಈ ಲಕ್ಷ್ಮಣ ತೀರ್ಥ ಅನ್ನೋ ನದಿ.

 1. ಮೀನ್ಮಟ್ಟಿ (ಕಲ್ಲರ್) ಜಲಪಾತ, ಕೇರಳ.

ಕಲ್ಲರ್ ಜಲಪಾತವು ತಿರುವನಂತಪುರಂನಿಂದ 35 ಕಿ.ಮೀ ದೂರದಲ್ಲಿದೆ. ಈ ಜಲಪಾತಕ್ಕೆ ಭೇಟಿ ನೀಡಲು ಜನರು ಸುಮಾರು 1.5 ಕಿ.ಮೀ.ಗಳಷ್ಟು ಚಾರಣ ಮಾಡಬೇಕಾಗಬಹುದು, ಆದರೆ ಅದ್ಭುತ ನೋಟ, ನೀರಿನಿಂದ ಸುತ್ತುವರಿದ ನೀರಿನ ಧ್ವನಿಯೊಂದಿಗೆ ಇದು ಯೋಗ್ಯವಾದ ಅನುಭವ ನೀಡುತ್ತೆ.

 

ಈ ಕಣ್ಮನ ಸೆಳೆಯೋ ಜಲಪಾತಗಳನ್ನ ಒಂದುಸಲ ಆದ್ರೂ ನೋಡ್ಲೇಬೇಕು ಅಲ್ವಾ? ನಮ್ಮ ದೇಶದಲ್ಲಿ ಇರೋದು ಇಷ್ಟು ಕಮ್ಮಿ ಜಲಪಾತಗಳ ಅಂತ ಅಂದ್ಕೋಬೇಡಿ ಈ ಪಟ್ಟಿ ತುಂಬಾನೇ ದೊಡ್ಡದು.