https://upload.wikimedia.org/wikipedia/commons/f/fb/Elephant_family.jpg

ಒಳ್ಳೆ ಮಳೆ ಬೀಳ್ತಿದೆ. ಕೆಲವು ಅಣೆಕಟ್ಟು ತುಂಬಿದ್ದಾವೆ. ಇನ್ನೂ ಕೆಲವು ತುಂಬ್ತಾ ಇದ್ದಾವೆ. ಯಾವ್ಯಾವ ಡ್ಯಾಮಲ್ಲಿ ಎಷ್ಟ್ ನೀರಿದೆ ಅಂತ ದಿನಾ ಪೇಪರಲ್ಲಿ ನೋಡ್ತಾ ಇರ್ತೀವಿ. ಒಂದ್ಸಲಾನಾದ್ರೂ ಕಣ್ಣಾರೆ ಈ ಡ್ಯಾಮ್ಗಳನ್ನ ನೋಡ್ಬೇಕು ಅಂದ್ಕೊತೀವಿ. ನಮ್ ರಾಜ್ಯದ ಡ್ಯಾಮ್ಗಳ ವಿವರ ಇಲ್ಲಿದೆ ನೋಡಿ. ಇವನ್ನ ನೋಡಕ್ಕೆ ಈಗಲೇ ಒಳ್ಳೆ ಟೈಮು. ಮನೆಯೋರೆಲ್ಲ… ಅಥವಾ ಫ್ರೆಂಡ್ಸ್ ಜೊತೆ… ಅಥವಾ 'ಅವರ' ಜೊತೆ… ಕಡೇ ಪಕ್ಷ ಒಬ್ಬರೇ ಆದರೂ ಪರವಾಗಿಲ್ಲ, ಹೋಗಿ ನೋಡಿಬಿಡಿ!

1. ತುಂಗಭದ್ರಾ ಗಾರ್ಡನ್ ಮತ್ತೆ ಅಣೆಕಟ್ಟು (ಹೊಸಪೇಟೆ)

ಕೃಷ್ಣ ಉಪನದಿ ತುಂಗಭದ್ರಾಗೆ ಕಟ್ಟಿದ್ದಾರೆ ಈ ಅಣೆಕಟ್. ಇದರ ಎತ್ತರ ತಳದಿಂದ 49.5 ಮೀಟರು. ತುಂಗಭದ್ರಾ ನದಿಗೆ ಕಟ್ಟರುವ ಅತಿದೊಡ್ಡ ಜಲಾಶಯ ಇದು. ಇದರ ಸಾಮರ್ಥ್ಯ 101 ಟಿಎಂಸಿ ( thousand million cubic feet). ಜಲಾಶಯ ತುಂಬಿದರೆ ನೀರು 378 ಚದರ ಕಿ.ಮೀವರೆಗೆ ಹರಡ್ಕೊಳ್ಳತ್ತೆ.

2. ವಾಣಿ ವಿಲಾಸ ಸಾಗರ ಅಣೆಕಟ್ಟು (ಚಿತ್ರದುರ್ಗ)

ಇದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿದೆ. ಕರ್ನಾಟಕದ ಅತ್ಯಂತ ಹಳೆ ಅಣೆಕಟ್ಟಿದು. ಮೈಸೂರಿನ ಮಹಾರಾಜರು ಸ್ವಾತಂತ್ರ್ಯ ಬರೋದಕ್ಕೂ ಮುಂಚೆ ಕಟ್ಟಿಸಿದರು. ವೇದವತಿ ನದಿಗೆ ಈ ಡ್ಯಾಮ್ ಕಟ್ಟಲಾಗಿದೆ. ಹಿರಿಯೂರು ಮತ್ತೆ ಚಿತ್ರದುರ್ಗ ಜನ ಈ ಜಲಾಶಯದ ನೀರು ಬಳಸ್ತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ತಾರಾ ಚಂದ್ ದಲಾಲ್ ಅನ್ನೋ ಇಂಜಿಯರ್ ಇದನ್ನ ಕಟ್ಟಿದ.

3. ಕಬಿನಿ ಅಣೆಕಟ್ಟು (ಮೈಸೂರು)

ಇದನ್ನ 1974ರಲ್ಲಿ ಕಟ್ಟಿದ್ರು. ಈ ಅಣೆಕಟ್ಟಿನ ಎತ್ತರ 696 ಮೀಟರು. ಇದರ ಜಲಾನಯನ ಪ್ರದೇಶ 2141.90 ಚದರ ಕಿ.ಮೀ. ಸುಮಾರು 55 ಹೆಕ್ಟೇರ್ ಇರೋ ಈ ಅಣೆಕಟ್ಟು ಪ್ರೇಶದಲ್ಲಿ ಕಾಡು, ನದಿ, ಸರೋವರ ಮತ್ತು ಕಣಿವೆಗಳಿವೆ.

4. ಕೃಷ್ಣರಾಜ ಸಾಗರ (ಕೆಆರ್‍ಎಸ್) ಅಣೆಕಟ್ಟು (ಮಂಡ್ಯ)

ಈ ಅಣೆಕಟ್ಟನ್ನ ಕಟ್ಟಿದ್ದು 1924ರಲ್ಲಿ. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನಾಡಿ ಇದು. ಈ ಜಲಾಶಯದಿಂದ ಹೊರಗೆ ಬಿಡೋ ನೀರು ಮೆಟ್ಟೂರು ಡ್ಯಾಮ್ ಸೇರುತ್ತೆ (ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿದೆ). ಕೇವಲ ಕುಡಿಯಕ್ಕಷ್ಟೇ ಅಲ್ಲದೆ ಬೆಳೆಗಳಿಗೂ ಈ ನೀರನ್ನ ಬಳಸ್ತಾರೆ. ಕೆಆರ್‍ಎಸ್ಗೆ ಹೊಂಡ್ಕೊಂಡಂತೆ ಬೃಂದಾವನ ಗಾರ್ಡನ್ಸ್ ಇದೆ.

5. ಆಲಮಟ್ಟಿ ಅಣೆಕಟ್ಟು (ಬಿಜಾಪುರ)

ಕೃಷ್ಣಾ ಮೇಲ್ದಂಡೆ ಯೋಜನೆ ಜಲಾಶಯ ಇದು. ಬಾಗಲಕೋಟೆ ಮತ್ತೆ ಬಿಜಾಪುರ ಜಿಲ್ಲೆಗೆ ಹೊಂಡ್ಕೊಂಡಂತೆ. ಇಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ 290 ಮೆಗಾವ್ಯಾಟ್ ವಿದ್ಯುತ್ ತಯಾರಿಸುತ್ತೆ.

6. ಭದ್ರಾ ನದಿ ಯೋಜನೆ ಅಣೆಕಟ್ಟು (ಶಿವಮೊಗ್ಗ)

ತುಂಗಭದ್ರ ಉಪನದಿ ಭದ್ರಾಗೆ ಕಟ್ಟಿರುವ ಅಣೆಕಟ್ಟಿದು. ಇದರ ಎತ್ತರ ನದಿ ತಳಮಟ್ಟದಿಂದ 59.13 ಮೀಟರು. ಉದ್ದ 1708 ಮೀಟರು.

7. ಸೂಪಾ ಅಣೆಕಟ್ಟು (ಗಣೇಶಗುಡಿ)

ಕಾಳಿನದಿಗೆ ಕಟ್ಟಿರೋ ಅಣೆಕಟ್ಟಿದು. ಉತ್ತರ ಕನ್ನಡ ಜಿಲ್ಲೆ ಜೋಯ್ಡಾ ತಾಲೂಕಲ್ಲಿದೆ. ಇಲ್ಲಿನ ಎರಡು ವಿದ್ಯುತ್ ಜನರೇಟರುಗಳಿವೆ. ಒಂದೊಂದು ಜನರೇಟರ್ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸತ್ತೆ. ಈ ಅಣೆಕಟ್ಟು ಸಾಮರ್ಥ್ಯ 145 ಟಿಎಂಸಿ. ಜಲಾನಯನ ಪ್ರದೇಶ 1,057 ಚದರ ಕಿ.ಮೀ.

8. ಗಾಜನೂರು ಅಣೆಕಟ್ಟು (ಶಿವಮೊಗ್ಗ)

ಈ ಅಣೆಕಟ್ಟು ತುಂಗಾ ನದಿಗೆ ಕಟ್ಟಿದ್ದಾರೆ. ಮೈಸೂರು ಕನ್‍ಸ್ಟ್ರಕ್ಷನ್ ಕಂಪನಿ (MCC) ಇದನ್ನ 1972ರಲ್ಲಿ ಕಟ್ಟಿಸಿತು. ಇದಕ್ಕೆ 22 ಗೇಟುಗಳಿವೆ. ‎ಇದರ ಗರಿಷ್ಟ ಸಾಮರ್ಥ್ಯ 533.24 ಮೀಟರು.

9.ಮಂಚನಬೆಲೆ ಅಣೆಕಟ್ಟು (ಮಂಚನಬೆಲೆ)

ಇದನ್ನ ಅರ್ಕಾವತಿ ನದಿಗೆ ಕಟ್ಟಿದ್ದಾರೆ. ಈಜು ಬರುತ್ತೆ ಅಂತೇಳಿ ಈ ಡ್ಯಾಮ್ಗೆ ಇಳಿಯೋ ಸಾಹಸ ಮಾಡಿದ್ರೆ ಅಷ್ಟೆ. ಈ ಜಲಾಶಯಕ್ಕೆ ಇಳಿಯೋದು ತುಂಬಾ ಅಪಾಯಕಾರಿ.

10. ಗೋರೂರು ಅಣೆಕಟ್ಟು (ಹಾಸನ)

ಇದನ್ನ ಕಾವೇರಿ ಉಪನದಿ ಹೇಮಾವತಿಗೆ ಕಟ್ಟಿದ್ದಾರೆ. ಇದನ್ನ ಹೇಮಾವತಿ ಡ್ಯಾಮ್ ಅಂತಾನೂ ಕರೀತಾರೆ. 1979ರಲ್ಲಿ ಇದನ್ನ ಕಟ್ಟಲಾಯ್ತು. ಅತಿದೊಡ್ಡ ಜಲಾಶಯ ಇದಾಗಿದ್ದು ಇದರ ಜಲಾನಯನ ಪ್ರದೇಶ 2,810 ಚದರ ಕಿ.ಮೀ. ಉದ್ದ 4,692 ಮೀಟರು ಮತ್ತು ಎತ್ತರ 58.5 ಮೀಟರು. ಇದರ ಸಾಮರ್ಥ್ಯ 1,050.63 ಎಂಸಿಎಂ (Million Cubic Metre)

11. ಲಿಂಗನಮಕ್ಕಿ ಅಣೆಕಟ್ಟು (ಶಿವಮೊಗ್ಗ)

ಇದನ್ನ 1964ರಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸಿದ್ದು. ಸಾಗರ ತಾಲೂಕಲ್ಲಿದೆ. ಶರಾವತಿ ನದಿಗೆ ಇದನ್ನ ಕಟ್ಟಿದ್ದಾರೆ. ಇದರ ಉದ್ದ 2.4 ಕಿ.ಮೀ. ಜೋಗ ಜಲಪಾತದಿಂದ 6 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಈ ಅಣೆಕಟ್ಟಿನ ಎತ್ತರ 1,819 ಅಡಿ (554 ಮೀಟರು).

12. ಮಾರ್ಕೋನಹಳ್ಳಿ ಅಣೆಕಟ್ಟು (ತುಮಕೂರು)

ಶಿಂಷಾ ನದಿಗೆ ಕಟ್ಟಲಾಗಿರೋ ಇದು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಲ್ಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಇದನ್ನ ಕಟ್ಟಿಸಿದ್ರು. ಆಗ ದಿವಾನ್ ಆಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಮಾರ್ಗದರ್ಶನದಲ್ಲಿ ಇದನ್ನ ಕಟ್ಟಿದ್ರು. ಇಲ್ಲಿ 6,070 ಹೆಕ್ಟೇರ್ ಭೂಮಿಗೆ ನೀರಾವರಿ ಮಾಡಲಾಗ್ತಿದೆ. ಜಲಾಶಯದಲ್ಲಿ ಸುಮಾರು 4,103 (1,584 ಮೈಲಿ) ಕಿ.ಮೀ ಸಂಗ್ರಹಣಾ ಪ್ರದೇಶ ಇದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 731,57 ಮೀ ಎತ್ತರದಲ್ಲಿದೆ.

13. ಹಾರಂಗಿ ಜಲಾಶಯ (ಕೊಡಗು)

ಇದು ಹುದುಗೂರು ಗ್ರಾಮದಲ್ಲಿದೆ (ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು). ಕಾವೇರಿ ಉಪನದಿ ಹಾರಂಗಿ ಕೊಡಗಿನ ಪಶ್ಚಿಮ ಘಟ್ಟಗಳ ಪುಷ್ಪಗಿರಿ ಬೆಟ್ಟಗಳಲ್ಲಿ ಹುಟ್ಟಿ ಹರಿಯುತ್ತೆ. ಇದನ್ನ 1982ರಲ್ಲಿ ನಿರ್ಮಿಸಲಾಯ್ತು.

14. ಯಲಚಿ ಅಣೆಕಟ್ಟು (ಹಳೇಬೀಡು)

ಇದು ಹಾಸನ ಜಿಲ್ಲೆ ಬೇಲೂರು ನಗರದಿಂದ 3 ಕಿ.ಮೀ ದೂರದಲ್ಲಿದೆ. 2001ರಲ್ಲಿ ಇದನ್ನ ನಿರ್ಮಿಸಿದ್ರು. ಸಮುದ್ರ ಮಟ್ಟದಿಂದ 965 ಅಡಿ ಎತ್ತರದಲ್ಲಿದೆ. ಇದರ ಉದ್ದ 1,280 ಮೀಟರು. ನದಿ ತಳಮಟ್ಟದಿಂದ 26.237 ಮೀಟರ್ ಎತ್ತರ ಇದೆ.

15. ತುಂಗಾ ಅಣೆಕಟ್ಟು (ಶಿವಮೊಗ್ಗ)

ಇದನ್ನ ತುಂಗಾ ನದಿಗೆ ಕಟ್ಟಿದ್ದಾರೆ. ಶಿವಮೊಗ್ಗದಿಂದ 12 ಕಿ.ಮೀ ದೂರಲ್ಲಿದೆ. ಶೆಟ್ಟಿಹಳ್ಳಿ ವನ್ಯಜೀವಿ ತಾಣಕ್ಕೆ ಹೊಂಡ್ಕೊಂಡಂತಿದೆ. ''S'' ಶೇಪಲ್ಲಿ ಇದನ್ನ ಕಟ್ಟಿದ್ದಾರೆ. ಈ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಕಾಡುಗಳೂ ಇವೆ. ನೋಡಕ್ಕೆ ತುಂಬಾ ಸುಂದರವಾಗಿದೆ ಈ ಅಣೆಕಟ್ಟು.

16. ಹಿಡ್ಕಲ್ ಅಣೆಕಟ್ಟು (ಬೆಳಗಾವಿ)

ಇದನ್ನ ಘಟಪ್ರಭಾ ನದಿಗೆ ಕಟ್ಟಲಾಗಿದೆ (ಬೆಳಗಾವಿ ಜಿಲ್ಲೆ ಹುಕ್ಕೇರಿ ಬಳಿ). ಬೆಳಗಾವಿ ಜಿಲ್ಲೆಯ ಅತ್ಯಂತ ದೊಡ್ಡ ಅಣೆಕಟ್ಟಿದು. ವಿದ್ಯುತ್ ತಯಾರಿಸಕ್ಕೆ, ಕುಡಿಯೋ ನೀರಿಗೆ ಮತ್ತು ನೀರಾವರಿ ಉದ್ದೇಶಕ್ಕೆ ಇದನ್ನು ನಿರ್ಮಿಸಿದ್ದಾರೆ. ಇದರ ಉದ್ದ 10183 ಮೀಟರು. ಇಲ್ಲಿನ 22 ಹಳ್ಳಿಗಳಿಗೆ ನೀರು ಸಿಗುತ್ತೆ.

17. ಲಕ್ಯಾ ಅಣೆಕಟ್ಟು (ಚಿಕ್ಕಮಗಳೂರು)

ಭದ್ರಾದ ಉಪನದಿ ಲಕ್ಯಾಗೆ ಕಟ್ಟಲಾಗಿರೋ ಚೆಕ್ ಡ್ಯಾಮ್ ಇದು. ಇದನ್ನ ಕಟ್ಟಿಸಿದ್ದು ಕುದುರೆ ಮುಖ ಕಬ್ಬಿಣ ಅದಿರು ಕಂಪನಿ. ಇದರ ಎತ್ತರ 100 ಮೀಟರು. ಸುಮಾರು 572 ಹೆಕ್ಟೇರ್ ಪ್ರದೇಶದಲ್ಲಿ ಹರಡ್ಕೊಂಡಿದೆ.

18. ಸುವರ್ಣವತಿ ಅಣೆಕಟ್ಟು (ಮೈಸೂರು)

ಇದನ್ನ ಸುವರ್ಣವತಿ ನದಿಗೆ ಕಟ್ಟಿದ್ದಾರೆ. ಚಾಮರಾಜಪೇಟೆ ತಾಲೂಕ್ನ ಚಿಕ್ಕಿಹೊಳೆ ಜಲಾಶಯದಿಂದ 3 ಕಿ.ಮೀ ದೂರದಲ್ಲಿದೆ.

19. ಕೊಡಸಳ್ಳಿ ಅಣೆಕಟ್ಟು (ಯಲ್ಲಾಪುರ)

ಇದು ಯಲ್ಲಾಪುರ ತಾಲೂಕಲ್ಲಿದೆ (ಉತ್ತರ ಕನ್ನಡ ಜಿಲ್ಲೆ). ಕಾಳಿನದಿಗೆ ಕಟ್ಟಿರೋ ಅಣೆಕಟ್ಟಿದು. ಇದನ್ನ ನಿರ್ಮಿಸಿದ್ದು ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್.

20. ಚಂದ್ರಂಪಲ್ಲಿ ಅಣೆಕಟ್ಟು (ಗುಲಬರ್ಗ)

ಇದನ್ನ ಭೀಮಾ ನದಿಗೆ ಕಟ್ಟಿದ್ದಾರೆ. 1973ರಲ್ಲಿ ಇದನ್ನ ಕಟ್ಟಿದರು. ಇದರ ಸಾಮರ್ಥ್ಯ 493.16 ಅಡಿಗಳು.

21. ಕದ್ರಾ ಅಣೆಕಟ್ಟು (ವಿರ್ಜೆ)

ಇದನ್ನ ಕಾಳಿನದಿಗೆ ಕಟ್ಟಲಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

22. ಕಣ್ವ ಅಣೆಕಟ್ಟು (ರಾಮನಗರಂ)

ಇದನ್ನ ಕಣ್ವ ನದಿಗೆ ಕಟ್ಟಿದ್ದಾರೆ. 1946ರಲ್ಲಿ ಕಟ್ಟಲಾಯ್ತು. 15 ಕಿ.ಮೀ ಉದ್ದ ಇರೋ ಇದು 776 ಹೆಕ್ಟೇರ್ ಪ್ರದೇಶವನ್ನ ಒಳಗೊಂಡಿದೆ. ಶಿಂಷಾ ಮತ್ತೆ ಕಾವೇರಿ ಉಪನದಿ ಕಣ್ವ. ರಾಮಾಯಣ ಕಾಲದಲ್ಲಿ ಕಣ್ವ ಮಹರ್ಷಿಗಳು ಇಲ್ಲಿದ್ರು ಅನ್ನೋ ಕಾರಣ ಇದಕ್ಕೆ ಈ ಹೆಸರು ಬಂದಿದೆ.

23. ನಾರಾಯಣಪುರ ಅಣೆಕಟ್ಟು (ಯಾದಗಿರಿ)

ಇದನ್ನ ಕೃಷ್ಣಾ ನದಿಗೆ ಕಟ್ಟಲಾಗಿದೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರದಲ್ಲಿದೆ. 1982ರಲ್ಲಿ ಇದನ್ನ ಕಟ್ಟಿದರು.

24. ಕಡವಿನಕಟ್ಟೆ ಅಣೆಕಟ್ಟು (ಭಟ್ಕಳ)

ಇದನ್ನ ವೆಂಕಟಾಪುರ ನದಿಗೆ ಕಟ್ಟಿದ್ದಾರೆ. ಭಟ್ಕಳದಲ್ಲಿರೋ ಈ ಅಣೆಕಟ್ಟಿಂದ ನಗರಕ್ಕೆ ನೀರು ಬಿಡ್ತಾರೆ.