ಲೈಫಲ್ಲಿ ಒಳ್ಳೊಳ್ಳೇ ಹವ್ಯಾಸಗಳನ್ನ ಇಟ್ಕೊಳೋದ್ರಿಂದ ಹುಮ್ಮಸ್ಸನ್ನ ಜಾಸ್ತಿ ಮಾಡ್ಕೋಬೋದು ಅನ್ನೋದು ಹಳೇ ವಿಷ್ಯ. ಆದ್ರೆ ಈ ಹಾಬಿಗಳಿಂದ ದುಡ್ಡೂ ಮಾಡ್ಬೋದು ಅನ್ನೋದು ತುಂಬಾ ಜನಕ್ಕೆ ಗೊತ್ತಿರಲಾರದು. ಅಂತಾ 8 ಒಳ್ಳೊಳ್ಳೆ ಹಾಬಿಗಳ ಬಗ್ಗೆ ಇಲ್ಲಿದೆ, ಓದಿ:

1. ಸಂಗೀತ ಕಲಿಯೋದು, ಕಲಿಸೋದು

ಸಂಗೀತದ ಮೋಡಿಗೆ ತಲೆದೂಗದೋರು ಯಾರೂ ಇಲ್ಲ ಬಿಡಿ.   ಕೆಲವ್ರು ಹಾಡೋದಕ್ ಇಷ್ಟಪಡ್ತಾರೆ, ಇನ್ ಕೆಲುವ್ರು ವಾದ್ಯಗಳನ್ನ ನುಡಿಸೋದು ಕಲೀತಾರೆ . ಅಲ್ದೇ ಸಂಗೀತ ಕಲ್ತಿರೋರು ಕೆಲುವ್ರು ಮನೇಲಿ ಸಂಜೆ ಹೊತ್ತು ಸುತ್ಮುತ್ಲ್ ಮಕ್ಳಿಗೆ ಸಂಗೀತಪಾಠ ಹೇಳ್ಕೊಟ್ಟು ಅಷ್ಟೋ ಇಷ್ಟೋ ಸಂಪಾದನೇನೂ ಮಾಡ್ತಾರೆ. ವಾದ್ಯಗಳನ್ನ ಚನ್ನಾಗಿ ಕಲ್ತೋರು ಅದನ್ನ ಉದ್ಯೋಗ ಮಾಡ್ಕೊಳ್ದೇ ಹೋದ್ರೂ, ಅಲ್ಲಿಲ್ಲಿ ಸಣ್ ಸಣ್ ಪ್ರೋಗ್ರಾಮಲ್ಲಿ ನುಡ್ಸಿ ಪಾಕೆಟ್ ಮನಿ ಮಾಡ್ಕೋತಾರೆ.

ಮೂಲ

2. ಟೈಲರಿಂಗ್

ಈ ಅಭ್ಯಾಸ ಎಲ್ಲಾರ್ಗೂ ಇರೋದಿಲ್ಲ. ಆದ್ರೆ ಕೆಲುವ್ರು ಟೈಲರಿಂಗನ್ನ ಹಾಬಿಯಾಗಿ ಶುರು ಮಾಡಿ ಆಮೇಲೆ ಅದ್ರಲ್ಲಿ ಔರುದ್ದೇ ಸ್ಪೆಶಾಲಿಟಿಗಳನ್ನ ಬೆಳೆಸ್ಕೊತಾ ಹೋಗ್ತಾರೆ. ಸಣ್ಣ ಪುಟ್ಟ ಹೊಲಿಗೆ ಮಾಡ್ಕೊಂಡು ಇರೋ ಬದ್ಲು ಸೀರೆ ಕುಚ್ ಹಾಕೋದು, ಡಿಸೈನ್ ರೌಕೆ ಹೊಲೆಯೋದು ಎಲ್ಲಾ ಕಲೀತಾ ಹೋಗ್ತಾರೆ. ಇವತ್ತು ಬೆಂಗಳೂರಲ್ಲಿ ಡಿಸೈನ್ ಬ್ಲೌಸ್ ಹೊಲೆಯಕ್ಕೆ 500-1000 ರುಪಾಯ್ ತೊಗೊಳ್ಳೋರೂ ಇದ್ದಾರೆ. ಇವ್ರೆಲ್ಲಾ ಹತ್ತೊರ್ಶದ್ ಹಿಂದೆ ಹಾಬಿ ಅಂತ ಶುರು ಮಾಡಿದ್ದೋರು!

ಮೂಲ

3. ಟೆರ್ರಾ ಕೋಟಾ ಮಾಡೋದು

ಚಿನ್ನದ್ ಒಡವೆಗೆ ಕಳ್ರು ಕಾಟ, ಅದಕ್ಕೇ ಟೆರ್ರಾಕೋಟಾ ಮೇಲೆ ಎಲ್ರ ನೋಟ. ಒಳ್ಳೊಳ್ಳೆ ಟೆರ್ರಾಕೋಟಾ ಡಿಸೈನುಗಳನ್ನ ಮನೇಲೇ ಮಾಡೋದ್ರ ಬಗ್ಗೆ ಕೆಲುವು ಶಿಬಿರಗಳೂ ಇರುತ್ವಂತೆ. ಅಲ್ ಹೋಗಿ ಕಲೀಬೋದು. ನಮಗಿಷ್ಟ ಆಗೋ ಹಾಗೆ ನಾವೇ ಡಿಸೈನ್ ಮಾಡಿದ್ ಒಡವೇನ್ ಹಾಕ್ಕೊಳ್ಳೋ ಮಜಾನೇ ಬೇರೆ. ಅಕಸ್ಮಾತ್ ನೀವ್ ಮಾಡೋ ಡಿಸೈನ್ಸ್ ತುಂಬಾ ಚನ್ನಾಗಿದ್ರೆ ಕಾಸ್ ಕೊಟ್ಟು ನಿಮ್ ಹತ್ರಾನೇ ತಗೊಳೋರೂ ಬರ್ಬೋದು.

ಮೂಲ

4. ನಾಣ್ಯಗಳನ್ನ ಕೂಡಿಡೋದು

ಜಗತ್ತಲ್ಲಿರೋ ಹೊಸ-ಹಳೇ ನಾಣ್ಯಗಳನ್ನ ಕೂಡಿಡೋ ಹಾಬಿ ಬರೀ ಮಜ ತರೋದೊಂದೇ ಅಲ್ರೀ, ಅದ್ರಿಂದ ದುಡ್ಡೂ ಮಾಡ್ಬೋದು. ಹೇಗೆ ಅಂತೀರಾ? ಯಾವ್ದಾರೂ ಅಪರೂಪದ ಕಾಯಿನ್‍ಗಳನ್ನ ಕಲೆ ಹಾಕ್ತಾ ಇರೋದು. ನಿಮ್ಗೇನಾದ್ರೂ ಒಂದೇ ಥರದ್ ಎರಡ್ ಕಾಯಿನ್ ಸಿಕ್ಕದ್ರೆ, ಅದ್ರಲ್ಲಿ ಒಂದನ್ನ ಇಂಟರ್ನೆಟ್ಟಲ್ಲಿ ಮಾರೋದು. ಈ ಥರ ಕಾಯಿನ್ ಮಾರಕ್ಕೆ ಅಂತಾನೇ ಹತ್ತಾರು ವೆಬ್ಸೈಟುಗಳಿವೆ, ಗೊತ್ತಾ?!! ಅಲ್ದೇ ಇದೇನ್ ಚಿಲ್ರೆ ವ್ಯಾಪಾರ್ ಅನ್ಕೋಬೇಡಿ. ಒಂದೊಂದ್ಸಲ ಐದ್ ರುಪಾಯ್ ಕಾಯಿನ್ನು ಐದ್ ಸಾವ್ರಕ್ಕೆ ಮಾರಾಟ ಆಗಿರೋದಿದೆ!

ಮೂಲ

5. ಹೊಸ ಬಗೆಯ ಅಡುಗೆ ಕಲಿಯೋದು

ಅಡುಗೆ ಮನೆ ಅಂದ್ರೆ ಹೆಂಗಸ್ರ ಕೆಲ್ಸ ಅಂತಿದ್ದಿದ್ದು ಓಬೀರಾಯನ್ ಕಾಲದ್ ಮಾತು ಬಿಡಿ. ಈಗೆಲ್ಲಾ ಹೊಸಹೊಸ ಅಡುಗೆಗಳನ್ನ ಹೆಂಗಸ್ರು, ಗಂಡುಸ್ರು (ಒಂದೊಂದ್ ಸಲ ಇಬ್ರೂ ಸೇರಿ) ಮಾಡಿ ಯೂಟ್ಯೂಬಲ್ಲಿ ಪೋಸ್ಟ್ ಮಾಡ್ತಾರೆ. ಆಗೊಮ್ಮೆ ಈಗೊಮ್ಮೆ ಹೊಸ ರುಚಿಗಳನ್ನ ಟ್ರೈ ಮಾಡ್ತಿರಿ. ನಾಲ್ಗೆಗೂ ರುಚಿ, ಜೀವನಕ್ಕೂ ಖುಶಿ. ಅಂದ್ ಹಾಗೇ ಅಡುಗೆ ಬ್ಲಾಗ್, ವೀಡಿಯೋಗಳನ್ನ ಇಂಟರ್ನೆಟ್ಟಲ್ಲಿ ಹರಿಬಿಟ್ರೆ ಅದ್ರಿಂದ ದುಡ್ಡೂ ಮಾಡ್ಬೋದು ಗೊತ್ತಾ? ಆದ್ರೆ ನಿಮ್ ವೀಡಿಯೋ/ಬ್ಲಾಗನ್ನ ಹತ್ತಾರ್ ಸಾವ್ರ್ ಜನ ನೋಡಿರ್ಬೇಕು ಅಷ್ಟೇ. ಯಾವ್ದೇ ಒಂದ್ ಯೂಟ್ಯೂಬ್ ವೀಡಿಯೋ ಇಂತಿಷ್ಟು ಜನಕ್ಕಿಂತ ಹೆಚ್ಚು ನೋಡಿದ್ರು ಅಂದ್ರೆ ಅದ್ರಿಂದ ನಿಮ್ಗೆ ದುಡಿಯೋ ಅವಕಾಶ ಇರುತ್ತೆ.

ಮೂಲ

6. ಬಗೆ ಬಗೆಯ ಹೇರ್ ಸ್ಟೈಲ್ / ಮೇಕಪ್ ಮಾಡೋದು

ಹೆಂಗಸ್ರಿಗೆ ಅಲಂಕಾರ ಮಾಡೋದನ್ನ ಕಲಿಸೋಕ್ಕೆ ಮೇಕಪ್, ಹೇರ್ ಸ್ಟೈಲ್ ಮಾಡೋ ಎಷ್ಟೋ ಕೋರ್ಸುಗಳು ಇರುತ್ವೆ. ಹಾಬಿಗೆ ಅಂತ ಇದಕ್ಕೆ ಸೇರ್ಕೊಂಡು ಬಿಡುವಾದಾಗೆಲ್ಲಾ ಅಭ್ಯಾಸ ಮಾಡೋರು ತುಂಬಾ ಜನ ಇದ್ದಾರೆ. ಹಾಬಿಗೆ ಅಂತ ಕಲ್ತು, ಆಮೇಲೆ ಚನ್ನಾಗ್ ಕಲ್ತ್ಕೊಂಡು ಔರ್ ನೆಂಟ್ರ ಮನೆಗಳಲ್ಲಿ ನಡ್ಯೋ ಮದ್ವೆಗಳಲ್ಲಿ ಮದುವೆ ಹೆಣ್ಗೆ ಔರೇ ಮೇಕಪ್, ಸ್ಟೈಲ್ ಜಡೆ ಎಲ್ಲಾ ಹಾಕ್ತಾರೆ. ಕೆಲುವ್ರು ಹಾಬಿ ಅಂತ ಶುರು ಮಾಡಿ ಸೈಡ್ ಬಿಸಿನೆಸ್ ಮಾಡ್ಕೊಂಡೋರೂ ಇದ್ದಾರೆ.

ಮೂಲ

7. ಕೈತೋಟ ಬೆಳೆಸೋದು

ಇದು ನಿಜವಾಗ್ಲೂ ಮೈ ಬೆವ್ರು ಸುರಿಸಿ ದುಡಿಯೋ ಹಾಬಿ. ನಮ್ ಕೈಯ್ಯಾರೆ ಹಾಕಿದ್ ಬೀಜ ಗಿಡವಾಗಿ ಬೆಳ್ದು ಹೂವೋ, ಹಣ್ಣೋ ಕೊಟ್ಟಾಗ ಆಗೋ ಖುಶೀನೇ ಬೇರೆ. ಮನೇಲೇ ಬೆಳೆಯೋ ಫ್ರೆಶ್ಶಾಗಿರೋ ತರಕಾರಿ ತಿನ್ನೋದು ಆರೋಗ್ಯಕ್ಕೂ ಒಳ್ಳೇದು ಅಲ್ದೇ ತಿಂಗ್ಳಾ ತಿಂಗ್ಳಾ ಕಮ್ಮಿ ಅಂದ್ರೂ ಹೂವು ತರಕಾರೀಗ್ ಸೇರಿ 200-300 ರುಪಾಯ್ ಉಳ್ಸ್ಬೋದು.

ಮೂಲ

8. ಚಿತ್ರಕಲೆ / ಗ್ರಾಫಿಕ್ ಡಿಸೈನ್

ಚಿತ್ರಕಲೆ ಅಂದ್ರೆ ಥಟ್ ಅಂತ ನೆನಪಾಗೋದು ಚಿಕ್ಕೋರಲ್ಲಿ ಹೋಗೋ ಸಮ್ಮರ್ ಕ್ಯಾಂಪ್… ಆದ್ರೆ ಕೆಲುವ್ರು ಈ ಕಲೇನ ಚನ್ನಾಗೇ ಮುಂದುವರೆಸ್ಕೊಂಡು, ಗ್ರಾಫಿಕ್ ಡಿಸೈನಿಂಗ್ ಕೋರ್ಸಿಗೆ ಹೋಗಿ ಕಲ್ತು ಸಣ್ಣ ಪುಟ್ಟ ಮನೆಯಿಂದಾನೇ ಮಾಡೋ ಕೆಲ್ಸ ಗಿಟ್ಟಿಸ್ಕೋತಾರೆ. ಕೈಯ್ಯಲ್ಲಿ ಕಲೆ, ಮನೇಲಿ ಕಂಪ್ಯೂಟರ್ ಇದ್ರೆ ಈ ಹಾಬಿ ನಿಮಗೆ ಒಳ್ಳೆ ಕಾಸ್ ಮಾಡೋ ಅವಕಾಶಗಳನ್ನ ಕೊಡುತ್ತೆ. ಮನೇಲೇ ಕೂತ್ಕೊಂಡ್ ಕೆಲ್ಸ ಮಾಡ್ತಿನಿ ಅನ್ನೋರ್ಗೆ ಇಂಟರ್ನೆಟ್ಟಲ್ಲಿ ಸಾವ್ರಾರು ಅವಕಾಶಗಳಿವೆ.

ಮೂಲ