https://cdn.hairclub.com/wp-content/themes/hairclub/images/male-pattern-baldness/what-is-male-pattern-baldness.jpg

ಪ್ರಪಂಚದಲ್ಲಿರೋ ಅರ್ಧಕ್ಕಿಂತಲೂ ಹೆಚ್ಚು ಗಂಡಸರಿಗೆ ಬೊಕ್ಕ ತಲೆ ಇದೆ. ಪ್ರತಿಯೊಬ್ಬ ಗಂಡ್ಸೂ ತನ್ನ 80ನೇ ವರ್ಷ ಮುಗಿಯೋದ್ರೊಳಗೆ ಒಂದಲ್ಲ ಒಂಥರದ ಬೊಕ್ಕ ತಲೆ, ಕೂದಲು ಉದುರೋ ಸಮಸ್ಯೇನ ಎದುರಿಸೇ ಎದುರಿಸ್ತಾನೆ. ಬೋಳು ತಲೆಯೋರು  ಅನುಭವ್ಸೋ ನೋವು, ಮುಜುಗರ, ಸಮಸ್ಯೆ ಅವರರಿಗೆ ಮಾತ್ರಾನೇ ಅರ್ಥ ಆಗೋದು.

ಅಕಸ್ಮಾತಾಗಿ ಬೋಳು ತಲೆ ಸಮಸ್ಯೆಗೆ ಪರಿಹಾರ ಅನ್ನೋತರ, ಕೂದಲು ಬೆಳೆಯೋ ಹಾಗೆ, ಯಾವ್ದಾದ್ರೂ ಎಣ್ಣೆ, ಲೋಷನ್ ಏನಾದ್ರು ಕಂಡು ಹಿಡಿದ್ರೆ, ಈ 20  ವರ್ಷಗಳಲ್ಲಿ ಕಂಡು ಹಿಡಿದಿರೋ ಯಾವುದೇ ಔಷಧಿಗಿಂತ ಜಾಸ್ತಿ ಇದನ್ನ ಕೊಂಡ್ಕೋತಾರೆ ನೋಡಿ. ಸಾಕಷ್ಟು ಜನ ಇದ್ರಿಂದ ಕೋಟ್ಯಾಧಿಪತಿಗಳಾಗ್ಬೋದು. ಈಗ ಕೂದ್ಲಿರೊವ್ರೂ ಗಮನಿಸಬೇಕಾದ ಒಂದು ಅಂಶ ಅಂದ್ರೆ, ಒಂದಲ್ಲ ಒಂದು ದಿನ ನೀವು ಒಂದಲ್ಲ ಒಂದು ಲೆವೆಲ್ಗೆ ಕೂದಲು ಕಳ್ಕೋತೀರಿ. ಬೋಳು ತಲೆಯೋರ್ನ ತಮಾಷೆ ಮಾಡಕ್ಕೆ ಮುಂಚೆ ಈ ವಿಷಯ ನೆನಪಿರ್ಲಿ. ಇವತ್ತಲ್ಲಾ ನಾಳೆ ಅವರು ಅನುಭವಿಸೋ ಕಷ್ಟ, ಹಿಂಸೆ, ನೋವು , ಸಮಸ್ಯೇನ ನೀವೂ ಎದುರಿಸ್ಲೇ ಬೇಕಾಗತ್ತೆ.

ಈ ಬೊಕ್ಕ ತಲೆಯೋವ್ರು ಎದ್ರಿಸೋ ಸಮಸ್ಯೆ ಪಾಪ ಹೇಳಕ್ಕೇ ಆಗಲ್ಲ. ಆದ್ರೂ ನಾವಿಲ್ಲಿ ಅವರ 16 ರೀತಿ ಪಟ್ಟಿಮಾಡಿದ್ದೀವಿ ನೋಡಿ.

16. ಮದುವೆಯಾಗಕ್ಕೆ ಯಾವ ಹುಡುಗಿ ಒಪ್ಕೊತಾಳೆ ಅನ್ಸತ್ತೆ

ಇತ್ತೀಚೆಗ್ ಬಂತಲ್ಲಾ… ’ಒಂದು ಮೊಟ್ಟೆಯ ಕಥೆ’ ಅಂತ ಒಂದ್ ಫಿಲಮ್ಮು…ಅದ್ರಲ್ಲಿ ಆ ಹೀರೋದು ಇದೇ ಪಾಡು. ಬೋಳು ತಲೆ ಇರೋ ಗಂಡಸ್ರಿಗೆ ಜೀವನದ ಅತೀ ದೊಡ್ಡ ಸಮಸ್ಯೆ ಕಾಡೋದು… ಮದ್ವೆಗೆ ಹೆಣ್ಣ್ ಹುಡ್ಕೊಳೋ ಟೈಮಲ್ಲೇ! ಯಾರ್ನಾದ್ರೂ ತಾವೇ ನೋಡ್ಕೊಂಡಿದ್ರೆ ಬಚಾವ್… ಇಲ್ಲಾ ಅಂದ್ರೆ, ಇರುಸುಮುರುಸಾಗೋದು ಬಹುತೇಕ ಗ್ಯಾರೆಂಟಿ. ಮಾತು ಶುರುವಾಗೋ ಅಷ್ಟ್ರಲ್ಲೇ ಮುಗಿದ್ಹೋಗಿರತ್ತೆ ಪಾಪ! ಒಬ್ಬೊಬ್ರಂತೂ, ಈ ಮದ್ವೆ ಸಹವಾಸಾನೇ ಬೇಡಪ್ಪಾ ಅನ್ನೋ ಮಟ್ಟಕ್ಕೆ ತಲ್ಪಿರ್ತಾರೆ.

 

15. ಮನೆತನದಲ್ಲಿರೋ ಬೇರೆ ಮೊಟ್ಟೆಗಳನ್ನ ಬೈಬೇಕು ಅನ್ಸತ್ತೆ 

ಅವರ ಬೋಳು ತಲೆ ನೋಡ್ಕೊಂಡಾಗೆಲ್ಲಾ ತನಗೆ ಮಾತ್ರ ಯಾಕೆ ಹೀಗೆ ಅನ್ಯಾಯ ಆಯ್ತು ಅಂತ ಕೋಪ ಬರುತ್ತೆ. ಅಷ್ಟೇ ಅಲ್ಲ ಇದು ಯಾಕೆ ಹೆರಿಡಿಟ್ರಿಯಾಗಿ ಬರತ್ತೋ ಅಂತಾನೂ ಅನ್ಸುತ್ತೆ. ಅವರಿಗೆ ತಮ್ಮ ಕುಟುಂಬದಲ್ಲಿರೋ ಬೇರೆ ಬೋಳು ತಲೆ ಗಂಡಸರೂ ಈ ಪರಿಸ್ಥಿತಿನ ಎದುರಿಸೇ ಬಂದಿರೋದು ಅಂತ ಗೊತ್ತಿದ್ರು, ಅವರೇ ತಮ್ಮ ಬೋಳುತಲೆಗೆ ಕಾರಣ ಅಂತನ್ಸಿ, ಅವ್ರನ್ನ ದೂಷಿಸೋ ಹಾಗಾಗತ್ತೆ!

14. ಮೊದಲ ಭೇಟೀಲಿ ಫೋನಲ್ಲಿ ನೀವು ನೋಡಕ್ಕೆ ಹೇಗಿದ್ದೀರ ಅಂತ ಕೇಳ್ದಾಗ ಸಿಕ್ಕಾಪಟ್ಟೆ ಇರಿಸು ಮುರಿಸಾಗತ್ತೆ

ಇವರ ಫೋಟೋನೂ, ಅವ್ರನ್ನ ನೇರವಾಗಿ ನೋಡಿಲ್ದೆ ಇರೋವ್ರು ಮತ್ತು ಮೊದಲನೇ ಸಲ ಭೇಟಿ ಆಗಕ್ಕೆ ಬರೋ ಮುಂಚೆ ನೀವು ನೋಡಕ್ಕೆ ಹೇಗಿದ್ದೀರ? ನಿಮ್ಮನ್ನ ಹೇಗೆ ಗುರುತು ಹಿಡಿಯೋದು ಅಂತ ಕೇಳ್ದಾಗ ಮುಜುಗರ ಆಗೇ ಆಗುತ್ತೆ. ಇಂತ ಸಮಯದಲ್ಲಿ ಒಂದೋ… ಅವರು ತುಂಬಾ ಬೋಲ್ಡ್ ಆಗಿ, "ನಾನು ನೋಡಕ್ಕೆ ಹಾಗಿದ್ದೀನಿ, ಹೀಗಿದ್ದೀನಿ ಅಂತ ಹೇಳಿ, ಯಾವ್ದೋ ಪ್ರಸಿದ್ಧ ವ್ಯಕ್ತಿಗೆ ಹೋಲಿಸಿ ಅವರ ಹಾಗೆ ಬೋಳು" ಅಂತ ಹೇಳ್ಬಹುದು. ಇನ್ನು ತುಂಬಾ ಸ್ವಯಂ ಪ್ರಜ್ಞೆ ಇರೋ ವ್ಯಕ್ತಿ ಆದ್ರೆ, ಬೊಕ್ಕ ತಲೆ ಅನ್ನೋ ವಿಷಯ ಗೊತ್ತಾಗ್ದೇ ಇರೋ ಹಾಗೂ ಅಥವಾ ಅದನ್ನೇ ಸುತ್ತಿ ಬಳಸಿ ಹೇಳೋ ಪ್ರಯತ್ನ ನಡೆಯತ್ತೆ. ಅದ್ರಲ್ಲೂ ಮದ್ವೆ ಪ್ರಪೋಸಲ್ ತಂದಿರವ್ರನ್ನೋ, ಅವರು ಮದ್ವೆ ಆಗ್ಬೇಕಾಗಿರೋ ಹುಡುಗಿನ ಮೊದಲನೇ ಸಲ ಭೇಟಿ ಆಗ್ತಿರೋದೋ ಆದ್ರೆ, ಇದು ಅವ್ರಿಗೆ ಒಂದು ದೊಡ್ಡ ಸಮಸ್ಯೆ ಅನ್ನೋ ರೀತಿ ಕಾಡತ್ತೆ.

13. ಯಾರಾದ್ರೂ ಕೂದಲು ಇಲ್ದೇ ಇದ್ರೂ ಚೆನ್ನಾಗೇ ಕಾಣಿಸ್ತಿದ್ದೀಯ ಅಂದಾಗ ಕೋಪ ಬರತ್ತೆ

ಪಾಪ ಕುಟುಂಬದೋರು, ಸ್ನೇಹಿತ್ರು ಕೂದಲು ಕಮ್ಮಿ ಇದ್ರೂ ನೀನು ಚೆನ್ನಾಗೆ ಕಾಣಿಸ್ತಿದ್ದೀಯ ಅಂತ ಬೊಕ್ಕತಲೆಯೋರ್ಗೆ ಬೇಜಾರಾಗಬಾರ್ದು ಅಂತ ಹೇಳ್ತಿದ್ದಾರೆ ಅಂತ ಚೆನ್ನಾಗೇ ಗೊತ್ತು. ಅವರು 90 % ಸುಳ್ಳು ಹೇಳ್ತಿದ್ದಾರೆ ಅಂತಾನೂ ಅನ್ಸುತ್ತೆ. ಅಕಸ್ಮಾತ್ ಯಾರಾದ್ರೂ ಕೂದಲು ಇಲ್ದಿದ್ರೂ ಚೆನ್ನಾಗಿರುತ್ತೆ ಅಂತ ಹೇಳ್ತಿದ್ರೆ, ಅವರ ಕೂದಲು ಉದುರಿ ಹೋಗಕ್ಕೆ ಶುರು ಆದಾಗ್ ನೋಡಿ, ಇಲ್ಲಾ… ಒಂದ್ಸಲ ಅವರು ಮಲಗಿರೋವಾಗ ಅವರ ತಲೆ ಕೂದಲು ಬೋಳಿಸ್ಬಿಟ್ರೆ, ಅವರ ನಿಜವಾದ ಪ್ರತಿಕ್ರಿಯೆ ಗೊತ್ತಾಗುತ್ತೆ!

 

12. ಒಳಗೊಳಗೇ ಕೂದಲು ಕಳ್ಕೊಂಡಿರೋದಕ್ಕೆ ಎಷ್ಟೇ ನೋವು ಇದ್ರೂ ಜೋರಾಗಿ ನಗ್ತಾರೆ

ಹುಟ್ಟುವಾಗಲೇ ಯಾರೂ ಬೋಳು ತಲೆ ಇಟ್ಕೊಂಡೇ ಹುಟ್ಟಿರಲ್ಲ. ಕಾಲಕ್ರಮೇಣ ಯಾವುದೋ ಕಾರಣಗಳಿಂದ ಕೂದ್ಲು ಕಳ್ಕೊಂಡಿರ್ಬೋದು. ಸ್ವಲ್ಪ ಜನಕ್ಕೆ ಇದು ಚಿಕ್ಕ ವಯಸ್ಸಲ್ಲೇ ಆದ್ರೆ, ಕೆಲವರಿಗೆ ವಯಸ್ಸಾದ್ಮೇಲೆ ಆಗ್ಬಹುದು. ಆದ್ರೆ ಈಗ ಅವರ ಪರಿಸ್ಥಿತಿಯಿಂದ ತಮಗೂ ಮುಂಚೆ ಕೂದಲು ಇತ್ತು ಅನ್ನೋದನ್ನೇ ಮರೆತುಬಿಟ್ಟಿರ್ತಾರೆ. ಕೆಲವೊಂದು ಸಲ ತಮ್ಮ ಹಳೆ ಫೋಟೋಗಳನ್ನ ನೋಡಿ ನಂಗೂ ಎಷ್ಟು ಚೆನ್ನಾಗಿ ಕೂದಲಿತ್ತು ಅನ್ಸಿದ್ರೆ, ಕೆಲವೊಂದು ಸಲ ಈಗ ಆಗಿರೋದು ನೋಡಿ ಬೇಜಾರಾಗಬಹುದು. ಕೆಲವೊಂದು ಸಲ ಒಳಗೊಳಗೇ ಕೂದಲು ಕಳ್ಕೊಂಡಿರೋದಕ್ಕೆ ಎಷ್ಟೇ ನೋವು ಇದ್ರೂ ಜೋರಾಗಿ ನಗೂನು ಬರ್ಬಹುದು.

11. ಇರೋ ವಯಸ್ಸಿಗಿಂತ ಹೆಚ್ಚು ಕಾಣ್ತಾರೆ

ಪಾಪ! ಇಂಥಾ ಜನರ ತಲೆ ಕೂದಲು ಎಷ್ಟು ಉದುರಿದೆ ಅನ್ನೋದ್ರ ಮೇಲೆ ಜನ ಅವ್ರಿಗೆ ಎಷ್ಟು ವಯಸ್ಸಾಗಿರ್ಬೋದು  ಅಂತ ತಿಳ್ಕೊಳೋ ಪ್ರಯತ್ನ ಮಾಡ್ತಾರೆ. ಕೆಲವೊಂದು ಸಲ ನೀವು ಇಷ್ಟೊಂದ್ ಚಿಕ್ಕೋರಾ? ನಿಮ್ಮ ನೆತ್ತಿ ಮೇಲೆ ಸ್ವಲ್ಪ ಕೂದಲು ಉದುರಿರೋದ್ರಿಂದ ನಿಮ್ಮ ವಯಸ್ಸಿಗಿಂತ ಸ್ವಲ್ಪ ಜಾಸ್ತಿ ಅನ್ಕೊಂಡೆ ಅಂತ ಫಟ್ ಅಂತ ಹೇಳೇಬಿಡ್ತಾರೆ. ಅಕಸ್ಮಾತಾಗಿ ಇನ್ನೂ ಜಾಸ್ತಿ ಕೂದಲು ಉದುರಿದ್ರೆ, ಅವರು ತಮ್ಮ ಗರ್ಲ್ ಫ್ರೆಂಡ್ ಅಥವಾ ಹೆಂಡತಿ ಜೊತೆ ಹೋಗ್ತಿರೋವಾಗ ಇವರು ನಿಮ್ಮ ಮಗಳಾ? ಅಂತಾನೂ ಕೇಳ್ಬಹುದು!

10. ಯಾವ್ದೋ ಫಿಲಮ್ಮಲ್ಲಿ ಬರೋ ವಿಲನ್ ತರ ಅಂತ ಕಾಲೆಳಿಸ್ಕೋತಾರೆ

ಪದೇ ಪದೇ ಅವ್ರನ್ನ ಯಾವುದಾದ್ರೂ ಬೋಳು ತಲೆಯ ಪ್ರಸಿದ್ಧ, ಅದ್ರಲ್ಲೂ ತುಂಬಾ ಕೆಟ್ಟದಾಗಿ ಕಣೋ ವ್ಯಕ್ತಿಗೆ  ಹೋಲಿಸಿ… ನೀನು ಅವರ ತರ ಕಾಣಿಸ್ತೀಯ ಅಂತ ಹೇಳೋದು, ಉದಾಹರಣೆಗೆ " ಪ " ಸಿನಿಮಾದ ಅಮಿತಾಬ್ ತರ ಅಂತಾನೋ, "Mr . ಇಂಡಿಯಾ: ದಲ್ಲಿರೋ ಅಮ್ರೀಷ್ ಪುರಿ ತರ ಕಾಣಿಸ್ತೀಯ ಅಂತ ಪದೇ ಪದೇ ಹೇಳ್ದಾಗ, ಯಾವ ಜನ್ಮದ ಕರ್ಮಾನೋ ಹೀಗೆಲ್ಲಾ ಅನ್ನೋಸ್ಕೊಬೇಕಾಯ್ತು ಅಂತ ಅನ್ಸೇ ಅನ್ಸತ್ತೆ.

 

9. ತಲೆ ಕೂದಲು ಉದುರಕ್ಕೆ ಶುರು ಆದಾಗ ನಂಬಿಕೇನೇ ಬಂದಿರಲ್ಲ, ಏನೂ ಆಗಿಲ್ಲ ಅನ್ಕೊತಾರೆ

ತಲೆ ಸ್ನಾನ ಮಾಡ್ಕೊಂಡಾಗ ಗಮನಿಸಿದ್ರೆ ನೀರು ಹೊರಗೆ ಹೋಗೋ ಜಾಗದಲ್ಲಿ ಸಾಕಷ್ಟು ಕೂದಲು ಸಿಕ್ಕಿಹಾಕ್ಕೊಂಡಿರೋದು ಕಾಣ್ಸತ್ತೆ, ಇದು ಕೂದ್ಲು ಉದ್ರೋದ್ರ ಮೊದಲ ಮುನ್ಸೂಚನೆ. ಆದ್ರೆ ಅದನ್ನವ್ರು ಯಾವುದೊ ಕಾರಣದಿಂದ ಕಡೆಗಣಿಸ್ತಾರೆ. ಚಿಕ್ಕ ವಯಸ್ಸಲ್ಲಿ ಕೂದಲು ಉದ್ರಕ್ಕೆ ಶುರು ಆದ್ರಂತೂ ಅದನ್ನ ಒಪ್ಕೊಳಕ್ಕೆ ತುಂಬಾ ಕಷ್ಟ ಆಗತ್ತೆ!

8. ಸ್ನೇಹಿತರಿಂದ ಅಡ್ಡ ಹೆಸರು ಕರೆಸ್ಕೊತಾರೆ

ಮೊಟ್ಟೆ, ತಾಮ್ರದ ಚೊಂಬು, ಬಾಂಡ್ಲೆ , ಬೋಡ, ಬೋಳ, ಅಂಕಲ್, ತಾತ ,, ಈ ಪಟ್ಟಿ ಇಲ್ಲಿಗೆ ಮುಗಿಯೋದಿಲ್ಲ. ಇನ್ನು ಹೀಗೆ ಹತ್ತು ಹಲವು ಹೆಸರಿಂದ ಸ್ನೇಹಿತರು ಕರೀತಾರೆ. ಹಾಗೆ ಕರೆದಾಗ ಅವರು ಸುಮ್ಮನಿರೋದನ್ನ ನೋಡಿ ಅದನ್ನ ತಮಾಷೆಯಾಗಿ ತೊಗೋತಾರೆ ಅನ್ಕೊಂಡಿರ್ತಾರೆ. ಆದ್ರೆ ಒಳಗೊಳಗೇ ಇವರಿಗೆ ಅವರನ್ನ ಕೊಂದುಬಿಡುವಷ್ಟು ಕೋಪ ಇರುತ್ತೆ. ಯಾವಾಗ ಹೀಗೆ ಕರೀತಿರೋವ್ರಿಗೂ ನೆತ್ತಿ ಸ್ವಲ್ಪ ಸ್ವಲ್ಪಾನೇ ಅಗಲ ಆಗ್ತಿದೆ ಅಂತ ಅನ್ಸುತ್ತೋ ಆಗ ಅವರೇ ಬಾಯಿ ಮುಚ್ಕೋತಾರೆ ಅಂತ ಸುಮ್ನಿರೋದ್ ವಾಸಿ! ಇನ್ನೇನ್ ಮಾಡಕ್ಕಾಗತ್ತೆ ಹೇಳಿ!

7. ಸ್ವಲ್ಪೇ ಸ್ವಲ್ಪ ಕೂದಲು ಉಳಿದಿದ್ರೆ ಪೂರ್ತಿ ಬೋಳಿಸ್ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿರ್ತಾರೆ

ಸ್ವಲ ಸ್ವಲ್ಪ ಕೂದ್ಲು ಉದ್ರೋವ್ರಿಗೆ ತಲೆ ಕೂದಲು ಪೂರ್ತಿ ಬೋಳಿಸ್ಬೇಕಾ ಬೇಡ್ವಾ? ಈ ಪ್ರಶ್ನೆ ಇದ್ದೇ ಇರತ್ತೆ.. ಪೂರ್ತಿ ಬೋಳಿಸೋದು ಎಲ್ರಿಗೂ ಚೆನ್ನಾಗಿ ಕಾಣ್ಸಲ್ಲ. ಅಷ್ಟೇ ಅಲ್ಲ ಪೂರ್ತಿ ಬೋಳಿಸ್ಕೊಂಡ್ ಮೇಲೆ ಹೇಗೆ ಕಾಣಿಸ್ತೀವೋ ಅನ್ನೋ ಯೋಚನೆ ಇರುತ್ತೆ. ಒಂದ್ಸಲ ಪೂರ್ತಿ ಬೋಳಿಸಿದ ಮೇಲೆ,  ಪ್ರತಿ ಎರಡ್ಮೂರು ದಿನಕ್ಕೊಮ್ಮೆ ಆದ್ರೂ ಬೋಳಿಸ್ತಿದ್ರೆ ಮಾತ್ರ ನಿಮ್ಮ ತಲೆ ನುಣುಪಾಗಿರುತ್ತೆ… ಚೆನ್ನಾಗೂ ಕಾಣ್ಸತ್ತೆ. ಇದಿಷ್ಟೇ ಆಗಿದ್ರೂ ಪರ್ವಾಗಿರ್ಲಿಲ್ಲ ಪ್ರತಿಸಾರಿ ಬೋಳಿಸ್ಕೊಳೋಕ್ಕೆ ಆಗೋ ಖರ್ಚು ವೆಚ್ಚ ಕೂಡ ನೋಡ್ಕೋಬೇಕಾಗತ್ತೆ. ತಲೆ ಬೋಳಿಸ್ಕೊಳಕ್ಕೆ ಬೇಕಾಗಿರೋ ಸ್ಪೆಷಲ್ ರೇಝರ್, ಕ್ರೀಮ್, ತಲೆಗೆ ಸ್ನಾನ ಮಾಡಿದ್ಮೇಲೆ ಹಚ್ಚಿಕೊಳ್ಳೋ ಕ್ರೀಮ್… ಹೀಗೆ ಪಟ್ಟಿ ಬೆಳೀತಾನೇ ಹೋಗತ್ತೆ.  ಕೂದಲಿರೋರು ನಿಮ್ಮನ್ನ ಹೇರ್ ಕಟ್ ಮಾಡಿಸ್ಕೊಳೋಕ್ಕೆ ಕೊಡೊ ದುಡ್ಡು, ಎಣ್ಣೆ ದುಡ್ಡು, ಶಾಂಪೂ ಖರ್ಚು ಉಳೀತು ಅಂತ ಹಾಸ್ಯ ಮಾಡಬಹುದು. ಆದ್ರೆ ಬಾಲ್ಡ್ ಹೆಡ್ ನೋಡ್ಕೊಳಕ್ಕೂ ಕರ್ಚಾಗುತ್ತೆ!

 

6. ಬಸ್ಸು, ಟ್ರೈನಲ್ಲೆಲ್ಲಾ ನೋಡಿದ ತಕ್ಷಣ ಜನ ಇವರ ಬಗ್ಗೆ ಏನೇನೋ ಅಭಿಪ್ರಾಯ ಪಡ್ತಾರೆ

ತುಂಬಾ ಜನ ಇವರ ಬಗ್ಗೆ ಏನೇನೋ ಕಲ್ಪನೆ ಮಾಡ್ಕೋತಾರೆ. ಅದ್ರಲ್ಲೂ ಯಾರಾದ್ರೂ ಪೂರ್ತಿ ಬೋಳು ಮಾಡ್ಕೊಂಡಿದ್ದು, ಅದರ ಜೊತೆ ಕಟುಮಸ್ತಾದ ದೇಹಾನೂ ಇದ್ರೆ, ಅವ್ರನ್ನ ಯಾವ್ದೋ ರೌಡಿ, ಡ್ರಗ್ ಡೀಲರ್, ಫಿಲಂಗಳಲ್ಲಿ ಬರೋ ವಿಲನ್ ತರ ನೋಡೋವ್ರೇ ಹೆಚ್ಚು. ಇಂಥ ಟೈಮಲ್ಲಿ ಜನ ತಮ್ಮನ್ನ  ತ್ಕಪ್ಪು ತಿಳ್ಕೊಂಡಿದಾರಲ್ಲ ಅಂತ ಕೊರಗೋ ಹಾಗಾಗತ್ತೆ. ಆದ್ರೆ ಒಂದು ಒಳ್ಳೆ ವಿಷಯ ಏನಪ್ಪಾ ಅಂದ್ರೆ, ಇವರು ಹೊರಗಡೆ ಓಡಾಡೋವಾಗ ಜನ ಗೌರವದಿಂದ ನೋಡ್ತಾರೆ (ರೌಡಿ ತರ ನೋಡೋವ್ರು ಭಯದಿಂದಾನೇ ಆದ್ರೂ, ತಂಟೆಗ್ ಬರಲ್ಲ್!) ಬಸ್, ಟ್ರೈನಲ್ಲಿ ಓಡಾಡೋವಾಗ ಅಷ್ಟು ಸುಲಭವಾಗಿ ಯಾರೂ ಆವ್ರನ್ನ ಪಕ್ಕಕ್ಕೆ ಸರೀರಿ ಅಂತ ಕೇಳೋ ಧೈರ್ಯ ಮಾಡಲ್ಲ.   

5. ಜನ ಬೋಳು ತಲೇನ ಸವರೋದು, ಮೆತ್ತಗೆ ಹೊಡೆಯೋದು ಮಾಡ್ತಾರೆ

ಯಾಕೋ ಇವರು ಹೇಳ್ತಿರೋದು ಅತೀ ಆಯ್ತು ಅಂತ ಅನ್ಕೋಬೇಡಿ. ಕೆಲವೊಬ್ರು ಈ ತೊಂದರೆ ಅನುಭವಿಸಿರ್ತಾರೆ. ಅದು ಅವರಿಗೆ ಅದೃಷ್ಟ ತರುತ್ತೆ ಅನ್ಕೊಂಡು ಹೀಗೆ ಮಾಡ್ತಾರಾ ಏನೋ ಗೊತ್ತಾಗಿಲ್ಲ. ಆದ್ರೆ ಕೆಲವ್ರು ತಮ್ಮ ಪ್ರೀತಿ, ಆತ್ಮೀಯತೆ ತೋರಿಸೋ ರೀತಿನೇ ಹೀಗೆ. ಇನ್ನು ಕೆಲವರು ತಮಾಷೆಗೆ ಮಾಡ್ಬೋದು.

4. ಕೂದ್ಲು ಇದ್ರೂ ಇಷ್ಟಪಟ್ಟು ತಲೆ ಬೋಳಿಸ್ಕೋತಾರಲ್ಲ ಯಾಕೆ ಅಂತ ಅರ್ಥ ಮಾಡ್ಕೊಳಕ್ಕೆ ಪ್ರಯತ್ನ ಪಡ್ತಾರೆ

ಬೊಕ್ಕತಲೆ ಇಲ್ಲ ಅಂದ್ರು ಕೆಲವೊಬ್ರು ಯಾಕೆ ಪೂರ್ತಿ ಬೋಳಿಸ್ಕೊಂಡಿದ್ದಾರೆ ಅಂತ ಗೊತ್ತಾಗೋದೇ ಇಲ್ಲ . ಇದೊಂದು ತರ ಹಲ್ಲಿದ್ದವರಿಗೆ ಕಡಲೆ ಇಲ್ಲ , ಕಡಲೆ ಇದ್ದವರಿಗೆ ಹಲ್ಲಿಲ್ಲ ಅಂತಾರಲ್ಲ ಹಾಗೆ. ಕೂದಲು ಇಲ್ಲದವರಿಗೆ ಬೋಳು ಮಾಡ್ಕೊಳ್ಳೋದು ಅನಿವಾರ್ಯ ಆದ್ರೂ ಅವರು ಒಲ್ಲದ ಮನಸ್ಸಿಂದ ಮಾಡ್ಕೋತಿರ್ತಾರೆ. ಆದ್ರೆ ಈಗೀಗ ಚೆನ್ನಾಗಿ ಕೂದಲು ಇರೋವ್ರೂ ತಲೆ ಬೋಳಿಸ್ಕೊತ್ತಾರೆ. ಇನ್ನೊಂದೂತರ ಹೇಳ್ಬೇಕು ಅಂದ್ರೆ, ದಪ್ಪ ಇರೋವ್ರು ಡಯಟ್ ಅಂತ ಕಷ್ಟ ಪಟ್ಟು ಸಲಾಡ್, ಹಣ್ಣು ತಿನ್ನೋದು,ಜ್ಯೂಸು ಕುಡಿಯೋದು ಮಾಡ್ತಿರ್ತಾರೆ. ಆದ್ರೆ ತುಂಬ ಸಣ್ಣ ಇರೊವ್ರೂ ಅವಶ್ಯಕತೆ ಇಲ್ಲದಿದ್ರೂ ತಿಂತಾರಲ್ಲ ಹಾಗಾಯ್ತು!

 

3. ಉಪಯೋಗ ಆಗಲ್ಲ ಅಂತ ಗೊತ್ತಿದ್ರೂ ಮಿಕ್ಕಿರೋಷ್ಟನ್ನ ಉಳಿಸ್ಕೊಳಕ್ಕೆ ಪ್ರಯತ್ನ ಮಾಡ್ತಾರೆ

ಬೆಳಗ್ಗೆ ಎದ್ದು ಮುಖ ತೊಳೆಯೋವಾಗ  ಹೆಚ್ಚು ಸಮಯ ಹಿಡೀತಿದ್ರೆ, ನಿಮ್ಮ ಹಣೆ ದೊಡ್ಡಗಿರೋದು ಒಂದು ಕಾರಣ ಇರ್ಬಹುದು. ಇದು ಏನು ಹೇಳುತ್ತಪ್ಪಾ ಅಂದ್ರೆ, ನಿಮ್ಮ ತಲೆ ಕೂದಲು ಉದುರಿ ಹೋಗ್ತಿದೆ ಅಂತ! ಈ ತರ ಆದಾಗ, ಮುಂಚೆನೇ ಇದಕ್ಕೆ ಏನಾದ್ರೂ ಚಿಕಿತ್ಸೆ ತೊಗೊಂಡು ಕೂದಲು ಉಳಿಸ್ಕೊಬೇಕಿತ್ತು ಅನ್ನೋ ಯೋಚನೆ ಬರತ್ತೆ. ಎಲ್ಲಾ ಟೈಮಲ್ಲೂ ಎಲ್ಲಾ ತರದ ಚಿಕಿತ್ಸೆ ಫಲ ಕೊಡಲ್ಲ… ಕೂದಲು ಬರಲ್ಲ. ಆದ್ರಿಂದ ಹಣ ಖರ್ಚು ಮಾಡಕ್ಕೆ ಮುಂಚೆ ಯೋಚ್ನೆ ಮಾಡೋದ್ ಒಳ್ಳೇದು. ಕೂದಲು ಸ್ವಾಭಾವಿಕಾಗಿ ಉದುರಿ ಹೋಗ್ತಾ ಇದ್ರೆ ಖಂಡಿತ ತಲೆ ಕೆಡಿಸ್ಕೊಳೊ, ವಿಗ್ ಹಾಕ್ಕೊಳೋ ಅವಶ್ಯಕತೆ ಇಲ್ಲ. ಬೋಳು ತಲೆ ಇರೋದು ಯಾವುದೇ ತಪ್ಪೋ, ಪಾಪನೋ ಅಲ್ಲ ಅಂತ ಅರ್ಥ ಮಾಡ್ಕೊಂಡ್ ಆರಾಮಾಗಿರೋದ್ ಒಳ್ಳೇದು.

2. ಚಳೀಗೆ ತಲೆ ತಣ್ಣಗಿರತ್ತೆ, ಬಿಸ್ಲಿಗೆ ತಲೆ ಕಾಯತ್ತೆ

ಹೌದು ಕೂದಲು ಇರ್ರೋವ್ರಿಗಿಂತ ಬೋಳು ತಲೆಯವರ ತಲೆ ಯಾವಾಗ್ಲೂ ತುಂಬಾನೇ ತಣ್ಣಗಿರತ್ತೆ. ಅಷ್ಟೇ ಅಲ್ಲ, ಇವ್ರಿಗೆ ಮೆದುಳು ಯಾವುದೊ ಫ್ರಿಡ್ಜ್ ಒಳಗೆ ಇರೋತರ ಅನ್ನಿಸ್ಬೋದು. ಬೇಸಿಗೆ ಕಾಲದಲ್ಲೂ ತೊಂದರೆ ಇದ್ದಿದ್ದೇ. ಕೂದಲು ಇಲ್ದೆ ಇರೋದ್ರಿಂದ ತಲೆ ಬೇಗ ಬಿಸಿ ಆಗುತ್ತೆ, ಸನ್ ಬರ್ನ್ ಕೂಡ ಆಗಬಹುದು. ಪಾಪ ಇದ್ರಿಂದ  ಬಚಾವ್ ಆಗ್ಬೇಕು ಅಂತ ಟೋಪಿ ಹಾಕೊಂಡ್ರೆ ಕೆಲವರು  ಬೋಳುತಲೆ ಮುಚ್ಕೊಳಕ್ಕೆ ಹಾಕ್ಕೊತಿದ್ದಾರೆ ಅಂತಾರೆ. ಅಂತವರಿಗೆ ತಮಗೇ ಬೋಳು ತಲೆ ಆದಾಗ್ಲೆ ನಿಜವಾದ ನೋವು ಅರ್ಥ ಆಗೋದು.

1. ಮುಖದ ಮೇಲೆ ಗಡ್ಡ ಮೀಸೆ ಇರ್ಲೇ ಬೇಕು ಅನ್ಸತ್ತೆ

ಬೋಳು ತಲೆ ಇದ್ದಾಗ ಮುಖದ ಮೇಲೆ ಕೂದಲಿರೋದು ಅನಿವಾರ್ಯ. ಅವರು ಗಡ್ಡ, ಮೀಸೆ ಇಷ್ಟ ಪಡದೆ ಇರೋವ್ರಾದ್ರೂ ಈ ಸತ್ಯಾನ ಒಪ್ಪಿಕೊಳ್ಳಲೇಬೇಕು. ತಲೇಲಿ ಕೂದಲು ಕಡಿಮೆ ಆದಾಗ ಸಾಮಾನ್ಯವಾಗಿ ಮುಖದಲ್ಲಿ ಚೆನ್ನಾಗೆ ಬೆಳೆದಿರುತ್ತೆ. ಬೋಳು ತಲೆ ಜೊತೆಗೆ ಗಡ್ಡ, ಮೀಸೆ ಅಥವಾ ಎರಡೂ ಇಲ್ದೆ ಹೋದ್ರೆ ಯಾವ್ದೋ ಪುಟ್ಟ ಮಗು ತುಂಬಾ ದೊಡ್ಡ ಆಕಾರದಲ್ಲಿ ಬೆಳೆದಿರೋ ಹಾಗೆ ಕಾಣ್ಸುತ್ತೆ. ಅದೇ ಗಡ್ಡ ಮೀಸೆ ಇದ್ರೆ ಅದ್ರಿಂದ ಅಂದ ಹೆಚ್ಚತ್ತೆ. ಅದಕ್ಕೆ ಮನತಟ್ಟೋ ತರ ಮುಖದ ಮೇಲಿನ ಕೂದಲಿನ ವಿನ್ಯಾಸ ಮಾಡ್ಕೊಳ್ಳೋದು ಮುಖ್ಯ ಅಷ್ಟೆ.