http://www.ndtv.com/cooks/images/stuffed%20idlis-620.jpg

ಮನೇಲಿ ದೊಡ್ಡೋರ್ ಇದ್ರೆ, ಹಳೇಕಾಲ್ದೊರ್ ಇದ್ರೆ ಈ ಮಾತ್ ಹೇಳೇ ಹೇಳ್ತಾರೆ. ಏನಪ್ಪ ಅಂದ್ರೆ, 'ಬೆಳಗಾಗೆದ್ದು ಎಷ್ಟು ಸೇರುತ್ತೋ ಅಷ್ಟು ತಿಂಡಿ ತಿನ್ಬೇಕು. ಊಟ ಮಾಡೋವರ್ಗೂ ಖಾಲಿ ಹೊಟ್ಟೇಲಿ ಇರ್ಬಾರ್ದು' ಅಂತ. ಸತ್ಯವಾದ್ ಮಾತು. ಆದ್ರೆ ನಾವು ಈ ಮಾತ್ನ ಎಷ್ಟರ್ ಮಟ್ಟಿಗೆ ಪಾಲಿಸ್ತಿದಿವಿ ಹೇಳಿ. ಕಮ್ಮಿ ತಿನ್ಬೇಕು, ಸಣ್ಣ ಕಾಣ್ಬೇಕು ಅನ್ನೋ ಹುಚ್ಚಲ್ಲಿ ತಿಂಡಿ ಬಿಟ್ಟು ಇನ್ನೂ ಆರೋಗ್ಯ ಹಾಳ್ ಮಾಡ್ಕೊತಿದಿವಿ. ನಿಜ. ತಿಂಡಿ ಬಿಟ್ರೆ, ಸಣ್ಣ ಆಗ್ತಿವಿ. ಆದ್ರೆ ಅದು ತಾತ್ಕಾಲಿಕ ಮಾತ್ರ ಜೊತೆಗೆ ಆ ಥರ ಆಗೋ ಸಣ್ಣ ದೇಹಕ್ಕೆ ಒಳ್ಳೇದಲ್ಲ. ಮತ್ತೂ ನಿಶ್ಯಕ್ತಿ ಆಗತ್ತೆ. ಈಗ್ ತಡ್ಕೊಳೋ ತಾಕತ್ತಿದೆ. ಆದರೆ ಒಂದ್ ವಯಸ್ಸು ದಾಟಿದ್ಮೇಲೆನೇ, ತಿಂಡಿ ಬಿಟ್ಟಿದ್ರ ಪರಿಣಾಮ ಕಾಣುಸ್ಕೊಳದು. ಯಾವ್ ಯಾವ್ ಥರದ್ ತೊಂದ್ರೆಗಳಾಗತ್ತೆ ಅಂತ ನಿಮ್ಗೋಸ್ಕರ ಅಂತೆಕಂತೆ ಇಲ್ಲಿ ಪಟ್ಟಿ ಮಾಡ್ಕೊಟ್ಟಿದೆ. ಓದ್ನೋಡಿ. ನೀವೂ ಮುಂದೆ ಇಂಥ ಅನಾರೋಗ್ಯಕ್ಕೆ ತುತ್ತಾಗ್ಬಾರ್ದು ಅಂದ್ರೆ, ಇನ್ಮೇಲೆ ತಪ್ಪದೇ ತಿಂಡಿ ತಿನ್ನಿ.

1. ಹೃದಯಾಘಾತ ಆಗೋ ಸಾಧ್ಯತೆ ಜಾಸ್ತಿಯಾಗತ್ತೆ

ಗಂಡಸ್ರು ಏನಾದ್ರೂ ತಿಂಡಿ ತಿನ್ನೋ ಅಭ್ಯಾಸ ಬಿಟ್ರೆ, ಬೇರೆಯೋರಿಗಿಂತ ಅವ್ರಿಗೆ ಹೃದಯಾಘಾತದ್ ಸಾಧ್ಯತೆ 27% ಜಾಸ್ತಿ ಇರತ್ತೆ. ಹಾಗೇನೇ ಡಾಕ್ಟರ್ಗಳು ಹೇಳೋ ಪ್ರಕಾರ, ಬೆಳಗ್ಗೆ ತಿಂಡಿ ತಿನ್ನೋದ್ರಿಂದ ಹೃದಯಕ್ಕೆ ಸಂಬಂಧ ಪಟ್ಟ ಎಷ್ಟೊಂದ್ ಖಾಯಿಲೆಗಳ್ನ ತಡೆಗಟ್ಬೋದು. ಇಲ್ಲ ಅಂದ್ರೆ ಬಿ.ಪಿ, ರಕ್ತನಾಳ ಹೆಪ್ಪುಗಟ್ಟೋದು ಇವೆಲ್ಲಾ ಆಗಿ, ಮುಂದೆ ಹೃದಯದ್ ರಕ್ತನಾಳದಲ್ಲಿ ತೊಂದ್ರೆ ಕಾಣುಸ್ಕೊಳತ್ತೆ. ಸ್ಟ್ರೋಕೂ ಆಗ್ಬೋದು ಕಣ್ರಿ.

2. ಟೈಪ್ – 2 ಡಯಾಬಿಟಿಸ್ ಅಪಾಯ ಹೆಚ್ಚಾಗತ್ತೆ

ಈ ವಿಷ್ಯಾನ ಸುಮ್ಸುಮ್ನೆ ಹೇಳ್ತಿಲ್ಲ. ಬೆಳಗ್ಗೆ ತಿಂಡಿ ತಿನ್ನೋ ಅಭ್ಯಾಸ ಇರೋ ಮತ್ತೆ ಇಲ್ದೇ ಇರೋ ಒಂದಷ್ಟು ಜನ ಹೆಂಗಸ್ರನ್ನ ಗುಡ್ಡೆ ಹಾಕ್ಕೊಂಡು ಮಾಡಿರೋ ಸಂಶೋಧನೆ ಹೇಳ್ತಿದೆ. ಸುಮಾರು 6 ವರ್ಷ ಮಾಡಿರೋ ಈ ಸಂಶೋಧನೆ ಇಂದ, ತಿಂಡಿ ತಿನ್ದೇ ಇರೋ ಹೆಂಗಸ್ರಲ್ಲಿ ಟೈಪ್ – 2 ಡಯಾಬಿಟೀಸ್ ಲಕ್ಷಣಗಳು ಕಾಣುಸ್ಕೊಂಡಿದೆ. ಜೊತೆಗೆ ಅದು ಬರೋ ಸಾಧ್ಯತೆಗಳೂ ಜಾಸ್ತಿ ಇದೆ ಅಂತ ಸಾಬೀತಾಗಿದೆ. ಒತ್ತಡ, ಹೆರೆಡಿಟರಿ ಹೀಗೆ ಒಂದಿಪ್ಪತ್ತೆಂಟ್ ಕಾರಣಗಳಿಂದ ಇವತ್ತಿನ್ ದಿನ ಸಕ್ಕರೆ ಖಾಯಿಲೆ ತಗುಲಾಕ್ಕೊಳೋ ಚಾನ್ಸಸ್ ಜಾಸ್ತಿ ಆಗಿದೆ. ಅವುಗಳ್ ಜೊತೆ ಈ ಕಾರಣಾನೂ ಕೈಯ್ಯಾರೆ ಯಾಕ್ ಸೇರುಸ್ಬೇಕು ಹೇಳಿ. ಹಾಗೇನೇ ಈ ಸಂಶೋಧನೆ ಇಂದ ಗೊತ್ತಾಗಿರೋ ಇನ್ನೊಂದ್ ವಿಷ್ಯ ಅಂದ್ರೆ, ಕೆಲ್ಸಕ್ಕೆ ಹೋಗೋ ಹೆಂಗಸರು ತಿಂಡಿ ಬಿಟ್ರೆ, ಬಾಕಿಯೋರ್ಗಿಂತ ಇವ್ರಿಗೆ ಟೈಪ್ – 2 ಮಧುಮೇಹ ಕಾಡೋ ಅಪಾಯ 54% ಜಾಸ್ತಿ ಇರತ್ತಂತೆ. ಹುಷಾರು!

 

3. ದೇಹದ್ ತೂಕ ಜಾಸ್ತಿ ಆಗೋ ಸಾಧ್ಯತೆ ಹೆಚ್ಚಾಗತ್ತೆ

ಇತ್ತೀಚೆಗೆ ಎಲ್ಲಾ ವಯಸ್ಸಿನೋರ್ಗೂ ಸಣ್ಣ ಆಗ್ಬೇಕು, ತೂಕ ಕಮ್ಮಿ ಮಾಡ್ಕೊಬೇಕು. ಆಗ ಆರೋಗ್ಯ ಚೆನ್ನಾಗಿರತ್ತೆ ಅಂತ ತಲೇಲಿ ಕೂತ್ಬಿಟ್ಟಿದೆ. ಆದ್ರೆ ಯಾವ್ ವಿಧಾನ್ದಲ್ಲಿ ತೂಕ ಕಮ್ಮಿ ಮಾಡ್ಕೊಂಡ್ರೆ ಲಾಭ ಅಂತ ಯೋಚ್ನೆ ಮಾಡಲ್ಲ. ಇಂಥೋರಿಗೆ ಸುಲಭವಾಗ್ ಕಾಣ್ಸೊ ದಾರಿ, ಬೆಳಗ್ಗೆ ತಿಂಡಿ ಬಿಡೋದು. ಇದ್ರಿಂದ ತೂಕ ಕಮ್ಮಿ ಆಗ್ಬೋದು, ಆದ್ರೆ ಆರೋಗ್ಯ ಒಳಗೇ ಕುಗ್ಗತ್ತೆ. ಹಾಗೇನೇ ತಿಂಡಿ ಬಿಡೋ ಎಲ್ರು ತೂಕಾನೂ ಕಮ್ಮಿಯಾಗಲ್ಲ. ಕೆಲವ್ರೂ ಇನ್ನೂ ಊದ್ಕೊತಾರೆ ಪಾಪ. ಯಾಕೆ ಗೊತ್ತಾ? ಮೊದ್ಲೇ ರಾತ್ರಿ ಎಲ್ಲಾ ಹೊಟ್ಟೆಗ್ ಏನೂ ಇಲ್ದೇ ಹಸಿವಾಗಿರತ್ತೆ. ಬೆಳಗ್ಗೆನೂ ಏನೂ ತಿಂದಿರಲ್ಲ. ಇನ್ನು ಮಧ್ಯಾಹ್ನ ಊಟಕ್ಕೆ ಕೂತಾಗ, ಬೆಳಗ್ಗೆದೂ ಸೇರ್ಸಿ, ಸಿಕ್ಕಾಪಟ್ಟೆ ಬಾರ್ಸಿರ್ತಾರೆ. ಜೊತೆಗೆ ತುಂಬಾ ಹಸಿವಾದಾಗ ಎಣ್ಣೆ ಪದಾರ್ಥ, ಬೇಕರಿ ಐಟಮ್, ಜಂಕ್ ಫುಡ್ಸ್ ತಿನ್ಬೇಕು ಅಂತ ಮನಸ್ಸಿಗೆ ತುಂಬಾ ಆಸೆ ಆಗ್ತಿರತ್ತಂತೆ. ಆಗ ಹಿಂದೆ ಮುಂದೆ ನೋಡ್ದೇ, ಸಿಕ್ಕ ಸಿಕ್ಕಿದ್ದೆಲ್ಲಾ ತಿಂದು ಬೊಜ್ಜು ಬಂದು ತೂಕ ಜಾಸ್ತಿ ಆಗತ್ತೆ. ಆದ್ರೆ ಕಡೇಲ್ ಮಾತ್ರ, ಅಯ್ಯೋ ನಾನ್ ದಿನಾ ತಿಂಡಿ ಬಿಟ್ರೂ ಯಾಕ್ ಹೀಗ್ ದಪ್ಪ ಆಗ್ತಿದಿನಿ ಅಂತ ಗಲಿಬಿಲಿ ಆಗತ್ತೆ. ಒಳ್ಳೆ ಆಚೆ ಮನೆ ಸುಬ್ಬಮ್ಮನ್ ಕಥೆ ಇಂಥೋರ್ದು.

4. ಮೂಡ್ ಮೇಲೆ, ದೈಹಿಕ ಶಕ್ತಿ, ಸಾಮರ್ಥ್ಯದ್ ಮೇಲೆ ಕೆಟ್ಟ ಪರಿಣಾಮ ಬೀರತ್ತೆ

ಇದನ್ನೂ ಒಂದ್ ಸಂಶೋಧನೆ ಇಂದಾನೇ ಪತ್ತೆ ಮಾಡಿರೋದು ಕಣ್ರಿ. ರಾತ್ರಿ ತಿಂದಿದ್ದೆಲ್ಲಾ ಜೀರ್ಣ ಆಗಿ, ಹೊಟ್ಟೆ ಖಾಲಿ ಇದ್ದು ಬೆಳಗ್ಗೆ ತಿಂಡಿ ತಿಂದಿಲ್ಲ ಅಂದ್ರೆ, ಅಂಥೋರಿಗೆ ಜ್ಞಾಪಕ ಶಕ್ತಿ ತೊಂದ್ರೆ ಕಾಡತ್ತೆ. ಜೊತೆಗೆ ಬೆಳಗ್ಗೆ ಕೆಲ್ಸ ಮಾಡಕ್ಕೆ ಶುರು ಮಾಡಿದ್ ಸ್ವಲ್ಪ ಹೊತ್ತಿಗೇ ಆಯಾಸ, ಸುಸ್ತು ಆಗತ್ತೆ. ಯಾವ್ ಕೆಲ್ಸ ಮಾಡಕ್ಕೂ ಮನಸ್ಸಿರಲ್ಲ. ಒಂಥರ ಆಲಸ್ಯ. ಇಲ್ಲಿ ತಿಂಡಿ ಅಂದ್ರೆ ಸಾಲಿಡ್ಡಾಗಿ ಏನಾದ್ರೂ ತಟ್ಟೆ ತುಂಬಾ ತಿನ್ಬೇಕು ಅಂತ ಅರ್ಥ ಅಲ್ಲ. ಒಂದ್ ಸ್ವಲ್ಪ ಸಾಲಿಡ್ಡು, ಜೊತೆಗೆ ಹಣ್ಣಿನ್ ರಸಾನೋ, ಕಾಫಿ, ಹಾಲು ಹೀಗೆ ಏನಾದ್ರೂ ಸರಿ. ಹಾಗಂತ ಬರೀ ಕಾಫಿ ಕುಡ್ಕೊಂಡ್ ದಿನ ಕಳಿಯೋರೂ ಇದಾರೆ ನಮ್ಮಲ್ಲಿ. ಅದೂ ಅನಾರೋಗ್ಯಾನೇ.

 

5. ಕ್ಯಾನ್ಸರ್ ಬರೋ ಸಾಧ್ಯತೆಗಳು ಜಾಸ್ತಿಯಾಗತ್ತೆ

ಇದು ನೇರವಾಗಿ ಅಲ್ದೇ ಇದ್ರೂ ಅಡ್ಡದಾರಿ ಎಲ್ಲಾ ಹಿಡ್ಕೊಂಡು ಕ್ಯಾನ್ಸರ್ ಬಾಗಿಲಿಗೆ ಕರ್ಕೊಂಡ್ ಹೋಗೋ ಅಭ್ಯಾಸ. ಈಗ್ ನೋಡಿ, ಬೆಳಗ್ಗೆ ತಿಂಡಿ ಬಿಟ್ರೆ, ಆಮೇಲೆ ಸಖತ್ ಹಸಿವಾಗತ್ತಾ, ಆಗ ಊಟ ಮಾಡೋವರ್ಗೂ ಕಾಯಕ್ಕಾಗ್ದೇ ಮಧ್ಯ ಕುರುಕಲು, ಹಾಳು ಮೂಳು ಅಂತ ಒಂದಷ್ಟು ತಿಂತಿವಿ. ಆಮೇಲೆ ಊಟ. ಹೇಗೂ ತಿಂಡಿ ತಿಂದಿಲ್ವಲ್ಲ, ಕೆಲ್ಸ ಮಾಡಕ್ಕೆ ಶಕ್ತಿ ಬೇಕು ಅಂತ ಜಾಸ್ತಿನೇ ಊಟ ಮಾಡ್ತೀವಿ. ಆದ್ರೂ ಹಸಿವು ಹೋಗಲ್ಲ. ಮತ್ತೆ ಗಂಟೆ ಗಂಟೆಗೂ ಏನಾದ್ರೂ ಬಾಯಾಡಿಸ್ತಾನೇ ಇದ್ರೆ, ತೂಕ ಜಾಸ್ತಿಯಾಗತ್ತೆ. ಇನ್ನು ತೂಕ ಜಾಸ್ತಿ ಆಗೋರರಲ್ಲಿ, ಬೊಜ್ಜು ತುಂಬಿರೋರಲ್ಲಿ ಕ್ಯಾನ್ಸರ್ ಬರೋ ಸಾಧ್ಯತೆ ಜಾಸ್ತಿ ಅಂತ ಸಂಶೋಧನೆ ಹೇಳತ್ತೆ. ಅಂತೆಕಂತೆ ಇವೆಲ್ಲಾ ಹೇಳ್ತಿರೋದು ನಿಮ್ ಒಳ್ಳೇದಕ್ಕೇನೇ ಕಣ್ರಿ.

6. ನಮ್ಮ ಪ್ರಜ್ಞೆ, ಅರಿವಿನ ಮೇಲೆ ಕೆಟ್ಟ ಪರಿಣಾಮ ಬೀರತ್ತೆ

ಏನಾದ್ರು ಕೆಲ್ಸ ಮಾಡ್ಬೇಕಾದ್ರೆ, ಗಮನ ಇಟ್ಟು, ಪ್ರಜ್ಞೆಯಿಂದ ಮಾಡ್ಬೇಕು. ಹಾಗೇನೇ ಮಾಡ್ತಿರೋ ಕೆಲ್ಸದಲ್ಲಿ ಏನಾದ್ರೂ ಎಡವಟ್ಟು ಆಗ್ತಿದ್ರೆ, ಅದು ನಮ್ಗೆ ಅರಿವಾಗ್ಬೇಕು. ಇದೆರಡೂ ಚೆನ್ನಾಗ್ ಇರ್ಬೇಕು ಅಂದ್ರೆ ತಪ್ದೇ ಬೆಳಗಿನ್ ತಿಂಡಿ ತಿನ್ಬೇಕು. ಹೌದು. ಒಂದಷ್ಟು ಜನ ಹದಿಹರೆಯದೋರ್ನ ಇಂಥ ಪರೀಕ್ಶೆಗೆ ಗುರಿ ಮಾದ್ದಾಗ, ಈ ವಿಷ್ಯ ಗೊತ್ತಾಗಿದೆ. ತಿಂಡಿ ಬಿಟ್ರೆ, ಕೆಲ್ಸದ್ ಮೇಲೆ ಸರಿಯಾಗಿ ಗಮನ ಹರಿಸಕ್ಕಾಗಲ್ಲ. ಅಷ್ಟೇ ಅಲ್ಲ, ಎಲ್ಲಿ ತಪ್ಪಾಗಿದೆ ಅಂತಾನೂ ಸುಲಭವಾಗಿ ಗೊತ್ತಾಗಲ್ಲ. ತಪ್ಪು ಎಲ್ಲಾಗಿದೆ ಅಂತ ಹುಡುಕಿ ಹುಡುಕಿ ತಲೆ ಚಿಟ್ಟು ಹಿಡಿಯತ್ತೆ. ಬುದ್ಧಿ ಓಡಲ್ಲ, ವಿವೇಕ ಕೈಕೊಡತ್ತೆ. ಸರಳವಾಗಿ ಮಾಡ್ಬೋದಾಗಿರೋ ಕೆಲ್ಸಕ್ಕೂ ಸರ್ಕಸ್ ಮಾಡ್ಬೇಕಾಗತ್ತೆ.

 

7. ಮೈಗೇನ್ ಸಮಸ್ಯೆ ಕಾಡತ್ತೆ

ರಕ್ತದಲ್ಲಿ ಸಕ್ಕರೆ ಅಂಶ ಕಮ್ಮಿ ಆಗತ್ತಲ್ಲ, ಅದನ್ನ ಮೆಡಿಕಲ್ ಭಾಷೆನಲ್ಲಿ ಹೈಪೋಗ್ಲಯ್ಸಿಮಿಯ ಅಂತ ಕರಿತಾರೆ. ಈ ಪರಿಸ್ಥಿತಿ ಯಾವಾಗ್ ಬರತ್ತೆ ಗೊತ್ತಾ? ನಾವು ಟೈಂ ಟೈಂಗೆ ಸರಿಯಾಗ್ ಊಟ ತಿಂಡಿ ಮಾಡ್ದೆ ಇದ್ರೆ. ಹೊಟ್ಟೆಗೇನೂ ತಿಂದಿಲ್ಲ ಅಂದ್ರೆ, ರಕ್ತದಲ್ಲಿ ಸಕ್ಕರೆ ಅಂಶ ಕಮ್ಮಿಯಾಗತ್ತೆ. ಆಗ, ಅದನ್ನ ಸರಿದೂಗಿಸಕ್ಕೆ ದೇಹದಲ್ಲಿ ಬೇರೆ ಬೇರೆ ಹಾರ್ಮೋನ್ ಉತ್ಪತ್ತಿಯಾಗತ್ತೆ. ಅದ್ರಿಂದ ರಕ್ತದೊತ್ತಡ ಜಾಸ್ತಿ ಆಗಿ, ಮೈಗ್ರೇನ್ ಕಾಡತ್ತೆ. ಅಬ್ಬಾ ಆ ಮೈಗ್ರೇನ್ ತಲೆನೋವ್ ಹಿಡ್ಕೊಂಡ್ರೆ, ತಲೆ ಸಿಡಿದು ಹೋಗೋವಷ್ಟು ಹಿಂಸೆ ಆಗತ್ತೆ. ಅದ್ರಲ್ಲೂ ಬೆಳಗಿನ್ ತಿಂಡಿ ಬಿಟ್ರಂತೂ ಈ ತಲೆನೋವು ಜಾಸ್ತಿ ಕಾಡತ್ತೆ. ಯಾಕಂದ್ರೆ, ರಾತ್ರಿ ಉಟಕ್ಕೂ ಬೆಳಗ್ಗೆ ತಿಂಡಿಗೂ ತುಂಬಾನೇ ಅಂತರ ಇರತ್ತೆ. ಹಾಗಾಗಿ ಒಂಚೂರಾದ್ರೂ ಸರಿ ತಿನ್ನಿ. ತಿಂಡಿ ಬಿಡ್ಬೇಡಿ. ಈಗಾಗ್ಲೇ ಮೈಗ್ರೇನ್ ಸಮಸ್ಯೆ ಇದ್ರೆ, ಬೆಳಗ್ಗೆ ತಪ್ದೇ ತಿಂಡಿ ತಿನ್ನೋ ಅಭ್ಯಾಸ ಮಾಡ್ಕೊಂಡ್ರೆ, ಆ ತಲೆನೋವ್ನ ದೂರ ಇಡ್ಬೋದು.

8. ಕೂದ್ಲು ಉದುರಿ, ತಲೆ ತಾಮ್ರದ್ ಚೊಂಬಾಗಕ್ಕೂ ಕಾರಣ ಆಗತ್ತೆ

ಬೆಳಗ್ಗೆ ಹೊತ್ತು ತಿಂಡಿ ಬಿಟ್ರೆ, ಕಾಡೋ ಮುಖ್ಯವಾದ್ ಸಮಸ್ಯೆಗಳ್ ಪೈಕಿ ಕೂದ್ಲು ಉದುರೋದೂ ಒಂದು. ಹೇಗೆ ಅಂತ ಕಕ್ಕಾಬಿಕ್ಕಿ ಆಗ್ತಿದ್ಯಾ? ಇಲ್ ಕೇಳಿ. ನಮ್ಗೆ ದಿನದಲ್ಲಿ, ಪ್ರೋಟೀನ್ ಎಥೇಚ್ಚವಾಗಿರೋ ಆಹಾರ ತೊಗೊಳಕ್ಕೆ ಸಾಧ್ಯ ಆಗೋದು ಬೆಳಗ್ಗೆ ತಿನ್ನೋ ತಿಂಡಿ ಇಂದ. ಅದನ್ನ ಏನಾದ್ರೂ ಮಿಸ್ ಮಾಡಿದ್ರೆ, ಕೆರಟಿನ್ ಕೊರತೆ ಹೆಚ್ಚಾಗಿ, ಕೂದ್ಲು ಉದುರಿ, ಮೊಟ್ಟೆ ಆಗೋದ್ ಗ್ಯಾರೆಂಟಿ. ಮೊದ್ಲೇ ಇತ್ತೀಚೆಗೆ, ಅದ್ರಲ್ಲೂ ಗಂಡು ಮಕ್ಳಿಗೆ ಈ ಕಾಟ ಜಾಸ್ತೀ ಆಗಿದೆ. ತಲೆ ನುಣ್ಣುಗ್ ಆಗಿರೋದ್ರಿಂದ ಯಾವ್ ಹೆಣ್ಮಕ್ಳೂ ತಮ್ ಕಡೆ ತಿರುಗ್ ನೋಡ್ತಿಲ್ಲ ಅಂತ ಒಂದೇ ಕಣ್ಣಲ್ಲಿ ಅಳ್ತಿದಾರೆ. ಅಂಥದ್ರಲ್ಲಿ ಕೈಯ್ಯಾರೆ ಯಾಕೆ ಇರೋ ಕೂದ್ಲನ್ನೂ ಉದುರುಸ್ಕೊಬೇಕು ಹೇಳಿ. ಗಂಭೀರ್ವಾಗಿ ಇನ್ಮೆಲೆ ಪ್ರೋಟಿನ್ ಜಾಸ್ತಿ ಇರೋ ತಿಂಡಿ ತಿನ್ಕೊಂಡು ಇದ್ರೆ, ಹೇರ್ ಫಾಲಿಕಲ್ ಚೆನ್ನಾಗಿ ಬೆಳಿಯತ್ತೆ, ಆರೋಗ್ಯವಾಗಿರತ್ತೆ. ಸೊಂಪಾಗಿರೋ ಕೂದ್ಲನ್ನ ಕಾಪಾಡ್ಕೊಳಕ್ಕೆ ತಿಂಡಿ ತಿನ್ನೋ ಖರ್ಚು ಕಮ್ಮಿ. ಅದೇ ಕೃತಕವಾಗಿ ಬೆಳೆಸ್ಕೊಬೇಕು ಅಂದ್ರೆ ತಾಮ್ರದ್ ಚೊಂಬ್ ಜೊತೆ ನಾಮ ಫ್ರಿ.

 

9. ಪಚನ ಕ್ರಿಯೆ ಸರಿಯಾಗ್ ಆಗತ್ತೆ

ಭರ್ರ್ ಅಂತ ಗಾಡಿನಲ್ಲಿ ದಿನ ಪೂರ್ತಿ ಸುತ್ತಿವಲ್ಲಾ, ಅದು ಸ್ಟಾರ್ಟ್ ಆಗಕ್ಕೆ ಪೆಟ್ರೋಲ್ ಬೇಕು ಅಲ್ವ? ಅದೇ ಥರ ಬೆಳಗಿನ್ ತಿಂಡಿನೂ ನಮ್ಗೆ ಪೆಟ್ರೋಲ್ ಇದ್ದಂಗೆ. ಹೆಚ್ಚು ಕಮ್ಮಿ 12 ಗಂಟೆ ಗ್ಯಾಪ್ ಆಗಿರತ್ತೆ. ಹೊಟ್ಟೆಗೆ ಒಂಚೂರ್ ಏನಾದ್ರೂ ಬಿದ್ರೆ ತಾನೇ, ಆಹಾರ ಪಚನ ಆಗಿ, ಎನರ್ಜಿ ರಕ್ತಕ್ಕೆ ಸೀರಿ, ಮುಂದಿನ್ ಕೆಲ್ಸಗಳ್ನ ಮಾಡಕ್ಕೆ ಶಕ್ತಿ ಬರೋದು? ಅದೂ ಅಲ್ದೇ, ತಪ್ದೇ ತಿಂಡಿ ತಿನ್ನೋರ್ಗೆ ಹೊಟ್ಟೆ ಸಮಸ್ಯೆ ಜಾಸ್ತಿ ಬರಲ್ವಂತೆ. ಪಚನ ಕ್ರಿಯೆ ಸರಾಗ್ವಾಗಿ ಆಗಿ, ಹೊಟ್ಟೆ ಖುಷಿ ಖುಷಿಯಾಗಿರತ್ತೆ.

10. ರಾತ್ರಿ ಏರಿರೋ ನಶೆ ಬೆಳಗ್ಗೆ ತಿಂಡಿ ತಿಂದ್ರೆ ಇಳಿಯತ್ತೆ

ಗೊತ್ತು ಬಿಡ್ರಿ, ನೀವೇನೋ ಪಾಪ ಸಿಕ್ಕಾಪಟ್ಟೆ ಒಳ್ಳೆಯೋರೇ. ಆದ್ರೆ ಈ ಫ್ರೆಂಡ್ಸ್ ಇರ್ತಾರಲ್ಲ, ಬಲವಂತ ಮಾಡಿ ಮಾಡಿ ಚೆನ್ನಾಗ್ ಕುಡ್ಸಿರ್ತಾರೆ. ಮನೇಗ್ ಬಂದ್ ಬಿದ್ಕೊಂಡ್, ಬೆಳಗ್ಗೆ ಎದ್ದಾಗ್ಲೇ ಅವತ್ತು ಮಾಡ್ಬೇಕಾಗಿರೋ ಎಲ್ಲಾ ಮುಖ್ಯವಾದ್ ಕೆಲ್ಸಗಳೂ ಕಣ್ಮುಂದೆ ಬಂದು ಬ್ಲ್ಯಾಕ್ ಮೇಯ್ಲ್ ಮಾಡೋದು. ಆದ್ರೆ ಎಲ್ಲಿ ಏಳಕ್ಕಾಗತ್ತೆ? ಅಷ್ಟರ ಮಟ್ಟಿಗೆ ಹ್ಯಾಂಗೋವರ್ ಇರತ್ತೆ. ಅದನ್ನ ಹೋಗ್ಸಿ, ಆರಾಮಾಗಿ ಮಾಮೂಲಾಗಿ ಇರ್ಬೇಕು ಅಂದ್ರೆ, ಕಷ್ಟ ಆದ್ರೂ ಪರ್ವಾಗಿಲ್ಲ, ಎದ್ದು ಹೋಗಿ ತಿಂಡಿ ತಿನ್ನಿ. ನಶೆ ಇಳ್ಸಕ್ಕೆ ಯಾವ್ ಔಷಧಿನೂ ಬೇಕಾಗಲ್ಲ ಆಗ. ಇನ್ನು ಕಬ್ಬಿಣಾಂಶ, ಮಿನರಲ್ಸ್ ಮತ್ತೆ ವಿಟಮಿನ್ಸ್ ಎಥೇಚ್ಚವಾಗಿರೋ ತಿಂಡಿ ತಿಂದ್ರೆ, ಹ್ಯಾಂಗೋವರ್ ಹೋಗಿ, ಹೊಸ ಚೈತನ್ಯ ಬರತ್ತೆ. ಅಯ್ಯೋ ಆಗಲ್ಲಪ್ಪ ಅಂತ ಇಂಥ ಸಂದರ್ಭದಲ್ಲಿ ತಿಂಡಿ ಬಿಟ್ರೋ ಕೆಟ್ರಿ. ರಕ್ತದಲ್ಲಿ ಸಕ್ಕರೆ ಅಂಶ ಕಮ್ಮಿಯಾಗತ್ತೆ, ತಲೆ ಯಾಕಾದ್ರೂ ಇದ್ಯೋ ಅನ್ಸೋವಷ್ಟು ನೋವು, ತಲೆ ಧಿಂ ಅನ್ನತ್ತೆ. ಜೊತೆಗೆ ಆಯಾಸ, ಜಡತ್ವ ಇದೆಲ್ಲಾ ಇರತ್ತೆ.

ಗೊತ್ತಾಯ್ತಲ್ಲ, ಬೆಳಗಿನ್ ತಿಂಡಿ ಎಷ್ಟು ಮುಖ್ಯ ನಮ್ ದೇಹಕ್ಕೆ, ಮನಸ್ಸಿಗೆ ಅಂತ. ಇಷ್ಟೆಲ್ಲಾ ತಿಳ್ಕೊಂಡ್ ಮೇಲೆ ಖಂಡಿತಾ ತಪ್ದೇ ತಿಂಡಿ ತಿಂತಿರಾ ಅಲ್ವ? ಅಭ್ಯಾಸ ಇಲ್ವಲ್ಲ, ಈಗ್ ಹೊಸ್ದಾಗಿ ಹೇಗಪ್ಪಾ ಮಾಡ್ಕೊಳದು ಅಂತ ಯೋಚ್ನೆ ಮಾಡ್ತಿದ್ರೆ, ಏನೂ ಬೇಡ ಕಣ್ರಿ, ಒಂದ್ ಸಲ ಕಣ್ಮುಚ್ಕೊಂಡ್ ತಿಂಡಿ ತಿಂದೆ ಇದ್ರೆ, ಎಷ್ಟು ವಿಕಾರ್ವಾಗಿ ನಿಮ್ ಆಕಾರ ಕಾಣ್ಬೋದೋ ಅಷ್ಟು ಅವತಾರವಾಗಿ ಊಹೆ ಮಾಡ್ಕೊಳಿ ಸಾಕು. ಆಮೇಲಿಂದ ಕಾಳಜಿ ಇಟ್ಕೊಂಡ್ ತಿಂತೀರ.