http://s.isha.ws/blog/wp-content/uploads/2012/10/ekadashi-recipes-Ashgourd-Juice.jpg

ಮದಿವಿ ಮನಿ, ಆಯುಧ ಪೂಜಿ ಅಂದರ ಮದಲ ನೆನಪ ಆಗದ ಈ ಬೂದಗುಂಬಳಕಾಯಿ. ಇದರಾಗ ನಮ್ಮ ದೇಹಕ್ಕ ಬೇಕಾದ ಪೋಷಕಾಂಶಗುಳು, ವಿಟಾಮಿನ್ “ಬಿ” ಮತ್ತ “ಸಿ” ರಗಡ ಐತಿ ಅಂತ ಯಾರಿಗೂ ಸಾಮಾನ್ಯವಾಗಿ ಗೊತ್ತ ಇಲ್ಲ. ಎಸ್ಟೋ ರೋಗಗುಳನ ಹೋಗಸದಸ್ಟ ಅಲ್ಲ ಮತ್ತ ಮುಂದ ಬರದಂಗನೂ ತಡೀತೇತಿ. ಅಸ್ಟ ಅಲ್ಲ, ನಮ್ಮ ದೇಹಕ್ಕ ಬೇಕಾಗಿರ ಕ್ಯಾಲ್ಸಿಯಮ್ಮು, ಪೊಟ್ಯಾಸಿಯಮ್ಮು, ಕಬ್ಬಣಾಂಶ, ಫಾಸ್ಫರಸ್ಸು ಮತ್ತು ನಾರಿನ ಅಂಶ ಸೈತ ಈ ಕುಂಬಳದಾಗೈತಿ. ಅದಕ್ಕ ಈ ತರಕಾರಿನ ಭಾಳ ಉಪೇಗಸ್ತಾರ. ಬ್ಯಾರೇ ತರಕಾರೀಗೆ ಹೋಲಿಕಿ ಮಾಡಿದ್ರ ಇದ ಕಡಿಮಿ ರೊಕ್ಕದಾಗ ಹೆಚಿಗಿ ಸಿಗತತಿ.

ಬೂದಗುಂಬಳದ ಬಗ್ಗೆ ಕೊಟ್ಟಿರ ಈ 5 ಉಪೇಗ ತಿಳಕಂಡರ ಮದಲಿಗಿಂತಾ ಹೆಚಿಗಿ ಖರೀದಿ ಮಾಡತೀರಿ, ರುಚಿ ರುಚಿ ಅಡಿಗಿ ಮಾಡಿಕೆಂಡ ತಿಂತೀರಿ…

1. ಹೊಟ್ಟೆಯಾಗ ಹುಳಾ ಆಗದನ್ನ ತಡೀತೇತಿ

ಹೊಟ್ಟಿ ಮತ್ತ ಕಳ್ಳಿನ ಮ್ಯಾಲ ಹುಣ್ಣ ಆಗದ ಇರಂಗ ಮಾಡತತಿ. ಹೆಚಿಗಿ ಮಸಾಲಿ ಇರ ೂಟಾ ಮಾಡದು, ಅತೀ ಆಗಿ ಉಪಾಸಾ ಮಾಡದರಿಂದ ಕಾಮನ್ನಾಗಿ ಆಗ ಎಸಿಡಿಟಿಗೆ ಇದ ರಾಮಬಾಣ.

ಹೊಟ್ಟ್ಯಾಗಿರ ಬ್ಯಾಕ್ಟೀರಿಯಾನ ಕೊಲ್ಲತತಿ. ಜಂತ ಹುಳಾನ ಹೊಟ್ಟಿಂದಾ ಹೊರಗ ಓಡಸತತಿ. ಇದರಿಂದಾ ಹೊಟ್ಟಿ ಮತ್ತ ಕಳ್ಳಿನ ಇನ್ಫೆಕ್ಶನ್ ಆಗದಂಗ ನೋಡಿಕ್ಯಾಬೋದ.

2. ತೆಳ್ಳಗಿರರು ದಪ್ಪಾ, ದಪ್ಪಿರರು ತೆಳ್ಳಗ ಆಗ ಹಂಗ ಮಾಡತತಿ

ಇದರಾಗ ನಮ್ಮ ದೇಹಕ್ಕ ಬೇಕಾದ ಪೋಷಕಾಂಶಗುಳು ಮತ್ತ 96% ನೀರ ತುಂಬಿರತತಿ. ವೇಟ್ ಇಳಿಗೆಳ್ಳಾಕ ಹೆಲ್ಪ ಆಕ್ಕತಿ. ಅಲ್ಲದ ವೇಟ್ ಹೆಚಿಗಿ ಆಗದಂಗನೂ ನೋಡಕೆಂತತಿ.

ಹಸವನ ಆಗಂಗಿಲ್ಲ ಅನ್ನರು ಇದನ್ನ ರೆಗ್ಲರ್ರಾಗಿ ತಿನ್ನದರಿಂದಾ ಡೈಜೇಶನ್ ಛೊಲೋತ್ನ್ಯಾಗ ಆಗಿ ಊಟಾ ತಿಂಡಿ ತಿಂದ ವೇಟನ ಹೆಚಿಗಿ ಮಾಡಿಕೆಂಡ ತೆಳ್ಳಗಿರರು ಸೈತ ದುಂಡಗಾಗಬೋದು.

3. ದೇಹದಾಗ ಬ್ಲೀಡಿಂಗ್ ಆಗದ ತಡೀತೇತಿ

ಕುಂಬಳದ ಜ್ಯೂಸ ಮಾಡಿಕೆಂಡ ಕುಡೇದರಿಂದ ಹೊಟ್ಟಿ ಒಳಗ ಆಗ ಬ್ಲೀಡಿಂಗ್ನ ತಡೀಬೋದು. ಬ್ಯಾಸಿಗಿ ಕಾಲದಾಗ ಒಬ್ಬೊಬ್ಬರಿಗೆ ಮೂಗಿನ್ಯಾಗ ರಕ್ತಾ ಸುರೀತೇತೆಲ್ಲ, ಅಂತಾರು ಡೇಲಿ ಇದನ್ನ ಕುಡೇದರಿಂದ ಸರಿ ಮಾಡಿಕ್ಯಾಬೋದು.

ಇಸ್ಟ ಅಲ್ಲ ಪೈಲ್ಸು, ಕಿಡ್ನಿ ಒಳಗ ಆಗ ಬ್ಲೀಡಿಂಗಿಂದಾ ಉಚ್ಚ್ಯಾಗ ರಕ್ತ ಸುರೇದನ್ನ ನಿಲ್ಲಸಾಕ ಹೆಲ್ಪ ಮಾಡತತಿ.

4. ಮೆಂಟಲ್ ಸ್ಟ್ರೆಸ್ನ ಕಮ್ಮಿ ಮಾಡತತಿ

ಈಗಿನ ಕಾಲದಾಗ ಮೆಂಟಲ್ ಸ್ಟ್ರೆಸ್ಸು ಕಾಮನ್ನ. ಬೂದಗುಂಬಳಾ ತಿಂದರ ನಿಮ್ಮ ಹೊಟ್ಟಿ ಜತೀಗೆ ಮೆದಳ ಮತ್ತ ಅದರ ನರಾ ನಾಡಿಯೆಲ್ಲಾ ತಣ್ಣಗಾಗಿ ಗಾಬರಿ ಆಗದು ಕಮ್ಮಿ ಆಕ್ಕತಿ. ನರಕ್ಕ ಸಂಬಂಧಪಟ್ಟ ರೋಗ ಎಲ್ಲಾ ಕಮ್ಮಿ ಆಕ್ಕಾವು.

ಡೇಲಿ ಒಂದ ಲೋಟಾ ಕುಂಬಳದ ಜ್ಯೂಸ ಕುಡದರ ಡೇಲಿ ನಡಿಯ ಸಣ್ಣ ಪುಟ್ಟ ವಿಚಾರಕ್ಕೂ ಟೆನ್ಶನ್ ಮಾಡಿಕೆಳ್ಳದ ನೆಮ್ಮದಿ ಇಂದಾ ಇರಬೋದಂತ.

5. ಮಕಾ ಮತ್ತ ಕೂದಲದ್ದ ಚಂದಾ ಹೆಚಿಗಿ ಮಾಡತತಿ

ಅವಾಗಾವಾಗ ಬೂದಗುಂಬಳದ ಜೂಸನ ನಿಂಬಿ ಹಣ್ಣಿನ ಜತೀಗೆ ಇಲ್ಲಾ ಬ್ಯಾರೇ ಯಾದರ ಫೇಸ್ ಪ್ಯಾಕ ಜತೀಗೆ ಮಿಕ್ಸ್ ಮಾಡಿ ಮಕಕ್ಕ ಹಚಿಗೆಳ್ಳದರಿಂಧ ಬ್ಯೂಟಿ ಹೆಚ್ಚಾಕ್ಕತಿ ಅಂದರ ನಂಬತೀರ್ಯಾ? ಮಕದ ಮ್ಯಾಲಿರ ಕರೇ ಕಲಿಗೂಳು ಮಾಯಾಕ್ಕಾವು. ಜತೀಗೆ ಚರ್ಮಾ ಫಳಾ ಫಳಾ ಹೊಳೇ ಹಂಗ ಮಾಡತತಿ.

ಕೂದಲಾ ಉದರದು ಮತ್ತ ತಲಿ ಹೊಟ್ಟನ ಪರ್ಮನೆಂಟಾಗಿ ಹೋಗಸಾಕ ಹಿಂಗ ಮಾಡಬೋದು… ಅರ್ಧಾ ತಾಸ ಮದಲ ಬೂದಗುಂಬಳದ ಜೂಸನ ತಲೀ ಕೂದಲಕ್ಕ ಹಚಿಗೆಂಡ ಜಳಕಾ ಮಾಡರಿ, ಅಸ್ಟ. ಬೂದಗುಂಬಳದ ಬೀಜಾನ ಕೊಬರಿ ಎಣ್ಣಿ ಜತೀಗೆ ನೆನ್ಯಾಕಿಟ್ಟ ಕೂದಲಕ್ಕ ಹಚಿಗೆಳ್ಳದರಿಂದ ಕೂದಲಕ್ಕ ಛೊಲೋ ಆರೈಕಿ ಆಕ್ಕತಿ.

ಆರೋಗ್ಯಕ್ಕ ಇಸ್ಟೆಲ್ಲಾ ಅನುಕೂಲ ಇರ ಬೂದಗುಂಬಳದಾಗ ಬಾಯಿ ಚಪ್ಪರಿಗೆಂಡ ತಿನ್ನಬೋದಾದ ಮಜ್ಜಿಗಿ ಹುಳಿ, ಸಾರು, ಪಲ್ಯಾ, ಹಲ್ವಾ ಮಾಡಿಕ್ಯಾಬೋದು ಅಂತ ಸಪರೇಟಾಗಿ ಹೇಳ ಅವಶ್ಯಕತಿ ಇಲ್ಲಲ್ಲಾ.